Friday, 19 September 2014

'ಖುಷಿ ಖುಷಿ'ಯಾಗಿ ಬದುಕಲು ಖುಷ್ ವಂತ್ ಸಿಂಗರ ಸೂತ್ರಗಳು

       'ಖುಷಿ ಖುಷಿ'ಯಾಗಿ ಬದುಕಲು ಖುಷ್ ವಂತ್ ಸಿಂಗರ  ಸೂತ್ರಗಳು


ಖುಷ್ ವಂತ್ ಸಿಂಗ್ ಅಂದೊಡನೆ ನೆನಪಾಗುವುದು ಅವರ ಅತ್ಯಂತ ವರ್ಣಮಯ ವ್ಯಕ್ತಿತ್ವ. ತೊಂಬತ್ತೊಂಬತ್ತು ವರ್ಷಗಳ ಆರೋಗ್ಯಪೂರ್ಣ ಜೀವನವನ್ನು ಸವೆಸಿ ಕೆಲ ತಿಂಗಳ ಹಿಂದೆ ನಿಧನರಾದ ಈ  ಯಶಸ್ವೀ ಲೇಖಕ , ಪತ್ರಕರ್ತ ರ ' absolute khushvant' ಪುಸ್ತಕವನ್ನು ಓದುತ್ತಿದ್ದೇನೆ.  ಇದರಲ್ಲಿನ ' ಖುಷಿ ಖುಷಿಯಾಗಿ ಬದುಕಲು ಬೇಕಾದ ಒಂಬತ್ತು ಸೂತ್ರಗಳು ' ಗಮನ ಸೆಳೆದವು. ಅವರ ಕೆಲ ವಿಚಾರಗಳನ್ನು ನಾನು ಒಪ್ಪುವುದಿಲ್ಲ. ಆದರೆ ಇದು ನಾವೆಲ್ಲರೂ ಅಳವಡಿಸಿಕೊಳ್ಳಲು ಯೋಗ್ಯವಾಗಿದೆ .

ಮೊದಲನೆಯದಾಗಿ- ಆರೋಗ್ಯ.  
ಆರೋಗ್ಯ ಕೈಕೊಟ್ಟರೆ ಸಂತೋಷವಿಲ್ಲ.  ಆದ್ದರಿಂದ ಆರೋಗ್ಯದ ಬಗ್ಗೆ ಅತ್ಯಧಿಕ ಕಾಳಜಿ ವಹಿಸಿ.

ಎರಡನೆಯದು - ದುಡ್ಡು.  
 ಬಿಡಿಕಾಸೂ ಖರ್ಚುಮಾಡದೇ , ಕೋಟಿಗಟ್ಟಲೆ ಸಂಗ್ರಹಿಸಿ ಇಡಬೇಕಾದ ಅವಶ್ಯಕತೆಯಿಲ್ಲ. ಆದರೆ ನಿಮ್ಮ ದೈನಂದಿನ ಜೀವನಕ್ಕೆ ಬೇಕಾಗುವಷ್ಟು, ಆಗಾಗ ಪ್ರವಾಸ ಹೋಗುವುದಕ್ಕೆ, ಮನರಂಜನೆಗೆ ಹಣವನ್ನು ಉಳಿತಾಯ  ಮಾಡಿ. ಸಾಲದ ಜೀವನ  ನಮ್ಮನ್ನು ಒಳಗಿಂದಲೇ ಕೊಲ್ಲುತ್ತದೆ.

ಮೂರನೆಯದು - ನಿಮ್ಮ ಸ್ವಂತ ಮನೆ. 
ಚಿಕ್ಕದಾದರೂ ಚಿಂತೆಯಿಲ್ಲ, ಸ್ವಂತಮನೆಯಲ್ಲಿ ಬದುಕಿ. ಮನೆಯ ಸುತ್ತ ಗಿಡಗಳನ್ನು ನೆಡಿ. ಗಿಡಗಳು, ಅವುಗಳಲ್ಲರಳುವ ಹೂಗಳು ಮನಸ್ಸಿಗೆ ನೆಮ್ಮದಿ ಕೊಡುತ್ತವೆ.

