ಅದಕ್ಕೆ ಸ್ಕೋಪ್ ಇಲ್ಲಾ ಮಾಮ್…. ಟೈಮ್ ವೇಸ್ಟ್….
ಅಲ್ಲಿ
ನಗು , ಉದ್ವೇಗ, ಕುತೂಹಲ, ತಮಾಷೆ , ನೆನಪುಗಳ ಸಂತೆ ನೆರೆದಿತ್ತು. ಹೌದು… ವರುಷಕ್ಕೊಮ್ಮೆ ನಾನು
ಭಾವನೆಗಳ ಅಲೆಗಳಲ್ಲಿ ತೇಲುವ ದಿನವೆಂದರೆ ಹತ್ತನೇ ತರಗತಿಯ ಬೀಳ್ಕೊಡುಗೆ ದಿನದಂದು. ನಮ್ಮ ಪುಟಾಣಿಗಳು
ಪಾಲಕರ , ಶಿಕ್ಷಕರ, ಆಯಾಗಳ ಕೈ ಹಿಡಿದುಕೊಂಡು ಒಂದೊಂದೇ ಹೆಜ್ಜೆ ಹಾಕುತ್ತಾ ಬೆಳೆದು ಯೌವನಕ್ಕೆ ಕಾಲಿಡುವುದನ್ನು ನೋಡುವುದೇ ಒಂದು ಹಬ್ಬ. ಟೀಚರ್…. ನಾನು ಒಳಗೆ ಬರಲಾ… ,ಟೀಚರ್… ಪೆನ್ಸಿಲ್ ಚೂಪು
ಮಾಡಲಾ….,
ಟೀಚ… ಟಾಯ್ಲೆಟ್ಟಿಗೆ ಹೋಗಲಾ…., ಟೀಚ… ಊಟ
ಮಾಡಲಾ….. , ಟೀಚ…ಬರೆಯಲು
ಶುರು ಮಾಡಲಾ….. ಟೀಚರ್…ಅದು …. ಟೀಚರ್… ಇದು
……
ಟೀಚರ್ ರೇ.. ಮಕ್ಕಳ ಜಗತ್ತಿನ ಕೇಂದ್ರಬಿಂದು. ಟೀಚರ್ ಸಂತೋಷದಿಂದ ಇದ್ದರೆ ಅವರಿಗೆ ಸ್ವರ್ಗಸುಖ . ಟೀಚರ್ ರಜೆ ಹಾಕಿದರೆ, ಸಿಟ್ಟು ಮಾಡಿಕೊಂಡರೆ, ಹುಷಾರು ತಪ್ಪಿದರೆ ಅವರಿಗೆ ದಿಕ್ಕೇ ತೋಚದು. ಹೀಗೆ ಟೀಚರ್
ರ ನೆರಳಿನಲ್ಲಿ ಬೆಳೆಯುವ
ಮಕ್ಕಳು ಹೈಸ್ಕೂಲಿಗೆ ಬರುತ್ತಿದ್ದಂತೆಯೇ ಟೀಚರ್ ರಜೆ ಹಾಕಿದರೆ ಕುಣಿದು ಕುಪ್ಪಳಿಸುತ್ತಾರಲ್ಲ….. . ಟೀಚರ್ ಗೆ ಆರೋಗ್ಯ ಕೈಕೊಡಲಿ ಎಂದು ಬೇಡುತ್ತಾರಲ್ಲ. ತರಗತಿಯಲ್ಲಿ ಪಾಠ ಕೇಳದೆ, ಮನೆಗೆಲಸ ಮಾಡದೇ ಟೀಚರ್
ನ್ನು ಸತಾಯಿಸುತ್ತಾರಲ್ಲ. ಕೊನೆಗೆ ಟೀಚರ್… ಸರಿಯಿಲ್ಲ. ಅದಕ್ಕೇ
ಮಾರ್ಕ್ಸ್ ಕಮ್ಮಿ ಬರುತ್ತವೆ ಎಂದು ನುಡಿಮುತ್ತುಗಳನ್ನು ಉದುರಿಸುತ್ತಾರಲ್ಲ….. ಎಂಬ ಲಹರಿಯಲ್ಲಿ ಮೈಮರೆತಿದ್ದ ನನ್ನನ್ನು ಎಚ್ಚರಿಸಿದ್ದು ಟೀಚರ್… ನಿಮ್ಮ ಜೊತೆ
ಒಂದು ಫೋಟೊ… ಎಂದ ಮಕ್ಕಳ
ಗುಂಪು.
ಫೋಟೋಗೆ
ಹಲ್ಲು ಕಿರಿದು , ಮುಂದೆ ಏನು ಓದಬೇಕೆಂದು ಮಾಡಿದ್ದೀರಿ? ಎಂದೆ. ಸಂದೀಪ , ಕಾಮರ್ಸ್
ತೆಗೆದುಕೊಂಡು ಸಿ.ಎ
ಮಾಡಿ ತುಂಬಾ ದುಡ್ಡು ಮಾಡಬೇಕು ಎಂದ. ಕೆಲವರ್ಷಗಳ
ಹಿಂದೆ ಇದೇ ಸಂದೀಪ ವಿಜ್ಞಾನದ ಮಾಡೆಲ್ ಒಂದಕ್ಕೆ ದೆಹಲಿಯಲ್ಲಿ ಪ್ರಶಸ್ತಿ ಪಡೆದದ್ದು, ಭವಿಷ್ಯದ ವಿಜ್ಞಾನಿಯೆಂದು
ಪತ್ರಿಕೆಗಳು ಅವನನ್ನು ಹಾಡಿ ಹೊಗಳಿದ್ದು ನೆನಪಾಯಿತು. ಯಾಕೆ ವಿಜ್ಞಾನ
ಬೇಡವೇ ಎಂದರೆ, ತುಂಬಾ
ವರ್ಷ ಕಷ್ಟಪಡಬೇಕು …. ಬೋರು…. ಎಂದ. ಅದ್ಭುತವಾಗಿ
ಚಿತ್ರಗಳನ್ನು ಬಿಡಿಸುವ ಸನಾ ಡಾಕ್ಟರ್ ಆಗಬೇಕಂತೆ. ಹೆಸರಾಂತ ವೈದ್ಯರ
ಮಗಳಾದ ಅವಳೇ ಅವರ ನರ್ಸಿಂಗ್ ಹೋಂ ನ ಉತ್ತರಾಧಿಕಾರಿ. ಚಿತ್ರಕಲಾ
ಪರಿಷತ್…..ಆರ್ಟ್ ಸ್ಕೂಲ್…. ಎಂದೇನೋ ಮಾತಾಡಲು ಆರಂಭಿಸಿದೆ. ಆರ್ಟಿಗೆಲ್ಲಾ ಸ್ಕೋಪ್
ಇಲ್ಲಾ ಮಾಮ್…. ಟೈಮ್ ವೇಸ್ಟ್…. ಎಂದಳು. ಇನ್ನು ಹೆಚ್ಚಿನವರೆಲ್ಲಾ
ಸೈನ್ಸ್, ಅಟ್ ಲೀಸ್ಟ್ …. ಸಾಫ್ಟ್ ವೇರ್ ಇಂಜನಿಯರ್ ಆಗಬಹುದಲ್ಲಾ….ಕಾಂಪಸ್ ಇಂಟರ್ ವ್ಯೂ ನಲ್ಲೇ ಕೆಲಸ ಸಿಗುತ್ತದೆ. ಅಮೇರಿಕಾಗೆ
ಹೋಗಲು ಅದೇ ಸುಲಭವಾದ ದಾರಿ ಅದಕ್ಕೇ . ಸೈನ್ಸ್ , ಕಾಮರ್ಸ್ ಸಿಗದವರು ಹ್ಯುಮಾನಿಟೀಸ್.[ ನಾವೆಲ್ಲಾ ಆರ್ಟ್ಸ್ ಅನ್ನುತ್ತಿದ್ದೆವಲ್ಲಾ ಅದು.] ಯಾಕೆಂದರೆ ಜರ್ನಲಿಸ್ಟ್
ಆಗಬಹುದು. ಒಳ್ಳೆಯ ಸ್ಕೋಪ್
ಇದೆ.
ಈ ಮಕ್ಕಳೆಲ್ಲಾ ಅತ್ಯಂತ
ವೈಜ್ಞಾನಿಕವೆಂದು ಕರೆಯಲ್ಪಡುವ ವಿದ್ಯಾಭ್ಯಾಸವನ್ನು ಪಡೆದವರು. ಆದರೆ ನಮ್ಮ
ವ್ಯವಸ್ಥೆ ಅವರಲ್ಲಿ ಕನಸುಗಳನ್ನು ಬೆನ್ನಟ್ಟುವ
ಆಸೆಯನ್ನು ಬಿತ್ತಲೇ ಇಲ್ಲ.ಅವರ ಪ್ರತಿಭೆಗಳು
ಕೇವಲ ಹವ್ಯಾಸಗಳಾಗಿಯೇ ಕೊನೆಯುಸಿರೆಳೆದವಲ್ಲ. ಅವರಲ್ಲಿ
ಅದ್ಬುತವಾದ ಗಾಯಕರಿದ್ದಾರೆ. ಚಿತ್ರಕಾರರಿದ್ದಾರೆ. ಪ್ರತಿಭಾವಂತ ನಟರಿದ್ದಾರೆ. ಆದರೆ ದುಡ್ಡು ತರದ ಈ ಕಲೆಗಳು ಸ್ಕೋಪ್
ಇಲ್ಲದ ಪಟ್ಟಿಗೆ ಸೇರಿಹೋದವಲ್ಲ. ಜೀವನ ನಡೆಸಲು ಹಣ ಬೇಕು ನಿಜ. ಆದರೆ
ಮನಸ್ಸು ಅರಳುವುದು ಬೇಡವೇ? ಯಾಕೋ ಮನಸ್ಸಿಗೆ
ಕಸಿವಿಸಿಯಾಯಿತು.
