Thursday 10 December 2015

ವಿದ್ಯಾರ್ಹತೆ - ವೃತ್ತಿ- ಸಂಪಾದನೆ


“ಅಲ್ಪಕಾಲದಲ್ಲಿ ಅತ್ಯಧಿಕ ಧನಸಂಪಾದನೆ ಮಾಡಲು, ವಿದೇಶಕ್ಕೆ ಹೋಗಲು ಸಾಧ್ಯವಿರುವ ವೃತ್ತಿ ಯಾವುದು? ಅದಕ್ಕೆ ಬೇಕಾದ ವಿದ್ಯಾರ್ಹತೆ ಯಾವುದು?”
ಎಂದು ಯುದ್ಧರಂಗದಲ್ಲಿ ಅರ್ಜುನನು ಶ್ರೀಕೃಷ್ಣನನ್ನು  ಪ್ರಶ್ನಿಸಿದಂತೆ, ಮಹಾಭಾರತದಲ್ಲಿ ಯಕ್ಷನು ಧರ್ಮರಾಜನನ್ನು ಪ್ರಶ್ನಿಸಿದಂತೆ , ಹತ್ತನೇ ತರಗತಿಯ ಆದಿತ್ಯನು ನನ್ನನ್ನು ಪ್ರಶ್ನಿಸಿದನು.ಪರಮ ಜ್ಞಾನಿಗಳಾದ ಶ್ರೀಕೃಷ್ಣ -ಧರ್ಮರಾಜರೆಲ್ಲಿ? ಕಂಠಶೋಷಣೆಯಿಂದ ಹೊಟ್ಟೆಹೊರೆಯವ ಈ ಶಿಕ್ಷಕಿಯೆಲ್ಲಿ? ನನ್ನ ನಾಲಿಗೆ ಬಡಬಡಿಸಿತು- “ಭಾರತವೆಂಬ ಪುಣ್ಯಭೂಮಿಯಲ್ಲಿ ಈ ದಿನಗಳಲ್ಲಿ ಸಾಫ಼ಟ್ ವೇರ್ ಇಂಜನಿಯರ್ ಎಂಬ ವೃತ್ತಿಯಿದೆ.ಅದಕ್ಕಾಗಿ ಕಂಪ್ಯೂಟರ್ ಸೈನ್ಸ್ಇಂಜನಿಯರಿಂಗ್ ಎಂಬ ಡಿಗ್ರಿಯ ಅವಶ್ಯಕತೆಯಿದೆ. ಅದನ್ನು ಕಡಿಮೆ ಖರ್ಚಿನಲ್ಲಿ ಓದಲು ಶಾಲೆ ಮತ್ತು ಕೋಚಿಂಗ್ ಸೆಂಟರ್ ನಲ್ಲಿ ಕಠಿಣ ಪರಿಶ್ರಮದ ಅಗತ್ಯವೂ ಇದೆ .”
ಡಿಸೆಂಬರ್ ಬಂತೆಂದರೆ ಹತ್ತನೇ ತರಗತಿಯ ಮಕ್ಕಳನ್ನು , ಅವರ ಪಾಲಕರನ್ನು ಮುಂದೇನು? ಎಂಬ ಪ್ರಶ್ನೆ ಬಾಧಿಸಲಾರಂಭಿಸುತ್ತದೆ. ಕೆಲ ದಶಕಗಳ ಹಿಂದೆ ಇದೊಂದು ಸಮಸ್ಯೆಯೇ ಆಗಿರಲಿಲ್ಲ. ಮಕ್ಕಳ ಅಂಕಗಳ ಬಗ್ಗೆ ,ಭವಿಷ್ಯದ ಬಗ್ಗೆ ಪಾಲಕರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.ಓದುವ ಹಂಬಲವಿರುವವರು-ಆರ್ಥಿಕ ಶಕ್ತಿ ಇರುವವರು ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳಿಗೆ ಅನುಸಾರವಾಗಿ ಸೈನ್ಸ್/ಕಾಮರ್ಸ್/ಆರ್ಟ್ಸ್/ಡಿಪ್ಲೊಮಾ ಓದು, ಇತರರು- ಹುಡುಗರಾದರೆ ಪುರೋಹಿತಿಕೆ, ವ್ಯವಸಾಯ,ವ್ಯಾಪಾರ, ಡ್ರೈವಿಂಗ್ ಕಲಿತು ಪೇಟೆಗೆ ಜೀಪು- ದಿನಕ್ಕೆ ೧೦ ಟ್ರಿಪ್.....ಹುಡುಗಿಯರಾದರೆ ಹೊಲಿಗೆ,ಟೈಪಿಂಗ್, ...೨ ವರ್ಷದಲ್ಲಿ ಮದುವೆ... ಹೀಗೆ ಜೀವನ ಅತಿ ಸರಳವಾಗಿತ್ತು.  ಆದರೆ ಈಗ ಕಾಲ ಬದಲಾಗಿದೆ.ಮೌಲ್ಯಗಳು ಬದಲಾಗಿವೆ. ಎಲ್ಲರಿಗೂ ಮಕ್ಕಳು ಪಿ.ಯು.ಸಿಯಲ್ಲಿ ವಿಜ್ಞಾನವನ್ನೇ ಓದಲಿ. ಡಾಕ್ಟರ್/ಇಂಜನಿಯರ್ ಗಳಾಗಿ ಅತಿ ಹೆಚ್ಚು ಸಂಪಾದಿಸಲಿ,ವಿದೇಶಕ್ಕೆ ಹೋಗಲಿ ಎಂಬಾಸೆ. ಇದರಲ್ಲೇನೂ ತಪ್ಪಿಲ್ಲ. ಸುಖವಾಗಿ ಬದುಕಬೇಕೆನ್ನುವ ಆಸೆ ಸಹಜವೇ.  ಆದರೆ ಜನರ ಆಸೆಗಳಿಗನುಗುಣವಾಗಿ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ/ತಾಂತ್ರಿಕಶಿಕ್ಷಣವನ್ನು ಕೊಡುವ ಸಂಸ್ಥೆಗಳನ್ನು ನಮ್ಮ ಸರಕಾರಗಳು ಸ್ಥಾಪಿಸಿಲ್ಲ.  ಎಲ್ಲೆಂದರಲ್ಲಿ ಇರುವ ಖಾಸಗಿ ಕಾಲೇಜುಗಳಿಗೆ ಕೋಟಿಗಳನ್ನು ಹೊಂದಿಸುವ ಶಕ್ತಿ ನಮಗಿಲ್ಲ.ಅದಕ್ಕೇ ಮಕ್ಕಳು ೧೦ನೇ ತರಗತಿಗೆ ಬರುತ್ತಿದ್ದಂತೆ ಪಾಲಕರಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅನಿಸುತ್ತದೆ.ಮಕ್ಕಳಿಗೆ ಉಸಿರು ಕಟ್ಟಿದಂತಾಗುತ್ತದೆ.
ಪಿ..ಯು.ಸಿ/೧೨ನೇ ತರಗತಿಯ ನಂತರದ ತಾಂತ್ರಿಕ ಶಿಕ್ಷಣಕ್ಕೆ ಇರುವ ಸರಕಾರೀ ವ್ಯವಸ್ಥೆ ದಯನೀಯವಾಗಿದೆ. ಕೇಂದ್ರಸರಕಾರದ ವಿಶೇಷ ಅನುದಾನವನ್ನು ಪಡೆಯುವ, ಉತ್ತಮ ದರ್ಜೆಯ ವ್ಯವಸ್ಥೆಗಳು,ಪರಿಣತ ಅಧ್ಯಾಪಕರಿರುವ ಇಪ್ಪತ್ತು ಎನ್.ಐ.ಟಿಗಳು ರಾಜ್ಯಕ್ಕೊಂದರಂತೆ ಇವೆ[ಕೆಲ ರಾಜ್ಯಗಳಲ್ಲಿ ಇಲ್ಲ].ಇಲ್ಲಿನ ಹತ್ತುಸಾವಿರ ಸೀಟುಗಳಿಗೆ ಹದಿಮೂರು ಲಕ್ಷ ಮಕ್ಕಳು ಪರೀಕ್ಷೆ[ಜೆ.ಇ.ಇ ಮೈನ್] ಬರೆಯುತ್ತಾರೆ.ಇವುಗಳಿಗಿಂತಲೂ ಶ್ರೇಷ್ಠವಾದ, ವಿಶ್ವದರ್ಜೆಯ ವ್ಯವಸ್ಥೆಗಳಿರುವ ಹದಿನೇಳು ಐ.ಐ.ಟಿಗಳು ದೇಶದಲ್ಲಿವೆ[ಹೆಚ್ಚಿನವು ಉತ್ತರಭಾರತದಲ್ಲಿ]. ಇಲ್ಲಿರುವ ಒಂಬತ್ತು ಸಾವಿರ ಸೀಟುಗಳಿಗೆ ಜೆ.ಇ.ಇ ಮೈನ್ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ[ ಜೆ.ಇ.ಇ ಅಡ್ವಾನ್ಸಡ್] ಬರೆಯುತ್ತಾರೆ. ಮೀಸಲಾತಿಯೆಂಬ ಗೊಂಡಾರಣ್ಯದಿಂದ ಪಾರಾಗಿ ಬಂದು ಇಲ್ಲಿ ಸೀಟು ದಕ್ಕಿಸಿಕೊಳ್ಳುವ ಪುಣ್ಯವಂತ, ಬುದ್ಧಿವಂತ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಐ.ಐ.ಟಿ/ಎನ್.ಐ.ಟಿಯಲ್ಲಿ   ತಾಂತ್ರಿಕ ವಿದ್ಯಾಭ್ಯಾಸ ಮುಗಿಸಿ ಹೆಚ್ಚಿನ ಸಂಬಳದ ನೌಕರಿ ಪಡೆದು ಪಾಲಕರ ಕನಸುಗಳನ್ನು ನನಸಾಗಿಸುತ್ತಾರೆ. ಆದರೆ ಸ್ವಾಮೀ ... ಉಳಿದ ೧೨ ಲಕ್ಷದ ೮೦ ಸಾವಿರ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಅವರನ್ನು  ಬೀದಿಗೊಂದರಂತೆ ತಲೆ ಎತ್ತುತ್ತಿರುವ ಖಾಸಗಿ ಇಂಜನಿಯರಿಂಗ್ ಕಾಲೇಜುಗಳು ಕೈಬೀಸಿ ಕರೆಯುತ್ತವೆ. ಇವುಗಳಲ್ಲಿ ಕೆಲವು ಸರಕಾರೀ ಸಂಸ್ಥೆಗಳಿಗಿಂತಲೂ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡುತ್ತವೆಂದು ಖ್ಯಾತಿ ಪಡೆದಿವೆ[BITS , PES, RVCE , SRME ಇತ್ಯಾದಿ] ಆದರೆ ಅವುಗಳಿಗೆ ಸರಕಾರೀ ಅನುದಾನ ಇಲ್ಲದಿರುವುದರಿಂದ ಅದಕ್ಕೆ ತಕ್ಕನಾಗಿ ಹಣವನ್ನು ಪಾಲಕರಿಂದ ವಸೂಲಿ ಮಾಡುತ್ತವೆ.ಉಳಿದಂತೆ ಹೆಚ್ಚಿನ ಖಾಸಗೀ ಕಾಲೇಜುಗಳಲ್ಲಿ ವಿದ್ಯಾಭ್ಯಾಸದ ಮಟ್ಟ ಕಳಪೆಯಾಗಿರುತ್ತದೆ. ಇವುಗಳಲ್ಲಿ ಪ್ರವೇಶ ಪಡೆಯಲು ರಾಜ್ಯಸರಕಾರಗಳು ನಡೆಸುವ ಸಿ.ಇ.ಟಿ/ ಖಾಸಗಿಯವರ ಕಾಮೆಡ್ ಕೆ ಪರೀಕ್ಷೆಯನ್ನು ಬರೆಯಬೇಕು.ಈ ಖಾಸಗಿ ಸಂಸ್ಥೆಗಳಲ್ಲಿ ಕೆಲವು ಸೀಟುಗಳನ್ನು ಉತ್ತಮ ಅಂಕಗಳನ್ನು ಪಡೆದವರಿಗೆ ಮೀಸಲಿಟ್ಟಿದ್ದಾರಾದರೂ ಅವು ಆನೆಯ ಹೊಟ್ಟೆಗೆ  ಅರೆಕಾಸಿನ ಮಜ್ಜಿಗೆಯಂತಾಗಿವೆ. ನಮ್ಮದೊಡ್ಡಸಂಖ್ಯೆಯ ಆಕಾಂಕ್ಷಿಸಮೂಹಕ್ಕೆ ಇವು ಏನೇನೂ ಸಾಲದು. ಆದ್ದರಿಂದ ಉಳಿದೆಲ್ಲ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳು ನಿಗದಿಪಡಿಸಿದ ದೊಡ್ಡಮೊತ್ತವನ್ನು ಸಲ್ಲಿಸಿ ಇಂಜನಿಯರಿಂಗ್ ಶಿಕ್ಷಣ ಪಡೆಯುವುದು ಅನಿವಾರ್ಯ. ಇನ್ನು ವೈದ್ಯಕೀಯ ಶಿಕ್ಷಣವನ್ನು ನೋಡಿದರೆ ದೇಶದಲ್ಲಿ ಕೇವಲ  ೧೫೦ ಸರ್ಕಾರೀ ಕಾಲೇಜುಗಳಿವೆ. ಅವುಗಳ ಇಪ್ಪತ್ತೊಂದು ಸಾವಿರ ಸೀಟುಗಳಿಗೆ ಪ್ರವೇಶ ಪಡೆಯಲು  ಆರು ಲಕ್ಷ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿರುತ್ತಾರೆ. ಇನ್ನುಳಿದ ಎಲ್ಲರೂ ಖಾಸಗಿ ಕಾಲೇಜುಗಳಲ್ಲಿ ಲಕ್ಷಗಳನ್ನು ಸಲ್ಲಿಸಿ ವಿದ್ಯಾಭ್ಯಾಸ ಪಡೆಯಬೇಕು.
ಇಂಥ ವ್ಯವಸ್ಥೆಯಲ್ಲಿ ಸಹಜವಾಗಿಯೇ ಹೆಚ್ಚು ಅಂಕ ಗಳಿಸಲು ಮಕ್ಕಳ ಮೇಲೆ ಒತ್ತಡ ಇರುತ್ತದೆ. ಈ ಸರಕಾರೀ ಸೀಟುಗಳಿಗಿರುವ ಸ್ಪರ್ಧೆಯಿಂದಾಗಿ  ಪ್ರವೇಶ ಪರೀಕ್ಷೆ ಅತ್ಯಂತ ಕಠಿಣವಾಗಿರುತ್ತದೆ. ಹನ್ನೆರಡನೇ ತರಗತಿಯ/ಪಿ.ಯು.ಸಿ ಯ ನಮ್ಮ ಸರ್ಕಾರೀ ಪಠ್ಯಕ್ರಮ ಈ ಪರೀಕ್ಷೆಯನ್ನು ಭೇದಿಸಲು ಅಸಮರ್ಥವಾಗಿದೆ. ಅದಕ್ಕೆ ಮತ್ತೆ ಖಾಸಗಿ ಟ್ಯೂಶನ್ ಸೆಂಟರ್ ಗಳು ನೆರವಿಗೆ ಬರುತ್ತವೆ.  ಇಲ್ಲಿನ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿಗಳು ಬೇಕು. [ ದೀಕ್ಷಾ ಕಾಲೇಜ್, ಎಕ್ಸಲೆಂಟ್,ಆಕಾಶ್,ಫಿಟ್ ಜೀ, ರಾಜಸ್ತಾನದ ಕೋಟಾ ಇತ್ಯಾದಿ]. ಹತ್ತನೇ ತರಗತಿ ಮುಗಿಯುತ್ತಿದ್ದಂತೆಯೇ ಇಲ್ಲಿನ ತರಬೇತಿ ಆರಂಭವಾಗುತ್ತದೆ .  ದಿನಕ್ಕೆ ೨೦೦-೪೦೦ [ಫಿಸಿಕ್ಸ್, ಕೆಮಿಸ್ಟ್ರಿ, ಮಾತ್ಸ್] ಲೆಕ್ಕಗಳನ್ನು ಅತಿ ಕಡಿಮೆ ನಿಮಿಷಗಳಲ್ಲಿ ಬಿಡಿಸುವ ಕಲೆಯನ್ನು ಇಲ್ಲಿ ಕಲಿಸುತ್ತಾರೆ..  ಆದರೆ ನೆನಪಿಡಿ ...ಇಷ್ಟೊಂದು ಶ್ರಮವಹಿಸಲು ವಿದ್ಯಾರ್ಥಿಗೆ ವಿಜ್ಞಾನದಲ್ಲಿ ಆಸಕ್ತಿ ಇರಬೇಕು. ತರ್ಕಬದ್ಧವಾಗಿ ಯೋಚಿಸುವ ಬುದ್ಧಿವಂತಿಕೆ ಬೇಕು. ಇದಲ್ಲದೇ ಮನೆಗೆ ಬಂದು ಮತ್ತೆ ೫-೬ ಗಂಟೆಗಳ .ಕಾಲ ಅಧ್ಯಯನವನ್ನೂ ಮಾಡಬೇಕು .ಒಟ್ಟಾರೆ ಎರಡು ವರ್ಷ ಅಸಾಮಾನ್ಯ ತಪಸ್ಸನ್ನೇ ಆಚರಿಸಬೇಕು..ಆದರೆ ಮಕ್ಕಳೇ ಯೋಚಿಸಿ ನಿಮಗೆ ಇದನ್ನು ಭರಿಸುವ ಶಕ್ತಿ ಇದೆಯೇ ?ಸಾಮಾನ್ಯ ಬುದ್ಧಿಮತ್ತೆಯ ನಿಮಗೆ - ಕಷ್ಟಪಟ್ಟು ಹಣ ಹೊಂದಿಸಿ ಮಗು ಒಳ್ಳೆಯ ಅಂಕಗಳನ್ನು ಪಡೆಯಲಿ ಎಂದು ನಿರೀಕ್ಷಿಸುವ ಪಾಲಕರಿಂದ, ಒಳ್ಳೆಯ ಅಂಕಗಳನ್ನು ಪಡೆಯುವ ಸಹಪಾಠಿಗಳಿಂದ, ಯಶಸ್ಸನ್ನು ಮಾತ್ರ ಗೌರವಿಸುವ ನಮ್ಮ ಸಮಾಜದಿಂದ ನಿಮ್ಮ ಮೇಲೆ ಹೇರಲ್ಪಡುವ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಬಹುದೇ? ಪಾಲಕರೇ... ನಿಮ್ಮ ಮಗುವನ್ನು ಗಮನಿಸಿ .ಹತ್ತನೇ ತರಗತಿಯವರೆಗೆ ಸರಿಯಾಗಿ ಎರಡು ಗಂಟೆಗಳ ಏಕಾಗ್ರತೆಯಿಲ್ಲದ ಮಗು ಮುಂದಿನ ೨ ವರ್ಷ ೧೨ ಗಂಟೆಗಳ ಕಾಲ ಓದಲು ಸಾಧ್ಯವೇ? ಗಣಿತ- ವಿಜ್ಞಾನವೆಂದರೆ ಚಳಿಜ್ವರ ಬರುವ ನಿಮ್ಮ ಮಗು ಈ ಕಡಲಿನಲ್ಲಿ ಈಜಬಲ್ಲನೇ? ಕಷ್ಟಪಟ್ಟು ಓದಿದರೆ ಎಲ್ಲವೂ ಸಾಧ್ಯ ಎಂಬ ಮಾತಿದೆ .ಆದರೆ ಓದಲು ಆ ವಿಷಯದ ಮೇಲೆ ಆಸಕ್ತಿ ಇರಬೇಕಲ್ಲವೇ?   
  ಬಡಬಡಿಸುತ್ತಿದ್ದ ನಾಲಿಗೆಯನ್ನೂ, ಓಡುತ್ತಿದ್ದ ಮನಸ್ಸನ್ನೂ ನಿಯಂತ್ರಿಸಿ ನಾನು ಆದಿತ್ಯನಿಗೆ ಹೇಳಿದೆ “ ಮಗೂ ಈ ಪ್ರಪಂಚದಲ್ಲಿ ಭವಿಷ್ಯದಲ್ಲಿ ಯಶಸ್ಸೇ ಸಿಗಬಹುದು ಎಂದು ಖಚಿತವಾಗಿ ಹೇಳುವಂಥ ವೃತ್ತಿ ಯಾವುದೂ ಇಲ್ಲ. ಆದರೆ ಸ್ವಲ್ಪ ಸಹನೆ, ಶ್ರದ್ಧೆ ಗಳಿದ್ದರೆ ಸಾಕಷ್ಟು ಹಣ ಸಂಪಾದಿಸಬಹುದಾದ ಅನೇಕ ವೃತ್ತಿಗಳಿವೆ. ಪ್ರಾಮಾಣಿಕವಾಗಿ ದುಡಿದು ಸಂಪಾದಿಸಲು ಸಾಧ್ಯವಿರುವ ಎಲ್ಲ ವೃತ್ತಿಗಳೂ ಶ್ರೇಷ್ಠವೇ. ಆತುರಪಡಬೇಡ. ಮೋದಿಯೆಂಬ ಮೋಡಿಗಾರನಿಂದಾಗಿ ಮುಂದಿನ ವರ್ಷಗಳಲ್ಲಿ ನಮ್ಮ ದೇಶದಲ್ಲೇ ಉದ್ಯೋಗರಂಗದಲ್ಲಿ ಅಗಾಧ ಬದಲಾವಣೆಗಳಾಗುವ ನಿರೀಕ್ಷೆ ಇದೆ. ನಮ್ಮ ಬದುಕು ನಮಗೆ ಮಾತ್ರ ಸೇರಿದ್ದು. ಅನ್ಯರನ್ನು ಮೆಚ್ಚಿಸಲು ಬದುಕಬೇಡ.ನಿನ್ನ ಬುದ್ಧಿಮತ್ತೆಗೆ ಅನುಗುಣವಾಗಿ ನಿನ್ನಿಷ್ಟದ ವಿಷಯವನ್ನು ಆರಿಸಿ ಓದು.ಅಲ್ಲದೇ ಹಣವನ್ನೂ ಮೀರಿದ ಎಷ್ಟೋ ವಿಷಯಗಳು ಬದುಕಿನಲ್ಲಿವೆ... .ಧನಸಂಪತ್ತು ಖಂಡಿತವಾಗಿಯೂ ಹಿರಿದು ಆದರೆ ನೆಮ್ಮದಿಯೆಂಬ ಸಂಪತ್ತು ಎಲ್ಲಕ್ಕಿಂತ ಮಿಗಿಲು ”        


Friday 20 November 2015

RESPECTFUL childhood

A scene from ‘Sa Re Ga Ma lil champs Kannada’ two Sundays ago --
Anchor- Oh you are so skinny. How many Idllis do you eat for breakfast?
Participant (a little girl) - One or two… [ Looks painfully at her]
Judge- Oh, one Idlly! That’s too much. Now onwards don’t eat idlies at all. Just take in the smell of Idlies. Ha! Ha!Ha! [Sarcastically]
And a big round of applause from the audience for his VALUABLE comments……
As far as we know judges for such reality shows have an authority to comment on the voice quality of the singers. But I would like to know who gave them the authority to pass degrading comments on the physical shape of the singers especially to a little girl?
Mostly a child’s physical features are decided by hereditary. Is it right to humiliate a child in public for none of his/her mistake? Is it correct to prick the tender heart which may already be crying from inside for its ugly looks? Please remember for a child the joy of success is temporary and pain of humiliation can be permanent.
In this day and age, a child is a precious commodity and there is an industry that thrives under the claim of providing a bright future, great exposure and so on. But can we allow the market to kill our child’s self-esteem, self -confidence, innocence and his/his invaluable childhood? Should we allow the apple of our eye to become an easy tool for someone’s money making scheme?
Knowingly or otherwise, most of us tend to pass comments at little ones like “you are fat /skinny/ dwarf /a coconut tree/a soda buddy / kaddi pailwan / charcoal and what not…. But just think once: what do we achieve by hurting that little soul? Can our comment change his/her body shape?
I feel children are the angels on this earth and they deserve a RESPECTFUL childhood. What do you say?

