Sunday, 3 May 2020

ಪೂರ್ವಾಗ್ರಹಗಳ ಸುಳಿಯಲ್ಲಿ....

ಮೊನ್ನೆ ಗೆಳತಿ ವನಿತಾಗೆ ಫೋನ್ ಮಾಡಿದ್ದೆ . ಕೊರೊನಾವೈರಸ್ ಮಹಾಮಾರಿಯ ಕಿರಿಕಿರಿಗಳನ್ನೆಲ್ಲ ಹಂಚಿಕೊಂಡಾದ ಮೇಲೆ ನಮ್ಮ ಹರಟೆ ಸಿನಿಮಾ , ಟಿವಿ ಕಡೆ ಹೊರಳಿತು . ಒಬ್ರು ಸೀರಿಯಲ್ ನಿರ್ದೆಶಕರ ಬಗ್ಗೆ ಮಾತಾಡ್ತಾ ವನಿತಾ “ ಸೀರಿಯಲ್ ಚೆನ್ನಾಗ್ ಮಾಡ್ತಾರೆ .. ಆದ್ರೆ ಸಂಸಾರ ಸರಿ ಇಲ್ಲ “ ಅಂದಳು. ಆ ವ್ಯಕ್ತಿ ನನಗೆ ಪರಿಚಯದವರು . ಅದಕ್ಕೆ “ಯಾಕೆ ಚೆನ್ನಾಗೇ ಇದ್ದಾರಲ್ಲ” ಅಂದೆ . “ ಅಯ್ಯೋ.. ಏನ್ ಸರಿ ಇರೋದು ..ಅವ್ರು ಲವ್ ಮಾರೇಜ್ ..ಈಗ ಮಗಳೂ ಯಾರೋ ಡೆಲ್ಲಿ ಕಡೆಯವರನ್ನು ಮದ್ವೆ ಆಗಿದಾಳಂತೆ ….” ಅಂದ್ಲು. ಅರೆ! ..ಇದರಲ್ಲಿ ಏನು ತಪ್ಪು? ಅನ್ನಿಸಿದರೂ ಸುಮ್ನೆ ಯಾಕೆ ಚರ್ಚೆ.. ಇದರ ಬಗ್ಗೆ ಮಾತಾಡಿ ಉಪಯೋಗವಿಲ್ಲ ಅಂದುಕೊಂಡು ಮಾತು ಅಡಿಗೆ ಕಡೆ ಹೊರಳಿಸಿದೆ. ನಮ್ಮ ನಿತ್ಯಜೀವನದಲ್ಲಿ ಇಂಥ ಎಷ್ಟೊಂದು ಪೂರ್ವಗ್ರಹ/ಪೂರ್ವಾಗ್ರಹ [ Prejudices] ಗಳು ಇವೆಯಲ್ವಾ? ಪೂರ್ವ ಅಂದ್ರೆ ಹಳೇದು. ಗ್ರಹ/ಆಗ್ರಹ ಅಂದ್ರೆ ಸ್ವೀಕರಿಸುವುದು, ಒಪ್ಪಿಕೊಳ್ಳೋದು ಅಂತ ಅರ್ಥ.[ ಪೂರ್ವ ಅಂದ್ರೆ ಇಲ್ಲಿ ದಿಕ್ಕು ಅಂತಲ್ಲ. ಪಶ್ಚಿಮಗ್ರಹ ,ಉತ್ತರಗ್ರಹ ಅಂತೆಲ್ಲ ಇಲ್ಲ!!] ಹಾಗೆ ನೋಡಿದ್ರೆ ನಮ್ಮ ಜೀವನ ನಡೆಯೋದೇ ಪೂರ್ವಾಗ್ರಹಗಳ ನೆರಳಲ್ಲಿ. ನಮ್ಮ ಜೀವನದಲ್ಲಿ ಎಲ್ಲೋ ನೋಡಿದ , ಕೇಳಿದ ಅಥವಾ ಕೆಲವೊಮ್ಮೆ ನಾವೇ ಅನುಭವಿಸಿದ ಘಟನೆಗಳ ಆಧಾರದ ಮೇಲೆ ಒಂದು ಶಾಶ್ವತ ಅಭಿಪ್ರಾಯವನ್ನು ಸೃಷ್ಟಿಮಾಡಿಕೊಂಡುಬಿಡುತ್ತೇವೆ . ಇದೇ ಪೂರ್ವಗ್ರಹ ಅಥವಾ ಪೂರ್ವಾಗ್ರಹ , ಇಂಗ್ಲೀಷಿನ Prejudice . ಪೂರ್ವಾಗ್ರಹಗಳು ಒಂದು ಹಂತದವರೆಗೂ ನಿರಪಾಯಕಾರಿ ಆದರೆ ಮೇರೆ ಮೀರಿದರೆ ಜೀವನದ ನೆಮ್ಮದಿ ಕಸಿದುಕೊಳ್ಳುತ್ತವೆ. ಕೆಲವು ಪೂರ್ವಾಗ್ರಹಗಳು ಮನೆ ದಾಟಿ ಇಡೀ ಸಮುದಾಯಕ್ಕೆ ಹಬ್ಬುತ್ತವೆ . ಆಗ ಮಾತ್ರ ಪರಿಸ್ಥಿತಿ ಭೀಕರವಾಗುತ್ತದೆ . ನಾನು ಕೇಳಿರುವ - ಅನುಭವಿಸಿರುವ ಕೆಲ ಪೂರ್ವಾಗ್ರಹಗಳು ಹೀಗಿವೆ. ೧. ದಪ್ಪ ಇರುವ ಜನ ಹೊಟ್ಟೆ ಬಿರಿಯೋವಷ್ಟು ತಿಂತಾರೆ . ಸಣಕಲು ಜನಕ್ಕೆ ತಿನ್ನೊದು ಅಂದ್ರೆ ಅಲರ್ಜಿ. ೨. ಬಿಳಿ ಚರ್ಮದವರು ನಾಜೂಕು, ಸ್ವಚ್ಚ, ಒಳ್ಳೆಯವರು . ಕಪ್ಪು ಚರ್ಮದವರು ಅನಾಗರಿಕರು , ಕೆಟ್ಟವರು. ೩. ಹಳ್ಳಿ ಜನ ಆರೋಗ್ಯವಂತರು. ಸಿಟಿಯವರು ಕಾಯಿಲೆಗಳ ತವರುಮನೆ. ೪. ಹೆಣ್ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಿದ್ರೆ ಬೇರೆ ಜಾತಿಯವರನ್ನು ಮದ್ವೆ ಆಗ್ತಾರೆ . ಮುಂದೆ ಆ ಮದುವೆಗಳು ಮುರಿದು ಬೀಳ್ತವೆ . ೫. ಹೆಂಡತಿಗೆ ಜಾಸ್ತಿ ಸಂಬಳ ಬರುತ್ತಿದ್ದರೆ , ಡೈವೋರ್ಸ್ ಗ್ಯಾರಂಟಿ . ೬. ಗಂಡ ಮನೆಕೆಲಸದಲ್ಲಿ ಸಹಾಯ ಮಾಡುತ್ತಿದ್ದರೆ , ಒಂದೋ ಆತನಿಗೆ ಹೆಂಡತಿಯ ಭಯ ಅಥವಾ ಅವನಿಗೆ ಕಮ್ಮಿ ಸಂಪಾದನೆ ಇದೆ . ೭. ಶ್ರೀಮಂತರು ಧನದಾಹಿಗಳು , ಕೆಟ್ಟವರು. ಅವರಿಗೆ ದುಡ್ಡು ಬೇಕಾದಷ್ಟು ಇರುತ್ತದೆ ಆದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ . ಬಡವರು ತೃಪ್ತರು, ಒಳ್ಳೆಯವರು . ಗಂಜಿ ತಿಂದರೂ ಮನೆಯಲ್ಲಿ ಸಂತೋಷವಾಗಿರುತ್ತಾರೆ. ೮. ಆದರ್ಶ ತಾಯಿ ಮಗುವಿನ ಹಿತಕ್ಕಾಗಿ ಕೆಲಸಕ್ಕೆ ರಾಜೀನಾಮೆ ಕೊಡುತ್ತಾಳೆ. ಆಸೆಬುರುಕಿ ತಾಯಿ ಮಗುವನ್ನು ಬೇಬಿ ಕೇರ್ ನಲ್ಲಿ ಯಾರದ್ದೋ ಕೈಲಿ ಬಿಟ್ಟು ಸ್ಟೈಲಾಗಿ ಕೆಲಸಕ್ಕೆ ಹೋಗ್ತಾಳೆ. ೯. ಬೇಬಿ ಕೇರ್ ಸೆಂಟರ್ ಗಳಲ್ಲಿ ಬೆಳೆದ ಮಕ್ಕಳು ದುರ್ಬುದ್ಧಿಗಳನ್ನು ಕಲಿಯುತ್ತಾರೆ . ಕೂಡು ಕುಟುಂಬಗಳಲ್ಲಿ ಬೆಳೆವ ಮಕ್ಕಳು ಸಂಸ್ಕಾರವಂತರಾಗ್ತಾರೆ. ೧೦. ಸಾಮಾಜಿಕ ಪೂರ್ವಾಗ್ರಹಗಳು - • ಹಿಂದೂಗಳು ಒಳ್ಳೆಯವರು- ಮುಗ್ಧರು -ಬಡವರು. ಮುಸ್ಲಿಮರು ಕೆಟ್ಟವರು-ಮೋಸಗಾರರು[ ಇದನ್ನು ತಿರುಗುಮುರುಗಾಗಿಯೂ ಓದಬಹುದು]. • ಹೆಣ್ಮಕ್ಕಳು ಮೈ ಕಾಣಿಸುವ ಬಟ್ಟೆ ಹಾಕ್ಕೊಳ್ಳುವುದರಿಂದಲೇ ಅನಾಚಾರಗಳು ಸಂಭವಿಸುತ್ತವೆ. • ದಡ್ಡರು ರಿಸರ್ವೆಶನ್ ನಿಂದ ಕಾಲೇಜು/ ಕೆಲಸಕ್ಕೆ ಸೇರುತ್ತಾರೆ. ಬುದ್ಧಿವಂತರ ಭವಿಷ್ಯಕ್ಕೆ ಕಲ್ಲು ಹಾಕ್ತಾರೆ. • ಯುವಜನರು ವಿದೇಶಗಳಿಗೆ ಓದಲು/ಕೆಲಸಕ್ಕೆ ಹೋಗಿ ಅಲ್ಲೆ ಸೆಟ್ಲ್ ಆಗಲು ಕಾರಣ ಭಾರತದಲ್ಲಿ ಮೀಸಲಾತಿ ಇರೋದು. • ಈಗಿನ ಮಕ್ಕಳು ಕೃತಘ್ನರು… ವಯಸ್ಸಾದ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸ್ತಾರೆ. • ಏನೇ ಹೇಳಿ.. ಕೊನೆಗಾಲದಲ್ಲಿ ಹೆಣ್ಣುಮಕ್ಕಳೇ ಅಪ್ಪ-ಅಮ್ಮನ್ನ ನೋಡ್ಕೊಳ್ಳೊದು. ಯಾಕಂದ್ರೆ ಗಂಡುಮಕ್ಕಳು ಅವರ ಹೆಂಡತಿಯ ತಾಳಕ್ಕೆ ತಕ್ಕಂತೆ ಕುಣಿತಾರೆ. ಪಟ್ಟಿ ದೀರ್ಘವಾಗಿದೆ ಬಿಡಿ….. ಇವುಗಳಲ್ಲಿ ಪ್ರತಿಯೊಂದು ಅಂಶವೂ ಸುಳ್ಳು ಅನ್ನುವ ನೂರಾರು ಉದಾಹರಣೆಗಳನ್ನು ನಾನು ನೋಡಿದ್ದೇನೆ. ನಮ್ಮ ಹೆಚ್ಚಿನ ಪೂರ್ವಾಗ್ರಹಗಳಿಗೆ ಕಾರಣ ನಮ್ಮಲ್ಲಿ ಬದಲಾವಣೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲದೆ ಇರುವುದು. ಹಳೆಯದೆಲ್ಲ ಚಂದ ಅನ್ನುವ ಅಂಧವಿಶ್ವಾಸ- ಹೊಸದೆಲ್ಲ ಅಪಾಯಕಾರಿ ಅನ್ನೋ ಭಯ ನಮ್ಮಲ್ಲಿ ಆಳವಾಗಿ ಬೇರು ಬಿಟ್ಟಿರುತ್ತದೆ. ಅದಕ್ಕೆ ಸರಿಯಾಗಿ ನಮ್ಮ ಸುತ್ತ ಮುತ್ತ ಒಂದೆರಡು ಘಟನೆಗಳು ನಡೆಯುತ್ತವೆ. ತಕ್ಷಣ ನಮ್ಮ ಮನಸ್ಸಿಗೆ ಅನುಕೂಲ ಅನ್ನಿಸಿವಂಥದ್ದನ್ನು ನಾವು ಸತ್ಯ ಅಂತ ನಿರ್ಧಾರ ಮಾಡಿಬಿಡುತ್ತೇವೆ. ಮನೆಯವರನ್ನು ಅಕ್ಕರೆಯಿಂದ ಕಾಣುವ ಅಸಂಖ್ಯಾತ ಸೊಸೆಯರು ಇದ್ದಾರೆ. ಕಾಯಿಲೆಗಳಿಗೆ ಹಳ್ಳಿ-ಪಟ್ಟಣಗಳ ಹಂಗಿಲ್ಲ . ಮನಸ್ಸಿನ ದುಷ್ಟತೆ , ಕ್ರೂರತೆ ಚರ್ಮದ ಬಣ್ಣವನ್ನು , ಆರ್ಥಿಕ ಸ್ಥಿತಿಯನ್ನು ಮೀರಿದ್ದು ಅಲ್ಲವೇ ?. ಸಂಗಾತಿಯ ಆಯ್ಕೆ ಮನುಷ್ಯನ ಸ್ವಭಾವಕ್ಕೆ ಸೇರಿದ್ದು . ಸ್ವಂತ ಅಭಿಪ್ರಾಯವನ್ನು ಆಧರಿಸುವವರು ಪ್ರೇಮವಿವಾಹದ ಸಾಹಸ ಮಾಡ್ತಾರೆ. ಕುಟುಂಬದ ಅಭಿಪ್ರಾಯವೇ ತನ್ನದು ಅಂತ ನಂಬಿರುವವರು ಮನೆಯವರ ಮಾರ್ಗದರ್ಶನದಲ್ಲೆ ಸಂಗಾತಿಯ ಆಯ್ಕೆ ಮಾಡ್ತಾರೆ. ಇದಕ್ಕೂ ಉನ್ನತ ವಿದ್ಯಾಭ್ಯಾಸಕ್ಕೂ ಎಲ್ಲಿದೆ ಸಂಬಂಧ? ಮನೆಯಲ್ಲಿ ಎಲ್ಲರೂ ಕೂಡಿ ಕೆಲಸ ಹಂಚಿಕೊಂಡರೆ, ಮನಸ್ತಾಪಗಳು ಬಂದಾಗ ಮೌನವಾಗಿದ್ದರೆ ಅದು ಪ್ರಬುದ್ಧತೆ- ಘನತೆಯೇ ಹೊರತು ಗುಲಾಮಗಿರಿ ಅಲ್ಲ. ಇನ್ನು ಡೈವೋರ್ಸ್ ಸಂಬಳ, ಡಿಗ್ರಿ ,ಜಾತಿಗಳನ್ನು ದಾಟಿದ ಒಂದು ಸವಾಲು. ಅದಕ್ಕೆ ಎಲ್ಲರೆದುರು ಹೇಳಿಕೊಳ್ಳಲಾಗದ , ಅವರದ್ದೇ ಆದ ವೈಯಕ್ತಿಕ ಕಾರಣಗಳಿರುತ್ತವೆ. ಹೆಚ್ಚಿನ ಸಂದರ್ಭದಲ್ಲಿ ಅದು ಸಮಸ್ಯೆಗೆ ಉತ್ತಮ ಪರಿಹಾರ ಕೂಡಾ. ಇನ್ನು ಮನುಷ್ಯನ ಸ್ವಭಾವಕ್ಕೂ ಧರ್ಮಕ್ಕೂ ಎಲ್ಲಿದೆ ಸಂಬಂಧ? ಅಲ್ಲದೆ ಇಂಥ ದ್ವೇಷಗಳಿಂದ ಏನು ಉಪಯೋಗ ನಮಗೆ? ನನ್ನ ಮಗ Indian Institute of Science ನಲ್ಲಿ ಓದುತ್ತಿದ್ದಾಗ ಮೀಸಲಾತಿಯ ಪ್ರಯೋಜನ ಪಡೆದು ಅಲ್ಲಿಗೆ ಬರುತ್ತಿದ್ದ ಅನೇಕ ಸಹಪಾಠಿಗಳ ಬುದ್ಧಿವಂತಿಕೆಯ ಬಗ್ಗೆ ಮುಕ್ತವಾಗಿ ಪ್ರಶಂಸಿಸುತ್ತಿದ್ದ. ಏಶಿಯನ್ ವಿದ್ಯಾರ್ಥಿಗಳಿಗೆಂದೇ ಮೀಸಲಾಗಿದ್ದ ಒಂದು ವಿದೇಶೀ ಸ್ಕಾಲರ್ಶಿಪ್ ಅವನಿಗೆ B.Sc ಓದುತ್ತಿದ್ದಾಗ ಸಿಕ್ಕಿತ್ತು. ಮೀಸಲಾತಿಯ ಬಗ್ಗೆ ಕುಹಕವಾಡುವ ನಮಗೆ ಇದಕ್ಕೆ ಹೇಗೆ ಪ್ರತಿಕ್ರಿಯೆ ಕೊಡಬೇಕು ಅಂತನೇ ತಿಳಿಯಲಿಲ್ಲ. ಇನ್ನು ವಲಸೆ ಹೋಗುವುದು ನಮ್ಮ ನಾಗರಿಕತೆಯ ಅವಿಭಾಜ್ಯ ಅಂಗ. ಅಪ್ಪಟ ಕೃಷಿಕರಾಗಿದ್ದ ನನ್ನ ಪೂರ್ವಜರು ಕೂಡಾ ಮಹಾರಾಷ್ಟ್ರದ ಕರಾವಳಿಯಿಂದ ದಕ್ಷಿಣಕನ್ನಡದ ಹಳ್ಳಿಗಳಿಗೆ ವಲಸೆ ಬಂದವರು. ಈಗ ದೇಶಗಳ ಗಡಿ ದಾಟಿ ಹೋಗ್ತಾರೆ ಅದಕ್ಕೆ ಅವರ ಮಹತ್ವಾಕಾಂಕ್ಷೆ ಅಥವಾ ಸಾಹಸೀ ಪ್ರವೃತ್ತಿಯೇ ಕಾರಣ. ಇನ್ನೊಂದು ವಿಷ್ಯ ...ಕೆಲ ಒಳ್ಳೆಯ ಪೂರ್ವಾಗ್ರಹಗಳು ಇರುತ್ತವೆ • ಪರರಿಗೆ ಕೇಡು ಬಯಸಿದರೆ ಮುಂದೆ ಒಂದು ದಿನ ನಮಗೂ ಕೆಟ್ಟದಾಗುತ್ತದೆ. • ನಮ್ಮ ಕೆಲಸಗಳನ್ನೆಲ್ಲ ದೇವರು ಗಮನಿಸ್ತಾ ಇರ್ತಾನೆ. • ನಾವು ಮಾಡಿದ ಒಳ್ಳೆ ಕೆಲಸಗಳು ನಮ್ಮ ಕೈ ಬಿಡಲ್ಲ, ಮುಂದೆ ನಮ್ಮ ಮಕ್ಕಳಿಗೆ ಅವುಗಳ ಫಲ ಸಿಗತ್ತೆ. ಇತ್ಯಾದಿಗಳು ಇವುಗಳಿಂದ ನಮ್ಮ ಸಮಾಜಕ್ಕೆ ಅಪಾರ ಲಾಭವಿದೆ. ಇನ್ನು ಮೇಲೆ ಪಟ್ಟಿ ಮಾಡಿದ ಕೆಲವು ಸಾಮಾಜಿಕ ಕಂಟಕಗಳು. ಇವುಗಳಲ್ಲಿ ಸ್ವಲ್ಪ ಮಟ್ಟಿನ ಸತ್ಯ ಇದ್ದರೂ ಕೂಡಾ ಅವುಗಳ ಬದಲಾವಣೆ ದ್ವೇಷದಿಂದ, ಗೊಣಗಾಟದಿಂದ ಸಾಧ್ಯವಿಲ್ಲ. ಆದ್ದರಿಂದ ನಾವು ಪೂರ್ವಾಗ್ರಹಿಗಳಾಗುವ ಬದಲು ವಿಚಾರಾಗ್ರಹಿಗಳಾದ್ರೆ ಬದುಕಿದ್ರೆ ಜೀವನ ಹೆಚ್ಚು ಅರ್ಥಪೂರ್ಣ ಆಗಬಹುದು.

