Wednesday 17 September 2014

ಮೂರುದಿನಗಳ ಸೌಭಾಗ್ಯ !!!

ಮೂರುದಿನಗಳ ಸೌಭಾಗ್ಯ !!!
ಭೂಮಿಕಾ ಕಳೆದ ಕೆಲವು ಸಂಚಿಕೆಗಳಲ್ಲಿ ಪ್ರಕಟವಾಗುತ್ತಿರುವ ಮೂರು ದಿನಗಳಪಡಿಪಾಟಲುಗಳನ್ನು ಓದುತ್ತಿದ್ದಂತೆಯೇ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಬೆಳೆದ ನನಗೆ  ನನ್ನ ಬಾಲ್ಯದ ಕೆಲವು ಸ್ವಾರಸ್ಯಕರ ಘಟನೆಗಳು ನೆನಪಾಗುತ್ತಿವೆ.
ಕುಟುಂಬಯೋಜನೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ನನ್ನ ತಂದೆ- ತಾಯಿಯ ಇಳಿವಯಸ್ಸಿನಲ್ಲಿ ಜನಿಸಿದ ನಾನು ಚಿಕ್ಕವಳಿರುವಾಗಲೇ ಅಣ್ಣನಿಗೆ ಮದುವೆಯಾಗಿ ಅತ್ತಿಗೆ ಮನೆಗೆ ಬಂದರು. ನನ್ನ ತಾಯಿಯವರಿಗೆ ಆಗಲೇ ಆರೋಗ್ಯ ಕೈಕೊಡಲಾರಂಭಿಸಿತ್ತು. ಆದ್ದರಿಂದ ಅಡುಗೆ ಮನೆಯ ಸಂಪೂರ್ಣ ಜವಾಬ್ದಾರಿ ಅತ್ತಿಗೆಯವರ ಹೆಗಲೇರಿತು. ಅವರು ಸಮರ್ಥವಾಗೇ ಅದನ್ನು ನಿಭಾಯಿಸುತ್ತಿದ್ದರೂ ಕೂಡಾ ನನ್ನ ತಾಯಿಗೆ ಅವರ ಸ್ಥಾನ ತಪ್ಪಿದ್ದರ ಬಗ್ಗೆ ಕಸಿವಿಸಿ ಉಂಟಾಗುತ್ತಿತ್ತು. ಇಂಥ ಸ್ಥಿತಿಯಲ್ಲಿ ಅತ್ತಿಗೆಯವರ ದಿನಗಳ ಅವಧಿ ಶುರುವಾಗುತ್ತಿದ್ದಂತೆ ನನ್ನ ತಾಯಿಯವರಿಗೆ ಸಂತೋಷವಾಗುತ್ತಿತ್ತು. ದಿನಗಳಲ್ಲೂ ತಮ್ಮಿಷ್ಟದ ಅಡುಗೆತಿಂಡಿಗಳನ್ನು ಮಾಡುತ್ತಿದ್ದರು. ಅತ್ತಿಗೆಯವರಿಗೆ ಬಡಿಸುವಾಗಅಡಿಗೆ ಎಂದರೆ ಹೀಗಿರಬೇಕು ತಿಳ್ಕೊ’! ಎಂಬ ಭಾವ ಅವರ ನಡೆ-ನುಡಿಯಲ್ಲಿ ವ್ಯಕ್ತವಾಗುತ್ತಿತ್ತು. ಆದರೆ ವ್ಯವಹಾರ ಚತುರೆಯಾದ ನಮ್ಮತ್ತಿಗೆ ತನ್ನ ಅತ್ತೆಯ ಕೌಶಲವನ್ನು ಬಾಯ್ತುಂಬಾ ಹೊಗಳಿ ಹೊಟ್ಟೆತುಂಬಾ ಊಟ ಮಾಡುತ್ತಿದ್ದರು. ಅಡಿಕೆಭತ್ತ- ಬಾಳೆ ಇತ್ಯಾದಿಗಳನ್ನು ಬೆಳೆಯುತ್ತಿದ್ದ ನಮ್ಮ ಮನೆಯಲ್ಲಿ ಅತ್ತಿಗೆಯವರಿಗೆ ಬೆಳಗಿನಿಂದ ರಾತ್ರಿಯವರೆಗೂ ಸಾಕಷ್ಟು ಕೆಲಸಗಳಿರುತ್ತಿದ್ದವು. ದಿನಗಳು ಅವರ ಅತ್ಯಂತ ಸಂತಸದ ದಿನಗಳು. ದೇವರಿಗೆ ಮೈಲಿಗೆಯಾಗುತ್ತದೆಂದು ಎಲ್ಲಾ ಕೆಲಸಗಳಿಂದ ಸಂಪೂರ್ಣ ವಿನಾಯಿತಿಮನೆಯ ಮೂಲೆಯಲ್ಲಿ ನಿದ್ದೆ ಮಾಡುವುದು, ಪುಸ್ತಕ ಓದುವುದು, ಇತ್ಯಾದಿಗಳಿಂದ ಸಂತೋಷಪಡುತ್ತಿದ್ದರು. ಮೂರನೇ ದಿನದ ಹೊತ್ತಿಗೆ ನನ್ನಮ್ಮನಿಗೆ ಕೆಲಸ ಮಾಡಿ ಸುಸ್ತಾಗಿ ಅತ್ತಿಗೆಗೆ ಅಡುಗೆ ಮನೆ ಒಪ್ಪಿಸಲು ಕಾತರರಾಗಿರುತ್ತಿದ್ದರು. ಒಟ್ಟಿನಲ್ಲಿ ೪ನೇ ದಿನ ಎಲ್ಲರೂ ಖುಷ್- ಖುಷ್.
