Thursday, 7 July 2016

ವಾವ್!..... ಎಂಬೋ ಬಾವಿ.....

ಹೌದು ,ಇದು ಅಂಥಿಂಥ ಬಾವಿಯಲ್ಲ. ನೋಡುಗನ ಬಾಯಲ್ಲಿ ವಾವ್... ಎಂಬ ಉದ್ಗಾರ ಹುಟ್ಟಿಸುವ ಬಾವಿ. ಜಲಮೂಲಗಳ ಬಗ್ಗೆ ನಮ್ಮ ಹಿರಿಯರಿಗಿದ್ದ ಕಳಕಳಿ, ಭಕ್ತಿಯ ದರ್ಶನ ಮಾಡಿಸುವ ಈ ಬಾವಿಯೇ “ ಅದಾಲಜ್ ನಿ ವಾವ್”.ಗುಜರಾತಿಭಾಷೆಯಲ್ಲಿ ಬಾವಿಗೆ ವಾವ್ ಎನ್ನುತ್ತಾರೆ. ಅಹಮದಾಬಾದಿನಿಂದ ೧೮ ಕಿ.ಮೀ. ದೂರದ ಅದಾಲಜ್ ಎಂಬಲ್ಲಿರುವ ಈ ಮೆಟ್ಟಿಲುಬಾವಿ ತನ್ನ ಅಪೂರ್ವ ರಚನೆಯಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಈ ಮೆಟ್ಟಿಲುಬಾವಿ ಅಥವಾ ಕೊಳಗಳು ಭಾರತದಲ್ಲೆಡೆ ಕಂಡುಬರುತ್ತಿದ್ದರೂ ಪಶ್ಚಿಮಭಾರತದಲ್ಲಿ ಇವುಗಳ ಸಂಖ್ಯೆ ಹೆಚ್ಚು. ಕರ್ನಾಟಕದ ಗದುಗಿನ ಎಕ್ಕುಂಡಿಯಲ್ಲಿ ಇಂಥ ಅದ್ಭುತಬಾವಿಯನ್ನು ಕಾಣಬಹುದು. ಮಳೆನೀರು ಸಂಗ್ರಹ, ವರ್ಷವಿಡೀ ಜನ- ಜಾನುವಾರುಗಳಿಗೆ ನೀರುಣಿಸುವುದು  ಇವುಗಳ ಹಿಂದಿನ ಉದ್ದೇಶ. ಹೆಚ್ಚಾಗಿ ಗಾರೆ,ಇಟ್ಟಿಗೆಗಳಿಂದ ಕಟ್ಟಲ್ಪಡುತ್ತಿದ್ದ ಇವುಗಳಲ್ಲಿ ಕೆಲವು ರಾಜ ಮಹಾರಾಜರ ಕೃಪೆಯಿಂದ ಕಲ್ಲಿನಲ್ಲಿ ನಿರ್ಮಾಣವಾಗಿ ಸುಂದರ ಶಿಲ್ಪಕಲಾ ವೈಭವವನ್ನು ಮೆರೆಯಿಸುವ ತಾಣಗಳಾದವು. ಜನರ ದೈನಂದಿನ ಉಪಯೋಗಕ್ಕೆ ನೀರು ಒದಗಿಸುವ ಜೊತೆಗೆ ಉತ್ಸವ, ಮನರಂಜನೆಗಳ ಕೇಂದ್ರಗಳಾಗಿ ಮೆರೆದವು.ನೀರು ತರುವ ಕೆಲಸ ಹೆಚ್ಚಾಗಿ ಹೆಂಗಸರದ್ದೇ ಆಗಿದ್ದರಿಂದ ಅವರ ಬಿಡುವಿನ ಹರಟೆಕಟ್ಟೆಗಳಾಗಿ ಧನ್ಯವಾದವು.ಪುರಾತನ ಇತಿಹಾಸದ ಕೇಂದ್ರ ಮೊಹೆಂಜೋದಾರೋವಿನಲ್ಲಿ ಏಳುನೂರಕ್ಕೂ ಹೆಚ್ಚಿನ ಮೆಟ್ಟಿಲು ಬಾವಿಗಳು ಪತ್ತೆಯಾಗಿವೆಯೆಂದರೆ ಇವುಗಳ ಸಮೃದ್ಧ ಇತಿಹಾಸದ ಕಲ್ಪನೆ ಮಾಡಿಕೊಳ್ಳಬಹುದು. ಭಾರತದಲ್ಲಿ ಇಂದು ಸುಸ್ಥಿತಿಯಲ್ಲಿರುವ ಇನ್ನೂರಕ್ಕೂ ಅಧಿಕ ಬಾವಿಗಳಿವೆ ಎನ್ನಲಾಗಿದೆ.


