ಅಮ್ಮನ ಉಸಿರಿಗೆ ಅಷ್ಟೊಂದು ಬಲ ಇದೆ ಅಂತ ನನಗೆ ಗೊತ್ತಿರಲಿಲ್ಲ.
ಅವಳೊಂದು ಕಾಗದದ ತುಂಡನ್ನು ಕೈಯಲ್ಲಿ ಹಿಡಿದು ,ಅತ್ತಿಂದಿತ್ತ ಮಡಚಿ, ಒಂದು ಮಡಿಕೆಯೊಳಗೆ ಉಫ್...
ಅಂದರೆ ಸಾಕು ನಾನಾ ತರಹದ ಪ್ರಾಣಿಗಳು ಕಣ್ಮುಂದೆ ಪ್ರತ್ಯಕ್ಷ! ಒಂಥರಾ ಜಾದೂ..
ಚಿಕ್ಕವನಿರುವಾಗ ಒಮ್ಮೆ ನಾನು ಏನಕ್ಕೋ ಹಠ ಹಿಡಿದು ಅಳು
ಶುರುಮಾಡಿದವನು ಏನು ಮಾಡಿದರೂ ನಿಲ್ಲಿಸಲೇ ಇಲ್ಲ. ಅಪ್ಪ ಅಮ್ಮ ಏನೇನೆಲ್ಲ ಮಾಡಿದರೂ ಊಹೂಂ..ರಚ್ಚೆ
ಹಿಡಿದು ಅಳು. ಅಪ್ಪನಿಗೆ ಸಾಕಾಯ್ತು...ಕೋಣೆ ಬಾಗಿಲು ಹಾಕ್ಕೊಂಡು ಮಲಗಿಬಿಟ್ಟರು. ಅಮ್ಮ
ನನ್ನನ್ನು ಎತ್ತಿಕೊಂಡು ಹೋಗಿ ಅಡುಗೆಮನೆಯ ಕಟ್ಟೆ ಮೇಲೆ ಕೂರಿಸಿದಳು.ಪುಟ್ಟ .. ನನ್ ಬಂಗಾರ
...ನೋಡಿಲ್ಲಿ ಅನ್ನುತ್ತ ಒಂದು ಬಣ್ಣದ ಕಾಗದ ಕೈಗೆತ್ತಿಕೊಂಡಳು. ಅದೇ ಕ್ರಿಸ್ಮಸ್ಗೆ
ಉಡುಗೊರೆಗಳನ್ನು ಸುತ್ತಿ ಕೊಡುತ್ತಾರಲ್ಲ ಮಿರಿ ಮಿರಿ ಹೊಳೆಯೋ ಗಿಫ್ಟ್ ಕವರ್ ಅದು. ಮನೆಗೆ ಏನೇ
ಉಡುಗೊರೆ ಪಾಕೆಟ್ ಬರಲಿ, ಅಮ್ಮ ಅದನ್ನು ಸುತ್ತಿರುವ ಕಾಗದವನ್ನು ಜೋಪಾನವಾಗಿ ಬಿಚ್ಚಿ, ಮಡಚಿ ಫ್ರಿಡ್ಜ್
ಮೇಲೆ ಪೇರಿಸಿ ಇಡುತ್ತಾಳೆ.
ಅದೇ ರಾಶಿಯಿಂದ ಅವತ್ತು ಒಂದು ಕಾಗದವನ್ನು ತೆಗೆದು, ಹರಡಿ, ಮಡಚಲು
ಶುರು ಹಚ್ಚಿದಳು. ನಾನು ಅಳು ನಿಲ್ಲಿಸಿ ಅದನ್ನೇ ನೋಡಲಾರಂಭಿಸಿದೆ. ಮೊದಲು ಅತ್ತಿಂದಿತ್ತ ಮಡಚಿ,ಮೂಲೆಗಳನ್ನು ತಿರುಚಿ,ತುದಿಗಳನ್ನು
ಒಂದರೊಳಗೊಂದು ಸಿಕ್ಕಿಸಿ,ಸುರುಳಿ
ಸುತ್ತಿದ್ಲು. ನೋಡ್ತಾ ಇದ್ದ ಹಾಗೆ ಅಷ್ಟು ದೊಡ್ಡ ಕಾಗದ ಅವಳ ಕೈ ಬೆರಳುಗಳ ಮಧ್ಯೆ ಒಂದು ಮುದ್ದೆ
ಥರ ಕಂಡಿತು. ಆ ಉಂಡೆ ಕಾಗದದ ಒಂದು ಬದಿಯನ್ನು ಬಾಯಿಗಿಟ್ಟು ಬೆಲೂನು ಊದೋ ಥರ ಉಫ್ ... ಅಂದಳು..
“ಪುಟ್ಟ ..ನೋಡಿಲ್ಲಿ Laohu.. ಹುಲಿ.. ಗುರ್
.. ಗುರ್ ..ಅನ್ನತ್ತೆ” ಅನ್ನುತ್ತ ಕಚಗುಳಿ ಇಟ್ಟಳು. ಮೇಜಿನ ಮೇಲೆ ನಿಂತಿದ್ದ ಆ ಹುಲಿಮರಿ
ಇಷ್ಟುದ್ದ ಇತ್ತು. ಅದರ ಮೈ ತುಂಬಾ ಬಣ್ಣಬಣ್ಣದ ಗೋಲಿಮಿಠಾಯಿ, ಕ್ರಿಸ್ ಮಸ್ ಟ್ರೀಯ ಚಿತ್ತಾರ.
ನಾನು ಕೈ ಚಾಚಿ laohuನ ಎತ್ಕೊಂಡೆ.ರ್ರ್ರ್ರಾಆಅ .. ರ್ರ್ರಾ ಅಂತ
ಗರ್ಜಿಸಿತು..ಬಾಲ ಮೇಲೆ ಕೆಳಗೆ ಅಲ್ಲಾಡಿತು. ಕಳ್ಳ ಬೆಕ್ಕು ಊಳಿಟ್ಟ ಹಾಗೆ...,ನ್ಯೂಸ್ ಪೇಪರ್
ಗಾಳಿಗೆ ತೂರಿಕೊಂಡಾಗ ಶಬ್ದ ಬರುತ್ತದಲ್ಲ ಹಾಗೆ ....
ನಾನು ಖುಷಿಯಿಂದ ನಗ್ತಾ ಲಾಹೋನ ಬೆನ್ನು ನೇವರಿಸಿದೆ. ಗುರ್ರ್ರೋ
ಅನ್ನುತ್ತ ಪೇಪರ್ ಹುಲಿ ನನ್ನ ಕೈಮೇಲೆ ಮಿಸುಕಾಡಿತು.ಅಮ್ಮ “ಇದಕ್ಕೆ ಒರಿಗಮಿ ಅಂತಾರೆ.
ಚೆನ್ನಾಗಿದೆ ಅಲ್ವಾ?..ಜಾಣಮರಿ
..ಅಳಬಾರದು ಆಯ್ತಾ ?ಎನ್ನುತ್ತಾ ಮುತ್ತುಕೊಟ್ಟಳು.ಆಮೇಲೆ ಇನ್ನೂ ಕೆಲವು ಪೇಪರ್ ಪ್ರಾಣಿಗಳನ್ನು
ಮಾಡಿ ಕೊಟ್ಟಳು. ನನಗಂತೂ ಏನಪ್ಪಾ ಇದು ಅಂತ ಆಶ್ಚರ್ಯ ಆಯಿತು. ಅಮ್ಮನ ಉಸಿರಲ್ಲಿ ಏನೋ ವಿಶೇಷ ಶಕ್ತಿ ಇದೆ. ಇಲ್ಲಾಂದ್ರೆ ಸುಮ್ನೆ ಒಂದು ಕಾಗದ ತಗೊಂಡು
ಅತ್ತಿಂದಿತ್ತ ಮಡಚಿ ಊದಿದ್ರೆ ಅಷ್ಟು ಚೆನ್ನಾಗಿರೋ ಪ್ರಾಣಿಗಳು ಹುಟ್ಟೋದು ಅಂದ್ರೆ ಸುಮ್ನೆನಾ! ಏನೋ
ಮಾಜಿಕ್ ಇದೆ ಅವಳತ್ರ.
-----------
ಅಪ್ಪ ಅಮ್ಮನನ್ನು ಒಂದು ಕ್ಯಾಟಲಾಗ್
ನಲ್ಲಿ ನೋಡಿ ಆರಿಸಿ ಮದುವೆ ಮಾಡಿಕೊಂಡದ್ದಂತೆ. ನಾನು ಹೈಸ್ಕೂಲ್ ನಲ್ಲಿ ಓದುತ್ತ ಇದ್ದಾಗ ಒಮ್ಮೆ ಅಪ್ಪನನ್ನು
ವಿವರವಾಗಿ ಹೇಳಪ್ಪ ಅಂತ ಕೇಳಿದೆ. ಅವರು ಏನೋ ಸ್ವಲ್ಪ ಹೇಳಿ ಅಮ್ಮನನ್ನೇ ಕೇಳು,ಅವಳು ಎಲ್ಲ
ಹೇಳ್ತಾಳೆ ಅಂದು ಜಾರಿಕೊಂಡರು. ಅಪ್ಪ ಹೇಳಿದ್ದು
ಇಷ್ಟು .. 1973ರಲ್ಲಿ ಮದುವೆಗಳನ್ನು ಕುದುರಿಸುವ ಒಂದು ಏಜೆನ್ಸಿಯಲ್ಲಿ ಅವರು ಹೆಸರು
ಬರೆಸಿದ್ದರಂತೆ. ಅಲ್ಲಿ ಹುಡುಗಿಯರ ವಿವರ ಇರೋ ಕ್ಯಾಟಲಾಗ್ ಕೊಟ್ಟರಂತೆ.ಅಮ್ಮನ ಫೋಟೋ ನೋಡಿದ
ಕೂಡಲೇ ಹಿಂದೆ ಮುಂದೆ ಯೋಚಿಸದೇ ಅಪ್ಪ ಒಪ್ಪಿಕೊಂಡರಂತೆ.ಆ ಫೋಟೋನ ನಾನ್ಯಾವತ್ತೂ ಕಂಡಿಲ್ಲ.ಅದನ್ನು
ಅಪ್ಪ ಹೀಗೆ ವರ್ಣಿಸಿದ್ದು. ಹಸಿರುಬಣ್ಣದ ಚೈನೀಸ್ ಗೌನ್ ತೊಟ್ಕೊಂಡು ಓರೆ ನೋಟ ಬೀರ್ತಾ ಕುರ್ಚಿ
ಮೇಲೆ ಕೂತಿದ್ಲು.ಉದ್ದ ಕೂದಲು ಭುಜದ ಮೇಲಿಂದ ಇಳಿದಿರೋ ಹಾ ಗೆ ಪೋಸ್. ಮುಗ್ಧಮುಖ .. ನಿಷ್ಕಲ್ಮಶ
ಮುಗುಳ್ನಗು. ಆ ಫೋಟೋ, ಕ್ಯಾಟಲಾಗ್ ನ ಕೊನೆಯ ಪುಟದಲ್ಲಿ ಇತ್ತಂತೆ.ವಿವರಗಳ ಪುಟದಲ್ಲಿ 18 ವರ್ಷದ ಹಾಂಕಾಂಗ್ ನ ಯುವತಿ,ಒಳ್ಳೆಯ ಡ್ಯಾನ್ಸರ್, ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುತ್ತದೆ ಇತ್ಯಾದಿ ಇತ್ತಂತೆ.ತಮಾಷೆ ಏನಪ್ಪಾ ಅಂದ್ರೆ
ಇವೆಲ್ಲ ಸುಳ್ಳು ಅಂತ ಆಮೇಲೆ ಅಪ್ಪನಿಗೆ ಗೊತ್ತಾಯ್ತಂತೆ.
ಆಮೇಲೆ ಅಪ್ಪ ಅಮ್ಮನಿಗೆ ಪತ್ರ
ಬರೆದರಂತೆ.ಆ ಏಜೆನ್ಸಿಯವರೇ ಇವರಿಬ್ಬರ ಮಧ್ಯೆ ನಡೆಯುವ ಪತ್ರವ್ಯವಹಾರ
ನೋಡಿಕೊಳ್ಳುತ್ತಿದ್ದರಂತೆ.ಕೊನೆಗೆ ಒಮ್ಮೆ ಅಮ್ಮನನ್ನು ಮುಖತ: ನೋಡಲು ನೇರವಾಗಿ ಹಾಂಕಾಂಗ್ ಗೆ
ಹೋದರಂತೆ. ಒಂದು ಹೋಟೆಲ್ ನಲ್ಲಿ ಭೇಟಿಯಾದಾಗ ಗೊತ್ತಾಯ್ತಂತೆ ಅವರು ಮದುವೆಯಾಗಬೇಕೆಂದು ನೋಡಿರುವ
ಹುಡುಗಿಗೆ ಹಲೋ ,ಗುಡ್ ಬೈ ಬಿಟ್ಟರೆ ಬೇರೆ ಯಾವ ಇಂಗ್ಲಿಷೂ ಬರಲ್ಲ ಅಂತ. ಥೋ..ಇವಳ ಸಹವಾಸವೇ ಬೇಡ
ಅಂತ ಎದ್ಹೊಗೋಣ.. ಅಂತಿದ್ದವರು ಯಾಕೋ ಮನಸ್ಸು ಬದಲಾಯಿಸಿ ಅಲ್ಲೇ ಇದ್ದ ಒಬ್ಬಳು ಪರಿಚಾರಕಿಯನ್ನು
ಕರೆದು ಅಮ್ಮನ ಮಾತುಗಳನ್ನು ಅನುವಾದ ಮಾಡ್ತಿರಾ ಅಂತ ಕೇಳಿಕೊಂಡರಂತೆ. “ಕಣ್ಣ ತುಂಬಾ ನಿರೀಕ್ಷೆ ,ಭಯ
ಇಟ್ಕೊಂಡು ನನ್ನನ್ನೇ ನೋಡ್ತಾ ಇದ್ದಳು.ನಾನು ಮಾತಾಡುವಾಗ ಮತ್ತು ಅನುವಾದ ಮಾಡುವವಳು ಹೇಳಿದ್ದನ್ನು
ಕೇಳುವಾಗ ಒಂಚೂರು ನಗು ಮುಖದಲ್ಲಿ ಕಾಣ್ತಿತ್ತು..”. ಅಂತ ಅಮ್ಮನನ್ನು ಅಪ್ಪ ರೇಗಿಸ್ತಾರೆ
ಒಮ್ಮೊಮ್ಮೆ. ಆಮೇಲೆ ಅಪ್ಪ ಅಮೆರಿಕಗೆ ವಾಪಾಸ್ ಬಂದು ಅಮ್ಮನ ವೀಸಾ ವ್ಯವಸ್ಥೆ ಎಲ್ಲ ಮಾಡಿಸಿ
ಅಮ್ಮನ್ನನ್ನು ಕರೆಸಿಕೊಂಡರಂತೆ.... ಆಮೇಲೊಂದು ವರ್ಷಕ್ಕೆ ನಾನು ಹುಟ್ಟಿದ್ದಂತೆ...ಅ ವರ್ಷ ಟೈಗರ್ ಇಯರ್ ಆಗಿತ್ತಂತೆ . ಚೈನೀಸ್ ಪಂಚಾಂಗದ ಪ್ರಕಾರ
ಭಾರಿ ಒಳ್ಳೆಯ ವರ್ಷವದು. ಆ ವರ್ಷದಲ್ಲಿ ಮಗು ಹುಟ್ಟಿದರೆ ಶುಭ ಅಂತ ಏನೋ ನಂಬಿಕೆ.
ನನಗೆ ಇದೆಲ್ಲ ಕೇಳಿದಾಗ ವಿಚಿತ್ರ
ಅನಿಸಿತ್ತು. ಅಲ್ಲ ..’ಯಾರಾದ್ರು ಬಂದು ತನ್ನನ್ನು ಆರಿಸಲಿ’ ಅಂತೆಲ್ಲ ಆಸೆ ಇಟ್ಕೊಂಡು ಕ್ಯಾಟಲಾಗ್
ನಲ್ಲಿ ಹೆಸರು ಬರೆಸಿದ್ದಳಲ್ಲ ನಮ್ಮಮ್ಮ ..ಎಂಥದಿದು ? ನಾನೆಲ್ಲೂ ಓದಿಲ್ಲ... ಕೇಳಿಲ್ಲ..