ನಾಲ್ಕನೆಯದು - ಒಳ್ಳೆಯ ಸಂಗಾತಿ. 
ನಿಮ್ಮ ಜೀವನಸಂಗಾತಿ ಅಥವಾ ಒಳ್ಳೆಯ ಮಿತ್ರರು ನೆಮ್ಮದಿಯ ದೂತರು. ಸಂಗಾತಿಯೊಡನೆ ಅಥವಾ ಮಿತ್ರನೊಡನೆ ಮನಸ್ತಾಪಗಳನ್ನು ಇಟ್ಟುಕೊಳ್ಳ ಬೇಡಿ. ಅದು ಮಾನಸಿಕ ಶಾಂತಿಗೆ ಮಾರಕ. 

ಐದನೆಯದು- ಪರರ ಜೊತೆಗೆ ಹೋಲಿಕೆ.  
ಜೀವನದಲ್ಲಿ ನಮಗಿಂತ ಎತ್ತರಕ್ಕೆ ಏರಿದವರನ್ನು ಕಂಡು ಅಸೂಯೆಪಡಬೇಡಿ. ನೀವು ಅಸೂಯೆಪಟ್ಟರೆ ಅವರಿಗೇನೂ ನಷ್ಟವಿಲ್ಲ. ಆದರೆ ಈ ಅಸೂಯೆ ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ.

ಆರನೆಯದು -  ವ್ಯರ್ಥ ಹರಟೆ.  
 ಚಾಡಿಕೋರರಿಂದ, ಉಪಯೋಗವಿಲ್ಲದ ಹರಟೆ ಕೊಚ್ಚುವವರಿಂದ ,  ಸದಾಕಾಲ ಪರರನ್ನು ದೂಷಿಸುವವರಿಂದ ದೂರವಿರಿ.  ಅವರನ್ನು ಮನೆಯೊಳಗೆ-ಮನದೊಳಗೆ ಕರೆಯಬೇಡಿ. ಅಂಥವರೊಡನೆ ಕಳೆವ ಸಮಯ ವ್ಯರ್ಥ . 

ಏಳನೆಯದು - ಹವ್ಯಾಸ. 
ಒಂದೆರಡು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಓದು, ಬರಹ, ಮಣ್ಣಿನ ಜೊತೆ ಒಡನಾಟ, ಹಾಡು ಹೇಳುವುದು/ ಕೇಳುವುದು ಇತ್ಯಾದಿ. ಸಾದ್ಯವಾದರೆ  ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ.

ಎಂಟನೆಯದು -ಮೌನ .
   ದಿನವೂ ಹತ್ತು ನಿಮಿಷ, [ಬೆಳಗ್ಗೆ ಐದು- ಸಂಜೆ ಐದು ] ಮೌನವಾಗಿ ಕಳೆಯಿರಿ. ಮೌನವೆಂದರೆ ಕೇವಲ ಬಾಯಿ ಮುಚ್ಚುವುದಲ್ಲ, ದೇಹದ- ಮನಸ್ಸಿನ  ಎಲ್ಲ ಚಟುವಟಿಕೆಗಳನ್ನು ನಿಲ್ಲಿಸಿ ಉಸಿರನ್ನು ಮಾತ್ರ ಗಮನಿಸುತ್ತಿರಿ.

ಒಂಬತ್ತನೆಯದು - ತಾಳ್ಮೆ  .  
ಎಂತಹ ಸಂದರ್ಭದಲ್ಲೂ ತಾಳ್ಮೆ ಕಳಕೊಳ್ಳದಿರಿ. ಅನ್ಯರ ಮೇಲೆ ಪ್ರತೀಕಾರದ ಭಾವನೆ ಬೇಡ. ಆದಷ್ಟು ಮಟ್ಟಿಗೆ ನಿಮಗಾಗದವರನ್ನು ಕ್ಷಮಿಸಿ ಅಥವಾ ಅವರಿಂದ ದೂರವಿರಿ.

Wednesday, 17 September 2014

ಪ್ರಶ್ನಾ ಪಿಶಾಚಿಗಳು

                    ಪ್ರಶ್ನಾ ಪಿಶಾಚಿಗಳು
ಪ್ರಶ್ನೆಗಳ ಬಾಣಗಳನ್ನೆಸೆದು ಜನರನ್ನು ಕಂಗೆಡಿಸುವವರು ಸರ್ವಾಂತರ್ಯಾಮಿಗಳು. ವಿಪರ್ಯಾಸವೆಂದರೆ ಇವರಲ್ಲಿ ಹೆಚ್ಚಿನವರು ನಮ್ಮ ಸಮೀಪದ ಬಂಧು-ಮಿತ್ರರೇ ಆಗಿರುತ್ತಾರೆ . ಆದರೆ ಇವರನ್ನು ಇತ್ಯಾತ್ಮಕವಾಗಿ ಸ್ವೀಕರಿಸುವುದು ಆತ್ಮವಿಶ್ವಾಸವನ್ನು ವರ್ಧಿಸುವ ಸುಲಭಮಾರ್ಗ. ಇದರ ಬಗ್ಗೆ ನನ್ನ ವೈಯಕ್ತಿಕ ಅನುಭವ ಹೀಗಿದೆ.

ಸಂಪ್ರದಾಯಸ್ಥ ಮನೋಭಾವದಿಂದಲೋ , ಉಪೇಕ್ಷೆಯಿಂದಲೋ ಅಥವಾ ಅಜ್ಞಾನದಿಂದಲೋ ನನ್ನ ತಂದೆತಾಯಿಗೆ ನಾವು ಡಜನ್ ಗಿಂತಲೂ ಹೆಚ್ಚು ಮಕ್ಕಳು. ನಾವೆಲ್ಲರೂ ಸಾಕಷ್ಟು ವಿದ್ಯಾವಂತರೂ , ಯಶಸ್ವಿಗಳೂ ಆಗಿದ್ದರೂ , ಕಾಲ ಕಳೆದಂತೆ ಸಣ್ಣ ಕುಟುಂಬದ ಮಹತ್ವವನ್ನರಿತ ಜನರಿಗೆ ನನ್ನ ಕುಟುಂಬ  ತಮಾಷೆಯ ವಸ್ತುವಾಯಿತು. ಎಲ್ಲರಲ್ಲಿ ಕೊನೆಯವಳಾದ ನಾನು ಬಾಲ್ಯದಲ್ಲಿ  ನನ್ನ ತಾಯಿಯ ಜೊತೆ ಸಮಾರಂಭಗಳಿಗೆ  ಹೋದಾಗ ಇದರ ಬಿಸಿಯನ್ನು ಅನುಭವಿಸುತ್ತಿದ್ದೆ. ವಯಸ್ಸಿನ ಅಂತರದಿಂದಾಗಿ ನಾವು ಅಜ್ಜಿ- ಮೊಮ್ಮಗಳಂತೆ ಕಾಣುತ್ತಿದ್ದೆವು. ಸರಿ…. ಶುರುವಾಗುತ್ತಿತ್ತು ನೋಡಿ ಪ್ರಶ್ನೆಗಳ ಚಾಟಿ.
ಇವಳು ನಿಮ್ಮ ಮೊಮ್ಮಗಳಾ?
ನನ್ನ ತಾಯಿ : - ಅಲ್ಲ,  ಕೊನೆಯ ಮಗಳು.
ಹೌದಾ….. ಅದು ಹೇಗೆ?
ಓಹ್ …. ನಿಮಗೆ ಇಷ್ಟೊಂದು ಮಕ್ಕಳೇ? ಎಲ್ಲರೂ ಜೀವಂತವಾಗಿದ್ದಾರಾ?
ಎಲ್ಲರೂ ಮನೆಯಲ್ಲೇ ಹುಟ್ಟಿದರಾ? ಆಸ್ಪತ್ರೆಯಲ್ಲಿ ಹುಟ್ಟಿದರಾ?
ನಿಮಗೆ ಎಲ್ಲರ ಹೆಸರು ನೆನಪಿದೆಯೇ?
ನಿಮಗೆ ಎಲ್ಲ ಮಕ್ಕಳ ಹುಟ್ಟಿದ ದಿನ ನೆನಪಿದೆಯೇ?
ನಿಮಗೆ ಹುಟ್ಟಿದ ಎಲ್ಲ ಮಕ್ಕಳು ಬದುಕಿ ಉಳಿದರೇ? ಅಥವಾ ಕೆಲವು ಸತ್ತಿವೆಯೇ?
ನಿಮ್ಮನ್ನು ಮಹಾತಾಯಿ ಎಂದು ಕರೆಯಲೇ?
ನಿಮ್ಮ ಮನೆಯಲ್ಲಿ ಎಲ್ಲರೂ ಸೇರಿದರೆ ಒಟ್ಟು ಎಷ್ಟು ಜನವಾಗುತ್ತೀರಿ?
ಓಹ್……… ಅನಕ್ಷರಸ್ಠೆಯಾಗಿದ್ದ ನನ್ನ ತಾಯಿ ಪ್ರಶ್ನೆಗಳ ಪಂಜರದಲ್ಲಿ ಬಂದಿಯಾಗಿ ಕಂಗಾಲಾಗುತ್ತಿದ್ದುದನ್ನು ನೆನಪಿಸಿಕೊಂಡರೆ ಈಗಲೂ ನನ್ನ ಕಣ್ಣು ಮಂಜಾಗುತ್ತದೆ.