೧೪೯೯ರಲ್ಲಿ ಮುಸ್ಲಿಮ್ ದೊರೆ ಮಹಮದ್ ಬೇಗ್ದನಿಂದ ನಿರ್ಮಿಸಲ್ಪಟ್ಟಿತು ಎಂಬ ಉಲ್ಲೇಖವಿರುವ ಅದಾಲಜ್ ನ ಮೆಟ್ಟಲು ಬಾವಿಯ ಆಳದಲ್ಲಿ ಕಣ್ಣೀರಿನ ಕಥೆಯಿದೆ.೧೪೯೮ರಲ್ಲಿ ವಘೇಲಾ ವಂಶದ ರಾಣಾವೀರಸಿಂಹ ತನ್ನ ಪ್ರಿಯಪತ್ನಿ ರೂಪಬಾ ಗೋಸ್ಕರ ಇದರ ನಿರ್ಮಾಣವನ್ನು ಆರಂಭಿಸಿದ. ಕೆಲಸ ಕಾಲುಭಾಗದಷ್ಟು ಮುಗಿದಿತ್ತಷ್ಟೇ . ಪಕ್ಕದ ರಾಜ್ಯದ ದೊರೆ ಮಹಮದ್ ಬೇಗ್ದ ಯುದ್ಧ ಸಾರಿದ . ಯುದ್ಧದಲ್ಲಿ ವೀರಸಿಂಹ ವೀರಮರಣವನ್ನಪ್ಪಿದ. ವಿಜಯೀ ಮಹಮದ್ ಬೇಗ್ದ ಅಪ್ರತಿಮಸುಂದರಿ ರೂಪಬಾ ಳನ್ನು ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಲಾರಂಭಿಸಿದ. ರೂಪಬಾ ಒಂದು ಶರತ್ತನ್ನೊಡ್ಡಿ ಮದುವೆಗೆ ಸಮ್ಮತಿಯಿತ್ತಳು. ತನ್ನ ಪತಿ ಆರಂಭಿಸಿದ ಬಾವಿಯ ನಿರ್ಮಾಣ ಮೊದಲು ಮುಗಿಸಬೇಕು, ನಂತರವೇ ಮದುವೆ. ಸರಿ.. ಮಹಮದ್ ಬೇಗ್ದನ ಆಜ್ಞೆಯಂತೆ ಅತ್ಯಂತ ತ್ವರಿತಗತಿಯಲ್ಲಿ ಬಾವಿಯ ನಿರ್ಮಾಣ ಮುಗಿಯಿತು. ಆದರೆ ರಾಣಿ ರೂಪಬಾ ಒಂದು ರಾತ್ರಿ ಆ ಬಾವಿಯಲ್ಲಿ ಹಾರಿ ಪ್ರಾಣತ್ಯಾಗಗೈಯುವುದರೊಂದಿಗೆ ಮಹಮದ್ ಬೇಗ್ದನ ಕನಸನ್ನು ಭಗ್ನಗೊಳಿಸಿದಳು.ಚರಿತ್ರೆಯಲ್ಲಿ ಅಮರಳಾದಳು. ಮಹಮದ್ ಬೇಗ್ದ ನಿರಾಶನಾದರೂ ಬಾವಿಯನ್ನು ಸಂರಕ್ಷಿಸುವಂತೆ ವ್ಯವಸ್ಥೆ ಮಾಡುತ್ತಾನೆ.  ಈಘಟನೆಗಳು ಬಾವಿಯ ಗೋಡೆಗಳ ಮೇಲೆ ಸುಂದರವಾಗಿ ಕೆತ್ತಲ್ಪಟ್ಟಿವೆ.ಬಾವಿಯ ನಿರ್ಮಾಣದ ದಾಖಲೆಗಳನ್ನು ಮೊದಲ ಮಹಡಿಯ ಗೋಡೆಯ ಮೇಲೆ ಸಂಸ್ಕೃತದಲ್ಲಿ ಕೊರೆಯಲಾಗಿದೆ. ಈ ಮೆಟ್ಟಲುಬಾವಿಯ ಶಿಲ್ಪಕಲೆಯನ್ನು ಸೂಕ್ಶ್ಮವಾಗಿ ಗಮನಿಸಿದರೆ ತಳಹಂತದಲ್ಲಿ ಹಿಂದೂ ದೇವ-ದೇವಿಯರ ಕೆತ್ತನೆಗಳು ಕಂಡುಬಂದರೆ ಮೇಲಿನ ಹಂತಗಳಲ್ಲಿ ಇಸ್ಲಾಮಿಕ್ ಶೈಲಿ ಕಣ್ಣಿಗೆ ರಾಚುತ್ತದೆ.


ಅದಾಲಜದ ಮೆಟ್ಟಲುಬಾವಿ ಐದುಮಹಡಿ[ ಸುಮಾರು ೧೦೦ ಅಡಿ] ಆಳವಿದೆ. ಅಷ್ಟಭುಜಾಕೃತಿಯಲ್ಲಿ ಬಲಿಷ್ಠ ಸ್ತಂಭಗಳ ಮೇಲೆ ಕಟ್ಟಲ್ಪಟ್ಟಿದೆ.ಎಲ್ಲ ದಿಕ್ಕುಗಳಿಂದಲೂ ಸಾಕಷ್ಟು ಗಾಳಿ ಬೆಳಕು ಬರುತ್ತದೆ. ಮೇಲಿನಿಂದ ಬಾವಿಯೊಳಗೆ ಇಳಿಯಲು ಮೂರು ದಿಕ್ಕುಗಳಲ್ಲಿ ಮೆಟ್ಟಲುಗಳಿವೆ. ಪ್ರತಿ ಮಹಡಿಯಲ್ಲೂ ಜನರು ಓಡಾಡಲು ಸಾಕಷ್ಟು ಸ್ಥಳಾವಕಾಶ ಇದೆ. ಬಾವಿಯ ಗೋಡೆಗಳ ಮೇಲೆ ನೀರು ತುಂಬುವ ಪಾತ್ರೆಗಳು, ಕಲ್ಪವೃಕ್ಷ, ನವಗ್ರಹಗಳ ಕೆತ್ತನೆ ಮನಸೆಳೆಯುತ್ತದೆ. ಅಲ್ಲದೆ ಮೊಸರು ಕಡೆಯುವುದು, ಅಲಂಕರಿಸಿಕೊಳ್ಳುವುದು, ರಾಜನ ಆಸ್ಥಾನದಲ್ಲಿ ನೃತ್ಯ-ಸಂಗೀತ ಸಭೆ ಇತ್ಯಾದಿ ಕೆತ್ತನೆಗಳಲ್ಲಿ ಮಹಿಳೆಯರ ದೈನಂದಿನ ಬದುಕು ಅನಾವರಣಗೊಂಡಿದೆ. ಬಾವಿಯ ಒಳಗಿನ ತಾಪಮಾನ ಆಹ್ಲಾದಕರವಾಗಿದ್ದು ಹೊರಗಿನ ಉಷ್ಣತೆಗಿಂತ ಐದು ಡಿಗ್ರಿ ಕಡಿಮೆ ಇರುತ್ತದೆ.
ಭವ್ಯವಾದ ಅರಮನೆಯನ್ನು ಪ್ರವೇಶಿಸುತ್ತಿದ್ದೇವೇನೋ ಎಂಬ ಭಾವನೆಯನ್ನು ಉಂಟುಮಾಡುವ ಅದಾಲಜದ ಬಾವಿ ಸ್ವಚ್ಛವಾಗಿದೆ. ನೀರಿನ ಮೇಲೆ ಲೋಹದ ಬಲೆಯನ್ನು ಹೊದಿಸಲಾಗಿದೆ. ಸುತ್ತಲೂ ಸುಂದರವಾದ ಉದ್ಯಾನವಿದೆ.ಅಹಮದಾಬಾದ್ ನಿಂದ ರಸ್ತೆ ಸಂಪರ್ಕ ಅತ್ಯುತ್ತಮವಾಗಿದ್ದು ಒಳ್ಳೆಯ ಬಸ್ ವ್ಯವಸ್ಥೆ ಇದೆ. ಬಾಡಿಗೆ ಕಾರುಗಳು, ರಿಕ್ಷಾಗಳೂ ಸಿಗುತ್ತವೆ. ಮುಂದೆ ನೀವೆಲ್ಲಾದರೂ ಅಹಮದಾಬಾದಿಗೆ ಭೇಟಿ ಇತ್ತರೆ ಅದಾಲಜದ ಮೆಟ್ಟಲು ಬಾವಿಯನ್ನು ನೋಡಲು ಮರೆಯದಿರಿ. 

