Tuesday 11 November 2014

                                 ‘ಮಕ್ಕಳ ದಿನಾಚರಣೆ


ಮತ್ತೆ ಪ್ರತಿವರ್ಷದಂತೆಮಕ್ಕಳ ದಿನಾಚರಣೆಬರುತ್ತಿದೆ. ಅಂದುಮಕ್ಕಳೇಕನಸು ಕಾಣಿ……’ ಎಂಬ ಸವಕಲು ವಾಕ್ಯದ ಘೋಷಣೆ ಆಗುತ್ತದೆ. ಹೆಚ್ಚಿನ ಮಕ್ಕಳಿಗೆ ಸಿಹಿತಿಂಡಿ ಸಿಗುತ್ತದೆ. ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗು, ಸೈಕಲ್ಲು, ಪುಸ್ತಕ ಹಾಗೂ ಸ್ವಲ್ಪ ಅನುಕಂಪ ಸಿಗುತ್ತದೆ. ಆದರೆ ಮರುದಿನದಿಂದ ಮತ್ತೆ ಹಳೇರಾಗವೇ ಯಾಕೆಂದರೆ  ಉನ್ನತ ಶಿಕ್ಷಣ ಪಡೆದ , ಕೈತುಂಬಾ ಸಂಬಳ ಪಡೆಯುವ, ದೊ…….ಡ್ಡ ಕಾರಿನಲ್ಲಿ ಓಡಾಡುವ ಅವರ ತಂದೆ- ತಾಯಿಯರು-

. ಲಂಚ್ ಬಾಕ್ಸಿಗೆ  ಒಂದು ಪಾಕೆಟ್ ಬಿಸ್ಕೆಟ್ಟು / ಒಣಗಿದ ಬ್ರೆಡ್ಡು / ಪ್ರಸಿದ್ಧ ಬೇಕರಿಯ ಹಳಸಿದ ಕೇಕು/ ೧೦೦೦ ರೂಪಾಯಿಯ ನೋಟು ಇವುಗಳಲ್ಲೊಂದನ್ನು ಕಳುಹಿಸುತ್ತಾರೆ.
. ಮಕ್ಕಳಿಗೆ ಬೆಲೆಬಾಳುವ ಮೊಬೈಲ್ ಕೊಡಿಸುತ್ತಾರೆ ಹಾಗೂ ಅದರಲ್ಲಿ ಅಶ್ಲೀಲ ಚಿತ್ರ ನೋಡಿದ್ದಕ್ಕೆಂದು ಕ್ರಿಕೆಟ್ ಬ್ಯಾಟಿನಿಂದ ಹೊಡೆಯುತ್ತಾರೆ.
. ಮಕ್ಕಳನ್ನು ಕೆಲಸದವರ ಕೈಗೊಪ್ಪಿಸಿ ತಿಂಗಳಾನುಗಟ್ಟಲೆ ವಿದೇಶಕ್ಕೆ ಹೋಗುತ್ತಾರೆ.
. ಮಕ್ಕಳನ್ನು ವಯಸ್ಸಾದ ತಮ್ಮ ತಂದೆ- ತಾಯಂದಿರ ಬಳಿ ಬಿಟ್ಟು ಶಾಲೆಗೆ ಪೇರೆಂಟ್ ಮೀಟಿಂಗಿಗೆ ಮಾತ್ರ ತಪ್ಪದೇ ಹಾಜರಾಗಿ ಕಡಿಮೆ ಅಂಕ ಕೊಟ್ಟಿದ್ದಕ್ಕೆ ಶಿಕ್ಷಕರನ್ನು ಗದರಿಸುತ್ತಾರೆ.
. ಸದಾಕಾಲ ಜಗಳವಾಡುತ್ತಾರೆ. ಮಕ್ಕಳಿಗೆ ರಾತ್ರಿ ಊಟವೂ ಕೊಡದೇ ಸತಾಯಿಸುತ್ತಾರೆ. ಕೊನೆಗೆ ಡೈವೋರ್ಸ್ ತೆಗೆದುಕೊಂಡು ಮಕ್ಕಳನ್ನು ಮಾನಸಿಕವಾಗಿ ಹಿಂಸಿಸುತ್ತಾರೆ ಸಾಮಾಜಿಕವಾಗಿ ಅಪಮಾನ ಮಾಡುತ್ತಾರೆ.
. ಸದಾ ಭವಿಷ್ಯದ ಬಗ್ಗೆಯೇ ಚಿಂತಿಸುತ್ತಾ ನೂರಾರು ಕೋಚಿಂಗ್ ಕ್ಲಾಸುಗಳಿಗೆ ಮಕ್ಕಳನ್ನು ತಳ್ಳಿ ತಾವು ಹೆಮ್ಮೆಪಡುತ್ತಾರೆ.
. ಮಗುವನ್ನು ಒಂದು ಕ್ಷಣವೂ ಬಿಟ್ಟಿರದೇ ಅದರ ಮಾತು, ನಗುಉಚ್ಚೆ- ಹೇಲು, ಆಟ, ಪಾಠ ಕೊನೆಗೆ ಯೋಚನೆ, ಭಾವನೆ ಅಷ್ಟೇ ಏಕೆ ಉಸಿರನ್ನೂ ನಿಯಂತ್ರಿಸುತ್ತಾರೆ. ತಾವು ಆದರ್ಶ ಪಾಲಕರೆಂದು ಬೀಗುತ್ತಾರೆ.