ಚೀನಾದ ನೆನಪುಗಳು

ಕೆಲ ತಿಂಗಳ ಹಿಂದೆ ಒಂದು ಭಾನುವಾರ ಕಂಪ್ಯೂಟರಿನಲ್ಲಿ ತದೇಕದೃಷ್ಟಿ ನೆಟ್ಟಿದ್ದ ನನ್ನ ಪತಿ ಇದ್ದಕ್ಕಿದ್ದಂತೆಯೇ “ನಾವು ಈ ಬೇಸಗೆ ರಜೆಯಲ್ಲಿ ಚೀನಾಗೆ ಪ್ರವಾಸ ಹೋಗೋಣವೇ” ಎಂದಾಗ ಉತ್ತರಿಸಲು ಅರೆಕ್ಷಣ ತಡವರಿಸಿದೆ. ವಿದೇಶಪ್ರವಾಸ ಎಂದರೆ ಸಿಂಗಪುರ, ದುಬೈ ಇತ್ಯಾದಿಗಳು, ಆದರೆ ಚೀನಾ ಕೂಡಾ ಪ್ರವಾಸಿತಾಣವೇ…. ? ಎನಿಸಿತು. ಸುದ್ದಿ ಕೇಳಿದ ನಮ್ಮ ಸಂಬಂಧಿಗಳೂ, ಸ್ನೇಹಿತರೂ ಕೂಡಾ ಚೀನಾಕ್ಕೆ ಯಾಕೆ ಹೋಗುತ್ತೀರಿ? ಎಂದು ಪ್ರಶ್ನಾರ್ಥಕ ನೋಟ ಬೀರಿದರು. ಏನೇ ಇರಲಿ, ನನ್ನ ಕೌಟುಂಬಿಕ ಮಿತ್ರ, ಸುಜ್ಹೋ ನಗರದಲ್ಲಿ ಡೆಲ್ಫೈ ಎಲೆಕ್ಟ್ರಾನಿಕ್ ಕಂಪನಿಯ ಉತ್ಪಾದನಾ ವಿಭಾಗದ ನಿರ್ದೇಶಕರಾಗಿರುವ ಶ್ರೀ ರವಿ ಫಡ್ಕೆಯವರ ಆಹ್ವಾನದ ಮೇರೆಗೆ ಎಪ್ರಿಲ್ ಕೊನೆಯ ವಾರದ ಚೀನಾ ಮತ್ತು ಹಾಂಕಾಂಗ್ ಪ್ರವಾಸಕ್ಕೆ ನಮ್ಮಲ್ಲಿದ್ದ ಅಲ್ಪ- ಸ್ವಲ್ಪ ಉಳಿತಾಯದ ಹಣವನ್ನು ತೊಡಗಿಸಿ ತಯಾರಿ ಆರಂಭಿಸಿಯೇ ಬಿಟ್ಟೆವು.
ಚೀನಾದ ಬಗ್ಗೆ ನನಗೆ ಮೊದಲಿನಿಂದಲೂ ಅತೀವ ಕುತೂಹಲ. ನಮ್ಮ ಭಾರತದಂತೆಯೇ ಅಗಾಧ ಜನಸಂಖ್ಯೆಯ, ಶ್ರೀಮಂತ ಪರಂಪರೆಯ ನಾಡಿನ ಇಂದಿನ ಯಶೋಗಾಥೆಯ ಬಗ್ಗೆ ತಿಳಿಯುವ ಹಂಬಲ. ಹಿಂದೆ ನಾನು ಓದಿದ ‘ಸ್ಮೋಕ್ಸ್ ಅಂಡ್ ಮಿರರ್ಸ್ – ಪಲ್ಲವಿ ಅಯ್ಯರ್’ ಹಾಗೂ ‘ಮಾವೋನ ಕೊನೆಯ ನರ್ತಕ – ಲೀ ಕುನ್ ಕ್ಸಿಂಗ್ [ಕನ್ನಡಕ್ಕೆ ಜಯಶ್ರೀ ಭಟ್]’ ಎಂಬ ಎರಡು ಅತ್ಯುತ್ತಮ ಕೃತಿಗಳಿಂದ ಅಲ್ಲಿನ ಜನಜೀವನದ ಸ್ಥೂಲ ಪರಿಚಯವಾಗಿತ್ತಾದರೂ ಈ ರೀತಿಯ ಅಭಿವೃದ್ಧಿ ಹೇಗೆ ಸಾಧ್ಯ? ಸರ್ಕಾರವೆಂಬ ವ್ಯವಸ್ಥೆ ಈ ಮಟ್ಟದಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವೇ? ಇದರಲ್ಲಿ ಉತ್ಪೇಕ್ಷೆ ಎಷ್ಟು? ನೈಜತೆ ಏನು? ಇತ್ಯಾದಿ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ಬೆಂಗಳೂರಿನಿಂದ ಹಾಂಕಾಂಗ್ ಮೂಲಕ ಶಾಂಘೈ ವಿಮಾನ ನಿಲ್ದಾಣದಲ್ಲಿ ಇಳಿದಾಗ ಚಿಕ್ಕ ಕಣ್ಣಿನ ಬಿಗಿ ಮುಖದ ಇಮಿಗ್ರೇಷನ್ ಅಧಿಕಾರಿಯಿಂದ ಅನುಮತಿ ಪಡೆದು ಹೊರಬಂದಾಗ ,ಆತ್ಮೀಯವಾಗಿ ನಮ್ಮನ್ನು ಸ್ವಾಗತಿಸಿದ ರವಿ ಫಡ್ಕೆಯವರಿಂದ ಪ್ರಶ್ನೆಗಳು ಸೂಕ್ತ ಉತ್ತರ ಪಡೆಯಲಾರಂಭಿಸಿದವು.
ಅಬಿವೃದ್ಧಿ , ಮೂಲಸೌಕರ್ಯಗಳ ವಿಚಾರದಲ್ಲಿ ನಮ್ಮ ದೇಶಕ್ಕೂ , ಚೀನಾಗೂ ಹೋಲಿಸಲು ಸಾಧ್ಯವೇ ಇಲ್ಲ. ಅಥವಾ ಯಾವ ದೇಶವನ್ನೂ ಇನ್ನೊಂದು ದೇಶದ ಜೊತೆ ಹೋಲಿಸಬಾರದು. ಪ್ರತಿಯೊಂದು ದೇಶವೂ ಭಿನ್ನ, ಅದರ ಜನಜೀವನ , ಸಂಸ್ಕೃತಿ, ಚರಿತ್ರೆ, ಸಮಸ್ಯೆಗಳೂ ಭಿನ್ನವಾಗಿರುತ್ತವೆ. ಆದರೆ ನಾನು ಅಲ್ಲಿ ಕಂಡ ಕೆಲ ವಿಶೇಷಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದೇ ನನ್ನ ಉದ್ದೇಶ.
ಇಲ್ಲಿ ಗಿಡವಲ್ಲ, ಮರ ನೆಡುವುದು!
ಇಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ , ಎಲ್ಲ ಕಟ್ಟಡಗಳ ಮುಂಭಾಗದಲ್ಲಿ ಎತ್ತರವಾದ ಮರಗಳು ಗಮನ ಸೆಳೆಯುತ್ತವೆ. ಹೆಚ್ಚು ಕಡಿಮೆ ಎಲ್ಲವೂ ಒಂದೇ ಎತ್ತರ, ದಪ್ಪ. ಅರೆ… ಮರಗಳೂ ಇಲ್ಲಿ ಶಿಸ್ತು ಪಾಲಿಸುತ್ತವೆಯೇ ಎಂದು ಉದ್ಗರಿಸಿದ ನನಗೆ ಸಿಕ್ಕ ಉತ್ತರ ‘ಇಲ್ಲಿ ಗಿಡವಲ್ಲ.. ಮರ ನೆಡುತ್ತಾರೆ!’ ಸಾಮಾನ್ಯವಾಗಿ ಚೀನಾದಲ್ಲಿ ಹೊಸ ರಸ್ತೆ , ಕಟ್ಟಡಗಳ ಉದ್ಘಾಟನೆಗೂ ಮುನ್ನವೇ ಪೂರ್ಣಪ್ರಮಾಣದ ಉದ್ಯಾನಗಳ ನಿರ್ಮಾಣವಾಗುತ್ತದೆ. ಸಮೀಪದ ಹಳ್ಳಿಗಳಲ್ಲಿ ಈ ಉದ್ದೇಶಕ್ಕೆಂದೇ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತದೆ. ಅವುಗಳಲ್ಲಿ ಪೂರ್ಣಪ್ರಮಾಣದಲ್ಲಿ ಬೆಳೆದ ಮರಗಳನ್ನು ಬೇರುಸಮೇತ , ಲಾರಿಗಳಲ್ಲಿ ತಂದು ಹೊಸ ಸ್ಥಳಗಳಲ್ಲಿ ಮೊದಲೇ ತೋಡಿಟ್ಟ ಆಳವಾದ ಗುಂಡಿಗಳಲ್ಲಿ ನೆಡುತ್ತಾರೆ. ಮರಕ್ಕೆ ನಾಲ್ಕೂ ಕಡೆಗಳಿಂದ ಲೋಹದ /ಬಿದಿರಿನ ಕಂಬಗಳ ಆಧಾರವನ್ನು ನಿರ್ಮಿಸುತ್ತಾರೆ. ಒಂದು ವರ್ಷದ ನಂತರ ಮರ ಬೇರು ಬಿಟ್ಟಿರುವುದನ್ನು ಖಚಿತಪಡಿಸಿಕೊಂಡು ಆಧಾರಸ್ತಂಭಗಳನ್ನು ತೆಗೆಯುತ್ತಾರೆ. ಇಂಥ ಸಾವಿರಾರು ಮರಗಳನ್ನು ರಸ್ತೆ ಗಳ ಇಕ್ಕೆಲಗಳಲ್ಲಿ, ಪ್ರೇಕ್ಷಣೀಯ ಸ್ಥಳಗಳಲ್ಲಿ ನೋಡಿ ಅಚ್ಚರಿಯಾಯಿತು.
ಮರವನ್ನು ಲಾರಿಯಲ್ಲಿ ಒಯ್ಯುವುದು
ಮರವನ್ನು ಲಾರಿಯಲ್ಲಿ ಒಯ್ಯುವುದು
ಮರ ನೆಟ್ಟ ರಸ್ತೆ
ಮರ ನೆಟ್ಟ ರಸ್ತೆ
ಸ್ವಚ್ಛತೆಯೆಂಬ ಉದ್ಯಮ
ವಿದೇಶಗಳಲ್ಲಿನ ಸ್ವಚ್ಛತೆಯ ಬಗ್ಗೆ ನಾವೆಲ್ಲಾ ಕಿವಿ ತೂತಾಗುವಷ್ಟು ಕೇಳಿರುತ್ತೇವೆ. ಈ ವಿದೇಶೀಯರೂ ನಮ್ಮಂತೆಯೇ ಹುಲುಮಾನವರಲ್ಲವೇ? ಅವರು ಅಪ್ಪಿತಪ್ಪಿಯೂ ದಾರಿಯಲ್ಲಿ ಕಸ ಹಾಕುವುದೇ ಇಲ್ಲವೇ? ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿ ಸಿಗುವವರೆಗೂ ಕಸ ಕೈಯಲ್ಲಿ ಹಿಡಿದುಕೊಂಡೇ ಇರಲು ಹೇಗೆ ಸಾಧ್ಯ? ಎಂದೆಲ್ಲ ನನಗೆ ಅನೇಕ ಬಾರಿ ಅನಿಸುತ್ತಿತ್ತು. ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಕ್ಕಿತು. ಅವರೂ ನಮ್ಮಂತೆಯೇ ಕಠಿಣ ಕಾನೂನಿಗೆ ಮಾತ್ರ ಹೆದರುವ ಜನ. ಚೀನಾದಲ್ಲೂ ನಾನು ಹಣ್ಣಿನ ಸಿಪ್ಪೆ, ಖಾಲಿ ನೀರಿನ ಬಾಟಲ್, ಚಿಪ್ಸ್ ನ ಲಕೋಟೆಗಳನ್ನು,ಉರಿದ ಸಿಗರೇಟ್ ತುಂಡುಗಳನ್ನು ದಾರಿಯಲ್ಲಿ ಎಸೆಯುವವರನ್ನು, ಮಕ್ಕಳಿಗೆ ತೀರಾ ಅವಸರವಾದಾಗ ಬೀದಿ ಬದಿಯಲ್ಲಿ ಉಚ್ಚೆ ಹೊಯ್ಯಿಸುವವರನ್ನು, ಬೀದಿಯಲ್ಲಿ ಉಗುಳುವವರನ್ನು ಕಂಡೆ. [ಇವರ ಸಂಖ್ಯೆ ನಮ್ಮಲ್ಲಿಗಿಂತ ಕಡಿಮೆ ] ಆದರೆ ಇದರ ಸ್ವಚ್ಛತೆಗೆ ಉತ್ತಮ ವ್ಯವಸ್ಥೆ ಇದೆ. ದೊಡ್ಡ ಸಂಖ್ಯೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳು ಎಲ್ಲೆಲ್ಲಿಯೂ ಕಂಡರು. ಶುಭ್ರವಾದ ಸಮವಸ್ತ್ರ ತೊಟ್ಟ ಇವರ ಒಂದು ಕೈಯಲ್ಲಿ ತುದಿಯಲ್ಲಿ ಇಕ್ಕಳವಿರುವ ಕೋಲು ಇದೆ. ಇನ್ನೊದು ಕೈಯಲ್ಲಿ ಬಕೇಟು. [ ಚಿತ್ರ ನೋಡಿ] ಬಿಡುವಿಲ್ಲದೇ ತಮಗೆ ಗೊತ್ತುಪಡಿಸಿದ ಜಾಗದಲ್ಲಿ ಇವರು ಸುತ್ತಾಡುತ್ತ ಕಸ ಎತ್ತುತ್ತಲೇ ಇರುತ್ತಾರೆ. ಹಸಿ ಹಾಗೂ ಒಣ ಕಸವನ್ನು ತಕ್ಷಣ ವಿಂಗಡಿಸುತ್ತಾರೆ. ನಗರದ ತ್ಯಾಜ್ಯ ವಿಂಗಡನಾ ಘಟಕಗಳು ಕಸವನ್ನು 100% ಸಂಸ್ಕರಿಸುತ್ತವೆ.ಹಸಿ ಕಸದ ಗೊಬ್ಬರ ರಸ್ತೆಬದಿಯ ಹೂಗಿಡಗಳಿಗೆ ಉಪಯೋಗವಾಗುತ್ತದೆ. ಯಾಂಜ್ ಜಿ ನದಿಯನ್ನು ಜೋಪಾನವಾಗಿ ರಕ್ಷಿಸಿರುವುದರಿಂದ ನೀರಿಗೆ ಬರವಿಲ್ಲ. ಆದ್ದರಿಂದ ವಾರಕ್ಕೊಮ್ಮೆ ನಗರದ ಬೀದಿಗಳನ್ನು ತೊಳೆಯಲಾಗುತ್ತದೆ.[ಚಿತ್ರ ನೋಡಿ] . ನಗರದಲ್ಲಿ ಅಲ್ಲಲ್ಲಿ ಶೌಚಾಲಯಗಳು ಕಂಡವು. ಪ್ರೇಕ್ಷಣೀಯ ಸ್ಥಳಗಳಲ್ಲಿ 30-60 ಶೌಚಾಲಯಗಳಿವೆ. ವಿಶೇಷವೆಂದರೆ ಸಾರ್ವಜನಿಕ ಶೌಚಾಲಯಗಳಲ್ಲಿ ಹೆಚ್ಚಿನವು ನಮ್ಮ ಭಾರತೀಯ ಮಾದರಿಯ ಪಾಯಿಖಾನೆಗಳು! ನಮ್ಮ ನಗರಗಳಲ್ಲಿ ಬೀದಿ ತೊಳೆಯುವುದು ಸಾಧ್ಯವಾಗದಿರಬಹುದು.
ಆದರೆ ಈ ರೀತಿಯ ಸಶಸ್ತ್ರ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಿಸಿ ನಮ್ಮ ಬೀದಿಗಳನ್ನು, ಪ್ರೇಕ್ಷಣೀಯಸ್ಥಳಗಳನ್ನು ಸ್ವಚ್ಛವಾಗಿ ಇರಿಸಬಹುದಲ್ಲ ಅನಿಸಿತು. ಇದಕ್ಕೆ ದೊಡ್ಡ ಖರ್ಚೂ ಇಲ್ಲ . ಉದ್ಯೋಗ ಸೃಷ್ಟಿಯೂ ಆಯಿತು.
ರಸ್ತೆ ತೊಳೆಯುವುದು ಸಶಸ್ತ್ರ ಪೌರಕರ್ಮಚಾರಿ
ರಸ್ತೆ ತೊಳೆಯುವುದು
ರಸ್ತೆ ತೊಳೆಯುವುದು
ಸಶಸ್ತ್ರ ಪೌರಕರ್ಮಚಾರಿ
ಸಶಸ್ತ್ರ ಪೌರಕರ್ಮಚಾರಿ
ನಾರೀಶಕ್ತಿ
ಚೀನಾದಲ್ಲಿ ನನಗೆ ನಾರೀಶಕ್ತಿಯ ವಿರಾಟ್ ರೂಪದ ದರ್ಶನವಾಯಿತು. ಹೆಚ್ಚಿನ ಎಲ್ಲ ಸೇವಾ ಕ್ಷೇತ್ರದಲ್ಲಿ ಮಹಿಳೆಯರದೇ ಸಿಂಹಪಾಲು. ವಾಹನ ಚಾಲಕರು, ರಸ್ತೆ ಸುಂಕದ ವಸೂಲಿಗರು, ಪ್ರವಾಸೀ ಗೈಡ್ ಗಳು, ಪೌರಕಾರ್ಮಿಕರು, ರೈಲು, ಬಸ್ಸುಗಳ ಸಿಬ್ಬಂದಿ, ಹೋಟೇಲಿನ ಎಲ್ಲ ವಿಭಾಗಗಳ ಸಿಬ್ಬಂದಿ .. ಎಲ್ಲವೂ ಮಹಿಳೆಯರೇ! ಈ ನಗುಮೊಗದ ,ಚುರುಕು ನಡಿಗೆಯ ವನಿತೆಯರು ಹಗಲು ರಾತ್ರಿಯೆನ್ನದೇ ದುಡಿಯುತ್ತಾರೆ. ಒಮ್ಮೆ ಶಾಂಘೈ ನಿಂದ ನಾವು ಸುಜೋನಲ್ಲಿರುವ ಮನೆಗೆ ಮರಳುವಾಗ ರಾತ್ರಿ 1 ಗಂಟೆ ದಾಟಿತ್ತು. ಆ ರಾತ್ರಿಯಲ್ಲೂ ಆ ನಿರ್ಜನ ಹೆದ್ದಾರಿಯಲ್ಲಿ ಇಬ್ಬರು ಸುಂದರವಾದ ಯುವತಿಯರು ರಸ್ತೆ ಸುಂಕ ವಸೂಲಿಯಲ್ಲಿ ನಿರತರಾಗಿದ್ದ ದೃಶ್ಯ ಕಂಡು ಹೃದಯ ತುಂಬಿ ಬಂತು.ನಮ್ಮ ವಾಹನ ಚಾಲಕಿ 50ವಯಸ್ಸಿನ ತರುಣಿ! ಯೂ ಪಿಂಗ್ ಕೂಡಾ ನಮ್ಮನ್ನು 2 ಗಂಟೆಗೆ ಮನೆ ತಲುಪಿಸಿ ನಿರ್ಭಯವಾಗಿ ತನ್ನ ಮನೆಗೆ ಹೋದಳು. ಬಹುಶ: ನಮ್ಮಲ್ಲೂ ಎಲ್ಲ ಮಹಿಳೆಯರೂ ಧೈರ್ಯ ವಹಿಸಿ ರಾತ್ರಿಯಲ್ಲೂ ಓಡಾಡಲೂ ಪ್ರಾರಂಭಿಸಿದರೆ ಮಹಿಳೆಯೆಂಬ ಸಂಪನ್ಮೂಲದ ಸದ್ಬಳಕೆ ಆಗಬಹುದು.ಮೌಲ್ಯಯುತ,ನಿರ್ಭೀತ ಸಮಾಜದ ಸೃಷ್ಟಿಯಾಗಬಹುದು.
ದೇವ್ರಾ……. ಹಾಗಂದ್ರೇನು?
ದೇವರ ಅಸ್ತಿತ್ತ್ವದ ಬಗ್ಗೆ ಮನುಕುಲ ಶತಮಾನಗಳಿಂದ ಜಿಜ್ಞಾಸೆ ನಡೆಸಿದೆ, ನಡೆಸುತ್ತಲೇ ಇದೆ. ನಾವು ಭಾರತೀಯರಂತೂ ದೇವನನ್ನು ಕೋಟ್ಯಾಂತರ ರೂಪಗಳಲ್ಲಿ ಕಂಡವರು. ಒಂದರ್ಥದಲ್ಲಿ ನಮ್ಮ ಜೀವನದ ಕೇಂದ್ರಬಿಂದುವೇ ದೇವರು. ನಮ್ಮ ಪ್ರವಾಸದಲ್ಲಿ ಜನಜೀವನದಲ್ಲಿ ದೇವನೆಂಬ ಕಲ್ಪನೆಯ ಅನುಪಸ್ಥಿತಿ ನನಗೆ ಕಂಡಿತು.ಸರಕಾರದ ಕಮ್ಯುನಿಸ್ಟ್ ಚಿಂತನೆಗಳಿಂದ ಇಂದಿನ ತಲೆಮಾರು ದೇವರ ಬಗ್ಗೆ ವಿಶಿಷ್ಟ ತೀರ್ಮಾನಕ್ಕೆ ಬಂದಿದೆ. ಹಾಗೇ ಕುತೂಹಲದಿಂದ ನಮ್ಮ ಗೈಡ್ ವಾಂಗ್ ಳನ್ನು ಕೇಳಿದೆ, ನೀನು ಯಾವ ದೇವರನ್ನು ಆರಾಧಿಸುತ್ತೀಯೆ? . ತಟಕ್ಕನೆ ಉತ್ತರ ಬಂತು- ದೇವ್ರಾ……. ಆರಾಧಿಸುವುದಾ….. ಹಾಗಂದ್ರೇನು?. ನಾನು – “ಅದೇ ಬುದ್ಧ ಅಥವಾ ಬೇರೆ ಯಾವುದಾದರೂ ದೇವರನ್ನು ದಿನವೂ ಪ್ರಾರ್ಥಿಸುತ್ತೀಯಾ?” ಎಂದೆ. ಅವಳು ಅರೆಕ್ಷಣ ಯೋಚಿಸಿ, “ನೋಡಿ , ನನಗೆ ಯಾವ ದೇವ್ರೂ ಇಲ್ಲ. ಆದರೆ ಇಲ್ಲಿನ ಕೆಲವು ಮತಗಳ ತತ್ತ್ವಗಳನ್ನು ನಂಬುತ್ತೇನೆ. ನಾನು ಚಿಕ್ಕವಳಿರುವಾಗ ಕನ್ ಫ಼ಯೂಜಿಸ್ ಮತವನ್ನು ಪಾಲಿಸುತ್ತಿದ್ದೆ . ಅದು ಕುಟುಂಬವನ್ನು ಪ್ರೀತಿಸು, ಆದರ್ಶಗಳಿಗೆ ,ಜೀವನ ಮೌಲ್ಯಗಳಿಗೆ ಬೆಲೆ ಕೊಡು ಅನ್ನುತ್ತದೆ. ಈಗ ಯುವತಿಯಾಗಿದ್ದೇನೆ ಆದ್ದರಿಂದ ಟಾವಿಸಂ ಮತವನ್ನು ಪಾಲಿಸುತ್ತೇನೆ ಯಾಕೆಂದ್ರೆ ಅದು ನಿನಗೆ ಅನುಕೂಲವಾದ ಆದರ್ಶಗಳನ್ನು ಮಾತ್ರ ಪಾಲಿಸು , ಜೀವನದಲ್ಲಿ ಅದೃಷ್ಟ ಬರುತ್ತದೆ ಕಾಯುತ್ತಿರು, ಅನ್ನುತ್ತದೆ. ಇನ್ನು ವಯಸ್ಸಾದ ಮೇಲೆ ಬುದ್ಧಿಸಂ ಮತವನ್ನು ಪಾಲಿಸುತ್ತೇನೆ ಯಾಕೆಂದ್ರೆ ಅದು ಕಷ್ಟಗಳನ್ನೆಲ್ಲಾ ಸಹಿಸಿಕೋ, ಪರರಿಗೆ ಉಪಕಾರ ಮಾಡು, ಶಾಂತಿಯಿಂದಿರು ಅನ್ನುತ್ತದೆ. ನೀವೇ ಹೇಳಿ ಬುದ್ಧಿಸಂ ನ್ನು ಯೌವನದಲ್ಲಿ ಅನುಸರಿಸಲು ಸಾಧ್ಯವೇ? ಅನುಸರಿಸಿ ದುಡ್ಡು ಸಂಪಾದನೆ ಮಾಡಲು ಸಾಧ್ಯವೇ? ಅಥವಾ ಟಾವಿಸಂ ನ್ನು ಮುದುಕರಾದ ಮೇಲೆ ಹೇಗೆ ಅನುಸರಿಸಲಿ? ಅದಕ್ಕೇನೇ ಯಾವ ದಿನ ಹೇಗೆ ಬರುತ್ತದೋ ಹಾಗೆ ನನ್ನ ನಂಬಿಕೆಗಳನ್ನು ಬದಲಾಯಿಸುತ್ತೇನೆ” ಎಂದಳು. ಬಾಯಿತೆರೆದುಕೊಂಡು ಕೇಳುತ್ತಲೇ ಇದ್ದ ನಾನು ’ವಾಂಗ್ ಜಗದ್ಗುರು’ವಿಗೆ ಮನಸಾರೆ ವಂದಿಸಿದೆ!!
ಯಶಸ್ಸಿನ ಆರಾಧನೆ
ಒಂದು ಸಾಯಂಕಾಲ ನಮ್ಮ ಮಿತ್ರರೊಡನೆ ಸಮೀಪದ ಮಾರ್ಕೆಟ್ ಗೆ ಹೋದೆವು. ಅಲ್ಲಿ ರಸ್ತೆ ಬದಿಯಲ್ಲಿ ಒಂದು ಬೃಹತ್ ಗಾತ್ರದ ಟಿ.ವಿ. ಅದರಲ್ಲಿ ಜನರ ಭಾವಚಿತ್ರದೊಡನೆ ಚೀನೀ ಭಾಷೆಯಲ್ಲಿ ಅನೇಕ ವಿವರಗಳು ಪ್ರದರ್ಶಿತವಾಗುತ್ತಿದ್ದವು. ಬಹುಶ: ಎಲ್ಲೋ ಅಪರಾಧಿಗಳ ಪತ್ತೆಗೆ ಈ ಕ್ರಮ ಇರಬಹುದು ಎಂದುಕೊಂಡು ರವಿ ಫಡ್ಕೆಯವರನ್ನು ಕೇಳಿದೆ. ಅವರು ನಕ್ಕು –“ಅವರು ಅಪರಾಧಿಗಳಲ್ಲ. ಸಮಾಜದ ಯಶಸ್ವೀ ವ್ಯಕ್ತಿಗಳು. ವೈದ್ಯರು, ಶಿಕ್ಷಕರು, ಇಂಜನಿಯರ್ ಗಳು, ರೈತರು, ಸೈನಿಕರು ಹೀಗೆ ವಿಶೇಷ ಸಾಧನೆ ಮಾಡಿದ ಯಾರೇ ಇದ್ದರೂ ಅವರ ವಿವರಗಳನ್ನು ಫೋಟೋದ ಜೊತೆ ಹೀಗೆ ಪ್ರದರ್ಶಿಸುತ್ತಾರೆ. ಮಕ್ಕಳಿಗೆ ಅವರು ಸ್ಫೂರ್ತಿಯಾಗಲಿ ಎಂದು ಸರಕಾರದ ಉದ್ದೇಶ” ಎಂದರು. ಸಾಮಾನ್ಯವಾಗಿ ಇಂಥ ಯಶಸ್ವೀ ವ್ಯಕ್ತಿಗಳೇ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರು. ಚೀನಾದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುವುದಿಲ್ಲ. ಆಯಾ ರಾಜ್ಯದ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರೇ ತಮ್ಮ ನಾಯಕರನ್ನು ಆರಿಸುತ್ತಾರೆ. ಬುದ್ಧಿವಂತರೇ ಮತದಾನ ಮಾಡುವುದರಿಂದ ಒಳ್ಳೆಯ ವ್ಯಕ್ತಿಗಳೇ ಆಯ್ಕೆಯಾಗಿ ಬರುತ್ತಾರೆ. ಹಾಗಾದರೆ ಇಲ್ಲಿ ಭ್ರಷ್ಟಾಚಾರವೇ ಇಲ್ಲ ಅಂದುಕೊಳ್ಳಬೇಡಿ. ಚೀನಾ ಭ್ರಷ್ಟಾಚಾರದಲ್ಲೂ ನಂಬರ್ ೧. ವ್ಯಕ್ತಿ ತಾನು ಮಾಡಿಸುವ ರಸ್ತೆ, ನೀರು, ಪಾರ್ಕ್ ಇತ್ಯಾದಿ ಕೆಲಸಗಳನ್ನು ಉತ್ತಮವಾಗೇ ಮಾಡುತ್ತಾನೆ. ಇಲ್ಲದಿದ್ದರೆ ಅವನನ್ನು ಆ ಸ್ಥಾನದಿಂದ ಕಿತ್ತುಹಾಕುತ್ತಾರೆ ಎಂಬ ಭಯವಿರುತ್ತದೆ.ಆದರೆ ತನಗೆ ಬೇಕಾದವರಿಗೆ ಗುತ್ತಿಗೆ ಕೊಡುತ್ತಾನೆ. ಒಂದಷ್ಟು ಹಣ ಹೊಡೆಯುತ್ತಾನೆ ಅಷ್ಟೇ!. ಯಾಕೋ ನನಗೆ ನಮ್ಮ ಮಹಾನಗರದ ರಸ್ತೆಗಳಲ್ಲಿ ಕಾಣುವ ರಾಜಕಾರಿಣಿಗಳ, ಅವರ ಹಿಂಬಾಲಕರ ಪೋಸ್ಟರ್ ಗಳು ನೆನಪಾದವು. ಇವರೇನಾ ನಮ್ಮ ಮಕ್ಕಳಿಗೆ ನಾವು ತೋರಿಸುತ್ತಿರುವ ಆದರ್ಶವ್ಯಕ್ತಿಗಳು ? ಎನಿಸಿತು.
ನಮ್ಮ ಭಾರತೀಯತೆಯ ಒಂದು ಪ್ರಮುಖ [ಅವ]ಲಕ್ಷಣವೆಂದರೆ ಎಲ್ಲಿ ಏನೇ ನೋಡಿದರೂ, ಇದೇನ್ ಮಹಾ…? ನಮ್ಮಲ್ಲಿಲ್ಲದ್ದು ಇಲ್ಲೇನಿದೆ? ನಮ್ಮ ಪರಂಪರೆಗೆ ಸರಿಸಾಟಿ ಯಾರು? ಎಂಬ ಅನಿಸಿಕೆ. ನಿಜ.. ನಮ್ಮ ಬೇಲೂರು, ಹಳೇಬೀಡು, ತಮಿಳುನಾಡಿನ ದೇವಾಲಯಗಳ ಶಿಲ್ಪವೈಭವಕ್ಕೆ, ಮಹಾಬಲಿಪುರಂ, ಕೋನಾರ್ಕ, ಅಜಂತಾ- ಎಲ್ಲೋರಾ, ಮೌಂಟ್ ಅಬುಗಳ ಬೆರಗಿಗೆ ಸರಿಸಾಟಿ ಇನ್ನೊಂದಿಲ್ಲ.ಆದರೆ ನಮ್ಮ ಸಂಪತ್ತನ್ನು ಜೋಪಾನವಾಗಿ ಕಾಪಿಡುವಲ್ಲಿ ,ಸೂಕ್ತವಾಗಿ ಪ್ರಸ್ತುತಪಡಿಸುವಲ್ಲಿ ನಾವು ಸೋತಿದ್ದೇವೆ ಎಂಬ ಕಹಿಭಾವನೆ ಮನಸ್ಸಿನಲ್ಲಿ ಸುಳಿಯಿತು. ಇರಲಿ.. ಪ್ರಾಚೀನತೆ , ತಾಂತ್ರಿಕತೆ ಹಾಗೂ ಆಧುನಿಕತೆಯ ಅಪೂರ್ವ ಸಂಗಮವಾದ ಈ ದೇಶ ನಮ್ಮ ನಗರ ನಿರ್ಮಾತೃಗಳಿಗೂ ಮಾದರಿಯಾಗಬಲ್ಲುದು.
Birds Nest Olympic Stadium

