'ಖುಷಿ ಖುಷಿ'ಯಾಗಿ ಬದುಕಲು ಖುಷ್ ವಂತ್ ಸಿಂಗರ ಸೂತ್ರಗಳು
ಖುಷ್ ವಂತ್ ಸಿಂಗ್ ಅಂದೊಡನೆ ನೆನಪಾಗುವುದು ಅವರ ಅತ್ಯಂತ ವರ್ಣಮಯ ವ್ಯಕ್ತಿತ್ವ. ತೊಂಬತ್ತೊಂಬತ್ತು ವರ್ಷಗಳ ಆರೋಗ್ಯಪೂರ್ಣ ಜೀವನವನ್ನು ಸವೆಸಿ ಕೆಲ ತಿಂಗಳ ಹಿಂದೆ ನಿಧನರಾದ ಈ ಯಶಸ್ವೀ ಲೇಖಕ , ಪತ್ರಕರ್ತ ರ ' absolute khushvant' ಪುಸ್ತಕವನ್ನು ಓದುತ್ತಿದ್ದೇನೆ. ಇದರಲ್ಲಿನ ' ಖುಷಿ ಖುಷಿಯಾಗಿ ಬದುಕಲು ಬೇಕಾದ ಒಂಬತ್ತು ಸೂತ್ರಗಳು ' ಗಮನ ಸೆಳೆದವು. ಅವರ ಕೆಲ ವಿಚಾರಗಳನ್ನು ನಾನು ಒಪ್ಪುವುದಿಲ್ಲ. ಆದರೆ ಇದು ನಾವೆಲ್ಲರೂ ಅಳವಡಿಸಿಕೊಳ್ಳಲು ಯೋಗ್ಯವಾಗಿದೆ .
ಮೊದಲನೆಯದಾಗಿ- ಆರೋಗ್ಯ.
ಆರೋಗ್ಯ ಕೈಕೊಟ್ಟರೆ ಸಂತೋಷವಿಲ್ಲ. ಆದ್ದರಿಂದ ಆರೋಗ್ಯದ ಬಗ್ಗೆ ಅತ್ಯಧಿಕ ಕಾಳಜಿ ವಹಿಸಿ.
ಎರಡನೆಯದು - ದುಡ್ಡು.
ಬಿಡಿಕಾಸೂ ಖರ್ಚುಮಾಡದೇ , ಕೋಟಿಗಟ್ಟಲೆ ಸಂಗ್ರಹಿಸಿ ಇಡಬೇಕಾದ ಅವಶ್ಯಕತೆಯಿಲ್ಲ. ಆದರೆ ನಿಮ್ಮ ದೈನಂದಿನ ಜೀವನಕ್ಕೆ ಬೇಕಾಗುವಷ್ಟು, ಆಗಾಗ ಪ್ರವಾಸ ಹೋಗುವುದಕ್ಕೆ, ಮನರಂಜನೆಗೆ ಹಣವನ್ನು ಉಳಿತಾಯ ಮಾಡಿ. ಸಾಲದ ಜೀವನ ನಮ್ಮನ್ನು ಒಳಗಿಂದಲೇ ಕೊಲ್ಲುತ್ತದೆ.
ಮೂರನೆಯದು - ನಿಮ್ಮ ಸ್ವಂತ ಮನೆ.
ಚಿಕ್ಕದಾದರೂ ಚಿಂತೆಯಿಲ್ಲ, ಸ್ವಂತಮನೆಯಲ್ಲಿ ಬದುಕಿ. ಮನೆಯ ಸುತ್ತ ಗಿಡಗಳನ್ನು ನೆಡಿ. ಗಿಡಗಳು, ಅವುಗಳಲ್ಲರಳುವ ಹೂಗಳು ಮನಸ್ಸಿಗೆ ನೆಮ್ಮದಿ ಕೊಡುತ್ತವೆ.
ನಾಲ್ಕನೆಯದು - ಒಳ್ಳೆಯ ಸಂಗಾತಿ.
ನಿಮ್ಮ ಜೀವನಸಂಗಾತಿ ಅಥವಾ ಒಳ್ಳೆಯ ಮಿತ್ರರು ನೆಮ್ಮದಿಯ ದೂತರು. ಸಂಗಾತಿಯೊಡನೆ ಅಥವಾ ಮಿತ್ರನೊಡನೆ ಮನಸ್ತಾಪಗಳನ್ನು ಇಟ್ಟುಕೊಳ್ಳ ಬೇಡಿ. ಅದು ಮಾನಸಿಕ ಶಾಂತಿಗೆ ಮಾರಕ.
ಐದನೆಯದು- ಪರರ ಜೊತೆಗೆ ಹೋಲಿಕೆ.
ಜೀವನದಲ್ಲಿ ನಮಗಿಂತ ಎತ್ತರಕ್ಕೆ ಏರಿದವರನ್ನು ಕಂಡು ಅಸೂಯೆಪಡಬೇಡಿ. ನೀವು ಅಸೂಯೆಪಟ್ಟರೆ ಅವರಿಗೇನೂ ನಷ್ಟವಿಲ್ಲ. ಆದರೆ ಈ ಅಸೂಯೆ ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ.
ಆರನೆಯದು - ವ್ಯರ್ಥ ಹರಟೆ.
ಚಾಡಿಕೋರರಿಂದ, ಉಪಯೋಗವಿಲ್ಲದ ಹರಟೆ ಕೊಚ್ಚುವವರಿಂದ , ಸದಾಕಾಲ ಪರರನ್ನು ದೂಷಿಸುವವರಿಂದ ದೂರವಿರಿ. ಅವರನ್ನು ಮನೆಯೊಳಗೆ-ಮನದೊಳಗೆ ಕರೆಯಬೇಡಿ. ಅಂಥವರೊಡನೆ ಕಳೆವ ಸಮಯ ವ್ಯರ್ಥ .
ಏಳನೆಯದು - ಹವ್ಯಾಸ.
ಒಂದೆರಡು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಓದು, ಬರಹ, ಮಣ್ಣಿನ ಜೊತೆ ಒಡನಾಟ, ಹಾಡು ಹೇಳುವುದು/ ಕೇಳುವುದು ಇತ್ಯಾದಿ. ಸಾದ್ಯವಾದರೆ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ.
ಎಂಟನೆಯದು -ಮೌನ .
ದಿನವೂ ಹತ್ತು ನಿಮಿಷ, [ಬೆಳಗ್ಗೆ ಐದು- ಸಂಜೆ ಐದು ] ಮೌನವಾಗಿ ಕಳೆಯಿರಿ. ಮೌನವೆಂದರೆ ಕೇವಲ ಬಾಯಿ ಮುಚ್ಚುವುದಲ್ಲ, ದೇಹದ- ಮನಸ್ಸಿನ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿ ಉಸಿರನ್ನು ಮಾತ್ರ ಗಮನಿಸುತ್ತಿರಿ.
ಒಂಬತ್ತನೆಯದು - ತಾಳ್ಮೆ .
ಎಂತಹ ಸಂದರ್ಭದಲ್ಲೂ ತಾಳ್ಮೆ ಕಳಕೊಳ್ಳದಿರಿ. ಅನ್ಯರ ಮೇಲೆ ಪ್ರತೀಕಾರದ ಭಾವನೆ ಬೇಡ. ಆದಷ್ಟು ಮಟ್ಟಿಗೆ ನಿಮಗಾಗದವರನ್ನು ಕ್ಷಮಿಸಿ ಅಥವಾ ಅವರಿಂದ ದೂರವಿರಿ.
good one...:)
ReplyDeletethanks :)
ReplyDelete