ಹೌದು…… ಇದ್ಯಾವುದೂ ಕಲ್ಪನೆಯಲ್ಲ.  ಎಲ್ಲವೂ ಅಕ್ಷರಶ: ನಿಜ.

ನಮ್ಮ [ ಮುಖ್ಯವಾಗಿ ನಗರದ] ಮಕ್ಕಳು
. ಶಾಲೆಯಿಂದ ಮನೆಗೆ ಬಂದಾಗ ಬೀಗ ಅಥವಾ ಕೆಲಸದಾಕೆಯ ಸ್ವಾಗತ ಸಿಗುತ್ತದೆ.
. ಸಾವಿರಾರು ಆಕರ್ಷಣೆಗಳ ನಡುವೆ ಸಿಲುಕಿ ಸರಿ ತಪ್ಪುಗಳು ತಿಳಿಯದೇ ಒದ್ದಾಡುತ್ತಿದ್ದಾರೆ.
. ಅವರ ಉತ್ತಮ ಭವಿಷ್ಯಕ್ಕಾಗಿ ವರ್ತಮಾನದ ಖುಷಿಯ ಕ್ಷಣಗಳನ್ನು ಕೋಚಿಂಗ್ ಕ್ಲಾಸ್ ಗಳಲ್ಲಿ ಕಳೆಯುತ್ತಿದ್ದಾರೆ.
. ಸದಾಕಾಲ ಗುಡ್ ಟಚ್- ಬಾಡ್ ಟಚ್ ನ್ನು ನೆನೆಪಿಟ್ಟುಕೊಳ್ಳಬೇಕು, ಯಾರನ್ನೂ ನಂಬಬಾರದು.
. ಮನೆಯಲ್ಲಿ ನಿದ್ದೆ ಮಾಡಲು ಪಾಲಕರು ಬಿಡುವುದಿಲ್ಲ. ಕ್ಲಾಸಿನಲ್ಲಿ ನಿದ್ದೆ ಮಾಡಲು ಟೀಚರ್ ಬಿಡುವುದಿಲ್ಲ.

ಮಿತ್ರರೇ! ಇನ್ನು ಮುಂದೆಈಗಿನ ಮಕ್ಕಳೇ ಸರಿ ಇಲ್ಲಪ್ಪಾ…… ನಾವೆಲ್ಲಾ ಚಿಕ್ಕವರಿರುವಾಗ ಹೀಗಿರಲಿಲ್ಲ……….’ ಎಂಬ ಉದ್ಗಾರ ತೆಗೆಯುವ ಮೊದಲು ಒಂದು ಕ್ಷಣ ಯೋಚಿಸಿ.


ನಾಡಿನ ಎಲ್ಲ ಚಿಣ್ಣರಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

Friday 26 September 2014

ಮನಸೇ.. ಓ ಮನಸೇ...

      ಮನಸೇ.. ಓ  ಮನಸೇ...   
   