-




Monday, 25 April 2016

Tête-à-tête with an Airhostess


                   
Tête-à-tête with an Airhostess
Since the advent of globalisation, there are infinite opportunities to be sought. The dilemma of choosing the career path is surely a daunting task, wrecking the peace of mind of many teenagers for whom the impending question is ‘What Next?’ Finally however, most follow the traditional fields, whereas a small section of youngsters wants to try the new avenues and taste success.
Meet this dynamic young lady Ms. Kavya Hebbar who belongs to this latter section. Despite choosing a path less travelled, she is has been able to scale great heights. Daughter of Mr. Narahari Hebbar - Ms. Rekha Hebbar-who hail from Hosamata near Kukke subrahmanya , Mangalore , Karnataka  , she continues the legacy of Mangaloreans who are ready to take challenges and convert them into achievements.
Now employed with Jet Airways- International Flights, Ms. Kavya shares her thoughts with Veda Athavale .                    
  

  
1. How did the idea of becoming air hostess occur? Was there any role model? How did your parents react about your decision?
Frankly speaking I didn't have any dream or goal during my school or college days. I just used to go to school, come back, go for classes, study and then sleep. That's it.  There was no role model for me to become an air hostess. It just happened one day. It was the last day of my 12th board exam, a person was distributing Frankfinn leaflets [Frankfinn is an institute for Air Hostess training]. I randomly filled one, thinking " Just fill the form, who cares if I get a call or not". And the very next day I received a call to attend an interview. Out of 10 people who had come, I was only one who got selected for the course. I went home, discussed it with my parents and their response was positive. That's when I realised what my dream was! My parents were a big support for me.
2. Tell us about the structure of airhostess training? Is being beautiful important for this course?

Qualification required for the training is - HSC / 12th / PUC passed. Age - 18 to 30 years. Training period is 12 months.  Fluency in English is appreciated.  Regarding physical features, height and weight should be proportional with a clear skin. It's not just the beauty, but beauty with brains, confidence, pro- activeness, initiative to learn things, communication skills etc. are most important. The curriculum includes lessons on healthy diet, First Aid, customer service etc.

3. What is the job of an air hostess? Please explain in detail.
 Safety and service is the most important job of an air hostess. Airhostess is responsible for ensuring all passengers are seated and secure before take-offs and landings, securing the main door on flights and instructing passengers on all safety procedures and ensuring all cabin equipment is working before flights. Service duties would include passing out pillows and reading materials before take-off, getting booster seats for toddlers or escorting elderly passengers on and off the plane, providing First-Aid in case of emergency and serve drinks, snacks and meals, collect trays, trash and glasses before landing.                          


4.   Is this job financially attractive? Are there any other benefits in this job? 
Air hostesses are paid well. But the main attraction of this job is you get paid to see the world! You can explore every corner of the world. Travel to places where you have seen those only in movies. Stay in star hotels and all this is company paid.  Other benefits being huge discounts for family to travel in both domestic and international and also medical insurance for the family.

5. Can an Airhostess balance family and work life after marriage? What are the other jobs she can opt if she decides to leave?
To some extent, yes. Family life gets affected after marriage. But with a supporting spouse one can balance personal and professional life. One small advice to all the girls and guys out there, never marry a person of the same profession. For example, if I marry a guy who is a crew, we won't be able to give enough time to each other and to the family because of the time clash. Also, there are many job options for an experienced airhostess. They can become trainers, or seek jobs in management and hospitality industry.   

6. What are the challenges for an Airhostess?  What is your opinion about the recent movie ‘Neeraja’ which depicts life of an Airhostess?
I feel Physical fitness is a biggest challenge. I myself had faced this problem while giving interviews. I got through Jet Airways when I tried for the 4th time!  They rejected me thrice just because of my weight and all my confidence had dropped. I lost hopes completely. But then again my parents and friends imbibed the confidence in me, motivated me, gave me enough strength to face the challenge again. I joined a gym, went for swimming classes and lost weight. And that was when I succeeded. 
The other challenge is staying away from the family as we get off once or twice in a week, which builds psychological pressure. So developing right food habits, keeping ourselves mentally occupied in a constructive way is very important to overcome these challenges.  Regarding the movie ‘Neeraja’, it’s a must watch for every other person out there who thinks an Airhostess job is just like a waiter in the hotel!  I am sure the concept of an Airhostess will change after watching the movie.
7. How do you feel about your Kannadiga roots?  Any piece of advice to youngsters?
Of course I feel happy. Though I am settled in Mumbai, I am in constant touch with my parental and maternal homes in villages near Mangalore .  My relatives have always supported my decision of becoming an Airhostess. Yes it's true that people choose to be engineers or doctors, but I chose to be something unique from others. Now, when anybody asks, “what does your daughter do?” my parents, with their heads high, say that- “She is an air hostess with Jet Airways!”
                           