ಇದರಿಂದಾದ ದೊಡ್ಡ ಲಾಭವೆಂದರೆ ಇದನ್ನೆಲ್ಲ ನೋಡುತ್ತಲೇ ಬೆಳೆದ ನನ್ನ ಮನಸ್ಸು ಗಟ್ಟಿಯಾಯಿತು. ಈಗ ನನಗೆ ಯಾರೇ , ಎಂತಹುದೇ ಪ್ರಶ್ನೆ ಕೇಳಿದರೂ ತಟಕ್ಕನೇ ಉತ್ತರ ನಾಲಿಗೆಯ ತುದಿಯಲ್ಲೇ ಸಿದ್ಧವಾಗಿರುತ್ತದೆನನ್ನನ್ನು ಬೆಳೆಸಿದ ಇಂತಹ ವ್ಯಕ್ತಿತ್ವ ವಿಕಸನ ಗುರುಗಳಿಗೆ ನಾನಂತೂ ಚಿರಋಣಿ.

ನಿಮಗೆ ಕಿರಿಕಿರಿಯ ಪ್ರಶ್ನೆಗಳೆದುರಾದಾಗ , ಯಾವುದೇ ಕಾರಣಕ್ಕೂ ಕಂಗೆಡಬೇಡಿ. ಸಾದ್ಯವಾದಷ್ಟೂ ನೇರವಾದ ಉತ್ತರಗಳನ್ನು ಕೊಡಿ. ಸಿಡುಕುಮುಖ ಅಥವಾ ಅಳುಮೋರೆ ಮಾಡದೇ ನಗುತ್ತಲೇ ಉತ್ತರಿಸಿ. ಇಂಗ್ಲೀಷಿನ ಗಾದೆಯೊಂದು ಹೇಳುತ್ತದೆ- ‘ನಿಮ್ಮ ಅನುಮತಿಯಿಲ್ಲದೇ ಯಾರೂ ನಿಮ್ಮನ್ನು ಘಾಸಿಗೊಳಿಸಲಾರರು.’  ಇಂತಹ ಪ್ರಶ್ನೆಗಳನ್ನು ಕೇಳುವವರಿಗೆ ಎದುರಿಗಿರುವವರ ಸಂಕಟ ಆನಂದವನ್ನು ಕೊಡುತ್ತದೆ. ಆದ್ದರಿಂದ ಅವರಿಗೆ ಆನಂದವನ್ನು ಅನುಭವಿಸುವ ಅವಕಾಶವನ್ನು ಕೊಡಲೇಬೇಡಿ.

ಹೀಗೆ ಕೆಲವು ಬಾರಿ ಮಾಡಿದಾಗಅವರು ಸ್ವಲ್ಪ ಜೋರು’!! ಎಂಬ ಇಮೇಜ್ ನಿಮಗೆ ಬರುತ್ತದೆ. ಅಲ್ಲಿಗೆ ನಿಮ್ಮ ಸಮಸ್ಯೆ ಪರಿಹಾರವಾದಂತೆಯೇ. ಆತ್ಮವಿಶ್ವಾಸವೆಂಬ ಖಡ್ಗ ನಿಮ್ಮ ಕೈಯಲ್ಲಿದ್ದರೆ ಯಾವ ಶತ್ರುವೂ ನಿಮ್ಮ ಬಳಿ ಸುಳಿಯುವ ಸಾಹಸ ಮಾಡುವುದಿಲ್ಲ.


