Wednesday, 17 September 2014

ನಾನು ಮತ್ತು ಕೊಚ್ಯಾಡಿಯನ್

ನಾನು ಮತ್ತು ಕೊಚ್ಯಾಡಿಯನ್
    ಇವತ್ತು ಮಧ್ಯಾಹ್ನ ಊಟ ಮುಗಿಸಿ ಟಿ. ವಿ ನೋಡುತ್ತಾ ರಜೆಯ ಮಜಾ ಸವಿಯುತ್ತಾ ಇದ್ದೆ. ತಪಸ್ವಿಯಂತೆ ಕಾಣುತ್ತಿರುವ ಒಬ್ಬ ವ್ಯಕ್ತಿ ತಾಂಡವ ನಾಟ್ಯ ಮಾಡುತ್ತಿದ್ದ. ಓಹ್ಅವನ ಹಾವ ಭಾವಗಳು, ವೈರಿಗಳನ್ನು ಸದೆಬಡಿವ ಅವನ ನಡೆಗಳು, ಹಾಲಿವುಡ್ ಸಿನಿಮಾಗಳನ್ನು ನೆನಪಿಸುವ ಕ್ಯಾಮರಾ ತಂತ್ರಗಳು, …… ಹೌದು ಆಗ ತಿಳಿಯಿತು, ಇದುತಲೈವಾರಜನೀಕಾಂತನ ಕೊಚ್ಯಾಡಿಯನ್ ಸಿನಿಮಾದ ಟ್ರೇಲರ್ . ರಜನಿಯ ಚಿತ್ರಗಳೆಂದರೆ ಭಾರತೀಯ ಚಿತ್ರರಂಗದ ಮಟ್ಟಿಗೆ ಅದ್ಭುತವೇ ಸರಿಒಂದು ಪ್ರಾದೇಶಿಕ ಭಾಷೆಯ ಚಿತ್ರರಂಗ ಜಗತ್ತನ್ನೇ ನಿಬ್ಬೆರಗುಗೊಳಿಸುವುದೆಂದರೆ  ನಿಜಕ್ಕೂ ಹೆಮ್ಮೆಯೆನಿಸುತ್ತದೆ.

ಯಾಕೋ ಸಿನಿಮಾ ಅಂದರೆ ನನಗೆ ನನ್ನ ಬಾಲ್ಯ ನೆನಪಾಗುತ್ತದೆ. ತುಂಬಾ ಸಿನಿಮಾ ನೋಡಿದ್ದಕ್ಕಲ್ಲ. ಸಿನಿಮಾನೇ ನೋಡದೆ ಬಾಲ್ಯ ಕಳೆದಿದ್ದಕ್ಕೆ!! . ನನ್ನ ತಾಯಿಗೆ ಸಿನಿಮಾದ ಬಗ್ಗೆ ಸದಭಿಪ್ರಾಯ ಇರಲಿಲ್ಲ. ಸಿನಿಮಾ ಎಂದರೆ ಕಾಲಹರಣ, ಸಿನಿಮಾ ನೋಡುವವರು ಸೋಮಾರಿಗಳು, ಸುಮ್ಮನೆ ದುಡ್ಡು ದಂಡ ಎಂಬ ಧೋರಣೆ. ಅದರಲ್ಲೂ ನಮ್ಮಂಥ ಉಚ್ಚಕುಲದಲ್ಲಿ[??] ಜನಿಸಿದವರು ಸಿನಿಮಾ ನೋಡಬಾರದು!!!, ನಾವೆಲ್ಲ ಚೆನ್ನಾಗಿ ಓದಿ ಯಶಸ್ವೀ ವ್ಯಕ್ತಿಗಳಾಗಬೇಕು , ಸಿನಿಮಾ ನೋಡುವವರು ಸಾಮಾನ್ಯರು, ಆಲಸಿಗಳು  ಎಂಬ ಸಮರ್ಥನೆ ಬೇರೆ.  ಮನೆಯಲ್ಲಿ ಸಿನಿಮಾದ ಹಾಡು ಗುನುಗುನಿಸಿದರೂ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಭಾವನೆಯ ಹಿಂದೆ ಇದ್ದಮಕ್ಕಳು ಓದಿ ಬುದ್ಧಿವಂತರಾಗಲಿ, ದುಶ್ಚಟಗಳಿಗೆ ಬಲಿಯಾಗದಿರಲಿ ಎಂಬ ಅವರ ಸದುದ್ದೇಶ ಆಗ ನನಗೆ ಅರ್ಥವಾಗುತ್ತಿರಲಿಲ್ಲ.