            

Saturday, 26 March 2016

ಸಹಾಯ‌ ‍ಮತ್ತು 108 ವಿಘ್ನ‌


ಕಳೆದ ಅಕ್ಟೋಬರ್ ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದರ್ಶನ -ಮಧ್ಯಾಹ್ನ ಊಟ ಮುಗಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದೆವು. ಚನ್ನರಾಯಪಟ್ಟಣ ದಾಟಿತ್ತು. ಇದ್ದಕ್ಕಿದ್ದಂತೆ ನಮ್ಮ ಕಾರನ್ನು ಶರವೇಗದಲ್ಲಿ ಹಿಂದಿಕ್ಕಿ ಹೋದ ಬೈಕ್ ನವನೊಬ್ಬ ಮುಂದಿನ ಕಾರಿಗೆ ಅಪ್ಪಳಿಸಿದ. ಎರಡೂ ವಾಹನಗಳೂ ಕೆಲವು ಪಲ್ಟಿ ಹೊಡೆದು ಅಷ್ಟು ದೂರ ಹೋಗಿ ಬಿದ್ದವು. ನಾವು ಕಾರು ನಿಲ್ಲಿಸಿ , ಹತ್ತಿರ ಹೋದೆವು. ಬೈಕ್ ಯುವಕನ ಹೆಲ್ಮೆಟ್ ಒಡೆದು ಸಾಕಷ್ಟು ಏಟಾಗಿತ್ತು. ಕಾರಿನ ಚಾಲಕನಿಗೂ ಗಾಯಗಳಾಗಿದ್ದವು.. ಹೆದ್ದಾರಿಯಲ್ಲಿ ಓಡುತ್ತಿದ್ದ ಹೆಚ್ಚಿನ ವಾಹನಸವಾರರು ಒಮ್ಮೆ ವೇಗ ತಗ್ಗಿಸಿ ಜೀವ ಹೋಯ್ತಾ....?? ಎಂದು ಕೇಳಿ ಇಲ್ಲ... ಎಂದು ತಿಳಿದೊಡನೆ ಮುಂದೆ ಹೋದರು. ಕೆಲವರು ವಾಹನ ನಿಲ್ಲಿಸಿಬಂದು ಬಿದ್ದವರನ್ನು ಕೂರಿಸಿ ನೀರು ಕುಡಿಸಲು ಸಹಾಯಮಾಡಿದರು. ಸರಿ... ನನ್ನ ಸಮಾಜಮುಖಿ ಪ್ರಜ್ಞೆ ಜಾಗ್ರತಗೊಂಡು[ ವ್ಯವಹಾರಚತುರರಾದ ನನ್ನ ಪತಿಯ ಮಾತನ್ನು ಕೇಳದೇ] ೧೦೮ ಕ್ಕೆ ಕರೆ ಮಾಡಿಯೇ ಬಿಟ್ಟೆ. ಆ ಕಡೆಯಿಂದ ಸ್ಥಳದ ವಿಳಾಸ ಕೇಳಿದರು. ಸುತ್ತಲೂ ನೋಡಿದೆ. ಬಟಾಬಯಲು... ಉರುಬಿಸಿಲು... ಅಲ್ಲಿ ದೂರದಲ್ಲಿ ನಾಲ್ಕು ನಾಯಿಗಳು.. ಒಂದು ಎಮ್ಮೆ.. ಮೂರು ಹಸುಗಳನ್ನು ಬಿಟ್ಟರೆ ಏನಿಲ್ಲ... . ಅಲ್ಲೇ ಯಾರನ್ನೋ ಕೇಳಿ ಸುಮಾರಾಗಿ ವಿಳಾಸವನ್ನು, ಕಾರು ಬೈಕಿನ ಸಂಖ್ಯೆಗಳನ್ನು ಹೇಳಿದೆ. ನಾವು ಇಲ್ಲಿರಲಾಗುವುದಿಲ್ಲ. ಬೇಗನೇ ಬೆಂಗಳೂರ ಸೇರಬೇಕು ಎಂದೆ. “ಸರಿ ನೀವು ಹೋಗಿ ನಾವು ಸ್ವಲ್ಪಹೊತ್ತಲ್ಲಿ ಬರುತ್ತೇವೆ” ಎಂದರು. ಅಷ್ಟು ಹೊತ್ತಿಗೆ ಜನರೂ ಸೇರಿದ್ದರು. ನಾವು ಪ್ರಯಾಣ ಮುಂದುವರೆಸಿದೆವು.
ನನ್ನ ಶನಿದಶೆ ಆರಂಭವಾಯಿತು. ೧೦೮ ಸಿಬ್ಬಂದಿಯಿಂದ ಕರೆಗಳು.. ಎಲ್ಲಿ ಮೇಡಂ ... ಕಾರೂ ಇಲ್ಲ...ಆಕ್ಸಿಡೆಂಟೂ ಇಲ್ಲ. ಅಡ್ರೆಸ್ ಸರಿಯಾಗಿ ಹೇಳಿ.... ವಾಪಸ್ ಬನ್ನಿ ಇತ್ಯಾದಿ... ನನ್ನ ಅಸಹಾಯಕತೆಯನ್ನು ವರ್ಣಿಸಿದೆ. ಮುಂದೆ ಒಂದು ವಾರ ದಿನವೂ ಇದೇ ಕತೆ. ನಿಮ್ಮ ಹೆಸರು, ವಿಳಾಸ, ಅಪಘಾತದ ಸಮಯ... ನೀವು ಅಲ್ಲೇ ಇರಬೇಕಿತ್ತು... ಹಾಗೆ.. ಹೀಗೆ. ಕೊನೆಗೊಮ್ಮೆ ತಾಳ್ಮೆಗೆಟ್ಟು ಕಿರುಚಿದ ಮೇಲೆ ಕರೆಗಳು ನಿಂತವು.
ನೀವೂ ಸಹಾಯಹಸ್ತ ಚಾಚುವ ಪೈಕಿಯವರಾದರೆ ನಾನು ಕಲಿತ ಪಾಠಗಳನ್ನು ಒಮ್ಮೆ ಓದಿ.
೧. ಅಪಘಾತದ ಸ್ಥಳ ಪರಿಚಿತವಾಗಿದ್ದಲ್ಲಿ ಮಾತ್ರ ಸಹಾಯ ಮಾಡುವ ಸಾಹಸಕ್ಕೆ ಕೈಹಾಕಿ.
೨. ಆಂಬುಲೆನ್ಸ್ ಬರುವವರೆಗೂ ಅಲ್ಲೇ ನಿಲ್ಲುವ ತಾಳ್ಮೆ, ಸಮಯ ಇರಬೇಕು. ಅಥವಾ ಬೇರೆ ವ್ಯವಸ್ಥೆ ಮಾಡುವ ಸಾಮರ್ಥ್ಯ ಇರಬೇಕು.
೩. ಈ ಸಲಹೆ ಹೆಂಗಸರಿಗೆ ಮಾತ್ರ- ಆಗಾಗ ನಿಮ್ಮ ಗಂಡನ ಮಾತನ್ನು ಪರಿಪಾಲಿಸುವ ಹವ್ಯಾಸ ಇರಲಿ. ಕೆಲವೊಮ್ಮೆ ಪತಿ ಪರಮೇಶ್ವರರು ಅಮೂಲ್ಯ ಸಲಹೆಗಳನ್ನು ಕೊಡುತ್ತಾರೆ.