ಇಂಥವರೂ ಇರ್ತಾರಾ.... ? ಎಂದೆಲ್ಲ ಅನಿಸಿತ್ತು. ಮನಸ್ಸಲ್ಲೇ ಅಮ್ಮನನ್ನು ಬೈಕೊಂಡೆ.ಒಂಥರಾ
ಸಮಾಧಾನ ಆಯ್ತು.
-----------
ಅಮ್ಮ ನನಗೆ ಆಡಿಕೊಳ್ಳಲಿಕ್ಕೆ ಆಡು
,ಜಿಂಕೆ,ನೀರಾನೆ ಅಂತೆಲ್ಲ ಏನೇನೋ ಪೇಪರ್ ಗೊಂಬೆಗಳನ್ನು ಮಾಡಿ ಕೊಟ್ಟಳು. ನನ್ನ ಲಾಹೋ ಗರ್ಜಿಸ್ತಾ ಇವರನ್ನೆಲ್ಲ ಮನೆತುಂಬ ಅಟ್ಟಾಡಿಸಿಕೊಂಡು
ಹೋಗುತ್ತಿತ್ತು.ಒಂದು ಸಾರಿ ಅವನ್ನೆಲ್ಲ ಗಬಕ್ಕಂತ ಹಿಡ್ಕೊಂಡರೆ ಅವರ ಕತೆ ಮುಗೀತು.ಗಾಳಿ ಎಲ್ಲ
ಪುಸ್ ...ಅಂತ ಹೋಗಿ ಚಪ್ಪಟೆ ಕಾಗದ ಆಗುತ್ತಿದ್ದವು. ಅಮ್ಮ ಅವುಗಳ ಮೈಗೆ ಗಾಳಿ ಊದಿ ಮತ್ತೆ ಓಡಾಡೋ
ಥರ ಮಾಡುತ್ತಿದ್ದಳು.
ಒಮ್ಮೆ ನೀರಾನೆ ಹಾರ್ತಾ ,ಓಡ್ತಾ ಹೋಗಿ ಡೈನಿಂಗ್
ಟೇಬಲ್ ಮೇಲೆ ಇಟ್ಟಿದ್ದ ಸೋಯಾ ಸಾಸ್ ಬಟ್ಟಲಿನ ಒಳಗೆ ಬಿತ್ತು. ಹಂಗೆ ಬಿಟ್ಟಿದ್ರೆ ಈಜಾಡೋದೇನೋ
...ನಾನು ಟಪಕ್ಕಂತ ಎತ್ಕೊಂಡೆ. ಆದ್ರೆ ಅಷ್ಟರಲ್ಲಿ ಸಾಸ್ ನೀರಾನೆಯ ಮೈಯೊಳಗೆ ತುಂಬ್ಕೋತು.ಆ
ಭಾರಕ್ಕೆನೀರಾನೆ ಮೇಜಿನ ಮೇಲೆ ಕುಸಿದುಬಿತ್ತು.ನಾನು ಬಿಸಿಲಿಗೆ ಒಣಗಿಸಿದ್ರುನೂ ಕಾಲು ಮಾತ್ರ
ಸೊಟ್ಟ ಆಗೋಯ್ತು. ಆದರೂ ಕುಂಟಿಕೊಂಡೆ ಓಡಾಡ್ತಾ ಇತ್ತು ಅನ್ನಿ.. . ಆಮೇಲೆ ಒಂದು ದಿನ ಅಮ್ಮ
ಇದ್ಯಾಕೋ ನೆಟ್ಟಗಿಲ್ಲ ಅಂದುಕೊಂಡು ಪ್ಲಾಸ್ಟಿಕ್ ಶೀಟು ಕಾಲಿಗೆ ಸುತ್ತಿ ರಿಪೇರಿ ಮಾಡಿದಳು.
ಆಮೇಲೆ ಒಂಚೂರು ಪರವಾಗಿಲ್ಲ ಅನ್ನೋ ಥರ ಆಯ್ತು.
ನನ್ನ ಲಾಹೋ ಗುಬ್ಬಿಮರಿಗಳನ್ನು ಕಂಡರೆ
ಗುರ್ರೋ ,..ಅನ್ನ್ನೋವನು. ಒಂದು ದಿನ ನಾನು ಹಿತ್ತಲಲ್ಲಿ ಆಡ್ಕೊತಾ ಇರಬೇಕಾದ್ರೆ ಒಂದು
ಗುಬ್ಬಿಮರಿ ಹಾರಿಬಂದು ಅವನ ಕಿವಿಗೆ ಕುಟುಕಿತು. ಕುರ್ರೋ ಮುರ್ರೋ ಅಂತ ಅವನ ಗೋಳಾಟ ಕೇಳಲಾರದೆ
ಅಮ್ಮ ಓಡಿ ಬಂದು ಕಿವಿಗೆ ಪಟ್ಟಿ ಸುತ್ತಿ ಸಮಾಧಾನ ಮಾಡಿದಳು.ಆಮೇಲಿಂದ ಗುಬ್ಬಿಗಳಿಗೂ ಲಾಹೊಗು
ಎಣ್ಣೆ ಸೀಗೆ ಸಂಬಂಧ ಆಗೋಯ್ತು.
ಒಂದಿನ ಟಿವಿ ನೋಡ್ತಾ ಇದ್ನಾ .. ಶಾರ್ಕ್
ಗಳ ಬಗ್ಗೆ ಏನೋ ಡಾಕ್ಯುಮೆಂಟರಿ ಬರ್ತಾ ಇತ್ತು. ಅದನ್ನು ನೋಡಿ ‘ಅಮ್ಮ ನನಗೂ ಒಂದು ಶಾರ್ಕ್
ಮಾಡಿಕೊಡು’ ಅಂದೆ. ಅಮ್ಮ ತಕ್ಷಣ ಮಾಡಿಕೊಟ್ಟಳು. ಯಾಕೋ ಏನೋ ಮೇಜಿನ ಮೇಲೆ ನಿಂತ್ಕೊಳ್ಳಕ್ಕೆ
ಇಷ್ಟನೇ ಇಲ್ಲ ಅದಕ್ಕೆ. ನಿಲ್ಲಿಸಿದರೆ ಹ್ಯಾಪೆ ಮೋರೆ ಹಾಕ್ಕೊಂಡಿತು . ಇರು ಮಾಡ್ತೀನಿ ನಿಂಗೆ...
ಅಂದುಬಿಟ್ಟು ಅಡುಗೆಮನೆ ಸಿಂಕಿನ ಬಾಯಿಗೆ ಬಟ್ಟೆ ಒತ್ತಿ ಕಟ್ಟಿ, ನೀರು ತುಂಬಿಸಿದೆ.ಶಾರ್ಕನ್ನು
ತೇಲಿ ಬಿಟ್ಟೆ. ಖುಷಿಯಾಗಿ ಈಜಲಿಕ್ಕೆ ಶುರು ..ಆದ್ರೆ ಒಂದಷ್ಟು ಹೊತ್ತಾದ ಮೇಲೆ ಮೈ ತುಂಬಾ ನೀರು
ತುಂಬಿಕೊಂಡು ಭಾರಕ್ಕೆ ಮುಳುಗೇಹೋಯ್ತು.ನಾನು ಉಳಿಸೋದಕ್ಕೆ ಏನೆಲ್ಲಾ ಕಸರತ್ತು ಮಾಡಿದರೂ ಉಪಯೋಗ
ಆಗಲಿಲ್ಲ. ತಳದಲ್ಲಿ ಒಂದು ಕಾಗದದ ಮುದ್ದೆ ಉಳೀತು ಅಷ್ಟೇ. ನನ್ನ ಲಾಹೋ ಸಿಂಕಿನ ಬದಿಗೆ
ಮುಂಗಾಲನ್ನು ಊರಿ , ತಲೆ ಆನಿಸಿ ಕಿವಿ ಮಡಚಿಕೊಂಡು ಕೂತು ಎಲ್ಲ ನೋಡ್ತಾ ಇತ್ತು. ಗಂಟಲಿಂದ
ಕ್ಷೀಣವಾಗಿ ಗುರ್ ಅನ್ನೋ ಶಬ್ದ ಬರುತ್ತಿತ್ತು. ನಂಗ್ಯಾಕೋ ಒಂಥರಾ ಆಯ್ತು.ಅಮ್ಮ “ಹೋಗ್ಲಿ ಬಿಡು
ಚಿನ್ನಾ ... ಇನ್ನೊಂದು ಶಾರ್ಕ್ ಮಾಡಿಕೊಡ್ತೀನಿ.” ಅನ್ನುತ್ತ ಸಿಲ್ವರ್ ಪೇಪರ್ ನಲ್ಲಿ ಇನ್ನೊಂದು
ಮಾಡಿಕೊಟ್ಟಳು. ಚಿನ್ನದಮೀನು ಇಟ್ಟಿರೋ ದೊಡ್ಡ ಗಂಗಾಳದಲ್ಲಿ ಅದನ್ನು ತೇಲಿಬಿಟ್ಟೆ..ಹಾಗೆ
ಈಜಾಡಿಕೊಂಡು ಇತ್ತು. ನಾನು ಲಾಹೋ ಇಬ್ಬರೂ ಪಾತ್ರೆ ಪಕ್ಕ ಕುಳಿತುಕೊಂಡು ಶಾರ್ಕು ಮೀನು
ಹಿಡಿಯುವುದಕ್ಕೆ ಓಡೋದನ್ನೇ ನೋಡ್ತಾ ಇದ್ದೆವು. ಲಾಹೋ ಆ ಕಡೆ ಮುಖವನ್ನು ಪಾತ್ರೆಯ ಅಂಚಿಗೆ
ಹೊಂದಿಸಿಕೊಂಡು ಕಣ್ ಕಣ್ ಬಿಡ್ತಾ ಇದ್ರೆ ನಾನು ಈ ಕಡೆ ಲಾಹೋ ಗುರಾಯಿಸ್ತಾ ಇರೋದನ್ನು ನೋಡ್ತಾ
ಇದ್ದೆ.
---------
ನಾವು ಈ ಮನೆ ಬಿಟ್ಟು ಊರಿನ ಹೊರಗಡೆ ಕೊಂಡ ಹೊಸಮನೆಗೆ ಬಂದಾಗ ನನಗೆ ಹತ್ತುವರ್ಷ. ನಾವು
ಮನೆಯೊಳಗೆ ಬರ್ತಾ ಇದ್ಧಂಗೆ ಪಕ್ಕದಮನೆಯ ಇಬ್ಬರು ಹೆಂಗಸರು ನಮ್ಮನ್ನು ಮಾತಾಡಿಸಲಿಕ್ಕೆ ಬಂದರು.
ಅಪ್ಪ ಅವರನ್ನು ಕೂರಿಸಿ ಕ್ಷೇಮ ಕುಶಲ ಮಾತಾಡಿ ಕುಡಿಯಲಿಕ್ಕೆ ಜ್ಯೂಸು ಕೊಟ್ಟು “ ಹಳೆ ಓನರ್ ಹತ್ರ
ಸ್ವಲ್ಪ ದುಡ್ಡಿನ ವ್ಯವಹಾರ ಮಾತಾಡೋದಿದೆ. ನಾನು ಹೊರಡ್ತೀನಿ. ನಮ್ಮವಳಿಗೆ ಇಂಗ್ಲೀಷು ಅಷ್ಟಾಗಿ
ಬರಲ್ಲ.. ಅವಳು ಹೆಚ್ಚು ಮಾತಾಡಲ್ಲ.. ಇನ್ನೇನು ಹೋಗಿ ಬಂದು ಬಿಡ್ತೀನಿ.. ತಪ್ಪು ತಿಳ್ಕೊಬೇಡಿ.. ಅಂದವರೇ ಹೊರಟುಬಿಟ್ಟರು.ನಾನು
ಒಳಮನೆಯಲ್ಲಿ ಕೂತು ಏನೋ ಕತೆಪುಸ್ತಕ ಓದುತ್ತಾ ಇದ್ದೆ. ಅಮ್ಮ ಅಡುಗೆಮನೆಯ ಸಾಮಾನುಗಳನ್ನೆಲ್ಲ
ಜೋಡಿಸಿಕೊಳ್ತಾ ಇದ್ದಳು.ಬಂದವರು ಸುಮ್ನೆ ಇರಲಾರದೆ ಹಜಾರದಲ್ಲಿ ಕೂತು ಮಾತು ಶುರು ಮಾಡಿದರು.
“ ನೋಡಕ್ಕೆ ಒಳ್ಳೆ ಮರ್ಯಾದಸ್ಥರ ಥರ ಇದ್ದಾರೆ..ಅದ್ಯಾಕೆ ಹೀಗ್ ಮಾಡಿಕೊಂಡರೋ?”
“..ಅದಕ್ಕೆರೀ ಎಲ್ಲ ಅವ್ಯವಸ್ಥೆ..ಆ ಮಗ ನೋಡಿ ತೇಲುಗಣ್ಣು ..ಮೈ ಬಿಳಿಚಿಕೊಂಡು . ದೆವ್ವ ಬಡಿದಂತೆ ಕಾಣ್ತಾನೆ.”
“ ಇಂಗ್ಲಿಷು ಬರತ್ತಾ ಅದಕ್ಕೆ”
ಇಬ್ಬರೂ ಏನೋ ಗುಸುಗುಸು ಮಾಡ್ಕೊಂಡು ನನ್ನ ಹತ್ತಿರ ಬಂದು
“ ಲೊ ಮರಿ ಏನೋ ನಿನ್ನ ಹೆಸರು?”
“ಜಾನಿ” ಅಂದೆ ನಾನು.
“ಹೆಸರು ಚೈನೀಸ್ ಥರಾ ಇಲ್ಲ. ಏನ್ ಕಥೆನೋ.. ಏನೋಪ್ಪ” ಅಂದರು.
ಅಷ್ಟುಹೊತ್ತಿಗೆ ಅಮ್ಮ ಅಡುಗೆಮನೆಯಿಂದ ಹೊರಗೆ ಬಂದಳು.ಅವರಿಬ್ಬರ ಕಡೆಗೆ ನೋಡಿ
ಮುಗುಳ್ನಕ್ಕಳು. ಅಪ್ಪ ಬರುವವರೆಗೂ ಮೂವರೂ ಮುಖ ಮುಖ ನೋಡ್ಕೊಂಡು ಹಂಗೆ ನಿಂತಿದ್ರು.
ಒಂದುದಿನ ಗೆಳೆಯ ಟೋನಿ ನಮ್ಮ ಮನೆಗೆ ಆಡಲು ಬಂದ.ನಮ್ಮ ಬೀದಿಯಲ್ಲೆ ಕೊನೇಮನೆ ಅವನದ್ದು. ಅವನ
ಸ್ಟಾರ್ ವಾರ್ ಸೆಟ್ ನ ಗೊಂಬೆಗಳನ್ನೆಲ್ಲ ಎತ್ಕೊಂಡು ಬಂದಿದ್ದ. Obi wan Kenobi ಕೈಯೆತ್ತಿ ಮುಖ ತಿರುಗಿಸಿಕೊಂಡು ಮೆತ್ತಗೆ use the force ಅನ್ನುತ್ತಿತ್ತು. ನಂಗೆ ಅಷ್ಟೇನೂ ಇಷ್ಟ ಆಗಲಿಲ್ಲ ಅದು..ಏನೋ ಸುಮಾರಾಗಿತ್ತು. ನಾವಿಬ್ರೂ
ನಾಲ್ಕೈದು ಸಾರಿ ಅದನ್ನೇ ಹೇಳಿಸಿದ್ವಿ.. ಆಮೇಲೆ ಬೇಜಾರು ಬಂತು. ಇನ್ನೇನೆಲ್ಲ ಮಾಡತ್ತೆ ಇದು
?ಅಂದೆ ನಾನು. ಟೋನಿಗೆ ಸಿಟ್ಟು ಬಂತು .....ಅಲ್ಲೇ ಕೆಳಗೆ ಎಲ್ಲ ಬರೆದಿದ್ದಾರಲ್ಲ.. ಓದ್ಕೋ ನೀನೆ..
