Friday 12 April 2019

ಈ ಸುಂದರ ತರುಣಿ ಮಣಿಪಾಲದ ಕಸ್ತೂರ್ ಬಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ. ಹೆಸರು Trinetra Haldar Gummaraju ತ್ರಿನೇತ್ರಾ ಗುಮ್ಮರಾಜು.... So..What ... ಅನ್ಬೇಡಿ. ೪ ವರ್ಶಗಳ ಹಿಂದೆ ಅಂಗದ್ ಗುಮ್ಮರಾಜು ಆಗಿ ಕಾಲೇಜು ಸೇರಿದ್ದ ಹುಡುಗ, ಮುಂದಿನವರ್ಷ ಡಾ. ತ್ರಿನೇತ್ರಾ ಗುಮ್ಮರಾಜು ಅನ್ನೋ ಹೆಸರಲ್ಲಿ ವಿದ್ಯಾಭ್ಯಾಸ ಮುಗಿಸಿ , ಕರ್ನಾಟಕದ ಮೊದಲ ಲಿಂಗಪರಿವರ್ತಿತ ವೈದ್ಯೆ ಎಂಬ ಇತಿಹಾಸ ನಿರ್ಮಿಸಲಿದ್ದಾಳೆ. ಹೌದು.. ಅಂಗದ್ ಗುಮ್ಮರಾಜು ನಮ್ಮ ಶಾಲೆಯ ವಿದ್ಯಾರ್ಥಿ. "ನಾನು ಹುಡುಗ ಅಲ್ಲ... ಹುಡುಗಿ ಕಣ್ರೋ..." ಅಂತ ದಿಟ್ಟತನದಿಂದ ಹೇಳುತ್ತ ಶಾಲೆಯಲ್ಲಿ ಅಡ್ಡಾಡುತ್ತಿದ್ದ ಇವನನ್ನು ಕಂಡಾಗ ನನಗೆ "ಬಾಯಿಗೆ ಬಂದಿದ್ದೆಲ್ಲ ಮಾತಾಡ್ತಾನಲ್ಲ...ಏನಪ್ಪ ಇವ್ನು....". ಅಂತ ಕಸಿವಿಸಿಯಾಗುತ್ತಿತ್ತು. ಮುಂದೆ ಸಿಇಟಿಯಲ್ಲಿ ೧೬೩ನೇ ರಾಂಕ್ ಪಡೆದು ವೈದ್ಯಕೀಯ ಕಾಲೇಜಿಗೆ ಸೇರಿದ ಅಂಗದ್ ಬಾಯಲ್ಲಿ ಹೇಳಿದ್ದನ್ನು ಕಾರ್ಯರೂಪಕ್ಕೆ ತಂದ. ಬ್ಯಾಂಕಾಕ್ ನ ಆಸ್ಪತ್ರೆಯಲ್ಲಿ ಹೆಣ್ಣಿನ ಅಂಗಾಂಗಗಳಿಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ತ್ರಿನೇತ್ರಾ ಆಗಿಬಿಟ್ಟ. ಆಪರೇಶನ್ ಗೆ ಮೊದಲೇ ವೀರ್ಯ ಬಾಂಕ್ ನಲ್ಲಿ ಸುರಕ್ಷಿತವಾಗಿ ಇಟ್ಟ ತನ್ನದೇ ವೀರ್ಯದಿಂದ ಬಾಡಿಗೆ ತಾಯಿಯ ಮೂಲಕ ತನ್ನ ಮಗುವನ್ನು ಪಡೆಯುವ ಮುಂದಾಲೋಚನೆಯನ್ನು ಮಾಡಿದ್ದಾಗಿದೆ. ನೆಗಡಿಗೆ ಔಷಧಿ ತರಲು ಆಸ್ಪತ್ರೆಗೆ ಹೋಗಿದ್ದೆ ... ಅನ್ನುವಷ್ಟು ಸರಳವಾಗಿ ತನ್ನ ಲಿಂಗಪರಿವರ್ತನೆಯ ಕತೆಯನ್ನು