Wednesday 17 September 2014

ಒಂದು ರೂಪಾಯಿ

                             ಮೂಲ – ರಸ್ಕಿನ್ ಬಾಂಡ್[ A rupee goes a long way] 
ಮಂಜುಗೆ ದಾರಿಯಲ್ಲಿ ಒಂದು ರೂಪಾಯಿ ಸಿಕ್ಕಿತ್ತು. ಬೆಳಗ್ಗಿನಿಂದಲೂ ಕಿಸೆಯಲ್ಲೇ ಅದನ್ನು ಭದ್ರವಾಗಿರಿಸಿಕೊಂಡು ಅದನ್ನು ಹೇಗೆ ಖರ್ಚುಮಾಡಲಿ ಎಂದು ತಲೆ ಕೆಡಿಸಿಕೊಳ್ಳುತ್ತಿದ್ದ ಮಂಜುಗೆ ಮಧ್ಯಾಹ್ನವಾಗುತ್ತಿದ್ದಂತೆಯೇ ಇನ್ನು ಕಾಯಲು ಸಾಧ್ಯವಿಲ್ಲ ಅನಿಸಿತು. ಹೊಟ್ಟೆ ಬೇರೆ ತಾಳ ಹಾಕುತ್ತಿತ್ತು . ಸರಿ , ಐತಾಳರ ಹೋಟೇಲಿಗೆ ಓಡಿದ . ಗಲ್ಲಾ ಪೆಟ್ಟಿಗೆಯ ಬಳಿ ಜಿಲೇಬಿಗಳನ್ನು ಪೇರಿಸಿ ಇಟ್ಟಿದ್ದರು. ಒಂದು ರೂಪಾಯಿಯನ್ನು ಗಲ್ಲಾದ ಮೇಲೆ ಇಟ್ಟುಜಿಲೇಬಿ ಕೊಡಿಅಂದ. ಕಣ್ಣು ಜಿಲೇಬಿಗಳ ಮೇಲೇ ಇತ್ತು. “ ಆಹ್……. ಏನು ಹೊಳಪು…… ಚಿನ್ನದ ಬಣ್ಣ…….” ಬಾಯಲ್ಲಿ ನೀರೂರುತ್ತಿತ್ತು. ಐತಾಳರು ರೂಪಾಯಿಯ ನಾಣ್ಯವನ್ನು ಕೈಗೆತ್ತಿಕೊಂಡವರೇ ಏನೋ ಅನುಮಾನಗೊಂಡು ಹಿಂದೆ ಮುಂದೆ ತಿರುಗಿಸಿ ನೋಡಿಇದು ನಡೆಯೊಲ್ಲಾ…’ ಅಂದರು. ಮಂಜು ಆತಂಕದಿಂದ ಯಾಕೆ? ಎಂದಾಗ ಐತಾಳರು ಸಾವಧಾನವಾಗಿ ವಿವರಿಸಿದರು. “ ನೋಡೋ ಇಲ್ಲಿ, ಇದರ ಮೇಲೆ ರಾಜನ ಚಿತ್ರವಿದೆ. ಇಂಥಾ ನಾಣ್ಯಗಳನ್ನು ತುಂಬಾ ಹಿಂದೆನೇ ನಿಲ್ಲಿಸಿದ್ದಾರೆ. ಆದರೆ ಅದಕ್ಕಿಂತ ಮೊದಲು ರಾಣಿಯ ಚಿತ್ರವಿರುವ ನಾಣ್ಯಗಳು ಇರುತ್ತಿದ್ದವು. ಅದೇನಾದ್ರೂ ಆಗಿದ್ರೆ ತಗೋಬಹುದಾಗಿತ್ತು. ಯಾಕೆಂದ್ರೆ ಅವು ಬೆಳ್ಳಿಯ ನಾಣ್ಯಗಳು. ಅದಕ್ಕೆ ಈಗಲೂ ಒಳ್ಳೆ ಬೆಲೆ ಇದೆ. ಆದರೆ ಇದೇನೂ ಉಪಯೋಗವಿಲ್ಲ. ಇದು ಈಗಿನ ಕಾಲಕ್ಕೂ  ನಡೆಯೋಲ್ಲ. ಹಳೆಯದು ಅನ್ನೋ ಬೆಲೆನೂ ಇಲ್ಲ.”

