ಪ್ರಶ್ನಾ ಪಿಶಾಚಿಗಳು
ಪ್ರಶ್ನೆಗಳ
ಬಾಣಗಳನ್ನೆಸೆದು ಜನರನ್ನು ಕಂಗೆಡಿಸುವವರು ಸರ್ವಾಂತರ್ಯಾಮಿಗಳು. ವಿಪರ್ಯಾಸವೆಂದರೆ ಇವರಲ್ಲಿ ಹೆಚ್ಚಿನವರು ನಮ್ಮ ಸಮೀಪದ ಬಂಧು-ಮಿತ್ರರೇ ಆಗಿರುತ್ತಾರೆ . ಆದರೆ ಇವರನ್ನು ಇತ್ಯಾತ್ಮಕವಾಗಿ ಸ್ವೀಕರಿಸುವುದು ಆತ್ಮವಿಶ್ವಾಸವನ್ನು ವರ್ಧಿಸುವ ಸುಲಭಮಾರ್ಗ. ಇದರ ಬಗ್ಗೆ
ನನ್ನ ವೈಯಕ್ತಿಕ ಅನುಭವ ಹೀಗಿದೆ.
ಸಂಪ್ರದಾಯಸ್ಥ
ಮನೋಭಾವದಿಂದಲೋ , ಉಪೇಕ್ಷೆಯಿಂದಲೋ ಅಥವಾ ಅಜ್ಞಾನದಿಂದಲೋ ನನ್ನ ತಂದೆತಾಯಿಗೆ ನಾವು ಡಜನ್ ಗಿಂತಲೂ ಹೆಚ್ಚು ಮಕ್ಕಳು. ನಾವೆಲ್ಲರೂ ಸಾಕಷ್ಟು
ವಿದ್ಯಾವಂತರೂ , ಯಶಸ್ವಿಗಳೂ ಆಗಿದ್ದರೂ , ಕಾಲ ಕಳೆದಂತೆ ಸಣ್ಣ ಕುಟುಂಬದ ಮಹತ್ವವನ್ನರಿತ ಜನರಿಗೆ ನನ್ನ ಕುಟುಂಬ ತಮಾಷೆಯ ವಸ್ತುವಾಯಿತು. ಎಲ್ಲರಲ್ಲಿ ಕೊನೆಯವಳಾದ ನಾನು ಬಾಲ್ಯದಲ್ಲಿ ನನ್ನ
ತಾಯಿಯ ಜೊತೆ ಸಮಾರಂಭಗಳಿಗೆ ಹೋದಾಗ
ಇದರ ಬಿಸಿಯನ್ನು ಅನುಭವಿಸುತ್ತಿದ್ದೆ. ವಯಸ್ಸಿನ ಅಂತರದಿಂದಾಗಿ ನಾವು ಅಜ್ಜಿ- ಮೊಮ್ಮಗಳಂತೆ ಕಾಣುತ್ತಿದ್ದೆವು. ಸರಿ…. ಶುರುವಾಗುತ್ತಿತ್ತು ನೋಡಿ ಪ್ರಶ್ನೆಗಳ
ಚಾಟಿ.
ಇವಳು
ನಿಮ್ಮ ಮೊಮ್ಮಗಳಾ?
ನನ್ನ
ತಾಯಿ : - ಅಲ್ಲ, ಕೊನೆಯ
ಮಗಳು.
ಹೌದಾ….. ಅದು ಹೇಗೆ?
ಓಹ್ …. ನಿಮಗೆ ಇಷ್ಟೊಂದು ಮಕ್ಕಳೇ? ಎಲ್ಲರೂ ಜೀವಂತವಾಗಿದ್ದಾರಾ?
ಎಲ್ಲರೂ
ಮನೆಯಲ್ಲೇ ಹುಟ್ಟಿದರಾ? ಆಸ್ಪತ್ರೆಯಲ್ಲಿ ಹುಟ್ಟಿದರಾ?
ನಿಮಗೆ
ಎಲ್ಲರ ಹೆಸರು ನೆನಪಿದೆಯೇ?
ನಿಮಗೆ
ಎಲ್ಲ ಮಕ್ಕಳ ಹುಟ್ಟಿದ ದಿನ ನೆನಪಿದೆಯೇ?
ನಿಮಗೆ
ಹುಟ್ಟಿದ ಎಲ್ಲ ಮಕ್ಕಳು ಬದುಕಿ ಉಳಿದರೇ? ಅಥವಾ ಕೆಲವು
ಸತ್ತಿವೆಯೇ?
