Monday, 16 November 2015

ಉಡುಪೆಂಬ ಆತ್ಮವಿಶ್ವಾಸ


ನನಗೆ ತಲೆ ಕೆಟ್ಟಿದೆ” ಎಂದು ಸಾರ್ವಜನಿಕವಾಗಿ ಘೋಷಿಸುವುದರಿಂದಲೂ ಲಾಭಗಳಿವೆ ಎಂದು ನನಗೆ ಇತ್ತೀಚೆಗೆ ತಿಳಿಯಲಾರಂಭಿಸಿದೆ. ಮನಸ್ಸಿಗೆ ತೋಚಿದಂತೆ ಮಾತಾಡಬಹುದು.......ಮರ್ಯಾದೆಯ ಗಡಿ ದಾಟಿ ವ್ಯವಹರಿಸಬಹುದು...... ಇಂಥಾ ಹುಚ್ಚಾಟಗಳಿಂದ ಹಣ, ಕೀರ್ತಿಯನ್ನೂ ಗಳಿಸಬಹುದು. ಯಾರಿಗುಂಟು... ಯಾರಿಗಿಲ್ಲ ಇಂಥ ಸೌಭಾಗ್ಯ!!

ನನಗೆ ಹೀಗೆನನ್ನಿಸಿದ್ದು ಹುಚ್ಚನೆಂದು ಘೋಷಿಸಿಕೊಂಡ ಚಾಣಾಕ್ಷ ವ್ಯಕ್ತಿಯೊಬ್ಬ ಮಹಿಳೆಯ ಅತ್ಯಂತ ವೈಯಕ್ತಿಕ ವಿಷಯವಾದ ಅವಳ ಮೈಮೇಲಿನ ಬಟ್ಟೆಯ ಬಗ್ಗೆ ಪುಂಖಾನುಪುಂಖವಾಗಿ ಉಪದೇಶ ಕೊಡುತ್ತಿದ್ದುದು, ಅದರಲ್ಲೂ ದೇಹಸಿರಿ , ಸೌಂದರ್ಯ, ನಟನಾ ಕೌಶಲವೇ ಬಂಡವಾಳವಾಗಿರುವ ಮಾಧ್ಯಮದಲ್ಲಿ! ಹಾಗೂ ಅದನ್ನು ಕೇಳಿ , ನೋಡಿ ಮೆಚ್ಚಿ-ತಲೆದೂಗುತ್ತಿದ್ದ ನಾಗರಿಕರನ್ನು ಕಂಡು. ಮಹಿಳೆಗೆ ಎಷ್ಟು ವಿದ್ಯಾಭ್ಯಾಸ ಬೇಕು? ಎಂಥ ಗಂಡ ? ಮದುವೆ ಯಾವಾಗ? ಎಷ್ಟು ಮಕ್ಕಳು? ಅವಳು ಯಾವ ಕೆಲಸಗಳನ್ನು ಮಾಡಬೇಕು? ಎಷ್ಟು ಹೊತ್ತಿಗೆ ಮನೆ ಬಿಡಬೇಕು- ಎಷ್ಟು ಗಂಟೆಗೆ ಮನೆ ತಲುಪಬೇಕು? ಯಾವ ಬಟ್ಟೆ ತೊಡಬೇಕು? ಹೀಗೆ ಎಲ್ಲವನ್ನೂ ಸಾರ್ವಜನಿಕರೇ ನಿರ್ಧರಿಸಿ ಘೋಷಿಸುತ್ತಿರಬೇಕು! ಅವಳು ಮಾತ್ರ ಎಲ್ಲವನ್ನೂ ಕೇಳುತ್ತಾ ತನ್ನ ಪಾಡಿಗೆ ಕೆಲಸ ಮಾಡುತ್ತಾ ಇರಬೇಕು! ಹೇಗಿದೆ ನ್ಯಾಯ??