 ಕಾಲೇಜು ದಿನಗಳಲ್ಲಿ ಗೆಳತಿಯರ ಜೊತೆ ಒಂದೆರಡು ಸಿನಿಮಾ ನೋಡಿದ್ದೆ. ಆದರೆ ಸಿನಿಮಾ ನೋಡಿ ಬಂದ ಮೇಲೆ ಅಮ್ಮನ ಬೋಧನೆ ನೆನಪಾಗಿ ಅಪರಾಧೀ ಭಾವನೆ ಕಾಡುತ್ತಿತ್ತು. ಮುಂದೆ ಮದುವೆಯಾಗಿ ಬೆಂಗಳೂರಿಗೆ ಬಂದರೂ  ವಿಷಯದಲ್ಲಿ ಹೆಚ್ಚಿನ ಬದಲಾವಣೆ ಆಗಲಿಲ್ಲ. ಹೆಚ್ಚು ಕಡಿಮೆ ನನ್ನಂತಹದೇ ಕೌಟುಂಬಿಕ ಹಿನ್ನಲೆಯಿಂದ ಬಂದ ನನ್ನ ಪತಿಗೆ ಸಿನಿಮಾ ನೋಡುವ ಅಭ್ಯಾಸ ಇರಲಿಲ್ಲ. ವೇಳೆಗಾಗಲೇ ಟಿ. ವಿ ಯಲ್ಲಿ ಸಿನಿಮಾಗಳನ್ನು ಪ್ರಸಾರ ಮಾಡಲಾರಂಭಿಸಿದ್ದರು. ಆದ್ದರಿಂದ ನಾವಿಬ್ಬರೂ ಮೇಡ್ ಫಾರ್ ಈಚ್ ಅದರ್ಎಂದು ಸಮಾಧಾನಪಟ್ಟುಕೊಂಡು ನಮಗೆ ಬಿಡುವಿದ್ದಾಗ ಮನೆಯಲ್ಲೇ ಸಿನಿಮಾ ನೋಡಲಾರಂಭಿಸಿದೆವು. ಹೇಗೂ ದುಡ್ಡು ಕೊಡಬೇಕಾಗಿರಲಿಲ್ಲವಲ್ಲ.