ಜನಿವಾರ

ಎಲ್ಲ ಹುಡುಗರು ಹೀಗೆ ಅಂತ ನಾನು ಹೇಳ್ತಿಲ್ಲ. ಆಧುನಿಕ ಜೀವನದ ಜೊತೆ ನಮ್ಮ ಸಂಪ್ರದಾಯಗಳನ್ನೂ ಅನುಸರಿಸುವ ಅನೇಕ ಯುವಕರಿದ್ದಾರೆ. ಅವರಿಗೆ , ಅವರ ತಂದೆತಾಯಿಗೆ ಜೈ ಅನ್ಲೇಬೇಕು . ಉಪನಯನ ಆದ ಹೊಸತರಲ್ಲಿ ಶಿಸ್ತಾಗಿ ದಿನಕ್ಕೆ 2 ಸಾರಿ ಸಂಧ್ಯಾವಂದನೆ ಮಾಡಿ , ಜನಿವಾರ , ನಾಮಗಳಿಂದ ವಿಭೂಷಿತನಾಗಿ ಶಾಲೆಗೆ ಹೋಗ್ತಿದ್ದ ನನ್ನ ಮಗನ ಸಂಧ್ಯಾವಂದನೆ,/ ಗಾಯತ್ರಿಜಪದ ಫ್ರಿಕ್ವೆನ್ಸಿ 10ನೇ ಕ್ಲಾಸಿಗೆ ಬರುವಷ್ಟರಲ್ಲಿ ದಿನಕ್ಕೊಮ್ಮೆ, PUC ಆಗುವಾಗ ವಾರಕ್ಕೊಮ್ಮೆ, ಕೊನೆಗೆ ಡಿಗ್ರಿಯಲ್ಲಿ "ನಾನು ಮಾಡಲ್ಲ... , ಜನಿವಾರ ಹಾಕಲ್ಲ" ಅನ್ನುವುದಕ್ಕೆ ಮುಟ್ಟಿತ್ತು. "ಸಂಧ್ಯಾವಂದನೆಗೆ ಸಮಯ- ಹಾಸ್ಟೆಲ್ ನಲ್ಲಿ ಜಾಗದ ನೆಪ ಏನೋ ಒಪ್ಕೊತೀನಿ . ಆದರೆ ಬಡಪಾಯಿ ಜನಿವಾರ ಮೈಮೇಲೆ ತನ್ನ ಪಾಡಿಗೆ ತಾನು ಇರತ್ತೆ..." ಅಂತ ನಾನು ಶುರು ಮಾಡೋದ್ರಲ್ಲಿದ್ದೆ . ಆ..ಏನು ಬಡಪಾಯಿನಾ .... ಅದರ ಕಷ್ಟ ನನಗೆ ಮಾತ್ರ ಗೊತ್ತು ..... 1. ಶರ್ಟು ಬನಿಯನ್ ಜೊತೆ ಹೊರಗೆ ಬರತ್ತೆ. 2.ಸ್ವಿಮ್ಮಿಂಗ್ ಪೂಲ್ ನಲ್ಲಿ ನೀರಲ್ಲಿ ಕಾಣೆ ಆಗತ್ತೆ. 3. ಮೊನ್ನೆ Badminton ನಲ್ಲಿ ಸೋತಿದ್ದೇ ಅದರಿಂದ ಗೊತ್ತಾ? service ಕೊಡುವಾಗ ಕೈ ಸಂದಿನಲ್ಲಿ ಇಳೀತು.. speed ಹೋಯ್ತು ... ಹೀಗೆ ಪಟ್ಟಿ ಉದ್ದವಾಗಿತ್ತು. ನಾನು ಸೋಲು ಒಪ್ಪಿಕೊಳ್ಳಲೇ ಬೇಕಾಯ್ತು !! ವೈದಿಕ ಆಚರಣೆಗಳಲ್ಲಿ ಅಪರೂಪಕ್ಕೆ ಪಾಲ್ಗೊಳ್ಳುವ ಇವತ್ತಿನ ಹುಡುಗರ ಬದುಕಲ್ಲಿ ಜನಿವಾರದ ಮಹತ್ತ್ವ ಏನು? ಜನಿವಾರಕ್ಕೆ ಆಧುನಿಕತೆಯ ಸ್ಪರ್ಶ ಕೊಡಬಹುದೇ?[ ಕೈಗೆ bracelet ನಂತೆ ಅಥವಾ ಕತ್ತಲ್ಲಿ ಸರದಂತೆ ಹಾಕ್ಕೊಂಡು style ಆಗಿರಬೇಕು].ಸಂಧ್ಯಾವಂದನೆ- ಜನಿವಾರದ ನಿಜವಾದ ಉದ್ದೇಶ -ಉಪಯೋಗವನ್ನು ಹುಡುಗರಿಗೆ ಮನದಟ್ಟು ಮಾಡುವುದು ಹೇಗೆ? ಧಾರ್ಮಿಕವಾಗಿ ಕಟ್ಟುಪಾಡುಗಳನ್ನು ವಿಧಿಸುವ ವ್ಯವಸ್ಥೆ ಇಲ್ಲದ ನಮ್ಮಂಥ ಸ್ವತಂತ್ರ ಸಮಾಜದಲ್ಲಿ ಕ್ರಮೇಣ ಸಂಧ್ಯಾವಂದನೆ-ಜನಿವಾರಗಳು ಕಾಣೆಯಾಗಿಬಿಡಬಹುದೇ? ಈಗಿನ ಮಕ್ಕಳು ತಮಗೆ ಸರಿ ಅನಿಸಿದ್ದನ್ನು ಮಾತ್ರ ಮಾಡುವವರು ಅಲ್ಲದೆ ತಪ್ಪು ಅನಿಸಿದ್ದನ್ನು ನೇರವಾಗಿ ಹೇಳುವವರು. ಅಲ್ಲದೆ ಸಂಸ್ಕೃತಿ-ಆಚರಣೆಗಳನ್ನು ಒತ್ತಾಯದಿಂದ ಮಾಡಿಸುವುದು ಕಷ್ಟ. ಮಾಡಿಸಬಾರದು ಕೂಡಾ .. ಈ ವಿಚಾರದಲ್ಲಿ practical-democratic-transparent ಪರಿಹಾರ ಯಾರಾದ್ರೂ ಕಂಡು ಕೊಂಡಿದ್ದಿರಾ?