ಹಾಗೆ ನೋಡಿದರೆ ನನ್ನನ್ನೂ ಈ ಉಡುಪಿನ ಮಾಯೆ ಬಹಳ ವರ್ಷ ಕಾಡಿತ್ತು. ಕರಾವಳಿಯ ಕುಗ್ರಾಮವೊಂದರಲ್ಲಿ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ನನಗೆ ಮಿನಿ ಮೈಕೆಲ್ ಎಂಬ ಪ್ರಾಣಸ್ನೇಹಿತೆಯೊಬ್ಬಳಿದ್ದಳು.ಉದ್ದಲಂಗ ಹಾಕಿಕೊಂಡು, ತಲೆಗೆ ಎಣ್ಣೆ ಹಚ್ಚಿ ಕಟ್ಟಿದ ಬಿಗಿಯಾದ ಎರಡು ಜಡೆಯ ಮೇಲೆ ಅಬ್ಬಲಿಗೆ ಹೂವು ಮುಡಿದುಕೊಂಡು ಶಾಲೆಗೆ ಹೋಗುತ್ತಿದ್ದ ನಮಗೆ, ಸ್ಕರ್ಟ್/ ಪಾಂಟ್ , ಟಿಶರ್ಟ್ ಹಾಕಿಕೊಂಡು ಬಾಬ್ ಕಟ್ ನಲ್ಲಿ ಕಂಗೊಳಿಸುವ ಅವಳೆಂದರೆ ಅನ್ಯಲೋಕದ ಜೀವಿ. ಸೈಕಲ್ ನಲ್ಲಿ ಅವಳ ಓಡಾಟ.. ಭಾನುವಾರಗಳಂದು ಚರ್ಚಿಗೆ ಅವಳ ಪಯಣ...ಅಲ್ಲಿ ಆಕೆ ಹಾಡುವ ಕ್ರಿಸ್ತನ ಇಂಗ್ಲೀಷ್ ಗೀತೆಗಳು.... ಪ್ರಸಾದವೆಂದು ತಿನ್ನುವ ಕೇಕ್ ...ಓಹ್..... ಎಂಥ ಮಧುರ ಜೀವನ. ಬೆಳಗ್ಗೆ ಎದ್ದು ಹೂ ಕೊಯ್ದು, ಮಾಲೆ ಮಾಡಿ,ದೇವರಮನೆ ಒರೆಸಿ, ರಂಗೋಲಿ ಹಾಕಿ...ಅಯ್ಯೋ.... ಸ್ವಲ್ಪ ದೊಡ್ಡವರಾದ ಮೇಲೆ ಮೂರು ದಿನ ಹೊರಗೆ ಕೂರುವ ಶಿಕ್ಷ...ಇನ್ನು ದೇವಸ್ಥಾನದಲ್ಲಿ ಅದೇ ಪುರಂದರ ಭಜನೆ...... ತಣ್ಣನೆಯ ತೀರ್ಥ ...ಥೂ...ನಮ್ಮದೂ ಒಂದು ಜೀವನವಾ....ಅಂತೆಲ್ಲ ನಮಗೆ ಅನಿಸುತ್ತಿತ್ತು. ನನಗಂತೂ ಒಮ್ಮೊಮ್ಮೆ ಅವಳ ಜಾತಿಗೆ ಸೇರಿದರೆ ಹೇಗೆ?ಎಂಬ ಭಂಡ ಆಲೋಚನೆಯೂ ಬರುತ್ತಿತ್ತು .ಆದರೆ ಹಿರಿಯರ ಮಾತು ಮೀರಿದರೆ ರಕ್ತ ಕಾರುವಂತೆ ಮಾಡುವ ಸಾಮರ್ಥವಿರುವ ನಮ್ಮ ಮನೆಯ ಪಂಜುರ್ಲಿ-ಕಲ್ಲುರ್ಟಿಯರೆಂಬ ದೈವಗಳು ಹಾಗೂ ಮನೆಯ ಸುತ್ತ ಆಗಾಗ ಕಾಣಿಸುತ್ತಿದ್ದ ನಾಗಪ್ಪನಿಂದ ನನ್ನ ಯೋಜನೆ ಕಾರ್ಯರೂಪಕ್ಕೆ ಇಳಿಯಲಿಲ್ಲ. ಮುಂದೆ ಕಾಲೇಜಿನಲ್ಲಿಯೂ ಪಾಂಟ್ ಧರಿಸುವ ನನ್ನ ಕನಸು ನೆರವೇರಲೇ ಇಲ್ಲ. ಮುಂದೆ ಮದುವೆಯಾದ ಮೇಲೆ ಆರಂಭಿಕ ಸಂಸಾರತಾಪತ್ರಯಗಳೆಲ್ಲ ಕಳೆದು ಕೆಲವರ್ಷಗಳ ನಂತರ ಕೊನೆಗೂ ಒಂದುದಿನ ಪಾಂಟ್- ಟಾಪ್ ಧರಿಸಿಯೇ ಬಿಟ್ಟೆ. ಆದರೆ ಸತ್ಯವಾಗಿ ಹೇಳುತ್ತೇನೆ.ದೀರ್ಘಕಾಲದ ನಿರೀಕ್ಷೆಯಿಂದಲೋ ಅಥವಾ ವಯಸ್ಸಿನಿಂದಲೋ ಗೊತ್ತಿಲ್ಲ ನನಗೆ ಬಹಳ ನಿರಾಸೆಯಾಯಿತು... “ ಇದು ಇಷ್ಟೇನಾ!” ಅನ್ನಿಸಿತು.

