ಶಿಕ್ಷಣಮಾಧ್ಯಮ
ಈ ದಿನಗಳಲ್ಲಿ ಕಾವೇರುತ್ತಿರುವ ಶಿಕ್ಷಣಮಾಧ್ಯಮದ ಬಗೆಗಿನ ಚರ್ಚೆಯನ್ನು ಗಮನಿಸುತ್ತಿರುವಂತೆ ಕೆಲದಿನಗಳ ಹಿಂದೆ ನಡೆದ ಘಟನೆಗಳು ನನಗೆ ನೆನಪಾಗುತ್ತಿವೆ.
ಈ ದಿನಗಳಲ್ಲಿ ಕಾವೇರುತ್ತಿರುವ ಶಿಕ್ಷಣಮಾಧ್ಯಮದ ಬಗೆಗಿನ ಚರ್ಚೆಯನ್ನು ಗಮನಿಸುತ್ತಿರುವಂತೆ ಕೆಲದಿನಗಳ ಹಿಂದೆ ನಡೆದ ಘಟನೆಗಳು ನನಗೆ ನೆನಪಾಗುತ್ತಿವೆ.
ಅದೊಂದು ಭಾನುವಾರ . ನಮ್ಮ ಶಾಲೆಯಲ್ಲಿ ನಡೆಯಲಿರುವ ಅಖಿಲಭಾರತ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಕೊಠಡಿ ಮೇಲ್ವಿಚಾರಕಳಾಗಿ ಕರ್ತವ್ಯವಿತ್ತು. ನಾನು ಈ ಹಿಂದೆಯೂ ಕೆಲವು ಬಾರಿ ಅಖಿಲ ಭಾರತೀಯ ಮಟ್ಟದ ಪರೀಕ್ಷೆಗಳಲ್ಲಿ ಕೆಲಸ ಮಾಡಿದ್ದೇನೆ. ಇಲ್ಲಿಗೆ ಭಾರತದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬರುತ್ತಾರೆ. ಅವರ ವೇಷಭೂಷಣ, ಹಾವ-ಭಾವಗಳೇ ಅವರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತಿರುತ್ತವೆ. ಇಂದೂ ಹಾಗೇ ಆಯಿತು. ಬೆಲೆಬಾಳುವ ಉಡುಗೆ ಧರಿಸಿ ಪ್ರಪಂಚವನ್ನೇ ಗೆಲ್ಲುವ ಹುಮ್ಮಸ್ಸಿನಲ್ಲಿ ಕೆಲವರು ಬಂದಿದ್ದರೆ, ತಂದೆಯ ಕೈ ಹಿಡಿದು ಅಳುಕಿನಿಂದಲೇ, ಜಗತ್ತಿಗೆ ಕಣ್ತೆರೆಯುತ್ತಿರುವ ಮಕ್ಕಳೂ ಇದ್ದರು. ಬೇಗ ಬೇಗನೇ ಕಾಗದ ಪತ್ರಗಳನ್ನು ತೆಗೆದುಕೊಂಡು ನನ್ನ ಕರ್ತವ್ಯದ ಕೊಠಡಿ ಸೇರಿದೆ. ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಬರಲಾರಂಭಿಸಿದರು. ದೆಹಲಿಯ ಪಂಕಜ್ ಸಿಂಗ್, ರಾಂಚಿಯ ನೀಲೇಶ್ ಬೊರಾನಾ, ಹಿರೇಕೆರೂರಿನ ಮಲ್ಲಿಕಾರ್ಜುನ, ಗುಂಟೂರಿನ ಆಮುಕ್ತಮಾಲ್ಯದ[ ಎಷ್ಟು ಸುಂದರವಾದ ಹೆಸರು!!] , ಗುಲ್ಬರ್ಗದ ವೀರೇಶ್, ಪಾಂಡವಪುರದ ಭಾಗ್ಯಲಕ್ಷ್ಮಿ ……ಓಹ್….. ನನ್ನ ಭಾರತ ಎಂಥ ವೈವಿಧ್ಯಮಯ , ಎನಿತು ಸುಂದರ ಅನಿಸಿತು.