ಪಾಪಮಂಜು ಜಿಲೇಬಿಗಳ ಕಡೆಗೊಮ್ಮೆ ಆಸೆಯ ನೋಟ ಬೀರಿ,ನಾಣ್ಯ ಜೇಬಿಗಿಳಿಸಿ   ರಸ್ತೆಗೆ ಹೊರಳಿದ. ಥೂ…. ಇದನ್ನು ಬೆಳಗ್ಗಿಂದಲೂ ಜೋಪಾನ ಮಾಡಿದ್ದು ದಂಡ ಎಂದೆನಿಸಿತು

ಹಾಗೇ ಸುತ್ತಲೂ ನೋಡುತ್ತಿದ್ದಂತೇ ಬೆಲೂನು ಮಾರುವವನು ಕಾಣಿಸಿದ. ಬಣ್ಣಬಣ್ಣದ ಬೆಲೂನುಗಳು….. ಒಂದಕ್ಕೆ ಇಪ್ಪತ್ತು ಪೈಸೆ. ಆದರೆ ಮಂಜುವಿನ ಬಳಿ ಚಿಲ್ಲರೆ ಇರಲಿಲ್ಲ. ದರಿದ್ರ ನಾಣ್ಯದಿಂದ ಏನೂ ಉಪಯೋಗವಿಲ್ಲ ಅನಿಸಿ ಅಳು ಬರುವಂತಾಯಿತು. ಮನೆಗೆ ಹೋಗೋಣ ಅಂತ ದಾರಿ ಹಿಡಿದರೆ , ಅಲ್ಲಿ ಅವನ ಕೆಲವು ಗೆಳೆಯರು ಗೋಲಿಯಾಡುತ್ತಿದ್ದರು. ಅವರ ಜೊತೆ ಸ್ವಲ್ಪ ಹೊತ್ತು ಆಡಿದರೆ ಹೇಗೆ ? ಎಂದುಕೊಳ್ಳುವಾಗಲೇ ಹಿಂದಿನಿಂದ ಯಾರೋ ಕರೆದಂತೆ ಆಯಿತು. ನೋಡಿದರೆ ಲೋಕಿಕೈಯಲ್ಲೊಂದು ಮೀನಿನ ಗಾಳ ಹಿಡಿದುಕೊಂಡು ಏನೋ ಮಂಜು, ಎಲ್ಲೋ ಹೊರಟೆ?” ಅಂದ. ಲೋಕಿ ಮಂಜುವಿನ  ವಠಾರದವನೇ.  “ ಇಲ್ಲಎಲ್ಲೂ ಇಲ್ಲ, ನೀನೆಲ್ಲಿಗೆ ಹೋಗ್ತಾ ಇದೀಯ?” ಎಂದ ಮಂಜು. ಲೋಕಿಹೋಗ್ತಾ ಇಲ್ಲ…. ಹೋಗಿ ಬಂದೆ. ಬೆಳಗ್ಗಿಂದನೂ ನದಿಯಲ್ಲಿ ಮೀನು ಹಿಡೀತಾ ಇದ್ದೆಅಂದಾಗ ಮಂಜುಗೆ ಗಾಳದ ಮೇಲೆ ಆಸೆಯಾಯಿತು. “ ಗಾಳ ನನಗೆ ಕೊಡ್ತೀಯೇನೋ ಲೋಕಿ?.... ಎಂದು ಕೇಳಿದ. ಲೋಕಿ ಒಂದು ಕ್ಷಣ ಅನುಮಾನಿಸಿಸರಿ ,ಇದನ್ನು ನಿನಗೆ ಮಾರ್ತೀನಿ, ಎರಡು ರೂಪಾಯಿ ಕೊಡುಅಂದ. ಮಂಜುಗೆ ಕಿಸೆಯಲ್ಲಿದ್ದ ನಾಣ್ಯ ನೆನಪಾಗಿ ಒಂದು ಕೈ  ನೋಡೇಬಿಡೋಣ ಅನಿಸಿಒಂದು ರೂಪಾಯಿ ಇದೆ ಕಣೋ ಆದರೆ ಅದು ಹಳೇ ನಾಣ್ಯ . ಎಲ್ಲೂ ನಡೆಯೋಲ್ಲ. ಬೇಕಿದ್ರೆ ನೋಡುಅಂದ. ಲೋಕಿ ನಾಣ್ಯವನ್ನು ಅವಲೋಕಿಸಿ, ಹೌದು ಇದು ನಡೆಯೊಲ್ಲ. ಆದರೆ ನನ್ನ ಮಾವ ಹಳೇ ನಾಣ್ಯಗಳನ್ನು ಇಟ್ಟುಕೊಂಡಿರುತ್ತಾರೆ. ಅವರಿಗೆ ಇದನ್ನು ಕೊಟ್ಟರೆ ಖುಷಿಪಡುತ್ತಾರೆ. ತಗೋ ಗಾಳ ನೀನಿಟ್ಟುಕೋ , ನಾಣ್ಯ ನನಗೆ ಕೊಡು ಅಂದ.

