Wednesday, 17 September 2014

ಒಲವಿನ ಹಾಯಿದೋಣಿ

                        ಒಲವಿನ ಹಾಯಿದೋಣಿ       
ಕಳೆದುಹೋಯಿತೇ ಪ್ರೀತಿ?’ ಎಂದು ಪ್ರಶ್ನೆಗೆ ನನ್ನ ಉತ್ತರ-  ಇಲ್ಲ , ಪ್ರೀತಿ ಕಳೆದುಹೋಗಿಲ್ಲ, ಬದಲಾಗಿ ಸ್ಪರ್ಧಾಯುಗವೇ ನಮ್ಮ ಸಮಾಜಕ್ಕೆ ಪ್ರೀತಿಸುವುದನ್ನು ಕಲಿಸುತ್ತಿದೆ.

ಭಾರತೀಯ ಕುಟುಂಬವ್ಯವಸ್ಥೆಯಲ್ಲಿ ಸಂಪ್ರದಾಯ, ನಂಬಿಕೆಗಳಿಗಿರುವ ಸ್ಥಾನ ಪ್ರೀತಿಗಿಲ್ಲ ಎನ್ನಬಹುದು. ನಮ್ಮಲ್ಲಿದ್ದ ವಿಚಾರವೆಂದರೆ ಮನೆಯ ಕೆಲಸಗಳನ್ನು ನಿರ್ವಹಿಸಲು, ಪೂಜಾಕಾರ್ಯಗಳಲ್ಲಿ ಜೊತೆನೀಡಲು ಹೆಂಡತಿ ಬೇಕು. ಮೋಕ್ಷಪ್ರಾಪ್ತಿಗಾಗಿ ಗಂಡುಮಗು, ಕನ್ಯಾದಾನದ ಪುಣ್ಯಕ್ಕಾಗಿ ಹೆಣ್ಣುಮಗು ಬೇಕು, ನಮ್ಮ ಸಮಾಜದಲ್ಲಿ ಮದುವೆಗಳು ನಡೆಯುತ್ತಿದುದು ಕುಟುಂಬಗಳ ಸ್ಥಾನಮಾನಗಳ ಚೌಕಟ್ಟಿನಲ್ಲೇ ಹೊರತು , ಗಂಡು-ಹೆಣ್ಣಿನ ಪ್ರೀತಿಯ ನೆಲೆಗಟ್ಟಿನಲ್ಲಿ ಅಲ್ಲ . ಆದ್ದರಿಂದ ಗಂಡ-ಹೆಂಡಿರಲ್ಲಿ ವಯಸ್ಸು, ಅಭಿರುಚಿ, ವಿದ್ಯೆ ಇತ್ಯಾದಿಗಳಲ್ಲಿ  ತಾಳಮೇಳವೇ ಇರುತ್ತಿರಲಿಲ್ಲ. ಇಂಥ ಸಂಸಾರಗಳಲ್ಲಿ ಹೆಂಡತಿಗೆ ಗಂಡನ ಮೇಲೆ ಭಯ-ಗೌರವದ ಭಾವನೆ ಇದ್ದರೆ, ಗಂಡನಿಗೆ ಹೆಂಡತಿಯ ಮೇಲೆ ಅಧಿಕಾರೀ ಭಾವನೆ. ಪ್ರೀತಿ- ವಿಶ್ವಾಸಗಳಿಗೆ ಇಲ್ಲಿ ಸ್ಥಾನವೇ ಇರಲಿಲ್ಲ. ಆದ್ದರಿಂದ ನಮ್ಮ ಹಿರಿಯರ ದಾಂಪತ್ಯಗಳು ಪ್ರೀತಿಯ ಮುಖವಾಡ ಹೊತ್ತ ಸುಖಸಂಸಾರಗಳಾಗಿದ್ದವು. ವಿಚ್ಛೇದನದ ಕಲ್ಪನೆಯೇ ಇಲ್ಲದಿದ್ದರಿಂದ ಹೇಗೋ ಹೊಂದಿಕೊಂಡು ಜೀವನ ನಡೆಸುತ್ತಿದ್ದರು.