ಅವನು ಹೇಳುವಾಗ ನನಗೆ ಹೆಮ್ಮೆ, ಸಂಕಟ, ದು:ಖ, ಅಚ್ಚರಿ ಎಲ್ಲಾ ಒಟ್ಟೊಟ್ಟಿಗೇ ಆಯಿತು. ಟ್ರಾನ್ಸ್ ಜೆಂಡರ್ಸ್ , ಗೇ , ಲೆಸ್ಬಿಯನ್ ಅನ್ನೋ ಶಬ್ದಗಳನ್ನೆಲ್ಲ ಕೇಳುವಾಗ ನಾವೆಲ್ಲ ಮುಖ ಕಿವಿಚ್ತೀವಿ ಅಲ್ವೇ? ಯಾಕೆಂದ್ರೆ ವಿಕಾರವಾಗಿ ಅಲಂಕಾರ ಮಾಡಿಕೊಂಡು, ಬೀದಿಯಲ್ಲಿ ಚಪ್ಪಾಳೆ ತಟ್ಟುತ್ತ ಜನರನ್ನು ಪೀಡಿಸುವ ಭಿಕ್ಷುಕರು ನಮ್ಮ ಕಣ್ಮಂದೆ ಬರ್ತಾರೆ... ನಮ್ಮ ಸಮಾಜದ ಚೌಕಟ್ಟಿನಲ್ಲಿ ಎಲ್ಲಿಯೂ ಸಲ್ಲದವರು ಇವರು. ಇವರೆಲ್ಲರೂ ನಮ್ಮೆಲ್ಲರ ಥರನೇ ಸಾಮಾನ್ಯ ವ್ಯಕ್ತಿಗಳು. ಆದರೆ ಕೆಲ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿ ಅವರ ದೇಹದಲ್ಲಿನ Sex [ ಲಿಂಗ] ಮತ್ತು ಮನಸ್ಸಿನ Gender [ ಲೈಂಗಿಕ ಭಾವನೆ]ಗಳ ಮಧ್ಯೆ ಹೊಂದಾಣಿಕೆ ಇರುವುದಿಲ್ಲ. ದೇಹ ಹುಡುಗ ಅನ್ನುತ್ತೆ, ಮನಸ್ಸು ಹುಡುಗಿ ಅನ್ನುತ್ತೆ..... ಒಂದು ಕ್ಷಣ ನಿಮ್ಮ ಮನಸ್ಸಿನಲ್ಲಿ ಈ ಸ್ಥಿತಿ ಕಲ್ಪಿಸಿಕೊಳ್ಳಿ.. ಎಂಥ ನರಕ ಅಲ್ವೇ? ಹಾಗಂತ ಅದು ಅವರ ತಪ್ಪಲ್ಲವಲ್ಲ. ನನಗೆ ಸಿಹಿತಿಂಡಿ ಇಷ್ಟ... ನಿಮಗೆ ಖಾರತಿಂಡಿ ಇಷ್ಟ..ನನಗೆ ಹಸಿರುಬಣ್ಣ ಇಷ್ಟ.. ನಿಮಗೆ ಹಳದಿ ... ಅನ್ನುವಷ್ಟೇ ಸರಳವಾದ ಮನಸ್ಸಿನ ವೈವಿಧ್ಯತೆ ಇದು. ಆದರೆ ನಮ್ಮ ವ್ಯವಸ್ಥೆಯಲ್ಲಿ ಅವರ ಇಷ್ಟಗಳಿಗೆ ಬೆಲೆ ಇಲ್ಲ. ತ್ರಿನೇತ್ರಾಳ ತಂದೆ-ತಾಯಿ, ಕುಟುಂಬದವರು ಇದನ್ನು ಒಪ್ಪಿಕೊಂಡು ಅವಳಿಗೆ ಜೀವನ ಕೊಟ್ಟರು. ಆದರೆ ಎಷ್ಟು ಜನರಿಗೆ ಈ ಭಾಗ್ಯವಿದೆ? ಮನೆಯಲ್ಲಿ ಅವರುಗಳು ಶಾಪಗ್ರಸ್ತರು.. ಶಾಲೆಯಲ್ಲಿ ಹಾಸ್ಯದ ವಸ್ತುಗಳು, ಮುಂದೆ ಅವರ ಜೊತೆ ಅವರ ಹೆಂಡತಿ/ಗಂಡನನ್ನೂ ಮದುವೆ ಎಂಬ ಭೀಕರ ನರಕಕ್ಕೆ ತಳ್ಳುವ ಜನ ನಾವು!! ಇದು ಯಾವುದೇ ರೀತಿಯ ಕಾಯಿಲೆ ಅಲ್ಲ.. ಸದ್ಯಕ್ಕೆ ಇದಕ್ಕೆ ಕಾರಣಗಳು ತಿಳಿದಿಲ್ಲ...