ನಾನು ಮತ್ತು ಕೊಚ್ಯಾಡಿಯನ್

ನಾನು ಮತ್ತು ಕೊಚ್ಯಾಡಿಯನ್
    ಇವತ್ತು ಮಧ್ಯಾಹ್ನ ಊಟ ಮುಗಿಸಿ ಟಿ. ವಿ ನೋಡುತ್ತಾ ರಜೆಯ ಮಜಾ ಸವಿಯುತ್ತಾ ಇದ್ದೆ. ತಪಸ್ವಿಯಂತೆ ಕಾಣುತ್ತಿರುವ ಒಬ್ಬ ವ್ಯಕ್ತಿ ತಾಂಡವ ನಾಟ್ಯ ಮಾಡುತ್ತಿದ್ದ. ಓಹ್ಅವನ ಹಾವ ಭಾವಗಳು, ವೈರಿಗಳನ್ನು ಸದೆಬಡಿವ ಅವನ ನಡೆಗಳು, ಹಾಲಿವುಡ್ ಸಿನಿಮಾಗಳನ್ನು ನೆನಪಿಸುವ ಕ್ಯಾಮರಾ ತಂತ್ರಗಳು, …… ಹೌದು ಆಗ ತಿಳಿಯಿತು, ಇದುತಲೈವಾರಜನೀಕಾಂತನ ಕೊಚ್ಯಾಡಿಯನ್ ಸಿನಿಮಾದ ಟ್ರೇಲರ್ . ರಜನಿಯ ಚಿತ್ರಗಳೆಂದರೆ ಭಾರತೀಯ ಚಿತ್ರರಂಗದ ಮಟ್ಟಿಗೆ ಅದ್ಭುತವೇ ಸರಿಒಂದು ಪ್ರಾದೇಶಿಕ ಭಾಷೆಯ ಚಿತ್ರರಂಗ ಜಗತ್ತನ್ನೇ ನಿಬ್ಬೆರಗುಗೊಳಿಸುವುದೆಂದರೆ  ನಿಜಕ್ಕೂ ಹೆಮ್ಮೆಯೆನಿಸುತ್ತದೆ.

ಯಾಕೋ ಸಿನಿಮಾ ಅಂದರೆ ನನಗೆ ನನ್ನ ಬಾಲ್ಯ ನೆನಪಾಗುತ್ತದೆ. ತುಂಬಾ ಸಿನಿಮಾ ನೋಡಿದ್ದಕ್ಕಲ್ಲ. ಸಿನಿಮಾನೇ ನೋಡದೆ ಬಾಲ್ಯ ಕಳೆದಿದ್ದಕ್ಕೆ!! . ನನ್ನ ತಾಯಿಗೆ ಸಿನಿಮಾದ ಬಗ್ಗೆ ಸದಭಿಪ್ರಾಯ ಇರಲಿಲ್ಲ. ಸಿನಿಮಾ ಎಂದರೆ ಕಾಲಹರಣ, ಸಿನಿಮಾ ನೋಡುವವರು ಸೋಮಾರಿಗಳು, ಸುಮ್ಮನೆ ದುಡ್ಡು ದಂಡ ಎಂಬ ಧೋರಣೆ. ಅದರಲ್ಲೂ ನಮ್ಮಂಥ ಉಚ್ಚಕುಲದಲ್ಲಿ[??] ಜನಿಸಿದವರು ಸಿನಿಮಾ ನೋಡಬಾರದು!!!, ನಾವೆಲ್ಲ ಚೆನ್ನಾಗಿ ಓದಿ ಯಶಸ್ವೀ ವ್ಯಕ್ತಿಗಳಾಗಬೇಕು , ಸಿನಿಮಾ ನೋಡುವವರು ಸಾಮಾನ್ಯರು, ಆಲಸಿಗಳು  ಎಂಬ ಸಮರ್ಥನೆ ಬೇರೆ.  ಮನೆಯಲ್ಲಿ ಸಿನಿಮಾದ ಹಾಡು ಗುನುಗುನಿಸಿದರೂ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಭಾವನೆಯ ಹಿಂದೆ ಇದ್ದಮಕ್ಕಳು ಓದಿ ಬುದ್ಧಿವಂತರಾಗಲಿ, ದುಶ್ಚಟಗಳಿಗೆ ಬಲಿಯಾಗದಿರಲಿ ಎಂಬ ಅವರ ಸದುದ್ದೇಶ ಆಗ ನನಗೆ ಅರ್ಥವಾಗುತ್ತಿರಲಿಲ್ಲ.

