Friday, 20 November 2015

ಚೀನಾದ ನೆನಪುಗಳು

ಕೆಲ ತಿಂಗಳ ಹಿಂದೆ ಒಂದು ಭಾನುವಾರ ಕಂಪ್ಯೂಟರಿನಲ್ಲಿ ತದೇಕದೃಷ್ಟಿ ನೆಟ್ಟಿದ್ದ ನನ್ನ ಪತಿ ಇದ್ದಕ್ಕಿದ್ದಂತೆಯೇ “ನಾವು ಈ ಬೇಸಗೆ ರಜೆಯಲ್ಲಿ ಚೀನಾಗೆ ಪ್ರವಾಸ ಹೋಗೋಣವೇ” ಎಂದಾಗ ಉತ್ತರಿಸಲು ಅರೆಕ್ಷಣ ತಡವರಿಸಿದೆ. ವಿದೇಶಪ್ರವಾಸ ಎಂದರೆ ಸಿಂಗಪುರ, ದುಬೈ ಇತ್ಯಾದಿಗಳು, ಆದರೆ ಚೀನಾ ಕೂಡಾ ಪ್ರವಾಸಿತಾಣವೇ…. ? ಎನಿಸಿತು. ಸುದ್ದಿ ಕೇಳಿದ ನಮ್ಮ ಸಂಬಂಧಿಗಳೂ, ಸ್ನೇಹಿತರೂ ಕೂಡಾ ಚೀನಾಕ್ಕೆ ಯಾಕೆ ಹೋಗುತ್ತೀರಿ? ಎಂದು ಪ್ರಶ್ನಾರ್ಥಕ ನೋಟ ಬೀರಿದರು. ಏನೇ ಇರಲಿ, ನನ್ನ ಕೌಟುಂಬಿಕ ಮಿತ್ರ, ಸುಜ್ಹೋ ನಗರದಲ್ಲಿ ಡೆಲ್ಫೈ ಎಲೆಕ್ಟ್ರಾನಿಕ್ ಕಂಪನಿಯ ಉತ್ಪಾದನಾ ವಿಭಾಗದ ನಿರ್ದೇಶಕರಾಗಿರುವ ಶ್ರೀ ರವಿ ಫಡ್ಕೆಯವರ ಆಹ್ವಾನದ ಮೇರೆಗೆ ಎಪ್ರಿಲ್ ಕೊನೆಯ ವಾರದ ಚೀನಾ ಮತ್ತು ಹಾಂಕಾಂಗ್ ಪ್ರವಾಸಕ್ಕೆ ನಮ್ಮಲ್ಲಿದ್ದ ಅಲ್ಪ- ಸ್ವಲ್ಪ ಉಳಿತಾಯದ ಹಣವನ್ನು ತೊಡಗಿಸಿ ತಯಾರಿ ಆರಂಭಿಸಿಯೇ ಬಿಟ್ಟೆವು.
ಚೀನಾದ ಬಗ್ಗೆ ನನಗೆ ಮೊದಲಿನಿಂದಲೂ ಅತೀವ ಕುತೂಹಲ. ನಮ್ಮ ಭಾರತದಂತೆಯೇ ಅಗಾಧ ಜನಸಂಖ್ಯೆಯ, ಶ್ರೀಮಂತ ಪರಂಪರೆಯ ನಾಡಿನ ಇಂದಿನ ಯಶೋಗಾಥೆಯ ಬಗ್ಗೆ ತಿಳಿಯುವ ಹಂಬಲ. ಹಿಂದೆ ನಾನು ಓದಿದ ‘ಸ್ಮೋಕ್ಸ್ ಅಂಡ್ ಮಿರರ್ಸ್ – ಪಲ್ಲವಿ ಅಯ್ಯರ್’ ಹಾಗೂ ‘ಮಾವೋನ ಕೊನೆಯ ನರ್ತಕ – ಲೀ ಕುನ್ ಕ್ಸಿಂಗ್ [ಕನ್ನಡಕ್ಕೆ ಜಯಶ್ರೀ ಭಟ್]’ ಎಂಬ ಎರಡು ಅತ್ಯುತ್ತಮ ಕೃತಿಗಳಿಂದ ಅಲ್ಲಿನ ಜನಜೀವನದ ಸ್ಥೂಲ ಪರಿಚಯವಾಗಿತ್ತಾದರೂ ಈ ರೀತಿಯ ಅಭಿವೃದ್ಧಿ ಹೇಗೆ ಸಾಧ್ಯ? ಸರ್ಕಾರವೆಂಬ ವ್ಯವಸ್ಥೆ ಈ ಮಟ್ಟದಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವೇ? ಇದರಲ್ಲಿ ಉತ್ಪೇಕ್ಷೆ ಎಷ್ಟು? ನೈಜತೆ ಏನು? ಇತ್ಯಾದಿ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ಬೆಂಗಳೂರಿನಿಂದ ಹಾಂಕಾಂಗ್ ಮೂಲಕ ಶಾಂಘೈ ವಿಮಾನ ನಿಲ್ದಾಣದಲ್ಲಿ ಇಳಿದಾಗ ಚಿಕ್ಕ ಕಣ್ಣಿನ ಬಿಗಿ ಮುಖದ ಇಮಿಗ್ರೇಷನ್ ಅಧಿಕಾರಿಯಿಂದ ಅನುಮತಿ ಪಡೆದು ಹೊರಬಂದಾಗ ,ಆತ್ಮೀಯವಾಗಿ ನಮ್ಮನ್ನು ಸ್ವಾಗತಿಸಿದ ರವಿ ಫಡ್ಕೆಯವರಿಂದ ಪ್ರಶ್ನೆಗಳು ಸೂಕ್ತ ಉತ್ತರ ಪಡೆಯಲಾರಂಭಿಸಿದವು.
ಅಬಿವೃದ್ಧಿ , ಮೂಲಸೌಕರ್ಯಗಳ ವಿಚಾರದಲ್ಲಿ ನಮ್ಮ ದೇಶಕ್ಕೂ , ಚೀನಾಗೂ ಹೋಲಿಸಲು ಸಾಧ್ಯವೇ ಇಲ್ಲ. ಅಥವಾ ಯಾವ ದೇಶವನ್ನೂ ಇನ್ನೊಂದು ದೇಶದ ಜೊತೆ ಹೋಲಿಸಬಾರದು. ಪ್ರತಿಯೊಂದು ದೇಶವೂ ಭಿನ್ನ, ಅದರ ಜನಜೀವನ , ಸಂಸ್ಕೃತಿ, ಚರಿತ್ರೆ, ಸಮಸ್ಯೆಗಳೂ ಭಿನ್ನವಾಗಿರುತ್ತವೆ. ಆದರೆ ನಾನು ಅಲ್ಲಿ ಕಂಡ ಕೆಲ ವಿಶೇಷಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದೇ ನನ್ನ ಉದ್ದೇಶ.
ಇಲ್ಲಿ ಗಿಡವಲ್ಲ, ಮರ ನೆಡುವುದು!
ಇಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ , ಎಲ್ಲ ಕಟ್ಟಡಗಳ ಮುಂಭಾಗದಲ್ಲಿ ಎತ್ತರವಾದ ಮರಗಳು ಗಮನ ಸೆಳೆಯುತ್ತವೆ. ಹೆಚ್ಚು ಕಡಿಮೆ ಎಲ್ಲವೂ ಒಂದೇ ಎತ್ತರ, ದಪ್ಪ. ಅರೆ… ಮರಗಳೂ ಇಲ್ಲಿ ಶಿಸ್ತು ಪಾಲಿಸುತ್ತವೆಯೇ ಎಂದು ಉದ್ಗರಿಸಿದ ನನಗೆ ಸಿಕ್ಕ ಉತ್ತರ ‘ಇಲ್ಲಿ ಗಿಡವಲ್ಲ.. ಮರ ನೆಡುತ್ತಾರೆ!’ ಸಾಮಾನ್ಯವಾಗಿ ಚೀನಾದಲ್ಲಿ ಹೊಸ ರಸ್ತೆ , ಕಟ್ಟಡಗಳ ಉದ್ಘಾಟನೆಗೂ ಮುನ್ನವೇ ಪೂರ್ಣಪ್ರಮಾಣದ ಉದ್ಯಾನಗಳ ನಿರ್ಮಾಣವಾಗುತ್ತದೆ. ಸಮೀಪದ ಹಳ್ಳಿಗಳಲ್ಲಿ ಈ ಉದ್ದೇಶಕ್ಕೆಂದೇ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತದೆ. ಅವುಗಳಲ್ಲಿ ಪೂರ್ಣಪ್ರಮಾಣದಲ್ಲಿ ಬೆಳೆದ ಮರಗಳನ್ನು ಬೇರುಸಮೇತ , ಲಾರಿಗಳಲ್ಲಿ ತಂದು ಹೊಸ ಸ್ಥಳಗಳಲ್ಲಿ ಮೊದಲೇ ತೋಡಿಟ್ಟ ಆಳವಾದ ಗುಂಡಿಗಳಲ್ಲಿ ನೆಡುತ್ತಾರೆ. ಮರಕ್ಕೆ ನಾಲ್ಕೂ ಕಡೆಗಳಿಂದ ಲೋಹದ /ಬಿದಿರಿನ ಕಂಬಗಳ ಆಧಾರವನ್ನು ನಿರ್ಮಿಸುತ್ತಾರೆ. ಒಂದು ವರ್ಷದ ನಂತರ ಮರ ಬೇರು ಬಿಟ್ಟಿರುವುದನ್ನು ಖಚಿತಪಡಿಸಿಕೊಂಡು ಆಧಾರಸ್ತಂಭಗಳನ್ನು ತೆಗೆಯುತ್ತಾರೆ. ಇಂಥ ಸಾವಿರಾರು ಮರಗಳನ್ನು ರಸ್ತೆ ಗಳ ಇಕ್ಕೆಲಗಳಲ್ಲಿ, ಪ್ರೇಕ್ಷಣೀಯ ಸ್ಥಳಗಳಲ್ಲಿ ನೋಡಿ ಅಚ್ಚರಿಯಾಯಿತು.
ಮರವನ್ನು ಲಾರಿಯಲ್ಲಿ ಒಯ್ಯುವುದು
ಮರವನ್ನು ಲಾರಿಯಲ್ಲಿ ಒಯ್ಯುವುದು
ಮರ ನೆಟ್ಟ ರಸ್ತೆ
ಮರ ನೆಟ್ಟ ರಸ್ತೆ
ಸ್ವಚ್ಛತೆಯೆಂಬ ಉದ್ಯಮ
ವಿದೇಶಗಳಲ್ಲಿನ ಸ್ವಚ್ಛತೆಯ ಬಗ್ಗೆ ನಾವೆಲ್ಲಾ ಕಿವಿ ತೂತಾಗುವಷ್ಟು ಕೇಳಿರುತ್ತೇವೆ. ಈ ವಿದೇಶೀಯರೂ ನಮ್ಮಂತೆಯೇ ಹುಲುಮಾನವರಲ್ಲವೇ? ಅವರು ಅಪ್ಪಿತಪ್ಪಿಯೂ ದಾರಿಯಲ್ಲಿ ಕಸ ಹಾಕುವುದೇ ಇಲ್ಲವೇ? ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿ ಸಿಗುವವರೆಗೂ ಕಸ ಕೈಯಲ್ಲಿ ಹಿಡಿದುಕೊಂಡೇ ಇರಲು ಹೇಗೆ ಸಾಧ್ಯ? ಎಂದೆಲ್ಲ ನನಗೆ ಅನೇಕ ಬಾರಿ ಅನಿಸುತ್ತಿತ್ತು. ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಕ್ಕಿತು. ಅವರೂ ನಮ್ಮಂತೆಯೇ ಕಠಿಣ ಕಾನೂನಿಗೆ ಮಾತ್ರ ಹೆದರುವ ಜನ. ಚೀನಾದಲ್ಲೂ ನಾನು ಹಣ್ಣಿನ ಸಿಪ್ಪೆ, ಖಾಲಿ ನೀರಿನ ಬಾಟಲ್, ಚಿಪ್ಸ್ ನ ಲಕೋಟೆಗಳನ್ನು,ಉರಿದ ಸಿಗರೇಟ್ ತುಂಡುಗಳನ್ನು ದಾರಿಯಲ್ಲಿ ಎಸೆಯುವವರನ್ನು, ಮಕ್ಕಳಿಗೆ ತೀರಾ ಅವಸರವಾದಾಗ ಬೀದಿ ಬದಿಯಲ್ಲಿ ಉಚ್ಚೆ ಹೊಯ್ಯಿಸುವವರನ್ನು, ಬೀದಿಯಲ್ಲಿ ಉಗುಳುವವರನ್ನು ಕಂಡೆ. [ಇವರ ಸಂಖ್ಯೆ ನಮ್ಮಲ್ಲಿಗಿಂತ ಕಡಿಮೆ ] ಆದರೆ ಇದರ ಸ್ವಚ್ಛತೆಗೆ ಉತ್ತಮ ವ್ಯವಸ್ಥೆ ಇದೆ. ದೊಡ್ಡ ಸಂಖ್ಯೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳು ಎಲ್ಲೆಲ್ಲಿಯೂ ಕಂಡರು. ಶುಭ್ರವಾದ ಸಮವಸ್ತ್ರ ತೊಟ್ಟ ಇವರ ಒಂದು ಕೈಯಲ್ಲಿ ತುದಿಯಲ್ಲಿ ಇಕ್ಕಳವಿರುವ ಕೋಲು ಇದೆ. ಇನ್ನೊದು ಕೈಯಲ್ಲಿ ಬಕೇಟು. [ ಚಿತ್ರ ನೋಡಿ] ಬಿಡುವಿಲ್ಲದೇ ತಮಗೆ ಗೊತ್ತುಪಡಿಸಿದ ಜಾಗದಲ್ಲಿ ಇವರು ಸುತ್ತಾಡುತ್ತ ಕಸ ಎತ್ತುತ್ತಲೇ ಇರುತ್ತಾರೆ. ಹಸಿ ಹಾಗೂ ಒಣ ಕಸವನ್ನು ತಕ್ಷಣ ವಿಂಗಡಿಸುತ್ತಾರೆ. ನಗರದ ತ್ಯಾಜ್ಯ ವಿಂಗಡನಾ ಘಟಕಗಳು ಕಸವನ್ನು 100% ಸಂಸ್ಕರಿಸುತ್ತವೆ.ಹಸಿ ಕಸದ ಗೊಬ್ಬರ ರಸ್ತೆಬದಿಯ ಹೂಗಿಡಗಳಿಗೆ ಉಪಯೋಗವಾಗುತ್ತದೆ. ಯಾಂಜ್ ಜಿ ನದಿಯನ್ನು ಜೋಪಾನವಾಗಿ ರಕ್ಷಿಸಿರುವುದರಿಂದ ನೀರಿಗೆ ಬರವಿಲ್ಲ. ಆದ್ದರಿಂದ ವಾರಕ್ಕೊಮ್ಮೆ ನಗರದ ಬೀದಿಗಳನ್ನು ತೊಳೆಯಲಾಗುತ್ತದೆ.[ಚಿತ್ರ ನೋಡಿ] . ನಗರದಲ್ಲಿ ಅಲ್ಲಲ್ಲಿ ಶೌಚಾಲಯಗಳು ಕಂಡವು. ಪ್ರೇಕ್ಷಣೀಯ ಸ್ಥಳಗಳಲ್ಲಿ 30-60 ಶೌಚಾಲಯಗಳಿವೆ. ವಿಶೇಷವೆಂದರೆ ಸಾರ್ವಜನಿಕ ಶೌಚಾಲಯಗಳಲ್ಲಿ ಹೆಚ್ಚಿನವು ನಮ್ಮ ಭಾರತೀಯ ಮಾದರಿಯ ಪಾಯಿಖಾನೆಗಳು! ನಮ್ಮ ನಗರಗಳಲ್ಲಿ ಬೀದಿ ತೊಳೆಯುವುದು ಸಾಧ್ಯವಾಗದಿರಬಹುದು.
ಆದರೆ ಈ ರೀತಿಯ ಸಶಸ್ತ್ರ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಿಸಿ ನಮ್ಮ ಬೀದಿಗಳನ್ನು, ಪ್ರೇಕ್ಷಣೀಯಸ್ಥಳಗಳನ್ನು ಸ್ವಚ್ಛವಾಗಿ ಇರಿಸಬಹುದಲ್ಲ ಅನಿಸಿತು. ಇದಕ್ಕೆ ದೊಡ್ಡ ಖರ್ಚೂ ಇಲ್ಲ . ಉದ್ಯೋಗ ಸೃಷ್ಟಿಯೂ ಆಯಿತು.