ನೀವು ಯಾವಾಗಲಾದರೂ ಒಂಟಿಯಾಗಿ ದಿನಗಳನ್ನು  ಕಳೆದಿದ್ದೀರಾ? ಕುಟುಂಬ ಪ್ರೇಮಿಗಳಾದ ನಾವು ಭಾರತೀಯರು ಎಲ್ಲಕ್ಕಿಂತ ಹೆಚ್ಚಾಗಿ ಒಂಟಿತನಕ್ಕೆ ಹೆದರುತ್ತೇವೆ. ಅದರಲ್ಲೂ ಮಹಿಳೆಯರು ಈ ವಿಚಾರದಲ್ಲಿ ಹೌಹಾರುತಾರೆ. ಹಳ್ಳಿಯಿರಲಿ- ಪಟ್ಟಣವಿರಲಿ,ವಿಭಕ್ತ ಕುಟುಂಬ ವ್ಯವಸ್ಥೆಯಿಂದಾಗಿ ಈ ದಿನಗಳಲ್ಲಿ ನಾನಾ ಕಾರಣಗಳಿಂದ ನಾವು ಒಂಟಿಯಾಗಿ ಬದುಕುವ ಸಂದರ್ಭಗಳು ಎದುರಾಗುತ್ತವೆ. ನಗರದ ಅಪಾರ್ಟ್ ಮೆಂಟ್ ಗಳಲ್ಲಿ   ಜನರ ಓಡಾಟ  ಇರುವುದರಿಂದ ಬಹುಶ: ಒಂಟಿತನಕ್ಕೆ ಸ್ಥಳವಿಲ್ಲ. ಆದರೆ ಹಳ್ಳಿಗಳಲ್ಲಿ, ನಗರದ ಊರಹೊರಗಿನ ಬಡಾವಣೆಗಳಲ್ಲಿ  ಒಂಟಿತನದ್ದೇ ರಾಜ್ಯಭಾರ.

ಕೆಲವರ್ಷಗಳ ಹಿಂದಿನ ಮಾತು. ಬೆಳಗ್ಗೆ ಐದಕ್ಕೆ ಪ್ರಾರಂಭವಾಗುತ್ತಿದ್ದ ನನ್ನ ದಿನಚರಿ ಕೊನೆಗೊಳ್ಳುತ್ತಿದ್ದುದು ರಾತ್ರಿ ೧೧ಕ್ಕೆ. ಯಾವುದೇ ಮಧ್ಯಮವರ್ಗದ  ಉದ್ಯೋಗಸ್ಥ ಮಹಿಳೆಯಂತೆ ಸಂಸಾರ ತಾಪತ್ರಯಗಳು, ನನ್ನ ಉದ್ಯೋಗ, ಮಕ್ಕಳ ಓದು-ಬರಹ, ಅತಿಥಿಗಳು ಇವುಗಳಲ್ಲಿ ನಾನು ಕಳೆದುಹೋಗುತ್ತಿದ್ದೆ. “ ಛೆಯಾವಾಗ ದಿನಗಳು ಮುಗಿಯುತ್ತವೋ?…. ನಾನು ಒಂಟಿಯಾಗಿ ಮನೆಯಲ್ಲಿ ನನ್ನಿಷ್ಟದ ಪುಸ್ತಕ ಓದಿಕೊಂಡುಇಷ್ಟಬಂದರೆ ಅಡುಗೆ ಮಾಡಿಕೊಂಡು ಇಷ್ಟವಿಲ್ಲವಾದರೆ  ಹಾಗೇ ಏನೋ ತಿಂದುಕೊಂಡು ಹಾಯಾಗಿದ್ದರೆ ಎಷ್ಟು ಚೆನ್ನಎಂದು ಮನಸ್ಸು ಸದಾ ಹಂಬಲಿಸುತ್ತಿತ್ತು.

ಕಾಲ ಉರುಳಿತು. ಮಕ್ಕಳು ಬೆಳೆದು ಓದಿಗಾಗಿ ಹಾಸ್ಟೆಲ್ ಸೇರಿದರು. ನಾವು ಬೆಂಗಳೂರಿನ ದೂರದ ಬಡಾವಣೆಯಲ್ಲಿ ಮನೆ ಕಟ್ಟಿದ್ದರಿಂದ ಅತಿಥಿಗಳು ಅಪರೂಪವಾದರು. ಪತಿ ಅವರ ಕೆಲಸಗಳಲ್ಲಿ ತನ್ನನ್ನೇ ತಾನು ಮರೆತರು. ನನ್ನಿಷ್ಟದ ದಿನಚರಿ ಆರಂಭವಾಯಿತು. ಜೀವನ ಸುಂದರ ಎನಿಸಿತು.