 ಕಾಲೇಜು ದಿನಗಳಲ್ಲಿ ಗೆಳತಿಯರ ಜೊತೆ ಒಂದೆರಡು ಸಿನಿಮಾ ನೋಡಿದ್ದೆ. ಆದರೆ ಸಿನಿಮಾ ನೋಡಿ ಬಂದ ಮೇಲೆ ಅಮ್ಮನ ಬೋಧನೆ ನೆನಪಾಗಿ ಅಪರಾಧೀ ಭಾವನೆ ಕಾಡುತ್ತಿತ್ತು. ಮುಂದೆ ಮದುವೆಯಾಗಿ ಬೆಂಗಳೂರಿಗೆ ಬಂದರೂ  ವಿಷಯದಲ್ಲಿ ಹೆಚ್ಚಿನ ಬದಲಾವಣೆ ಆಗಲಿಲ್ಲ. ಹೆಚ್ಚು ಕಡಿಮೆ ನನ್ನಂತಹದೇ ಕೌಟುಂಬಿಕ ಹಿನ್ನಲೆಯಿಂದ ಬಂದ ನನ್ನ ಪತಿಗೆ ಸಿನಿಮಾ ನೋಡುವ ಅಭ್ಯಾಸ ಇರಲಿಲ್ಲ. ವೇಳೆಗಾಗಲೇ ಟಿ. ವಿ ಯಲ್ಲಿ ಸಿನಿಮಾಗಳನ್ನು ಪ್ರಸಾರ ಮಾಡಲಾರಂಭಿಸಿದ್ದರು. ಆದ್ದರಿಂದ ನಾವಿಬ್ಬರೂ ಮೇಡ್ ಫಾರ್ ಈಚ್ ಅದರ್ಎಂದು ಸಮಾಧಾನಪಟ್ಟುಕೊಂಡು ನಮಗೆ ಬಿಡುವಿದ್ದಾಗ ಮನೆಯಲ್ಲೇ ಸಿನಿಮಾ ನೋಡಲಾರಂಭಿಸಿದೆವು. ಹೇಗೂ ದುಡ್ಡು ಕೊಡಬೇಕಾಗಿರಲಿಲ್ಲವಲ್ಲ.