“ ಅಮೂಲ್ಯಪಾಠ"

ಇಲ್ಲ .. ಇನ್ನು ಸುಮ್ನೆ ಇರಲಿಕ್ಕೆ ಆಗಲ್ಲ.. ಸರಿಯಾಗಿ lecturers ಬರಲ್ಲ.. lab ನಲ್ಲಿ ಬರೀ ಅವ್ಯವಸ್ಥೆ.. ಎಲ್ಲ ಮುಗಿಸಿ ಹಾಸ್ಟೆಲ್ ಗೆ ಬಂದ್ರೆ ಇಲ್ಲಿ ನೀರಿಲ್ಲ.. ಊಟ ಬಾಯಿಗಿಡಕ್ಕಾಲ್ಲ.. ಪ್ರಿನ್ಸಿಪಾಲ್ ಗೆ ಕಂಪ್ಲೆಂಟ್ ಮಾಡ್ಲೇಬೇಕು . ಕಾಲೇಜಿನ ಮೊದಲನೇ ವರ್ಷದಲ್ಲಿ ಇನ್ನೂ ಕಣ್ ಕಣ್ ಬಿಡುತ್ತಿದ್ದ ನಾವು ಮಹತ್ತ್ವದ ನಿರ್ಧಾರ ತೆಗೆದುಕೊಂಡ ಖುಶಿಯಲ್ಲಿ ಪ್ರಿನ್ಸಿಪಾಲ್ ರ ಕಡೆಗೆ ಹೊರಟೆವು. ಅಲ್ಲಿ ಮಾತಾಡುವುದು ಯಾರು? ಅನ್ನೊ ಮಿಲಿಯನ್ ಡಾಲರ್ ಪ್ರಶ್ನೆ ನಮ್ಮನ್ನು ನಿಲ್ಲಿಸಿತು. “ನೇರ-ದಿಟ್ಟ” ಅಂತ ಆಗ್ಲೇ [ಕು] ಖ್ಯಾತಿ ಪಡೆದಿದ್ದ ನನ್ನನ್ನು ಸರ್ವಾನುಮತದಿಂದ ಅಯ್ಕೆ ಮಾಡಿದ್ರು. ಇಲ್ಲಪ್ಪ..ನನಗಾಗಲ್ಲ ಅಂದೆ.. ಏ.. ನಾವೆಲ್ಲಾ ಇರ್ತೀವಲ್ಲ .. ನೀನು ಶುರುಮಾಡು.. ನಾವು ಮುಂದುವರಸ್ತೀವಿ ...ಅಂತ ಎಲ್ರೂ ಅಂದಾಗ ನಂಗೆ ಭಯಂಕರ ಉತ್ಸಾಹ ಬಂತು.. ಸರಿ .. ಅಲ್ಲಿಗೆ ಹೋದ್ರೆ ಅಲ್ಲಿ ಹೊರಗಡೆ ಕೂತಿದ್ದ ಅಟೆಂಡರ್ "ಸಾರ್ ..ಬಿಜಿಯಾಗಿದ್ದಾರೆ .. ಆಮೇಲೆ ಬನ್ನಿ" ಅಂದ . ಅವನಿಗೆ ಕ್ಯಾರೇ ಅನ್ನದೆ ಒಳಗೆ ನುಗ್ಗಿದ್ವಿ . ಪ್ರಿನ್ಸಿಪಾಲ್ ಏನೋ ಫೈಲ್ಸ್ ನೋಡ್ತಾ ಇದ್ದವರು What is going on here ? ಅಂದ್ರು. ನಾನು “ We want to talk to you immediately”. ಅಂದೆ . ಅವರು Not we … , say I …ಅನ್ನುತ್ತ ನಕ್ಕರು . ಹಿಂದೆ ತಿರುಗಿ ನೋಡ್ತೀನಿ!! ಯಾರೂ ಇಲ್ಲ . ನನಗೆ ಕಣ್ಣು ಕತ್ತಲಾದ ಅನುಭವ.... Lecturers .. Lab.. Water ... ಅಂತೆನೇನೋ ಬಡಬಡಿಸಿ ಹೊರಗೆ ಬಂದೆ. ಅಟೆಂಡರ್ ಕಣ್ಣು ಕೆಂಪು ಮಾಡ್ಕೊಂಡು ದುರುಗುಟ್ಟಿದ.. ನನ್ನ ಹಿಂದೆ ಬಂದವರು ಯಾರೂ ಅಲ್ಲಿ ಕಾಣಲಿಲ್ಲ!!!! ಆ ಕ್ಷಣದಲ್ಲಿ “ ಅಮೂಲ್ಯ” ವಾದ ನಾಯಕತ್ವದ ಪಾಠವೊಂದನ್ನು ಕಲಿತೆ. ನಾಯಕಿಯಾಗುವುದಕ್ಕೆ ತುಂಬಾ ತಯಾರಿ ಬೇಕು . ನಾನು ನಾಯಕತ್ವ ಯಾಕೆ ವಹಿಸಬೇಕು? ಅನ್ನುವ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಗೊತ್ತಿರಬೇಕು ..ನನ್ನ ಬುದ್ಧಿ ನನ್ನ ಕೈಲಿರಬೇಕು.... ಜಿಂದಾಬಾದ್ ಶಬ್ದವನ್ನು 'ಪಾಕಿಸ್ತಾನಕ್ಕೆ ಜೋಡಿಸಬೇಕಾ ಅಥವಾ ಹಿಂದುಸ್ತಾನಕ್ಕಾ?' ಅಂತ ಗೊಂದಲದಲ್ಲಿದ್ದ ಆ ಪುಟ್ಟಿ 30 ವರ್ಷಗಳ ಹಿಂದಿನ ಘಟನೆಯನ್ನು ನನಗೆ ನೆನಪಿಸಿದ್ಲು ...

