ನಿನ್ನೊಲುಮೆ ನಮಗಿರಲಿ ತಂದೆ …….
ಎಲ್ಲೆಲ್ಲೂ ದಿವ್ಯಮೌನ . ಸದಾ ಮಕ್ಕಳ ಕಲರವ, ಗಲಾಟೆ, ನಗು ತುಂಬಿರುವ ನಮ್ಮ ಶಾಲೆಯಲ್ಲಿ ಮಕ್ಕಳಿದ್ದೂ ಮೌನದ ಅಧಿಪತ್ಯವಿದ್ದರೆ ಅದು ಪರೀಕ್ಷೆಯ ದಿನಗಳಲ್ಲಿ ಮಾತ್ರ. ಉತ್ಸಾಹ ,ಕುತೂಹಲದ ಬುಗ್ಗೆಗಳಾದ
ಈ ಮಕ್ಕಳು ತಲೆತಗ್ಗಿಸಿ ಉತ್ತರಗಳ ಭಟ್ಟಿ ಇಳಿಸುವುದನ್ನು ಕಂಡರೆ ನನಗೆ ಒಮ್ಮೊಮ್ಮೆ ಅಯ್ಯೋ
! ಅನಿಸುತ್ತದೆ. ಆದ್ರೂ ‘ಎಕ್ಸಾಮ್
ಇನ್ವಿಜಿಲೆಶನ್’ ಅನ್ನೊ ಈ ಮಹಾಬೇಜಾರಿನ ಕೆಲಸದಲ್ಲೂ ಒಂಥರಾ ಮಜಾ ಇದೆ.
ಪರೀಕ್ಷೆಗೆ ಚೆನ್ನಾಗಿ ತಯಾರಿ ನಡೆಸಿದ ಬ್ರಹಸ್ಪತಿಗಳದೇ ಒಂದು ವರಸೆಯಾದರೆ ಅರ್ಧಂಬರ್ದ
ತಿಳಿದವರದೇ ಇನ್ನೊಂದು ವೈಖರಿ. ಪರೀಕ್ಷೆಗಳಿಂದ ಹೆಚ್ಚೇನೂ ನಿರೀಕ್ಷಿಸದ
ಮೂರನೇ ಗುಂಪಿಗಾದರೋ –ಈ ಮೂರು ಗಂಟೆಗಳ ಶಿಕ್ಷೆ ಯಾವಾಗ ಮುಗಿಯುತ್ತದಪ್ಪಾ
ಅನ್ನುವುದೇ ಯೋಚನೆ. ಅವರ ಹಾವಭಾವಗಳೇನು? ಮನಸ್ಸಿಗೆ
ತೋಚಿದ್ದೆಲ್ಲಾ, ಕೆಲವೊಮ್ಮೆ ಕೊಟ್ಟ ಪ್ರಶ್ನೆಗಳನ್ನೇ ಉತ್ತರಪತ್ರಿಕೆಯಲ್ಲಿ
ಬರೆದು “ ಮಾಮ್ , ಅಡಿಶನಲ್ ಶೀಟ್” ಅಂತ ಎದ್ದು ನಿಲ್ಲುವ ಅವರ ಗತ್ತೇನು? ಅಹಾಹಾ…. ಶಿಕ್ಷಕಿಯಾದ ನಾನೇ ಧನ್ಯಳು ಎಂದು ಹೆಮ್ಮೆಪಡುತ್ತಿರುತ್ತೇನೆ.
ನಿನ್ನೆಯೂ ಹೀಗೇ ಆಯಿತು. ಪರೀಕ್ಷೆಕೊಠಡಿಯ
ಮೇಲ್ವಿಚಾರಕಳಾಗಿ ಅತ್ತಿಂದಿತ್ತ ಸುತ್ತಾಡುತ್ತಿದ್ದೆ. ಎಷ್ಟು ಸಾರಿ ವಾಚ್
ನೋಡಿದರೂ ಐದು ನಿಮಿಷ ಮಾತ್ರ ಚಲಿಸುತ್ತಿದೆ . ಈ ಸಮಯ ಅನ್ನೋದೂ ಎಂಥ ಮಳ್ಳ
ಗೊತ್ತೇ! [ ಮಳ್ಳತನ ಇರುವುದರಿಂದ ಅದು ಪುಂಲಿಂಗನೇ ] ನಾನೇ ಪರೀಕ್ಷೆ ಬರೆಯುತ್ತಿದ್ದ ದಿನಗಳಲ್ಲಿ, ಈಗ ನಾನು ಫೇಸ್ ಬುಕ್ ಇತ್ಯಾದಿ ನೋಡುತ್ತಿದ್ದರೆ
ಸರ ಸರ ಅಂತ ಮುಳ್ಳುಗಳ ಓಟ. ಅದೇ ‘ಎಕ್ಸಾಮ್ ಇನ್ವಿಜಿಲೆಶನ್’ ಮಾಡ್ತಾ ಇದ್ದರೆ ಇವಕ್ಕೆ ಬಡಿದಿರುತ್ತೆ ಗೂಟ, ಎಂದು ಪ್ರಾಸಬದ್ಧವಾಗಿ
ಬೈಯ್ದೆ.