Monday 16 November 2015

ಉಡುಪೆಂಬ ಆತ್ಮವಿಶ್ವಾಸ


ನನಗೆ ತಲೆ ಕೆಟ್ಟಿದೆ” ಎಂದು ಸಾರ್ವಜನಿಕವಾಗಿ ಘೋಷಿಸುವುದರಿಂದಲೂ ಲಾಭಗಳಿವೆ ಎಂದು ನನಗೆ ಇತ್ತೀಚೆಗೆ ತಿಳಿಯಲಾರಂಭಿಸಿದೆ. ಮನಸ್ಸಿಗೆ ತೋಚಿದಂತೆ ಮಾತಾಡಬಹುದು.......ಮರ್ಯಾದೆಯ ಗಡಿ ದಾಟಿ ವ್ಯವಹರಿಸಬಹುದು...... ಇಂಥಾ ಹುಚ್ಚಾಟಗಳಿಂದ ಹಣ, ಕೀರ್ತಿಯನ್ನೂ ಗಳಿಸಬಹುದು. ಯಾರಿಗುಂಟು... ಯಾರಿಗಿಲ್ಲ ಇಂಥ ಸೌಭಾಗ್ಯ!!

ನನಗೆ ಹೀಗೆನನ್ನಿಸಿದ್ದು ಹುಚ್ಚನೆಂದು ಘೋಷಿಸಿಕೊಂಡ ಚಾಣಾಕ್ಷ ವ್ಯಕ್ತಿಯೊಬ್ಬ ಮಹಿಳೆಯ ಅತ್ಯಂತ ವೈಯಕ್ತಿಕ ವಿಷಯವಾದ ಅವಳ ಮೈಮೇಲಿನ ಬಟ್ಟೆಯ ಬಗ್ಗೆ ಪುಂಖಾನುಪುಂಖವಾಗಿ ಉಪದೇಶ ಕೊಡುತ್ತಿದ್ದುದು, ಅದರಲ್ಲೂ ದೇಹಸಿರಿ , ಸೌಂದರ್ಯ, ನಟನಾ ಕೌಶಲವೇ ಬಂಡವಾಳವಾಗಿರುವ ಮಾಧ್ಯಮದಲ್ಲಿ! ಹಾಗೂ ಅದನ್ನು ಕೇಳಿ , ನೋಡಿ ಮೆಚ್ಚಿ-ತಲೆದೂಗುತ್ತಿದ್ದ ನಾಗರಿಕರನ್ನು ಕಂಡು. ಮಹಿಳೆಗೆ ಎಷ್ಟು ವಿದ್ಯಾಭ್ಯಾಸ ಬೇಕು? ಎಂಥ ಗಂಡ ? ಮದುವೆ ಯಾವಾಗ? ಎಷ್ಟು ಮಕ್ಕಳು? ಅವಳು ಯಾವ ಕೆಲಸಗಳನ್ನು ಮಾಡಬೇಕು? ಎಷ್ಟು ಹೊತ್ತಿಗೆ ಮನೆ ಬಿಡಬೇಕು- ಎಷ್ಟು ಗಂಟೆಗೆ ಮನೆ ತಲುಪಬೇಕು? ಯಾವ ಬಟ್ಟೆ ತೊಡಬೇಕು? ಹೀಗೆ ಎಲ್ಲವನ್ನೂ ಸಾರ್ವಜನಿಕರೇ ನಿರ್ಧರಿಸಿ ಘೋಷಿಸುತ್ತಿರಬೇಕು! ಅವಳು ಮಾತ್ರ ಎಲ್ಲವನ್ನೂ ಕೇಳುತ್ತಾ ತನ್ನ ಪಾಡಿಗೆ ಕೆಲಸ ಮಾಡುತ್ತಾ ಇರಬೇಕು! ಹೇಗಿದೆ ನ್ಯಾಯ??

ಹಾಗೆ ನೋಡಿದರೆ ನನ್ನನ್ನೂ ಈ ಉಡುಪಿನ ಮಾಯೆ ಬಹಳ ವರ್ಷ ಕಾಡಿತ್ತು. ಕರಾವಳಿಯ ಕುಗ್ರಾಮವೊಂದರಲ್ಲಿ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ನನಗೆ ಮಿನಿ ಮೈಕೆಲ್ ಎಂಬ ಪ್ರಾಣಸ್ನೇಹಿತೆಯೊಬ್ಬಳಿದ್ದಳು.ಉದ್ದಲಂಗ ಹಾಕಿಕೊಂಡು, ತಲೆಗೆ ಎಣ್ಣೆ ಹಚ್ಚಿ ಕಟ್ಟಿದ ಬಿಗಿಯಾದ ಎರಡು ಜಡೆಯ ಮೇಲೆ ಅಬ್ಬಲಿಗೆ ಹೂವು ಮುಡಿದುಕೊಂಡು ಶಾಲೆಗೆ ಹೋಗುತ್ತಿದ್ದ ನಮಗೆ, ಸ್ಕರ್ಟ್/ ಪಾಂಟ್ , ಟಿಶರ್ಟ್ ಹಾಕಿಕೊಂಡು ಬಾಬ್ ಕಟ್ ನಲ್ಲಿ ಕಂಗೊಳಿಸುವ ಅವಳೆಂದರೆ ಅನ್ಯಲೋಕದ ಜೀವಿ. ಸೈಕಲ್ ನಲ್ಲಿ ಅವಳ ಓಡಾಟ.. ಭಾನುವಾರಗಳಂದು ಚರ್ಚಿಗೆ ಅವಳ ಪಯಣ...ಅಲ್ಲಿ ಆಕೆ ಹಾಡುವ ಕ್ರಿಸ್ತನ ಇಂಗ್ಲೀಷ್ ಗೀತೆಗಳು.... ಪ್ರಸಾದವೆಂದು ತಿನ್ನುವ ಕೇಕ್ ...ಓಹ್..... ಎಂಥ ಮಧುರ ಜೀವನ. ಬೆಳಗ್ಗೆ ಎದ್ದು ಹೂ ಕೊಯ್ದು, ಮಾಲೆ ಮಾಡಿ,ದೇವರಮನೆ ಒರೆಸಿ, ರಂಗೋಲಿ ಹಾಕಿ...ಅಯ್ಯೋ.... ಸ್ವಲ್ಪ ದೊಡ್ಡವರಾದ ಮೇಲೆ ಮೂರು ದಿನ ಹೊರಗೆ ಕೂರುವ ಶಿಕ್ಷ...ಇನ್ನು ದೇವಸ್ಥಾನದಲ್ಲಿ ಅದೇ ಪುರಂದರ ಭಜನೆ...... ತಣ್ಣನೆಯ ತೀರ್ಥ ...ಥೂ...ನಮ್ಮದೂ ಒಂದು ಜೀವನವಾ....ಅಂತೆಲ್ಲ ನಮಗೆ ಅನಿಸುತ್ತಿತ್ತು. ನನಗಂತೂ ಒಮ್ಮೊಮ್ಮೆ ಅವಳ ಜಾತಿಗೆ ಸೇರಿದರೆ ಹೇಗೆ?ಎಂಬ ಭಂಡ ಆಲೋಚನೆಯೂ ಬರುತ್ತಿತ್ತು .ಆದರೆ ಹಿರಿಯರ ಮಾತು ಮೀರಿದರೆ ರಕ್ತ ಕಾರುವಂತೆ ಮಾಡುವ ಸಾಮರ್ಥವಿರುವ ನಮ್ಮ ಮನೆಯ ಪಂಜುರ್ಲಿ-ಕಲ್ಲುರ್ಟಿಯರೆಂಬ ದೈವಗಳು ಹಾಗೂ ಮನೆಯ ಸುತ್ತ ಆಗಾಗ ಕಾಣಿಸುತ್ತಿದ್ದ ನಾಗಪ್ಪನಿಂದ ನನ್ನ ಯೋಜನೆ ಕಾರ್ಯರೂಪಕ್ಕೆ ಇಳಿಯಲಿಲ್ಲ. ಮುಂದೆ ಕಾಲೇಜಿನಲ್ಲಿಯೂ ಪಾಂಟ್ ಧರಿಸುವ ನನ್ನ ಕನಸು ನೆರವೇರಲೇ ಇಲ್ಲ. ಮುಂದೆ ಮದುವೆಯಾದ ಮೇಲೆ ಆರಂಭಿಕ ಸಂಸಾರತಾಪತ್ರಯಗಳೆಲ್ಲ ಕಳೆದು ಕೆಲವರ್ಷಗಳ ನಂತರ ಕೊನೆಗೂ ಒಂದುದಿನ ಪಾಂಟ್- ಟಾಪ್ ಧರಿಸಿಯೇ ಬಿಟ್ಟೆ. ಆದರೆ ಸತ್ಯವಾಗಿ ಹೇಳುತ್ತೇನೆ.ದೀರ್ಘಕಾಲದ ನಿರೀಕ್ಷೆಯಿಂದಲೋ ಅಥವಾ ವಯಸ್ಸಿನಿಂದಲೋ ಗೊತ್ತಿಲ್ಲ ನನಗೆ ಬಹಳ ನಿರಾಸೆಯಾಯಿತು... “ ಇದು ಇಷ್ಟೇನಾ!” ಅನ್ನಿಸಿತು.

ಈಗ ಕನಿಷ್ಟ ಉಡುಗೆ ತೊಡುವುದು ಆಧುನಿಕತೆಯ ಸಂಕೇತ ಎನಿಸಿದೆ. ಪಾಲಕರಿಗೂ ತಮ್ಮ ಮಕ್ಕಳು ಆಧುನಿಕರಾಗಿ ಕಾಣಲಿ ಎಂಬಾಸೆಯೂ ಇರುತ್ತದೆ.ತಮಗಿಷ್ಟ ಬಂದ ಉಡುಗೆ ತೊಟ್ಟು ನಿರ್ಭಯವಾಗಿ, ಲವಲವಿಕೆಯಿಂದ ತುಳುಕುವ ನನ್ನ ವಿದ್ಯಾರ್ಥಿನಿಯರನ್ನು ಕಂಡಾಗ ನನಗೆ ಆನಂದವಾಗುತ್ತದೆ. ನನ್ನ ವಿದ್ಯಾರ್ಥಿನಿಯೊಬ್ಬಳು ನನಗೆ ಹೇಳಿದ ಪ್ರಕಾರ ಒಳ ಉಡುಪುಗಳು ಕಾಣಿಸುವಂತಹ ಬಟ್ಟೆ ತೊಟ್ಟರೆ ಆತ್ಮವಿಶ್ವಾಸ ವರ್ಧಿಸುತ್ತದೆ. ಅಲ್ಲದೇ ಎಲ್ಲರ ಗಮನವನ್ನೂ ಸೆಳೆಯುವುದರಿಂದ ಮನಸ್ಸಿಗೆ ಖುಷಿಯೂ ಆಗುತ್ತದೆ. ಇರಲಿ... ಇದೆಲ್ಲ ಅವರವರ ವೈಯಕ್ತಿಕ ಅಭಿಪ್ರಾಯ.

ಏನೇ ಇರಲಿ. ಉಡುಗೆ - ತೊಡುಗೆ ಪ್ರತಿಯೊಬ್ಬರ ಮೂಲಭೂತ ಹಕ್ಕು. ಅಲ್ಲದೇ ಇತಿಹಾಸವನ್ನು ಗಮನಿಸಿದರೂ ಕಾಲನ ದಾಳಿಯಲ್ಲಿ ಹೆಚ್ಚು ಬದಲಾವಣೆಗೆ ಒಳಪಟ್ಟದ್ದೆಂದರೆ ಬಟ್ಟೆಗಳೇ. ಹೊಸದರ ಬಗ್ಗೆ ಆಸೆಪಡುವುದು ಕ್ರಿಯಾಶೀಲ ವ್ಯಕ್ತಿಯ ಸಹಜಗುಣ. ಸಂದರ್ಭಕ್ಕೆ , ಹೊಟ್ಟೆಪಾಡಿಗೆ, ಮನಸ್ಸಂತೋಷಕ್ಕೆ ಅನುಗುಣವಾಗಿ ಅನುಕೂಲಕರವಾದ ಬಟ್ಟೆಯನ್ನು ತೊಡುವ ಹಕ್ಕನ್ನು ಮಹಿಳೆಯಿಂದ ಯಾರೂ ಕಿತ್ತುಕೊಳ್ಳಬಾರದು. ಆಕೆ ಅದಕ್ಕೆ ಅವಕಾಶ ಮಾಡಿಕೊಡಲೂಬಾರದು.ನಮ್ಮ ಸಂಸ್ಕೃತಿಯು ಹಾಡಿ ಹೊಗಳುವ ಸೀರೆಗಿಂತ ಪಾಶ್ಚಾತ್ಯ ಉಡುಪುಗಳು ಯಾವುದೇ ರೀತಿಯಲ್ಲಿ ಅಸಭ್ಯವಲ್ಲವೇ ಅಲ್ಲ. ಇನ್ನು ಮಹಿಳೆಯರ ಬಟ್ಟೆಯಿಂದ ಸಂಸ್ಕೃತಿ ನಾಶ, ಅತ್ಯಾಚಾರವಾಗುವುದೇ ನಿಜವಾದರೆ ಅಂಥಾ ಸಮಾಜವನ್ನು ನಿರ್ಮಿಸಿದ ನಾವು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು.

Sunday 4 October 2015

ಬೀಜಿಂಗ್ ಎಂಬ‌ ಬೆರಗು ....