Friday, 8 November 2019

ದೇವರ ಕೆಲಸ

ಅಂದು ನನ್ನ ಪರಿಚಿತರೊಬ್ಬರ ಮನೆಯಲ್ಲಿ ಗೃಹಪ್ರವೇಶ, ಮಗನ ಮುಂಜಿ ಇತ್ಯಾದಿ ಅನೇಕ ಶುಭಕಾರ್ಯಗಳು. ನನಗೆ ಯಾವುದೋ ಅನನುಕೂಲದಿಂದಾಗಿ ಹೋಗಲಾಗಲಿಲ್ಲ. ಕೆಲದಿನಗಳ ನಂತರ ಫೋನ್ ಮಾಡಿದೆ. ಬರಲಾಗದ್ದಕ್ಕೆ ಕ್ಷಮೆ ಕೇಳಿ, ಕಾರ್ಯಕ್ರಮ ಚೆನ್ನಾಗಾಯ್ತೇ? ಅಂದೆ. “ಎಲ್ಲವೂ ಚೆನ್ನಾಗಿ ನಡೀತು , ಆದ್ರೆ ಪುರೋಹಿತರಿಗೆ ಇಷ್ಟು ಕೊಡಬೇಕಾಗತ್ತೆ ಅಂತ ಗೊತ್ತಿರಲಿಲ್ಲ ನಂಗೆ. ಅಲ್ಲ.. .....ಐದು ಗಂಟೆ ಕಾರ್ಯಕ್ರಮ ...ಅಷ್ಟಕ್ಕೆ ಇಷ್ಟು ತಗೊಂಡ್ರು.” “ ಅವ್ರೇ ಪೂಜೆ ಸಾಮಾನು ತಂದಿದ್ರಾ?” “ ಹೌದು.. ತಯಾರಿ ಎಲ್ಲ ಅವ್ರದ್ದೆ.. ಆದ್ರೆ ಆ ಬತ್ತಿ-ಕರ್ಪೂರ-ಎಲೆ-ಸೊಪ್ಪು-ಕಡ್ಡಿ... ಗೆ ಇಷ್ಟೊಂದು ಚಾರ್ಜ್ ಮಾಡೋದಾ? ಇಷ್ಟಾಗಿ ಹಣ್ಣು, ತೆಂಗಿನಕಾಯಿ ನಮ್ದೇ ಗೊತ್ತಾ!!” ನಮ್ಮ ಮನೆಯ ಕಾರ್ಯಕ್ರಮ, ನಾವಾಗೇ ಹೋಗಿ ಪುರೋಹಿತರನ್ನು ಕರೀತೀವಿ, ಅದರಿಂದ ಬರಬಹುದಾದ ಶುಭಫಲಗಳೂ ನಮಗೇನೇ. ಆದರೆ ಕೊನೆಗೆ ಪುರೋಹಿತರ ಬಗ್ಗೆ ಕೊಂಕು ಮಾತು!! ಇದ್ಯಾಕೋ ಸರಿ ಇಲ್ಲ ಅನಿಸಿ “ಹೋಗ್ಲಿ ಬಿಡಿ .. ದುಡ್ಡು ಕೊಟ್ಟಾಯ್ತಲ್ಲ” ಅಂತ ಹೇಳಿ ಫೋನ್ ಇಟ್ಟೆ. ಒಂದು ಕಾಲದಲ್ಲಿ ವೈದಿಕ ಜ್ಞಾನ, ಜೀವನಕ್ರಮ ನಮ್ಮ ದಿನಚರಿಯೇ ಆಗಿತ್ತು. ಆದರೆ ಇಂದು ನಾವೆಲ್ಲ ಬೇರೆ ಬೇರೆ ಉದ್ಯೋಗಗಳಲ್ಲಿರುವುದರಿಂದ ಹೆಚ್ಚಿನವರ ಧಾರ್ಮಿಕತೆ ದೇವರ ಫೋಟೋಗೆ ಹೂ- ಸ್ತೋತ್ರ-ನಮಸ್ಕಾರಕ್ಕೆ ಸೀಮಿತವಾಗಿದೆ. ಇರಲಿ ಕಾಲದ ಜೊತೆ ಸಾಗುವುದರಲ್ಲಿ ತಪ್ಪಿಲ್ಲ. ಆದರೆ ನಮ್ಮ ವೃತ್ತಿಯ ಬಗ್ಗೆ ಹೇಗೆ ನಾವು ಹೆಮ್ಮೆ ಪಡುತ್ತೇವೋ ಹಾಗೇ ಪುರೋಹಿತಿಕೆ ವೃತ್ತಿಯ ಬಗ್ಗೆಯೂ ನಾವು ಸಮಾನ ಗೌರವ ತೋರಿಸಬೇಕು ಅಲ್ವೇ? ಸೂಪರ್ ಮಾರ್ಕೆಟ್, ಹೋಟೆಲ್, ಬಾರು, ಬಟ್ಟೆ ಅಂಗಡಿಯವರು ನಮ್ಮ ವ್ಯಾವಹಾರಿಕ-ಲೌಕಿಕ ಆಸೆ, ಅವಶ್ಯಕತೆಗಳನ್ನು ಪೂರೈಸಿದಾಗ ನಾವು ಯಥೇಚ್ಛವಾಗಿ ದುಡ್ಡು ಕೊಡುತ್ತೇವೆ. ಹಾಗೆಯೇ ಪುರೋಹಿತರು ನಮ್ಮ ಧಾರ್ಮಿಕ-ಮಾನಸಿಕ ಅವಶ್ಯಕತೆಯನ್ನು ಪೂರೈಸುತ್ತಾರೆ. ಅಂದ ಮೇಲೆ ಅವರ ಬಗ್ಗೆ ಯಾಕೀ ಅಸಹನೆ? ನನಗನ್ನಿಸುವ ಮಟ್ಟಿಗೆ ಧಾರ್ಮಿಕ ವಿಚಾರಗಳಲ್ಲಿ ನಮ್ಮಲ್ಲಿ ಸ್ಪಷ್ಟತೆ ಇಲ್ಲ. ಆರ್ಥಿಕ ಸ್ಥಿತಿ ಚೆನ್ನಾಗಿರದ ಕೆಲ ಮನೆಗಳು ಹಿಂದಿನವರು ನಡೆಸಿಕೊಂಡು ಬಂದ ಚೌತಿ-ನವರಾತ್ರಿ-ಬೊಡ್ಡಣ ಇತ್ಯಾದಿಗಳನ್ನು ನಡೆಸಲು ಏದುಸಿರು ಬಿಡುತ್ತಾರೆ. ಆದರೆ “ಬೇರೆಯವರು ಏನಂತಾರೋ? ದೇವರು ಶಾಪ ಕೊಟ್ರೆ?” ಇತ್ಯಾದಿ ಮಾನಸಿಕ ತಲ್ಲಣಗಳಿಂದ ಸಾಲ ಮಾಡಿಯಾದ್ರೂ ಕಾರ್ಯಕ್ರಮ ನಡೆಸುತ್ತಾರೆ. ಅವರ ಸಿಟ್ಟಿಗೆ ನಿರಪರಾಧಿ ಪುರೋಹಿತ ಬಲಿಯಾಗ್ತಾನೆ. ಇನ್ನು ಮದುವೆ-ಮುಂಜಿ-ಗೃಹಪ್ರವೇಶಗಳು ನಮ್ಮ ಪ್ರತಿಷ್ಠೆಯ ಸಂಕೇತಗಳು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಕೊನೆಯಲ್ಲಿ ಕೊಡುವ ಪುರೋಹಿತರ ದಕ್ಷಿಣೆ ನಮ್ಮ ಅಸಹನೆಗೆ ಕಾರಣವಾಗುತ್ತದೆ. ಅಲ್ಲದೆ ಕೆಲ ಪುರೋಹಿತರು ತಮ್ಮ ವೃತ್ತಿಯ ಘನತೆಗೆ ತಕ್ಕುದಾಗಿ ನಡೆದುಕೊಳ್ಳುವುದಿಲ್ಲ. ಮಂತ್ರಗಳ ಅರ್ಥ, ಕೈಂಕರ್ಯದ ಮಹತ್ತ್ವ ಗೊತ್ತಿಲ್ಲದ, ಪುರೋಹಿತನ ಆದರ್ಶಗಳಿಲ್ಲದ ಇಂಥವರು ಆ ವೃತ್ತಿಗೆ ಕಪ್ಪು ಚುಕ್ಕೆಗಳಾಗ್ತಾರೆ. ಶಾಲೆಗೆ ಸದಾ ರಜೆ ಹಾಕುವ, ಮಕ್ಕಳಿಗೆ ಹೊಡೆಯುವ, ದುರಭ್ಯಾಸಗಳಿರುವ ಟೀಚರ್ ಗಳನ್ನು ನಾವು ಹೇಗೆ ದ್ವೇಷಿಸುತ್ತೇವೋ ಹಾಗೆಯೇ * ದೈಹಿಕ ಸ್ವಚ್ಛತೆ ಇರದ, ಅಲ್ಲಲ್ಲಿ ಉಗುಳುವ, ಅನಗತ್ಯ ಸುದ್ದಿಗಳನ್ನು ಮಾತಾಡ್ತಾ ನಗುವ , ಮಂತ್ರ ಹೇಳ್ತಾ ಮೊಬೈಲ್ ನಲ್ಲಿ ಮಾತಾಡುವ ಪುರೋಹಿತರನ್ನೂ ಜನ ಇಷ್ಟಪಡುವುದಿಲ್ಲ. ಪುರೋಹಿತಿಕೆ ಕೂಡಾ ಬೇರೆ ಉದ್ಯೋಗಗಳಂತೆ ಒಂದು ಸೀರಿಯಸ್ ಪ್ರೊಫೆಶನ್. *ಪುರೋಹಿತರು ಸ್ವಚ್ಛ-ಇಸ್ತ್ರಿ ಹಾಕಿದ ಪಂಚೆ,ಶಲ್ಯಗಳನ್ನು ಹಾಕಿಕೊಂಡು ಸ್ಮಾರ್ಟ್ ಆಗಿ ಬರಬೇಕು. ಪೂಜೆ ಮುಗಿಯುವವರೆಗೂ ಮೊಬೈಲನ್ನು ಸೈಲೆಂಟ ಇಡಬೇಕು. ಹಿತ ಮಿತವಾಗಿ ಊಟ ಮಾಡಿ ಜನರಿಗೆ ಮಾದರಿ ಆಗಬೇಕು. ಮಂತ್ರಗಳನ್ನು ಸ್ಪಷ್ಟವಾಗಿ ಹೇಳಿ ಪೂಜೆಯ ಮಹತ್ತ್ವವನ್ನೂ , ಹಿತವಚನಗಳನ್ನೂ ಆ ಕುಟುಂಬಕ್ಕೆ ಹೇಳಬೇಕು. ಅದಕ್ಕಾಗಿ ಅವರು ನಿರಂತರ ಅಧ್ಯಯನ ಮಾಡಬೇಕು.[ ನಮ್ಮ ವೈದಿಕ ಸಂಸ್ಕೃತ ಸಾಹಿತ್ಯವನ್ನು ಓದಲು ಒಂದು ಜೀವಮಾನ ಸಾಲದು ಗೊತ್ತೇ? ಅದೊಂದು ಮಹಾಸಮುದ್ರ . ನಾವೇನಿದ್ದರೂ ಒಂದು ಬೊಗಸೆ ನೀರು ಹಿಡಿದು ನಾನು ತುಂಬ ಕಲಿತಿದ್ದೇನೆ ಅನ್ನಬೇಕು ಅಷ್ಟೇ!! ] ಇಂಥ ಪುರೋಹಿತರನ್ನು ನೋಡಿದಾಗ ಜನರೂ ಗೌರವದಿಂದ ದಕ್ಷಿಣೆ ಕೊಡುತ್ತಾರೆ. ಪುರೋಹಿತಿಕೆಯನ್ನು ವೃತ್ತಿಯಾಗಿ ಸ್ವೀಕರಿಸಿದ ಮೇಲೆ ಇಂಥ ಕಾರ್ಯಕ್ರಮಕ್ಕೆ ಇಷ್ಟು ದಕ್ಷಿಣೆ ಎಂದು ಸ್ಪಷ್ಟವಾಗಿ ಮೊದಲೇ ಹೇಳಬೇಕು. “ನೋಡಿ.. ನೀವು ಯೋಚಿಸಿ ಕೊಡಿ/ ಆಮೇಲೆ ಹೇಳ್ತೇನೆ/ ನಾನು ದುಡ್ಡಿಗೋಸ್ಕರ ಪುರೋಹಿತಿಕೆ ಮಾಡಲ್ಲ ...” ಇತ್ಯಾದಿಯಾಗಿ ನುಣುಚಿಕೊಳ್ಳುವುದರಿಂದ ತೊಂದರೆಯೇ ಹೆಚ್ಚು . ಆಯಾ ಊರಿನ ಎಲ್ಲ ಪುರೋಹಿತರು ಸೇರಿ ಒಮ್ಮತದ ತೀರ್ಮಾನ ಕೈಗೊಳ್ಳಬಹುದು. ಆಗ ಮನೆ ಯಜಮಾನರು ದುಡ್ಡನ್ನು ಹೊಂದಿಸಲು ಅನುಕೂಲವಾಗುತ್ತದೆ. ಪೂಜೆಗಳನ್ನು ಮಾಡಿಸುವವರು ಕೂಡಾ ಮನ:ಪೂರ್ವಕವಾಗಿ ದಕ್ಷಿಣೆ ಕೊಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪೂಜೆಗಳು ನಮ್ಮ ಜೀವನದ ಭಾಗಗಳು. ಇಷ್ಟವಿಲ್ಲದಿದ್ದರೆ ಮಾಡಬೇಡಿ. ಇದರಲ್ಲೇನೂ ಒತ್ತಾಯವಿಲ್ಲ. ಸ್ವಲ್ಪ ಗಟ್ಟಿ ಮನಸ್ಸು ಬೇಕಷ್ಟೇ. ಅಥವಾ ಆಡಂಬರ ಕಡಿಮೆ ಮಾಡುವ ಬಗ್ಗೆ ಯೋಚಿಸಿ. ನಮ್ಮ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವಿಶಿಷ್ಟ ಹಾಗೂ ಅರ್ಥಪೂರ್ಣ. ಅವುಗಳನ್ನು ಚೆನ್ನಾಗಿ ನೆರವೇರಿಸಲು ಪುರೋಹಿತರು ಮತ್ತು ಯಜಮಾನರ ಮಧ್ಯೆ ಸಹಯೋಗ ಬೇಕೇ ಬೇಕು. ಪೂಜೆಗಳನ್ನು , ಅನ್ನದಾನವನ್ನು ಮಾಡುತ್ತ ಸನಾತನ ಚಿಂತನೆಗಳನ್ನು ಉಳಿಸೋಣ... *ಪುರೋಹಿತರನ್ನು ಅಥವಾ ಭಕ್ತರನ್ನು ನಿಂದಿಸುವುದು ನನ್ನ ಉದ್ದೇಶ ಅಲ್ಲ. ಇಬ್ಬರ ಬಗ್ಗೆಯೂ ನನಗೆ ಅಪಾರ ಗೌರವವಿದೆ. ನನ್ನ ಶಬ್ದಗಳ ಬಗ್ಗೆ ಕ್ಷಮೆ ಇರಲಿ..