ಮಗು ಹುಟ್ಟುವ ಮುಂಚೆ ಸ್ಕಾನಿಂಗ್ ನಲ್ಲಿ ಇದು ತಿಳಿಯುವುದಿಲ್ಲ. ನಮ್ಮ ನಿಮ್ಮಂತೆ ಓದಿ, ಕೆಲಸಕ್ಕೆ ಸೇರಿ, ಅವರ ಮನಸ್ಸಿಗೆ ಸೂಕ್ತವಾದ ಸಂಗಾತಿಯ ಜೊತೆ ಬದುಕುವುದನ್ನು ಮಾತ್ರ ಕೇಳುವ ಅವರಿಗೆ ನಮ್ಮ ದೇಶದ ಕಾನೂನಿನಲ್ಲೂ ರಕ್ಷಣೆ ಇಲ್ಲ!! ಇರಲಿ... ಇವತ್ತಲ್ಲ ನಾಳೆ ನಾವು ಖಂಡಿತ ಬದಲಾಗುತ್ತೇವೆ.. ಯಾಕೆಂದರೆ ಪರಿವರ್ತನೆ ಜಗದ ನಿಯಮ ಅನ್ನೋ ನಿತ್ಯಸತ್ಯದಲ್ಲಿ ನನಗೆ ಇನ್ನಿಲ್ಲದ ನಂಬಿಕೆ. ಈ ಬಗ್ಗೆ ನಿಮಗೆ ಪ್ರಶ್ನೆಗಳಿದ್ದರೆ ತ್ರಿನೇತ್ರಾಳಲ್ಲಿ ನಿಸ್ಸಂಕೋಚವಾಗಿ ಕೇಳಬಹುದು. ಭಾರತದಲ್ಲಿ ಸದ್ಯಕ್ಕೆ ಡೆಲ್ಲಿ-ಮುಂಬೈನಲ್ಲಿ ಲಿಂಗ ಪರಿವರ್ತನೆಯ ಕೆಲ ಆಸ್ಪತ್ರೆಗಳಿವೆ. ಆದರೆ ಹೊರದೇಶಗಳಲ್ಲಿ ಅತ್ಯುತ್ತಮ ಆಸ್ಪತ್ರೆಗಳಿವೆ. ಲಿಂಗ ಪರಿವರ್ತನೆಗೆ ವಯಸ್ಸಿನ ನಿರ್ಬಂಧ ಇಲ್ಲ. 18 ತುಂಬಿದ್ದರೆ ಆ ವ್ಯಕ್ತಿಯ ಒಪ್ಪಿಗೆ ಸಾಕು. ಕಿರಿಯರಿಗೆ ತಂದೆ-ತಾಯಿಯ ಸಹಿ ಬೇಕು . You can listen to Ted talk of Trinetraa in this link. https://www.youtube.com/watch?v=VRKiCpcJ-ag&fbclid=IwAR0il0B-kQ7YnzFU2b2KFQnRnT352AMqqkL1Nn2VOx68oQkE__FhpXOUxEU https://timesofindia.indiatimes.com/city/bengaluru/trinetra-set-to-be-ktakas-first-transwoman-medico/articleshow/68768637.cms?fbclid=IwAR0CiJMyDoTI98n6AI7GW28BU7XhLwOQIFA9eGPKDMgi1bOJKsmzfkJoqsE