ರಸ್ತೆ ತೊಳೆಯುವುದು ಸಶಸ್ತ್ರ ಪೌರಕರ್ಮಚಾರಿ
ರಸ್ತೆ ತೊಳೆಯುವುದು
ರಸ್ತೆ ತೊಳೆಯುವುದು
ಸಶಸ್ತ್ರ ಪೌರಕರ್ಮಚಾರಿ
ಸಶಸ್ತ್ರ ಪೌರಕರ್ಮಚಾರಿ
ನಾರೀಶಕ್ತಿ
ಚೀನಾದಲ್ಲಿ ನನಗೆ ನಾರೀಶಕ್ತಿಯ ವಿರಾಟ್ ರೂಪದ ದರ್ಶನವಾಯಿತು. ಹೆಚ್ಚಿನ ಎಲ್ಲ ಸೇವಾ ಕ್ಷೇತ್ರದಲ್ಲಿ ಮಹಿಳೆಯರದೇ ಸಿಂಹಪಾಲು. ವಾಹನ ಚಾಲಕರು, ರಸ್ತೆ ಸುಂಕದ ವಸೂಲಿಗರು, ಪ್ರವಾಸೀ ಗೈಡ್ ಗಳು, ಪೌರಕಾರ್ಮಿಕರು, ರೈಲು, ಬಸ್ಸುಗಳ ಸಿಬ್ಬಂದಿ, ಹೋಟೇಲಿನ ಎಲ್ಲ ವಿಭಾಗಗಳ ಸಿಬ್ಬಂದಿ .. ಎಲ್ಲವೂ ಮಹಿಳೆಯರೇ! ಈ ನಗುಮೊಗದ ,ಚುರುಕು ನಡಿಗೆಯ ವನಿತೆಯರು ಹಗಲು ರಾತ್ರಿಯೆನ್ನದೇ ದುಡಿಯುತ್ತಾರೆ. ಒಮ್ಮೆ ಶಾಂಘೈ ನಿಂದ ನಾವು ಸುಜೋನಲ್ಲಿರುವ ಮನೆಗೆ ಮರಳುವಾಗ ರಾತ್ರಿ 1 ಗಂಟೆ ದಾಟಿತ್ತು. ಆ ರಾತ್ರಿಯಲ್ಲೂ ಆ ನಿರ್ಜನ ಹೆದ್ದಾರಿಯಲ್ಲಿ ಇಬ್ಬರು ಸುಂದರವಾದ ಯುವತಿಯರು ರಸ್ತೆ ಸುಂಕ ವಸೂಲಿಯಲ್ಲಿ ನಿರತರಾಗಿದ್ದ ದೃಶ್ಯ ಕಂಡು ಹೃದಯ ತುಂಬಿ ಬಂತು.ನಮ್ಮ ವಾಹನ ಚಾಲಕಿ 50ವಯಸ್ಸಿನ ತರುಣಿ! ಯೂ ಪಿಂಗ್ ಕೂಡಾ ನಮ್ಮನ್ನು 2 ಗಂಟೆಗೆ ಮನೆ ತಲುಪಿಸಿ ನಿರ್ಭಯವಾಗಿ ತನ್ನ ಮನೆಗೆ ಹೋದಳು. ಬಹುಶ: ನಮ್ಮಲ್ಲೂ ಎಲ್ಲ ಮಹಿಳೆಯರೂ ಧೈರ್ಯ ವಹಿಸಿ ರಾತ್ರಿಯಲ್ಲೂ ಓಡಾಡಲೂ ಪ್ರಾರಂಭಿಸಿದರೆ ಮಹಿಳೆಯೆಂಬ ಸಂಪನ್ಮೂಲದ ಸದ್ಬಳಕೆ ಆಗಬಹುದು.ಮೌಲ್ಯಯುತ,ನಿರ್ಭೀತ ಸಮಾಜದ ಸೃಷ್ಟಿಯಾಗಬಹುದು.
ದೇವ್ರಾ……. ಹಾಗಂದ್ರೇನು?