ಮನುಷ್ಯನ ಮನಸ್ಸು ಎಷ್ಟು ವಿಚಿತ್ರ ನೋಡಿ.ಎಲ್ಲರೂ ಜೊತೆಗಿದ್ದಾಗ ಒಂಟಿಯಾಗಿರೋಣ ಅನಿಸುತ್ತದೆ. ಒಂಟಿಯಾಗಿದ್ದಾಗ ಜೊತೆಗೆ ಯಾರಾದರೂ ಇರಬಾರದೇ ಎಂದೆನಿಸುತ್ತದೆ.  ಪತಿ ಕೆಲಸದ ಮೇಲೆ ದಿನಗಟ್ಟಲೆ ಬೇರೆ ಊರಿಗೆ ಹೋಗಬೇಕಾಗಿ ಬಂದಾಗ ನನ್ನಿಷ್ಟದ ದಿನಗಳು ಯಾಕೋ ಕಷ್ಟ ಎನಿಸಲಾರಂಭಿಸಿತು . ಮನೆಯಲ್ಲಿ ನಾನೊಬ್ಬಳೇ ಇರಬೇಕಾಯಿತು. ಅವರ ಮುಂದೆ ಏನೋ ನಾನು ಭಾರೀ ಧೈರ್ಯವಂತೆ! ಎಂಬ ಸೋಗು ಹಾಕಿದೆ. ಆದರೆ ಮನಸ್ಸಿನಲ್ಲಿ ಕೋಲಾಹಲ ನಡೆದೇ ಇತ್ತು.   ಹಗಲು ಹೇಗೋ ಕೆಲಸದಲ್ಲಿ ಕಳೆದುಹೋಗುತ್ತಿತ್ತು. ರಾತ್ರಿಯಾಗುತ್ತಿದ್ದಂತೆ ಹೊಟ್ಟೆಯಲ್ಲಿ ಚಿಟ್ಟೆಗಳು …..ಅಲ್ಲಲ್ಲ ……ಇಲಿಗಳು  ಓಡಾಡಲಾರಂಭಿಸಿದವು  !!..

ಸರಿ , ಪುಸ್ತಕ ಓದಲು ಕುಳಿತೆ.  ಮನಸ್ಸು ಗೊಂದಲದ ಗೂಡಾಗಿ  ಎಲ್ಲೋ ಓಡಲಾರಂಭಿಸಿತು.   ಟಿ.ವಿ. ಹಾಕಿದೆ. ನೋಡಲೇಬೇಕೆಂದಿಲ್ಲಏನೋ ಒಂದು ಶಬ್ದವಾಗುತ್ತಿದ್ದರೆ ಧೈರ್ಯ ಬರುತ್ತದೆ  ಎಂದು. ಓಹ್……. ಬ್ರೇಕಿಂಗ್ ನ್ಯೂಸ್….. ‘ನಗರದಲ್ಲಿ ಒಂಟಿಮಹಿಳೆಯ ಕೊಲೆ……. . . ಭಯ ಇನ್ನೂ ಜಾಸ್ತಿಯಾಯಿತು. ಹಾಗೇ ನೋಡುತ್ತಿದ್ದಂತೆ ಗೊತ್ತಾಯಿತು ಪರಿಚಿತರೇ ಕೊಲೆಗಾರರು ಎಂದು. ನನ್ನ ಪರಿಚಿತರ ಮುಖಗಳೆಲ್ಲ ಕಣ್ಮುಂದೆ ಸುಳಿದವು. ಇಲ್ಲ…… ಇವರಲ್ಲಿ ಕೊಲೆಗಾರರು ಯಾರೂ ಇಲ್ಲ ಎಂದು ಸಮಾಧಾನಪಟ್ಟುಕೊಂಡೆ.