ನಮ್ಮ
ಮಕ್ಕಳು ನಮ್ಮ ಅಮೂಲ್ಯಆಸ್ತಿಗಳು ಎನ್ನುತ್ತೇವೆ . ಆದರೆ ಅವರು ಕೇವಲ ‘ದುಡ್ಡು’ ಎನ್ನುವ ‘ಸ್ಕೋಪ್’ ನ ಹಿಂದೆ
ಓಡುವ ವ್ಯವಸ್ಥೆಯನ್ನು ನಾವು ನಿರ್ಮಿಸಿದ್ದೇವೆ. ನಮ್ಮ
ಪದವಿ ಹಂತದಲ್ಲಿ ಫಿಸಿಕ್ಸ್, ಕೆಮ್,
ಮಾತ್ ನ ಜೊತೆ ತಬಲಾ. ಅಥವಾ ಹಿಸ್ಟರಿ, ಪೊಲ್. ಸೈನ್ಸ್, ಸೈಕಾಲಜಿಯ
ಜೊತೆ ಭರತನಾಟ್ಯ ವನ್ನು ಯಾಕೆ ಕಲಿಯಬಾರದು? ಅಥವಾ ಬಿ.ಇ ಹಂತದಲ್ಲಿ ಕಂಪ್ಯೂಟರ್
ಸೈನ್ಸ್ ನ ಜೊತೆ ಚಿತ್ರಕಲೆ, ಮೆಕಾನಿಕಲ್ ಇಂಜನಿಯರಿಂಗ್ ನ ಜೊತೆ ನಮ್ಮ
ಪ್ರಾದೇಶಿಕಭಾಷೆಗಳನ್ನು , ಯೋಗವನ್ನು , ನಟನೆಯನ್ನು ಒಂದು ವಿಷಯವಾಗಿ ಸೇರಿಸಲು ಸಾಧ್ಯವಿಲ್ಲವೇ? ಇದು
ಸರ್ಕಾರದ ಕೆಲಸ ನಿಜ. ಆದರೆ
ಸರ್ಕಾರವೆಂದರೆ ಯಾರು? ನಾವೇ ಅಲ್ಲವೇ? ನಮ್ಮ ಮಕ್ಕಳೆಂದರೆ ಯಾರು? ಅವರು ನಮ್ಮ
ಪ್ರತಿರೂಪಗಳೇ ಅಲ್ಲವೇ? ನಾವು ನಮಗಾಗಿ ,ನಮ್ಮ ದೇಶದ ಭವಿಷ್ಯಕ್ಕಾಗಿ ದನಿಯೆತ್ತಬೇಡವೇ? ನಿಮಗೇನನಿಸುತ್ತದೆ?
ಮಕ್ಕಳನ್ನು ವಸ್ತುಗಳಂತೆ, ಸೃಷ್ಟಿಸುವ ಈಗಿನ ದಿನದ ಪದ್ದತಿಗೆ ಒಂದು ಕನ್ನಡಿ,,,,,,,
ReplyDeleteನಿಮ್ಮ ಅನುಭವಗಳ ಕಟ್ಟೆಯೊಳಗೆ ಈಜುತ್ತಾ, ಬರೆಯುವ ಎಲ್ಲ ಬರಹಗಳೂ ಬಹಳ ನೈಜ ಮತ್ತು, ರೋಮಾಂಚಕ,,,,, ಇದೇ ತರಹದ ಬರಹಗಳು ಮುಂದುವರೆಯಲಿ,,,
ಧನ್ಯವಾದಗಳು. ಏನೋ ಮನಸ್ಸಿಗೆ ಅನಿಸಿದ್ದನ್ನು ಗೀಚಿದ್ದೇನೆ ಅಷ್ಟೇ
Delete