ಆದರೆ ನನ್ನ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಪರಿಸ್ಥಿತಿ ಹದಗೆಟ್ಟಿತು. ಬೆಂಗಳೂರಿನ ಸತ್ಪ್ರಜೆಗಳಾದ ಅವರಿಗೆ ಟಿ.ವಿ. ಯಲ್ಲಿ ಪ್ರಸಾರವಾಗುವ ಎಲ್ಲಾ ಚಿತ್ರಗಳನ್ನು ನೋಡಿದ ಮೇಲೂ ಚಿತ್ರಮಂದಿರಕ್ಕೆ ಹೋಗಿ ಹೊಸಚಿತ್ರಗಳನ್ನು ನೋಡುವ ಬಯಕೆ. ನನ್ನೆಲ್ಲಾ ತತ್ತ್ವ- ಆದರ್ಶಗಳಿಗೆ  ತಿಲಾಂಜಲಿಯಿಡುವ ಸ್ಥಿತಿ ಬಂತು. ಸರಿ, ನಾನು ಬಿಡುತ್ತೇನೆಯೇ? ನಮ್ಮ ಕುಲದ ಹಿರಿಮೆ-ಗರಿಮೆಗಳನ್ನು ವರ್ಣಿಸಿದೆ. ‘ ಮೈ ಗಾಡ್ದಿಸ್.. ಇಸ್.. ಡಿಸ್ ಗಸ್ ಟಿಂಗ್…..’ ಎಂಬ ಅವರ ಉದ್ಗಾರವು ನನ್ನನ್ನು ಅಲ್ಲಾಡಿಸಿತು. ಥಿಯೇಟರ್ ನಲ್ಲಿ ಸಿನಿಮಾ ನೋಡಿ ಸುಮ್ಮನೆ ಹಣ ಖರ್ಚು ಮಾಡುವುದು ಸರಿಯಲ್ಲ…. ಎಂದು ಮುಂತಾಗಿ ಮಿತವ್ಯಯದ ಪಾಠ ಹೇಳಿದರೆಅಮ್ಮಾ, ನಿನಗೆ ಲೈಫ಼ನ ಎಂಜಾಯ್ ಮಾಡೋದಕ್ಕೇ ಬರಲ್ಲ. ಕಮಾನ್ …..ವಾಟ್ ಈಸ್ ದಿಸ್ಎಂದು ಅಚ್ಚಕನ್ನಡದಲ್ಲಿ[?] ನನಗೇ ಉಪದೇಶ ಮಾಡಿದರು. ಸಿನಿಮಾ ನೋಡುವುದು ವ್ಯರ್ಥಕಾಲಹರಣ……. ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ….. ಸಮಯ ಅಮೂಲ್ಯ …. ಎಂದು ಬುದ್ದಿ ಹೇಳಲು ಪ್ರಯತ್ನಿಸಿದೆ. ಆದರೆ ಆಗಾಗ ಸಿನಿಮಾಗಳನ್ನು ನೋಡುವ ನಮ್ಮ ಸುತ್ತಮುತ್ತಲಿನ ಯಶಸ್ವೀ ವ್ಯಕ್ತಿಗಳನ್ನು ಉದಾಹರಿಸಿ ನನ್ನನ್ನು ಗೇಲಿಮಾಡಿದರು. ಕೊನೆಗೂ ನಾನು ಸೋತೆ . ನನ್ನ ಮಕ್ಕಳೇ ಗೆದ್ದರು. ಈಗ ನಾನು ಕೂಡಾ ಸಿನಿಮಾಪ್ರೇಮಿಯಾಗಿದ್ದೇನೆ. ಒಳ್ಳೆಯ ಚಿತ್ರಗಳು ಬಿಡುಗಡೆಯಾದಾಗ ನನ್ನ ಮಕ್ಕಳ ಜೊತೆ, ಸಹೋದ್ಯೋಗಿಗಳ ಜೊತೆ ಹೋಗಿ ನೋಡುತ್ತೇನೆ. ಸಂತಸಪಡುತ್ತೇನೆ. ಹಾಗಿದ್ದರೂ ಸಿನಿಮಾ ನೋಡಿ ಬಂದ ದಿನ , ರಾತ್ರಿ ಕನಸಿನಲ್ಲಿ ಯಾವತ್ತೋ ಸತ್ತು ಸ್ವರ್ಗವಾಸಿಯಾಗಿರುವ ಅಮ್ಮ ಬಂದು ಕಾಡುತ್ತಾಳೆ. ನಾನು ಉತ್ತರಿಸಲು ಸಾದ್ಯವಾಗದ ಪ್ರಶ್ನೆಗಳನ್ನು ಕೇಳುತ್ತಾಳೆ.

ಇರಲಿ , ನೆನಪಿನ ಮೆರವಣಿಗೆಗೆ ಕಾರಣವಾದಕೊಚ್ಯಾಡಿಯನ್ಸಿನಿಮಾ  ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸುಮಾರು .೨೫ ಬಿಲಿಯನ್ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ , ಪಾಂಡ್ಯದೊರೆಯೊಬ್ಬನ ಜೀವನದ ಸುತ್ತ ಹೆಣೆದಿರುವ ಸಿನಿಮಾ ಇಂಗ್ಲಿಷ್, ಹಿಂದಿ, ಭೋಜಪುರಿ, ತೆಲುಗು, ಬೆಂಗಾಲಿ, ಮರಾಠಿ, ಪಂಜಾಬಿ ಮತ್ತು ಜಪಾನೀ ಭಾಷೆಗಳಲ್ಲಿ ತೆರೆ ಕಾಣಲಿದೆ. ಚಿತ್ರ ಪ್ರೇಕ್ಷಕರನ್ನು ತಣಿಸಲಿಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಒಳ್ಳೆಯ ಭಾರತೀಯ ಸಿನಿಮಾಗಳು ನಿರ್ಮಾಣವಾಗಿಹಾಲಿವುಡ್ ಪಾರಮ್ಯವನ್ನು ಮುರಿಯುವಂತಾಗಲಿ ಎಂಬುದು ನಮ್ಮ ಹಾರೈಕೆ.


No comments:

Post a Comment