ನಿಶ್ಯಬ್ದದ ರಾತ್ರಿಗಳಲ್ಲಿ ಆಗಾಗ ಕೇಳಿ ಬರುವ ಶಬ್ದಗಳದ್ದು ಇನ್ನೊಂದು ಕತೆ.ಒಂದು ರಾತ್ರಿ ಬಾಗಿಲು ತಟ್ಟಿದಂತೆ  ಅನಿಸಿತು. ಸ್ವಲ್ಪ ಹೊತ್ತು ಸುಮ್ಮನಿದ್ದೆ. ಆದರೆ ಮನಸ್ಸು ಕೇಳಬೇಕಲ್ಲ. ಇದ್ದ-ಬದ್ದ ಧೈರ್ಯವನ್ನು ಒಟ್ಟುಗೂಡಿಸಿ ಮೆಲ್ಲನೆ ಬಾಗಿಲಿನ ಪಕ್ಕದ ಕಿಟಿಕಿ ಚೂರೇ ಚೂರು ತೆರೆದು ನೋಡಿದೆ. ನಮ್ಮ ನಾಯಿ ಮೈಮುರಿಯುತ್ತ ಆಕಳಿಸುತ್ತ ನಿಂತಿದೆ. ಅದರ ಬಾಲ ಬಾಗಿಲಿಗೆ ತಾಕುತ್ತಾ ಶಬ್ದ ಬರುತ್ತಿದೆ. ನನ್ನನ್ನು ಗಮನಿಸಿ ಇನ್ನೂ ಜೋರಾಗಿ ಬಾಲ ಅಲ್ಲಾಡಿಸಿತು. ನನಗೆ  ಅಪಹಾಸ್ಯ ಮಾಡುತ್ತಿದೆಯೇನೋ ಎಂಬ ಅನುಮಾನ ಬಂದು ಕಿಟಿಕಿ ಮುಚ್ಚಿದೆ. ಇನ್ನೊಂದು ದಿನ ಕಿಟಿಕಿಯ ಬಳಿ ಏನೋ ಸುಳಿದಂತೆ ಅನಿಸತೊಡಗಿತು. ಬಿಳಿ ಬಣ್ಣ…… ಆಗಾಗ ಮಿಣಮಿಣ  ಬೆಳಕು. ಬಾಲ್ಯದಲ್ಲಿ ಕೇಳಿದ್ದ ಪಂಜುರ್ಲಿ, ಕರ್ಲೊಟ್ಟಿಭೂತಗಳ ಕತೆ, ಹುಣಿಸೆಮರದ ನಿವಾಸಿಯಾದ ಬ್ರಹ್ಮರಾಕ್ಷಸನ ಕತೆಗಳು ನೆನಪಾಗಲಾರಂಭಿಸಿದವು. ಹತ್ತಿರ ಹೋಗಿ ನೋಡಿದರೆ ಪಕ್ಕದಮನೆಯ ಬೆಕ್ಕು ಮಿಯ್ಯಾವ್……. ಎಂದಿತು.

 ಬಹುಶ: ದೇವರು ಮಾನವನಿಗೆ ಕೊಟ್ಟ ಅದ್ಭುತವಾದ ವರವೆಂದರೆ -ಪರಿಸ್ಥಿತಿಯ ಜೊತೆ ಹೊಂದಾಣಿಕೆ . ಎಂಥದೇ ಕಠಿಣ ಪರಿಸ್ಥಿತಿಯಿರಲಿ, ನಾವು ಕಾಲಕಳೆದಂತೆ ಅದಕ್ಕೆ ಹೊಂದಿಕೊಳ್ಳುತ್ತೇವೆ. ನನಗೂ ದಿನಕಳೆದಂತೆ ಒಂಟಿತನ ಅಭ್ಯಾಸವಾಯಿತು. ಅಷ್ಟೇ ಅಲ್ಲ. ಇದೇ ಚೆನ್ನ …. ಅನಿಸಲಾರಂಭಿಸಿತು. ಒಳ್ಳೆಯ ಪುಸ್ತಕಗಳನ್ನು ಓದಲಾರಂಭಿಸಿದೆ. ಬಂಧುಮಿತ್ರರ ಜೊತೆ ದೂರವಾಣಿಯಲ್ಲಿ ಸಂಪರ್ಕ ಬೆಳೆಸಲಾರಂಭಿಸಿದೆ. ಅಂತರ್ಜಾಲದಲ್ಲಿ ವಿಹರಿಸತೊಡಗಿದೆ. ಕೆಲಸಕ್ಕೆ ಬಾರದ ಯೋಚನೆಗಳಿಗೆ ನನ್ನಲ್ಲಿ ಈಗ ಅವಕಾಶವಿಲ್ಲ. 
  