Friday, 12 April 2019

ಈ ಸುಂದರ ತರುಣಿ ಮಣಿಪಾಲದ ಕಸ್ತೂರ್ ಬಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ. ಹೆಸರು Trinetra Haldar Gummaraju ತ್ರಿನೇತ್ರಾ ಗುಮ್ಮರಾಜು.... So..What ... ಅನ್ಬೇಡಿ. ೪ ವರ್ಶಗಳ ಹಿಂದೆ ಅಂಗದ್ ಗುಮ್ಮರಾಜು ಆಗಿ ಕಾಲೇಜು ಸೇರಿದ್ದ ಹುಡುಗ, ಮುಂದಿನವರ್ಷ ಡಾ. ತ್ರಿನೇತ್ರಾ ಗುಮ್ಮರಾಜು ಅನ್ನೋ ಹೆಸರಲ್ಲಿ ವಿದ್ಯಾಭ್ಯಾಸ ಮುಗಿಸಿ , ಕರ್ನಾಟಕದ ಮೊದಲ ಲಿಂಗಪರಿವರ್ತಿತ ವೈದ್ಯೆ ಎಂಬ ಇತಿಹಾಸ ನಿರ್ಮಿಸಲಿದ್ದಾಳೆ. ಹೌದು.. ಅಂಗದ್ ಗುಮ್ಮರಾಜು ನಮ್ಮ ಶಾಲೆಯ ವಿದ್ಯಾರ್ಥಿ. "ನಾನು ಹುಡುಗ ಅಲ್ಲ... ಹುಡುಗಿ ಕಣ್ರೋ..." ಅಂತ ದಿಟ್ಟತನದಿಂದ ಹೇಳುತ್ತ ಶಾಲೆಯಲ್ಲಿ ಅಡ್ಡಾಡುತ್ತಿದ್ದ ಇವನನ್ನು ಕಂಡಾಗ ನನಗೆ "ಬಾಯಿಗೆ ಬಂದಿದ್ದೆಲ್ಲ ಮಾತಾಡ್ತಾನಲ್ಲ...ಏನಪ್ಪ ಇವ್ನು....". ಅಂತ ಕಸಿವಿಸಿಯಾಗುತ್ತಿತ್ತು. ಮುಂದೆ ಸಿಇಟಿಯಲ್ಲಿ ೧೬೩ನೇ ರಾಂಕ್ ಪಡೆದು ವೈದ್ಯಕೀಯ ಕಾಲೇಜಿಗೆ ಸೇರಿದ ಅಂಗದ್ ಬಾಯಲ್ಲಿ ಹೇಳಿದ್ದನ್ನು ಕಾರ್ಯರೂಪಕ್ಕೆ ತಂದ. ಬ್ಯಾಂಕಾಕ್ ನ ಆಸ್ಪತ್ರೆಯಲ್ಲಿ ಹೆಣ್ಣಿನ ಅಂಗಾಂಗಗಳಿಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ತ್ರಿನೇತ್ರಾ ಆಗಿಬಿಟ್ಟ. ಆಪರೇಶನ್ ಗೆ ಮೊದಲೇ ವೀರ್ಯ ಬಾಂಕ್ ನಲ್ಲಿ ಸುರಕ್ಷಿತವಾಗಿ ಇಟ್ಟ ತನ್ನದೇ ವೀರ್ಯದಿಂದ ಬಾಡಿಗೆ ತಾಯಿಯ ಮೂಲಕ ತನ್ನ ಮಗುವನ್ನು ಪಡೆಯುವ ಮುಂದಾಲೋಚನೆಯನ್ನು ಮಾಡಿದ್ದಾಗಿದೆ. ನೆಗಡಿಗೆ ಔಷಧಿ ತರಲು ಆಸ್ಪತ್ರೆಗೆ ಹೋಗಿದ್ದೆ ... ಅನ್ನುವಷ್ಟು ಸರಳವಾಗಿ ತನ್ನ ಲಿಂಗಪರಿವರ್ತನೆಯ ಕತೆಯನ್ನು ಅವನು ಹೇಳುವಾಗ ನನಗೆ ಹೆಮ್ಮೆ, ಸಂಕಟ, ದು:ಖ, ಅಚ್ಚರಿ ಎಲ್ಲಾ ಒಟ್ಟೊಟ್ಟಿಗೇ ಆಯಿತು. ಟ್ರಾನ್ಸ್ ಜೆಂಡರ್ಸ್ , ಗೇ , ಲೆಸ್ಬಿಯನ್ ಅನ್ನೋ ಶಬ್ದಗಳನ್ನೆಲ್ಲ ಕೇಳುವಾಗ ನಾವೆಲ್ಲ ಮುಖ ಕಿವಿಚ್ತೀವಿ ಅಲ್ವೇ? ಯಾಕೆಂದ್ರೆ ವಿಕಾರವಾಗಿ ಅಲಂಕಾರ ಮಾಡಿಕೊಂಡು, ಬೀದಿಯಲ್ಲಿ ಚಪ್ಪಾಳೆ ತಟ್ಟುತ್ತ ಜನರನ್ನು ಪೀಡಿಸುವ ಭಿಕ್ಷುಕರು ನಮ್ಮ ಕಣ್ಮಂದೆ ಬರ್ತಾರೆ... ನಮ್ಮ ಸಮಾಜದ ಚೌಕಟ್ಟಿನಲ್ಲಿ ಎಲ್ಲಿಯೂ ಸಲ್ಲದವರು ಇವರು. ಇವರೆಲ್ಲರೂ ನಮ್ಮೆಲ್ಲರ ಥರನೇ ಸಾಮಾನ್ಯ ವ್ಯಕ್ತಿಗಳು. ಆದರೆ ಕೆಲ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿ ಅವರ ದೇಹದಲ್ಲಿನ Sex [ ಲಿಂಗ] ಮತ್ತು ಮನಸ್ಸಿನ Gender [ ಲೈಂಗಿಕ ಭಾವನೆ]ಗಳ ಮಧ್ಯೆ ಹೊಂದಾಣಿಕೆ ಇರುವುದಿಲ್ಲ. ದೇಹ ಹುಡುಗ ಅನ್ನುತ್ತೆ, ಮನಸ್ಸು ಹುಡುಗಿ ಅನ್ನುತ್ತೆ..... ಒಂದು ಕ್ಷಣ ನಿಮ್ಮ ಮನಸ್ಸಿನಲ್ಲಿ ಈ ಸ್ಥಿತಿ ಕಲ್ಪಿಸಿಕೊಳ್ಳಿ.. ಎಂಥ ನರಕ ಅಲ್ವೇ? ಹಾಗಂತ ಅದು ಅವರ ತಪ್ಪಲ್ಲವಲ್ಲ. ನನಗೆ ಸಿಹಿತಿಂಡಿ ಇಷ್ಟ... ನಿಮಗೆ ಖಾರತಿಂಡಿ ಇಷ್ಟ..ನನಗೆ ಹಸಿರುಬಣ್ಣ ಇಷ್ಟ.. ನಿಮಗೆ ಹಳದಿ ... ಅನ್ನುವಷ್ಟೇ ಸರಳವಾದ ಮನಸ್ಸಿನ ವೈವಿಧ್ಯತೆ ಇದು. ಆದರೆ ನಮ್ಮ ವ್ಯವಸ್ಥೆಯಲ್ಲಿ ಅವರ ಇಷ್ಟಗಳಿಗೆ ಬೆಲೆ ಇಲ್ಲ. ತ್ರಿನೇತ್ರಾಳ ತಂದೆ-ತಾಯಿ, ಕುಟುಂಬದವರು ಇದನ್ನು ಒಪ್ಪಿಕೊಂಡು ಅವಳಿಗೆ ಜೀವನ ಕೊಟ್ಟರು. ಆದರೆ ಎಷ್ಟು ಜನರಿಗೆ ಈ ಭಾಗ್ಯವಿದೆ? ಮನೆಯಲ್ಲಿ ಅವರುಗಳು ಶಾಪಗ್ರಸ್ತರು.. ಶಾಲೆಯಲ್ಲಿ ಹಾಸ್ಯದ ವಸ್ತುಗಳು, ಮುಂದೆ ಅವರ ಜೊತೆ ಅವರ ಹೆಂಡತಿ/ಗಂಡನನ್ನೂ ಮದುವೆ ಎಂಬ ಭೀಕರ ನರಕಕ್ಕೆ ತಳ್ಳುವ ಜನ ನಾವು!! ಇದು ಯಾವುದೇ ರೀತಿಯ ಕಾಯಿಲೆ ಅಲ್ಲ.. ಸದ್ಯಕ್ಕೆ ಇದಕ್ಕೆ ಕಾರಣಗಳು ತಿಳಿದಿಲ್ಲ...ಮಗು ಹುಟ್ಟುವ ಮುಂಚೆ ಸ್ಕಾನಿಂಗ್ ನಲ್ಲಿ ಇದು ತಿಳಿಯುವುದಿಲ್ಲ. ನಮ್ಮ ನಿಮ್ಮಂತೆ ಓದಿ, ಕೆಲಸಕ್ಕೆ ಸೇರಿ, ಅವರ ಮನಸ್ಸಿಗೆ ಸೂಕ್ತವಾದ ಸಂಗಾತಿಯ ಜೊತೆ ಬದುಕುವುದನ್ನು ಮಾತ್ರ ಕೇಳುವ ಅವರಿಗೆ ನಮ್ಮ ದೇಶದ ಕಾನೂನಿನಲ್ಲೂ ರಕ್ಷಣೆ ಇಲ್ಲ!! ಇರಲಿ... ಇವತ್ತಲ್ಲ ನಾಳೆ ನಾವು ಖಂಡಿತ ಬದಲಾಗುತ್ತೇವೆ.. ಯಾಕೆಂದರೆ ಪರಿವರ್ತನೆ ಜಗದ ನಿಯಮ ಅನ್ನೋ ನಿತ್ಯಸತ್ಯದಲ್ಲಿ ನನಗೆ ಇನ್ನಿಲ್ಲದ ನಂಬಿಕೆ. ಈ ಬಗ್ಗೆ ನಿಮಗೆ ಪ್ರಶ್ನೆಗಳಿದ್ದರೆ ತ್ರಿನೇತ್ರಾಳಲ್ಲಿ ನಿಸ್ಸಂಕೋಚವಾಗಿ ಕೇಳಬಹುದು. ಭಾರತದಲ್ಲಿ ಸದ್ಯಕ್ಕೆ ಡೆಲ್ಲಿ-ಮುಂಬೈನಲ್ಲಿ ಲಿಂಗ ಪರಿವರ್ತನೆಯ ಕೆಲ ಆಸ್ಪತ್ರೆಗಳಿವೆ. ಆದರೆ ಹೊರದೇಶಗಳಲ್ಲಿ ಅತ್ಯುತ್ತಮ ಆಸ್ಪತ್ರೆಗಳಿವೆ. ಲಿಂಗ ಪರಿವರ್ತನೆಗೆ ವಯಸ್ಸಿನ ನಿರ್ಬಂಧ ಇಲ್ಲ. 18 ತುಂಬಿದ್ದರೆ ಆ ವ್ಯಕ್ತಿಯ ಒಪ್ಪಿಗೆ ಸಾಕು. ಕಿರಿಯರಿಗೆ ತಂದೆ-ತಾಯಿಯ ಸಹಿ ಬೇಕು . You can listen to Ted talk of Trinetraa in this link. https://www.youtube.com/watch?v=VRKiCpcJ-ag&fbclid=IwAR0il0B-kQ7YnzFU2b2KFQnRnT352AMqqkL1Nn2VOx68oQkE__FhpXOUxEU https://timesofindia.indiatimes.com/city/bengaluru/trinetra-set-to-be-ktakas-first-transwoman-medico/articleshow/68768637.cms?fbclid=IwAR0CiJMyDoTI98n6AI7GW28BU7XhLwOQIFA9eGPKDMgi1bOJKsmzfkJoqsE

Tuesday, 2 October 2018

Abolishing Section 497 - Green signal to adultery???