ದೇವರ ಅಸ್ತಿತ್ತ್ವದ ಬಗ್ಗೆ ಮನುಕುಲ ಶತಮಾನಗಳಿಂದ ಜಿಜ್ಞಾಸೆ ನಡೆಸಿದೆ, ನಡೆಸುತ್ತಲೇ ಇದೆ. ನಾವು ಭಾರತೀಯರಂತೂ ದೇವನನ್ನು ಕೋಟ್ಯಾಂತರ ರೂಪಗಳಲ್ಲಿ ಕಂಡವರು. ಒಂದರ್ಥದಲ್ಲಿ ನಮ್ಮ ಜೀವನದ ಕೇಂದ್ರಬಿಂದುವೇ ದೇವರು. ನಮ್ಮ ಪ್ರವಾಸದಲ್ಲಿ ಜನಜೀವನದಲ್ಲಿ ದೇವನೆಂಬ ಕಲ್ಪನೆಯ ಅನುಪಸ್ಥಿತಿ ನನಗೆ ಕಂಡಿತು.ಸರಕಾರದ ಕಮ್ಯುನಿಸ್ಟ್ ಚಿಂತನೆಗಳಿಂದ ಇಂದಿನ ತಲೆಮಾರು ದೇವರ ಬಗ್ಗೆ ವಿಶಿಷ್ಟ ತೀರ್ಮಾನಕ್ಕೆ ಬಂದಿದೆ. ಹಾಗೇ ಕುತೂಹಲದಿಂದ ನಮ್ಮ ಗೈಡ್ ವಾಂಗ್ ಳನ್ನು ಕೇಳಿದೆ, ನೀನು ಯಾವ ದೇವರನ್ನು ಆರಾಧಿಸುತ್ತೀಯೆ? . ತಟಕ್ಕನೆ ಉತ್ತರ ಬಂತು- ದೇವ್ರಾ……. ಆರಾಧಿಸುವುದಾ….. ಹಾಗಂದ್ರೇನು?. ನಾನು – “ಅದೇ ಬುದ್ಧ ಅಥವಾ ಬೇರೆ ಯಾವುದಾದರೂ ದೇವರನ್ನು ದಿನವೂ ಪ್ರಾರ್ಥಿಸುತ್ತೀಯಾ?” ಎಂದೆ. ಅವಳು ಅರೆಕ್ಷಣ ಯೋಚಿಸಿ, “ನೋಡಿ , ನನಗೆ ಯಾವ ದೇವ್ರೂ ಇಲ್ಲ. ಆದರೆ ಇಲ್ಲಿನ ಕೆಲವು ಮತಗಳ ತತ್ತ್ವಗಳನ್ನು ನಂಬುತ್ತೇನೆ. ನಾನು ಚಿಕ್ಕವಳಿರುವಾಗ ಕನ್ ಫ಼ಯೂಜಿಸ್ ಮತವನ್ನು ಪಾಲಿಸುತ್ತಿದ್ದೆ . ಅದು ಕುಟುಂಬವನ್ನು ಪ್ರೀತಿಸು, ಆದರ್ಶಗಳಿಗೆ ,ಜೀವನ ಮೌಲ್ಯಗಳಿಗೆ ಬೆಲೆ ಕೊಡು ಅನ್ನುತ್ತದೆ. ಈಗ ಯುವತಿಯಾಗಿದ್ದೇನೆ ಆದ್ದರಿಂದ ಟಾವಿಸಂ ಮತವನ್ನು ಪಾಲಿಸುತ್ತೇನೆ ಯಾಕೆಂದ್ರೆ ಅದು ನಿನಗೆ ಅನುಕೂಲವಾದ ಆದರ್ಶಗಳನ್ನು ಮಾತ್ರ ಪಾಲಿಸು , ಜೀವನದಲ್ಲಿ ಅದೃಷ್ಟ ಬರುತ್ತದೆ ಕಾಯುತ್ತಿರು, ಅನ್ನುತ್ತದೆ. ಇನ್ನು ವಯಸ್ಸಾದ ಮೇಲೆ ಬುದ್ಧಿಸಂ ಮತವನ್ನು ಪಾಲಿಸುತ್ತೇನೆ ಯಾಕೆಂದ್ರೆ ಅದು ಕಷ್ಟಗಳನ್ನೆಲ್ಲಾ ಸಹಿಸಿಕೋ, ಪರರಿಗೆ ಉಪಕಾರ ಮಾಡು, ಶಾಂತಿಯಿಂದಿರು ಅನ್ನುತ್ತದೆ. ನೀವೇ ಹೇಳಿ ಬುದ್ಧಿಸಂ ನ್ನು ಯೌವನದಲ್ಲಿ ಅನುಸರಿಸಲು ಸಾಧ್ಯವೇ? ಅನುಸರಿಸಿ ದುಡ್ಡು ಸಂಪಾದನೆ ಮಾಡಲು ಸಾಧ್ಯವೇ? ಅಥವಾ ಟಾವಿಸಂ ನ್ನು ಮುದುಕರಾದ ಮೇಲೆ ಹೇಗೆ ಅನುಸರಿಸಲಿ? ಅದಕ್ಕೇನೇ ಯಾವ ದಿನ ಹೇಗೆ ಬರುತ್ತದೋ ಹಾಗೆ ನನ್ನ ನಂಬಿಕೆಗಳನ್ನು ಬದಲಾಯಿಸುತ್ತೇನೆ” ಎಂದಳು. ಬಾಯಿತೆರೆದುಕೊಂಡು ಕೇಳುತ್ತಲೇ ಇದ್ದ ನಾನು ’ವಾಂಗ್ ಜಗದ್ಗುರು’ವಿಗೆ ಮನಸಾರೆ ವಂದಿಸಿದೆ!!