“ಅಲ್ಲ....... ಗಂಟೆಗೆ ಮುನ್ನೂರು ಕಿಲೋಮೀಟರ್ ವೇಗದಲ್ಲಿ ಓಡೋ ರೈಲಲ್ಲಿ ಕೂತ್ಕೊಂಡ್ರೆ ಹೊರಗಡೆ ಏನೂ ಕಾಣ್ಲಿಕ್ಕಿಲ್ಲ ....”  ಅಂತ ಗೊಣಗುತ್ತಾ ಶಾಂಘೈ ಬುಲೆಟ್ ರೈಲುನಿಲ್ದಾಣದ ಒಳಗೆ ಪತಿಯ ಜೊತೆ ಟಿಕೆಟ್ ಪಡೆದುಕೊಂಡು ಪ್ರವೇಶಿಸುವಾಗ ಸೋಮವಾರದ ಬೆಳಗಿನ ಏಳು ಘಂಟೆ. ಹಾಗೇ ಕಣ್ಣಾಡಿಸಿದೆ. ಇಲ್ಲಿಂದ ೧೨೦೦ ಕಿ.ಮೀ ದೂರದ ಬೀಜಿಂಗ್ ಗೆ ಹೋಗಲು ಪ್ರಯಾಣಿಕರ ದಂಡೇ ನೆರೆದಿತ್ತು. ಹೆಚ್ಚಿನವರು ವಾರಾಂತ್ಯದಲ್ಲಿ ಇಲ್ಲಿನ ತಮ್ಮ ಮನೆಗಳಿಗೆ ಬಂದವರು  ಕಚೇರಿಗಳಿಗೆ ಮಧ್ಯಾಹ್ನ ಹೋಗುವವರು. ೭.೪೦ರ ರೈಲು ಬರಲು ಮೂರು ನಿಮಿಷಗಳಿಗೆ ಮುಂಚೆ ಪ್ಲಾಟ್ ಫಾರ್ಮ್ ಗೇಟುಗಳನ್ನು ತೆರೆದರು.ಜನ ಶಿಸ್ತಾಗಿ ತಮ್ಮ ಬೋಗಿ ಸಂಖ್ಯೆಯ ಎದುರು ನೇರ ಸಾಲುಗಳಲ್ಲಿ ನಿಲ್ಲುತ್ತಿದ್ದಂತೆಯೇ ಅಗೋ...... ಆ ಪವನಪುತ್ರ ಮಿಂಚಿನ ವೇಗದಲ್ಲಿ ಬಂದು ನನ್ನೆದುರು ನಿಂತೇಬಿಟ್ಟ. ಪ್ರತಿ ನಿಲ್ದಾಣದಲ್ಲೂ ಮೂರುನಿಮಿಷ ಮಾತ್ರ ನಿಲ್ಲುವ ಈ ವೇಗಿಯನ್ನು ಲಗುಬಗನೆ ಹತ್ತಿದೆವು. ರೈಲು ಹೊರಟಿತು. ಹೊರಗಿನ ಪ್ರಕೃತಿ ನಿಚ್ಚಳವಾಗೇ ಕಾಣಲಾರಂಭಿಸಿದಾಗ ನನ್ನ ಮೂರ್ಖತನಕ್ಕೆ ಒಳಗೊಳಗೇ ನಗು ಬಂತು. ಚೀನಾದ ಇತರ ಸೇವಾಕ್ಷೇತ್ರಗಳಲ್ಲಿರುವಂತೆಯೇ ಇಲ್ಲಿಯೂ ಮಹಿಳೆಯರದ್ದೇ ರಾಜ್ಯಭಾರ. ಎಲ್ಲಿ ನೋಡಿದರೂ ನೀಲಿ ಸಮವಸ್ತ್ರದ ಚುರುಕಾಗಿ ಓಡಾಡುವ ತರುಣಿಯರು. ಜನ ತಮ್ಮ ಕಂಪ್ಯೂಟರ್ ಗಳನ್ನು ತೆರೆದು ಕಚೇರಿ ಕೆಲಸ ಆರಂಭಿಸಿಯೇ ಬಿಟ್ಟರು. ಅನೇಕಾನೇಕ ಹಳ್ಳಿ, ಪಟ್ಟಣ, ನಗರಗಳನ್ನು ಕ್ಷಣಮಾತ್ರದಲ್ಲಿ ಹಿಂದಿಕ್ಕುತ್ತಾ , ಬೀಜಿಂಗ್ ಗೆ ಇನ್ನೂ ೧೦೦ ಕಿ. ಮೀ ಇರುವಂತೆಯೇ ವಿಶಾಲವಾದ ರಸ್ತೆಗಳು, ಗಗನಚುಂಬಿ ಕಟ್ಟಡಗಳು ರಾಜಧಾನಿ ಸಮೀಪಿಸುತ್ತಿರುವುದನ್ನು ಸಾರಿ ಹೇಳಲಾರಂಭಿಸಿದವು.  ರೈಲು ಸರಿಯಾಗಿ ೧೨.೪೦ಕ್ಕೆ ಬೀಜಿಂಗ್ ನಿಲ್ದಾಣವನ್ನು ತಲುಪಿತು.. ಅತ್ಯಂತ ಉಲ್ಲಾಸದಿಂದ ರೈಲಿನಿಂದ ಇಳಿಯುತ್ತಿದ್ದಂತೆಯೇ, ಬೆಂಗಳೂರಿನಿಂದ  ದೆಹಲಿಗೆ ರೈಲಿನಲ್ಲಿ ಒಮ್ಮೆ ನಾನು ನಲವತ್ತು ಘಂಟೆ ಪ್ರಯಾಣಿಸಿ , ಬಳಲಿ ಬೆಂಡಾಗಿ ಇಳಿದದ್ದು ನೆನಪಾಗಿ ಯಾಕೋ ನನಗೆ ಕೊಂಚ ದು:ಖವಾಯಿತು.
ಬೀಜಿಂಗ್ ಎಂದರೆ ಉತ್ತರದ ರಾಜಧಾನಿ ಎಂದರ್ಥ. ಮಿಂಗ್ ಅರಸರಿಂದ ನಿರ್ಮಾಣವಾದ ಇಲ್ಲಿನ ಇಂದಿನ ಜನಸಂಖ್ಯೆ ಎರಡು ಕೋಟಿಗೂ ಅಧಿಕ. ೩ ವಿಮಾನನಿಲ್ದಾಣಗಳೂ, ೬ ವರ್ತುಲ ರಸ್ತೆಗಳೂ ಇರುವ ಬೀಜಿಂಗ್ ಪ್ರಪಂಚದ ಅತಿ ದಟ್ಟನೆಯ ನಗರಗಳಲ್ಲೊಂದು. ಶತಮಾನಗಳ ಚರಿತ್ರೆಯಿರುವ ಇಲ್ಲಿ ಏಳು ವಿಶ್ವಪರಂಪರೆಯ ತಾಣಗಳನ್ನು ಯುನೆಸ್ಕೋ ಗುರುತಿಸಿದೆ. ಅನೇಕ ವರ್ಷಗಳ ಕಾಲ ಜಪಾನೀಯರ ಆಳ್ವಿಕೆಯಲ್ಲಿ ನಲುಗಿದ್ದ ಬೀಜಿಂಗ್ ೧೯೪೯ ರಲ್ಲಿ ಮಾವೋ ರವರು ಕಮ್ಯುನಿಸ್ಟ್ ಸರಕಾರವನ್ನು ಸ್ಥಾಪಿಸಿದ ನಂತರ ರಾಷ್ಟ್ರದ ರಾಜಧಾನಿಯೆಂದು ಘೋಷಿತವಾಯಿತು.ಅತ್ಯಂತ ಸುಸಜ್ಜಿತವಾಗಿ ನಗರವನ್ನು ಕಟ್ಟಲಾಯಿತು. ಎಲ್ಲಿ ನೋಡಿದರೂ ಕಾಣುವ ವಿಶಾಲವಾದ , ನುಣುಪಾದ  ರಸ್ತೆಗಳು, ರಸ್ತೆಬದಿಯ ಸುಂದರವಾದ ಹೂಗಳು, ಗಗನಚುಂಬೀ ಕಟ್ಟಡಗಳು ಅಭಿವೃದ್ಧಿಯನ್ನು ಸಾರಿ ಹೇಳುತ್ತವೆ. ಆದರೆ ನಗರೀಕರಣದ ಭರದಲ್ಲಿ  ಪರಿಸರ ಸಂರಕ್ಷಣೆಯನ್ನು ಕಡೆಗಣಿಸಿದ್ದರ ಫಲವಾಗಿ ವಾಯುಮಾಲಿನ್ಯ  ಬಳುವಳಿಯಾಗಿ ಬಂದಿದೆ. ಗಾಳಿಯಲ್ಲಿರುವ ಧೂಳಿನ ಕಣಗಳು ಬರಿಗಣ್ಣಿಗೆ ಕಾಣುತ್ತವೆ. ಆಗಾಗ್ಗೆ ಇಲ್ಲಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಿ ವಾತಾವರಣವನ್ನು ಶುದ್ಧಗೊಳಿಸಲಾಗುತ್ತದೆಯಂತೆ.
ಚೀನಾದಲ್ಲಿ ಮಾಂಡರಿನ್ ಬಿಟ್ಟು ಬೇರೆ ಭಾಷೆ ನಡೆಯುವುದೇ ಇಲ್ಲ. ಇಲ್ಲವೆಂದರೆ ಇಲ್ಲವೇ ಇಲ್ಲ!!. “ಇಂಗ್ಲೀಷ್ ಬಲ್ಲ ನನಗೆ ಯಾವ ದೇಶವಾದರೇನು” ಎಂಬ ನನ್ನ ಒಣಜಂಭ ಚೀನಾದಲ್ಲಿ ನುಚ್ಚುನೂರಾಯಿತು. ಇಲ್ಲಿ ಇಂಗ್ಲೀಷ್ ಬಲ್ಲ ಮಾರ್ಗದರ್ಶಿಯನ್ನು ಮೊದಲೇ ಗೊತ್ತುಪಡಿಸಿದ್ದೆವು. ಇನ್ನು ಜನರಜೊತೆ  ನಾನು ಮಾತಾಡಬೇಕಾಗಿ ಬಂದಾಗ ನಾನು ಕನ್ನಡದಲ್ಲೇ ಮಾತನಾಡಲಾರಂಭಿಸಿದೆ. ಹೇಗೂ ನನ್ನ ಭಾಷೆ ನನ್ನ ಸಮಾಧಾನಕ್ಕೆ. ಅವರಿಗೆ ನನ್ನ ಕೈಸನ್ನೆ ಮಾತ್ರವೇ ತಿಳಿಯುವುದು. ಹಾಗಿದ್ದಾಗ ಭಾಷೆಯ ಹಂಗೇಕೆ ನನಗೆ? ನಮ್ಮ ಗೈಡ್ ವಾಂಗ್ ಎಂಬ ೨೫ರ ತರುಣಿ. ಆರುತಿಂಗಳು ದಕ್ಷಿಣಚೀನಾದ ತನ್ನೂರಲ್ಲಿ ಟೈಪಿಸ್ಟ್ ಆಗಿ ಕೆಲಸಮಾಡುವ ಇವಳು ಮಾರ್ಚ್ ನಿಂದ ಆಗಸ್ಟ್ ವರೆಗಿನ ಪ್ರವಾಸೀ ಋತುವಿನಲ್ಲಿ ಇಲ್ಲಿ ಗೈಡ್ ಆಗಿ ಒಳ್ಳೆಯ ಸಂಪಾದನೆ ಮಾಡುತ್ತಾಳೆ.

ವಾಂಗ್ ಮೊದಲು ನಮ್ಮನ್ನು ಕಾರಿನಲ್ಲಿ ಸ್ವರ್ಗದೇಗುಲಕ್ಕೆ [ಟೆಂಪಲ್ ಆಫ಼ ಹೆವನ್] ಕರಕೊಂಡು ಬಂದಳು. ೧೫ನೇ ಶತಮಾನದಲ್ಲಿ ಕಟ್ಟಿರುವ ಈ ದೇಗುಲ ೧೮ನೇ ಶತಮಾನದಲ್ಲಿ ಪರದೇಶೀಯರ ಆಕ್ರಮಣಕ್ಕೆ ತುತ್ತಾಗಿ ಹಾಳಾಗಿತ್ತು. ಮುಂದೆ ೧೯೧೮ರಲ್ಲಿ ಪುನರ್ನಿರ್ಮಾಣಗೊಂಡು ಪ್ರವಾಸೀ ತಾಣವಾಯಿತು. ಸುಮಾರು ೩ ಚ. ಕಿ ಮೀ ವಿಸ್ತೀರ್ಣವಿರುವ ಇದು ಮೂರು ಹಂತಗಳಲ್ಲಿದೆ. ಮೊದಲ ಹಂತದ ಪ್ರಾರ್ಥನಾಮಂದಿರ ವಿಶಾಲವಾಗಿದ್ದು ಮಧ್ಯದಲ್ಲೊಂದು ವೇದಿಕೆಯ ಸುತ್ತ  ೯ ವೃತ್ತಾಕಾರದ  ಓಣಿಗಳಿವೆ. ಪ್ರತಿಯೊಂದು ವೃತ್ತದ ನಡುವೆಯೂ ಕೆಲ ಮೆಟ್ಟಲುಗಳಿವೆ. ಕೊನೆಯ ವೃತ್ತದ   ಮಧ್ಯದಲ್ಲಿ ಪ್ರಾರ್ಥನೆ ಸಲ್ಲಿಸುವ ವೇದಿಕೆಯಿದೆ. ಒಳ್ಳೆಯ ಬೆಳೆಗಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮುಂದಿನ ಹಂತ ಸ್ವರ್ಗದ ಗೋಳ. ಈ ಕಟ್ಟಡವೇ ಗೋಳಾಕೃತಿಯಲ್ಲಿದ್ದೆ .ಇದರ ಸುತ್ತಲ ವೃತ್ತದಲ್ಲಿ ’ಪ್ರತಿಧ್ವನಿಯ ಗೋಡ” ಯಿದೆ. ಹಿಂದೆ ಇಲ್ಲಿನ ಪ್ರತಿಧ್ವನಿ ನೂರು ಕಿ. ಮೀ ವರೆಗೂ ಕೇಳುತ್ತಿತ್ತು. ಆದರೆ ಈಗ ಗೋಡೆ ತನ್ನ ವೈಭವವನ್ನು ಕಳಕೊಂಡಿದೆ. ಮೂರನೆಯ ಹಂತವೇ ಸ್ವರ್ಗದ ಹೃದಯ. ಚೀನೀಯರ ಪ್ರಕಾರ ರಾಜನೆಂದರೆ ಸ್ವರ್ಗದೇವತೆಯ ಮಗ. ಅವನು ವರ್ಷಕ್ಕೆರಡು ಇಲ್ಲಿ ಒಳ್ಳೆಯ ಮಳೆ- ಬೆಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದನು. ಇಲ್ಲಿರುವ ಬೃಹತ್ ಕಂಬಗಳ ಪ್ರಾರ್ಥನಾ ಮಂದಿರ ಭವ್ಯವಾಗಿದೆ. ಒಳವೃತ್ತದಲ್ಲಿರುವ ೪ ಕಂಬಗಳು ೪ ಚೀನೀ ಋತುಗಳನ್ನು, ಮಧ್ಯದ ೧೨ ಕಂಬಗಳು ೧೨ ತಿಂಗಳುಗಳನ್ನೂ, ಹೊರಗಣ ೧೨ ಕಂಬಗಳು ದಿನದ ೧೨ ಗಂಟೆಗಳನ್ನೂ ಪ್ರತಿನಿಧಿಸುತ್ತವೆ. ಇದರ ನಡುವೆ ಆಯತಾಕಾರದ ನೀಲಿಬಣ್ಣದ ಬೃಹತ್ ಫಲಕವೇ ಸ್ವರ್ಗ ದೇವತೆ! ಸ್ವರ್ಗದ ಬಣ್ಣವಾದ ನೀಲಿ ಹಾಗೂ ಭೂಮಿಯ ಬಣ್ಣವಾದ ಹಸಿರು ಇಡೀ ದೇಗುಲದಲ್ಲಿ ವ್ಯಾಪಿಸಿದೆ. ಇಂಥ ಭವ್ಯವಾದ ದೇಗುಲ, ದೇವರ ಅಸ್ತಿತ್ವವನ್ನು ನಂಬದ ಕಮ್ಯನಿಸ್ಟ್ ಚೀನಾದಲ್ಲಿ ಕೇವಲ ಒಂದು ಪ್ರವಾಸೀ ಸ್ಥಳ.

ಮರುದಿನ ಬೀಜಿಂಗ್ ಅರಮನೆಯನ್ನು ನೋಡಿದೆವು. ಇದಕ್ಕೆ ’ ಫಾರ್ಬಿಡನ್ ಸಿಟಿ’ ಅಥವಾ ನಿಷೇಧಿತ ನಗರ ಎಂಬ ಪ್ರಸಿದ್ಧ ಅನ್ವರ್ಥನಾಮವಿದೆ. ಇಲ್ಲಿಗೆ ರಾಜರ ಕಾಲದಲ್ಲಿ ಜನಸಾಮಾನ್ಯರಿಗೆ ಪ್ರವೇಶ ನಿಷೇಧಿಸಲಾಗಿತ್ತು. ೧೮೦ ಎಕರೆಯಲ್ಲಿ ಹರಡಿರುವ ೯೮೦ ಕಟ್ಟಡಗಳಿರುವ ಇದೊಂದು ನಗರವೇ ಸರಿ. ೧೪೦೬ರಲ್ಲಿ ನಾನ್ ಜಿಂಗ್ ನಿಂದ ಬೀಜಿಂಗ್ ಗೆ ರಾಜಧಾನಿಯು ಸ್ಥಳಾಂತರಗೊಂಡಾಗ ಇದನ್ನು ಕಟ್ಟಲಾಯಿತು. ಸಂಪೂರ್ಣವಾಗಿ ಮರದಿಂದ ನಿರ್ಮಿತವಾಗಿರುವ ಈ ವಿಶಾಲ ಅರಮನೆಗೆ ೪ ಪ್ರವೇಶದ್ವಾರಗಳಿವೆ. ತಿಯಾನ್ ಆಂಗ್ ಮೆನ್ ವೃತ್ತದಲ್ಲಿ ಚೀನಾದ ಸಂಸತ್ ಭವನ ಇದಕ್ಕೆ ಮುಖಾಮುಖಿಯಾಗಿ ನಿಂತಿದೆ .ಇಡೀ ಅರಮನೆಯನ್ನು ನೋಡಲು ೩-೪ ದಿನಗಳು ಬೇಕು. ಅರಮನೆಯ ತುಂಬ ಅಲ್ಲಲ್ಲಿ ಸ್ಥಾಪಿಸಿರುವ ಹಿತ್ತಾಳೆಯ ದೊಡ್ಡ ಹಂಡೆಗಳು ಇಲ್ಲಿನ ಅಗ್ನಿಶಾಮಕಗಳಂತೆ. ಮರದ ಅರಮನೆಯಾದ ಕಾರಣ ಇದರ ತುಂಬ ನೀರು ತುಂಬಿಸಿ ಇಡುತ್ತಿದ್ದರಂತೆ. ಎಂಥ ದೂರದೃಷ್ಟಿ!. ರಾಜನ ದರ್ಬಾರ್ ನಡೆಯುವ ಸ್ಥಳ, ಮಂತ್ರಿವರ್ಗದ ವಾಸದ ಮನೆಗಳು, ರಾಣೀವಾಸ, ಸೈನ್ಯದ ವಿಭಾಗ ಮುಂತಾದವು ಅಚ್ಚರಿ ಮೂಡಿಸುತ್ತವೆ. ನಮ್ಮಲ್ಲಿರುವಂತೆ ಅಭೂತಪೂರ್ವ ಶಿಲ್ಪಕಲೆ ಕಾಣದಿದ್ದರೂ ವಿಶಾಲತೆ ಹಾಗೂ ಅಚ್ಚುಕಟ್ಟುತನವನ್ನು ನೋಡಿ ಭಲೇ ಎನ್ನಬೇಕೆನಿಸುತ್ತದೆ. ಅರಮನೆಯ ವನ್ತುಸಂಗ್ರಹಾಲಯದಲ್ಲಿ ೧೦ ಲಕ್ಷಕ್ಕಿಂತಲೂ ಅಧಿಕ ವಸ್ತುಗಳನ್ನು ಒಪ್ಪವಾಗಿ ಜೋಡಿಸಿದ್ದಾರೆ. ಆಗಿನ ಚಿತ್ರಗಳು, ಪಿಂಗಾಣಿವಸ್ತುಗಳು, ಚಿನ್ನ –ಬೆಳ್ಳಿಯ ಆಭರಣಗಳು , ಹವಳದ ಪಾತ್ರೆಗಳು ಇತ್ಯಾದಿಗಳಿವೆ. ಚೀನೀಯರಿಗೆ ಜೇಡ್ ಎಂಬೋ ಹಸುರು ಕಲ್ಲು ಅಮೂಲ್ಯವಾದದ್ದು. ಅದರಿಂದ ಮಾಡಿದ ತರಹೇವಾರಿ ವಸ್ತುಗಳಿವೆ.

ಹಾಗೇ ಬೀಜಿಂಗ್ ಬೀದಿಗಳಲ್ಲಿ ಸುತ್ತಾಡಿದೆವು. ವಾಯುಮಾಲಿನ್ಯದಿಂದ ಅಕ್ಷರಶ: ನರಳುವ ಈ ನಗರದಲ್ಲಿ ಸೈಕಲ್ ಗಳಿಗೆ ಇನ್ನಿಲ್ಲದ ಮಹತ್ತ್ವ. ರಸ್ತೆಗಳಲ್ಲಿ ಸೈಕಲ್ ಸವಾರರಿಗಾಗೇ ವಿಶೇಷಪಥಗಳಿವೆ. ರಸ್ತೆ ಬದಿಗಳಲ್ಲೂ ಸಾಲಾಗಿ ಸೈಕಲ್ ಗಳನ್ನು ನಿಲ್ಲಿಸಿದ್ದಾರೆ. ಸಂಪೂರ್ಣ ಉಚಿತವಾಗಿ ಯಾರು ಬೇಕಾದರೂ ಬಳಸಬಹುದು. ತಮ್ಮ ಕೆಲಸ ಮುಗಿದ ನಂತರ ಸಮೀಪದ ರಸ್ತೆಯಲ್ಲಿ ಬಿಟ್ಟರಾಯಿತು. ಚೀನೀಯರು ಮನುಷ್ಯನೊಬ್ಬನನ್ನು ಬಿಟ್ಟು ಪ್ರಕೃತಿಯ ಎಲ್ಲ ಜೀವಿಗಳನ್ನು ತಿನ್ನುತ್ತಾರೆ.  ಬೆಕ್ಕಿನ ಬೋಂಡಾಗೆ ಜಿರಲೆಯ ಚಟ್ನಿ. ಕರಿದ ಕಪ್ಪೆಗಳನ್ನು-  ಹುರಿದ ಏಡಿಗಳನ್ನು ಉದ್ದದ ಕಡ್ಡಿಗೆ ಸಿಕ್ಕಿಸಿ ಇಡುತ್ತಾರೆ. ಹಾವಿನ ದೇಹವೇ ರುಚಿಯಾದ ಸಾಂಡ್ ವಿಚ್! ಸಮುದ್ರದ ಎಲ್ಲಾ ಜಲಚರಗಳು ಅವರ ಪ್ರಿಯವಾದ ತಿಂಡಿಗಳು. ಹಕ್ಕಿಗಳನ್ನು ಮಾತ್ರವಲ್ಲ ಅವುಗಳ ಗೂಡುಗಳನ್ನೂ ಪಲ್ಯ ಮಾಡಿ ಮುಕ್ಕುವ ಭಂಡರಿವರು! ದಿನವಿಡೀ ಸುತ್ತಾಡಿ ಹಸಿದ ನಮಗೆ ಎಲ್ಲೆಲ್ಲೂ ಆಹಾರ ಕಾಣುತ್ತಿತ್ತು ಆದರೆ ಶುದ್ಧ ಸಸ್ಯಾಹಾರಿಗಳಾದ ನಮಗೆ ಏನೂ ಸೇರದು! ನಮ್ಮ ಪುಣ್ಯಕ್ಕೆ ಹಣ್ಣುಗಳ ಅದ್ಭುತ ಲೋಕವೇ ಇಲ್ಲಿತ್ತು. ನಾವು ಕಂಡರಿಯದ ಅನೇಕ ಸಿಹಿಯಾದ ಹಣ್ಣುಗಳಿಂದಲೇ ಹೊಟ್ಟೆ ತುಂಬಿಸಿಕೊಂಡೆವು. ಅಲ್ಲದೇ ಎಲ್ಲೆಲ್ಲೂ ಮೊಸರು ಸಿಗುತ್ತದೆ. ಬಿಳಿಪಿಂಗಾಣಿಯ ಪುಟ್ಟ ಮಡಿಕೆಯಲ್ಲಿ ಸಿಹಿ ಮೊಸರು. ಜೊತೆಗೆ ನಾವು ಒಯ್ದಿದ್ದ ಅಂಟಿನುಂಡೆ, ಗೊಜ್ಜವಲಕ್ಕಿ, ಕಾಕ್ರಾ, ಚಕ್ಕುಲಿ, ರವೆಉಂಡೆಗಳೇ ನಮ್ಮ ಆಪದ್ಬಾಂಧವರು.