ಆಆಹ್…… ಅಗೋ ಅಲ್ಲಿ…. ಓಡಾಡುತ್ತಿದ್ದ ನಾನು ಸರಕ್ಕನೇ ನಿಂತೆ. ಏಳನೇ ತರಗತಿಯ ಹುಡುಗಿಯೊಬ್ಬಳು
ಸ್ಕರ್ಟ್ ಜೇಬಿನಿಂದ ಮೆಲ್ಲಗೆ ಚೀಟಿಯೊಂದನ್ನು ತೆಗೆಯುವುದು ಕಾಣಿಸಿತು. ತರಗತಿಯ ಕೊನೇ ಬೆಂಚಿನ ಬಳಿ ನಿಂತು ಸಮಯವನ್ನು ಬೈಯುತ್ತಿದ್ದ ನನಗೆ ಎರಡನೇ ಬೆಂಚಿನಲ್ಲಿ
ಅವಳು ನಡೆಸುತ್ತಿದ್ದ ಕಸರತ್ತು ಚೆನ್ನಾಗೇ ಕಾಣಿಸುತ್ತಿತ್ತು. ಚೀಟಿಯ ಜೊತೆಗೆ
ಕರವಸ್ತ್ರ ಬೇರೆ. ಹಾಗೇ ಒಮ್ಮೆ ಮೂಗು ಒರೆಸಿಕೊಂಡಂತೆ ಮಾಡಿ ಕರವಸ್ತ್ರ ಜೇಬೊಳಗಿಟ್ಟು
ಮತ್ತೊಂದು ಚೀಟಿಯೊಂದಿಗೆ ಕೈ ಹೊರಗೆ ಬಂತು. ನನಗೆ ತಿಳಿದಂತೆ ಬಹಳ ಚೆನ್ನಾಗಿ
ಓದುವ ಮಗು ಇದು. ಇರು
.. ಮಾಡ್ತೀನಿ ನಿನಗೆ ಅಂದುಕೊಂಡು ಹತ್ತಿರ ಹೋಗಿ ಹಿಡಿದೆ. ಮಕ್ಕಳೆಲ್ಲಾ ಒಮ್ಮೆ ಬರೆಯುವುದನ್ನು ನಿಲ್ಲಿಸಿ ನಮ್ಮನ್ನು ನೋಡಿ ಆ ಹುಡುಗಿಯ ಕಡೆಗೊಂದು
ಕುಹಕದ ನಗೆ ಬೀರಿ ಮತ್ತೆ ಬರೆಯಲಾರಂಭಿಸಿದರು.
ಅಲ್ಲೇ ಹೊರಗೆ ಅಡ್ಡಾಡುತ್ತಿದ್ದ
ನನ್ನ ಸಹೋದ್ಯೋಗಿಗೆ ಪರಿಸ್ಥಿತಿ ವಿವರಿಸಿ ಈ ತರಗತಿಯಲ್ಲಿ ಇರುವಂತೆ ಬೇಡಿಕೊಂಡು ಈ ಪುಟ್ಟಿಯ ಜೊತೆ
ಹೊರಗೆ ಬಂದೆ. ಭಯವೂ ಇಲ್ಲ, ಅವಮಾನವೂ ಇಲ್ಲ ಆರಾಮವಾಗಿ
ನನ್ನ ಜೊತೆ ಬಂದಳು. ಯಾಕಮ್ಮಾ ಹೀಗೆ ಮಾಡಿದೆ ? ಇದು ತಪ್ಪಲ್ವಾ? ಅಂತ ಸೌಮ್ಯವಾಗೇ ಕೇಳಿದೆ. ಆತ್ಮವಿಶ್ವಾಸದ ಉತ್ತರ ಬಂತು “ ಹೌದು ಇದು ತಪ್ಪು ಅಂತ ಗೊತ್ತಿದೆ.
ಆದರೆ ಈ ಒಂದೆರಡು ಉತ್ತರಗಳು ಎಷ್ಟು ಕಲಿತರೂ ಬರಲಿಲ್ಲ. ಅಮ್ಮ ಕಂಪನಿ ಕೆಲಸದ ಮೇಲೆ ಎರಡು ತಿಂಗಳಿನಿಂದ ಅಮೇರಿಕಾದಲ್ಲಿ ಇದ್ದಾರೆ. ಅಪ್ಪ.ಬರೋದು ರಾತ್ರಿ ಹತ್ತು ಗಂಟೆಗೆ. ಫ್ರೆಂಡ್ಸಗೆ ಫೋನಿನಲ್ಲಿ ಕೇಳಿದೆ. ಯಾರೂ ಸಹಾಯ ಮಾಡಲಿಲ್ಲ .