ಅಂದ. ಎಲ್ಲ ಓದಿದೆ.... ತಲೆಬುಡ ಗೊತ್ತಾಗಲಿಲ್ಲ. ನಾನು ಸುಮ್ನೆ ಇರೋದು ನೋಡಿ ಟೋನಿ “ ನಿನ್ನತ್ರ
ಏನೇನು ಆಟದ ಸಾಮಾನು ಇದೆ ?ತಗೊಂಡು ಬಾ ನೋಡೋಣ ಅಂದ. ನನ್ನತ್ರ ಪೇಪರ್ ಗೊಂಬೆಗಳನ್ನು ಬಿಟ್ರೆ
ಇನ್ನೇನಿದೆ ತೋರ್ಸಕ್ಕೆ? ಸರಿ..ಲಾಹೋನನ್ನು ಕರಕೊಂಡು ಬಂದೆ. ಮೇಜಿನ ಮೇಲೆ ನಿಲ್ಲಿಸಿದೆ..ನಿಲ್ಲೋದಕ್ಕೆ ಕಷ್ಟಪಡುತ್ತ
ಇದ್ದ ಅವನು. ಯಾಕೋ ಇವನು ಮೊದಲಿನಂತೆ ಇಲ್ವಲ್ಲ ಅನಿಸಿತು. ನಾನು ಅಮ್ಮ ಸೇರಿ ಮಾಡಿದ ರಿಪೇರಿ
ಕೆಲಸಗಳಿಂದ ಅಲ್ಲಲ್ಲಿ ಮೈ ಹರಿದ ಹಾಗೆ ಕಾಣುತ್ತಿತ್ತು. ಕೋಣೆಯಲ್ಲಿದ್ದ ಬೇರೆ ಪ್ರಾಣಿಗಳು ಪುಟು
ಪುಟು ಹೆಜ್ಜೆ ಇಟ್ಕೊಂಡು ಬಂದು ಇಣುಕುತ್ತಾ ಹಜಾರಕ್ಕೆ ಬರಲು ಕಾಯ್ತಾ ಇವೆಯೋನೋ ಅನಿಸ್ತಾ ಇತ್ತು
ನನಗೆ. ಹೆಮ್ಮೆಯಿಂದ ಜೋರಾಗಿ “xiao laohu” ಅಂದವನೇ ನಾಲಿಗೆ
ಕಚ್ಕೊಂಡು ಗಂಭೀರವಾಗಿ “this is tiger” ಅಂದೆ. ಲಾಹೋ ಟೋನಿಯ ಕಡೆ ಗುರಾಯಿಸಿಕೊಂಡು, ಮುನ್ನುಗ್ಗಿ, ಮೈ ಕೈ ಎಲ್ಲ ಮೂಸತೊಡಗಿದ.
ಟೋನಿ ಲಾಹೊನ ಮೈ ಮೇಲೆ ಕಣ್ಣಾಡಿಸಿ ಗಿಫ್ಟ್ ಪೇಪರ್ ನ ಚಿತ್ತಾರಗಳನ್ನು ಗಮನಿಸಿ “ ಇದ್ಯಾವ ಸೀಮೆ
ಹುಲಿನೋ .. ನಿಮ್ಮಮ್ಮ ರದ್ದಿ ಪೇಪರ್ ನಲ್ಲಿ ಆಟದ ಸಾಮಾನು ಮಾಡಿ ಕೊಡ್ತಾರಾ ನಿಂಗೆ ?” ಅಂತ ಗೇಲಿ
ಮಾಡಿದ. ನನಗೆ ಇದ್ಯಾವತ್ತೂ ಹೊಳೆದಿರಲೇ ಇಲ್ಲ.ಇವತ್ತು ಲಾಹೋನನ್ನು ನೋಡುತ್ತಾ ಇದ್ದಂತೆ ‘ಅರೆ
ಹೌದಲ್ಲ... ಸುಮ್ನೆ ಕಾಗದದ ಗೊಂಬೆ’ ಇದು ಅನಿಸಿ ಪಿಚ್ಚೆನಿಸಿತು.
ಟೋನಿ Obi wan Kenobi ಯ ಕೈಯೇತ್ತಿಸಿ use the force ಅನ್ನಿಸಿದ .ಇದೆಲ್ಲ ನೋಡಿಕೊಂಡು ನನ್ನ ಲಾಹೋ ಏನು ಕಳ್ಳೆಪುರಿ ತಿನ್ಕೊಂಡು ಕೂತಿರತಾನಾ ? ಸರ್ರಂತ ತಿರುಗಿ ಒಂದು ಒದೆ ಕೊಟ್ಟ ನೋಡಿ .. ಟೋನಿಯ ಆ ಪ್ಲಾಸ್ಟಿಕ್ ಪೆಟ್ಟಿಗೆ ಧಪ್ಪಂತ
ಮೇಜಿನಿಂದ ಕೆಳಗೆ ಬಿದ್ದು Obi ಯ ತಲೆ ಒಡೆದು ಸೋಫಾದಡಿಗೆ ಹೋಯ್ತು.
ರ್ರಾ ...ರ್ರ್ರಾ.. ಅನ್ನುತ್ತ ಲಾಹೋ ಗಹಗಹಿಸಿ ನಕ್ಕ. ಅವನ ಜೊತೆ ನಾನೂ ನಕ್ಕೆ.ಟೋನಿಗೆ ಕೆಂಡದಂಥ
ಸಿಟ್ಟು ಬಂದು ನನ್ನ ಬೆನ್ನ ಮೇಲೆ ಗುದ್ದುತ್ತ
“ಲೊ .. ಎಷ್ಟು ಕಾಸ್ಟ್ಲಿ ಅದು ಗೊತ್ತೆನಲೋ .. ಬೇಕೂಫ ..... ನಿಮ್ಮಪ್ಪ ನಿಮ್ಮಮ್ಮನ
ಕೊಂಡುಕೊಳ್ಳಕ್ಕೆ ಕೊಟ್ಟ ದುಡ್ಡಿನ ಎರಡರಷ್ಟು ಬೆಲೆ ಇದಕ್ಕೆ..ತಿಳ್ಕೋ” ಅಂದ.
ನಂಗೆ ಕಣ್ಣು ಕತ್ತಲೆ ಬಂದು .. ತಲೆ ಸುತ್ತಿದಂತೆ ಅನಿಸಿ ನಾನು ಅಲ್ಲೇ ನೆಲದ ಮೇಲೆ ಕುಸಿದೆ.
ಲಾಹೋ ಗರ್ಜಿಸುತ್ತ ಟೋನಿಯ ಮೇಲೆ ನುಗ್ಗಿದ. ಟೋನಿ ಕಿಟಾರನೆ ಕಿರುಚಿದ.ನೋವಿಗಲ್ಲ ..ಭಯ ಮತ್ತು
ಆಶ್ಚರ್ಯಕ್ಕೆ ... ನೋವಾಗಲು ಏನಿದೆ ಅಲ್ಲಿ! ಲಾಹೋ ಅಂದ್ರೆ ಒಂದು ಪೇಪರ್ ಗೊಂಬೆ ಅಷ್ಟೇ ಅಲ್ವಾ ?
ಟೋನಿ ಲಾಹೊನನ್ನು ಗಬಕ್ಕಂತ ಕೈಯಲ್ಲಿ ಅಮುಕಿ ಅಪ್ಪಚ್ಚಿ ಮಾಡಿ ಹರಿದು ಬಿಸಾಕಿಬಿಟ್ಟ.
ಒಂದಷ್ಟು ಕಾಗದದ ಚೂರುಗಳನ್ನು ಮುದ್ದೆ ಮಾಡಿ ನನ್ನ ಮುಖದ ಮೇಲೆ ಬಿಸಾಕಿ ‘ತಗಳಲೇ ನಿನ್ನ ಚೈನೀಸ್
ಕಸದ ತಿಪ್ಪೆ ರಾಶಿ...’ ಅಂದವನೇ ಅವನ ಮನೆಗೆ ಓಡಿದ. ನಾನು ಎಲ್ಲ ಚೂರುಗಳನ್ನು ಸೇರಿಸಿ ಮತ್ತೆ
ಲಾಹೋನನ್ನು ಮಾಡಲು ಏನೆಲ್ಲಾ ಕಸರತ್ತು ಮಾಡಿದರೂ ಆಗಲೇ ಇಲ್ಲ....ಇದ್ದಕ್ಕಿದ್ದಂತೆ ಏನೋ
ಶಬ್ದವಾಯ್ತಲ್ಲ ಅಂತ ತಿರುಗಿ ನೋಡ್ತೀನಿ ..ಎಲ್ಲ ಪ್ರಾಣಿಗಳೂ ರೂಮಿನಿಂದ ಹೊರಗೆ ಬಂದು ನಮ್ಮಿಬ್ಬರ
ಸುತ್ತ ಗುಂಪು ಕಟ್ಟಿಕೊಂಡು ನಿಂತಿವೆ. ನಾನಂತೂ ದು:ಖ ತಡಿಯಲಾರದೆ ಗಳಗಳ ಅತ್ತುಬಿಟ್ಟೆ..
ನಮ್ಮಿಬ್ಬರ ಜಗಳ ಶಾಲೆಯಲ್ಲೂ ಮುಂದುವರೆಯಿತು. ಟೋನಿ ಶಾಲೆಯಲ್ಲಿ ಎಲ್ರಿಗೂ ಬೇಕಾದವನು.
ಗೆಳೆಯರ ದೊಡ್ಡ ಗುಂಪು ಅವನಿಗಿತ್ತು. ಮುಂದಿನ
ಎರಡು ವಾರ ನನ್ನದು ನಾಯಿ ಪಾಡು ..ನೆನೆಸಿಕೊಂಡರೆ ಮೈ ಜುಂ ಅನ್ನುತ್ತದೆ. ಹೆಂಗೋ ನಿಭಾಯಿಸಿದೆ
ಬಿಡಿ...
ಆ ಶುಕ್ರವಾರ ಮನೆಗೆ ಬಂದಾಗ ಅಮ್ಮ ಬಾಗಿಲು ತೆಗೆದು “ಪಾಪೂ ಬಂದ್ಯೇನೋ .. ಶಾಲೆ ಮುಗಿತಾ ..
“ ಎಂದೆಲ್ಲ ಚೈನೀಸ್ ಭಾಷೆಯಲ್ಲಿ ಮಾತು ಶುರು ಮಾಡಿದಳು. ನಾನು ಏನೂ ಹೇಳದೆ ಬಚ್ಚಲುಮನೆಗೆ ಹೋದೆ.
ಅಲ್ಲಿ ಕನ್ನಡಿಯಲ್ಲಿ ಮುಖ ಕಂಡಾಗ ಫಕ್ಕನೆ ‘ಇಲ್ಲ ..ಒಂಚೂರೂ ಹೋಲಿಕೆ ಇಲ್ಲ ನಂಗೂ ಅವಳಿಗೂ ..’ ಅನಿಸಿತು.
ರಾತ್ರಿ ಊಟ ಮಾಡುವಾಗ ಅಪ್ಪನನ್ನು ‘ನನ್ನದು ಚಿಂಕಿ ಮುಖನಾ’ ಅಂತ ಕೇಳಿದೆ.ಅಪ್ಪ ಕೈಯಲ್ಲಿದ್ದ
chop stick ನ್ನು ತಟ್ಟೆಯಲ್ಲಿಟ್ಟು ನನ್ನ ಮುಖವನ್ನೇ ತೀಕ್ಷ್ಣವಾಗಿ ನೋಡಿದರು.ನಾನು ಶಾಲೆಯಲ್ಲಿ
ನಡೆದಿದ್ದೆಲ್ಲ ಅವರಿಗೆ ಹೇಳಿರಲಿಲ್ಲ .ಆದರೆ ಅವರಿಗೆ ಎಲ್ಲ ತಿಳಿದಿದೆ ಅನ್ನೋ ಥರ ಅನಿಸ್ತಾ
ಇತ್ತು. ಅಪ್ಪ ಒಮ್ಮೆ ಕಣ್ಣು ಮುಚ್ಚಿ ಹಣೆ ಉಜ್ಜಿಕೊಳ್ಳುತ್ತ ‘ಹೇ ಇಲ್ಲಪ್ಪ’ ಅಂದರು. ಅಮ್ಮ ಏನೂ
ಅರ್ಥ ಆಗದೇ ನಮ್ಮಿಬ್ಬರ ಮುಖ ನೋಡುತ್ತಾ ‘ಏನದು ಚಿಂಕಿ ಅಂದ್ರೆ’ ಅಂದಳು. ನಾನು “ ಇಂಗ್ಲಿಷ್
...ಇಂಗ್ಲಿಷಲ್ಲಿ ಮಾತಾಡಮ್ಮ “ ಅಂದೆ. What happened ಅಂತೇನೂ ಹೇಳಲು ಹೊರಟಳು..
ಕಾಪ್ಸಿಕಂ ಮಸಾಲೆ ಹಾಕಿದ ಮಟನ್ ಫ್ರೈ ಇತ್ತು
ತಟ್ಟೆಯಲ್ಲಿ ..ನನಗೆ ಬೇಡ ಇದು .ನಾನು ಅಮೇರಿಕನ್ ಫುಡ್ ಮಾತ್ರ ತಿನ್ನೋದು ಅನ್ನುತ್ತ ತಟ್ಟೆನ ಆ
ಕಡೆ ತಳ್ಳಿದೆ. ಅಪ್ಪ ತಲೆ ನೇವರಿಸ್ತಾ ಸಮಾಧಾನ ಮಾಡಿ ‘ನಾವು ಅಮೆರಿಕಾದಲ್ಲಿ ಇದ್ರೆ ಏನಂತೆ
..ಎಲ್ಲಾರ ಮನೆಯಲ್ಲೂ ಆಗಾಗ ಚೈನೀಸ್ ಅಡುಗೆಯನ್ನೂ ತಿಂತಾರೆ.ಸುಮ್ನೆ ತಿನ್ನು ಈಗ’ ಅಂದರು. ನಾನು
ಎದ್ದು ನಿಂತು ರೋಷದಿಂದ “ ನಮ್ಮದು ಎಲ್ಲರ ಮನೆ
ಥರ ಅಲ್ಲವಲ್ಲ ..ಅವರ ಮನೆಯಲ್ಲಿ ಅವರ ಅಮ್ಮ ಇರ್ತಾಳೆ, ನಮ್ಮನೆಯಲ್ಲಿ
ಇಟ್ಕೊಂಡವಳು ಇರೋದು” ಅಂದೆ.
ಅಪ್ಪ ಒಂದು ಕ್ಷಣ ದಿಗ್ಭ್ರಾಂತರಾದರು.ಗಾಬರಿಯಿಂದ ನನ್ನನ್ನೇ ನೋಡುತ್ತಿದ್ದ ಅಮ್ಮನ ಭುಜದ
ಮೇಲೆ ಕೈಯಿಟ್ಟು ‘ನಿಂಗೆ ಅಮೇರಿಕನ್ ಅಡುಗೆ ಪುಸ್ತಕ ತಂದು ಕೊಡ್ತೀನಿ .. ಅದನ್ನು ನೋಡಿ ಅಡುಗೆ
ಕಲಿ..’ಎಂದರು. ಅಮ್ಮ ನನ್ನ ಬಳಿ ಬಂದು “ಯಾಕೋ ಚಿನ್ನು ..ಸಿಟ್ಟು.. ..ಊಟ ಚೆನ್ನಾಗಿಲ್ವಾ”
ಅನ್ನುತ್ತಿದ್ದ್ದಂತೆ “ ಇಂಗ್ಲಿಷಲ್ಲಿ ಮಾತಾಡು ನೀನು “ಎಂದು ಕಿರುಚಿದೆ. ಅಮ್ಮ ಹಣೆ ಮುಟ್ಟಿ ನೋಡಿ “ಜ್ವರ ಗಿರ ಬಂದಿದೆಯೇನೂ ಯಾಕೋ ಹಿಂಗೆಲ್ಲ ಆಡ್ತಿಯಾ” ಎನ್ನುತ್ತಾ
ಅಕ್ಕರೆ ತೋರಿಸಲು ಬಂದಾಗ ನಾನು ತಾಳ್ಮೆಗೆಟ್ಟು ಅವಳ ಕೈ ತಳ್ಳಿ “ನಾನು ಚೆನ್ನಾಗೆಯೇ ಇದೀನಿ
.ನೀನು ಇನ್ಮೇಲೆ ಇಂಗ್ಲಿಷಲ್ಲೇ ಮಾತಾಡಬೇಕು ಅಷ್ಟೇ” ಅಂದೆ.