ನಂತರ ನಾವು ನೋಡಿದ್ದು ಪ್ರಪಂಚದ ಅದ್ಭುತಗಳಲ್ಲೊಂದಾದ ಮಹಾ ಗೋಡೆ. ಚೀನಾದ ಉತ್ತರದ ಗಡಿಯುದ್ದಕ್ಕೂ ಹರಡಿರುವ ಇದು ೨೧, ೧೯೬ ಕಿ.ಮೀ ಉದ್ದವಿದೆ.ಶತ್ರುಗಳಿಂದ ರಕ್ಷಣೆಗಾಗಿ ೨ನೇ ಶತಮಾನದಿಂದಲೇ ಗೋಡೆಯ ನಿರ್ಮಾಣ ಆರಂಭವಾಯಿತು. ಕೈದಿಗಳು ಹಾಗೂ ಸೈನಿಕರ ಕಠಿಣ ದುಡಿಮೆಯ ಫಲವಿದು. ಪ್ರತಿರಾಜನೂ ತನ್ನ ಪಾಲನ್ನು ಇದಕ್ಕೆ ಸೇರಿಸುತ್ತ ಹೋಗಿದ್ದಾನೆ. ಇಂದು ಅನೇಕ ಕಡೆ ನಾಶವಾಗಿದ್ದರೂ ಹೆಚ್ಚಿನ ಭಾಗವನ್ನು ಸರಕಾರ ಸುಸ್ಥಿತಿಯಲ್ಲಿರಿಸಿದೆ. ಪರ್ವತಗಳ ಮೇಲೆ ಸುಮಾರು೯ಮೀ ಅಗಲ, ೮ ಮೀ ಎತ್ತರದ ಗೋಡೆಯ ಮೇಲೆ ನಡೆಯುತ್ತಿದ್ದರೆ ನಿಜವಾಗಿಯೂ ಅಚ್ಚರಿಯ ಜೊತೆಗೆ ಸಂತೋಷವಾಗುತ್ತದೆ.ಪರ್ವತದ ಆಕಾರಕ್ಕನುಗುಣವಾಗಿ ಗೋಡೆ ಕೆಲವೆಡೆ ಕಡಿದಾಗಿದೆ, ಕೆಲವೆಡೆ ಇಳಿಜಾರು, ಕೆಲವೊಮ್ಮೆ ಸಪಾಟು. ಇಲ್ಲಿನ ಪರಿಸರವನ್ನು ಅತ್ಯಂತ ಸ್ಚಚ್ಛವಾಗಿರಿಸಿದ್ದಾರೆ. ಅಲ್ಲಲ್ಲಿ ಕಸದ ತೊಟ್ಟಿಗಳು, ಶೌಚಾಲಯಗಳನ್ನು ಕಟ್ಟಿಸಿ ಪ್ರವಾಸಿಗಳಿಗೆ ಅನುಕೂಲತೆ ಒದಗಿಸಿದ್ದಾರೆ. ಹಾಂ... ನೆನಪಿಡಿ ಗೋಡೆಯನ್ನು ಒಂದು ಕಡೆಯಿಂದ ಹತ್ತಿ ನಡೆದು ಸುಸ್ತಾದಾಗ ಇನ್ನೊಂದು ಕಡೆ ವಾಪಸ್ ಬರುವ ಅವಕಾಶ ಇಲ್ಲ. ಎಷ್ಟು ದೂರ ಮುಂದೆ ನಡೆಯುತ್ತೇವೋ ಅಷ್ಟೇ ತಿರುಗಿ ನಡೆದು ಹೊರಟಲ್ಲಿಗೇ ವಾಪಸ್ ಬರಬೇಕು. ಆದ್ದರಿಂದ ನಮ್ಮ ಶಕ್ತ್ಯಾನುಸಾರ ಮೊದಲೇ ಇಷ್ಟು ಕಿ. ಮಿ ನಡೆಯುವುದೆಂದು ನಿರ್ಧರಿಸಬೇಕು. ಇದು ಚೀನೀಯರಿಗೊಂದು ಹೆಮ್ಮೆಯ ಪ್ರವಾಸೀ ತಾಣ.ಸಂಸಾರಿಗರು, ಕಾಲೇಜು ತರುಣ-ತರುಣಿಯರ ಜೊತೆ  ಅನೇಕರು ತಮ್ಮ ವೃದ್ಧ ತಂದೆತಾಯಿಯರ ಕೈಹಿಡಿದು ನಡೆಯಲು ಸಹಾಯ ಮಾಡುತ್ತಿದ್ದರೆ ಕೆಲವರು ಹೆಗಲ ಮೇಲೆ ಹೊತ್ತು ತಂದಿದ್ದರು!

ನಂತರ ’ಹುಟಾಂಗ್ ’ ಗಳೆಂಬ ವಠಾರಗಳಿಗೆ ಭೇಟಿಯಿತ್ತೆವು. ನಮ್ಮ ವಠಾರದ ಮನೆಗಳಂತೆಯೇ ಒಂದಕ್ಕೊಂದು ಅಂಟಿಕೊಂಡ ಮನೆಗಳಿವು. ಸಾವಿರಾರು ಬಡವರು ಇಲ್ಲಿ ವಾಸಿಸುತ್ತಾರೆ. ಒಂದು ಕಾಲದಲ್ಲಿ ಜನರೆಲ್ಲಾ ಈ ವಠಾರಗಳಲ್ಲೇ ವಾಸಿಸುತ್ತಿದ್ದರಂತೆ. ಆದರೆ ಈಗಿನ ಚೀನೀ ಆಡಳಿತದಲ್ಲಿ ಭೂಮಿ ಸರಕಾರದ ಸೊತ್ತು . ಆದ್ದರಿಂದ ಹುಟಾಂಗ್ ಗಳನ್ನು ನೆಲಸಮ ಮಾಡಿ ಸರಕಾರವೇ ಜನರಿಗೆ ಮನೆಗಳನ್ನು ಒದಗಿಸಿದ್ದರೂ ಪರಂಪರೆಯ ನೆನಪಾಗಿ ಕೆಲವನ್ನು ಉಳಿಸಿಕೊಂಡಿದ್ದಾರೆ. ಇಲ್ಲೂ ಸ್ವಚ್ಛತೆ ಎದ್ದು ಕಾಣುತ್ತಿತ್ತು.
ಹಾಗೆಯೇ ೨೦೦೮ರ ಒಲಂಪಿಕ್ ’ಹಕ್ಕಿ ಗೂಡು’ ಎಂಬ ಕ್ರೀಡಾಗ್ರಾಮಕ್ಕೂ ಒಂದು ಸುತ್ತು ಹಾಕಿ ಬಂದೆವು.ಹಕ್ಕಿಗಳು ತಮ್ಮ ಲಾಲಾರಸ ಹಾಗೂ ಕಡ್ಡಿಗಳಿಂದ ನಿರ್ಮಿಸುವ ಹಕ್ಕಿ ಗೂಡು ಚೀನೀ ವೈದ್ಯಪದ್ಧತಿಯಲ್ಲಿ ಅನೇಕ ರೋಗಗಳಿಗೆ ಔಷಧಿ. ಅದರ ಆಕಾರದಲ್ಲೇ ನಿರ್ಮಿತವಾದ ಈ ಕ್ರೀಡಾಂಗಣ ಒಂದು ವಿಸ್ಮಯವೇ ಸರಿ. ನಮ್ಮ ಬಳ್ಳಾರಿಯ ಅದಿರಿನಲ್ಲೇ ಇದನ್ನು ನಿರ್ಮಿಸಿದ್ದಾರೆಂದು ಎಲ್ಲೋ ಕೇಳಿದ್ದ ನನಗೆ ಅದನ್ನು ನೋಡುವಾಗ ಹೆಮ್ಮೆ ಹಾಗೂ ಸಂಕಟವಾಯಿತು.

ಮುಂದೆ ರಾಣಿಯ ಬೇಸಗೆ ಅರಮನೆಯೆಂಬ ಇನ್ನೊಂದು ವಿಸ್ಮಯವನ್ನುನೋಡಿದೆವು. ೧೭೪೯ರಲ್ಲಿ ಕಿನ್ ಲಾಂಗ್ ರಾಜನು ತನ್ನ ತಾಯಿಯ ೬೦ನೇ ಹುಟ್ಟುಹಬ್ಬದ ನೆನಪಿಗಾಗಿ ಕಟ್ಟಿಸಿದ  ಅರಮನೆಯಿದು. ಇಲ್ಲಿರುವ ಮಣ್ಣನ್ನು ಅಗೆದು  ೨ ಚದರಕಿ. ಮೀ ವಿಸ್ತೀರ್ಣದ ಸರೋವರವನ್ನು ನಿರ್ಮಿಸಿ, ಆ ಮಣ್ಣನ್ನು ಪಕ್ಕದಲ್ಲೇ ಗುಡ್ಡೆ ಹಾಕಿ ಪರ್ವತವೊಂದನ್ನು ಸೃಷ್ಟಿಸಿದನು. ಈ ಸರೋವರದ ಸುತ್ತ ೭೦೦ ಮೀ ಉದ್ದದ  ಪಥವಿದೆ. ಇದು  ಅತಿಉದ್ದದ ಮಾನವ ನಿರ್ಮಿತಕಾಲುದಾರಿಯೆಂದು  ಗಿನ್ನೆಸ್ ದಾಖಲೆಯನ್ನೇ ನಿರ್ಮಿಸಿದೆ. ಈ ಸರೋವರದಲ್ಲಿರುವ ಅಮೃತಶಿಲೆಯ ಬೃಹತ್ ದೋಣಿ ಮನೋಹರವಾಗಿದೆ. ಅರಮನೆಯ ಉದ್ಯಾನವಂತೂ ಕಣ್ಣಿಗೆ ಹಬ್ಬವೇ ಸರಿ.

ಬಹುಶ: ಅಸಾಧ್ಯವೆನಿಸುವ ಕಾರ್ಯಗಳನ್ನು ಸಾಧ್ಯವಾಗಿಸುವಲ್ಲಿ ಚೀನಾವನ್ನು ಮೀರಿಸುವುದು ಕಷ್ಟಸಾಧ್ಯ. ಮಾನವಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲ ರಂಗದಲ್ಲೂ ಮೊದಲಿಗರಾಗಿ ನಿಂತಿರುವ ಚೀನೀಯರಿಂದ ನಮ್ಮ ಸರಕಾರಗಳು  ಕಲಿಯಬೇಕಾದ್ದು ಬಹಳಷ್ಟಿದೆ. ಅಲ್ಲಿನ ಜನರ ಸೌಜನ್ಯಶೀಲತೆ, ಪ್ರವಾಸಿಸ್ನೇಹೀ ಮನೋಭಾವ ಕೂಡಾ ಮೆಚ್ಚತಕ್ಕದ್ದೇ. ನಮ್ಮ ದೇಶದ ಭಿನ್ನತೆಗಳನ್ನು, ನಂಬಿಕೆಗಳನ್ನು ಉಳಿಸಿಕೊಂಡು ಪ್ರಜಾಪ್ರಭುತ್ವ ಮಾದರಿಯಲ್ಲಿ ನಾವೆಂದಾದರೂ ಅವರನ್ನು ಸರಿಗಟ್ಟುವುದು ಸಾಧ್ಯವೇ ಎಂಬ ಸಂಶಯ ಮಾತ್ರ ಪ್ರವಾಸದ ಕೊನೆಯಲ್ಲಿ ನನ್ನಲ್ಲುಳಿಯಿತು.

ಇರುವುದೆಲ್ಲವ‌ ಬಿಟ್ಟು ಇರದುದರೆಡೆ ತುಡಿಯಲದುವೆ ಜೀವನವು....

 ನನ್ನ ದೇಶದಲ್ಲಿ ಸಂಸ್ಕೃತ ಶ್ಲೋಕಗಳೊಂದಿಗೆ  ಯಾರಾದರೂ ಸ್ವಾಗತಿಸಿದ್ದರೆ ದೊಡ್ಡ ಕೋಲಾಹಲವೇ ಸೃಷ್ಟಿಯಾಗುತ್ತದೆ.”
ನರೇಂದ್ರ ಮೋದಿಯವರು ಐರ್ಲೆಂಡಿನ ಮಕ್ಕಳ ಸಂಸ್ಕೃತ ಸ್ವಾಗತವನ್ನು ಆನಂದಿಸಿ ಉದ್ಗರಿಸಿದ ಮಾತು ನನ್ನನ್ನು ಚಿಂತನೆಗೆ ಹಚ್ಚಿತು. ಏನಪ್ಪಾ… ಯಾರೋ ಭಗವಂತನ ಕಡೆಯವರಾ? ಅಂತ ಹುಬ್ಬೇರಿಸಬೇಡಿ. ನಾನೊಬ್ಬಳು ಸಂಸ್ಕೃತ ಶಿಕ್ಷಕಿ, ಮಿಗಿಲಾಗಿ ಸಂಸ್ಕೃತಪ್ರೇಮಿ! ನಮ್ಮ ದೇಶದಲ್ಲಿ ಏದುಸಿರು ಬಿಡುತ್ತಾ ನಡೆಯುವ ಭಾಷೆಗೆ ಪ್ರಪಂಚದ ಇನ್ನೆಲ್ಲೋ ಮೂಲೆಯಲ್ಲಿ ಪಲ್ಲಕ್ಕಿ ಸೇವೆ. ತನ್ನ ಜನ್ಮಭೂಮಿಯಲ್ಲಿ ಅದರ ಹೆಸರೆತ್ತಲೂ ಉದಾಸೀನ . ಅಲ್ಲೆಲ್ಲೋ  ಅದಕ್ಕೆ  ರಾಜಸನ್ಮಾನ! ಎಂದೆನಿಸಿತು ಅಷ್ಟೇ!
ನಾನು ಕೆಲಸಮಾಡುವ ಶಿಕ್ಷಣಸಂಸ್ಥೆಯಲ್ಲಿ ಮಕ್ಕಳಿಗೆ ಐದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ  ತಮ್ಮ ಆಯ್ಕೆಯ ಭಾಷೆಯೊಂದನ್ನು ದ್ವಿತೀಯ/ತೃತೀಯ ಭಾಷೆಯಾಗಿ ಕಲಿಯುವ ಅವಕಾಶವಿದೆ. ಇದಕ್ಕಾಗಿ ನಾಲ್ಕನೇ ತರಗತಿಯ ಮಕ್ಕಳ ಪಾಲಕರಿಗೆ ವರ್ಷದ ಕೊನೆಯಲ್ಲಿ ನಮ್ಮಲ್ಲಿ ಕಲಿಸಲಾಗುವ ವಿವಿಧ ಭಾಷೆಗಳ ಬಗ್ಗೆ ಮಾಹಿತಿಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ನಮ್ಮಲ್ಲಿ  ಹಿಂದಿ, ಕನ್ನಡ, ಸಂಸ್ಕೃತ, ಫ಼ರೆಂಚ್ , ಜರ್ಮನ್, ಸ್ಪಾನಿಶ್, ಜಪಾನಿಸ್ ಭಾಷೆಗಳಲ್ಲಿ ಶಿಕ್ಷಣ ಲಭ್ಯವಿದೆ. ಅಂದು ಸಹಜವಾಗಿಯೇ ಭಾಷಾಶಿಕ್ಷಕರು ತಮ್ಮ ಸರಕನ್ನು ಉತ್ಸಾಹದಿಂದ  ಪ್ರಸ್ತುತಪಡಿಸುತ್ತಾರೆ. ಹಿಂದಿ , ಕನ್ನಡಗಳಿಗೆ ರಾಷ್ಟ್ರಭಾಷೆ- ರಾಜ್ಯಭಾಷೆ ಯೆಂಬ ಶ್ರೀರಕ್ಷೆಯಿದೆ. ವಿದೇಶೀ ಭಾಷೆಗಳಿಗೆ ತಮ್ಮದೇ ಆದ ಪ್ರಭಾವಳಿಯಿದೆ. ಆ ಭಾಷೆಯನ್ನು ಕಲಿತರೆ ಮಗುವಿಗೆ ಭವಿಷ್ಯದಲ್ಲಿ ಒದಗಿಬರಬಹುದಾದ ಉದ್ಯೋಗಾವಕಾಶಗಳು, ಸಾಮಾಜಿಕ ಸ್ಥಾನಮಾನಗಳು …. ಓಹ್…. ಒಂದೇ .. ಎರಡೇ… ಅನೇಕಾನೇಕ ಆಮಿಷಗಳಿವೆ. ಆ ಶುಭದಿನದಂದು ನಮ್ಮ ಬಡಪಾಯಿ ಸಂಸ್ಕೃತ ’ಸ್ಕೋರಿಂಗ್ ಸಬ್ಜೆಕ್ಟ್’ ಎಂಬ  ಮಸುಕಾದ ಕಿರೀಟದೊಂದಿಗೆ ಸಭೆಯಲ್ಲಿ ವಿರಾಜಮಾನವಾಗುತ್ತದೆ. ಆದರೆ ಅಲ್ಲಿ ನೆರೆಯುವ ಸುಶಿಕ್ಷಿತ, ವಿದೇಶಗಳ ರುಚಿ ಉಂಡು ಬಂದ , ಉಚ್ಚ ವರ್ಗದ ಪಾಲಕರು ಅದ್ರಿಂದ ಏನ್ರೀ ಯೂಸು?…. ಯಾರ್ರೀ ಮಾತಾಡ್ತಾರೆ ಈಗಿನ ಕಾಲದಲ್ಲಿ? …. ಜಾಬ್ ಅಪರ್ಚನಿಟೀಸ್  ಏನಿದೆ ಅದರಲ್ಲಿ?….. ದುಡ್ಡು?….. ಹೆಸರು?….. ಎಂಬ ತರ್ಕಬದ್ಧ ಪ್ರಶ್ನೆಗಳ ಚೂಪು ಬಾಣಗಳನ್ನು ಪ್ರಯೋಗಿಸಲಾರಂಭಿಸಿದೊಡನೆಯೇ  ನಡುಗುವ ಸರದಿ ಸಂಸ್ಕೃತದ್ದು.  ವೈಜ್ಞಾನಿಕವಾದ ವ್ಯಾಕರಣ, ಅಪಾರ ಶಬ್ದಸಂಪತ್ತು, ಮಗುವಿನ ಉಚ್ಚಾರ ಶುದ್ಧೀಕರಣಗೊಳಿಸುವ ಅದ್ಭುತಶಕ್ತಿ, ಮಗುವಿನಲ್ಲಿ ಸಾತ್ವಿಕಗುಣಗಳನ್ನು ಉದ್ದೀಪನಗೊಳಿಸುವ ನಂದಾದೀಪದಂತಿರುವ ಈ ಸಂಸ್ಕೃತಸರಸ್ವತಿ  ಅಂದು ಲಕ್ಷ್ಮೀಕಟಾಕ್ಷವಿಲ್ಲದೇ ತತ್ತರಿಸುವುದನ್ನು ಕಂಡಾಗ ನನಗೆ ಸಂಕಟವಾಗುತ್ತದೆ. ಅಯ್ಯೋ…ಒಂದು ಕಡೆ ಅಕ್ಷಯನಿಧಿ- ಇನ್ನೊದೆಡೆ ಸಂಸ್ಕಾರದಾರಿದ್ರ್ಯ!! ಬಹುಶ: ಇದೇ ಸಮಾಜದ ನೀತಿ. ಹಿತ್ತಲಗಿಡ ಮದ್ದಲ್ಲ……
ಹಾಗೆ ನೋಡಿದರೆ ಇದು ಉದ್ದನೆಯ ಪಟ್ಟಿ. ನಮ್ಮ ಆಹಾರಕ್ಕೆ ವಿದೇಶಗಳಲ್ಲಿ ಎಲ್ಲಿಲ್ಲದ ಬೇಡಿಕೆ- ನಮಗೆ ಕಾರ್ನ್ಫ಼ಲೇಕ್, ಬ್ರೆಡ್ ಸಾಂಡ್ವಿಚ್ ಇಷ್ಟ…. , ಯೋಗ- ಆಯುರ್ವೇದಕ್ಕೆ ವಿಶ್ವಮಾನ್ಯತೆ- ನಮಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೇ ಬೇಕು, ನಮ್ಮ ಮನೆಯಲ್ಲಿ ಇಂಗ್ಲೀಷ್ ಮಾತಾಡಿದರೆ ಒಂಥರಾ ನೆಮ್ಮದಿ….. ನಮ್ಮ ಕೌಟುಂಬಿಕ ವ್ಯವಸ್ಥೆಯನ್ನು ಮುರಿಯುವುದರಲ್ಲಿ ಎಲ್ಲಿಲ್ಲದ ಆಸಕ್ತಿ….
ಇವತ್ತು ಬೆಳಗ್ಗೆ  ಹೀಗೆ ಯೋಚಿಸುತ್ತಾ ಶಾಲೆಗೆ ಹೊರಟೆ.  ಗೇಟು ತೆಗೆದು ಹೊರಗೆ ಬಂದರೆ ಮನುವಿನ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಕೆಳಗಿರುವ ನಮ್ಮ ಎದುರುಗಡೆಯ ಮನೆಯಿಂದ ವೇದಮಂತ್ರಗಳು ಕಿವಿಗಪ್ಪಳಿಸಲಾರಂಭಿಸಿದವು. ಸೂರ್ಯೋದಯಕ್ಕೂ ಮುನ್ನವೇ ಎದ್ದು ಸ್ನಾನ- ಪೂಜೆಗಳನ್ನು ಮುಗಿಸಿದ್ದ ದಂಪತಿ ನನ್ನನ್ನು ನೋಡಿ ಮುಗುಳ್ನಕ್ಕರು. ಯಾಕೋ ಏನೋ…           “ ಸಂಧ್ಯಾವಂದನೆಯಿಂದ ನಮ್ಮ  ದೇಹಕ್ಕೆ ಲಾಭಗಳಿವೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ” ಎಂದು ನನ್ನೊಡನೆ ವಾದಕ್ಕಿಳಿಯುವ ನನ್ನ ಮಗನ ನೆನಪು ಮನಸ್ಸಿನಲ್ಲಿ ಹಾದುಹೋಯಿತು.
ಅದಕ್ಕೇ ಅಡಿಗರು ಹೇಳಿದ್ದು- ಇರುವುದೆಲ್ಲವ ಬಿಟ್ಟು ಇರದುದರೆಡೆ ತುಡಿಯಲದುವೆ ಜೀವನವು…

ನಿನ್ನ ಕಣ್ಣ ನೋಟದಲ್ಲಿ....