ಮಂಜುಗೆ ಕುಣಿದು ಕುಪ್ಪಳಿಸುವಷ್ಟು ಸಂತೋಷವಾಯಿತು. ನದಿಯ ಕಡೆಗೆ ನಡೆಯಲಾರಂಭಿಸಿದ. ಅಷ್ಟು ದೂರದಲ್ಲಿ ಒಂದು ಲಾರಿ ಬರುತ್ತಿತ್ತು. ನೋಡಿದರೆ ಅದು ನದಿಯಿಂದ ಮರಳು ಸಾಗಿಸುವ ಕಾಸಿಂಪಾಷಾನ ಲಾರಿ. ಮಂಜು ಕೈ ಬೀಸುತ್ತಿದ್ದಂತೆಯೇ ಲಾರಿ ನಿಂತಿತು. “ ಪಾಷಣ್ಣ, ನಾನೂ ಬರ್ಲಾ ನದಿಗೆ?” ಅಂತ ಮಂಜು ಗೋಗೆರೆದಾಗ, ಪಾಷಾ, ‘ಸರಿ ಹಿಂದೆ ಹತ್ತು…… ಜೋಪಾನ, ಗಟ್ಟಿಯಾಗಿ ಕೂತ್ಕೋಅಂದಿದ್ದೇ ಮಂಜು ಲಾರಿ ಹತ್ತಿದ . ಲಾರಿ, ಸೈಕಲ್ ಸವಾರರನ್ನು, ಜನರನ್ನೂ, ಕಾರುಗಳನ್ನು ಹಿಂದೆ ಹಾಕಿ ಹೋಗುತ್ತಿದ್ದಂತೆಯೇ ಮಂಜುಗೆ ಏನೋ ಖುಷಿ. ನದಿ ತಲುಪಿದಾಗ ಪಾಷಾನಿಗೆ ಕೈ ಬೀಸಿ ಮಂಜು ನದಿಯ ಕಡೆಗೆ ಓಡಿದ. ನೋಡಿದರೆ ಅಲ್ಲೇನಿದೆ….. ಬೇಸಿಗೆಗೆ ನದಿಯೆಲ್ಲಾ ಒಣಗಿ ಕೊಳೆ ನೀರು ನಿಂತಿತ್ತು. ನೀರೂ ಇಲ್ಲ, ಮೀನೂ ಇಲ್ಲ. ಓಹೋ…. ಅದಕ್ಕೇ ಲೋಕಿ ನನಗೆ ಗಾಳ ಮಾರಿದ್ದು ಎಂಬ ಸತ್ಯ ಅರಿವಾಗುತ್ತಿದ್ದಂತೆಯೇ ಮಂಜುಗೆ ಬೇಸರವಾಯಿತು. ಸರಿ ವಾಪಸ್ ಮನೆಯ ಕಡೆಗೆ ಹೊರಟ. ನಿರಾಸೆಯಿಂದ ದಾರಿ ಬದಿಯ ಪೊದೆಗಳಿಗೆ ಗಾಳದ ಕೋಲಿನಿಂದ ಬಡಿಯುತ್ತಾ, ಕಾಲಿಗೆ ಸಿಕ್ಕ ಕಲ್ಲುಗಳನ್ನು ಒದೆಯುತ್ತಾ ಬಿಸಿಲಲ್ಲಿ ಬರುತ್ತಿದ್ದ ಮಂಜುಗೆ ಮಾವಿನ ಮರವೊಂದು ಕಾಣಿಸಿತು. ಆದರೆ ಹಣ್ಣು ಕೈಗೆ ಎಟಕುವಂತಿರಲಿಲ್ಲ. ಯಾಕೋ ಜಿಲೇಬಿಯೇ ನೆನಪಾಗಿ ಅಳು ಬರುವಂತಾಯಿತು. ಅಷ್ಟು ಹೊತ್ತಿಗೆ ಅಶ್ವತ್ಥ ಕಟ್ಟೆಯ ಬಳಿಗೆ ತಲುಪಿದ್ದ ಮಂಜು  ಒಬ್ಬ ಹುಡುಗ ಕೊಳಲು ನುಡಿಸುವುದನ್ನು ನೋಡುತ್ತಾ ನಿಂತುಬಿಟ್ಟ. ಹುಡುಗ ಮಂಜುನ ಕೈಯಲ್ಲಿದ್ದ ಗಾಳವನ್ನು ನೋಡುತ್ತಾ  ಕೊಳಲು ನುಡಿಸುವುದನ್ನು ನಿಲ್ಲಿಸಿದ. ಮೀನು ಸಿಕ್ತಾ ಎಂದ. ಮಂಜುಇಲ್ಲ, ಜಾಸ್ತಿ ನೀರಿರಲಿಲ್ಲ, ಮೀನೂ ಇರಲಿಲ್ಲ. ಆದರೆ ಗಾಳ ಚೆನ್ನಾಗಿದೆ. ಎಂದ. ಹುಡುಗ ಕೊಳಲೂ ಚೆನ್ನಾಗಿದೆ ಅಂದ!! . ವ್ಯಾಪಾರ ನಡೆದೇ ಹೋಯ್ತು. ಮಂಜು ಗಾಳ ಕೊಟ್ಟು ಕೊಳಲು ಪಡೆದು ನುಡಿಸಲಾರಂಭಿಸಿದ. ಅವನಿಗೆ ಅದು ಮಧುರ ಸ್ವರ ಅನಿಸುತ್ತಿತ್ತು. ಆದರೆ ಯಾಕೋಅಲ್ಲಿ ಹೋಗುತ್ತಿದ್ದ ಜನರೆಲ್ಲಾ ಅವನ ಕಡೆ ಒಂಥರಾ ನೋಟ ಬೀರುತ್ತಾ ಹೋಗುತ್ತಿದ್ದರು.ಮಂಜು ಅದನ್ನೆಲ್ಲ ತಲೆಗೆ ಹಚ್ಚಿಕೊಳ್ಳದೇ ಕೊಳಲು ನುಡಿಸುತ್ತಲೇ ಇದ್ದ. ಸ್ವಲ್ಪ ಹೊತ್ತಿಗೆ ನಾಲ್ಕಾರು ಹುಡುಗರು ಅವನ ಸುತ್ತ ಸೇರಿದರು. ಅವರಲ್ಲೊಬ್ಬ, ‘ನಾನು ಇನ್ನೂ ಚೆನ್ನಾಗಿ ನುಡಿಸುತ್ತೇನೆ…. ಒಂದ್ಸಾರಿ ಕೊಡೋಅಂದ. ನೋಡಿದರೆ ಹುಡುಗ ನಿಜವಾಗ್ಲೂ ಚೆನ್ನಾಗಿಯೇ ನುಡಿಸುತ್ತಿದ್ದ. ಅಷ್ಟು ಹೊತ್ತಿಗೆ ಮಂಜುಗೆ ಕೊಳಲಿನ ಸಹವಾಸ ಸಾಕಾಗಿತ್ತು. “ಇದನ್ನ ನೀನೇ ಇಟ್ಟುಕೋ , ನನಗೊಂದು ರೂಪಾಯಿ ಕೊಡುಎಂದ ಮಂಜುಗೆ ಹುಡುಗನನ್ನಲ್ಲಿ ದುಡ್ಡಿಲ್ಲ, ಆದರೆ ಒಂದು ಸರ ಇದೆ. ತುಂಬಾ ಚೆನ್ನಾಗಿದೆ. ಅದನ್ನು ನಿನಗೆ ಕೊಡುತ್ತೇನೆಅಂದಾಗ ಸಿಟ್ಟು ಬಂತು. “ ನಾನೇನು ಹುಡುಗೀನಾ…. ಸರ ಹಾಕಿಕೊಳ್ಳೋಕೆ….ಅಂತ ಅಬ್ಬರಿಸಿದ