ಕೂಡುಕುಟುಂಬಕ್ಕೆ ಸೊಸೆಯಾಗಿ ಹೋದ ನನ್ನ ಚಿಕ್ಕಮ್ಮನದು ಇನ್ನೊಂದು ಕತೆ. ಅತ್ತೆ- ಮಾವ , ನಾದಿನಿ- ಮೈದುನರಿಂದ ತುಂಬಿದ್ದ ಮನೆಯಲ್ಲಿ ಅವರಿಗೆ ಬಿಡುವಿಲ್ಲದ ದುಡಿತ. ಅಡಿಗೆ, ಮನೆಯವರ ಸೇವೆ, ದೇವತಾ ಕಾರ್ಯಗಳು, ದನ ಕರು , ಜೊತೆಗೆ ಚಿಕ್ಕ ಪುಟ್ಟದ್ದಕ್ಕೆಲ್ಲಾ ರೇಗುವ  ಗಂಡ.   ಪರಿಸ್ಥಿತಿಯಲ್ಲಿ ಆಕೆ ದಿನಗಳಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಾ ಇರುತ್ತಿದ್ದರು. ಮನೆಯ ಮೂಲೆಯ ಕತ್ತಲ ಕೋಣೆಯಲ್ಲಿ ನಿದ್ದೆ ಮಾಡುತ್ತಲೋ, ಹಳೆಯ ಪುಸ್ತಕ- ಪತ್ರಿಕೆ ಓದುತ್ತಲೋ ಇರುತ್ತಿದ್ದರು. ತನ್ನ ದುಸ್ಥಿತಿಗೆ ಅತ್ತು ಹಗುರಾಗಲು ಏಕಾಂತವನ್ನು ಒದಗಿಸುವ ಮುಟ್ಟಿನ ಮೂರುದಿನಗಳೆಂದರೆ ಅವರಿಗೆ ಅತಿ ಅಮೂಲ್ಯ.
ನಮ್ಮ ಸಂಬಂಧಿಗಳ ಮನೆಯಲ್ಲಿ ಒಮ್ಮೆ ಹೀಗಾಯಿತು. ಮನೆಯಾಕೆಗೆ ಮುಟ್ಟಿನ ದಿನ ತಪ್ಪುತ್ತಿದ್ದಂತೆ ತಾನು ಗರ್ಭಿಣಿ ಎಂಬ ಅನುಮಾನ ಬಂತು. ಆಗಲೇ ಮೂರು ಹೆಣ್ಣು ಮಕ್ಕಳಿದ್ದ ಆಕೆಗೆ ಗರ್ಭಾವಸ್ಥೆ ಬೇಡವಾಗಿತ್ತು. ಆದರೆ ಗಂಡು ಮಗುವಿಗೆ ಹಾತೊರೆಯುವ ಮನೆಯಲ್ಲಿ ಅವಳ ಇಷ್ಟಾನಿಷ್ಟ ಕೇಳುವವರಾರು? ತವರಿನ ಆಶ್ರಯವಿಲ್ಲದ , ಕಡು ಸಂಪ್ರದಾಯಸ್ಥ ಬ್ರಾಹ್ಮಣರ ಸೊಸೆಯಾದ ಆಕೆ ಧೈರ್ಯವಂತೆ. ಒಂದು ಬೆಳಗ್ಗೆ ಅಸಾಧ್ಯ ಬೆನ್ನುನೋವಿನ ನೆಪ ಹೇಳಿದ ಆಕೆ, ಕಾಡಿ ಬೇಡಿ ಗಂಡನ ಅನುಮತಿ ಪಡೆದು  ತನ್ನಲ್ಲಿದ್ದ ಅಲ್ಪ- ಸ್ವಲ್ಪ ಹಣದೊಂದಿಗೆ ಸಮೀಪದ ಆಸ್ಪತ್ರೆಗೆ ಹೋದರು. ವೈದ್ಯರನ್ನು ವಿನಂತಿಸಿ ಗರ್ಭಪಾತ ಮಾಡಿಸಿಕೊಂಡು , ಮನೆಗೆ ಬಂದು ಮುಟ್ಟು ಎಂದು ಕಾರಣ ಹೇಳಿ ಹೊರಗೆ ಕುಳಿತರು. ದಿನ ವಿಶ್ರಾಂತಿಯೂ ಸಿಕ್ಕಿತು. ಬೇಡದ ಗರ್ಭವೂ ಹೋಯಿತು.

ಮೂರು ದಿನಗಳ  ಬಹಿಷ್ಕಾರದ ಬಗ್ಗೆ ಏನೇ ಟೀಕೆಗಳಿರಲಿ. ಬ್ರಾಹ್ಮಣ ಕುಟುಂಬಗಳ ಮಡಿವಂತಿಕೆಯಲ್ಲಿ ನಲುಗುವ ಹೆಣ್ಣು ಜೀವಗಳಿಗೆ ಮೂರುದಿನಗಳು ವರದಾನವೆಂದರೆ ಅತಿಶಯೋಕ್ತಿಯಲ್ಲ. ಇಂದಿನ ದಿನಗಳಲ್ಲಿ ಹೆಣ್ಣಿನ ಸಾಮಾಜಿಕ ಸ್ಥಾನಮಾನ ಗಳಲ್ಲಿ ಸಾಕಷ್ಟು ಸುಧಾರಣೆ ಆಗಿದ್ದರೂ , ಹೆಚ್ಚಿನ ಮಹಿಳೆಯರು ಮೂರುದಿನಗಳ ವಿಶ್ರಾಂತಿಗಾಗಿ ಹಂಬಲಿಸುವುದೂ ಸುಳ್ಳಲ್ಲ

No comments:

Post a Comment