ಅಪ್ಪ ಅಮ್ಮನ ಕಡೆಗೆ ತಿರುಗಿ “ನಿನಗೆ ಅವತ್ತಿಂದಲೂ ನಾನು ಹೇಳ್ತಾನೆ ಇದ್ದೆ ಇಂಗ್ಲಿಷ್ ಕಲಿ
ಅಂತ. ನನ್ನ ಮಾತು ಕಿವಿಗೇ ಹಾಕ್ಕೊಳ್ಳಿಲ್ಲ ನೀನು ,ಈಗ ನೋಡು ಹೆಂಗಾಗಿ ಹೋಯ್ತು? ಇನ್ನಾದ್ರು ಕಲಿ” ಎಂದರು.
ಅಮ್ಮ ಕೈ ಕೈ ಹಿಸುಕಿಕೊಂಡು ಏನೋ ಹೇಳಲು ಹೊರಟವಳು ಮಾತು ನಿಲ್ಲಿಸಿ ನನ್ನನ್ನೂ ಅಪ್ಪನನ್ನೂ
ನೋಡ್ತಾ ಶತಪಥ ತಿರುಗಲಾರಂಭಿಸಿದಳು.
ಅಪ್ಪ ದೃಢವಾದ ದನಿಯಲ್ಲಿ “ ಇಲ್ಲ ..ನೀನು ಇಂಗ್ಲಿಷ್ ಕಲಿಯಲೇಬೇಕು.. ನಾನು ನಿಂಗೆ ಸದರ
ಕೊಟ್ಟೆ ಇಷ್ಟುವರ್ಷ. ಈಗ ನೋಡು ಅವನಿಗೆ ಎಷ್ಟು ಕಷ್ಟ ಆಗ್ತಿದೆ” ಎಂದರು.
ಅಮ್ಮ ಅಪ್ಪನ ಕಡೆಗೆ ಇರಿಯುವ ನೋಟ ಬೀರುತ್ತ “ ಇಲ್ನೋಡಿ love ಅನ್ನುವಾಗ ಬಾಯಿ ಮಾತ್ರ ಮಾತಾಡುತ್ತದೆ
, ಆದ್ರೆ ai ಎನ್ನುವಾಗ ಹೃದಯದಿಂದ ಮಾತು ಬರುತ್ತದೆ” ಎನ್ನುತ್ತಾ ಎದೆಯ ಮೇಲೆ ಕೈಯಿಟ್ಟು
ಅಳಲಾರಂಭಿಸಿದಳು. [ ಚೀನಿಭಾಷೆಯಲ್ಲಿ ai = ಪ್ರೀತಿ,ಮಮತೆ ]
.ಅಪ್ಪ “ಆದರೆ ನೀನು ಅಮೆರಿಕಾದಲ್ಲಿ ಇರೋದು ನೆನಪಿದೆ ತಾನೇ” ಎಂದಷ್ಟೇ ಹೇಳಿ ಊಟ ಮುಗಿಸಿ
ಎದ್ದರು. ಅಮ್ಮ ಕುರ್ಚಿಯ ಮೇಲೆ ಕುಸಿದಳು. ನನ್ನ ಲಾಹೋ ನೀರಾನೆಯ ಮೇಲೆ ದಾಳಿ ಮಾಡಿದಾಗ ಅದರ ಗಾಳಿ
ಪುಸ್ಸಂತ ಹೋಗಿ ನಿರ್ಜಿವವಾಗಿತ್ತಲ್ಲ ಹಾಗೆ ಕಾಣ್ತಿದ್ಲು ಅಮ್ಮ. ನಾನು ತಲೆ ಕೊಡವಿಕೊಂಡು “ನನಗೆ
ಇನ್ಮೇಲೆ ಆ ಪೇಪರ್ ಗೊಂಬೆಗಳು ಬೇಡ.ಒಳ್ಳೆಯ ಆಟದ ಸಾಮಾನು ಬೇಕು” ಅಂದವನೇ ನನ್ನ ರೂಮು ಸೇರಿದೆ.
ಅಪ್ಪ ಮಾರನೆಯದಿನ ಸ್ಟಾರ್ ವಾರ್ ಸೆಟ್ ತಂದು ಕೊಟ್ಟರು.ನಾನಂತೂ ಖುಷಿಯಿಂದ ಕುಣಿದು
ಕುಪ್ಪಳಿಸಿ ಹಳೆಯ ಪೇಪರ್ ಗೊಂಬೆಗಳನ್ನು ಒಂದು ಚಪ್ಪಲಿಪೆಟ್ಟಿಗೆಯಲ್ಲಿ ಹಾಕಿ ಮಂಚದ ಕೆಳಗೆ
ತಳ್ಳಿದೆ. ಬೆಳಗ್ಗೆ ಎದ್ದು ನೋಡ್ತೀನಿ ಎಲ್ಲ ಪ್ರಾಣಿಗಳೂ ಪೆಟ್ಟಿಗೆಯಿಂದ ಹೊರಬಂದು ಅವರವರ
ಜಾಗದಲ್ಲಿ ಕೋಣೆ ತುಂಬಾ ಕೂತಿವೆ. ಬಿಡ್ತೀನಾ ನಾನು.... ಮತ್ತೆ ಎಲ್ಲವನ್ನೂ ಶೂ ಬಾಕ್ಸ್ ನಲ್ಲಿ
ದಬ್ಬಿ ಟೇಪು ಹಾಕಿ ಪೆಟ್ಟಿಗೆಯನ್ನು ಭದ್ರ ಮಾಡಿದೆ. ಸ್ವಲ್ಪ ಹೊತ್ತಿಗೆ ಒಳಗೆ ಗಲಾಟೆ ಶುರು
ಮಾಡಿದವು. ನನಗಂತೂ ತಲೆ ಚಿಟ್ಟು ಹಿಡೀತು. ಪೆಟ್ಟಿಗೆಯನ್ನು ಅಟ್ಟದ ಮೇಲೆ ಒಯ್ದು
ಕತ್ತಲಮೂಲೆಯಲ್ಲಿ ದಬ್ಬಾಕಿದೆ.
ಅಮ್ಮ ಚೈನೀಸ್ ಭಾಷೆಯಲ್ಲಿ ಮಾತನಾಡಿದರೆ ನಾನು ಉತ್ತರ ಕೊಡುವುದನ್ನೇ ನಿಲ್ಲಿಸಿದೆ.ಒಂದಷ್ಟು
ದಿನಗಳಾದ ಮೇಲೆ ಅಲ್ಪಸ್ವಲ್ಪ ಇಂಗ್ಲಿಷ್ ಕಲಿತು ಮಾತಾಡಲು ಶುರು ಮಾಡಿದಳು. ಅವಳ ಹರಕುಮುರುಕು
ಭಾಷೆ ಕೇಳಿದರೆ ನನಗೆ ಮೈ ಪರಚಿಕೊಳ್ಳುವಂತೆ ಆಗುತ್ತಿತ್ತು. ಸರಿಯಾಗಿ ಮಾತಾಡಲು ಹೇಳಿಕೊಟ್ಟೆ.
ಯಾಕೋ ...ಏನೋ... ದಿನಗಳು ಕಳೀತಾ ಇದ್ದ ಹಾಗೆ ಅಮ್ಮ ನನ್ನ ಜೊತೆ ಮಾತಾಡುವುದನ್ನೇ ನಿಲ್ಲಿಸಿದಳು.
ಏನಾದ್ರೂ ಅಗತ್ಯವಾಗಿ ಹೇಳಲೇಬೇಕು ಅನ್ನುವಾಗ ಕೈ ಸನ್ನೆ ಮಾಡುತ್ತಿದ್ದಳು. ಟಿವಿ ಸಿರಿಯಲ್
ಗಳಲ್ಲಿ ಅಮೇರಿಕನ್ ಅಮ್ಮಂದಿರು ಮಾಡುವ ಹಾಗೆ ಹತ್ತಿರ ಬಂದು ತಬ್ಬಿಕೊಳ್ಳಲು ನೋಡುತ್ತಿದ್ದಳು.
ನನಗೆ ಅವಳು ಮಾಡುವದು ಕಂಡರೆ ಕೋಪ ಬರುತ್ತಿತ್ತು. ‘ಅತೀ ಮಾಡ್ತಾಳೆ ...ಥೂ ..ಬರಿ ನಾಟಕ .. ಏನ್
ಹೆಂಗಸಪ್ಪಾ’ ಇವಳು ಅನಿಸುತ್ತಿತ್ತು. ನನ್ನ ಅಸಮಾಧಾನವನ್ನು ಗಮನಿಸಿದ ಅಮ್ಮ ನನ್ನ ಹತ್ತಿರ
ಬರುವುದನ್ನೇ ನಿಲ್ಲಿಸಿದಳು. ಇದನೆಲ್ಲ್ಲ ಗಮನಿಸುತ್ತಿದ್ದ ಅಪ್ಪ ಒಂದಿನ ‘ಅಮ್ಮನತ್ರ ಹಾಗೆಲ್ಲ
ನಡ್ಕೊಬಾರದು .. ಗೌರವ ಕೊಡುವುದು ಕಲಿ’ ಅಂತೇನೋ ಗದರಿಸಿದರು. ಆದ್ರೆ ನನ್ನ ಕಣ್ಣಲ್ಲಿ
ಕಣ್ಣಿಟ್ಟು ಮಾತನಾಡುವುದಕ್ಕೆ ಹಿಂಜರೀತಾ ಇದ್ದರು. ಅವರಿಗೂ ಮನಸ್ಸಿನ ಮೂಲೆಯಲ್ಲಿ
ಅನಿಸುತ್ತಿದ್ದಿರಬಹುದು -ಈ ಹಳ್ಳಿ ಹೆಂಗಸನ್ನು ಅಮೆರಿಕಾಗೆ ತಂದು ತಪ್ಪು ಮಾಡಿದ್ನೇನೋ ಅಂತ.
ನಿಧಾನವಾಗಿ ಅಮ್ಮ ಅಮೇರಿಕನ್ ಶೈಲಿಯ ಅಡುಗೆಗಳನ್ನು ಕಲಿತಳು. ನಾನಂತೂ ವಿಡಿಯೋಗೇಂ ಗಳಲ್ಲೇ busy... ಶಾಲೆಯಲ್ಲಿ ಫ್ರೆಂಚ್ ಭಾಷೆ ಕಲಿಯುತ್ತಿದ್ದೆ. ಸಮಯ ಸರಿದದ್ದೇ ಗೊತ್ತಾಗುತ್ತಿರಲಿಲ್ಲ.
ಒಮ್ಮೊಮ್ಮೆ ಅಡುಗೆಮನೆಯಲ್ಲಿ ಇಣುಕಿದರೆ ಅಮ್ಮನ ಗಿಫ್ಟ್ ಪೇಪರ್ ಕೈಚಳಕ ಕಾಣಿಸುತ್ತಿತ್ತು. ಮಾರನೇ
ದಿನ ಒಂದು ಪ್ರಾಣಿ ನನ್ನ ಕೋಣೆಯಲ್ಲಿ ಪ್ರತ್ಯಕ್ಷ ಆಗುತ್ತಿತ್ತು. ಹತ್ತಿರ ಬಂದು “ ಏನಣ್ಣಾ
..ಹೆಂಗಿದಿಯಾ ?’ ಅನ್ನುತ್ತಿತ್ತು. ನಾನು ಅದನ್ನು ಒತ್ತಿ ಗಾಳಿಯನ್ನೆಲ್ಲ ಪುಸ್ ಅನ್ನಿಸಿ ಅಟ್ಟದ
ಮೇಲೆ ಬಿಸಾಕುತ್ತಿದ್ದೆ. ಅಬ್ಬ ..ನಾನು ಹೈಸ್ಕೂಲು ಮುಗಿಸುವ ಹೊತ್ತಿಗೆ ಅಮ್ಮ ಗೊಂಬೆ
ಮಾಡುವುದನ್ನು ನಿಲ್ಲಿಸಿದಳು, ಒಳ್ಳೆಯ ಇಂಗ್ಲಿಷ್ ಕಲಿತಳು. ಆದರೆ ಅಷ್ಟು ಹೊತ್ತಿಗೆ ನನ್ನ ಪ್ರಪಂಚವೇ ಬೇರೆ ಆಯಿತು.. ಅವಳು
ಏನು ಮಾತಾಡಿದ್ರೆ ನನಗೇನು ? ಯಾವ ಭಾಷೆ ಮಾತಾಡಿದರೂ ಅಷ್ಟೇ.. ಅವಳ ಕಂತೆ ಪುರಾಣ ಕೇಳುವಷ್ಟು ಸಮಯ
ನನಗಿರಲಿಲ್ಲ. ಒಮ್ಮೊಮ್ಮೆ ನಾನು ಕಾಲೇಜು ಮುಗಿಸಿ ಮನೆಗೆ ಬರುವಾಗ ಅಡುಗೆಮನೆಯಲ್ಲಿ ನನ್ನ ಕುಳ್ಳಿಅಮ್ಮ
ಚೈನೀಸ್ ಹಾಡು ಗುನುಗುನಿಸುತ್ತ ,ಚುರುಕಾಗಿ ಓಡಾಡ್ತಾ ಕೆಲಸ ಮಾಡುವುದನ್ನು ನೋಡುವಾಗ’ ನಾನು
ನಿಜವಾಗಲೂ ಇವಳ ಹೊಟ್ಟೆಯಲ್ಲೇ ಹುಟ್ಟಿದವನಾ? ನಮ್ಮಿಬ್ಬರಿಗೂ ಒಂದು ಚೂರೂ ಹೋಲಿಕೆ ಇಲ್ವಲ್ಲ ..’
ಅನಿಸುತ್ತಿತ್ತು. ಅಯ್ಯೋ.. ಅವಳು ಯಾರಿಗೆ ಹುಟ್ಟಿದವಳೋ ಯಾರಿಗ್ಗೊತ್ತು ..ಎನ್ನುತ್ತಾ ತಲೆ ಕೊಡವಿಕೊಂಡು ನಾನು ರೂಮು ಸೇರುತ್ತಿದ್ದೆ. ನನ್ನ
ಅಮೇರಿಕನ್ ಜಗತ್ತಿನ ಸಂತಸದ ಅಲೆಗಳಲ್ಲಿ ತೇಲಾಡುತ್ತ ಎಲ್ಲವನ್ನೂ ಮರೆಯುತ್ತಿದ್ದೆ.
--------------
ಅಮ್ಮ ಆಸ್ಪತ್ರೆಯ ಹಾಸಿಗೆಯಲ್ಲಿ ಮುದುರಿಕೊಂಡು ಮಲಗಿದ್ದಳು.ನಾನು ಮತ್ತು ಅಪ್ಪ ಮಗ್ಗುಲಲ್ಲಿ
ಕುಳಿತಿದ್ದೆವು. ಇನ್ನೂ 40 ವರ್ಷನೂ ಆಗಿಲ್ಲ ಆದರೆ ತುಂಬಾ ವಯಸ್ಸಾದವಳಂತೆ ಕಂಡಳು ಅಮ್ಮ. ಆಗಾಗ
ಹೊಟ್ಟೆನೋವು ಅನ್ನುತ್ತ ಏನೋ ಮನೆ ಮದ್ದು ಮಾಡಿಕೊಳ್ಳುತ್ತಿದ್ದುದು ಬಿಟ್ಟರೆ ಅಮ್ಮ ಹುಷಾರು
ತಪ್ಪಿದ್ದೆ ನೆನಪಿಲ್ಲ ನನಗೆ. ಏನೇ ಆದರೂ ಡಾಕ್ಟರ ಹತ್ತಿರ ಮಾತ್ರ ಹೋಗಲು ಒಪ್ಪುತ್ತಿರಲಿಲ್ಲ.