Recently India was ATTACKED by none other than supreme court .. Yes There were few judgments like abolishing article 377, 497 and opening the doors of temple to all females…. OMG!!!… few felt like glorious Indian culture breathed its last!! No problem… each one has the right to have opinions. But when I spoke to my student Sushmitha Viswanathan currently a law student, I was surprised at the way the media interprets the news!! First let us see what does Section 497 in The Indian Penal Code says.. Adultery. —Whoever has sexual intercourse with a person who is and whom he knows or has reason to believe to be the wife of another man, without the consent or connivance of that man, such sexual intercourse not amounting to the offence of rape, is guilty of the offence of adultery, and shall be punished with imprisonment of either description for a term which may extend to five years, or with fine, or with both. In such case the wife shall not be punishable as an abettor. So women are not prosecuted for adultery, only men are. It doesn’t punish women because It treats woman as property of husband . If husband’s possession is used by some random person without his permission, that person shall be punished . i.e. a person having intercourse with someone else’s wife without that person’s consent , will be sent to jail because he has used another man’s property without asking him. But if he takes permission then it is not crime of adultery. So consent of husband is most important here. [ see second line] . However if wife has not consented then it is called as rape. Also it gives permission to the husband to have intercourse with any unmarried woman or a widow. Because adultery is held only against married woman . This law is silent about unmarried woman or a widow, because they are not anyone’s property . women become just possessions when they get married!! So we need a better law which treats men and women alike, punishes them alike or does not punish them alike. But court never said women can happily engage in to multiple relationships .There are other sections to handle the issues which arise due to adultery ….Only this section is invalid now. ಕೆಲ ದಿನಗಳ ಹಿಂದೆ ನಮ್ಮ ದೇಶದಲ್ಲಿ ಆಗಬಾರದ್ದು ಆಗಿ ಹೋಯ್ತು..... “ಸಂಸ್ಕೃತಿ, ವೈವಿಧ್ಯತೆ ಮಣ್ಣುಪಾಲಾಯ್ತು.. ವ್ಯಭಿಚಾರ-ಸಲಿಂಗಕಾಮಕ್ಕೆ ರಾಜಮರ್ಯಾದೆಯ ಸ್ವಾಗತ ಸಿಕ್ತು..ಅದೂ ಯಾರಿಂದ ?? ಸುಪ್ರೀಂ ಕೋರ್ಟ್ ನಿಂದ!!” ಅಂತ ಎಲ್ಲೆಲ್ಲೂ ತಲ್ಲಣ ಸೃಷ್ಟಿಯಾದ್ದು ನಿಮಗಿನ್ನೂ ನೆನಪಿರಬಹುದು ಅಲ್ವೇ....ಪತ್ರಿಕೆಗಳಲ್ಲಿ ಓದಿದಾಗ Section 497 ವಿಚಾರದಲ್ಲಿ ನಂಗೂ ಒಂದು ಕ್ಷಣ ಇದೇನಪ್ಪ ಹೀಗೆ.. ಅಂತ ಅನಿಸಿದಾಗ ಈಗ ಕಾನೂನು ಓದುತ್ತಿರುವ ನನ್ನ ಹಳೆ ಸ್ಟೂಡೆಂಟ್ ಸುಶ್ಮಿತಾಗೆ ಫೋನಾಯಿಸಿದೆ.. ಓ.. ಹೀಗಾ ಇದು ಅಂತ ಸತ್ಯ ಗೊತ್ತಾದ ಅನಿಸಿದ್ದು ಮಾಧ್ಯಮಗಳು ಇಂಥ ಸೂಕ್ಷ್ಮ ವಿಚಾರಗಳನ್ನು ಪ್ರಕಟಿಸುವಾಗ ಸ್ವಲ್ಪ ಹುಷಾರಾಗಿ ಪದಗಳನ್ನು ಬಳಸಬೇಕು. ಜನರ ಗಮನ ಸೆಳೀಬೇಕು ಅಂತ ಸತ್ಯದ ಸಮಾಧಿ ಮೇಲೆ ಸುಳ್ಳಿನ ಅರಮನೆ ಕಟ್ಟೋದನ್ನ ನಿಲ್ಲಿಸಬೇಕು... Section 497 ವ್ಯಭಿಚಾರದ ವ್ಯಾಖ್ಯಾನವನ್ನು ಈ ರೀತಿ ಕೊಡುತ್ತದೆ. “ ಒಬ್ಬ ಹೆಂಗಸು ಇನ್ನೊಬ್ಬನ ಪತ್ನಿ ಎಂದು ತಿಳಿದಿದ್ದರೂ, ಆಕೆಯ ಪತಿಯ ಒಪ್ಪಿಗೆ ಇಲ್ಲದೆ , ಆಕೆಯ ಜೊತೆ ಲೈಂಗಿಕ ಸಂಬಂಧವನ್ನು ಒಬ್ಬ ಗಂಡಸು ಹೊಂದಿದ್ದರೆ ಮತ್ತು ಇದಕ್ಕೆ ಆಕೆಯ ಒಪ್ಪಿಗೆ ಇದ್ದರೆ ಅದನ್ನು ವ್ಯಭಿಚಾರ ಎಂದು ಪರಿಗಣಿಸಲಾಗುವುದು. ಲೈಂಗಿಕ ಸಂಬಂಧವನ್ನು ಹೊಂದಿದ ಗಂಡಸಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು. ಆದರೆ ಲೈಂಗಿಕ ಸಂಬಂಧವನ್ನು ಹೊಂದಿರುವ ಆ ಹೆಂಗಸನ್ನು ವ್ಯಭಿಚಾರಕ್ಕೆ ಕೇವಲ ಸಹಾಯ ಮಾಡಿದವಳು ಎಂದು ಪರಿಗಣಿಸಲಾಗುವುದು ಮತ್ತು ಆಕೆಗೆ ಯಾವ ಶಿಕ್ಷೆಯೂ ಇರುವುದಿಲ್ಲ” ಅಂದರೆ ವ್ಯಭಿಚಾರದಲ್ಲಿ ಪಾಲ್ಗೊಂಡ ಗಂಡಿಗೆ ಶಿಕ್ಷೆ ಮತ್ತು ಹೆಣ್ಣಿಗೆ ವಿನಾಯಿತಿ! ಇಲ್ಲಿ ಹೆಣ್ಣಿಗೆ ಶಿಕ್ಷೆ ಯಾಕಿಲ್ಲ ಎಂದರೆ ಮದುವೆಯಾದ ಹೆಣ್ಣು ತನ್ನ ಗಂಡನ ಸೊತ್ತು. ಅದು ಹೇಗೆ ಅಂದ್ರೆ ಉದಾಹರಣೆಗೆ ಒಬ್ಬ ಗಂಡಸಿಗೆ ಸೇರಿದ ಒಂದು ವಸ್ತುವನ್ನು ಇನ್ನೊಬ್ಬ ಗಂಡು ಅನುಮತಿಯಿಲ್ಲದೆ ಉಪಯೋಗಿಸುತ್ತಾನೆ. ಆಗ ಆ ಇನ್ನೊಬ್ಬ ಗಂಡಿಗೆ ಶಿಕ್ಷೆಯಾಗಬೇಕು ಸರಿ ತಾನೇ? ಆ ವಸ್ತುವನ್ನು ಉಪಯೋಗಿಸಲು ಅದರ ಮಾಲೀಕನ ಒಪ್ಪಿಗೆ ಬೇಕೇ ಬೇಕು... ಅಲ್ವೇ? ಹಾಗೆಯೇ ಇಲ್ಲಿಯೂ ಒಬ್ಬನ ಪತ್ನಿ ಅವನ ಅನುಮತಿ ಇಲ್ಲದೆ ಇನ್ನೊಬ್ಬ ಗಂಡಿನ ಜೊತೆ ಲೈಂಗಿಕ ಸಂಬಂಧ ಹೊಂದಿದರೆ ಆ ಗಂಡಿಗೆ Section 497 ಶಿಕ್ಷೆ ವಿಧಿಸುತ್ತದೆ. ಆದರೆ ಆ ಹೆಂಗಸಿಗೆ ಯಾವ ಶಿಕ್ಷೆಯೂ ಇಲ್ಲ !! ಆದರೆ ಈ ಸಂಬಂಧಕ್ಕೆ ಗಂಡನ ಒಪ್ಪಿಗೆ ಇದ್ದರೆ ಅದು ವ್ಯಭಿಚಾರ ಅಲ್ಲ. ಆದ್ದರಿಂದ ಗಂಡನ ಒಪ್ಪಿಗೆ ಅತಿ ಮುಖ್ಯ ಅಂತಾಯ್ತು!! ಜೊತೆಗೆ ಯಾವುದೇ ಗಂಡಸು ಅವಿವಾಹಿತ ಹಾಗು ವಿಧವೆಯ ಜೊತೆ ಲೈಂಗಿಕ ಸಂಬಂಧ ಹೊಂದಲು ಅವಕಾಶ ಮಾಡಿ ಕೊಡುತ್ತದೆ. ಯಾಕೆ ಹೇಳಿ... ಈ ಮಹಿಳೆಯರಿಗೆ ಒಡೆಯ ಎನಿಸಿಕೊಳ್ಳುವವರು ಇರುವುದಿಲ್ಲ. ಇಂಥ ವಿರೋಧಾಭಾಸಗಳಿದ್ದುದರಿಂದ ಈ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿತು. ಯಾಕೆಂದರೆ ನಮಗೆ ಗಂಡು ಹೆಣ್ಣನ್ನು ಸಮಾನವಾಗಿ ಕಾಯುವ-ಶಿಕ್ಷಿಸುವ ಅಥವಾ ಕ್ಷಮಿಸುವ ಕಾನೂನು ಮಾತ್ರ ಬೇಕು ಅಲ್ಲವೇ? ಹಾಗಂತ ನಮ್ಮ ಮಾಧ್ಯಮಗಳು ವರದಿ ಮಾಡಿದಂತೆ ಇನ್ನು ಹೆಂಗಸರೂ ಆರಾಮವಾಗಿ ಯಾರ ಜೊತೆ ಬೇಕಾದರೂ ಲೈಂಗಿಕ ಸಂಬಂಧ ಹೊಂದಬಹುದೇ? ಖಂಡಿತ ಇಲ್ಲ... ಆ ವಿಚಾರಗಳಿಗೆ ಬೇರೆ ಕಾನೂನುಗಳಿವೆ.. ಶಿಕ್ಷೆಯೂ ಇದೆ. ಕೇವಲ Section 497 ಇರುವುದಿಲ್ಲ ಅಷ್ಟೇ... ರೋಚಕ ಸುದ್ದಿಗಳನ್ನು ಬೇಜವಾಬ್ದಾರಿಯಿಂದ ಪ್ರಕಟಿಸುವ ಮಾಧ್ಯಮಗಳ ಬಾಯಿ ಮುಚ್ಚಿಸುವ, ರೋಚಕ ಸುದ್ದಿಗಳನ್ನು ಕಣ್ಣು ಮುಚ್ಚಿ ನಂಬುವ ಜನರ ಕಣ್ ತೆರೆಸುವ ಕಾನೂನು ಎಂದು ಬರುವುದೋ?

Tuesday, 31 July 2018

ಬನ್ರಿ.... ಜರ್ಮನಿಯ ಮನಿಗ ........


                                                          
ನಮ್ ಥರ ಸಂಸ್ಕೃತಿ, ಕುಟುಂಬವ್ಯವಸ್ಥೆ ಪ್ರಪಂಚದಲ್ಲೆಲ್ಲೂ ಇಲ್ಲ ಬಿಡಿ... ಫಾರಿನ್ ನಲ್ಲಿ ಮಾತೆತ್ತಿದರೆ ಡೈವೊರ್ಸು, ಮಕ್ಕಳಂತೂ ಕುಲಗೆಟ್ಟು ಹೋಗಿರ್ತಾರೆ....” ಇಂಥ ಮಾತುಗಳನ್ನು ನಾನು ಕೇಳಿದಾಗೆಲ್ಲ ಒಮ್ಮೆ ಒಂದು ಫಾರಿನ್ ಕುಟುಂಬದ ಜತೆ  ಸ್ವಲ್ಪ ದಿನ ಇದ್ದು ಬರಬೇಕು ...ಇದೆಲ್ಲ ನಿಜವಾ ಅಂತ ನೋಡ್ಬೇಕು.. ಅಂತ ಅನ್ಕೋತಿದ್ದೆ. ಅಂಥ ಅಪೂರ್ವ ಅವಕಾಶ ಕೊನೆಗೂ ನಂಗೆ ಸಿಕ್ತು. ಜರ್ಮನಿಯ ಮ್ಯುನಿಕ್ ನಗರದ ಸಮೀಪದ ಲಾಫ್ ಅನ್ನೋ ಸಣ್ಣ ಊರಿನ ಶಾಲೆಯೊಂದರ ಜೊತೆ ನಮ್ಮ ಶಾಲೆಯವರು ನಡೆಸುವ ಸ್ಟೂಡೆಂಟ್ ಎಕ್ಸ್ ಚೇಂಜ್ ಪ್ರವಾಸಕ್ಕೆ ಹೋಗುವ ೨೯[ ೮,೯,೧೦ನೇ ತರಗತಿಯ] ವಿದ್ಯಾರ್ಥಿಗಳ ಜೊತೆ ಈ ವರ್ಷ ನನ್ನನ್ನು ಕಳಿಸಿದ್ದರು. ಆ ಜರ್ಮನ್ ಶಾಲೆಯಿಂದ ಭಾರತ ಪ್ರವಾಸಕ್ಕೆ ಬರಲಿರುವ ೨೯ ವಿದ್ಯಾರ್ಥಿಗಳ ಮನೆಯಲ್ಲಿ ನಮ್ಮ ವಿದ್ಯಾರ್ಥಿಗಳು ಮತ್ತು ಅವರ ಜೊತೆ ಬರಲಿರುವ ಶಿಕ್ಷಕರ ಮನೆಯಲ್ಲಿ ನಾನು ೧೫ ದಿನ ಇರಬೇಕು. ಅವರ ಜೊತೆ ನಿತ್ಯಜೀವನದಲ್ಲಿ[ಊಟ-ಅಡುಗೆ-ಶಾಲೆ-ಪಾಠ-ಸುತ್ತಾಟ ಇತ್ಯಾದಿ] ಪಾಲ್ಗೊಳ್ಳಬೇಕು. ಮುಂದೆ ಅಕ್ಟೋಬರ್ ತಿಂಗಳಲ್ಲಿ ಆ ೨೯ ವಿದ್ಯಾರ್ಥಿಗಳು ಮತ್ತವರ ಶಿಕ್ಷಕರು ೧೫ ದಿನಗಳ ಪ್ರವಾಸಕ್ಕೆ ಬೆಂಗಳೂರಿಗೆ ಬಂದಾಗ ನಮ್ಮ ಮನೆಗಳಲ್ಲಿ ಆತಿಥ್ಯ ಕೊಡಬೇಕು. ನಮ್ಮ ಸಂಸ್ಕೃತಿ, ಶಾಲೆಯ ಪರಿಚಯ ಮಾಡಿಕೊಡಬೇಕು. ಪರಸ್ಪರ ಅಪರಿಚಿತ ದೇಶ-ಸಂಸ್ಕೃತಿಗಳನ್ನು ಬೆಸೆಯಲು ಶಾಲೆಗಳು ನಡೆಸುವ ಅತ್ಯುತ್ತಮ ಪ್ರಯತ್ನವಿದು.

