Sunday, 3 May 2020

ಪೂರ್ವಾಗ್ರಹಗಳ ಸುಳಿಯಲ್ಲಿ....

ಮೊನ್ನೆ ಗೆಳತಿ ವನಿತಾಗೆ ಫೋನ್ ಮಾಡಿದ್ದೆ . ಕೊರೊನಾವೈರಸ್ ಮಹಾಮಾರಿಯ ಕಿರಿಕಿರಿಗಳನ್ನೆಲ್ಲ ಹಂಚಿಕೊಂಡಾದ ಮೇಲೆ ನಮ್ಮ ಹರಟೆ ಸಿನಿಮಾ , ಟಿವಿ ಕಡೆ ಹೊರಳಿತು . ಒಬ್ರು ಸೀರಿಯಲ್ ನಿರ್ದೆಶಕರ ಬಗ್ಗೆ ಮಾತಾಡ್ತಾ ವನಿತಾ “ ಸೀರಿಯಲ್ ಚೆನ್ನಾಗ್ ಮಾಡ್ತಾರೆ .. ಆದ್ರೆ ಸಂಸಾರ ಸರಿ ಇಲ್ಲ “ ಅಂದಳು. ಆ ವ್ಯಕ್ತಿ ನನಗೆ ಪರಿಚಯದವರು . ಅದಕ್ಕೆ “ಯಾಕೆ ಚೆನ್ನಾಗೇ ಇದ್ದಾರಲ್ಲ” ಅಂದೆ . “ ಅಯ್ಯೋ.. ಏನ್ ಸರಿ ಇರೋದು ..ಅವ್ರು ಲವ್ ಮಾರೇಜ್ ..ಈಗ ಮಗಳೂ ಯಾರೋ ಡೆಲ್ಲಿ ಕಡೆಯವರನ್ನು ಮದ್ವೆ ಆಗಿದಾಳಂತೆ ….” ಅಂದ್ಲು. ಅರೆ! ..ಇದರಲ್ಲಿ ಏನು ತಪ್ಪು? ಅನ್ನಿಸಿದರೂ ಸುಮ್ನೆ ಯಾಕೆ ಚರ್ಚೆ.. ಇದರ ಬಗ್ಗೆ ಮಾತಾಡಿ ಉಪಯೋಗವಿಲ್ಲ ಅಂದುಕೊಂಡು ಮಾತು ಅಡಿಗೆ ಕಡೆ ಹೊರಳಿಸಿದೆ. ನಮ್ಮ ನಿತ್ಯಜೀವನದಲ್ಲಿ ಇಂಥ ಎಷ್ಟೊಂದು ಪೂರ್ವಗ್ರಹ/ಪೂರ್ವಾಗ್ರಹ [ Prejudices] ಗಳು ಇವೆಯಲ್ವಾ? ಪೂರ್ವ ಅಂದ್ರೆ ಹಳೇದು. ಗ್ರಹ/ಆಗ್ರಹ ಅಂದ್ರೆ ಸ್ವೀಕರಿಸುವುದು, ಒಪ್ಪಿಕೊಳ್ಳೋದು ಅಂತ ಅರ್ಥ.[ ಪೂರ್ವ ಅಂದ್ರೆ ಇಲ್ಲಿ ದಿಕ್ಕು ಅಂತಲ್ಲ. ಪಶ್ಚಿಮಗ್ರಹ ,ಉತ್ತರಗ್ರಹ ಅಂತೆಲ್ಲ ಇಲ್ಲ!!] ಹಾಗೆ ನೋಡಿದ್ರೆ ನಮ್ಮ ಜೀವನ ನಡೆಯೋದೇ ಪೂರ್ವಾಗ್ರಹಗಳ ನೆರಳಲ್ಲಿ. ನಮ್ಮ ಜೀವನದಲ್ಲಿ ಎಲ್ಲೋ ನೋಡಿದ , ಕೇಳಿದ ಅಥವಾ ಕೆಲವೊಮ್ಮೆ ನಾವೇ ಅನುಭವಿಸಿದ ಘಟನೆಗಳ ಆಧಾರದ ಮೇಲೆ ಒಂದು ಶಾಶ್ವತ ಅಭಿಪ್ರಾಯವನ್ನು ಸೃಷ್ಟಿಮಾಡಿಕೊಂಡುಬಿಡುತ್ತೇವೆ . ಇದೇ ಪೂರ್ವಗ್ರಹ ಅಥವಾ ಪೂರ್ವಾಗ್ರಹ , ಇಂಗ್ಲೀಷಿನ Prejudice . ಪೂರ್ವಾಗ್ರಹಗಳು ಒಂದು ಹಂತದವರೆಗೂ ನಿರಪಾಯಕಾರಿ ಆದರೆ ಮೇರೆ ಮೀರಿದರೆ ಜೀವನದ ನೆಮ್ಮದಿ ಕಸಿದುಕೊಳ್ಳುತ್ತವೆ. ಕೆಲವು ಪೂರ್ವಾಗ್ರಹಗಳು ಮನೆ ದಾಟಿ ಇಡೀ ಸಮುದಾಯಕ್ಕೆ ಹಬ್ಬುತ್ತವೆ . ಆಗ ಮಾತ್ರ ಪರಿಸ್ಥಿತಿ ಭೀಕರವಾಗುತ್ತದೆ . ನಾನು ಕೇಳಿರುವ - ಅನುಭವಿಸಿರುವ ಕೆಲ ಪೂರ್ವಾಗ್ರಹಗಳು ಹೀಗಿವೆ. ೧. ದಪ್ಪ ಇರುವ ಜನ ಹೊಟ್ಟೆ ಬಿರಿಯೋವಷ್ಟು ತಿಂತಾರೆ . ಸಣಕಲು ಜನಕ್ಕೆ ತಿನ್ನೊದು ಅಂದ್ರೆ ಅಲರ್ಜಿ. ೨. ಬಿಳಿ ಚರ್ಮದವರು ನಾಜೂಕು, ಸ್ವಚ್ಚ, ಒಳ್ಳೆಯವರು . ಕಪ್ಪು ಚರ್ಮದವರು ಅನಾಗರಿಕರು , ಕೆಟ್ಟವರು. ೩. ಹಳ್ಳಿ ಜನ ಆರೋಗ್ಯವಂತರು. ಸಿಟಿಯವರು ಕಾಯಿಲೆಗಳ ತವರುಮನೆ. ೪. ಹೆಣ್ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಿದ್ರೆ ಬೇರೆ ಜಾತಿಯವರನ್ನು ಮದ್ವೆ ಆಗ್ತಾರೆ . ಮುಂದೆ ಆ ಮದುವೆಗಳು ಮುರಿದು ಬೀಳ್ತವೆ . ೫. ಹೆಂಡತಿಗೆ ಜಾಸ್ತಿ ಸಂಬಳ ಬರುತ್ತಿದ್ದರೆ , ಡೈವೋರ್ಸ್ ಗ್ಯಾರಂಟಿ . ೬. ಗಂಡ ಮನೆಕೆಲಸದಲ್ಲಿ ಸಹಾಯ ಮಾಡುತ್ತಿದ್ದರೆ , ಒಂದೋ ಆತನಿಗೆ ಹೆಂಡತಿಯ ಭಯ ಅಥವಾ ಅವನಿಗೆ ಕಮ್ಮಿ ಸಂಪಾದನೆ ಇದೆ . ೭. ಶ್ರೀಮಂತರು ಧನದಾಹಿಗಳು , ಕೆಟ್ಟವರು. ಅವರಿಗೆ ದುಡ್ಡು ಬೇಕಾದಷ್ಟು ಇರುತ್ತದೆ ಆದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ . ಬಡವರು ತೃಪ್ತರು, ಒಳ್ಳೆಯವರು . ಗಂಜಿ ತಿಂದರೂ ಮನೆಯಲ್ಲಿ ಸಂತೋಷವಾಗಿರುತ್ತಾರೆ. ೮. ಆದರ್ಶ ತಾಯಿ ಮಗುವಿನ ಹಿತಕ್ಕಾಗಿ ಕೆಲಸಕ್ಕೆ ರಾಜೀನಾಮೆ ಕೊಡುತ್ತಾಳೆ. ಆಸೆಬುರುಕಿ ತಾಯಿ ಮಗುವನ್ನು ಬೇಬಿ ಕೇರ್ ನಲ್ಲಿ ಯಾರದ್ದೋ ಕೈಲಿ ಬಿಟ್ಟು ಸ್ಟೈಲಾಗಿ ಕೆಲಸಕ್ಕೆ ಹೋಗ್ತಾಳೆ. ೯. ಬೇಬಿ ಕೇರ್ ಸೆಂಟರ್ ಗಳಲ್ಲಿ ಬೆಳೆದ ಮಕ್ಕಳು ದುರ್ಬುದ್ಧಿಗಳನ್ನು ಕಲಿಯುತ್ತಾರೆ . ಕೂಡು ಕುಟುಂಬಗಳಲ್ಲಿ ಬೆಳೆವ ಮಕ್ಕಳು ಸಂಸ್ಕಾರವಂತರಾಗ್ತಾರೆ. ೧೦. ಸಾಮಾಜಿಕ ಪೂರ್ವಾಗ್ರಹಗಳು - • ಹಿಂದೂಗಳು ಒಳ್ಳೆಯವರು- ಮುಗ್ಧರು -ಬಡವರು. ಮುಸ್ಲಿಮರು ಕೆಟ್ಟವರು-ಮೋಸಗಾರರು[ ಇದನ್ನು ತಿರುಗುಮುರುಗಾಗಿಯೂ ಓದಬಹುದು]. • ಹೆಣ್ಮಕ್ಕಳು ಮೈ ಕಾಣಿಸುವ ಬಟ್ಟೆ ಹಾಕ್ಕೊಳ್ಳುವುದರಿಂದಲೇ ಅನಾಚಾರಗಳು ಸಂಭವಿಸುತ್ತವೆ. • ದಡ್ಡರು ರಿಸರ್ವೆಶನ್ ನಿಂದ ಕಾಲೇಜು/ ಕೆಲಸಕ್ಕೆ ಸೇರುತ್ತಾರೆ. ಬುದ್ಧಿವಂತರ ಭವಿಷ್ಯಕ್ಕೆ ಕಲ್ಲು ಹಾಕ್ತಾರೆ. • ಯುವಜನರು ವಿದೇಶಗಳಿಗೆ ಓದಲು/ಕೆಲಸಕ್ಕೆ ಹೋಗಿ ಅಲ್ಲೆ ಸೆಟ್ಲ್ ಆಗಲು ಕಾರಣ ಭಾರತದಲ್ಲಿ ಮೀಸಲಾತಿ ಇರೋದು. • ಈಗಿನ ಮಕ್ಕಳು ಕೃತಘ್ನರು… ವಯಸ್ಸಾದ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸ್ತಾರೆ. • ಏನೇ ಹೇಳಿ.. ಕೊನೆಗಾಲದಲ್ಲಿ ಹೆಣ್ಣುಮಕ್ಕಳೇ ಅಪ್ಪ-ಅಮ್ಮನ್ನ ನೋಡ್ಕೊಳ್ಳೊದು. ಯಾಕಂದ್ರೆ ಗಂಡುಮಕ್ಕಳು ಅವರ ಹೆಂಡತಿಯ ತಾಳಕ್ಕೆ ತಕ್ಕಂತೆ ಕುಣಿತಾರೆ. ಪಟ್ಟಿ ದೀರ್ಘವಾಗಿದೆ ಬಿಡಿ….. ಇವುಗಳಲ್ಲಿ ಪ್ರತಿಯೊಂದು ಅಂಶವೂ ಸುಳ್ಳು ಅನ್ನುವ ನೂರಾರು ಉದಾಹರಣೆಗಳನ್ನು ನಾನು ನೋಡಿದ್ದೇನೆ. ನಮ್ಮ ಹೆಚ್ಚಿನ ಪೂರ್ವಾಗ್ರಹಗಳಿಗೆ ಕಾರಣ ನಮ್ಮಲ್ಲಿ ಬದಲಾವಣೆಯನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇಲ್ಲದೆ ಇರುವುದು. ಹಳೆಯದೆಲ್ಲ ಚಂದ ಅನ್ನುವ ಅಂಧವಿಶ್ವಾಸ- ಹೊಸದೆಲ್ಲ ಅಪಾಯಕಾರಿ ಅನ್ನೋ ಭಯ ನಮ್ಮಲ್ಲಿ ಆಳವಾಗಿ ಬೇರು ಬಿಟ್ಟಿರುತ್ತದೆ. ಅದಕ್ಕೆ ಸರಿಯಾಗಿ ನಮ್ಮ ಸುತ್ತ ಮುತ್ತ ಒಂದೆರಡು ಘಟನೆಗಳು ನಡೆಯುತ್ತವೆ. ತಕ್ಷಣ ನಮ್ಮ ಮನಸ್ಸಿಗೆ ಅನುಕೂಲ ಅನ್ನಿಸಿವಂಥದ್ದನ್ನು ನಾವು ಸತ್ಯ ಅಂತ ನಿರ್ಧಾರ ಮಾಡಿಬಿಡುತ್ತೇವೆ. ಮನೆಯವರನ್ನು ಅಕ್ಕರೆಯಿಂದ ಕಾಣುವ ಅಸಂಖ್ಯಾತ ಸೊಸೆಯರು ಇದ್ದಾರೆ. ಕಾಯಿಲೆಗಳಿಗೆ ಹಳ್ಳಿ-ಪಟ್ಟಣಗಳ ಹಂಗಿಲ್ಲ . ಮನಸ್ಸಿನ ದುಷ್ಟತೆ , ಕ್ರೂರತೆ ಚರ್ಮದ ಬಣ್ಣವನ್ನು , ಆರ್ಥಿಕ ಸ್ಥಿತಿಯನ್ನು ಮೀರಿದ್ದು ಅಲ್ಲವೇ ?. ಸಂಗಾತಿಯ ಆಯ್ಕೆ ಮನುಷ್ಯನ ಸ್ವಭಾವಕ್ಕೆ ಸೇರಿದ್ದು . ಸ್ವಂತ ಅಭಿಪ್ರಾಯವನ್ನು ಆಧರಿಸುವವರು ಪ್ರೇಮವಿವಾಹದ ಸಾಹಸ ಮಾಡ್ತಾರೆ. ಕುಟುಂಬದ ಅಭಿಪ್ರಾಯವೇ ತನ್ನದು ಅಂತ ನಂಬಿರುವವರು ಮನೆಯವರ ಮಾರ್ಗದರ್ಶನದಲ್ಲೆ ಸಂಗಾತಿಯ ಆಯ್ಕೆ ಮಾಡ್ತಾರೆ. ಇದಕ್ಕೂ ಉನ್ನತ ವಿದ್ಯಾಭ್ಯಾಸಕ್ಕೂ ಎಲ್ಲಿದೆ ಸಂಬಂಧ? ಮನೆಯಲ್ಲಿ ಎಲ್ಲರೂ ಕೂಡಿ ಕೆಲಸ ಹಂಚಿಕೊಂಡರೆ, ಮನಸ್ತಾಪಗಳು ಬಂದಾಗ ಮೌನವಾಗಿದ್ದರೆ ಅದು ಪ್ರಬುದ್ಧತೆ- ಘನತೆಯೇ ಹೊರತು ಗುಲಾಮಗಿರಿ ಅಲ್ಲ. ಇನ್ನು ಡೈವೋರ್ಸ್ ಸಂಬಳ, ಡಿಗ್ರಿ ,ಜಾತಿಗಳನ್ನು ದಾಟಿದ ಒಂದು ಸವಾಲು. ಅದಕ್ಕೆ ಎಲ್ಲರೆದುರು ಹೇಳಿಕೊಳ್ಳಲಾಗದ , ಅವರದ್ದೇ ಆದ ವೈಯಕ್ತಿಕ ಕಾರಣಗಳಿರುತ್ತವೆ. ಹೆಚ್ಚಿನ ಸಂದರ್ಭದಲ್ಲಿ ಅದು ಸಮಸ್ಯೆಗೆ ಉತ್ತಮ ಪರಿಹಾರ ಕೂಡಾ. ಇನ್ನು ಮನುಷ್ಯನ ಸ್ವಭಾವಕ್ಕೂ ಧರ್ಮಕ್ಕೂ ಎಲ್ಲಿದೆ ಸಂಬಂಧ? ಅಲ್ಲದೆ ಇಂಥ ದ್ವೇಷಗಳಿಂದ ಏನು ಉಪಯೋಗ ನಮಗೆ? ನನ್ನ ಮಗ Indian Institute of Science ನಲ್ಲಿ ಓದುತ್ತಿದ್ದಾಗ ಮೀಸಲಾತಿಯ ಪ್ರಯೋಜನ ಪಡೆದು ಅಲ್ಲಿಗೆ ಬರುತ್ತಿದ್ದ ಅನೇಕ ಸಹಪಾಠಿಗಳ ಬುದ್ಧಿವಂತಿಕೆಯ ಬಗ್ಗೆ ಮುಕ್ತವಾಗಿ ಪ್ರಶಂಸಿಸುತ್ತಿದ್ದ. ಏಶಿಯನ್ ವಿದ್ಯಾರ್ಥಿಗಳಿಗೆಂದೇ ಮೀಸಲಾಗಿದ್ದ ಒಂದು ವಿದೇಶೀ ಸ್ಕಾಲರ್ಶಿಪ್ ಅವನಿಗೆ B.Sc ಓದುತ್ತಿದ್ದಾಗ ಸಿಕ್ಕಿತ್ತು. ಮೀಸಲಾತಿಯ ಬಗ್ಗೆ ಕುಹಕವಾಡುವ ನಮಗೆ ಇದಕ್ಕೆ ಹೇಗೆ ಪ್ರತಿಕ್ರಿಯೆ ಕೊಡಬೇಕು ಅಂತನೇ ತಿಳಿಯಲಿಲ್ಲ. ಇನ್ನು ವಲಸೆ ಹೋಗುವುದು ನಮ್ಮ ನಾಗರಿಕತೆಯ ಅವಿಭಾಜ್ಯ ಅಂಗ. ಅಪ್ಪಟ ಕೃಷಿಕರಾಗಿದ್ದ ನನ್ನ ಪೂರ್ವಜರು ಕೂಡಾ ಮಹಾರಾಷ್ಟ್ರದ ಕರಾವಳಿಯಿಂದ ದಕ್ಷಿಣಕನ್ನಡದ ಹಳ್ಳಿಗಳಿಗೆ ವಲಸೆ ಬಂದವರು. ಈಗ ದೇಶಗಳ ಗಡಿ ದಾಟಿ ಹೋಗ್ತಾರೆ ಅದಕ್ಕೆ ಅವರ ಮಹತ್ವಾಕಾಂಕ್ಷೆ ಅಥವಾ ಸಾಹಸೀ ಪ್ರವೃತ್ತಿಯೇ ಕಾರಣ. ಇನ್ನೊಂದು ವಿಷ್ಯ ...ಕೆಲ ಒಳ್ಳೆಯ ಪೂರ್ವಾಗ್ರಹಗಳು ಇರುತ್ತವೆ • ಪರರಿಗೆ ಕೇಡು ಬಯಸಿದರೆ ಮುಂದೆ ಒಂದು ದಿನ ನಮಗೂ ಕೆಟ್ಟದಾಗುತ್ತದೆ. • ನಮ್ಮ ಕೆಲಸಗಳನ್ನೆಲ್ಲ ದೇವರು ಗಮನಿಸ್ತಾ ಇರ್ತಾನೆ. • ನಾವು ಮಾಡಿದ ಒಳ್ಳೆ ಕೆಲಸಗಳು ನಮ್ಮ ಕೈ ಬಿಡಲ್ಲ, ಮುಂದೆ ನಮ್ಮ ಮಕ್ಕಳಿಗೆ ಅವುಗಳ ಫಲ ಸಿಗತ್ತೆ. ಇತ್ಯಾದಿಗಳು ಇವುಗಳಿಂದ ನಮ್ಮ ಸಮಾಜಕ್ಕೆ ಅಪಾರ ಲಾಭವಿದೆ. ಇನ್ನು ಮೇಲೆ ಪಟ್ಟಿ ಮಾಡಿದ ಕೆಲವು ಸಾಮಾಜಿಕ ಕಂಟಕಗಳು. ಇವುಗಳಲ್ಲಿ ಸ್ವಲ್ಪ ಮಟ್ಟಿನ ಸತ್ಯ ಇದ್ದರೂ ಕೂಡಾ ಅವುಗಳ ಬದಲಾವಣೆ ದ್ವೇಷದಿಂದ, ಗೊಣಗಾಟದಿಂದ ಸಾಧ್ಯವಿಲ್ಲ. ಆದ್ದರಿಂದ ನಾವು ಪೂರ್ವಾಗ್ರಹಿಗಳಾಗುವ ಬದಲು ವಿಚಾರಾಗ್ರಹಿಗಳಾದ್ರೆ ಬದುಕಿದ್ರೆ ಜೀವನ ಹೆಚ್ಚು ಅರ್ಥಪೂರ್ಣ ಆಗಬಹುದು.

No comments:

Post a Comment