ಕೊನೆಗೆ ಅಪ್ಪ ಒತ್ತಾಯದಿಂದ ಆಸ್ಪತ್ರೆಗೆ ತರುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿತ್ತು. ಕ್ಯಾನ್ಸರ್
ಮೈತುಂಬ ವ್ಯಾಪಿಸಿತ್ತು. ಅವಳು ಇದ್ದಷ್ಟು ದಿನ
ನಿಮ್ಮ ಭಾಗ್ಯ... ಅಂದರು ಡಾಕ್ಟ್ರು.. ನಾನು ಆಸ್ಪತ್ರೆಯಲ್ಲಿ ಅಮ್ಮನ ಪಕ್ಕ ಕುಳಿತಿದ್ದರೂ
ಮನಸ್ಸೆಲ್ಲ ಕಾಲೇಜಿನಲ್ಲೇ ಇತ್ತು. ಕ್ಯಾಂಪಸ್ ಸೆಲೆಕ್ಷನ್ ನಡೆಯುತ್ತಾ ಇತ್ತು ಆವಾಗ. ಬಯೋ ಡಾಟಾ
, transcript , presentation, interview ಏನೆಲ್ಲಾ ಇರುತ್ತದೆ ಅಲ್ವಾ ? ಎಷ್ಟು ತಯಾರಿ ಮಾಡಬೇಕು ಅದಕ್ಕೆಲ್ಲ ..ನಾನು ನೋಡಿದ್ರೆ
ಇಲ್ಲಿ ಸಿಕ್ಕಿ ಹಾಕೊಂಡಿದಿನಿ. ನನ್ನನ್ನೇ ಆಯ್ಕೆ ಮಾಡುವ ಹಾಗೆ ಮಾಡಲು ಏನೆಲ್ಲಾ ಕತೆ ಕಟ್ಟಬಹುದು
ಅಂತ ಅಮ್ಮನ ಬಳಿಯಲ್ಲೇ ಕೂತು ಮನಸ್ಸಲ್ಲಿ ಕತೆ ಪೋಣಿಸುತ್ತ ಇದ್ದೆ. ಒಳ ಮನಸ್ಸು ಚೀರುತ್ತಿತ್ತು ‘
ಕತ್ತೆ ಭಡವ .. ನಿಮ್ಮಮ್ಮ ಸಾಯ್ತಾ ಬಿದ್ದಿದ್ದಾಳೆ ..ನೀನು ಹೀಗೆಲ್ಲ ಯೋಚಿಸ್ತಿದ್ದಿಯಾ’ ಅಂತ.
ಆದರೆ ಮನಸ್ಸು ಹೇಳಿದ್ದೆಲ್ಲ ಕೇಳ್ತಾ ಕೂರಕ್ಕೆ ಆಗುತ್ತದಾ ನೀವೇ ಹೇಳಿ..ಭಾವನೆಗಳನ್ನು
ಬದಿಗಿಟ್ಟು ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚನೆ
ಮಾಡಬೇಕು ಎನ್ನುವ ನಿರ್ಧಾರ ಮಾಡಿದೆ.
ಅಮ್ಮ ಕಣ್ಣು ಬಿಟ್ಟು ನಮ್ಮ ಕಡೆ ನೋಡಿದಾಗ ಅಪ್ಪ ಅಮ್ಮನ ಕೈ ಹಿಡಿದು ಹಣೆಗೆ ಮುತ್ತು
ಕೊಟ್ಟರು. ಯಾಕೋ ಅಪ್ಪನೂ ತುಂಬಾ ಸುಸ್ತಾದವರಂತೆ ಕಾಣುತ್ತಿದ್ದರು. ನನಗೆ ಒಳಗೊಳಗೇ ಸಂಕಟವಾಯಿತು.
ನಾನು ಅಪ್ಪನತ್ರ ಯಾವತ್ತೂ ಪ್ರೀತಿಯಿಂದ ಮಾತಾಡಲೇ ಇಲ್ಲ...ಅವರನ್ನು ಅರಿಯುವ ಪ್ರಯತ್ನವನ್ನೇ
ಮಾಡಲಿಲ್ಲ ..ಅಮ್ಮನ ಜೊತೆಗೂ ಹೀಗೆಯೇ ನಡೆದುಕೊಂಡೆ.. ಛೆ .. ನಾನ್ಯಾಕೆ ಹೀಗಾದೆ ಎನ್ನಿಸಿ
ಅರೆಕ್ಷಣ ತಳಮಳವಾಯಿತು.
ಅಮ್ಮ ಅಪ್ಪನನ್ನು ನೋಡಿ ಮುಗುಳುನಕ್ಕು
ನಂಗೇನೂ ಆಗಿಲ್ಲ ..ಚೆನ್ನಾಗಿದ್ದೀನಿ ಅಂದಳು. ನನ್ನನ್ನು ನೋಡಿ ನಕ್ಕು “ ನೀನು ಕಾಲೇಜಿಗೆ ವಾಪಸ್
ಹೋಗಬೇಕಲ್ವಾ ಪುಟ್ಟ ..ಇಲ್ಲಿದ್ರೆ ತಡ ಆಗುತ್ತದೆ “ ಅಂದಳು. ಅವಳ ಮೈತುಂಬ ಚುಚ್ಚಿದ್ದ
ನಳಿಕೆಗಳು, ಪಕ್ಕದಲ್ಲಿದ್ದ ಯಂತ್ರಗಳ ಶಬ್ದದಲ್ಲಿ ಅವಳ ದನಿ ಕ್ಷೀಣವಾಗಿ ಕೇಳಿತು. “ ನೀನು
ನಿಶ್ಚಿಂತೆಯಾಗಿ ಹೋಗಿ ಬಾ ಕಂದಾ ..ಇದೇನೂ ಅಂಥ ದೊಡ್ಡ ವಿಷಯ ಅಲ್ಲ. ವಿದ್ಯಾಭ್ಯಾಸ ತುಂಬಾ ಮುಖ್ಯ
ಅದನ್ನು ಯಾವ ಕಾರಣಕ್ಕೂ ನಿರ್ಲಕ್ಷ ಮಾಡಬಾರದು..ಚೆನ್ನಾಗಿ ಓದು ಮರಿ ..ಹೋಗಿ ಬಾ “ ಅಂದಳು.
ನಾನು ಅಮ್ಮನ ಕೈ ಹಿಡಿದು ನೇವರಿಸಿದೆ. ಇಂಥ
ಸಮಯದಲ್ಲಿ ಹೀಗೆ ಎಲ್ಲ ಮಾಡಬೇಕು ಅಲ್ವಾ! ಒಂಥರಾ ಸಮಾಧಾನ ಆಯ್ತು.. ಆದ್ರೆ ಮನಸ್ಸೆಲ್ಲ ಫ್ಲೈಟು ,
ಬೋರ್ಡಿಂಗ್ ಪಾಸು, ಕ್ಯಾಲಿಫೋರ್ನಿಯಾ ದ ಬೆಚ್ಚಗೆ ಬಿಸಿಲಿನ ಸುತ್ತಲು ಸುತ್ತುತ್ತಿತ್ತು. ಅಮ್ಮ ಅಪ್ಪನ
ಕಿವಿಯಲ್ಲಿ ಏನೋ ಉಸುರಿದಳು. ಅಪ್ಪ ತಲೆಯಾಡಿಸಿ ಕೋಣೆಯಿಂದ ಹೊರಗೆ ಹೋದರು.
“ ಪುಟ್ಟ .. ಒಂದು ವೇಳೆ ನಾನು ... ಗಂಟಲೊತ್ತಿ ಕೆಮ್ಮು ಶುರುವಾಯಿತು .. ಒಂದರೆಕ್ಷಣ
ಸುಧಾರಿಸಿಕೊಂಡು ಒಂದು ವೇಳೆ ನಾನು ಹೋದರೆ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಆರೋಗ್ಯ ಹಾಳು
ಮಾಡಿಕೊಬೇಡ.ನಿನ್ನ ಮುಂದಿನ ಜೀವನದ ಬಗ್ಗೆ ಗಮನ ಕೊಡು. ಆ ಪೆಟ್ಟಿಗೆ ಅಟ್ಟದ ಮೇಲೆ ಇದೆಯಲ್ಲ
ಅದನ್ನು ಮಾತ್ರ ಜೋಪಾನ ಮಾಡು.ಪ್ರತಿವರ್ಷ Qing ming ಹಬ್ಬದ ದಿನ ಸತ್ತವರಿಗೆ ಎಡೆ ಇಡಬೇಕು. ಅವತ್ತು ಆ ಪೆಟ್ಟಿಗೆಯನ್ನು ತೆರೆದು ಒಮ್ಮೆ
ನನ್ನನ್ನು ನೆನಪಿಸಿಕೋ.ನನ್ನ ಆಶೀರ್ವಾದ ಸದಾ ನಿನ್ನ ಮೇಲೆ ಇರುತ್ತದೆ. ಹೋಗಿ ಬಾ ಕಂದಾ ..ದೇವರು
ಒಳ್ಳೇದು ಮಾಡಲಿ “ ಅಂದಳು .
Qing ming ಅನ್ನೋದು ಚೀನಾದ ಹಬ್ಬ. ಕುಟುಂಬದಲ್ಲಿ ಸತ್ತವರನ್ನು ಅವತ್ತು ನೆನಪಿಸಿಕೊಳ್ತಾರೆ. ನಾನು ಚಿಕ್ಕವನಿರುವಾಗ
ಆ ಹಬ್ಬದ ದಿನ ಅಮ್ಮ ಅವಳ ತಂದೆತಾಯಿಗೆ ಪತ್ರ ಬರೆಯುತ್ತಿದ್ದಳು. ಅವರು ಚೀನಾದಲ್ಲಿ ಸತ್ತು
ಯಾವುದೋ ಕಾಲವಾಗಿತ್ತು. ಆ ವರ್ಷ ಅಮೇರಿಕಾದಲ್ಲಿ ಅವಳ ಜೀವನದಲ್ಲಿ ಏನೆಲ್ಲಾ ಒಳ್ಳೆಯ ಘಟನೆಗಳು
ನಡೆದವು ಎಂದು ವಿವರವಾಗಿ ಬರೆಯುತ್ತಿದ್ದಳು. ಆಮೇಲೆ ನನಗೆ ಅದನ್ನು ಓದಿ ಹೇಳುತ್ತಿದ್ದಳು.ನಾನು
ಏನಾದರೂ ನೆನಪಿಸಿದರೆ ಅದನ್ನೂ ಸೇರಿಸುತ್ತಿದ್ದಳು.ನಂತರ ಆ ಕಾಗದದಿಂದ ಒಂದು ಪಾರಿವಾಳವನ್ನು ಮಾಡುತ್ತಿದ್ದಳು.
ಆ ಪೇಪರ್ ಪಾರಿವಾಳವನ್ನು ಊದಿ ಪಶ್ಚಿಮದ ಕಡೆಗೆ ತೂರಿ ಬಿಡುತ್ತಿದ್ದಳು.ನಾವಿಬ್ರೂ ತುಂಬಾ ಹೊತ್ತು
ಅದು ತೂರಿಕೊಂಡು ಹೋದ ದಿಕ್ಕಿಗೆ ನೋಡುತ್ತಾ ಕುಳಿತಿರುತ್ತಿದ್ದೆವು. ಅದು ರೆಕ್ಕೆ ಬಡಿದು ಹಾರಿ
ಪೆಸಿಫಿಕ್ ಸಮುದ್ರವನ್ನು ದಾಟಿ ಚೀನಾ ದೇಶವನ್ನು ತಲುಪಿ ಅಲ್ಲಿ ಅವಳ ತವರೂರಿನಲ್ಲಿರುವ ತಂದೆ
ತಾಯಿಯ ಸಮಾಧಿಯನ್ನು ತಲುಪುವ ಕನಸು ಕಾಣುತ್ತ ಇರುತ್ತಿದ್ದೆವು ನಾನು ನಮ್ಮಮ್ಮ ...
ಆಸ್ಪತ್ರೆಯಲ್ಲಿ ಅಮ್ಮನ ಮುಂದೆ ನಿಂತಿದ್ದ ಆ ಕ್ಷಣದಲ್ಲಿ ಇಷ್ಟೆಲ್ಲಾ ನೆನಪುಗಳು ಸರ್ರನೆ
ಹಾದು ಹೋದವು. ಇದೆಲ್ಲ ಮಾಡಿ ಎಷ್ಟೊಂದು ವರ್ಷಗಳಾದುವಲ್ಲ ಅನಿಸಿದರೂ ಅದನ್ನೆಲ್ಲ ಮನಸ್ಸಿನಾಚೆಗೆ
ತಳ್ಳಿ “ ಚೀನಾದ ಹಬ್ಬಗಳ ವಿಷಯ ನಂಗೊತ್ತಿಲ್ಲಮ್ಮ. ಈಗ ನೀನು ಮಾತಾಡಿ ಆಯಾಸ ಮಾಡಿಕೋಬೇಡ.
ಸುಮ್ಮನಿರು “ಅಂದೆ.
“ ಪುಟ್ಟ ..ಆ ಪೆಟ್ಟಿಗೆ ಮಾತ್ರ ಮರೀ..ದೆ ಜೋಪಾ...ನವಾಗಿ ಇ...ಟ್ಟು...ಕೋ ...ಒಮ್ಮೊಮ್ಮೆ
ತೆರೆದು ...ನೋಡ್ .. ಆ..ಮೇಲೆ ಅನ್ನುತಿದ್ದಂತೆಯೇ ಕೆಮ್ಮು ಒತ್ತರಿಸಿ ಬಂತು.
“ ಅಯ್ಯೋ ..ಸುಮ್ನಿರಮ್ಮ ..ನಿಂದೊಂದು ರಗಳೆ” ಎಂದು ರೇಗಿದೆ.
“ haizi mama ai ni .. son.. mom loves you ... ಅಮ್ಮ ಕೆಮ್ಮುತ್ತ ಏನೇನೋ ಬಡಬಡಿಸಲಾರಂಭಿಸಿದಳು. ಅವತ್ತು ಊಟ ಮಾಡುವಾಗ ai ಎನ್ನುತ್ತಾ ತುಟಿ-ಎದೆಯ ಮೇಲೆ ಕೈಯಿಟ್ಟು ಮಾತಾಡಿದ್ದು ನೆನಪಾಯಿತು. “ಆಯ್ತು ಬಿಡಮ್ಮ.ನೀ
ಹೇಳಿದ್ದೆಲ್ಲ ಮಾಡುತ್ತೇನೆ.” ಅಂದೆ.
ಅಪ್ಪ ಅಮ್ಮನ ಕೆಮ್ಮಿನ ಶಬ್ದ ಕೇಳಿ ಆತಂಕದಿಂದ ಕೋಣೆಯೊಳಗೆ ಬಂದರು.ನನಗೆ ತಡವಾಗುತ್ತಿದೆ. ನಾನು ಹೊರಡುತ್ತೇನೆ ಎಂದು ಹೇಳಿ
ಅಲ್ಲಿಂದ ತಕ್ಷಣ ಹೊರಟೆ. ಟಿಕೆಟ್ ಬುಕ್ ಮಾಡಿ ವಿಮಾನಪ್ರಯಾಣವನ್ನು ತಪ್ಪಿಸಿಕೊಳ್ಳುವುದು
ಸರಿಯಲ್ಲ ಅಲ್ಲವೇ? ನಾನು ಪ್ರಯಾಣಿಸುತ್ತಿದ್ದ ವಿಮಾನ ಅರ್ಧ ದಾರಿ ಕ್ರಮಿಸುವಷ್ಟರಲ್ಲಿ ಅಮ್ಮ
ಮರಳಿಬಾರದ ಲೋಕಕ್ಕೆ ಪಯಣಿಸಿದಳು.