ಇಂಗ್ಲಿಷ್ ಮೂಲ :  THE  EYES  HAVE  IT  [ ರಸ್ಕಿನ್ ಬಾಂಡ್  ]

ರೈಲಿನ ಆ ನಿರ್ಜನ ಬೋಗಿಯಲ್ಲಿ ಕುಳಿತು ಆಕಳಿಸುತ್ತಿದ್ದ ನನಗೆ ಸಕಲೇಶಪುರದಲ್ಲಿ ಬೋಗಿಯೊಳಗೆ ಅವಳ ದನಿ ಕೇಳಿದಾಗ ತುಂಬಾ ಖುಷಿಯಾಯಿತು. ಜೊತೆಗಿದ್ದವರು  ಅವಳ ತಂದೆತಾಯಿ ಇರಬೇಕು ಅಂತ ಅವರ ಆತಂಕಭರಿತ ಮಾತುಗಳಿಂದಲೇ ತಿಳಿಯಿತು. ಅವಳ ತಾಯಿಯಂತೂ ಮಗಳಿಗೆ ಸೂಟ್ ಕೇಸ್ ಎಲ್ಲಿಡಬೇಕು.... ಕೈಗಳನ್ನು ಕಿಟಿಕಿಯಿಂದ ಹೊರಗಡೆ ಹಾಕಬಾರದು....  ದಾರಿ ಮಧ್ಯ  ಏನೂ ತಿನ್ನಬಾರದು .....ಅವರಿವರ ಜೊತೆ ಮಾತಾನಾಡಬಾರದು.... ಹೀಗೆ ಹೇಳ್ತಾನೇ ಇದ್ದಳು. ಅಂತೂ ಕೊನೆಗೆ ರೈಲು ಚಲಿಸುತ್ತಿದ್ದಂತೆಯೇ  ಅವಳನ್ನು ಬೀಳ್ಕೊಟ್ಟು ಅವರು ಇಳಿದುಹೋದರು. ಅವಳ ಧ್ವನಿಯೇ ಇಷ್ಟು ಇಂಪು . ಅವಳ ರೂಪ  ಹೇಗಿರಬಹುದು ಎಂಬ ಕುತೂಹಲ ನನಗೆ . ಆದರೆ ನಾನೋ ಕುರುಡ. ಬೆಳಕು – ಕತ್ತಲೆಯ ಅಲ್ಪಜ್ಞಾನವನ್ನು ಬಿಟ್ಟರೆ ನನಗೇನೂ ತಿಳಿಯದು. ಅವಳ ಚಪ್ಪಲಿಗಳು ಚೆನ್ನಾಗಿವೆ ಅಂತ ಶಬ್ದದಿಂದಲೇ ತಿಳಿಯಿತು. ಅವಳ ಕಾಲ್ಗೆಜ್ಜೆ ಮಧುರವಾಗಿ ಸದ್ದು ಮಾಡುತ್ತಿತ್ತು. ಮುಡಿದ ಮಲ್ಲಿಗೆಹೂವಿನ ಪರಿಮಳದಿಂದ ಹಾಯ್... ಅನಿಸಲಾರಂಭಿಸಿತು.

ನನಗೆ ಇನ್ನು ತಡೆದುಕೊಳ್ಳಲಾಗಲಿಲ್ಲ. ಅಂತೂ ಧೈರ್ಯ ವಹಿಸಿ “ ನೀವು ಮೈಸೂರಿಗೆ ಹೋಗ್ತಾ ಇದೀರಾ” ಅಂತ ಕೇಳೇಬಿಟ್ಟೆ. “ ಓಹ್... ನೀವು ಇಲ್ಲಿ ಕುಳಿತಿದ್ದು ನಂಗೆ ಗೊತ್ತೇ ಆಗಲಿಲ್ಲ ನೋಡಿ” ಎಂದಳು. ಯಾಕೋ ಅವಳ ಧ್ವನಿ ನಡುಗಿದಂತೆ ಅನಿಸಿತು. ಆದರೂ ಅವಳು ಹಾಗೆಂದಿದ್ದರಿಂದ ನನಗೇನೂ ಬೇಜಾರಾಗಲಿಲ್ಲ. ಅಲ್ಲಾ... ಏನೂ ಕಾಣದವರಿಗೆ  ನೋಡಲು ಏನೂ ಇರುವುದಿಲ್ಲ. ಅದಕ್ಕೇ ಎಲ್ಲವೂ ಅನುಭವಕ್ಕೆ ಬರುತ್ತದೆ . ಆದರೆ ಕಣ್ಣು ಕಾಣುವವರಿಗೆ ನೋಡಲು ಬೇಕಾದಷ್ಟು ವಿಷಯಗಳಿರುತ್ತವೆ . ಅದಕ್ಕೇ ಕಣ್ಣ ಮುಂದಿರುವುದೆಲ್ಲ ಅವರಿಗೆ ಕಾಣಲ್ಲ....

 “ ನಾನು ಇಲ್ಲೇ ಪಾಂಡವಪುರದಲ್ಲಿ ಇಳೀಬೇಕು. ಚಿಕ್ಕಮ್ಮ ಬರ್ತಾರೆ  ಕರಕೊಂಡು ಹೋಗೋಕೆ” ಅಂದಳು.” ಸದ್ಯ ನಾನು ಕುರುಡ ಅಂತ ಅವಳಿಗೆ ತಿಳೀಲಿಲ್ಲ. ನಾನಂತೂ ಇನ್ನು ಸುಮ್ನೆ ಇರ್ತೀನಪ್ಪಾ. ಸುಮ್ನೆ ಯಾಕೆ ಏನೇನೋ ಮಾತು” ಅಂದುಕೊಂಡು ಸುಮ್ಮನಾದೆ. “ ನೀವೆಲ್ಲಿಗೆ ಹೊರಟಿದ್ದೀರಿ” ಎಂದಳವಳು. ನಾನು ಸುಮ್ನೆ ಇರಬೇಕು ಅಂದುಕೊಂಡಿದ್ದು ಮರೆತೇ ಹೋಯ್ತು. “ ನಾನು ಮೈಸೂರಲ್ಲಿ ಇಳಿದು ಊಟಿಗೆ ಹೋಗಬೇಕು” ಅಂದೆ. ಅವಳು “ ಓಹ್... ಎಂಥಾ ಸುಂದರವಾದ ಜಾಗ ಅಲ್ವೇ ಅದು. ನನಗೂ ಅಲ್ಲಿಗೆ ಹೋಗಬೇಕು ಅನ್ನೋ ಆಸೆ. ಅಲ್ಲಿನ ಹೂಗಳು, ಪರ್ವತಗಳು ಎಂಥಾ ಚಂದ” ಅಂದಳು. ನಾನು ತಕ್ಷಣ “ ಹೌದು.. ಹೌದು.. ಅಲ್ಲಿಗೆ ಜೂನ್ ನಲ್ಲಿ ಹೋದರೆ ಒಳ್ಳೆಯದು. ಟೂರಿಸ್ಟ್ ಗಳೂ ಜಾಸ್ತಿ ಇರಲ್ಲ. ದಾರಿ ತುಂಬ ಬಣ್ಣ ಬಣ್ಣದ ಹೂಗಳು, ಆಗಾಗ ಮಳೆ ... ಹಾಗೇ ಬೆಂಕಿ ಕಾಯಿಸ್ಕೊಂಡು ತಾಜಾ ಕಾಫಿ ಕುಡೀತಾ ಇದ್ರೆ ಎಷ್ಟು ಮಜಾ ಗೊತ್ತಾ” ಅಂದೆ . ಅವಳು ಏನೂ ಹೇಳಲಿಲ್ಲ.

ನಾನು  ಯಾವೂರಪ್ಪ ಇದು ಅಂತ ನನ್ಗೆ ನಾನೇ ಹೇಳ್ಕೊಂಡ್ರೆ ಅವಳು “ ನನ್ನನ್ನೇನ್ರೀ ಕೇಳೋದು ನೀವು? ನೀವೇ ಹೊರಗಡೆ ನೋಡಿ .... ಗೊತ್ತಾಗತ್ತೆ” ಅಂದಳು. ಅಬ್ಬಾ ಸದ್ಯ ... ಅವಳಿಗೆ ನನ್ನ ವಿಷಯ ಗೊತ್ತಾಗಲಿಲ್ಲ ಅಂತ ಸಮಾಧಾನವಾಯ್ತು. ಹಾಗೇ ಕೈ ತಡಕಾಡಿ ಕಿಟಿಕಿ ಹತ್ರ ಮುಖ ತಂದೆ. ಏನೂ ಕಾಣದಿದ್ರೂ  ತಂಗಾಳಿ ಬೀಸಿ ಹಾಯಿನೆಸಿತು.ಮಣ್ಣಿನ ವಾಸನೆಯಿಂದ ಯಾವುದೋ ಕಾಡಲ್ಲಿ ರೈಲು ಹೋಗ್ತಾ ಇರುವ ಹಾಗೆ ಅನಿಸಿತು. ಅವಳ ಮೌನ ಮುರೀಬೇಕು ಅಂದೊಕೊಂಡು “ ನೀವು ತುಂಬಾ ಲಕ್ಷಣವಾಗಿದೀರಾ” ಅಂದೆ. ಸ್ವಲ್ಪ ಜಾಸ್ತಿ ಧೈರ್ಯ ವಹಿಸಿದ್ನೇನೋ ಅನಿಸಿದರೂ ಇದರಲ್ಲೇನೂ ಭಯವಿಲ್ಲ.... ಹುಡುಗಿಯರಿಗೆ ಅವರ ಮುಖವನ್ನು ಹೊಗಳಿದರೆ ಸಂತೋಷವಾಗದೇ ಇರುತ್ಯೇ ಅಂತ ಸಮಾಧಾನಪಟ್ಟುಕೊಂಡೆ.  ಅವಳು “ನನ್ನ ಮುಖ ಸುಂದರವಾಗಿದೆ ಅಂತ ಕೇಳಿ ಕೇಳಿ ಬೇಜಾರಾಗಿತ್ತು ನೋಡಿ... ನೀವೊಬ್ಬರೇ ನನ್ನನ್ನು ಲಕ್ಷಣವಾಗಿದೀರಾ... ಅಂದವರು….. ಸರಿ ನಾನು ಇಳಿಯೋ ಜಾಗ ಬಂತು ಅನ್ಸುತ್ತೆ. ನಂಗೆ ಈ ರೈಲಲ್ಲಿ ಪ್ರಯಾಣ ಮಾಡೋದು ಅಂದ್ರೆ ತುಂಬಾ ಬೇಜಾರು. ಸದ್ಯ ಬೇಗ ಇಳಿದರೆ ಸಾಕಪ್ಪಾ.....ಸಿಗೋಣ್ವಾ ಮತ್ತೆ ” ಅಂದವಳೇ ಸಾಮಾನನ್ನು ಎತ್ತಿಕೊಳ್ಳಲಾರಂಭಿಸಿದಳು.



ನಾನು ನಿರ್ಲಿಪ್ತನಂತೆ ಇರಬೇಕು ಅಂದುಕೊಂಡರೂ ದು:ಖದ ಅಲೆಯೊಂದು ಒಡಲಾಳದಿಂದ ಬಂದಂತೆ ಅನಿಸಿ ಗಂಟಲುಬ್ಬಿ ಬಂತು. ನನ್ನ ಜೀವನ ಹೀಗೇನೇ ಬರಡು. ಅವಳು ಇನ್ನೇನು ಇಳೀತಾಳೆ.... ನನ್ನನ್ನು ಮರೀತಾಳೆ...ಆದರೆ ಅವಳ ಧ್ವನಿ ನನ್ನ ಜೊತೆ ಜೀವಮಾನವಿಡೀ ಇರುತ್ತದೆ ಅಷ್ಟೇ..... ರೈಲಿನ ವೇಗ ಕಡಿಮೆಯಾಯಿತು. ಇಂಜಿನ್ನಿನ ಕಟಕಟ ಶಬ್ದದೊಡನೆ  ಗಾಡಿ ನಿಂತಿತು. ಯಾರೋ ಹೆಂಗಸಿನ ಧ್ವನಿ…...ಹೊರಗಿನಿಂದ  ಏನೇನೋ ಶಬ್ದಗಳು.... ಮಗುವಿನ ಅಳು.... ಅವಳು ನನ್ನನ್ನು ದಾಟಿ ಬಾಗಿಲ ಬಳಿ ಹೋದಳು. ಅವಳ ಕೂದಲ ಸೋಪಿನ ಪರಿಮಳ ಮೂಗಿಗೆ ಅಡರಿತು. ಅವಳು ಜಡೆ ಹಾಕಿರಬಹುದಾ... ಕೂದಲು ಬಿಟ್ಟಿರಬಹುದಾ...  ಕೂದಲನ್ನು  ಮೇಲೆ ಎತ್ತಿ ಕಟ್ಟಿ ಬನ್ ಹಾಕಿರಬಹುದಾ.... ಅಥವಾ ಬಾಬ್ ಕಟ್ ಇರಬಹುದಾ... ನನ್ನ ಮನಸ್ಸು ಮರ್ಕಟನಂತಾಯಿತು. ಕಾಫಿ ಟೀ ಮಾರುವವರ ಗಲಾಟೆ ಶುರುವಾಯಿತು. ಬಾಗಿಲ ಬಳಿ ಏನೇನೋ ಶಬ್ದಗಳು. ಯಾರೋ ಸಾರಿ.... ಅಂದಂತೆ ಕೇಳಿಸಿತು. ರೈಲು ಹೊರಡುತ್ತಿದ್ದಂತೆಯೇ ಬಾಗಿಲು ಧಪ್... ಅಂತ ಮುಚ್ಚಿತು.

 ಯಾರೋ ಗಂಡಸರು ಒಳಗಡೆ ಬಂದರು. ಅಯ್ಯೋ ... ಮತ್ತೆ ನನ್ನ ನಾಟಕ ಶುರುಮಾಡಬೇಕಲ್ಲಪ್ಪ ... ಅಂದುಕೊಂಡು ನನ್ನ ಜಾಗದಲ್ಲಿ ಗಂಭೀರವಾಗಿ ಕೂತೆ. ಆತ ಕುಚೋದ್ಯದ ದನಿಯಲ್ಲಿ  “ಪಾಪ ... ಅಂಥ ಸುಂದರವಾದ ಹುಡುಗಿ ಇಳಿದು ನಾನು ಬಂದದ್ದು ನಿಮಗೆ ಬೇಜಾರಾಯ್ತೇನೋ” ಅಂದ. ನಾನು “ಹ್ಞು... ಹುಡುಗಿ ಲಕ್ಷಣವಾಗಿದ್ಲು... ಉದ್ದ ಜಡೆನೂ ಇತ್ತಲ್ವಾ” ಅಂತ ಅಳುಕುತ್ತಲೇ  ಕೇಳಿದೆ. ಆತ ಬೇಸರದಿಂದ “ ಅಯ್ಯೋ ಜಡೆ ಎಲ್ಲಾ ಯಾರ್ರೀ ನೋಡ್ತಾರೆ? ನಾನಂತೂ ಅವಳು ರೈಲಿನಿಂದ ಇಳೀತಿರಬೇಕಾದ್ರೆ ಅವಳ ಕಣ್ಣುಗಳನ್ನೇ ನೋಡ್ತಾ ಇದ್ದೆ.ಅಂಥಾ ಸುಂದರವಾದ ಕಣ್ಣುಗಳು... ಆದರೆ ದೃಷ್ಟಿನೇ ಇಲ್ಲಾ ನೋಡಿ. ಆಕೆ ಪೂರ್ತಿ ಕುರುಡಿ.... ನಿಮಗೆ ಗೊತ್ತಾಗ್ಲಿಲ್ವಾ....” ಅಂದವನೇ ಯಾವುದೋ ಹಾಡು ಗುನುಗುನಿಸುತ್ತಾ ತನ್ನ ಸಾಮಾನುಗಳನ್ನು ಜೋಡಿಸಲಾರಂಭಿಸಿದ.


Wednesday 20 May 2015

ಹಸುವಿನ ಕೊರಳ ಗೆಜ್ಜೆದನಿ

ಈ ಚಿತ್ರದಲ್ಲಿರುವುದು ಏನೆಂದು ನಿಮಗೆ ಗೊತ್ತೇ? ’ ಹಸುವಿನ ಕೊರಳಿನ ಗಂಟೆ’ ಎಂದು ಇದನ್ನು ನಮಗೆ ಮಾರಿದವರು ಹೇಳಿದ್ದರು. ಇವತ್ತು ದೇವರಪಾತ್ರೆಗಳನ್ನು ತೊಳೆದು, ಫೋಟೋಗಳನ್ನು, ಬಾಗಿಲನ್ನು ಒರೆಸುತ್ತಿದ್ದಾಗ , ಬಾಗಿಲತೋರಣದ ಹಿಂದೆ ಅವಿತಿದ್ದ ಇದು ಕಣ್ಣಿಗೆ ಬಿತ್ತು. ಕಪ್ಪಾಗಿದೆಯಲ್ಲ.. ಎಂದು ಹುಣಿಸೆನೀರಿನಲ್ಲಿ ತೊಳೆದರೆ ಫಳ ಫಳ ಹೊಳಪು. ಹೊಳಪಿನಲ್ಲಿ ಆ ಹುಡುಗನ ಮುಖ ಕಾಣಿಸಿತು! ಹೌದು ಇದರ ಹಿಂದೊಂದು ಸ್ವಾರಸ್ಯಕರ ಕತೆಯಿದೆ.
ಸುಮಾರು  13  ವರ್ಷಗಳ ಹಿಂದೆ ಇಂಥದೇ ಒಂದು ಮೇ ತಿಂಗಳ ದಿನ. ನಾವು ಆಗತಾನೇ ಮಾರುತಿ ಕಾರು ಕೊಂಡಿದ್ದೆವು.ಸರಿ.. ಕಾರಿನಲ್ಲಿ ಒಂದಿಷ್ಟು ದೂರ ಹೋದಂತೆಯೂ ಆಯಿತು,ಮಕ್ಕಳಿಗೂ ರಜೆ ಇದೆ, ಬೇಲೂರು- ಹಳೆಬೀಡುಗಳನ್ನು ನೋಡಿಕೊಂಡು ಬರೋಣ ಎಂದುಕೊಂಡು ನಾನು, ನನ್ನ ಪತಿ, ಏಳು ಹಾಗೂ ಐದು ವಯಸ್ಸಿನ ಮಗಳು-ಮಗ ಹೊರಟೆವು. ಪೆಟ್ರೋಲ್ ಖರ್ಚೇ ತುಂಬಾ ಆಗುತ್ತದೆ. ಇನ್ನು ಹೋಟೇಲಿಗೆ ದುಡ್ಡು ದಂಡ ಬೇಡ. ಅಲ್ಲದೇ ಆರೋಗ್ಯಕ್ಕೂ ಒಳ್ಳೆಯದು ಎಂದುಕೊಂಡು ಬೆಳಗಿನ ತಿಂಡಿ, ಮಧ್ಯಾಹ್ನದ ಊಟವನ್ನು ಮನೆಯಿಂದಲೇ ಕಟ್ಟಿಕೊಂಡು ಹೊರಟೆವು. ಬೆಳಗ್ಗೆ ಬೇಗ ಹೊರಟು, ಬೇಲೂರು ಚೆನ್ನಕೇಶವನ ದರ್ಶನ ಮುಗಿಸಿ, ಮಧ್ಯಾಹ್ನ ಮೂರರ ಹೊತ್ತಿಗೆ ಹಳೆಬೀಡಿಗೆ ಬಂದೆವು. ಹೊಯ್ಸಳೇಶ್ವರ ದೇಗುಲದ ಶಿಲ್ಪವೈಭವವನ್ನು ಕಂಡು ಬೆರಗಾಗಿ, ಅಲ್ಲೇ ಮುಂದಿದ್ದ ಉದ್ಯಾನದಲ್ಲಿ ಕುಳಿತೆವು.
ಹೊಟ್ಟೆ ತುಂಬಿತ್ತು. ಗಾಳಿ ತಣ್ಣಗೆ ಹಿತವಾಗಿ ಬೀಸುತ್ತಿತ್ತು. ಮಕ್ಕಳು ಹೀಗೇ ಏನೋ ಆಟ ಶುರುಮಾಡಿದರು. ಕೆಲಹೊತ್ತಿನಲ್ಲೇ ಮಗ ಬಿದ್ದು ಮಂಡಿ ತರಚಿದ್ದೂ ಆಯ್ತು. ಇಬ್ಬರೂ ಒಬ್ಬರ ಮೇಲೊಬ್ಬರು ದೋಷಾರೋಪಣ ಪಟ್ಟಿ ಒಪ್ಪಿಸಲು ಶುರು ಮಾಡಿದ್ದೂ ಆಯ್ತು. ನಾನು ನ್ಯಾಯಪಂಚಾಯ್ತಿಯನ್ನು ಆರಂಭಿಸುತ್ತಿದ್ದಂತೆಯೇ ಆತ ಅಲ್ಲಿಗೆ ಬಂದ. ತೆಳ್ಳನೆ ಮೈಕಟ್ಟಿನ , ಹಳೆ ಪಾಂಟು ಗೀರಿನ ಅಂಗಿ ತೊಟ್ಟಿದ್ದ ಸುಮಾರು ಹದಿನಾರು ವಯಸ್ಸಿನ ಆ ಹುಡುಗ ಸಾರ್ ಇದನ್ನು ಕೊಂಡ್ಕೊಳ್ಳಿ 3೦೦ ರೂ. ಕೊಡಿ ಅಂದ. ನನ್ನ ಪತಿನಾವು ಬೆಂಗಳೂರಿನವರು, ನಮಗಿದು ಉಪಯೋಗವಿಲ್ಲ ,ಬೇಡ ಅಂದರು.ಅವನು ಮತ್ತೆ ಮತ್ತೆ ಅದರ ಗುಣಲಕ್ಷಣಗಳನ್ನು ವರ್ಣಿಸಿ , ಮನೆಗೆ ಅಲಂಕಾರಕ್ಕೆ ಹಾಕಿ ತಗೊಳ್ಳಿ ಸಾರ್ ಎಂದು ಒತ್ತಾಯ ಶುರುಮಾಡಿದ. ನಾವು ಒಪ್ಪಲೇ ಇಲ್ಲ. ಇದ್ದಕ್ಕಿದ್ದಂತೆ ಆತ “ ಸಾರ್ , ಇಲ್ಲ ಅನ್ಬೇಡಿ .ಫೀಸ್ ಕಟ್ಟಕ್ಕೆ ದುಡ್ಡಿಲ್ಲ. ಹಸುವಿನ ಕೊರಳಿನಿಂದ ಕದ್ದು ತಂದಿದೀನಿ. ನಿಮ್ಮ ಹೆಸರು ಹೇಳಿಕೊಂಡು ಓತ್ತೀನಿ... “ಅಂತೆಲ್ಲ ಆರಂಭಿಸಿದ. ಕದ್ದದ್ದು ಅಂದಕೂಡಲೇ ಜಾಗ್ರತರಾದ ನಾವು ಮೆಲ್ಲನೆ ಅಲ್ಲಿಂದ ಎದ್ದು ಕಾರಿನ ಕಡೆ ನಡೆಯಲಾರಂಭಿಸಿದೆವು. ನಮ್ಮ ಬೆನ್ನ ಹಿಂದೆಯೇ ಬಂದ ಆತ “ ಸಾರ್ ನಾನು ಕಳ್ಳನಲ್ಲ. ಪಿಯುಸಿ ಫೇಲ್ ಆಗಿದ್ದೀನಿ. ಅಪ್ಪ ಮನೆಯಿಂದ ಓಡಿಸಿದ್ದಾನೆ. ಆದ್ರೆ ಸಾರ್ ಈಗ ನನಗೆ ಬುದ್ಧಿ ಬಂದಿದೆ. ನಾನು ೧೦ನೇ ಕ್ಲಾಸ್ ಪಾಸ್ . ಅದರ ಮೇಲೆ ಇಲ್ಲೆ ಬೇಲೂರಲ್ಲಿ ಐ ಟಿ ಐ ಸೇರ್ಕೋತೀನಿ... ಫೀಸ್ ಪುಸ್ತಕಕ್ಕೆ ದುಡ್ಡು ಬೇಕು ಸಾರ್ ... ಆಮೇಲೆ ಹೇಗೋ ಮಾಡ್ಕೋತೀನಿ... ಬೆಂಗಳೂರಿನಲ್ಲಿ ಕೆಲಸ ಮಾಡ್ತೀನಿ..... ಎಂದೆಲ್ಲಾ ಪರಿಪರಿಯಾಗಿ ಅವನ ಬಡತನದ  ಕತೆ ಹೇಳುತ್ತಾ ಅಂಗಲಾಚತೊಡಗಿದ. ನನ್ನ ಪತಿ ಸ್ವಲ್ಪ ಖಾರವಾಗಿ “ ನೋಡು ನಿನ್ನ ಕತೆ ಎಲ್ಲಾ ನಾನು ನಂಬಲು ಸಾಧ್ಯವಿಲ್ಲ. ಈ ಗಂಟೆಗಳು ನನಗೆ ಬೇಡ “. ಎಂದು ಹೇಳಿ ವೇಗವಾಗಿ ನಡೆಯಲಾರಂಭಿಸಿದರು.  ನನಗೆ ಇಕ್ಕಟ್ಟಿನ ಪರಿಸ್ಥಿತಿ. ಪಾಪ ಬಡರೈತನ ಮಗ. ಏನೋ ಮನಸ್ಸಿಟ್ಟು ಓದದೇ ನಪಾಸಾಗಿ ತಪ್ಪು ಮಾಡಿದ್ದಾನೆ. ಆದರೆ ಈಗ ತಪ್ಪನ್ನು ತಿದ್ದಿಕೊಳ್ಳುತ್ತಿದ್ದಾನೆ. ಮನೆಯಲ್ಲಿ ಕಷ್ಟ ಇದೆ ಅನ್ನುತ್ತಿದ್ದಾನೆ. ಆದರೆ ನಮ್ಮ ಅಂದಿನ ಬ್ಯಾಂಕಿನ ಕಂತುಗಳ ಮೇಲೆ ನಿಂತಿದ್ದ ಆರ್ಥಿಕಸ್ಥಿತಿಗೆ 3೦೦ ರೂ. ಕೊಂಚ ದೊಡ್ಡ ಮೊತ್ತವೇ ಆಗಿತ್ತು. ಅದೂ ಈ ರೀತಿಯ ದಾನಕ್ಕೆ! ಅಲ್ಲದೇ ಆತ ಸುಳ್ಳು ಹೇಳುತ್ತಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ? ಆತನದ್ದು ಇದೇ ರೀತಿ ಸುಲಿಗೆಯೇ ಉದ್ಯೋಗವಾಗಿದ್ದರೆ ಏನು ಗತಿ? ಆದರೆ ಓದಬೇಕು ಅನ್ನುತ್ತಿದ್ದಾನೆ. ಮಾತಿನಲ್ಲಿ ಪ್ರಾಮಾಣೆಕತೆ ಇದೆ. ... ಸರಿ ಏನೇ ಇರಲಿ... ನನ್ನ ಸತ್ಯ ನನಗೆ.....  ಅಂದುಕೊಂದು ಪರ್ಸಿನಲ್ಲಿ ಜೋಪಾನವಾಗಿರಿಸಿದ್ದ ೨೦೦ ರೂಗಳನ್ನು ಅವನಿಗೆ ಕೊಟ್ಟು ಈ ಗಂಟೆಗಳನ್ನು ತೆಗೆದುಕೊಂಡು, ನನ್ನೆಡೆಗೆ ತೀಕ್ಷ್ಣ ನೋಟ ಬೀರುತ್ತಿದ್ದ ಪತಿಯನ್ನು ಹಿಂಬಾಲಿಸಿದೆ.