ನಿಮ್ಮನ್ನು
ಮಹಾತಾಯಿ ಎಂದು ಕರೆಯಲೇ?
ನಿಮ್ಮ
ಮನೆಯಲ್ಲಿ ಎಲ್ಲರೂ ಸೇರಿದರೆ ಒಟ್ಟು ಎಷ್ಟು ಜನವಾಗುತ್ತೀರಿ?
ಓಹ್……… ಅನಕ್ಷರಸ್ಠೆಯಾಗಿದ್ದ ನನ್ನ ತಾಯಿ ಈ ಪ್ರಶ್ನೆಗಳ ಪಂಜರದಲ್ಲಿ
ಬಂದಿಯಾಗಿ ಕಂಗಾಲಾಗುತ್ತಿದ್ದುದನ್ನು ನೆನಪಿಸಿಕೊಂಡರೆ ಈಗಲೂ ನನ್ನ ಕಣ್ಣು ಮಂಜಾಗುತ್ತದೆ.
ಇದರಿಂದಾದ
ದೊಡ್ಡ ಲಾಭವೆಂದರೆ ಇದನ್ನೆಲ್ಲ ನೋಡುತ್ತಲೇ ಬೆಳೆದ ನನ್ನ ಮನಸ್ಸು ಗಟ್ಟಿಯಾಯಿತು. ಈಗ ನನಗೆ ಯಾರೇ , ಎಂತಹುದೇ ಪ್ರಶ್ನೆ ಕೇಳಿದರೂ ತಟಕ್ಕನೇ ಉತ್ತರ ನಾಲಿಗೆಯ ತುದಿಯಲ್ಲೇ ಸಿದ್ಧವಾಗಿರುತ್ತದೆ. ನನ್ನನ್ನು
ಬೆಳೆಸಿದ ಇಂತಹ ವ್ಯಕ್ತಿತ್ವ ವಿಕಸನ ಗುರುಗಳಿಗೆ ನಾನಂತೂ ಚಿರಋಣಿ.
ನಿಮಗೆ
ಕಿರಿಕಿರಿಯ ಪ್ರಶ್ನೆಗಳೆದುರಾದಾಗ , ಯಾವುದೇ ಕಾರಣಕ್ಕೂ ಕಂಗೆಡಬೇಡಿ. ಸಾದ್ಯವಾದಷ್ಟೂ ನೇರವಾದ
ಉತ್ತರಗಳನ್ನು ಕೊಡಿ. ಸಿಡುಕುಮುಖ ಅಥವಾ
ಅಳುಮೋರೆ ಮಾಡದೇ ನಗುತ್ತಲೇ ಉತ್ತರಿಸಿ. ಇಂಗ್ಲೀಷಿನ ಗಾದೆಯೊಂದು
ಹೇಳುತ್ತದೆ- ‘ನಿಮ್ಮ ಅನುಮತಿಯಿಲ್ಲದೇ ಯಾರೂ ನಿಮ್ಮನ್ನು ಘಾಸಿಗೊಳಿಸಲಾರರು.’ ಇಂತಹ
ಪ್ರಶ್ನೆಗಳನ್ನು ಕೇಳುವವರಿಗೆ ಎದುರಿಗಿರುವವರ ಸಂಕಟ ಆನಂದವನ್ನು ಕೊಡುತ್ತದೆ. ಆದ್ದರಿಂದ ಅವರಿಗೆ
ಆನಂದವನ್ನು ಅನುಭವಿಸುವ ಅವಕಾಶವನ್ನು ಕೊಡಲೇಬೇಡಿ.
ಹೀಗೆ
ಕೆಲವು ಬಾರಿ ಮಾಡಿದಾಗ ‘ಅವರು ಸ್ವಲ್ಪ
ಜೋರು’!! ಎಂಬ ಇಮೇಜ್ ನಿಮಗೆ ಬರುತ್ತದೆ. ಅಲ್ಲಿಗೆ ನಿಮ್ಮ
ಸಮಸ್ಯೆ ಪರಿಹಾರವಾದಂತೆಯೇ. ಆತ್ಮವಿಶ್ವಾಸವೆಂಬ ಖಡ್ಗ ನಿಮ್ಮ ಕೈಯಲ್ಲಿದ್ದರೆ ಯಾವ ಶತ್ರುವೂ ನಿಮ್ಮ ಬಳಿ ಸುಳಿಯುವ ಸಾಹಸ ಮಾಡುವುದಿಲ್ಲ.
No comments:
Post a Comment