------------
ಅಮ್ಮ ಹೋದಮೇಲೆ ಅಪ್ಪ ತುಂಬಾನೇ ಇಳಿದುಹೋದರು.ಅಷ್ಟು ದೊಡ್ಡ ಮನೆಯಲ್ಲಿ ಒಬ್ಬನೇ ಇರಲಾರೆ
ಎಂದು ಅದನ್ನು ಮಾರಿದರು.ನಾನು ಮತ್ತು ಗೆಳತಿ ಸೂಸನ್ ಮನೆ ಖಾಲಿ ಮಾಡಲು ಸಹಾಯಕ್ಕೆಂದು
ಹೋಗಿದ್ದೆವು.ಎಲ್ಲವನ್ನೂ ಪ್ಯಾಕ್ ಮಾಡಿದೆವು. ಅಟ್ಟ ಸ್ವಚ್ಛ ಮಾಡುವಾಗ ಆ ಚಪ್ಪಲಿ ಪೆಟ್ಟಿಗೆ
ಸೂಸನ್ ಳ ಕಣ್ಣಿಗೆ ಬಿತ್ತು. ಪೇಪರ್ ಪ್ರಾಣಿಗಳು ಅಟ್ಟದ ಕತ್ತಲೆಯಲ್ಲಿ ವರ್ಷಾನುಗಟ್ಟಲೆ ಬಿದ್ದಿದ್ದಕ್ಕೋ ಏನೋ ಬಣ್ಣಗೆಟ್ಟು
ಮಂಕಾದಂತೆ ಕಾಣುತ್ತಿದ್ದವು. ಆದರೆ ಸೂಸನ್ ಅದನ್ನೆಲ್ಲ ನೋಡಿ ಹುಬ್ಬೇರಿಸಿ “ಅಬ್ಬಬ್ಬ.. ಒರಿಗಮಿ
ಆಟಿಕೆಗಳು ಎಷ್ಟು ಅದ್ಭುತವಾಗಿವೆ. ನಾನ್ಯಾವತ್ತೂ
ನೋಡಿರಲಿಲ್ಲ ಇಂಥದ್ದನ್ನು. ನಿಮ್ಮಮ್ಮ ಎಷ್ಟು ಒಳ್ಳೆಯ ಆರ್ಟಿಸ್ಟ್ ಕಣೋ “ ಅನ್ನುತ್ತ ನನ್ನ
ಕಡೆಗೆ ಮೆಚ್ಚುಗೆಯ ನೋಟ ಬೀರಿದಳು. ನಾನು ಒಂದು ಕ್ಷಣ ಎಲ್ಲವನ್ನು ಮತ್ತೆ ಗಮನಿಸಿದೆ. ‘ಏನು
ಒರಿಗಮಿಯೋ ಏನು ಕರ್ಮವೋ..’ ಎಲ್ಲ ಪ್ರಾಣಿಗಳೂ ನಿರ್ಜೀವವಾಗಿ ಬಿದ್ಕೊಂಡಿದ್ದವು.ಬಹುಶ: ಅಮ್ಮ
ಜೊತೆ ಅವಳ ಜಾದೂ ಕೂಡಾ ಇಲ್ಲವಾಯ್ತೇನೋ ! ಅಥವಾ ನಾನೇ ಹುಚ್ಚುಚ್ಚಾಗಿ ಈ ಪ್ರಾಣಿಗಳಿಗೆ ಜೀವ
ಇದೆ..ಮನೆ ತುಂಬ ಸುತ್ತಾಡುತ್ತವೆ ಅಂದುಕೊಂಡಿದ್ದೆನಾ? ಚಿಕ್ಕವರಿದ್ದಾಗ ನಾವು
ಏನೆಲ್ಲಾ ಕಲ್ಪನೆ ಮಾಡಿಕೊಳ್ಳುತ್ತೇವೆ. ಅವೆಲ್ಲ ನಿಜ ಆಗಲು ಸಾಧ್ಯವಿಲ್ಲ ಅಲ್ಲವೇ?
ಅವತ್ತು ಎಪ್ರಿಲ್ ನ ಮೊದಲನೇ ಭಾನುವಾರ. ಅಮ್ಮ ಹೋಗಿ ಎರಡು ವರ್ಷವಾಗಿತ್ತು.ಸೂಸನ್ ಆಫೀಸ್
ಕೆಲಸದ ಮೇಲೆ ಹೋಗಿದ್ದಳು .ಅವಳ ಕೆಲಸ ಹೀಗೇನೆ... ಯಾವಾಗೆಂದರೆ ಆವಾಗ ಟೂರ್ ಹೋಗಬೇಕು.ನಾನು
ಮನೆಯಲ್ಲಿ ಒಬ್ಬನೇ ಹಾಗೆ ಸುಮ್ಮನೆ ಟಿವಿ ನೋಡುತ್ತಾ ಕುಳಿತಿದ್ದೆ.ಶಾರ್ಕ್ ಗಳ ಬಗ್ಗೆ ಏನೋ
ತೋರಿಸುತ್ತ ಇದ್ದರು. ಇದ್ದಕ್ಕಿದ್ದಂತೆ ಅಮ್ಮನ ಕೈಗಳೇ ಕಣ್ಮುಂದೆ ಬಂದವು.ಅವತ್ತು ನಾನು ಮತ್ತು
ಲಾಹೋ ಕಣ್ ಬಿಟ್ಟು ನೋಡ್ತಾ ಇದ್ದ ಹಾಹೆ ಅಮ್ಮನ ಕೈಚಳಕದಿಂದ ಗಿಫ್ಟ್ ಪೇಪರ್ ಒಂದೇ ನಿಮಿಷಕ್ಕೆ
ಶಾರ್ಕ್ ಆಗಿತ್ತಲ್ಲ!..
ಏನೋ ಪರ್..ಪರ್.. ಅಂತ ಸದ್ದಾಯ್ತು.
ನೋಡಿದ್ರೆ ಒಂದು ಪೇಪರ್ ಮುದ್ದೆ ಪುಸ್ತಕದ ಕಪಾಟಿನ ಪಕ್ಕ ಬಿದ್ದಿತ್ತು.ಕಸದಬುಟ್ಟಿಗೆ ಹಾಕಲು
ಹೊರಟೆ..ಅರೆ ..ನೋಡ್ತೀನಿ ಪೇಪರ್ ತೆರಕೊಂಡು ಗುರ್...ಅಂದಿತು.. ಲಾಹೋ ನನ್ನ ಕಡೆ ಗುರಾಯಿಸಿದ.
ಇಷ್ಟು ವರ್ಷ ಎಲ್ಲಿತ್ತೋ ಇದು ..ನಾನು ಇವನ್ನೆಲ್ಲ ಮೂಲೆಗೆ ಹಾಕಿದ್ದೆ.. ಬಹುಶ:ಅಮ್ಮ ಎಲ್ಲವನ್ನೂ
ರಿಪೇರಿ ಮಾಡಿ ಮೊದಲಿನ ಥರವೇ ಮಾಡಿ ಇಟ್ಟಿದ್ದಳೇನೋ ಅನ್ಸುತ್ತೆ.
ನನ್ನ ಕೈ ಮೇಲೆ ಇಷ್ಟೇ ಇಷ್ಟು ಪುಟಾಣಿಯ ಥರ ಕಾಣುತ್ತಿದ್ದ. ಅವಾಗೆಲ್ಲ ಎಷ್ಟು ದೊಡ್ಡ ಹುಲಿ
ಅನಿಸುತ್ತಿತ್ತು...ಹೌದು ..ನಾನು ಆವಾಗ ಪುಟ್ಟ ಹುಡುಗ ಆಗಿದ್ದೆ. ಅದಕ್ಕೆ ಎಲ್ಲವೂ ದೊಡ್ಡದಾಗಿ
ಕಾಣುತ್ತಿತ್ತೇನೋ ನಂಗೆ! ಸೂಸನ್ ಅವತ್ತು ಪೆಟ್ಟಿಗೆಯನ್ನು ನಮ್ಮ ಮನೆಗೆ ತಂದು ಎಲ್ಲ ಪ್ರಾಣಿ
ಗೊಂಬೆಗಳನ್ನು ಮನೆ ತುಂಬಾ ನೇತು ಹಾಕಿದ್ದಳು. ಇದು ಬಣ್ಣಗೆಟ್ಟಿತ್ತಲ್ಲ ಅದಕ್ಕೆ ಪೆಟ್ಟಿಗೆಯಲ್ಲೇ
ಬಿಟ್ಟಿದ್ಲು.. ಅನ್ಸುತ್ತೆ. ನೆಲದ ಮೇಲೆ ಕಾಲು
ಚಾಚಿ ಕೂತು ಲಾಹೋನನ್ನು ಪಕ್ಕದಲ್ಲಿ ನಿಲ್ಲಿಸಿದೆ. ಬಾಲವನ್ನು ಅಲ್ಲಾಡಿಸಿದೆ. ಟಾರ್ ಟಾರ್ ಅಂತ
ಜೀಕಿತು. ಹಳೆಯದೆಲ್ಲ ನೆನಪಾಗಿ ನಗು ಬಂತು.ಬೆನ್ನು ನೇವರಿಸಿ ‘ಏನಣ್ಣಾ ಹೆಂಗಿದಿಯಾ’ ಅಂದೆ.
ಕೈಯಿಂದ ಟನ್ಣಂತ ಜಾರಿ ಕೆಳಗೆ ನೆಗೆದ. ಬಿದ್ದ ರಭಸಕ್ಕೆ ಒಂದು ಕಡೆಯ ಪೇಪರ್ ತೆರೆದುಕೊಂಡು ಮಡಚಿದ
ಕಾಗದವೊಂದು ನನ್ನ ಮಡಿಲಲ್ಲಿ ಬಿತ್ತು. ಅದು ಗಿಫ್ಟ್ ಪೇಪರ್ ನ ಒಂದು ತುಂಡು. ಒಳಗಿನ ಖಾಲಿ
ಭಾಗದಲ್ಲಿ ಚೈನೀಸ್ ಅಕ್ಷರಗಳಲ್ಲಿ ಏನೇನೋ ಬರೆದಿತ್ತು. ನನಗೆ ಚೈನೀಸ್ ಚಿತ್ರಲಿಪಿ ಓದಲು
ಬರುತ್ತಿರಲಿಲ್ಲ. ಆದರೆ son ಅನ್ನುವ ಒಂದು ಅಕ್ಷರ ಮಾತ್ರ ಗೊತ್ತಿತ್ತು. ಪತ್ರದ ಮೊದಲ ಸಾಲಲ್ಲಿ ಆ ಅಕ್ಷರವಿತ್ತು.ಅಮ್ಮನ
ಅಂಕುಡೊಂಕು ಕೈಬರಹದ ಪತ್ರದಲ್ಲಿ ಅದೊಂದೇ ನನಗೆ ಅರ್ಥವಾದದ್ದು. ಇದ್ದಕ್ಕಿದ್ದಂತೆ ನೆನಪಾಯಿತು
ಇವತ್ತು ಸತ್ತವರಿಗೆ ಎಡೆ ಇಡೋ ದಿನ. ಇಂಟರ್ನೆಟ್ ನಲ್ಲಿ ಜಾಲಾಡಿದೆ. ಹೌದು ಇವತ್ತು ಚೀನಾದಲ್ಲಿ qin ming ಆಚರಣೆ ಎಂದಿತ್ತು.
ಪತ್ರವನ್ನು ಕೈಯಲ್ಲಿ ಹಿಡಿದು ಕಾರು ಹತ್ತಿ ಹುಚ್ಚನಂತೆ ಅಲೆದಾಡಿದೆ. ಸಿಟಿ ಬಸ್ ಸ್ಟಾಂಡ್ ನ
ಹತ್ತಿರ ಚೈನೀಸ್ ಟೂರಿಸ್ಟ್ ಏಜೆನ್ಸಿಗಳು , ಬಸ್ಸುಗಳನ್ನು ನೋಡಿದ್ದ ನೆನಪಾಯಿತು. ಸೀದಾ ಕಾರನ್ನು
ಆ ಕಡೆ ತಿರುಗಿಸಿ ಅಲ್ಲಿ ಬಸ್ಸುಗಳಿಗೆ ಕಾಯುತ್ತಿದ್ದ ಚೀನಿ ಪ್ರವಾಸಿಗರನ್ನು ಈ ಪತ್ರವನ್ನು
ಸ್ವಲ್ಪ ಓದಿ ಹೇಳಿ ಎಂದು ಬೇಡಿಕೊಂಡೆ. ಹೆಚ್ಚಿನವರು ಪ್ರತಿಕ್ರಿಯೆ ನೀಡಲೇ ಇಲ್ಲ.ನಾನು ಚೈನೀಸ್
ಭಾಷೆ ಮಾತಾಡುವುದನ್ನು ನಿಲ್ಲಿಸಿ ಅದೆಷ್ಟೋ ವರ್ಷವಾಗಿತ್ತಲ್ಲ ..ನಾನು ಮಾತಾಡ್ತಾ ಇರುವುದು
ಇವರಿಗೆ ಅರ್ಥವಾಗ್ತಿಲ್ವಾ ಹೇಗೆ? ಅನ್ನುವ ಸಂಶಯ ಬಂತು. ಅಂತೂ ಕೊನೆಗೆ ಒಬ್ಬಳು ಯುವತಿ
ಪತ್ರವನ್ನು ಓದಿಹೇಳಲು ಒಪ್ಪಿದಳು. ಅಲ್ಲೇ ಒಂದು ಬೆಂಚಿನ ಮೇಲೆ ಕುಳಿತೆವು. ಅವಳು ಜೋರಾಗಿ
ಪತ್ರವನ್ನು ಓದುತ್ತ ಇದ್ದಂತೆ ಮರೆಯಬೇಕು ಎಂದು ನಿರ್ಧರಿಸಿದ್ದ ಭಾಷೆ ನಿರಾಯಾಸವಾಗಿ
ಅರ್ಥವಾಗಲಾರಂಭಿಸಿತು. ಅಮ್ಮನ ಶಬ್ದಗಳು ಕಿವಿಗೆ ಅಪ್ಪಳಿಸಲಾರಂಭಿಸಿದವು.. ದೇಹ ಕಂಪಿಸಿತು..
ರಕ್ತ ಹೆಪ್ಪುಗಟ್ಟಿತು..ಹೃದಯ ಚೂರು ಚೂರಾಯಿತು...ನಾನು ಕುಳಿತಲ್ಲೇ ಕಲ್ಲಾದೆ...
ಪ್ರೀತಿಯ ಪುಟ್ಟ
ನಾವಿಬ್ಬರೂ ಕೂತು ಮಾತನಾಡಿ ಎಷ್ಟು ದಿನವಾಯಿತಲ್ಲೋ ..ಮಾತು ಬೇಡ... ಕೊನೆಪಕ್ಷ ನಿನ್ನ
ಹತ್ತಿರ ಬಂದು ತಬ್ಬಿಕೊಳ್ಳೋಣ ಅಂದರೆ ಸಿಟ್ಟು ಮಾಡಿಕೊತಿಯೇನೋ ಅನ್ನುವ ಭಯ ನನಗೆ. ಆದರೆ
ನನ್ನನ್ನು ಹಿಂಡುತ್ತ ಇರುವ ಈ ಹೊಟ್ಟೆನೋವು ನೋಡ್ತಾ ಇದ್ರೆ ಏನೋ ದೊಡ್ಡ ರೋಗ ಆಗಿದೆ ಅನಿಸ್ತಾ
ಇದೆ. ಅದಕ್ಕೋಸ್ಕರ ಹೇಳಬೇಕು ಅಂದುಕೊಂಡಿದ್ದನ್ನೆಲ್ಲ ಈ ಪತ್ರದಲ್ಲೇ ಬರೆದಿದ್ದೇನೆ. ನಿನಗೆ ಈ
ಹುಲಿಗೊಂಬೆ ಇಷ್ಟ ಅಲ್ವಾ ಅದರ ಮೈಮೇಲೇನೆ ಬರೆಯೋಣ ಅನ್ನಿಸಿತು.