ಆದರೆ ನನ್ನ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಪರಿಸ್ಥಿತಿ ಹದಗೆಟ್ಟಿತು. ಬೆಂಗಳೂರಿನ ಸತ್ಪ್ರಜೆಗಳಾದ ಅವರಿಗೆ ಟಿ.ವಿ. ಯಲ್ಲಿ ಪ್ರಸಾರವಾಗುವ ಎಲ್ಲಾ ಚಿತ್ರಗಳನ್ನು ನೋಡಿದ ಮೇಲೂ ಚಿತ್ರಮಂದಿರಕ್ಕೆ ಹೋಗಿ ಹೊಸಚಿತ್ರಗಳನ್ನು ನೋಡುವ ಬಯಕೆ. ನನ್ನೆಲ್ಲಾ ತತ್ತ್ವ- ಆದರ್ಶಗಳಿಗೆ  ತಿಲಾಂಜಲಿಯಿಡುವ ಸ್ಥಿತಿ ಬಂತು. ಸರಿ, ನಾನು ಬಿಡುತ್ತೇನೆಯೇ? ನಮ್ಮ ಕುಲದ ಹಿರಿಮೆ-ಗರಿಮೆಗಳನ್ನು ವರ್ಣಿಸಿದೆ. ‘ ಮೈ ಗಾಡ್ದಿಸ್.. ಇಸ್.. ಡಿಸ್ ಗಸ್ ಟಿಂಗ್…..’ ಎಂಬ ಅವರ ಉದ್ಗಾರವು ನನ್ನನ್ನು ಅಲ್ಲಾಡಿಸಿತು. ಥಿಯೇಟರ್ ನಲ್ಲಿ ಸಿನಿಮಾ ನೋಡಿ ಸುಮ್ಮನೆ ಹಣ ಖರ್ಚು ಮಾಡುವುದು ಸರಿಯಲ್ಲ…. ಎಂದು ಮುಂತಾಗಿ ಮಿತವ್ಯಯದ ಪಾಠ ಹೇಳಿದರೆಅಮ್ಮಾ, ನಿನಗೆ ಲೈಫ಼ನ ಎಂಜಾಯ್ ಮಾಡೋದಕ್ಕೇ ಬರಲ್ಲ. ಕಮಾನ್ …..ವಾಟ್ ಈಸ್ ದಿಸ್ಎಂದು ಅಚ್ಚಕನ್ನಡದಲ್ಲಿ[?] ನನಗೇ ಉಪದೇಶ ಮಾಡಿದರು. ಸಿನಿಮಾ ನೋಡುವುದು ವ್ಯರ್ಥಕಾಲಹರಣ……. ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ಯೋಚಿಸಿ….. ಸಮಯ ಅಮೂಲ್ಯ …. ಎಂದು ಬುದ್ದಿ ಹೇಳಲು ಪ್ರಯತ್ನಿಸಿದೆ. ಆದರೆ ಆಗಾಗ ಸಿನಿಮಾಗಳನ್ನು ನೋಡುವ ನಮ್ಮ ಸುತ್ತಮುತ್ತಲಿನ ಯಶಸ್ವೀ ವ್ಯಕ್ತಿಗಳನ್ನು ಉದಾಹರಿಸಿ ನನ್ನನ್ನು ಗೇಲಿಮಾಡಿದರು. ಕೊನೆಗೂ ನಾನು ಸೋತೆ . ನನ್ನ ಮಕ್ಕಳೇ ಗೆದ್ದರು. ಈಗ ನಾನು ಕೂಡಾ ಸಿನಿಮಾಪ್ರೇಮಿಯಾಗಿದ್ದೇನೆ. ಒಳ್ಳೆಯ ಚಿತ್ರಗಳು ಬಿಡುಗಡೆಯಾದಾಗ ನನ್ನ ಮಕ್ಕಳ ಜೊತೆ, ಸಹೋದ್ಯೋಗಿಗಳ ಜೊತೆ ಹೋಗಿ ನೋಡುತ್ತೇನೆ. ಸಂತಸಪಡುತ್ತೇನೆ. ಹಾಗಿದ್ದರೂ ಸಿನಿಮಾ ನೋಡಿ ಬಂದ ದಿನ , ರಾತ್ರಿ ಕನಸಿನಲ್ಲಿ ಯಾವತ್ತೋ ಸತ್ತು ಸ್ವರ್ಗವಾಸಿಯಾಗಿರುವ ಅಮ್ಮ ಬಂದು ಕಾಡುತ್ತಾಳೆ. ನಾನು ಉತ್ತರಿಸಲು ಸಾದ್ಯವಾಗದ ಪ್ರಶ್ನೆಗಳನ್ನು ಕೇಳುತ್ತಾಳೆ.

ಇರಲಿ , ನೆನಪಿನ ಮೆರವಣಿಗೆಗೆ ಕಾರಣವಾದಕೊಚ್ಯಾಡಿಯನ್ಸಿನಿಮಾ  ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸುಮಾರು .೨೫ ಬಿಲಿಯನ್ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ , ಪಾಂಡ್ಯದೊರೆಯೊಬ್ಬನ ಜೀವನದ ಸುತ್ತ ಹೆಣೆದಿರುವ ಸಿನಿಮಾ ಇಂಗ್ಲಿಷ್, ಹಿಂದಿ, ಭೋಜಪುರಿ, ತೆಲುಗು, ಬೆಂಗಾಲಿ, ಮರಾಠಿ, ಪಂಜಾಬಿ ಮತ್ತು ಜಪಾನೀ ಭಾಷೆಗಳಲ್ಲಿ ತೆರೆ ಕಾಣಲಿದೆ. ಚಿತ್ರ ಪ್ರೇಕ್ಷಕರನ್ನು ತಣಿಸಲಿಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಒಳ್ಳೆಯ ಭಾರತೀಯ ಸಿನಿಮಾಗಳು ನಿರ್ಮಾಣವಾಗಿಹಾಲಿವುಡ್ ಪಾರಮ್ಯವನ್ನು ಮುರಿಯುವಂತಾಗಲಿ ಎಂಬುದು ನಮ್ಮ ಹಾರೈಕೆ.