’ ತನು-ಮನ-ಆತ್ಮ.... ’ [ Body-Mind-Soul] ಎಂಬುದು ನಮ್ಮ ಈ ಕಲಿಕಾ ಪ್ರವಾಸದ ಮುಖ್ಯ ವಿಷಯವಾಗಿತ್ತು. ಉಪನಿಷತ್ತಿನಲ್ಲಿ ವರ್ಣಿತವಾಗಿರುವ ನಮ್ಮ ದೇಹದ ಪಂಚಕೋಶಗಳ ಪರಿಚಯ[ಅನ್ನ-ಮನೋ-ಜ್ಞಾನ-ವಿಜ್ಞಾನ-ಆನಂದಮಯ ಕೋಶಗಳು]  , ಭಾರತೀಯ ಶಾಸ್ತ್ರೀಯ ಸಂಗೀತ -ನೃತ್ಯಪ್ರಕಾರಗಳು ಮತ್ತು ಭಾರತೀಯ ಶಿಲ್ಪಕಲೆ ಈ ಮೂರು ಶೀರ್ಷಿಕೆಗಳಡಿಯಲ್ಲಿ ಎರಡು ಗಂಟೆಗಳ ಕಾರ್ಯಕ್ರಮವನ್ನು ಆ ಶಾಲೆಯಲ್ಲಿ ನಮ್ಮ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕೊನೆಗೆ ನಾವು ಇಲ್ಲಿಂದ ಒಯ್ದಿದ್ದ ಉಂಡೆ-ಬರ್ಫಿ-ಮೈಸೂರುಪಾಕ್ -ಚಕ್ಕುಲಿ-ಕೋಡುಬಳೆ-ಓಂಪುಡಿಗಳನ್ನು ಪ್ರೇಕ್ಷಕರಿಗೆಲ್ಲ ಹಂಚಿದೆವು. ಅಚ್ಚರಿ-ಮೆಚ್ಚುಗೆಯ ಮಹಾಪೂರವೇ ನಮ್ಮ ಕಡೆಗೆ ಹರಿದು ಬಂತು.
ಆ ಶಾಲೆಯ ಗಣಿತದ ಟೀಚರ್ ಶ್ರೀಮತಿ ಹೈಕೆ ಖ್ರಾಮೆಸ್ ಅವರ ಮನೆಯಲ್ಲಿ ನನ್ನ ವಾಸ. ಗಂಡ-ಹೆಂಡತಿ, ವಯಸ್ಸಿಗೆ ಬಂದ ಮೂರು ಮಕ್ಕಳಿರುವ ಆ ಮನೆಯಲ್ಲಿ ಇದ್ದ ಮೇಲೆ ವಿದೇಶೀ ಸಮಾಜದ ಬಗ್ಗೆ ನಮ್ಮಲ್ಲಿ ಎಷ್ಟು ತಪ್ಪು ಕಲ್ಪನೆಗಳಿವೆ ಅನ್ನೋ ಸತ್ಯ ಗೊತ್ತಾಯ್ತು. ಮನೆಯಲ್ಲಿ ಸಮಾನತೆ - ಪರಸ್ಪರ ಗೌರವ  ಅನ್ನುವುದನ್ನು ಸೊಗಸಾಗಿ ರೂಢಿಸಿಕೊಂಡಿವೆ ಅಲ್ಲಿನ ಹೆಚ್ಚಿನ ಕುಟುಂಬಗಳು. ಹೆಂಡತಿ ಕೆಲಸಕ್ಕೆ ಹೋಗುತ್ತಿರಲಿ-ಬಿಡಲಿ, ಗಂಡ ತನ್ನನ್ನು ತಾನು ನೋಡಿಕೊಳ್ತಾನೆ. ಮಕ್ಕಳು ಬುದ್ಧಿ ಬರುತ್ತಿದ್ದಂತೆಯೇ ತಂದೆ- ತಾಯಿಯ ಜೊತೆ ಕೆಲಸಕ್ಕೆ ಕೈ ಜೋಡಿಸುತ್ತಾರೆ. ಮನೆಯ ಎಲ್ಲ ಕೆಲಸಗಳನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳುತ್ತಾರೆ. ನಾನಿದ್ದ ಆ ಮನೆಯಲ್ಲಿ ಭಾನುವಾರವೂ ಎಲ್ಲರೂ ಬೇಗನೇ ಎದ್ದರು. ದೊಡ್ಡ ಮಗ ಬಾತ್ರೂಂ- ಟಾಯ್ಲೆಟ್ -ಗಾರ್ಡನ್ ಗಳನ್ನು ಸ್ವಚ್ಛಗೊಳಿಸಿದ, ಎರಡನೆಯವನು ಮನೆ ಮತ್ತು ಎಲ್ಲರ ಕಾರುಗಳನ್ನು ಶುಭ್ರಗೊಳಿಸಿದ. ಮಗಳು ಎಲ್ಲರ ಬಟ್ಟೆಗಳನ್ನು ವಾಶಿಂಗ್ ಮಿಶ್ ನ್ನಿಗೆ ಹಾಕಿ, ತಂದೆಯ ಜೊತೆ ಅಡುಗೆಗೆ ನಿಂತಳು. ಗಂಡ ಪಾತ್ರೆಗಳನ್ನು ಮಿಶನ್ನಿಗೆ ಹಾಕಿ ಬೆಳಗಿನ ತಿಂಡಿ-ಮಧ್ಯಾಹ್ನದ ಊಟವನ್ನು ಸಿದ್ಧಗೊಳಿಸುವ ಹೊತ್ತಿಗೆ ಪಾತ್ರೆಗಳು ತೊಳೆದು ಸಿದ್ಧವಾದವು. ಅವನ್ನೆಲ್ಲ ಒಪ್ಪವಾಗಿ ಆಯಾಯ ಜಾಗದಲ್ಲಿ ಇಟ್ಟ . ನನ್ನ ಶಿಕ್ಷಕಿ ಗೆಳತಿ ಹಿಂದಿನ ದಿನ ತಂದಿಟ್ಟಿದ್ದ ಮನೆ ಸಾಮಾನು ತರಕಾರಿ ಹಣ್ಣುಗಳನ್ನು ಜೋಡಿಸಿ ಇಟ್ಟು ಎಲ್ಲರ ಬಟ್ಟೆಗಳಿಗೆ ಇಸ್ತ್ರಿ ಹಾಕಿದರು. ನಂತರ ಎಲ್ಲರೂ ಸ್ನಾನ ಮಾಡಿ ಒಟ್ಟಿಗೆ ಕೂತು ತಿಂಡಿ ತಿನ್ನುವುದನ್ನು ನೋಡುತ್ತ ನಾನು ಮೂಕಳಾದೆ.

ದಿನವೂ ರಾತ್ರಿಯ ಊಟಕ್ಕೆ ಆ ಊರಿನ ಯಾವುದಾರೊಂದು ಮನೆಯಿಂದ ನನಗೆ ಆಹ್ವಾನ ಇರುತ್ತಿತ್ತು. ರಾತ್ರಿ ಊಟ ಮುಗಿದ ಮೇಲೆ ಹೆಂಡತಿ ಒರೆಸು-ತೊಳೆ-ಬಳಿ...,  ಗಂಡ ಅಡುಗೆಯ ಬಗ್ಗೆ ನಾಲ್ಕು ಕಮೆಂಟ್ ಮಾಡಿ... ,ಕಾಲು ಚಾಚಿ ಟಿ.ವಿ ನೋಡುವ ನಮ್ಮ ಆದರ್ಶ ಸಂಸಾರಗಳು ಎಲ್ಲೂ ಕಾಣಲಿಲ್ಲ. ನಿಮಿಷ ಮಾತ್ರದಲ್ಲಿ ಎಲ್ಲರೂ ಸೇರಿ ಅಡುಗೆಮನೆಯನ್ನು ಓರಣವಾಗಿಸಿ, ಹರಟೆಗೆ ಸಜ್ಜಾಗುತ್ತಿದ್ದರು. ರಾತ್ರಿ ಹತ್ತು ಗಂಟೆಗೆ ಸೂರ್ಯಾಸ್ತವಾಗುತ್ತಿದ್ದುದರಿಂದ ಕೆಲ ಬೀದಿಗಳ ಎಲ್ಲ ಮನೆಗಳವರು ಕುರ್ಚಿಗಳನ್ನು ಹಾಕಿಕೊಂಡು ಒಟ್ಟಾಗಿ ಹರಟುವ ಅದ್ಭುತ ದೃಶ್ಯಗಳೂ ಕಂಡವು. ನಾನು ಹೋದ ಒಂದೆರಡು ಮನೆಗಳವರು ಡೈವೋರ್ಸ್ ಆದ ಏಕಾಂಗಿಗಳು. ಹಾಗಂತ ಗೋಳೋ ಅಂತ ಹಳೆಕತೆ ಹೇಳಿಕೊಳ್ಳದೇ ಮುಂದಿನ ಜೀವನದ ಬಗ್ಗೆ ನನ್ನೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು. ವಯಸ್ಸಾದ ತಂದೆ-ತಾಯಿ ಮಕ್ಕಳ ಜೊತೆ ವಾಸಿಸುವ ಸಂಸ್ಕೃತಿ ಅಲ್ಲಿ ಇಲ್ಲ. ತಮ್ಮ ಕೈಲಾಗುವಷ್ಟು ದಿನ ಸ್ವತಂತ್ರವಾಗಿದ್ದು, ಹಾಸಿಗೆ ಹಿಡಿಯುತ್ತಿದ್ದಂತೆಯೇ ಸರಕಾರವೇ ನಡೆಸುವ ವೃದ್ಧಾಶ್ರಮಗಳಿಗೆ ಸೇರುತ್ತಾರೆ. ನನಗೆ ಇಬ್ಬರು ವೃದ್ಧರು ಸಿಕ್ಕಿದರು. ಅವರಿಗೆ ತಮ್ಮ ಸ್ವತಂತ್ರ ಜೀವನದ ಬಗ್ಗೆ ಸಂತೋಷ-ಹೆಮ್ಮೆ ಕಾಣಿಸಿತು. “ಯಾಕೆ  ಈ ಕಷ್ಟ..ಮಕ್ಕಳ ಮನೆಯಲ್ಲಿ ಇರಬಾರದೇ?” ಅಂತ ಒಬ್ಬರನ್ನು ಮಾತಿಗೆಳೆದೆ. ಹೇ ಲೇಡಿ..ಐ ಆಮ್ ಸ್ಟಿಲ್ ಸ್ಟಾಂಡಿಂಗ್ .. ನಾಟ್ ರೀಚಡ್ ದ ಗ್ರೇವ್ ಯೆಟ್[ ಗೋರಿ ಸೇರಿಲ್ಲ.. ನನ್ನ ಕಾಲ ಮೇಲೆ ನಿಂತಿದೀನಿ.. ಕಾಣ್ತಾ ಇಲ್ವೇನಮ್ಮ....] ಅನ್ನೋ ಉತ್ತರ ರಪ್ಪಂತ ಹೊಡೀತು.  