ಈಗ ಕನಿಷ್ಟ ಉಡುಗೆ ತೊಡುವುದು ಆಧುನಿಕತೆಯ ಸಂಕೇತ ಎನಿಸಿದೆ. ಪಾಲಕರಿಗೂ ತಮ್ಮ ಮಕ್ಕಳು ಆಧುನಿಕರಾಗಿ ಕಾಣಲಿ ಎಂಬಾಸೆಯೂ ಇರುತ್ತದೆ.ತಮಗಿಷ್ಟ ಬಂದ ಉಡುಗೆ ತೊಟ್ಟು ನಿರ್ಭಯವಾಗಿ, ಲವಲವಿಕೆಯಿಂದ ತುಳುಕುವ ನನ್ನ ವಿದ್ಯಾರ್ಥಿನಿಯರನ್ನು ಕಂಡಾಗ ನನಗೆ ಆನಂದವಾಗುತ್ತದೆ. ನನ್ನ ವಿದ್ಯಾರ್ಥಿನಿಯೊಬ್ಬಳು ನನಗೆ ಹೇಳಿದ ಪ್ರಕಾರ ಒಳ ಉಡುಪುಗಳು ಕಾಣಿಸುವಂತಹ ಬಟ್ಟೆ ತೊಟ್ಟರೆ ಆತ್ಮವಿಶ್ವಾಸ ವರ್ಧಿಸುತ್ತದೆ. ಅಲ್ಲದೇ ಎಲ್ಲರ ಗಮನವನ್ನೂ ಸೆಳೆಯುವುದರಿಂದ ಮನಸ್ಸಿಗೆ ಖುಷಿಯೂ ಆಗುತ್ತದೆ. ಇರಲಿ... ಇದೆಲ್ಲ ಅವರವರ ವೈಯಕ್ತಿಕ ಅಭಿಪ್ರಾಯ.

ಏನೇ ಇರಲಿ. ಉಡುಗೆ - ತೊಡುಗೆ ಪ್ರತಿಯೊಬ್ಬರ ಮೂಲಭೂತ ಹಕ್ಕು. ಅಲ್ಲದೇ ಇತಿಹಾಸವನ್ನು ಗಮನಿಸಿದರೂ ಕಾಲನ ದಾಳಿಯಲ್ಲಿ ಹೆಚ್ಚು ಬದಲಾವಣೆಗೆ ಒಳಪಟ್ಟದ್ದೆಂದರೆ ಬಟ್ಟೆಗಳೇ. ಹೊಸದರ ಬಗ್ಗೆ ಆಸೆಪಡುವುದು ಕ್ರಿಯಾಶೀಲ ವ್ಯಕ್ತಿಯ ಸಹಜಗುಣ. ಸಂದರ್ಭಕ್ಕೆ , ಹೊಟ್ಟೆಪಾಡಿಗೆ, ಮನಸ್ಸಂತೋಷಕ್ಕೆ ಅನುಗುಣವಾಗಿ ಅನುಕೂಲಕರವಾದ ಬಟ್ಟೆಯನ್ನು ತೊಡುವ ಹಕ್ಕನ್ನು ಮಹಿಳೆಯಿಂದ ಯಾರೂ ಕಿತ್ತುಕೊಳ್ಳಬಾರದು. ಆಕೆ ಅದಕ್ಕೆ ಅವಕಾಶ ಮಾಡಿಕೊಡಲೂಬಾರದು.ನಮ್ಮ ಸಂಸ್ಕೃತಿಯು ಹಾಡಿ ಹೊಗಳುವ ಸೀರೆಗಿಂತ ಪಾಶ್ಚಾತ್ಯ ಉಡುಪುಗಳು ಯಾವುದೇ ರೀತಿಯಲ್ಲಿ ಅಸಭ್ಯವಲ್ಲವೇ ಅಲ್ಲ. ಇನ್ನು ಮಹಿಳೆಯರ ಬಟ್ಟೆಯಿಂದ ಸಂಸ್ಕೃತಿ ನಾಶ, ಅತ್ಯಾಚಾರವಾಗುವುದೇ ನಿಜವಾದರೆ ಅಂಥಾ ಸಮಾಜವನ್ನು ನಿರ್ಮಿಸಿದ ನಾವು ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು.

No comments:

Post a Comment