ಆದರೆ ಇಂದಿನ ಕಾಲ, ಪಾಶ್ಚಿಮಾತ್ಯ ಪ್ರಭಾವದಿಂದ ಸ್ಪರ್ಧೆಯ ಕಾಲವಾಗುತ್ತಿರುವುದೇನೋ ನಿಜವೇ. ಆದರೆ ಸ್ಪರ್ಧೆ ಹೆಣ್ಣಿಗೆ ಒಂದು ರೀತಿಯ ವರವಾಗಿದೆಯೆಂದರೆ ತಪ್ಪಾಗಲಾರದು.
 
ಇಂದಿನ ಹೆಂಗಸರು ಅವರ ತಾಯಿ, ಅಜ್ಜಿಯರಿಗಿಂತ ಗೌರವಯುತ ಜೀವನವನ್ನು ನಡೆಸುತ್ತಿದ್ದಾರೆ. ಲಾಭ ನಷ್ಟದ ಲೆಕ್ಕಾಚಾರ ಏನೇ ಇರಲಿ , ಇಂದಿನ ಹೆಚ್ಚಿನ ಸಂಸಾರಗಳಲ್ಲಿ , ಮನೆ ಕೆಲಸದಲ್ಲಿ ಮಕ್ಕಳ ಲಾಲನೆ-ಪಾಲನೆಯಲ್ಲಿ ಗಂಡ ಹೆಂಡತಿಗೆ ಸಹಾಯಹಸ್ತ ಚಾಚುತ್ತಾನೆ. ಹೆಂಡತಿಯೂ ವಿದ್ಯಾವಂತಳೂ , ಆರ್ಥಿಕವಾಗಿ ಸ್ವತಂತ್ರಳೂ ಆಗಿರುವುದರಿಂದ ಗಂಡಂದಿರು ತಮ್ಮ ಅಹಂಕಾರ ಬದಿಗಿರಿಸಿ ಹೊಂದಿಕೊಂಡು ಹೋಗುತ್ತಿದ್ದಾರೆ. ಮಗು ಗಂಡಾಗಲೀ ಹೆಣ್ಣಾಗಲಿ ಲಾಭ-ನಷ್ಟಗಳ ಲೆಕ್ಕಾಚಾರವಿಲ್ಲದೇ ಸಮಾನವಾದ ಪ್ರೀತಿ ಪಡೆಯುತ್ತದೆ.. ಹಾಗೊಂದು ವೇಳೆ ಸಂಸಾರದಲ್ಲಿ ಸಾಮರಸ್ಯ ಸಾದ್ಯವೇ ಇಲ್ಲ ಎಂದೆನಿಸಿದರೆ ನಮ್ಮ ಹಿರಿಯರಂತೆ ತೋರಿಕೆಯ ಪ್ರೀತಿ ನಟಿಸದೇ , ದಂಪತಿಗಳು ವಿಚ್ಛೇದನ ಪಡೆದು ಮರುಮದುವೆಯಾಗುತ್ತಿದ್ದಾರೆ.

ಕೊನೆಗೂ ನಮ್ಮ ಭಾರತೀಯ ಸಮಾಜ ತನ್ನ ಗೊಡ್ಡು ನಂಬಿಕೆಗಳಿಂದ ಹೊರಬರುತ್ತಿದೆ ಎನ್ನುವುದೇ ಸಂತಸಕರ ಸಂಗತಿ. ಖಂಡಿತವಾಗಿಯೂ ನಮ್ಮ ಇಂದಿನ ದಾಂಪತ್ಯಗಳಲ್ಲಿನ ಪ್ರೀತಿ   ಸಮಾನತೆಯ ನೆಲೆಗಟ್ಟಿನಲ್ಲಿ ಭದ್ರವಾಗಿದೆ, ಚಿಗುರೊಡೆದು ನಳನಳಿಸುತ್ತಿದೆ.


No comments:

Post a Comment