ಅಂದಿನಿಂದ ಈ ಎರಡು ಟಿಣಿ ಟಿಣಿಗಳು ನಮ್ಮ ಜೊತೆಗೇ ಬಾಡಿಗೆ ಮನೆಗಳನ್ನು ಸುತ್ತಿವೆ. ಈಗ ನಮ್ಮ ಈ ಮನೆಯಲ್ಲಿ ಬಾಗಿಲ ಸಂದಿಯಲ್ಲಿ ತಣ್ಣಗೆ ಕುಳಿತು ಎಂದಾದರೊಮ್ಮೆ ಅವನನ್ನು ನೆನಪಿಸುತ್ತವೆ. ಅವನು ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು, ಮುನಿದ ಅಪ್ಪನನ್ನು ಒಲಿಸಿಕೊಂಡಿರಬಹುದು. ಮದುವೆಯಾಗಿ ಈ ಮಹಾನಗರದಲ್ಲೇ ಸಂಸಾರ ಹೂಡಿರಬಹುದು ಎಂಬ ಭರವಸೆಯನ್ನು ನನ್ನಲ್ಲಿ ತುಂಬುತ್ತವೆ. ಹದಿವಯಸ್ಸಿನಲ್ಲಿ ಬಾಹ್ಯ ಆಕರ್ಷಣೆಗಳಿಂದ ಎಷ್ಟೋ ಮಕ್ಕಳು ಓದಿನ ಕಡೆ ಗಮನ ಕೊಡದೆ ನಪಾಸಾಗುತ್ತಾರೆ. ಅವರಿಗೆ ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ಕೊಡಿ. ಈ ಅತ್ಯಮೂಲ್ಯ ಸಂಪತ್ತುಗಳ ಭವಿಷ್ಯ ನೀವು ರೂಪಿಸಿದ ಯಶಸ್ಸಿನ ಮಾನದಂಡಗಳ ನಡುವೆ ನಾಶವಾಗದಿರಲಿ ಎಂದು ಆಗಾಗ ಕಿಣಿ ಕಿಣಿ ನಾದಗೈದು ಹೇಳುತ್ತವೆ.

Monday 11 May 2015

ಕರುಣಾಳು ಬಾ ಬೆಳಕೆ.....

ಮೂರನೇ ಪೀರಿಯಡ್ ಮುಗಿಸಿ ಉಸ್ಸಪ್ಪ್ಪಾ…..ಎಂದುಕೊಂಡು ಕುರ್ಚಿಯ ಮೇಲೆ ನಾನು ಕುಳಿತುಕೊಂಡಾಗ ೫ನೇ ತರಗತಿಯ ಉತ್ತರಪತ್ರಿಕೆಗಳ ಬೆಟ್ಟ ನನ್ನನ್ನು ಅಣಕಿಸಿತು.ಇನ್ನು ಎರಡು ಪೀರಿಯಡ್  ಬಿಡುವಾಗಿದೆ.ಈ ಪರ್ವತವನ್ನಾದರೂ ಕರಗಿಸೋಣ ಎಂದುಕೊಂಡು ಕೆಂಪು ಪೆನ್ ಕೈಗೆತ್ತಿಕೊಂಡೆ.ಅವೇ ಪ್ರಶ್ನೆಗಳು-ಉತ್ತರಗಳು. ನಿಮ್ಮ ದಿನಚರಿಯ ಬಗ್ಗೆ ಅಜ್ಜಿಗೆ ಪತ್ರ ಬರೆಯಿರಿ ಎಂಬುದಕ್ಕೆ ಮಾತ್ರ ಉತ್ತರಗಳು ಕುತೂಹಲಕಾರಿಯಾಗಿದ್ದವು.ಈ ಹತ್ತು ವರ್ಷದ ಮಕ್ಕಳ ಸರಳ- ಸುಂದರ  ಸಮಸ್ಯೆಗಳ,ನಿರೀಕ್ಷೆಗಳ ಪ್ರಪಂಚವನ್ನು ವರ್ಣಿಸುವ ಆ ಪತ್ರಗಳನ್ನು ಏನೆಂದು ಬಣ್ಣಿಸಲಿ.ಹಾಗೇ ಮುಂದಿನ ಪತ್ರಿಕೆ ಕೈಗೆತ್ತಿಕೊಂಡೆ. ಯಾಕೋ ಇದು ಎಲ್ಲದರಂತಲ್ಲ ಅನಿಸಿತು. ಆದಿತ್ಯ ಬರೆದ ಪತ್ರ ಹೀಗಿತ್ತು.“ಅಜ್ಜಿ,ನಾನು ಬಹಳ  ಬೇಸರದಲ್ಲಿದ್ದೇನೆ. ಏಕೆಂದರೆ ಮನೆಯಲ್ಲಿ ಅಮ್ಮ ಇಲ್ಲ.ಅವಳು ದೇವರ ಬಳಿ ಹೋದ ಮೇಲೆ ಮನೆಯಲ್ಲಿ ನನ್ನನ್ಯಾರೂ ಪ್ರೀತಿಸುತ್ತಿಲ್ಲ.ಅಪ್ಪ ಯಾವಾಗಲೂ ಚಿಕ್ಕಮ್ಮನ ಜೊತೆಗೇ ಮಾತಾಡ್ತಾರೆ. ಎಲ್ಲರಿಗೂ ನನ್ನ ತಮ್ಮನ ಮೇಲೆಯೇ ಪ್ರೀತಿ.ಅಮ್ಮ ನೀನ್ಯಾಕೆ ನನ್ನ ಬಿಟ್ಟು ಹೋದೆ? ….ಇತ್ಯಾದಿ ……..ಯಾಕೋ ಮನಸ್ಸು ಕದಡಿಹೋಯಿತು. ನಿಜ, ತಾಯಿಗೆ ಸರಿಸಾಟಿ ಯಾರು?೨ವರ್ಷಗಳ ಹಿಂದೆ ಆದಿತ್ಯನ ತಾಯಿ ಅಪಘಾತಕ್ಕೆ   ಬಲಿಯಾಗಿದ್ದು , ಮಾಧ್ಯಮಗಳಲ್ಲಿ ಸುದ್ದಿಯಾದದ್ದು  ನೆನಪಾಯಿತು.ಓಹ್ …ಅವನ ತಂದೆ ಆಗಲೇ ಇನ್ನೊಂದು ಮದುವೆಯಾಗಿ,ಒಂದು ಮಗು ಕೂಡಾ…ಪಾಪ ಆತ ತಾನೇ ಏನು ಮಾಡಲು ಸಾಧ್ಯ? ಆದಿತ್ಯನನ್ನು ನೋಡಿಕೊಳ್ಳಲು ಕಷ್ಟವಾಗಿರಬಹುದು. ಆದರೆ ಈ ಮಗು ಹೀಗೆ ದು:ಖಿಸುತ್ತಿದ್ದರೆ ಏನು ಚೆನ್ನ? ನಾನು ಆದಿತ್ಯನ ಕ್ಲಾಸ್ ಟೀಚರ್ ಆಗಿ ಸುಮ್ಮನೆ ಇದ್ದರೆ ಅಪರಾಧವಲ್ಲವೇ?ನಾನೇನಾದರೂ ಇದಕ್ಕೆ ಮಾಡಲೇಬೇಕೆಂದು ನಿರ್ಧರಿಸಿದೆ.

 ಊಟದ ಅವಧಿಯಲ್ಲಿ ತರಗತಿಗೆ ಹೋದವಳು ಆದಿತ್ಯನ ಡಬ್ಬಿ ನೋಡಿದೆ.ದೋಸೆ, ಚಟ್ನಿ ಜೊತೆಗೆ ಹಣ್ಣಿನ ತುಂಡುಗಳು…ಪರವಾಗಿಲ್ಲ ಅನಿಸಿತು.ಆದರೆ ಇವನು ಅರ್ಧ ಹಾಗೇ ಉಳಿಸಿದ್ದ.ಕೇಳಿದರೆ ಇಷ್ಟವಿಲ್ಲ ಅಂದ.ಶುಭ್ರವಾದ ಬಟ್ಟೆ ಧರಿಸುವ,ಓದುವುದರಲ್ಲೂ ಉತ್ತಮವಾಗೇ ಇರುವ,ಒಳ್ಳೆಯ ಊಟವೂ ತರುವ ಈ ಮಗುವಿನ ಮನದಲ್ಲಿ ಎಂಥ ನೋವಿದೆ ಅನಿಸಿ ಬೇಜಾರಾಯಿತು.ತಂದೆ ತಾಯಿ ಮಕ್ಕಳನ್ನು ಸಂತೋಷವಾಗಿಡಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಅದು ಮರೀಚಿಕೆಯೇ ಆಗುತ್ತದಲ್ಲ. ಯಾಕೆ ಹೀಗೆ? ಹೃದಯ ತಳಮಳಗೊಂಡಿತು.ಸೀದಾ ಮುಖ್ಯೋಪಾಧ್ಯಾಯರಿಗೆ ವಿಷಯ ತಿಳಿಸಿ,ಪೋಷಕರನ್ನು ಕರೆದು ಮಾತಾಡಲೇ ಎಂದೆ.ಅವರು ಅಗತ್ಯವಾಗಿ ಮಾಡಿ ಬೇಕಿದ್ದರೆ ನನ್ನ ಬಳಿಗೇ ಕರೆತನ್ನಿ ಎಂದರು.

ಸರಿ,ಮಾರನೇ ದಿನ ಸರಿಯಾದ ಸಮಯಕ್ಕೆ ತಂದೆ- ಚಿಕ್ಕಮ್ಮ ಹಾಜರ್.ಅವರನ್ನು ನೋಡುತ್ತಿದ್ದಂತೆಯೇ ನನ್ನ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾದವು.ಇಬ್ಬರೂ ಸುಸಂಸ್ಕೃತರೂ ಹಾಗೂ ಮೃದುಭಾಷಿಗಳು.ಕೈಯಲ್ಲಿ ಮುದ್ದಾದ ಒಂದು ವರ್ಷದ ಮಗು. ಆಕೆಯ ಪ್ರಕಾರ ಮನೆಯಲ್ಲಿ ಆದಿತ್ಯ ಎಲ್ಲದಕ್ಕೂ ಸಿಡಿಮಿಡಿಗೊಳ್ಳುತ್ತಾನೆ.ಆಕೆ ಎಷ್ಟೇ ಪ್ರಯತ್ನಿಸಿದರೂ ಆದಿತ್ಯನ ಮನ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಆಕೆಯ ಅಳಲು. ಮರುಮದುವೆಯಾಗಿ ತಪ್ಪು ಮಾಡಿದೆನೋ ಎಂಬುದು ಆತನ ಅಳಲು.ಯಾಕೋ ಇದು ಕಗ್ಗಂಟಾಯಿತಲ್ಲ ಅನಿಸಿತು.ಆದರೂ ಆದಿತ್ಯನ ಹಿತಕ್ಕಾಗಿ ನೀವಿಬ್ಬರೂ ಇನ್ನೂ ಕೆಲಕಾಲ ತಾಳ್ಮೆ ವಹಿಸಬೇಕು ಎಂದು ಸಲಹೆ ನೀಡಿ ಅವರನ್ನು ಬೀಳ್ಕೊಟ್ಟೆ. ಆದಿತ್ಯನಿಗೂ ಈ ವಿಚಾರದಲ್ಲಿ ಅರಿವು ಮೂಡಿಸಲು ದಿನವೂ ಅವನ ಜೊತೆ ಸ್ವಲ್ಪಹೊತ್ತು ಕಳೆಯಲು ನಿರ್ಧರಿಸಿದೆ.

ಆ ಭಾನುವಾರ ನಮ್ಮ ಬಂಧುಗಳೊಬ್ಬರ ಮನೆಯ ಸಮಾರಂಭಕ್ಕೆ ಜಯನಗರಕ್ಕೆ ಹೋಗಿದ್ದೆವು.ಅಲ್ಲಿ ಒಳಗೆ ಹೋಗಿ ಮಾತನಾಡುತ್ತಿದ್ದರೆ ಅರೆ… ಅಲ್ಲಿದ್ದಾನೆ ಆದಿತ್ಯ.ಅವನ ತಂದೆ ನನ್ನ ಬಂಧುಗಳ ಸಹೋದ್ಯೋಗಿ. ಯಾಕೋ... ಏನೋ... ಮಕ್ಕಳಿಗೆ ಶಾಲೆಯ ಹೊರಗೆ ಟೀಚರ್  ಕಂಡರೆ ಬಹಳ  ಇರಿಸುಮುರುಸಾಗುತ್ತದೆ.  ಪಾಪ.. ಆದಿತ್ಯ ನನ್ನ ಕಣ್ತಪ್ಪಿಸಿ ಓಡಾಡಲಾರಂಭಿಸಿದ . ಅವನ ಪಕ್ಕದ ಮನೆಯಲ್ಲೇ ವಾಸವಾಗಿರುವ ನನ್ನ ಮಾವನ ಮಗಳು ಕೂಡಾ ಬಂದಿದ್ದಳು. ಅವಳಲ್ಲಿ ಲೋಕಾಭಿರಾಮವಾಗಿ ಆದಿತ್ಯನ ವಿಷಯ ಪ್ರಸ್ತಾಪಿಸಿದೆ.ಆಕೆಯ ಪ್ರಕಾರ ಅವನ ತಂದೆ- ಚಿಕ್ಕಮ್ಮ ತುಂಬಾ ಚೆನ್ನಾಗಿ ಅವನ ಆರೈಕೆ ಮಾಡುತ್ತಾರೆ.ಆದರೆ ಆದಿತ್ಯನ ಅಜ್ಜಿ [ಅವನ ತಾಯಿಯ ತಾಯಿ] ಆಗಾಗ ಅವನಿಗೆ ದೂರವಾಣಿಕರೆ ಮಾಡುತ್ತಾರೆ.ವಾರಾಂತ್ಯದಲ್ಲಿ ತಮ್ಮ ಮನೆಗೂ ಕರಕೊಂಡು ಹೋಗುತ್ತಾರೆ.ಆದಿತ್ಯನನ್ನು ಅವನ ಚಿಕ್ಕಮ್ಮನಿಂದ ಮಾನಸಿಕವಾಗಿ ದೂರವಿರಿಸುತ್ತಾರೆ.ಅವನ ಸಮಸ್ಯೆಗೆ ಅವರ ದುರ್ಬೋಧನೆಯೇ ಕಾರಣ. ಅಬ್ಬಾ ….. ಮನಸ್ಸು ನಿರಾಳವಾಯಿತು. ನಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ ದೇವರು[ ಹಾಗೊಬ್ಬ ಇದ್ದರೆ] ಯಾವ ಯಾವ ರೂಪಗಳಲ್ಲಿ ಬಂದು ಸಹಾಯ ಮಾಡುತ್ತಾನಲ್ಲ ….
ಮುಂದಿನವಾರ ಆದಿತ್ಯನ ಅಜ್ಜಿಗೆ ದೂರವಾಣಿಕರೆ ಮಾಡಿ ನಯವಾಗಿ ಮಾತನಾಡಿ, ಶಾಲೆಗೆ ಕರೆಯಿಸಿದೆ.ಮಗಳ ಸಾವಿನಿಂದ ಕಂಗೆಟ್ಟಿದ್ದ ಅವರು,ಅವಳ ಸ್ಥಾನದಲ್ಲಿರುವ ಇನ್ನೊಬ್ಬ ಹೆಣ್ಣಿನ ಮೇಲಿನ ಮಾತ್ಸರ್ಯದಿಂದ  ಬೆಂದುಹೋಗಿದ್ದರು.ಹಾಗೇ ಸ್ನೇಹದಿಂದ ಅವರ ಜೊತೆ ಮಾತನಾಡಿ,ಆದಿತ್ಯನ ಭವಿಷ್ಯದ ದೃಷ್ಟಿಯಿಂದ ಅವನು ಚಿಕ್ಕಮ್ಮನ ಜೊತೆ ಹೊಂದಿಕೊಳ್ಳುವುದು ಎಷ್ಟು ಮುಖ್ಯ …ಇತ್ಯಾದಿಯಾಗಿ ಚರ್ಚೆ ನಡೆಸಿದವು.ಮುಂದೆ ಅನೇಕ ಬಾರಿ ಅವರಾಗೇ ನನ್ನನ್ನು ಕಾಣಲೂ ಬಂದರು.ಹಾಗೇ ಶೈಕ್ಷಣಿಕ ವರುಷ ಉರುಳಿತು.
                                                  ****
ಯಾಕ್ರೀ …. ಇಲ್ಲಿ ನಿಂತುಕೊಂಡು ಏನು ಯೋಚಿಸ್ತಿದ್ದೀರಾ…ಮನೆಗೆ ಹೋಗಲ್ವಾ..ದೈಹಿಕ ಶಿಕ್ಷಕರ ಧ್ವನಿ ನನ್ನನ್ನು ವಾಸ್ತವಕ್ಕೆ ತಂದಿತು.ಅರೆ… ನಾನಿಲ್ಲೆ ಗೇಟಿನ ಬಳಿ ಯಾಕಿದ್ದೇನೆ? ಹೌದು ಈಗ ತಾನೇ ಆದಿತ್ಯ ಬಂದಿದ್ದನಲ್ಲ…ಪಿ ಇ ಎಸ್ ಕಾಲೇಜಿನಲ್ಲಿ ಇಂಜನಿಯರಿಂಗ್ ಓದುತ್ತಿದ್ದೇನೆ ಎಂದನಲ್ಲ….ಅಮ್ಮ ಊರಿಗೆ ಹೋಗಿದ್ದಾರೆ…..ರಾತ್ರಿ ಬರುತ್ತಾರೆ. … ಹಾಗಾಗಿ ಮೂರನೇ ತರಗತಿಯಲ್ಲಿ ಓದುತ್ತಿರುವ ಅವನ ತಮ್ಮನನ್ನು ಮನೆಗೆ ಒಯ್ಯಲು ನಾನೇ ಬಂದೆ..….ಎಂದನಲ್ಲ.ಅವರಿಬ್ಬರೂ ಬೈಕಿನಲ್ಲಿ ಮರೆಯಾಗುತ್ತಿದ್ದಂತೆ ನಾನು ನೆನಪಿನ ಲೋಕಕ್ಕೆ ಜಾರಿದ್ದೆ.ಇಲ್ಲ… ಹೀಗೆ… ಹಳೆ ವಿದ್ಯಾರ್ಥಿಯೊಬ್ಬನ ಜೊತೆ ಮಾತನಾಡುತ್ತಿದ್ದೆ….ಎಂದು ನಗುತ್ತಾ ಹೇಳಿ ನೆಮ್ಮದಿಯಿಂದ ಮನೆಯ ದಾರಿ ಹಿಡಿದೆ.

ನಾನು ಹೀಗೇನೇ ಇರೋದು….. …ನಂಗೆ ಇದೇ ಇಷ್ಟ…..