ನಿಧಾನವಾಗಿ ಪರೀಕ್ಷಾ ಸೂಚನೆಗಳನ್ನು ಓದಲಾರಂಭಿಸಿದೆ. ಕೇವಲ ಕಪ್ಪು/ನೀಲಿ ಪೆನ್ನನ್ನು ಮಾತ್ರ ಉಪಯೋಗಿಸಬೇಕು ಎಂಬ ವಾಕ್ಯವನ್ನು ಇನ್ನೂ ಮುಗಿಸಿಲ್ಲ. ಆ ಮೂಲೆಯಿಂದ ಒಬ್ಬ ಎದ್ದು ನಿಂತು “ ಪೆನ್ನು ತರುವುದೇ ಮರೆತುಬಿಟ್ಟೆ” ಎಂದು ಸ್ವಚ್ಛವಾದ ಇಂಗ್ಲೀಷಿನಲ್ಲಿ ಉಲಿದಾಗ ನನಗಂತೂ ನನ್ನ ಕಿವಿಗಳನ್ನೇ ನಂಬಲಾಗಲಿಲ್ಲ. ಇಂಥ ಮುಖ್ಯವಾದ ಪರೀಕ್ಶೆಗೆ ಪೆನ್ನು ತರದೇ ಬರುವುದೆಂದರೆ………. ??, ನನ್ನ ಪೆನ್ನನ್ನೇ ಕೊಟ್ಟೆ. ಸರಿ , ಮುಂದಿನ ಸೂಚನೆಗಳನ್ನು ಓದಿ ಹಸ್ತಾಕ್ಷರ, ಬೆರಳಚ್ಚು ಇತ್ಯಾದಿಗಳನ್ನು ಪಡೆಯಲಾರಂಭಿಸಿದೆ. ನಗರದ/ಆಂಗ್ಲಮಾಧ್ಯಮದಲ್ಲಿ ಓದಿದ ಹೆಚ್ಚಿನ ವಿದ್ಯಾರ್ಥಿಗಳು ಸರಿಯಾದ ಸಿದ್ಧತೆಯಿಲ್ಲದೇ, ದಾಖಲೆಗಳಿಲ್ಲದೇ ಬಂದಿದ್ದರೆ, ಹಳ್ಳಿಯ / ಕನ್ನಡ ಇತ್ಯಾದಿ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳು ಸಾಕಷ್ಟು ಸಿದ್ಧತೆಯೊಂದಿಗೆ ಬಂದಿದ್ದರು. ೨ ಜೊತೆ ಪೆನ್ನುಗಳು, ೪ ಫೊಟೊಗಳು, ಬೆರಳಚ್ಚು ತೆಗೆದುಕೊಂಡಾಕ್ಷಣ ಕೈ ಒರೆಸಲು ಶುಭ್ರವಾದ ಕರವಸ್ತ್ರ, ಕುಡಿಯಲು ನೀರು, ಎಲ್ಲ ದಾಖಲೆಗಳ ೨ ಪ್ರತಿಗಳು……ಹೀಗೆ ಅಗತ್ಯಕ್ಕಿಂತ ಹೆಚ್ಚಿನ ಸಿದ್ಧತೆ ಕಣ್ಣಿಗೆ ರಾಚುತ್ತಿತ್ತು. ಆದರೆ ಅವರಲ್ಲಿದ್ದ ಅತಿ ದೊಡ್ಡ ಕೊರತೆಯೆಂದರೆ ಆತ್ಮವಿಶ್ವಾಸ . ಉತ್ತರಪತ್ರಿಕೆ[OMR SHEET ] ಕೈಗೆ ಬರುತ್ತಿದ್ದಂತೆಯೇ ನಗರದ/ಆಂಗ್ಲಮಾಧ್ಯಮದ ವಿದ್ಯಾರ್ಥಿಗಳು ಅದರಲ್ಲಿ ಹೆಸರು ಇತ್ಯಾದಿಗಳನ್ನು ತುಂಬಿ ಉತ್ತರ ಬರೆಯಲು ಸಿದ್ಧರಾದರೆ ನಮ್ಮ ಇತರ ಮಕ್ಕಳಿಗೆ ಸಂಶಯಗಳ ಸರಮಾಲೆ. ಬರೆದದ್ದನ್ನು ನನಗೆ ತೋರಿಸಿ ಸರಿಯಿದೆಯಾ ಎಂದು ಮತ್ತೆ ಮತ್ತೆ ಖಚಿತಪಡಿಸಿಕೊಂಡರು.
ನೀವು
ನಂಬಿದರೆ ನಂಬಿ, ಬಿಟ್ಟರೆ ಬಿಡಿ……. ಪರೀಕ್ಷೆ ಮುಗಿದು ಬೆಲ್ ಹೊಡೆಯುತ್ತಿದ್ದಂತೆಯೇ ಎಲ್ಲ ಗ್ರಾಮೀಣ
ವಿದ್ಯಾರ್ಥಿಗಳು ನನ್ನ ಬಳಿ ಬಂದು ಧನ್ಯವಾದಗಳನ್ನು ಹೇಳಿ ಹೋದರು. ಉಳಿದವರು ಹಾಗೇ
ಹೊರನಡೆದರು.
ಎರಡು
ನಿಮಿಷ ಹಾಗೇ ಕುಳಿತುಕೊಂಡೆ. ನನಗನ್ನಿಸಿತು , ನಮ್ಮ ಪ್ರಾದೇಶಿಕಭಾಷಾ ಮಾಧ್ಯಮಗಳಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಯಶಸ್ಸಿಗೆ ಬೇಕಾದ ಎಲ್ಲ ಸಲಕರಣೆಗಳೂ ಇವೆ. ವಿಷಯಜ್ಞಾನ
,
ತಯಾರಿ ಮಾತ್ರವಲ್ಲದೇ ಮಾನವೀಯತೆ, ಸ್ನೇಹಪರತೆ ಮುಂತಾದ ಮಾನವೀಯ ಮೌಲ್ಯಗಳೂ ಇವೆ. ಆದರೆ
ಇವೆಲ್ಲವೂ ಬೆಳಕಿಗೆ ಬರಲು ಅವಶ್ಯವಾದ ಆತ್ಮವಿಶ್ವಾಸದ ಕೊರತೆಯಿದೆ.
ಇದಕ್ಕೆ
ನಾವು ಪರಿಹಾರ ಹುಡುಕಿದರೆ ಭಾಷಾ ಮಾಧ್ಯಮ ಒಂದು ಸಮಸ್ಯೆಯೇ ಅಲ್ಲ.
No comments:
Post a Comment