ಹುಡುಗ ಶಾಂತವಾಗಿನೀನು ಹಾಕ್ಕೋ ಅಂತ ನಾನೇನು ಹೇಳಿದ್ನಾ…… ನಿನ್ನ ತಂಗಿಗೆ ಅಥವಾ ಅಮ್ಮನಿಗೆ ಕೊಡುಅಂತ ಸಲಹೆ ಕೊಟ್ಟಾಗ ಮಂಜುಗೆ ಸರಿ ಎನಿಸಿತು. ಕೊಳಲು ಕೊಟ್ಟು ಸರ ಪಡೆದುಕೊಂಡು ಜೇಬಿಗಿಳಿಸುತ್ತಿದ್ದಂತೆಯೇ ಅಲ್ಲಿಗೆ ಶಾಂತಿ ಬಂದಳು. ಶಾಂತಿ ಮಂಜುನ ಪಕ್ಕದಮನೆಯ ಗೆಳತಿ. “ ಏನೋ ಮಂಜು …. ಕೈಯಲ್ಲಿಅಂದಾಗ ಅವನಿಗೆ ಒಂಥರಾ ಆಯ್ತು. “ ….ಇದು ಸರ ಕಣೇ . ನಿಂಗೆ ಬೇಕಾ ….. ತಗೋ, ನನಗೆ ಒಂದು ರೂಪಾಯಿ ಕೊಡು ಸಾಕುಎಂದು ಅವಳ ಕೈಯಲ್ಲಿಟ್ಟ. ಶಾಂತಿಗೆ ಸರ ನೀಡಿ ಖುಷಿಯಾಯಿತು . ತನ್ನ ಚಿಕ್ಕ ಪರ್ಸಿನಿಂದ ಒಂದು ರೂಪಾಯಿಯನ್ನು ತೆಗೆದು ಮಂಜುಗೆ ಕೊಟ್ಟಳು. ಅಯ್ಯೋ…… ಮಂಜುಗೆ ಸ್ವರ್ಗಕ್ಕೆ ಮೂರೇ ಗೇಣು