 ಕೆಲದಿನಗಳ ಹಿಂದೆ ನಟಿಯೊಬ್ಬಳು ಹೀಗೆ ಉದ್ಘೋಷಿಸಿದ ಸುದ್ದಿ ನೋಡುತ್ತಿದ್ದಂತೆ ಎಲ್ಲರೂ ಎಚ್ಚೆತ್ತರು. ಅವಳೇನೋ ಪಾಪತನ್ನ  ಉದ್ಯೋಗಕ್ಕೆ ಅನುಕೂಲವಾಗಲಿ ಎಂದುಕೊಂಡು ಏನೋ ಹೇಳಿಕೊಂಡಳು. ಆದರೆ ನಮ್ಮ ಸಂಪ್ರದಾಯವಾದಿಗಳ ಕಣ್ಣು ಕೆಂಪಾದವು.ನಮ್ಮ ಸಮಾಜವೇ ಅಧೋಗತಿಗಿಳಿಯಿತು ಎಂದು ಅವರು ಬರೆದದ್ದೇ ಬರೆದದ್ದು. ಆದರೆ  ನಮ್ಮಂಥ ಹೆಂಗಸರುನಾವು ಹೇಳಕ್ಕೆ ಆಗದ್ದನ್ನ ಇವಳು ಹೇಳ್ಬಿಟ್ಲಲ್ಲಾ…..” ಎಂದುಕೊಂಡು ಒಳಗೊಳಗೇ ಖುಶಿಪಟ್ಟೆವು  ಆದರೆ ಮರುಕ್ಷಣವೇ ಯಾರು ಏನೇ ಅಂದ್ರೂ ನಮಗೆ ಚಾಯಿಸ್ ಇಲ್ಲವಲ್ಲ. ನಾವು ಹೀಗೇ ಬದುಕ್ಬೇಕು ….. ಹೀಗೇ ಬಟ್ಟೆ ಹಾಕ್ಕೋಬೇಕು….” ಅಂತ ನಿಟ್ಟುಸಿರುಬಿಟ್ಟೆವು
ಯಾಕೋ ನನಗೆ ಮಾತ್ರ ನಾನು ಕಂಡ ಮಹಾನ್ ಮಹಿಳೆಯರ ನೆನಪು ಒತ್ತರಿಸಿ ಬಂತು . ಮದರ್ ತೆರೆಸಾ, ಸುಧಾ ಮೂರ್ತಿ ಇರಬಹುದಾ ಅಂತೆಲ್ಲಾ ನೀವು ಕಲ್ಪನೆ ಮಾಡಿಕೋಬೇಡಿ. ನನಗೆ ಮೊದಲು ನೆನಪಾಗುತ್ತಿರುವುದು ನನ್ನ ಅತ್ತಿಗೆ. ನನ್ನ ತಂದೆ ತಾಯಿಯ ದೊಡ್ಡ ಸಂಸಾರದ ಭಾರವನ್ನು ಸಮರ್ಥವಾಗಿ ನಿಭಾಯಿಸಿದ ನನ್ನಣ್ಣನ ಪತ್ನಿ. ಕುಟುಂಬ ಯೋಜನೆಯಿನ್ನೂ ನಮ್ಮ ಹಳ್ಳಿಗೆ ತಲುಪದಿದ್ದುದರಿಂದ  ಅವರು ಮದುವೆಯಾಗಿ ಬಂದಾಗ ಮನೆ ತುಂಬ ಮಕ್ಕಳು. ಆಕೆ ತನ್ನ ಮಕ್ಕಳಷ್ಟೇ ಅಕ್ಕರೆಯಿಂದ  ತನ್ನ ನಾದಿನಿ- ಮೈದುನಂದಿರನ್ನು ಆಸ್ಥೆಯಿಂದ ನೋಡಿಕೊಂಡವರು. ನಾದಿನಿಗೆ ಮದುವೆಯಲ್ಲಿ ಚಿನ್ನದ ಸರ ಹಾಕಬೇಕಾದಾಗ ತನ್ನಲ್ಲಿದ್ದ ಆ ಒಂದೇ ಸರವನ್ನು ನಗುನಗುತ್ತ ಕೊಟ್ಟವರು. ನಾದಿನಿಯಂದಿರ ಎರಡೆರಡು ಬಾಣಂತನಗಳನ್ನು ಜತನದಿಂದ ಮಾಡಿದವರು. ನಾವೆಲ್ಲ ಬೇಸಗೆ ರಜೆಯಲ್ಲಿ ಮಕ್ಕಳೊಡಗೂಡಿ ಊರಿಗೆ ಹೋದಾಗ ಪ್ರೀತಿಯಿಂದ ಸತ್ಕರಿಸಿದವರು.  ಮುಂದೆ ಆಸ್ತಿ ಪಾಲಾದಾಗ ಫಲವತ್ತಾದ ತೋಟ ತನಗೇ ಬೇಕೆಂದು ಮೈದುನ ಹಠ ಹಿಡಿದಾಗ ಇರಲಿಅವನು ಸುಖವಾಗಿರಲಿ…. ಕೊಟ್ಟುಬಿಡಿಎಂದು ಗಂಡನಿಗೆ ಹೇಳಿದ ಆ ಕರುಣಾಮಯಿಯನ್ನು ಏನೆಂದು ಹೊಗಳಲಿ?
ನನ್ನ ಸಹೋದ್ಯೋಗಿಯೊಬ್ಬರಿದ್ದಾರೆಅವರ ದಿನಚರಿಯನ್ನು ನೀವೊಮ್ಮೆ ನೋಡಬೇಕು. ಅವರು ಬೆಳಗ್ಗೆ ಬೇಗ ಎದ್ದು ಮನೆಕೆಲಸಗಳನ್ನು ಮುಗಿಸಿ, ಗಂಡ , ಮಕ್ಕಳ ಬೇಕುಗಳನ್ನು ಪೂರೈಸಿ, ಲಕ್ವ ಹೊಡೆದು ಹಾಸಿಗೆ ಹಿಡಿದಿರುವ [ ೧೨ ವರ್ಷಗಳಿಂದ] ಅತ್ತೆಗೆ ಸ್ನಾನ ಮಾಡಿಸಿ, ಶುಭ್ರವಾದ ಬಟ್ಟೆ ತೊಡಿಸಿ ೯ ಕ್ಕೆ ಆಫೀಸಿಗೆ ಬರುತ್ತಾರೆ. ಸಂಜೆ ಐದಕ್ಕೆ ಮನೆ ತಲುಪಿದ ತಕ್ಷಣ ಅತ್ತೆಯ ಮಲ- ಮೂತ್ರಗಳನ್ನು ಸ್ವಚ್ಛಗೊಳಿಸಿ, ಒಗೆದ ಬಟ್ಟೆ ತೊಡಿಸಿ ಮತ್ತೆ ಮನೆಕೆಲಸಕ್ಕೆ ತೊಡಗುತ್ತಾರೆ. ಕೆಲಸ ಬಿಟ್ಟು ಮನೆಯಲ್ಲಿರುವ ಅಥವಾ ಅತ್ತೆಯ ಸೇವೆಗೆ ಆಳನ್ನು ನಿಯೋಜಿಸುವ ಆರ್ಥಿಕ ಚೈತನ್ಯ ಅವರಿಗಿಲ್ಲ. ಆದರೆ ಅವರ ಮುಖದ ಮೇಲೆ ನಗು ಮಾಸಿದ್ದನ್ನು ನಾನೆಂದೂ ನೋಡಿಲ್ಲ.
ಇಂದಿನ ಸ್ವಸ್ಥ , ಆರೋಗ್ಯವಂತ ನಾಗರಿಕರ ಹಿಂದೆ ಇಂಥ ಅನೇಕ ದೈವೀಸ್ವರೂಪರಾದ ಅಕ್ಕಂದಿರು, ತಾಯಂದಿರು, ಅತ್ತೆಯರು, ಚಿಕ್ಕಮ್ಮ, ದೊಡ್ದಮ್ಮಂದಿರು ಮಾತ್ರವಲ್ಲ ಅಣ್ಣಂದಿರು, ಭಾವಂದಿರು, ಮಾವ, ಚಿಕ್ಕಪ್ಪ, ದೊಡ್ಡಪ್ಪಂದಿರು ಇದ್ದಾರೆ. ಬಹುಶ: ತ್ಯಾಗವೆಂಬ  ಶಬ್ದಕ್ಕೆ ಇವರು ಜೀವಂತ ಉದಾಹರಣೆಗಳು. ಹೇಳಿಕೊಳ್ಳುವಂಥಾ ಆದಾಯ ಇಲ್ಲದಿದ್ದಾಗಲೂ ಕುಟುಂಬದ ಸುಖವೇ ತನ್ನ ಸುಖ ಎಂದುಕೊಂಡ ಮಹಾನುಭಾವರಿವರು.  

ನನಗನಿಸುತ್ತದೆ ಇವರೆಲ್ಲಾ ತಮ್ಮನ್ನು ನಂಬಿದ ಜೀವಗಳಿಗೆ ಯಾವಾಗಲೂ ಹೇಳುತ್ತಿದ್ದುದು ಒಂದೇ ಮಾತುನಂದು ಹೇಗೋ ಆಗುತ್ತದೆ ಬಿಡು…… ನೀನು ಚೆನ್ನಾಗಿರಬೇಕು….. ನಿನ್ನಿಷ್ಟನೇ ನನ್ನಿಷ್ಟ……”

Wednesday 25 March 2015

Guiding star.

Our system has successfully snubbed another honest voice. But remember there are thousands of more souls who look for our support to breathe. On this sad moment I want to share one my experience:

Around six months back, there were number of sand lorries passing through our layout starting from midnight till dawn. The road in front of my home is parallel to Kanakapura Road. The Talaghattapura police station on the Kanakapura Road is about a kilometre from my house. So the sand lorries used our layout road to bypass the police station, and thus enter the city. It was really a nightmare without sleep- nights after nights. Our layout residents joined together, discussed lengthy plans along with number of teas and coffees [with sugar and sugarless!] to stop this menace. Nothing worked even after 10 days. I was really fed up with this and on a Sunday morning went alone to Talaghattapura police station to lodge a complaint. The police inspector welcomed me gracefully and lent a patient ear to my miseries. He said no one had approached him so far about this. In low voice he explained to me about the illegal sand mafia and the powerful people behind it. He said, “I will give you my mobile number. As soon as the first lorry starts, please give me a call; because if I deploy police then, they will send messages that they have been stopped by the police . I will send another Jeep to the entering point and seize the lorries . Let us try”. Feeling hopeful, I called him at 12.30 AM [From my husband’s mobile, what if he stores my number! don't trust officers !!]. Believe me, there were 25 lorries that night as against 40. I continued it for a week. And the problem stopped permanently. Later when I met him to thank him, he said they can take actions only if the public lodges a complaint.

I know that sand business as such hasn't stopped because of my complaint. They would have discovered another route to play. But all I want to say is our officers need our support to repair this corrupt system. There are still thousands of lights still shinning bright. Let us put our hands together as one. RAVI, May your soul become a guiding star.

Exam.... Exam

Had it been my rule I myself would have given them books inside the exam hall to copy and write,” - Mr. Lalu Prasad
Though his words are to be taken with a pinch of salt, it invoked few thoughts within me.
March being the exam month, every day I am witnessing the anxious parents, stressful students and worried teachers. I came across many students who brought chits with answers to the exam room. When they are caught, often the reason would be – “In spite of studying hard I couldn’t memorise this answer” , “There is no one to help me at home” or “what if I  lose  the class topper position ?” Their tearful eyes and “Ma’am please don’t tell my parents”…..plea pricks me and even threatens me.

The whole purpose of education is to make the child aware of the basic concepts. But along the way a lot of stress is added and it goes deep into their personality. In fact, when I am too tired mentally/physically myself, I often wake at midnight seeing a dream - where I am in an exam hall with a question paper and realise that I have prepared for a different subject. Sometimes I would not have written a single answer and the school bell rings, or results are declared and I have failed miserably, and so on…..

But where is the solution? The chances of our education system bringing open book method till secondary level are next to impossible. So we should help our children to face the exams in a cheerful spirit. Can we not totally stop them playing during exams? Can we talk less about marks and future plans at home? Can we educate them about the importance of knowledge to be gained rather than money? Can we ourselves keep away from the T.V and smart phones thus teach our children by setting an example?

After all our children are our future and they deserve a stress free, happy and joyful childhood. What do you say?... 

Saturday 7 February 2015

ಅದಕ್ಕೆ ಸ್ಕೋಪ್ ಇಲ್ಲಾ ಮಾಮ್…. ಟೈಮ್ ವೇಸ್ಟ್….

              
                       ಅದಕ್ಕೆ ಸ್ಕೋಪ್ ಇಲ್ಲಾ ಮಾಮ್…. ಟೈಮ್ ವೇಸ್ಟ್….


ಅಲ್ಲಿ ನಗು , ಉದ್ವೇಗ, ಕುತೂಹಲ, ತಮಾಷೆ , ನೆನಪುಗಳ ಸಂತೆ ನೆರೆದಿತ್ತು. ಹೌದುವರುಷಕ್ಕೊಮ್ಮೆ ನಾನು ಭಾವನೆಗಳ ಅಲೆಗಳಲ್ಲಿ ತೇಲುವ ದಿನವೆಂದರೆ ಹತ್ತನೇ ತರಗತಿಯ ಬೀಳ್ಕೊಡುಗೆ ದಿನದಂದು. ನಮ್ಮ ಪುಟಾಣಿಗಳು ಪಾಲಕರ , ಶಿಕ್ಷಕರ, ಆಯಾಗಳ  ಕೈ ಹಿಡಿದುಕೊಂಡು ಒಂದೊಂದೇ ಹೆಜ್ಜೆ ಹಾಕುತ್ತಾ ಬೆಳೆದು ಯೌವನಕ್ಕೆ ಕಾಲಿಡುವುದನ್ನು ನೋಡುವುದೇ ಒಂದು ಹಬ್ಬ.   ಟೀಚರ್…. ನಾನು ಒಳಗೆ ಬರಲಾ… ,ಟೀಚರ್ಪೆನ್ಸಿಲ್ ಚೂಪು ಮಾಡಲಾ….,  ಟೀಚಟಾಯ್ಲೆಟ್ಟಿಗೆ ಹೋಗಲಾ…., ಟೀಚಊಟ ಮಾಡಲಾ….. , ಟೀಚಬರೆಯಲು ಶುರು ಮಾಡಲಾ….. ಟೀಚರ್ಅದು  …. ಟೀಚರ್ಇದು …… ಟೀಚರ್ ರೇ.. ಮಕ್ಕಳ  ಜಗತ್ತಿನ ಕೇಂದ್ರಬಿಂದು. ಟೀಚರ್ ಸಂತೋಷದಿಂದ ಇದ್ದರೆ ಅವರಿಗೆ ಸ್ವರ್ಗಸುಖ . ಟೀಚರ್ ರಜೆ ಹಾಕಿದರೆ, ಸಿಟ್ಟು ಮಾಡಿಕೊಂಡರೆ, ಹುಷಾರು ತಪ್ಪಿದರೆ ಅವರಿಗೆ ದಿಕ್ಕೇ ತೋಚದು. ಹೀಗೆ ಟೀಚರ್ ನೆರಳಿನಲ್ಲಿ ಬೆಳೆಯುವ ಮಕ್ಕಳು ಹೈಸ್ಕೂಲಿಗೆ ಬರುತ್ತಿದ್ದಂತೆಯೇ ಟೀಚರ್ ರಜೆ ಹಾಕಿದರೆ ಕುಣಿದು ಕುಪ್ಪಳಿಸುತ್ತಾರಲ್ಲ….. . ಟೀಚರ್ ಗೆ ಆರೋಗ್ಯ ಕೈಕೊಡಲಿ ಎಂದು ಬೇಡುತ್ತಾರಲ್ಲ. ತರಗತಿಯಲ್ಲಿ ಪಾಠ ಕೇಳದೆ, ಮನೆಗೆಲಸ ಮಾಡದೇ   ಟೀಚರ್ ನ್ನು ಸತಾಯಿಸುತ್ತಾರಲ್ಲ. ಕೊನೆಗೆ ಟೀಚರ್ಸರಿಯಿಲ್ಲ. ಅದಕ್ಕೇ ಮಾರ್ಕ್ಸ್ ಕಮ್ಮಿ ಬರುತ್ತವೆ ಎಂದು ನುಡಿಮುತ್ತುಗಳನ್ನು ಉದುರಿಸುತ್ತಾರಲ್ಲ….. ಎಂಬ ಲಹರಿಯಲ್ಲಿ ಮೈಮರೆತಿದ್ದ ನನ್ನನ್ನು ಎಚ್ಚರಿಸಿದ್ದು ಟೀಚರ್ನಿಮ್ಮ ಜೊತೆ ಒಂದು ಫೋಟೊಎಂದ ಮಕ್ಕಳ ಗುಂಪು.
ಫೋಟೋಗೆ ಹಲ್ಲು ಕಿರಿದು , ಮುಂದೆ ಏನು ಓದಬೇಕೆಂದು ಮಾಡಿದ್ದೀರಿ? ಎಂದೆ. ಸಂದೀಪ , ಕಾಮರ್ಸ್ ತೆಗೆದುಕೊಂಡು ಸಿ. ಮಾಡಿ ತುಂಬಾ ದುಡ್ಡು ಮಾಡಬೇಕು ಎಂದ. ಕೆಲವರ್ಷಗಳ ಹಿಂದೆ ಇದೇ ಸಂದೀಪ ವಿಜ್ಞಾನದ ಮಾಡೆಲ್ ಒಂದಕ್ಕೆ ದೆಹಲಿಯಲ್ಲಿ ಪ್ರಶಸ್ತಿ ಪಡೆದದ್ದು, ಭವಿಷ್ಯದ ವಿಜ್ಞಾನಿಯೆಂದು ಪತ್ರಿಕೆಗಳು ಅವನನ್ನು ಹಾಡಿ ಹೊಗಳಿದ್ದು ನೆನಪಾಯಿತು. ಯಾಕೆ ವಿಜ್ಞಾನ ಬೇಡವೇ ಎಂದರೆ,  ತುಂಬಾ ವರ್ಷ ಕಷ್ಟಪಡಬೇಕು …. ಬೋರು…. ಎಂದ. ಅದ್ಭುತವಾಗಿ ಚಿತ್ರಗಳನ್ನು ಬಿಡಿಸುವ ಸನಾ ಡಾಕ್ಟರ್ ಆಗಬೇಕಂತೆ. ಹೆಸರಾಂತ ವೈದ್ಯರ ಮಗಳಾದ ಅವಳೇ ಅವರ ನರ್ಸಿಂಗ್ ಹೋಂ ಉತ್ತರಾಧಿಕಾರಿ. ಚಿತ್ರಕಲಾ ಪರಿಷತ್…..ಆರ್ಟ್ ಸ್ಕೂಲ್…. ಎಂದೇನೋ ಮಾತಾಡಲು ಆರಂಭಿಸಿದೆ. ಆರ್ಟಿಗೆಲ್ಲಾ ಸ್ಕೋಪ್ ಇಲ್ಲಾ ಮಾಮ್…. ಟೈಮ್ ವೇಸ್ಟ್…. ಎಂದಳು. ಇನ್ನು ಹೆಚ್ಚಿನವರೆಲ್ಲಾ ಸೈನ್ಸ್, ಅಟ್ ಲೀಸ್ಟ್ …. ಸಾಫ್ಟ್ ವೇರ್ ಇಂಜನಿಯರ್ ಆಗಬಹುದಲ್ಲಾ….ಕಾಂಪಸ್ ಇಂಟರ್ ವ್ಯೂ ನಲ್ಲೇ ಕೆಲಸ ಸಿಗುತ್ತದೆ.  ಅಮೇರಿಕಾಗೆ ಹೋಗಲು ಅದೇ ಸುಲಭವಾದ ದಾರಿ ಅದಕ್ಕೇ . ಸೈನ್ಸ್ , ಕಾಮರ್ಸ್ ಸಿಗದವರು ಹ್ಯುಮಾನಿಟೀಸ್.[ ನಾವೆಲ್ಲಾ ಆರ್ಟ್ಸ್ ಅನ್ನುತ್ತಿದ್ದೆವಲ್ಲಾ ಅದು.] ಯಾಕೆಂದರೆ ಜರ್ನಲಿಸ್ಟ್ ಆಗಬಹುದು. ಒಳ್ಳೆಯ ಸ್ಕೋಪ್ ಇದೆ.
  ಮಕ್ಕಳೆಲ್ಲಾ ಅತ್ಯಂತ ವೈಜ್ಞಾನಿಕವೆಂದು ಕರೆಯಲ್ಪಡುವ ವಿದ್ಯಾಭ್ಯಾಸವನ್ನು ಪಡೆದವರು. ಆದರೆ ನಮ್ಮ ವ್ಯವಸ್ಥೆ ಅವರಲ್ಲಿ ಕನಸುಗಳನ್ನು  ಬೆನ್ನಟ್ಟುವ ಆಸೆಯನ್ನು ಬಿತ್ತಲೇ ಇಲ್ಲ.ಅವರ ಪ್ರತಿಭೆಗಳು ಕೇವಲ ಹವ್ಯಾಸಗಳಾಗಿಯೇ ಕೊನೆಯುಸಿರೆಳೆದವಲ್ಲ.  ಅವರಲ್ಲಿ ಅದ್ಬುತವಾದ ಗಾಯಕರಿದ್ದಾರೆ. ಚಿತ್ರಕಾರರಿದ್ದಾರೆ. ಪ್ರತಿಭಾವಂತ ನಟರಿದ್ದಾರೆ.   ಆದರೆ ದುಡ್ಡು ತರದ ಕಲೆಗಳು ಸ್ಕೋಪ್ ಇಲ್ಲದ ಪಟ್ಟಿಗೆ ಸೇರಿಹೋದವಲ್ಲ. ಜೀವನ ನಡೆಸಲು ಹಣ ಬೇಕು ನಿಜ. ಆದರೆ ಮನಸ್ಸು ಅರಳುವುದು ಬೇಡವೇ? ಯಾಕೋ ಮನಸ್ಸಿಗೆ ಕಸಿವಿಸಿಯಾಯಿತು.
ನಮ್ಮ ಮಕ್ಕಳು ನಮ್ಮ ಅಮೂಲ್ಯಆಸ್ತಿಗಳು ಎನ್ನುತ್ತೇವೆ . ಆದರೆ ಅವರು ಕೇವಲ ದುಡ್ಡುಎನ್ನುವ ಸ್ಕೋಪ್ ಹಿಂದೆ ಓಡುವ ವ್ಯವಸ್ಥೆಯನ್ನು ನಾವು ನಿರ್ಮಿಸಿದ್ದೇವೆ.   ನಮ್ಮ ಪದವಿ ಹಂತದಲ್ಲಿ ಫಿಸಿಕ್ಸ್, ಕೆಮ್, ಮಾತ್ ಜೊತೆ ತಬಲಾ.   ಅಥವಾ  ಹಿಸ್ಟರಿ, ಪೊಲ್. ಸೈನ್ಸ್, ಸೈಕಾಲಜಿಯ ಜೊತೆ ಭರತನಾಟ್ಯ ವನ್ನು ಯಾಕೆ ಕಲಿಯಬಾರದು? ಅಥವಾ ಬಿ. ಹಂತದಲ್ಲಿ ಕಂಪ್ಯೂಟರ್ ಸೈನ್ಸ್ ಜೊತೆ ಚಿತ್ರಕಲೆ, ಮೆಕಾನಿಕಲ್   ಇಂಜನಿಯರಿಂಗ್ ಜೊತೆ  ನಮ್ಮ ಪ್ರಾದೇಶಿಕಭಾಷೆಗಳನ್ನು , ಯೋಗವನ್ನು , ನಟನೆಯನ್ನು ಒಂದು ವಿಷಯವಾಗಿ ಸೇರಿಸಲು ಸಾಧ್ಯವಿಲ್ಲವೇ?  ಇದು ಸರ್ಕಾರದ ಕೆಲಸ ನಿಜ. ಆದರೆ ಸರ್ಕಾರವೆಂದರೆ ಯಾರು? ನಾವೇ ಅಲ್ಲವೇ? ನಮ್ಮ ಮಕ್ಕಳೆಂದರೆ ಯಾರು? ಅವರು ನಮ್ಮ ಪ್ರತಿರೂಪಗಳೇ ಅಲ್ಲವೇ? ನಾವು ನಮಗಾಗಿ ,ನಮ್ಮ ದೇಶದ ಭವಿಷ್ಯಕ್ಕಾಗಿ ದನಿಯೆತ್ತಬೇಡವೇನಿಮಗೇನನಿಸುತ್ತದೆ?