ಯಶಸ್ಸಿನ ಆರಾಧನೆ
ಒಂದು ಸಾಯಂಕಾಲ ನಮ್ಮ ಮಿತ್ರರೊಡನೆ ಸಮೀಪದ ಮಾರ್ಕೆಟ್ ಗೆ ಹೋದೆವು. ಅಲ್ಲಿ ರಸ್ತೆ ಬದಿಯಲ್ಲಿ ಒಂದು ಬೃಹತ್ ಗಾತ್ರದ ಟಿ.ವಿ. ಅದರಲ್ಲಿ ಜನರ ಭಾವಚಿತ್ರದೊಡನೆ ಚೀನೀ ಭಾಷೆಯಲ್ಲಿ ಅನೇಕ ವಿವರಗಳು ಪ್ರದರ್ಶಿತವಾಗುತ್ತಿದ್ದವು. ಬಹುಶ: ಎಲ್ಲೋ ಅಪರಾಧಿಗಳ ಪತ್ತೆಗೆ ಈ ಕ್ರಮ ಇರಬಹುದು ಎಂದುಕೊಂಡು ರವಿ ಫಡ್ಕೆಯವರನ್ನು ಕೇಳಿದೆ. ಅವರು ನಕ್ಕು –“ಅವರು ಅಪರಾಧಿಗಳಲ್ಲ. ಸಮಾಜದ ಯಶಸ್ವೀ ವ್ಯಕ್ತಿಗಳು. ವೈದ್ಯರು, ಶಿಕ್ಷಕರು, ಇಂಜನಿಯರ್ ಗಳು, ರೈತರು, ಸೈನಿಕರು ಹೀಗೆ ವಿಶೇಷ ಸಾಧನೆ ಮಾಡಿದ ಯಾರೇ ಇದ್ದರೂ ಅವರ ವಿವರಗಳನ್ನು ಫೋಟೋದ ಜೊತೆ ಹೀಗೆ ಪ್ರದರ್ಶಿಸುತ್ತಾರೆ. ಮಕ್ಕಳಿಗೆ ಅವರು ಸ್ಫೂರ್ತಿಯಾಗಲಿ ಎಂದು ಸರಕಾರದ ಉದ್ದೇಶ” ಎಂದರು. ಸಾಮಾನ್ಯವಾಗಿ ಇಂಥ ಯಶಸ್ವೀ ವ್ಯಕ್ತಿಗಳೇ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರು. ಚೀನಾದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುವುದಿಲ್ಲ. ಆಯಾ ರಾಜ್ಯದ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರೇ ತಮ್ಮ ನಾಯಕರನ್ನು ಆರಿಸುತ್ತಾರೆ. ಬುದ್ಧಿವಂತರೇ ಮತದಾನ ಮಾಡುವುದರಿಂದ ಒಳ್ಳೆಯ ವ್ಯಕ್ತಿಗಳೇ ಆಯ್ಕೆಯಾಗಿ ಬರುತ್ತಾರೆ. ಹಾಗಾದರೆ ಇಲ್ಲಿ ಭ್ರಷ್ಟಾಚಾರವೇ ಇಲ್ಲ ಅಂದುಕೊಳ್ಳಬೇಡಿ. ಚೀನಾ ಭ್ರಷ್ಟಾಚಾರದಲ್ಲೂ ನಂಬರ್ ೧. ವ್ಯಕ್ತಿ ತಾನು ಮಾಡಿಸುವ ರಸ್ತೆ, ನೀರು, ಪಾರ್ಕ್ ಇತ್ಯಾದಿ ಕೆಲಸಗಳನ್ನು ಉತ್ತಮವಾಗೇ ಮಾಡುತ್ತಾನೆ. ಇಲ್ಲದಿದ್ದರೆ ಅವನನ್ನು ಆ ಸ್ಥಾನದಿಂದ ಕಿತ್ತುಹಾಕುತ್ತಾರೆ ಎಂಬ ಭಯವಿರುತ್ತದೆ.