ಹಾಳಾಗಿ ಹೋಗಲಿ ಅಂದುಕೊಂಡು ಬರೆದುಕೊಂಡು ಬಂದೆ”. ಈಗ ಬೆಚ್ಚಿಬೀಳುವ
ಸರದಿ ನನ್ನದು. ಹಾಗಿದ್ದೂ ಕಟುವಾಗೇ ಹೇಳಿದೆ. “ಇದು ನಿನಗೇ ನೀನು ಮೋಸ ಮಾಡಿದಂತೆ. ಅಲ್ಲದೇ ಈಗ ಪ್ರಿನ್ಸಿಪಾಲರ
ಬಳಿ ಹೋದರೆ ಎಂಥಾ ಅವಮಾನ ಅಲ್ಲವೇ?” . “ಮಾಮ್ , ನಮ್ಮ ತರಗತಿಯಲ್ಲಿ ಎಲ್ಲರೂ ಕಾಪಿ ಮಾಡುತ್ತಾರೆ. ಪರವಾಗಿಲ್ಲ ಪ್ರಿನ್ಸಿಪಾಲರಿಗೆ
ನಾನು ಹೇಳುತ್ತೇನೆ. ಎಲ್ಲರ ಥರ ನಾನೂ ಮಾಡಿದೆ ಅಂತ” .ಥಟ್ಟನೇ ಉತ್ತರ ಬಂತು. ನನ್ನ ವಿವೇಕ ಎಚ್ಚರಿಸಿತು – ನಾನು ಇದನ್ನು ದೊಡ್ದ ವಿಷಯ ಮಾಡಿದರೆ ಕಷ್ಟ. ಅಲ್ಲದೇ
ಇವಳ ಮನೆಯಲ್ಲಿ ಯಾರೂ ಇಲ್ಲ. ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ನಾಳೆಯ
ಪತ್ರಿಕೆಯ ಮುಖಪುಟದಲ್ಲಿ ನಾನು ಸುದ್ದಿಯಾಗುವುದು ಖಚಿತ . ಈ ಪರೀಕ್ಷೆಗಳೆಲ್ಲಾ
ಮುಗಿದ ಮೇಲೆ ಈ ವಿಚಾರದ ಇತ್ಯರ್ಥ ಮಾಡೋಣ ಎಂದು ನಿರ್ಧರಿಸಿ ಒಂದಷ್ಟು ಹೊತ್ತು ಆದರ್ಶ, ಮೌಲ್ಯಗಳ ಬಗ್ಗೆ ಅವಳಿಗೆ ಮನದಟ್ಟು ಮಾಡಿಸಿ ತರಗತಿಗೆ ವಾಪಸಾದೆ.
ಮತ್ತೆ ಮನದಲ್ಲಿ ಯೋಚನೆಗಳ ಸಂತೆ. ಪರೀಕ್ಷೆಗಳನ್ನು ಪ್ರಾಮಾಣಿಕವಾಗಿ ಎದುರಿಸಬೇಕು ಎಂಬುದೊಂದು
ಮೌಲ್ಯ. ಇದನ್ನು ಪಾಲಿಸಬೇಕಾದರೆ ಉತ್ತರಗಳು ತಿಳಿದಿರಬೇಕು... ಯಾವುದೋ ಕಾರಣದಿಂದ ವಿಷಯ ಅರ್ಥವಾಗಿಲ್ಲ…. ಯಾರ ಸಹಾಯವೂ ದೊರೆತಿಲ್ಲ……
ಕಡಿಮೆ ಅಂಕಗಳು ಬಂದರೆ ಸುಮ್ಮನೆ ಅಪ್ಪ- ಅಮ್ಮ
, ಗೆಳೆಯರ ಮುಂದೆ ಅವಮಾನ …….. ಎಲ್ಲರೂ ತಪ್ಪುದಾರಿಯಲ್ಲೇ
ನಡೆಯುತ್ತಿದ್ದಾರೆ….. . ನಾನೂ ನಡೆಯುತ್ತೇನೆ….. ಎಂಬುದು ಅವಳ ಚಿಂತನೆ. ಇಲ್ಲಿ ದೋಷ ಯಾರದ್ದು? ಮೌಲ್ಯಗಳ ಬೀಜ ಬಿತ್ತಿ ನೀರೆರೆದು ಕಾಪಾಡಬೇಕಾದವರು ಯಾರು?. ಇಲ್ಲಿ
ನನ್ನ ಪಾತ್ರ ಏನು? ಕಾಲಾಯ ನಮ: ಎನ್ನಲೇ?
ಅಥವಾ ಕಾಲನ ಪ್ರವಾಹದಲ್ಲಿ ಕಳೆದುಹೋಗುತ್ತಿರುವ
ಹಳೆಯಮೌಲ್ಯಗಳನ್ನು ಪಲ್ಲಟಿಸಿ ಹೊಸಮೌಲ್ಯಗಳನ್ನು ಪ್ರತಿಷ್ಠಾಪಿಸಬೇಕೆ?
ಇನ್ನೂ ಗೊಂದಲದಿಂದ ನಾನು ಹೊರಬಂದಿಲ್ಲ.
No comments:
Post a Comment