ಹೆಚ್ಚಿನ ಮನೆಗಳಲ್ಲಿ ಯೋಗಾಭ್ಯಾಸವನ್ನು ಕಂಡು ಅಚ್ಚರಿಯಾಯಿತು. ಸಂಸ್ಕೃತ ಕಲಿಯಲು ಮಾರ್ಗದರ್ಶನ  ಮತ್ತು  ಬಿಕೆ ಎಸ್ ಅಯ್ಯಂಗಾರರ ಜರ್ಮನ್ ಭಾಷೆಯ ಪುಸ್ತಕವನ್ನು ನನಗೆ ತೋರಿಸಿ, ಸಂಸ್ಕೃತ ಪದಗಳ ಉಚ್ಚಾರಣೆಯನ್ನು ಸರಿಪಡಿಸುವಂತೆ ಕೇಳಿಕೊಂಡಾಗ ಹೆಮ್ಮೆಯಿಂದ ಹೃದಯ ತುಂಬಿ ಬಂತು. ಭಾರತೀಯ ನೃತ್ಯ-ಸಂಗೀತ-ಅಡುಗೆಯ ಬಗ್ಗೆ ಕೊನೆಯಿಲ್ಲದ ಪ್ರಶ್ನೆಗಳು. ನಮ್ಮ ಬಹುಭಾಷಾ ಪಾಂಡಿತ್ಯ, ಇಂಗ್ಲೀಷ್ ಜ್ಞಾನವನ್ನು ಎಷ್ಟು ಹೊಗಳಿದರೂ ಸಾಲದು ಅವರಿಗೆ... ಶಬ್ದ ಯೋಗ, ವಿನ್ಯಾಸ ಯೋಗ, ಫ್ಲೋ ಯೋಗ ಹೀಗೆ ಯೋಗದ [ವ್ಯಾಪಾರೀ] ಮುಖಗಳ ದರ್ಶನವೂ ಆಯಿತು. ಈ ಯೋಗ ಶಿಕ್ಷಕರು ಮೆಕ್ಸಿಕೋ, ಹಾಲೆಂಡ್ ಮುಂತಾದೆಡೆ ಕಲಿತವರಂತೆ!!
ಅವರ ನಿತ್ಯಾಹಾರವಾದ ಮೊಟ್ಟೆ,ಮಾಂಸ ತಿನ್ನದ, ಬೀರು,ವೈನು ಕುಡಿಯದ ನಾನೊಬ್ಬಳು ಅವರಿಗೆ  ವಿಚಿತ್ರ ಜೀವಿ! ಹಣ್ಣು-ತರಕಾರಿ, ಮೊಸರು,ಜ್ಯೂಸು, ಸಿರಿಧಾನ್ಯ ಅಡುಗೆಗಳಿಂದ ನನ್ನ ತಟ್ಟೆಯನ್ನು ತುಂಬಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದರು. ಸೂರ್ಯಾಸ್ತವಾಗುತ್ತಿದ್ದಂತೆ ದೀಪ ಹಚ್ಚುವ ಕ್ರಮವನ್ನು ಅನೇಕ ಮನೆಗಳಲ್ಲಿ ನೋಡಿದೆ. ಮನೆಗೆ ಐಶ್ವರ್ಯ-ಸಂತೋಷ ದೇವತೆ ಬರಲಿ ಅಂತ ಅವರ ಉದ್ದೇಶವಂತೆ. ಒಬ್ಬಾಕೆ ಎರಡು ದೀಪ ಹಚ್ಚಿದ್ದಳು . ಯಾಕೆ? ಅಂದೆ. ಒಂದು ಅವರ ಮನೆಗೆ. ಇನ್ನೊಂದು ಅಲ್ಲೆಲ್ಲೋ ದೂರ ಇರುವ ಅವಳ ವಯಸ್ಸಾದ ಅಪ್ಪ ಅಮ್ಮನ ಮನೆಗಂತೆ... ಅವರಿಗೆ ಮೈಯಲ್ಲಿ ಶಕ್ತಿ ಇಲ್ಲ, ಮರೆವು ಬೇರೆ.... ಅದಕ್ಕೆ ಅವರಿಗೋಸ್ಕರ ನಾನೇ ಹಚ್ತೀನಿ ಅಂದ್ಲು. ಏನೇ ಹೇಳಿ... ಎಲ್ಲಿ ಹೋದ್ರೂ ಹೆಣ್ಮಕ್ಕಳ ತವರಿನ ಮೋಹ ಮಾತ್ರ ಒಂದೇ ಥರ ಅನಿಸಿತು.....
ಅಲ್ಲಿನ ಶಿಕ್ಷಣ ವ್ಯವಸ್ಥೆ ಕೂಡಾ ಕುತೂಹಲಕಾರಿ. ೪ನೇ ತರಗತಿಯವರೆಗೆ ಎಲ್ಲ ಮಕ್ಕಳೂ ಒಂದೇ ಶಾಲೆಯಲ್ಲಿ ಓದುತ್ತಾರೆ..ಕೊನೆಯಲ್ಲಿ ಪರೀಕ್ಷೆ ನಡೆಸಿ ಮಕ್ಕಳ ಕೌಶಲಗಳನ್ನು ನಿರ್ಧರಿಸುತ್ತಾರೆ. ಐದರಿಂದ ಹನ್ನೆರಡನೇ ತರಗತಿಯವರೆಗಿನ ಶಿಕ್ಷಣಕ್ಕೆ ಮೂರು ಥರದ ಶಾಲೆಗಳಿವೆ-೧. ಲಾಜಿಕಲ್ ಥಿಂಕಿಂಗ್ ಇರುವವರಿಗೆ ,೨. ಕಲೆ-ಆಟಗಳಲ್ಲಿ ಜಾಣರಿಗೆ ೩. ಕಲಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದವರಿಗೆ. ಮಕ್ಕಳು ಈ ಮೂರು ಶಾಲೆಗಳಲ್ಲಿ ತಮ್ಮ ತಮ್ಮ ಕೌಶಲಕ್ಕೆ ಅನುಗುಣವಾಗಿ ಐದನೇ ತರಗತಿಗೆ ಸೇರುತ್ತಾರೆ. ಅಲ್ಲಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ವಿದ್ಯಾಭ್ಯಾಸ ಪಡೆಯುತ್ತಾರೆ. ಮಧ್ಯೆ ಮಕ್ಕಳ ಆಸಕ್ತಿಗಳು ಬದಲಾದರೆ ಶಾಲೆ ಬದಲಿಸುವ ಅವಕಾಶ ಇದೆ. ಕೆಲ ಪಾಲಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರುವುದು, ಆ ನಾಲ್ಕನೇ ಕ್ಲಾಸಿನ ಶಿಕ್ಷಕರ ಜೊತೆ ಮುನಿಸಿಕೊಳ್ಳುವುದು ಮಾಡ್ತಾರಂತೆ. ಆದರೆ ೧೨ನೇ ತರಗತಿವರೆಗಿನ ಸಂಪೂರ್ಣ ಉಚಿತ ಶಿಕ್ಷಣ  ಸರಕಾರದ ಬಿಗಿಮುಷ್ಟಿಯಲ್ಲಿರುವುದರಿಂದ , ಭ್ರಷ್ಟಾಚಾರ ಕಮ್ಮಿ ಇರುವುದರಿಂದ ಹೆಚ್ಚು ಗಲಾಟೆ ಆಗುವುದಿಲ್ಲ ಎಂದರು ಅಲ್ಲಿನವರು. ನಾನು ಹೋದ ಶಾಲೆ ಪುಸ್ತಕ ಬ್ರಹ್ಮರ ಮೊದಲನೇ ವರ್ಗದ್ದು. ಅಲ್ಲಿ ವಿಜ್ಞಾನ-ಗಣಿತಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ಗಮನಿಸಿದೆ.

ಹೆಚ್ಚಿನ ಎಲ್ಲ ಪಾಶ್ಚಾತ್ಯ ದೇಶಗಳಂತೆ ಇಲ್ಲೂ ಪಾಲಕರು ಮಕ್ಕಳನ್ನು ಸ್ವತಂತ್ರರನ್ನಾಗಿ ಬೆಳೆಸುತ್ತಾರೆ. ಅರೇಂಜ್ಡ್ ಮದುವೆಯ ಕಲ್ಪನೆಯೇ ಇಲ್ಲದಿರುವುದರಿಂದ ತಮ್ಮ ಸಂಗಾತಿಯನ್ನು ಹುಡುಕಿಕೊಳ್ಳುವ ಜವಾಬ್ದರಿಯೂ ಮಕ್ಕಳದ್ದೇ. ಆದ್ದರಿಂದ ಜಾತಕ -ಎತ್ತರ -ಮೈಬಣ್ಣ -ವಯಸ್ಸು ಈ ವಿಚಾರಗಳಿಗಿಂತ ಪರಸ್ಪರರ ವಿದ್ಯಾಭ್ಯಾಸ-ಸಂಪಾದನೆ-ಆಸಕ್ತಿಗಳಿಗೆ ಯುವಜನರು ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಕೆಲವೊಮ್ಮೆ ತಪ್ಪು ಆಯ್ಕೆಗಳು ನಡೆಯುವುದು, ಮೋಸ ಹೋಗುವುದು, ದುಶ್ಚಟಗಳು, ಅಹಂಕಾರ ಇತ್ಯಾದಿ ಸಮಸ್ಯೆಗಳು  ಯುವಕುಟುಂಬಗಳನ್ನು ಬಾಧಿಸುತ್ತವೆ. ಆದ್ದರಿಂದ ಡೈವೋರ್ಸ್ ಗೆ ಸಾಮಾಜಿಕವಾಗಿ ಒಪ್ಪಿಗೆ ಇದೆ. ಹೆಚ್ಚು ತಲೆ ಕೆಡಿಸಿಕೊಳ್ಳದೇ ಇನ್ನೊಬ್ಬ ಸಂಗಾತಿಯನ್ನು ಹುಡುಕುತ್ತಾರೆ ಈ ಜನ. ನಿಜ... ಹೀಗಾದಾಗ  ಮಕ್ಕಳು ಜೀವನ ಅತಂತ್ರವಾಗುವುದೂ ಇದೆ. ಈ ಸಮಸ್ಯೆ ಅವರ ಸಮಾಜವನ್ನು ಕಾಡುತ್ತಿರುವುದು ನಿತ್ಯಸತ್ಯ.  


    
ಅಂತೂ ಮನೆ ವಾಸ, ಮ್ಯುನಿಕ್, ಆಲ್ಫ್ಸ್ ಪರ್ವತಗಳ ಪ್ರವಾಸ ಮುಗಿಸುವ ಹೊತ್ತಿಗೆ ಅನೇಕ ಹೊಸ ವಿಚಾರಗಳನ್ನು ಕಲಿತೆ. ನಮ್ಮ ವಿದ್ಯಾರ್ಥಿಗಳಂತೂ ಲೆಕ್ಕವಿಲ್ಲದಷ್ಟು ಅಮೂಲ್ಯ ಜೀವನ ಪಾಠಗಳನ್ನು ಕಲಿತರು. ನಿಜ ಹೇಳ್ಬೇಕು ಅಂದ್ರೆ .....ಫಾರಿನ್ ಟ್ರಿಪ್ ಎನ್ನುತ್ತಾ ಅತ್ಯಂತ ಉತ್ಸಾಹದಿಂದ ಜರ್ಮನಿಗೆ ಹೋದ ನಾವು, “ಧೂಳು-ಅವ್ಯವಸ್ಥೆಯ ನಡುವೆಯೂ ನಮ್ಮ ಭಾರತ ಎಷ್ಟು ಸುಂದರವಾಗಿದೆ !! ನಮ್ಮ ದೇಶ- ಸಂಸ್ಕೃತಿಯಲ್ಲಿ ಇನ್ನೂ ಕಲಿಯೋದು ಎಷ್ಟಿದೆ ಅಲ್ವಾ!!” ಎನ್ನುತ್ತ ಮರಳಿದೆವು.