Sunday, 17 January 2016

ಮೂರ್ತಿ ಚಿಕ್ಕದು ... ಇವರ ಕೀರ್ತಿ ದೊಡ್ಡದು....







ಮೊನ್ನೆ ಹೀಗಾಯ್ತು ನೋಡಿ.. ಸಾಯಂಕಾಲ ನಾನು ಯೋಗ ತರಗತಿಯನ್ನು ಮುಗಿಸಿ ತರಕಾರಿ ಖರೀದಿಸಿ ಮನೆಯ ಕಡೆ ನಡಕೊಂಡು ಬರ್ತಾ ಇದ್ದೆ. ಸ್ವಲ್ಪ ಪುರುಸೊತ್ತಿದ್ದರೆ ನಮ್ಮ ಬಡಾವಣೆಯ ರಸ್ತೆಗಳನ್ನು ಒಮ್ಮೆ  ನೋಡಬೇಕು ನೀವು.. ಅಬ್ಬಾ ಪ್ರಪಂಚದ ಎಲ್ಲಾ ಭೂಖಂಡಗಳನ್ನೂ ಇಲ್ಲೆ ಕೊರೆದಿದ್ದಾರೆ. ಎಲ್ಲಿ ಕಾಲಿಟ್ಟರೂ ವಿವಿಧ ಆಕಾರದ ಹೊಂಡಗಳು. ಮಧ್ಯೆ ಅಲ್ಲಲ್ಲಿ ಸಪಾಟು ಜಾಗ.. ಇಂಥ ರಸ್ತೆ ಅನ್ನೋ ಮೈದಾನದಲ್ಲಿ ನಮ್ಮ ಬೀದಿಯ ಮಕ್ಕಳು ಕ್ರಿಕೆಟ್ ಆಡುತ್ತಾ  ಇದ್ದರು. ಆಟದ ಹುಮ್ಮಸ್ಸಿನಲ್ಲಿ ಎಲ್ಲಾದರು ಬಿದ್ದು ಕೈ-ಕಾಲು ಮುರಿದುಕೊಂಡರೆ ಕಷ್ಟ ಅಂದುಕೊಂಡು ನಾನು ಆ ಹುಡುಗರಿಗೆ  “ಹುಷಾರು ಕಣ್ರೋ.. ರಸ್ತೆ ಸರಿಯಿಲ್ಲ. ಬಿದ್ದರೆ ಏಟಾದೀತು.. ಅಲ್ಲೊಂದು ಖಾಲಿ ಸೈಟಿದೆ ನೋಡಿ. ಅಲ್ಲಿ ಆಡಿ” ಅಂದೆ. ಎಲ್ಲವೂ ಒಂದು ಕ್ಷಣ ಆಟ ನಿಲ್ಲಿಸಿದರು. ಚೆಂಡು ಹಿಡಿದಿದ್ದ ಆ ಮೂಲೆಮನೆ ಪ್ರಿಯಾಳ ಮಗ ಸಂತೋಷ ನನ್ನಕಡೆ ಕಣ್ಣು ಹಾಯಿಸಿದ. ತನ್ನೆಲ್ಲಾ ಗೆಳೆಯರ ಕಡೆಗೊಂದು ದೃಷ್ಟಿ ಬೀರಿ “ ಆಂಟಿ.. ಈ ರಸ್ತೆ ನಮಗೆ ಆಟ ಆಡಕ್ಕೆ ಸರಿಯಿಲ್ಲ ಅಂತೀರಲ್ಲಾ.. ನೀವು ಮಾತ್ರ ವಾಕಿಂಗ್ ಹೋಗೋದಕ್ಕೆ ಚೆನ್ನಾಗಿದ್ಯಾ... ನೀವು ಹುಷಾರಾಗಿ ನೋಡ್ಕೊಂಡು ನಡೀರಿ...” ಅಂತ ಮಾತಿನ ಚಾಟಿ ಬೀಸಿದ.ಆ ದುರಹಂಕಾರಿ ಸಾಫ಼ಟ್ ವೇರ್ ಅಮ್ಮನಿಗೆ ಸರಿಯಾದ ಮಗ ಅಂದುಕೊಂಡು ಏನೂ ಆಗದವಳಂತೆ ಮನೆ ಕಡೆ ಹೆಜ್ಜೆ ಹಾಕಿದೆ.