ನನ್ನುಸಿರು ನಿಂತಾಕ್ಷಣ ಈ ಪೇಪರ್ ಪ್ರಾಣಿಗಳೂ ನಿರ್ಜಿವವಾಗುತ್ತವೆ. ಆದರೆ ನನ್ನ ಮನದಾಳದಿಂದ
ಬರೆದ ಶಬ್ದಗಳು ಪೇಪರ್ ನ ಮೇಲಿದ್ದರೆ ನಿನಗೆ ಅಮ್ಮನದು ಅನ್ನುವ ಒಂದು ವಸ್ತು ಇರುತ್ತದೆ. Qing ming ಹಬ್ಬದ ದಿನ ಸತ್ತವರ ಆತ್ಮಗಳಿಗೆ ಭೂಮಿಯ ಮೇಲೆ ಬಂದು ಕುಟುಂಬದವರನ್ನು ಭೇಟಿಮಾಡುವ ಅವಕಾಶ
ಇದೆ. ನೀನು ಆ ದಿನ ನನ್ನನ್ನು ನೆನಪಿಸಿಕೊಂಡರೆ ಈ ಶಬ್ದಗಳಿಗೆ ಜೀವ ಬರುತ್ತದೆ. ಆಗ ಪೇಪರ್
ಪ್ರಾಣಿಗಳಿಗೂ ಮೈಯಲ್ಲಿ ಚೈತನ್ಯ ಬಂದು ಕೋಣೆ ತುಂಬಾ ಹಾರಿ ಕುಣಿದು ಕುಪ್ಪಳಿಸುತ್ತವೆ.. ನನ್ನ
ಮಾತುಗಳು ನಿನಗೆ ತಲುಪುತ್ತವೆ. ನನ್ನ ಮನದ ಮಾತು ಬರೆಯಲು ಚೈನೀಸ್ ಭಾಷೆಯೇ ಸರಿ.. ಇಂಗ್ಲಿಷ್
ಆಗಲ್ಲ ..ನಿನಗೇ ಗೊತ್ತಿದೆಯಲ್ಲ.
ನಿನಗೆ ನನ್ನ ಜೀವನದ ಕತೆಯನ್ನು ಯಾವತ್ತೂ ಸರಿಯಾಗಿ ಹೇಳಲೇ ಇಲ್ಲ. ನೀನು ಚಿಕ್ಕವನಿರುವಾಗ
ಎಷ್ಟೋ ಸಾರಿ ಹೇಳಬೇಕು ಅಂದುಕೊಂಡರೂ ..ಈಗ ಬೇಡ..
ಸ್ವಲ್ಪ ದೊಡ್ದವನಾಗಲಿ ಆಮೇಲೆ ಹೇಳೋಣ ಅನಿಸಿ ಸುಮ್ಮನಾಗುತ್ತಿದ್ದೆ. ಆದರೆ ಕೊನೆಗೂ ನಿನಗೆಲ್ಲವನ್ನೂ
ಹೇಳಿ ಮನಸ್ಸಿನ ಭಾರ ಇಳಿಸಿಕೊಳ್ಳಲು ಕಾಲ ಕೂಡಿ ಬರಲೇ ಇಲ್ಲ.
ನಾನು 1957 ರಲ್ಲಿ sigula ಅನ್ನೋ ಚಿಕ್ಕ ಹಳ್ಳಿಯಲ್ಲಿ ಹುಟ್ಟಿದ್ದು. ಅದು ಚೀನಾದ Hebei
ರಾಜ್ಯದಲ್ಲಿದೆ.ನಿಮ್ಮಜ್ಜಿ ತಾತ ಕಡು ಬಡವರು. ನಾನು ಹುಟ್ಟಿ ಕೆಲವು ವರ್ಷಗಳಲ್ಲಿ ಭೀಕರ ಬರಗಾಲ
ಬಂತು. ಹತ್ರತ್ರ ಮೂರು ಲಕ್ಷ ಜನ ಹಸಿವಿನಿಂದ ಸತ್ತೋದ್ರು ಗೊತ್ತ !. ಮನೇಲಿರೋ ಚೂರು ಪಾರು
ಹಿಟ್ಟು ನನಗೆ ಉಣಿಸಿ ಅಮ್ಮ ಮಣ್ಣು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದುದು ನೆನಪಿದೆ ನನಗೆ.
ಆಮೇಲೆ ಸ್ವಲ್ಪ ಪರಿಸ್ಥಿತಿ ಸುಧಾರಿಸಿತು. ನಮ್ಮೂರು zhezhi ಅನ್ನುವ ಕಾಗದದ ಕಲೆಗೆ
ಪ್ರಸಿದ್ಧವಾಗಿತ್ತು.ನಮ್ಮಮ್ಮ ಪೇಪರ್ ನಲ್ಲಿ ಪ್ರಾಣಿಗಳ ಗೊಂಬೆಗಳನ್ನು ಮಾಡುವುದನ್ನು ನನಗೂ
ಕಲಿಸಿದರು.ಅಮ್ಮ ಮಾಡಿದ ಗೊಂಬೆಗಳಿಗೆ ಜೀವ ಇದೆಯೋನೋ ಅನ್ನುವಷ್ಟು ಚೆನ್ನಾಗಿರುತ್ತಿದ್ದವು.
ನಮ್ಮೂರಿನ ಜನ ಪವಾಡ ಮಾಡುತ್ತಾರೆ ಅಂತ ಎಲ್ರೂ ನಂಬಿದ್ದರು. ಪೇಪರ್ ಹಕ್ಕಿಗಳನ್ನು ಮಾಡಿ ಹಾರಿ
ಬಿಟ್ಟು ,ಹೊಲಕ್ಕೆ ಪೈರು ತಿನ್ನಲು ಬರುವ ಮಿಡತೆಗಳನ್ನು ಓಡಿಸ್ತಿದ್ವಿ ಗೊತ್ತಾ ಪುಟ್ಟ .. ಪೇಪರ್
ಬೆಕ್ಕುಗಳನ್ನು ಮಾಡಿ ಇಟ್ಟರೆ ಇಲಿಗಳು ಪರಾರಿ..ಚೈನೀಸ್ ಹೊಸವರ್ಷಕ್ಕೆ ನಾವೆಲ್ಲ ಗೆಳತಿಯರು
ಸೇರಿಕೊಂಡು ಪೇಪರ್ ಡ್ರಾಗನ್ ಗಳನ್ನು ತಯಾರಿಸಿ ,
ಅವುಗಳ ಬಾಲದ ತುದಿಗೆ ಪಟಾಕಿ ಕಟ್ಟಿ ಹಳೆಯ ಕೆಟ್ಟ ನೆನಪುಗಳೆಲ್ಲ ದೂರ ಹೋಗಲಿ ಅಂತ ಬೇಡುತ್ತಾ ಆಕಾಶಕ್ಕೆ
ಹಾರಿ ಬಿಡುತ್ತಿದ್ದೆವು . ಅವು ಅಷ್ಟೆತ್ತರಕ್ಕೆ ಹೋಗಿ ತೇಲಾಡುತ್ತ ಧಂ ಅನ್ನುವ ದೃಶ್ಯ ಈಗಲೂ ಕಣ್ಣಿಗೆ ಕಟ್ಟುವಂತಿದೆ.
ನೀನು ಅದನ್ನೆಲ್ಲ ನೋಡಿದ್ರೆ ಎಷ್ಟು ಖುಷಿ ಪಡುತ್ತಿದ್ದೆಯೋ ಏನೋ !
ಆಮೇಲೆ 1966 ರಲ್ಲಿ ಚೀನಾದಲ್ಲಿ ಸಾಂಸ್ಕೃತಿಕ ಕ್ರಾಂತಿ ಅನ್ನುವ ಸರಕಾರೀ ಯೋಜನೆ ಜಾರಿಗೆ ನಡೆಯಿತು. Cultural revolution ಅಂತ ನೀನು ಶಾಲೆಯ ಪಾಠಗಳಲ್ಲಿ ಓದಿರಬಹುದು. ಪುಟ್ಟ ..ಅದು ಅಂತಿಂಥ ಕ್ರಾಂತಿ ಅಲ್ಲ ಕಣೊ .. ಜನರ ಒಬ್ಬರ ವಿರುದ್ಧ ಒಬ್ಬರು ನಿಂತರು.. ಜೀವಕ್ಕೆ ಜೀವ ಕೊಡುತ್ತಿದ್ದ ನೆರೆಹೊರೆಯವರು ಬದ್ಧ ವೈರಿಗಳಾದರು. ಒಡಹುಟ್ಟಿದವರು ಶತ್ರುಗಳಾದರು.ನಮ್ಮಮ್ಮನ ತಮ್ಮ ಒಬ್ಬರು ತುಂಬಾ ಹಿಂದೆ 1946ರಲ್ಲೇ ಹಾಂಕಾಂಗ್ ಗೆ ಕೆಲಸಕ್ಕೆ ಹೋದವರು ಅಲ್ಲೇ ಏನೋ ವ್ಯಾಪಾರ ವ್ಯವಹಾರ ಮಾಡಿಕೊಂಡು ಖಾಯಂ ಆಗಿ ನೆಲೆಸಿದ್ದರು.ಆವಾಗೆಲ್ಲ ಹೇಗೆ ಅಂದ್ರೆ ನಿಮಗೆ ಹಾಂಕಾಂಗ್ ನಲ್ಲಿ ಸಂಬಂಧಿಕರು ಇದ್ದರೆ ನೀವು ದೇಶದ್ರೋಹಿಗಳು ಅಂತ ಲೆಕ್ಕ. ಇಲ್ಲಿದ್ದುಕೊಂಡು ಹಾಂಕಾಂಗ್ ಸರ್ಕಾರಕ್ಕೆ ಗೂಢಚಾರಿಕೆ ಮಾಡ್ತೀರಿ ಅನ್ನುತ್ತಿತ್ತು ನಮ್ಮ ಸರಕಾರ. ಹೀಗಾಗಿ ನಮ್ಮ ಕುಟುಂಬ ಇನ್ನಿಲ್ಲದ ಪಾಡು ಪಡಬೇಕಾಯ್ತು. ಸರಕಾರದ ಕಡೆಯವರು ಕೊಡುತ್ತಿದ್ದ ಹಿಂಸೆ ತಾಳಲಾರದೆ ನನ್ನಮ್ಮ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು.ಆಮೇಲೆ ಒಂದು ದಿನ ಯಾರೋ ಕೆಲವು ಮುಸುಕುಧಾರಿಗಳು ಹೊತ್ತಲ್ಲದ ಹೊತ್ತಲ್ಲಿ ಮನೆಗೆ ನುಗ್ಗಿ ಅಪ್ಪನನ್ನು ದರದರ ಎಳಕೊಂಡು ಹೋದರು. ಊರ ಹೊರಗೆ ಕಾಡಿನ ಕಡೆಗೆ ಹೋದರು ಅಂತೆಲ್ಲ ಜನ ಮಾತಾಡಿದ್ದು ಅಷ್ಟೇ ನೆನಪು ನನಗೆ. ಅಪ್ಪ ಆಮೇಲೆ ಕಣ್ಮರೆಯಾದರು.
ಹೀಗೆ ಅನಾಥಳಾದ ನನಗಾಗ ಹತ್ತು
ವರ್ಷ ವಯಸ್ಸು. ನನ್ನವರು ಅಂತ ಬೇರೆ ಯಾರೂ ಇರಲಿಲ್ಲ. ನನಗೆ ಗೊತ್ತಿದ್ದ ಒಬ್ಬರೇ ಸಂಬಂಧಿ ಅಂದರೆ
ಹಾಂಕಾಂಗ್ ನಲ್ಲಿ ಇದ್ದಾರೆ ಅಂತ ನಂಬಿದ್ದ ನನ್ನ ಮಾವ. ಸರಿ.. ಒಂದು ರಾತ್ರಿ ನಮ್ಮಾರಿನ ಹತ್ತಿರ
ಇದ್ದ ರೈಲುನಿಲ್ದಾಣಕ್ಕೆ ಹೋದೆ. ಒಂದು ಗೂಡ್ಸ್
ರೈಲು ನಿಂತಿತ್ತು. ಹತ್ತಿ ಒಂದು ಮೂಲೆಯಲ್ಲಿ ಕುಳಿತೆ.ರೈಲು ಹೊರಟಿತು. ಯಾವೂರಿಗೆ ಹೋಗುತ್ತಿದೆ
ಅಂತ ನನಗೆ ಗೊತ್ತಿಲ್ಲ. ಒಂದೆರಡು ದಿನಗಳಾದ ಮೇಲೆ ಮಧ್ಯೆ ಎಲ್ಲೋ ಇಳಿದೆ. ಅಲ್ಲಿ ಹಸಿವಿನಿಂದ
ಕಂಗೆಟ್ಟು ಹೊಲಗಳ ಪಕ್ಕದಲ್ಲಿ ಅಲೀತಾ ಇದ್ದೆ.
ಹಣ್ಣು ಕದಿತಾ ಇದ್ದಿಯಾ ಅಂತ ಯಾರೋ ಕೆಲವು ಗಂಡಸರು
ಹಿಡಿದರು. ಏನು ಎತ್ತ ಅಂತೆಲ್ಲ ವಿಚಾರಿಸಿ ಯಾವ ಕಡೆ ಹೊರಟಿದ್ದಿ..ಅಂದರು .ನಾನು
ಹಾಂಕಾಂಗ್ ಅಂದೆ. ಅವರು ಜೋರಾಗಿ ನಕ್ಕು ನಾವೂ ಆ ಕಡೆನೇ ಹೋಗ್ತಾ ಇದ್ದಿವಿ... ನಡಿ ನಮ್ಮ ಜೊತೆ
..ನಿನ್ನ ಮಾವನ ಹತ್ತಿರ ಬಿಡ್ತಿವಿ.. ಅಂದರು. ಅಲ್ಲಿಂದ ನನ್ನನ್ನು ಇನ್ನೆಲ್ಲೋ ಒಯ್ದು ಇನ್ನೂ
ಕೆಲವು ಹುಡುಗಿಯರ ಜೊತೆ ಬಚ್ಚಿಟ್ಟರು. ಕೆಲವು ದಿನಗಳಾದ ಮೇಲೆ ಎಲ್ಲರನ್ನೂ ಹಾಂಕಾಂಗ್ ಗೆ
ಸಾಗಿಸಿದರು . ಅಲ್ಲಿ ಎಲ್ಲೋ ಒಂದು ಕಡೆ ನಮ್ಮನ್ನೆಲ್ಲ ಕರಕೊಂಡು ಹೋಗಿ ಒಳ್ಳೆಯ ಊಟ - ಬಟ್ಟೆ ಕೊಡಿಸಿದರು. ನಮ್ಮನ್ನು ಕೊಂಡು ಕೊಳ್ಳಲು ಆ
ಸ್ಥಳಕ್ಕೆ ಜನರು ಬರುತ್ತಿದ್ದರು. ಅವರ ಮುಂದೆ ನಾವು ಚುರುಕುಬುದ್ಧಿ ಇರುವವರ ಥರ ನಟಿಸಬೇಕಿತ್ತು.
ಅದರ ಮೇಲೆ ನಮ್ಮ ಬೆಲೆ ನಿರ್ಧಾರವಾಗುತ್ತಿತ್ತು.