ಸೀದಾ ಐತಾಳರ ಅಂಗಡಿಗೆ ಓಡಿದವನೇ ಗಲ್ಲಾದ ಮೇಲೆ ಒಂದು ರೂಪಾಯಿ ನಾಣ್ಯವನ್ನಿಟ್ಟುಜಿಲೇಬಿ ಕೊಡಿಎಂದು ಗತ್ತಿನಿಂದ ಹೇಳಿದ. ಐತಾಳರು ನಾಣ್ಯವನ್ನು ನೋಡಿ ನಕ್ಕು, ಐದು ಜಿಲೇಬಿಗಳ ಪೊಟ್ಟಣ ಕಟ್ಟಿ ಕೊಟ್ಟರು.  ಮಂಜು ಆನಂದದಿಂದ, ಆರಾಮವಾಗಿ ಕೂತು ತಿನ್ನೋಣ ಎಂದು ಅಶ್ವತ್ಥ ಕಟ್ಟೆಯ ಬಳಿ  ಬಂದಾಗ ಶಾಂತಿ ಇನ್ನೂ ಅಲ್ಲೇ ಇದ್ದಳು. “ಓಹ್ ಜಿಲೇಬಿ ತಂದ್ಯಾ….. ನಂಗೂ ಹಸಿವಾಗಿದೆ ಕಣೋಎಂದಳು. ಸರಿ, ಇಬ್ಬರೂ ಅಲ್ಲೇ ತಣ್ಣನೆಯ ಮರದ ನೆರಳಲ್ಲಿ ಕೂತು ಸಾವಕಾಶವಾಗಿ ಜಿಲೇಬಿಗಳನ್ನು ಹಂಚಿಕೊಂಡು ತಿಂದು ಮುಗಿಸುವಾಗ ಸೂರ್ಯ ಪಶ್ಚಿಮದಲ್ಲಿ ಇಳಿಯುತ್ತಿದ್ದ.


No comments:

Post a Comment