Sunday, 3 May 2020
“ ಅಮೂಲ್ಯಪಾಠ"
ಇಲ್ಲ .. ಇನ್ನು ಸುಮ್ನೆ ಇರಲಿಕ್ಕೆ ಆಗಲ್ಲ.. ಸರಿಯಾಗಿ lecturers ಬರಲ್ಲ.. lab ನಲ್ಲಿ ಬರೀ ಅವ್ಯವಸ್ಥೆ.. ಎಲ್ಲ ಮುಗಿಸಿ ಹಾಸ್ಟೆಲ್ ಗೆ ಬಂದ್ರೆ ಇಲ್ಲಿ ನೀರಿಲ್ಲ.. ಊಟ ಬಾಯಿಗಿಡಕ್ಕಾಲ್ಲ.. ಪ್ರಿನ್ಸಿಪಾಲ್ ಗೆ ಕಂಪ್ಲೆಂಟ್ ಮಾಡ್ಲೇಬೇಕು .
ಕಾಲೇಜಿನ ಮೊದಲನೇ ವರ್ಷದಲ್ಲಿ ಇನ್ನೂ ಕಣ್ ಕಣ್ ಬಿಡುತ್ತಿದ್ದ ನಾವು ಮಹತ್ತ್ವದ ನಿರ್ಧಾರ ತೆಗೆದುಕೊಂಡ ಖುಶಿಯಲ್ಲಿ ಪ್ರಿನ್ಸಿಪಾಲ್ ರ ಕಡೆಗೆ ಹೊರಟೆವು. ಅಲ್ಲಿ ಮಾತಾಡುವುದು ಯಾರು? ಅನ್ನೊ ಮಿಲಿಯನ್ ಡಾಲರ್ ಪ್ರಶ್ನೆ ನಮ್ಮನ್ನು ನಿಲ್ಲಿಸಿತು. “ನೇರ-ದಿಟ್ಟ” ಅಂತ ಆಗ್ಲೇ [ಕು] ಖ್ಯಾತಿ ಪಡೆದಿದ್ದ ನನ್ನನ್ನು ಸರ್ವಾನುಮತದಿಂದ ಅಯ್ಕೆ ಮಾಡಿದ್ರು. ಇಲ್ಲಪ್ಪ..ನನಗಾಗಲ್ಲ ಅಂದೆ.. ಏ.. ನಾವೆಲ್ಲಾ ಇರ್ತೀವಲ್ಲ .. ನೀನು ಶುರುಮಾಡು.. ನಾವು ಮುಂದುವರಸ್ತೀವಿ ...ಅಂತ ಎಲ್ರೂ ಅಂದಾಗ ನಂಗೆ ಭಯಂಕರ ಉತ್ಸಾಹ ಬಂತು..
ಸರಿ .. ಅಲ್ಲಿಗೆ ಹೋದ್ರೆ ಅಲ್ಲಿ ಹೊರಗಡೆ ಕೂತಿದ್ದ ಅಟೆಂಡರ್ "ಸಾರ್ ..ಬಿಜಿಯಾಗಿದ್ದಾರೆ .. ಆಮೇಲೆ ಬನ್ನಿ" ಅಂದ . ಅವನಿಗೆ ಕ್ಯಾರೇ ಅನ್ನದೆ ಒಳಗೆ ನುಗ್ಗಿದ್ವಿ . ಪ್ರಿನ್ಸಿಪಾಲ್ ಏನೋ ಫೈಲ್ಸ್ ನೋಡ್ತಾ ಇದ್ದವರು What is going on here ? ಅಂದ್ರು. ನಾನು “ We want to talk to you immediately”. ಅಂದೆ . ಅವರು Not we … , say I …ಅನ್ನುತ್ತ ನಕ್ಕರು . ಹಿಂದೆ ತಿರುಗಿ ನೋಡ್ತೀನಿ!! ಯಾರೂ ಇಲ್ಲ . ನನಗೆ ಕಣ್ಣು ಕತ್ತಲಾದ ಅನುಭವ.... Lecturers .. Lab.. Water ... ಅಂತೆನೇನೋ ಬಡಬಡಿಸಿ ಹೊರಗೆ ಬಂದೆ. ಅಟೆಂಡರ್ ಕಣ್ಣು ಕೆಂಪು ಮಾಡ್ಕೊಂಡು ದುರುಗುಟ್ಟಿದ.. ನನ್ನ ಹಿಂದೆ ಬಂದವರು ಯಾರೂ ಅಲ್ಲಿ ಕಾಣಲಿಲ್ಲ!!!!
ಆ ಕ್ಷಣದಲ್ಲಿ “ ಅಮೂಲ್ಯ” ವಾದ ನಾಯಕತ್ವದ ಪಾಠವೊಂದನ್ನು ಕಲಿತೆ. ನಾಯಕಿಯಾಗುವುದಕ್ಕೆ ತುಂಬಾ ತಯಾರಿ ಬೇಕು . ನಾನು ನಾಯಕತ್ವ ಯಾಕೆ ವಹಿಸಬೇಕು? ಅನ್ನುವ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಗೊತ್ತಿರಬೇಕು ..ನನ್ನ ಬುದ್ಧಿ ನನ್ನ ಕೈಲಿರಬೇಕು....
ಜಿಂದಾಬಾದ್ ಶಬ್ದವನ್ನು 'ಪಾಕಿಸ್ತಾನಕ್ಕೆ ಜೋಡಿಸಬೇಕಾ ಅಥವಾ ಹಿಂದುಸ್ತಾನಕ್ಕಾ?' ಅಂತ ಗೊಂದಲದಲ್ಲಿದ್ದ ಆ ಪುಟ್ಟಿ 30 ವರ್ಷಗಳ ಹಿಂದಿನ ಘಟನೆಯನ್ನು ನನಗೆ ನೆನಪಿಸಿದ್ಲು ...
Subscribe to:
Post Comments (Atom)
No comments:
Post a Comment