ಒಂದು ಚೀನಿ ಕುಟುಂಬದವರು ನನ್ನನ್ನು ಕೊಂಡರು. ಅವರ ಇಬ್ಬರು ಗಂಡುಮಕ್ಕಳನ್ನು ನೋಡಿಕೊಳ್ಳೋದು
ನನ್ನ ಕೆಲಸ. ಬೆಳಗ್ಗೆ ಬೇಗ ಎದ್ದು ತಿಂಡಿ ಮಾಡಿ ಇಬ್ಬರನ್ನೂ ಶಾಲೆಗೆ ತಯಾರು ಮಾಡಬೇಕು. ಮನೆಗೆ ಸಾಮಾನು, ತರಕಾರಿ ತರಬೇಕು.ಪಾತ್ರೆ ತೊಳೆದು ಮನೆ ಗುಡಿಸಿ ಸಾರಿಸಬೇಕು. ಮಕ್ಕಳ ಸಂಪೂರ್ಣ ಜವಾಬ್ದಾರಿ
ನಂದೇನೆ. ರಾತ್ರಿ ಅಡುಗೆಮನೆಯ ಸಂದಿಯಲ್ಲಿ ಮಲಗಲು ಜಾಗ ಕೊಟ್ಟಿದ್ದರು.ಹೊರಗಡೆ ಬಾಗಿಲಿಗೆ ಬೀಗ
ಹಾಕುತ್ತಿದ್ದರು. ಕೆಲಸದಲ್ಲಿ ಹೆಚ್ಚುಕಮ್ಮಿ ಆದರೆ ಬೈಗುಳ, ಹೊಡೆತ ದಂಡಿಯಾಗಿ
ಸಿಗುತ್ತಿತ್ತು. ಮಕ್ಕಳು ಏನಾದರೂ ಬೀಳಿಸಿದರೆ ,ಒಡೆದರೆ ನನಗೆ ಹೊಡೆತ. ಒಂದೆರಡು ಇಂಗ್ಲಿಷ್
ಶಬ್ದಗಳು ಬಾಯಲ್ಲಿ ಬಂದರೆ ಒದೆ ಬೀಳುತ್ತಿತ್ತು. “ಏನು ಇಂಗ್ಲಿಶ್ ಕಲಿತು ಪೋಲಿಸ್ ಹತ್ರ ಹೋಗೋಣ
ಅಂತ ಉಪಾಯವಾ ನಿಂದು? ಮುಚ್ಕೊಂಡು ಮನೇಲಿ ಬಿದ್ದಿರು. ಪೋಲಿಸು ಗಿಲಿಸು ಅಂತೇನಾದ್ರೂ ಹೊದಿಯೋ, ಚೀನಾದಿಂದ
ಹಾಂಕಾಂಗ್ ಗೆ ಅಕ್ರಮ ಪ್ರವೇಶ ಮಾಡಿದ್ದೀಯಾ ಅಂತ ನಾವೇ ಕಂಪ್ಲೇಂಟ್ ಕೊಟ್ಟು ಕಂಬಿ ಎಣಿಸೋ ಹಾಗೆ
ಮಾಡ್ತಿವಿ. ಜೀವಮಾನವಿಡಿ ಜೈಲಲ್ಲಿ ಕೊಳಿಬೇಕಾಗುತ್ತದೆ” ಎಂದು ಬೆದರಿಸುತ್ತಿದ್ದ ಆ ಮನೆಯೊಡೆಯ.
ಆರು ವರುಷ ಹೀಗೇ ಕಳೆಯಿತು. ಒಂದು ದಿನ ಮಾರ್ಕೆಟ್ ಗೆ ಹೋದಾಗ ಮೀನು ಮಾರುವ ಮುದುಕಿಯೊಬ್ಬಳು
ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು “ ನಿನ್ನಂಥ ಹುಡುಗಿಯರು ತುಂಬಾ ಜನ ಗೊತ್ತಮ್ಮ ನನಗೆ..
ನಿನಗೀಗ 15-16 ವರ್ಷ ಇರಬಹುದಲ್ವಾ ? ನೋಡ್ತಾ ಇರು.. ಒಂದಿನ ಆ ಮನೆಯಾತ ಕುಡ್ಕೊಂಡು ಬಂದು ನಿನ್ನ
ಮೇಲೆ ಕಣ್ಣು ಹಾಕ್ತಾನೆ. ನಿನ್ನ ಕೈ ಮೀರಿ ಹೋಗುತ್ತದೆ ಪರಿಸ್ಥಿತಿ. ಅದು ಅವನ ಹೆಂಡತಿಗೆ
ಗೊತ್ತಾಗಿ ಎಲ್ಲ ನಿನ್ನದೇ ತಪ್ಪು ಅನ್ನುವ ಥರ ಮಾಡುತ್ತಾರೆ. ನಿನಗೆ ಚಿತ್ರಹಿಂಸೆ ಕೊಡುತ್ತಾರೆ.
ಏನಾದ್ರೂ ಮಾಡಿ ಆ ಮನೆಯಿಂದ ಹೊರಗೆ ಬಾ. ನನಗೊಬ್ಬರು ಮದುವೆ ಏಜೆನ್ಸಿ ಇಟ್ಟುಕೊಂಡವರು
ಗೊತ್ತು..ನಿನ್ನ ಹೆಸರು ,ಫೋಟೋ ಅಲ್ಲಿ ಕೊಡುತ್ತೇನೆ . ಕೆಲವು ಅಮೆರಿಕಾದ ಗಂಡುಗಳು ಮದುವೆಯಾಗಲು
ಏಶಿಯನ್ ಹೆಣ್ಣುಗಳನ್ನು ಹುಡುಕುತ್ತಾರಂತೆ.ಅವರನ್ನು ಮದುವೆ ಆಗಿ ಮನೆಕೆಲಸ -ಬೊಗಸೆ ಮಾಡಿಕೊಂಡು ಗಂಡನನ್ನು ಒಪ್ಪವಾಗಿ
ನೋಡಿಕೊಂಡರೆ ಒಳ್ಳೆಯ ಜೀವನ ನಡೆಸಬಹುದು ಎಂದೆಲ್ಲ ಸಲಹೆ ಕೊಟ್ಟಳು.
ನನಗದೊಂದೇ ಆಶಾಕಿರಣ ಇದ್ದದ್ದು ಅ ದಿನಗಳಲ್ಲಿ. ಹೀಗೆ ನನ್ನ ಹೆಸರು ಮತ್ತು ಫೋಟೋ ಕ್ಯಾಟಲಾಗ್
ನಲ್ಲಿ ಸೇರಿತು. ಒಂದಷ್ಟು ಸುಳ್ಳು- ಪಳ್ಳು ಸೇರಿಸಿ ನನ್ನ ವಿವರಗಳನ್ನು ಬರೆದರು. ಅದನ್ನೆಲ್ಲ
ಓದಿದ ನಿಮ್ಮಪ್ಪ, ಬಂದು ನನ್ನನ್ನು ಮದುವೆಯಾದರು. ನನ್ನದೇನೂ ರೋಮ್ಯಾಂಟಿಕ್ ಕತೆಯಲ್ಲ.. ಆದರೆ ಇದು ನನ್ನ ಜೀವನದ
ಸತ್ಯಕತೆ. ಮದುವೆಯಾಗಿ ಕನೆಕ್ಟಿಕಟ್ ಗೆ ಬಂದಾಗ ಒಂಟಿತನ ಕಾಡುತ್ತಿತ್ತು. ಸುತ್ತಮುತ್ತಲ ವಿಷಯ
ನನಗೆ ಅರ್ಥವಾಗುತ್ತಿರಲಿಲ್ಲ. ನನ್ನ ವಿಷಯ ಅವರುಗಳಿಗೆ ತಿಳಿಯುತ್ತಿರಲಿಲ್ಲ. ಆದರೆ ನಿಮ್ಮಪ್ಪ
ನನ್ನನ್ನು ತುಂಬಾ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು. ನಿಜವಾಗಲೂ ಅವರು ಕಣ್ಣಿಗೆ ಕಾಣುವ ದೇವರು!
ಇನ್ನೊಂದು ವರ್ಷಕ್ಕೆ ನೀನು ಹುಟ್ಟಿದೆ. ಕಣ್ಣು -ಮೂಗು ಎಲ್ಲ ನನ್ನ ಥರನೆ ಇರುವ ನಿನ್ನನ್ನು
ನೋಡಿದರೆ ನಮ್ಮಪ್ಪ ಅಮ್ಮನ ನೆನಪು ಬರುತ್ತಿತ್ತು ನನಗೆ. ನನ್ನೂರು Singlu ನಲ್ಲಿ ನನ್ನದು ಅಂತ ಏನೂ
ಇರಲಿಲ್ಲವಲ್ಲ... ಹಾಗಿದ್ದರೆ ಅದೆಲ್ಲ ಬರಿ ಕನಸಾಗಿತ್ತಾ... ಅಂತೆಲ್ಲ ಒಮ್ಮೊಮ್ಮೆ
ಅನಿಸುತ್ತಿತ್ತು ನನಗೆ. ಆದ್ರೆ ನಿನ್ನ ಮುಖ ನೋಡಿದಾಗ ನನಗೆ ಅವೆಲ್ಲ ನನ್ನ ಕಲ್ಪನೆಯಲ್ಲ,
ನಿಜವಾಗ್ಲೂ ನನಗೊಂದು ಕುಟುಂಬ ಇತ್ತು ಅನ್ನುವ ಖುಷಿ ಬಂತು. ನಿನಗೆ ನನ್ನ ಭಾಷೆ ಕಲಿಸಿದೆ. ನನ್ನ
ಜೊತೆ ಮಾತಾಡಲು ಒಂದು ಜೀವ ಇದೆ ಎಂದು ಸಂತೋಷಪಟ್ಟೆ. ನಾನು ಕಳಕೊಂಡದ್ದೆಲ್ಲ ಮತ್ತೆ ಪಡೆದೆ
ಎನ್ನುವ ನಂಬಿಕೆ ಹುಟ್ಟಿತು. ನೀನು ಮೊದಲಸಲ ಚೀನಿ ಶಬ್ದಗಳನ್ನು ಹೇಳಿದಾಗ ಸ್ವರ್ಗಕ್ಕೆ ಮೂರೇ
ಗೇಣು ನನಗೆ. ಯಾಕೆ ಹೇಳು ... ನೀನು ನಮ್ಮಮ್ಮನ ಥರನೇ ಮಾತಾಡ್ತಾ ಇದ್ದೆ. ನಾನು ಸಂತೋಷ -ದು:ಖ
ತಡೆಯಲಾರದೇ ಗಂಟೆಗಟ್ಟಲೆ ಅಳುತ್ತಿದ್ದೆ ಆಗೆಲ್ಲ. ನಿನಗೆ zhezhi ಪೇಪರ್ ಗೊಂಬೆಗಳನ್ನು
ಮಾಡಿಕೊಟ್ಟು ನೀನು ಅವುಗಳ ಜೊತೆ ನಕ್ಕು ನಲಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.
ನೀನು ದೊಡ್ದವನಾಗ್ತಾ ಇದ್ದಹಾಗೆ ಇಂಗ್ಲಿಶ್ ಕಲಿತು ನನಗೂ ಅಪ್ಪನಿಗೂ ಮಾತಾಡಲು ಸಹಾಯ
ಮಾಡ್ತಿದ್ದೆ. ಹಾಗೆ ಮಾತಾಡ್ತಾ.. ನಂಗೆ ಇದು ನನ್ನಮನೆ ಅನ್ನುವ ವಿಶ್ವಾಸ ಬಂತು. ಕೊನೆಗೂ ನನಗೆ
ಒಳ್ಳೆಯ ಜೀವನ ಸಿಕ್ಕಿತ್ತು. ಅಪ್ಪ ಅಮ್ಮ ಬದುಕಿದ್ದರೆ ಇಲ್ಲಿಗೆ ಕರಕೊಂಡು ಬಂದು ಹೊಟ್ಟೆ ತುಂಬಾ
ಊಟ ಬಡಿಸಬಹುದಿತ್ತು... ಆದ್ರೆ ನನಗೆ ಆ ಭಾಗ್ಯವಿಲ್ಲವಲ್ಲ ಎನಿಸಿ ಬೇಸರವಾಗುತ್ತಿತ್ತು. ಚೀನಾದ
ನಂಬಿಕೆಯ ಪ್ರಕಾರ , ಮನುಷ್ಯನಿಗೆ ಬರಬಹುದಾದ ಅತಿ ದೊಡ್ಡ ದು:ಖವೆಂದರೆ ನಾವು ವಯಸ್ಸಿಗೆ ಬಂದ
ಮೇಲೆ ತಂದೆ ತಾಯಿಯನ್ನು ನೋಡಿಕೊಳ್ಳಲು ಸಾಧ್ಯವಾಗದಿರುವುದು. ಈಗ ನನಗೆ ಆಗುತ್ತಿದೆಯಲ್ಲ ಹಾಗೆ...
ಪುಟ್ಟ .. ನನಗ್ಗೊತ್ತು .. ನಿಂಗೆ ನಿನ್ನ ಚೀನಿ ಕಣ್ಣುಗಳುಮತ್ತು ಕೂದಲು ಒಂಚೂರೂ
ಇಷ್ಟವಿಲ್ಲ ಅಂತ. ಆದರೆ ಅದರಿಂದಾಗಿ ನನಗೆಷ್ಟು ಆನಂದವಾಯಿತು ಅನ್ನುವುದನ್ನು ನಿನಗೆ ಊಹಿಸಲಿಕ್ಕೂ
ಸಾಧ್ಯವಿಲ್ಲ. ನೀನು ನನ್ನ ಬಳಿ ಮಾತಾಡುವುದನ್ನು ನಿಲ್ಲಿಸಿದಾಗ, ಚೈನೀಸ್ ಮಾತಾಡಬೇಡ
ಇಂಗ್ಲಿಷ್ ಮಾತ್ರ ಮಾತಾಡು ಅಂದಾಗ ನನಗಾದ ನೋವನ್ನು ವರ್ಣಿಸಲು ಶಬ್ದಗಳಿಲ್ಲ. ನಾನು ಕೈಯಾರೆ
ಕಟ್ಟಿದ ಆಸರೆಯೇ ಕುಸಿದು ಮತ್ತೆ ಅನಾಥಳಾದೆ... ಪುಟ್ಟ, ..ಯಾಕೋ ನನ್ನ ಜೊತೆ ಮಾತಾಡಲ್ಲ ನೀನು ?
ಮುಂದೆ ಬರೆಯಲಾಗುತ್ತಿಲ್ಲ ..ಕಣ್ಣೆಲ್ಲ ಮಂಜಾಗುತ್ತಿದೆ .. ನೋವು ಹಿಂಡಿ ಹಿಪ್ಪೆ ಮಾಡುತ್ತಿದೆ..
ಆ ಯುವತಿ ಪತ್ರವನ್ನು ಮಡಚಿ ನನ್ನ ಕೈಯಲ್ಲಿಟ್ಟಳು. ಅವಳ ಮುಖ ಎದುರಿಸಲಾಗದೆ ನಾನು ತಲೆ
ತಗ್ಗಿಸಿದೆ. ಎಲ್ಲೋ ನೋಡುತ್ತಾ ai ಅನ್ನುವ ಅಕ್ಷರವನ್ನು ಬರೆಯುವುದು ಕಲಿಸು ಎಂದು ಬೇಡಿಕೊಂಡೆ.
ಆಕೆ ಬರೆದು ಕೊಟ್ಟಳು .ಅದನ್ನೇ ಮತ್ತೆ ಮತ್ತೆ ತಿದ್ದಿದೆ. ಅಮ್ಮನ ಪತ್ರದ ಕೊನೆಯಲ್ಲಿದ್ದ ಆ
ಅಕ್ಷರ ನನ್ನನ್ನು ಅಣಕಿಸಿತು. ಆಕೆ ಸ್ನೇಹದಿಂದ
ನನ್ನ ಬೆನ್ನು ನೇವರಿಸಿ ಹೊರಟುಹೋದಳು. ಆ ಬೆಂಚಿನ ಮೇಲೆ ನಾನು ಒಬ್ಬಂಟಿ... ಮನದ ತುಂಬಾ
ಅಮ್ಮನದ್ದೇ ನೆನಪು. ಎಷ್ಟೋ ಹೊತ್ತಾದ ಮೇಲೆ ಪತ್ರವನ್ನು ಲಾಹೊನ ಮೈಯೊಳಗಿಟ್ಟು ಅವನನ್ನು
ಎದೆಗವುಚಿಕೊಂಡೆ. ಗುರ್..ಬುರ್ರ್ .. ಎಂದ ಅವನು.. ಇಬ್ಬರೂ ಮನೆಯ ಕಡೆಗೆ ಹೆಜ್ಜೆ ಹಾಕಿದೆವು.
No comments:
Post a Comment