ಒಂಟಿಯಾಗಿರುವ ಪ್ರಸಂಗ ಬಂದರೆ , ಪತ್ರಿಕೆಗಳಲ್ಲಿ , ಟಿ. ವಿ ಯಲ್ಲಿ ಪ್ರಕಟವಾಗುವ ಕೊಲೆ ಸುಲಿಗೆಗಳ ವರದಿಗಳಿಗೆ  ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.ಸಾಮಾನ್ಯವಾಗಿ ಅವು ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ನಡೆಯುತ್ತವೆ. ಆದ್ದರಿಂದ ನೆರೆಹೊರೆಯವರ ಜೊತೆ , ಬಂಧುಗಳ ಜೊತೆ ಸಾಮರಸ್ಯವಿರಲಿ. ‘ಆರೋಗ್ಯ ಬೆಲೆ ಕಟ್ಟಲಾಗದ ಸಂಪತ್ತು’. ಆದ್ದರಿಂದ ಆರೋಗ್ಯದ ಬಗ್ಗೆ ಅತ್ಯಧಿಕ ಗಮನವನ್ನು ಕೊಡಿ.  ಕಳ್ಳರಿಂದ, ಇಲಿ , ಹಾವು ಮುಂತಾದ ಉಪದ್ರವಿಗಳಿಂದ ರಕ್ಷಣೆಗೆ ಮನೆಗೆ ಒಳ್ಳೆಯ ಭದ್ರತಾ ವ್ಯವಸ್ಥೆ ಕಲ್ಪಿಸಿ. ‘ನಾನು ಒಬ್ಬಳೇ/ಒಬ್ಬನೇ  ಇದ್ದೇನೆಎಂದು ಅವರಿವರಲ್ಲಿ ಹೇಳಬೇಡಿ. ಇದರಿಂದ ಅಪಾಯವೇ ಹೆಚ್ಚು. ಸಮಯ ಕಳೆಯಲು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಿ.


ಮೊಬೈಲ್ ಫೋನನ್ನು ಸಮೀಪದಲ್ಲೇ ಇರಿಸಿಕೊಂಡು ಮಲಗಿ. ಇದು ಮನಸ್ಸಿಗೆ ಧೈರ್ಯ ಕೊಡುತ್ತದೆ. ಒಬ್ಬರಿಗಾಗಿಯಾದರೂ , ರುಚಿಕರವಾದ ಅಡಿಗೆತಿಂಡಿಗಳನ್ನು ಮಾಡಿ ತಿನ್ನಿ. ಯಾಕೆಂದರೆ ಮನುಷ್ಯನಿಗೆ ಹೊಟ್ಟೆಯಲ್ಲೇ ಮೆದುಳಿದೆ!!.   ಹಾಗೆ ನೋಡಿದರೆ ಹಗಲಿಗೂ ರಾತ್ರಿಗೂ ಏನೂ ವ್ಯತಾಸವಿಲ್ಲ. ನಮ್ಮ ಮರ್ಕಟಮನಸ್ಸು ಏನೇನೋ ಕಲ್ಪಿಸಿಕೊಂಡು ನಮ್ಮಲ್ಲಿ ಭಯ ಉಂಟುಮಾಡುತ್ತದೆ. ನಿಮ್ಮ ಮನಸ್ಸಿಗೆ ಶಟ್ ಅಪ್…. ಎಂದು ಆಗಾಗ ಬೈಯುತ್ತಾ ಇರಿ. ಆಗ ಅದು ದಾರಿಗೆ ಬಂದು ಕ್ರಿಯಾತ್ಮಕವಾಗಿ ಯೋಚಿಸಲಾರಂಭಿಸುತ್ತದೆ. ಹೊಸ ಕನಸುಗಳನ್ನು ನಮ್ಮಲ್ಲಿ ತುಂಬುತ್ತದೆ.