ಆದರೆ ತನಗೆ ಬೇಕಾದವರಿಗೆ ಗುತ್ತಿಗೆ ಕೊಡುತ್ತಾನೆ. ಒಂದಷ್ಟು ಹಣ ಹೊಡೆಯುತ್ತಾನೆ ಅಷ್ಟೇ!. ಯಾಕೋ ನನಗೆ ನಮ್ಮ ಮಹಾನಗರದ ರಸ್ತೆಗಳಲ್ಲಿ ಕಾಣುವ ರಾಜಕಾರಿಣಿಗಳ, ಅವರ ಹಿಂಬಾಲಕರ ಪೋಸ್ಟರ್ ಗಳು ನೆನಪಾದವು. ಇವರೇನಾ ನಮ್ಮ ಮಕ್ಕಳಿಗೆ ನಾವು ತೋರಿಸುತ್ತಿರುವ ಆದರ್ಶವ್ಯಕ್ತಿಗಳು ? ಎನಿಸಿತು.
ನಮ್ಮ ಭಾರತೀಯತೆಯ ಒಂದು ಪ್ರಮುಖ [ಅವ]ಲಕ್ಷಣವೆಂದರೆ ಎಲ್ಲಿ ಏನೇ ನೋಡಿದರೂ, ಇದೇನ್ ಮಹಾ…? ನಮ್ಮಲ್ಲಿಲ್ಲದ್ದು ಇಲ್ಲೇನಿದೆ? ನಮ್ಮ ಪರಂಪರೆಗೆ ಸರಿಸಾಟಿ ಯಾರು? ಎಂಬ ಅನಿಸಿಕೆ. ನಿಜ.. ನಮ್ಮ ಬೇಲೂರು, ಹಳೇಬೀಡು, ತಮಿಳುನಾಡಿನ ದೇವಾಲಯಗಳ ಶಿಲ್ಪವೈಭವಕ್ಕೆ, ಮಹಾಬಲಿಪುರಂ, ಕೋನಾರ್ಕ, ಅಜಂತಾ- ಎಲ್ಲೋರಾ, ಮೌಂಟ್ ಅಬುಗಳ ಬೆರಗಿಗೆ ಸರಿಸಾಟಿ ಇನ್ನೊಂದಿಲ್ಲ.ಆದರೆ ನಮ್ಮ ಸಂಪತ್ತನ್ನು ಜೋಪಾನವಾಗಿ ಕಾಪಿಡುವಲ್ಲಿ ,ಸೂಕ್ತವಾಗಿ ಪ್ರಸ್ತುತಪಡಿಸುವಲ್ಲಿ ನಾವು ಸೋತಿದ್ದೇವೆ ಎಂಬ ಕಹಿಭಾವನೆ ಮನಸ್ಸಿನಲ್ಲಿ ಸುಳಿಯಿತು. ಇರಲಿ.. ಪ್ರಾಚೀನತೆ , ತಾಂತ್ರಿಕತೆ ಹಾಗೂ ಆಧುನಿಕತೆಯ ಅಪೂರ್ವ ಸಂಗಮವಾದ ಈ ದೇಶ ನಮ್ಮ ನಗರ ನಿರ್ಮಾತೃಗಳಿಗೂ ಮಾದರಿಯಾಗಬಲ್ಲುದು.
Birds Nest Olympic Stadium

No comments:

Post a Comment