ನೀವೇನೇ ಹೇಳಿ.. ಮಕ್ಕಳು ದೇವರ ಪ್ರತಿರೂಪ.. ಅವರ ಮನಸ್ಸು ನಿಷ್ಕಲ್ಮಶ.. ಅನ್ನುವ ಮಾತಿನ ಮೇಲೆ ನನಗೆ ಇತ್ತೀಚೆಗೆ ನಂಬಿಕೆ ಹೊರಟುಹೋಗಿದೆ.ನನ್ನ ಚಿಕ್ಕಮ್ಮನ ಮಗಳು ಸುಧಾಳ ಮೂರುವರ್ಷದ ಮಗಳನ್ನು ನೋಡಬೇಕು ನೀವು. ಕಳೆದ ಶುಕ್ರವಾರ ರಜೆ ಇತ್ತಲ್ಲ ಯಾವುದೋ ಬಂದ್ ಅಂತ ಅವತ್ತು ಮನೆಯಲ್ಲಿ ಬೇಜಾರು ಅಂದುಕೊಂಡು ಅವಳ ಮನೆಗೆ ಹೋದೆ.ಈ ಪುಟ್ಟಿನೇ ಬಾಗಿಲು ತೆಗೆದಳು.ಅವಳ ತುಟಿಯ ಮೇಲೆ ಸುಳಿದ ಕುಟಿಲನಗೆಯನ್ನು ನೋಡಿ ಯಾಕೋ ಬಂದ ಗಳಿಗೆ ಸರಿಯಿಲ್ಲ ಅನಿಸಿತು. ಆದ್ರೂ ಅಂಥ ಮುದ್ದುಮಗುವನ್ನು ನೋಡಿ ಮಾತನಾಡಿಸದೇ ಇರಲು ಸಾಧ್ಯವಾಗದೇ “ಏನೇ ಪುಟ್ಟಿ ಏನ್ಮಾಡ್ತಾ ಇದ್ದೀಯಾ?” ಅಂದೆ. ತಟಕ್ಕನೆ ಉತ್ತರ ಬಂತು “ ನಿಮ್ಮಜೊತೆ ಮಾತಾಡ್ತಾ ಇದ್ದೀನಿ!” ಸುತ್ತಮುತ್ತ ನೋಡಿದೆ.ಸದ್ಯ ಯಾರೂ ಕೇಳಿಸ್ಕೊಂಡಿಲ್ಲ ಸಮಾಧಾನವಾಯ್ತು. ಸುಧಾ ಒಳಗಡೆಯಿಂದ ಬಂದವಳು ಓ.. ಬಾರೇ... ಅಂತ ಆದರ ತೋರಿಸಿದಳು.ಎಲ್ಲ ಸಮಾಚಾರ ಮಾತಾಡಿದ್ದಾಯ್ತು.ಸುಧಾ ಕಾಫಿ ತರಲು ಅಡಿಗೆಮನೆಗೆ ಹೋದಳು. ನಾನು ಚಿಂಟೂ ಟಿ.ವಿ ನೋಡುತ್ತಿದ್ದ ಆ ಮಗುವಿಗೆ  “ಏನೇ ಸುಬ್ಬಿಎಷ್ಟನೇ ಕ್ಲಾಸು” ಅಂದೆ. ಎಲ್ ಕೆಜಿ.. ಅಂದವಳೇ ಮಾಕ್ಸ್ ಚಾನೆಲ್ ಹಾಕಿದಳು. ಅದೇನೋ “ಮೈಮೇಲೆ ಇರುವೆ ಬಿಟ್ಟುಕೊಂಡರಂತೆ” ಅನ್ನೋ ಗಾದೆ ಥರ ನಾನು ಸುಮ್ಮನಿರಲಾರದೇ “ಸ್ಕೂಲಿಗೆ ಹೇಗೆ ಹೋಗ್ತೀಯಾ?” ಅಂದೆ.ನನ್ನನ್ನೊಮ್ಮೆ ಗುರ್ರಂತ ನೋಡಿ ಸೋಫಾದಿಂದ ಛಂಗನೆ ನೆಗೆದು “ನೋಡಿ... ಹೀಗೆ ನಡಕೊಂಡು ಹೋಗ್ತೀನಿ.... ನಡಕೊಂಡು ಬರ್ತೀನಿ ..” ಅಂದವಳೇ ಇಪ್ಪತ್ತು ಹೆಜ್ಜೆ ಗೇಟಿನವರೆಗೆ ಹೋಗಿ ಶಿಸ್ತಾಗಿ ವಾಪಸ್ ಬಂದು ಕುಳಿತಳು. ಈ ಸಾರಿ ಮರ್ಯಾದೆ ಹೋಯ್ತು. ಸುಧಾ ಕಾಫಿ ತೆಗೆದುಕೊಂಡು ಬಂದವಳು ಕಿಸಕ್ ಅಂತ ನಕ್ಕು “ ತುಂಬಾ ಚೂಟಿ ಕಣೇ... ಟೀಚರ್ಸ್ ಎಲ್ಲ ತುಂಬಾ ಹೋಪ್ಸ್ ಇಟ್ಟುಕೊಂಡಿದ್ದಾರೆ ಇವಳ ಬಗ್ಗೆ” ಅಂದಳು. ಹೂಂ... ಹೋಪ್ಸ್ ಇಟ್ಟುಕೊಳ್ಳಬೇಕಾದ್ದೇ ಈ ಪಟಾಕಿಯ ಮೇಲೆ ಅಂದುಕೊಂಡು ದೇಶಾವರಿ ನಕ್ಕು ಸುಮ್ಮನಾದೆ. ಇವಳಾದರೂ ವಾಸಿ, ಕಳೆದ ವಾರ ಪಕ್ಕದ ಬೀದಿಯಲ್ಲಿ ಕಟ್ಟಿರೋ ಹೊಸಮನೆಯ ಗೃಹಪ್ರವೇಶಕ್ಕೆ  ನಾನು, ಮುಂದುಗಡೆ ಮನೆಯ ವಾಣಿ -ಅವಳ ಮಗ ನಿಪುಣ್ ಹೋಗಿದ್ದೆವು. ತುಂಬಾ ಜನ ಬಂದಿದ್ದರು. ಅಲ್ಲೊಬ್ಬರು ತಮ್ಮ ಒಂದು ವರ್ಷದ ಮಗುವನ್ನು ಎತ್ತಿಕೊಂಡು ಕುಳಿತಿದ್ದರು. ಆ ಮಗುವಿಗೆ ಗಲ್ಲ, ಗದ್ದ, ಹಣೆ, ಕೈ,ಪಾದ  ಹೀಗೆ ದೇಹದ  ಮೇಲೆಲ್ಲ ಕಪ್ಪುಕಾಡಿಗೆಯ ಬೊಟ್ಟುಗಳನ್ನಿಟ್ಟಿದ್ದರು.ಮಗುವಿನ ಹಾಲುಬಿಳುಪು ಮೈಯಲ್ಲಿ ಈ ದೃಷ್ಟಿಬೊಟ್ಟುಗಳು ಕಣ್ಣಿಗೆ ರಾಚುತ್ತಿದ್ದವು. ನಿಪುಣ್ ಆ ಮಗುವನ್ನು ಅರೆಕ್ಷಣ ನೋಡಿದವನೇ ಜೋರಾಗಿ “ಅಮ್ಮ ಮಗು ನಮ್ಮ ಟಾಮಿನಾಯಿಯ ಥರಾನೇ ಇದೆ ಅಲ್ವಾ?ಬಿಳಿ ಮೈ ಕಪ್ಪು ಚುಕ್ಕೆ!” ಅನ್ನೋದೇ. ಅಯ್ಯೋ! ನಮಗಂತೂ ತಗ್ಗಿಸಿದ ತಲೆ ಮೇಲೆತ್ತಲಾಗಲಿಲ್ಲ.

ಹಿಂದೆ ಮಹಾಭಾರತದ ಅಭಿಮನ್ಯುವು ತಾಯಿ ಸುಭದ್ರೆಯ ಗರ್ಭದಲ್ಲಿರುವಾಗಲೇ ಶಸ್ತ್ರವಿದ್ಯೆಯ ಮಂತ್ರಗಳನ್ನು ಅರಗಿಸಿಕೊಂಡಿದ್ದನು ಎಂದು ಓದಿದ ನೆನಪು. ಗರ್ಭಿಣಿ ಹೆಂಗಸರು ಮನಸ್ಸಿಗೆ ಹಿತಕರವಾದ ವಾತಾವರಣದಲ್ಲಿದ್ದರೆ ಹುಟ್ಟುವ ಮಗುವಿನ ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂಬುದು ವೈಜ್ಞಾನಿಕವಾಗಿಯೇ ನಿರೂಪಿತವಾಗಿದೆ. ಹಾಗೇ ಈಗಿನ ಮಕ್ಕಳು ತಾಯಿಯ ಗರ್ಭದಲ್ಲಿರುವಾಗಲೇ ಹೊರಪ್ರಪಂಚದ ಮಾತುಕತೆಗಳನ್ನು ಕೇಳಿಸಿಕೊಂಡು ಜೀರ್ಣಿಸಿಕೊಂಡಿರುತ್ತಾರೆ. ಹುಟ್ಟಿ ಮಾತು ಬರುತ್ತಿದ್ದಂತೆಯೇ ಚುರುಕು ಉತ್ತರಗಳನ್ನು ನಿರಾಯಾಸವಾಗಿ ನೀಡುತ್ತಾರೆ ಅನ್ನುವುದು ನನ್ನ ಭಾವನೆ. ನನ್ನ ಗೆಳತಿ ರೂಪಾಳ ಮಗಳು ನಾಲ್ಕುವರ್ಷದ ಅದಿತಿ ಇದ್ದಾಳೆ ನೋಡಿ . ಅವಳನ್ನು ಕಂಡರೆ ಒಂಥರಾ ಭಯಮಿಶ್ರಿತ ಗೌರವ ನನಗೆ.ಒಮ್ಮೆ ನಾನು-ರೂಪಾ ಗಾಂಧಿಬಜಾರಿನಲ್ಲಿ ಗಣೇಶಹಬ್ಬಕ್ಕೆಶಾಪಿಂಗ್ ಮುಗಿಸಿ ಮನೆ ಕಡೆ ಹೋಗ್ತಾ ಇದ್ದೆವು. ನಮ್ಮ ಜೊತೆ ನಡೆದು ಬಳಲಿದ್ದ ಈ ಪುಟಾಣಿ ಅಮ್ಮಾ... ಎತ್ಕೋ ...ಕಾಲುನೋವು.. ಹೊಟ್ಟೆನೋವು... ಅಂತೆಲ್ಲಾ ಪಿರಿಪಿರಿ ಶುರುಮಾಡಿದಳು. ಅಂಗಡಿಗಳನ್ನು ಸುತ್ತಿ ಸುಸ್ತಾಗಿದ್ದ ನಮಗೆ ಕೈಯಲ್ಲಿ ಸಾಮಾನಿನ ಚೀಲಗಳು ಬೇರೆ. ಎಷ್ಟು ಸಮಾಧಾನ ಹೇಳಿದರೂ ಇವಳು ಕೇಳುತ್ತಿಲ್ಲ. ರೂಪಾ ರೇಗಿ “ ನೋಡು ನೀನು ಹೀಗೆ ಹಠ ಮಾಡ್ತಾ ಇದ್ದರೆ ಅಲ್ಲಿ ಮೂಲೆಯಲ್ಲಿ ನಿಂತಿದ್ದಾನಲ್ಲ ಅವನಿಗೆ ನಿನ್ನ ಕೊಟ್ಬಿಡ್ತೀನಿ... ಸುಮ್ನೆ ನಡಿ” ಅಂದಳು. ಆ ಮೂಲೆಯಲ್ಲಿ ನಿಂತಿದ್ದ  ವಯಸ್ಸಾದ,ಕೊಳಕುಬಟ್ಟೆಯ, ಆ ರೋಗಿಷ್ಟ ಮುದುಕನನ್ನು ಎರಡು ಕ್ಷಣ ದುರುಗುಟ್ಟಿ ನೋಡಿದ ಅದಿತಿ “ ಏ... ಹ..ಹ... ಅವಂಗೇ ನಡೆಯಕಾಗಲ್ಲ.... ನೀನು ಕೊಟ್ರೂ  ನನ್ನ ಅವನು ತಗೊಳೋದೇ ಇಲ್ಲ...ಅಮ್ಮ ನಿಂಗೆ ಅಷ್ಟೂ ಗೊತ್ತಾಗಲ್ಲ... ”ಅಂದಾಗ  ನಾವಿಬ್ಬರೂ ಮುಖ ಮುಖ ನೋಡಿಕೊಂಡು ಮುಂದೆ ನಡೆದೆವು.

ಮಕ್ಕಳ ಈ ಅತಿಬುದ್ಧಿವಂತಿಕೆ ಇತ್ತೀಚಿನ ಕೆಲವರ್ಷಗಳ ಬೆಳವಣಿಗೆ. ಹಿಂದೆ ಮಕ್ಕಳು ಮುಗ್ಧತೆಯ ಪ್ರತಿರೂಪವೇ ಆಗಿದ್ದರು. ಇಲ್ಲದಿದ್ದರೆ ಅತ್ತರೆ ಅಳಲವ್ವ ಈ ಕೂಸು ನನಗಿರಲಿ ..ಕೆಟ್ಟರೆ ಕೆಡಲಿ ಮನೆಗೆಲಸ ....,  ಕೂಸು ಕಂದವ್ವ ಒಳಹೊರಗೆ ಆಡಿದರ ಬೀಸಣಿಗೆ ಗಾಳೀ ಸುಳಿದಾವ..... ಎಂಬ ಜನಪದಗೀತೆಗಳು  ಸೃಷ್ಟಿಯಾಗುತ್ತಿರಲಿಲ್ಲ. ಈಗಿನ ಮಕ್ಕಳು ಬೀಸಣಿಗೆಯಲ್ಲ , ನಾಲಿಗೆಯೆಂಬ ಚಾವಟಿಗೆಯನ್ನು ಎಲ್ಲೆಂದರಲ್ಲಿ ಬೀಸುತ್ತಿದ್ದರೆ ಅದರ ಏಟು ತಿಂದವರಿಗೇ ಗೊತ್ತು ಅದರ ರುಚಿ. ಆಡುವಂತಿಲ್ಲ... ಅನುಭವಿಸುವಂತಿಲ್ಲ... ಪಾಪ ಚಿಕ್ಕಮಕ್ಕಳು ಅವುಗಳಿಗೇನು ಗೊತ್ತಾಗತ್ತೆ ಅಲ್ವೇ!.  ತಮ್ಮ ಮನೆಯಲ್ಲಿ ಪಾಯಸವನ್ನು ಕಣ್ಣೆತ್ತಿ ನೋಡದವು ಪರರ ಮನೆಗೆ ಹೋದಾಗ ಬಟ್ಟಲು ತುಂಬಾ ಕುಡಿದು “ಅವನು ಪಾಯಸ ತಿನ್ನಲ್ಲ” ಎನ್ನುವ ನಮಗೆ ಮಂಗಳಾರತಿ ಮಾಡುತ್ತವೆ. ಆ ಮನೆಯವರ ಬಗ್ಗೆ ಎಂದೋ ಆಡಿದ ಕುಹಕದ ಮಾತನ್ನು ಅಚ್ಚುಕಟ್ಟಾಗಿ ಅವರ ಮುಂದೆ ಒಪ್ಪಿಸಿ ನಾವು ಆಜನ್ಮ ವೈರಿಗಳಾಗುವಂತೆ ಮಾಡುತ್ತವೆ. ನನ್ನ ತಂಗಿಯ ಮಗನೊಮ್ಮೆ ತೋಳಿಲ್ಲದ ರವಿಕೆ ತೊಟ್ಟು ಬಂದ ನನ್ನ ಗೆಳತಿ ಮನೆಗೆ ಕಾಲಿಟ್ಟೊಡನೆ “ಏ.. ಆಂಟಿ ನೋಡಮ್ಮಾ... ನೀ ಮೊನ್ನೆ ಹೇಳ್ತಾ ಇದ್ಯಲ್ಲ... ಮೈ ತೋರಿಸಿಕೊಂಡು ಓಡಾಡ್ತಾರೆ ಅಂತ ... ಇವತ್ತು ಬ್ಲೌಸೇ ಹಾಕಿಲ್ಲಾ... ” ಎಂಬ ಅಣಿಮುತ್ತು ಉದುರಿಸಿ ನಮ್ಮ ಗೆಳೆತನಕ್ಕೆ ಮಂಗಳ ಹಾಡಿದ್ದ . ಇನ್ನೊಮ್ಮೆ ನನ್ನ ಜೀವದ ಗೆಳತಿ ಕವಿತಾ ಮನೆಗೆ ಬಂದಿದ್ದಳು. ಧಡೂತಿದೇಹದ ಆಕೆ ಮನೆಗೆ ಬಂದಾಗಿನಿಂದ ಈ ಮಹಾಶಯ ಅವಳನ್ನೇ ಗಮನಿಸುತ್ತಿದ್ದ. ನಾವು ಅದೂ ಇದೂ ಮಾತನಾಡುತ್ತಿರಬೇಕಾದರೆ ಇವನು “ಆಂಟಿ ನಿಮ್ಮ ಕಣ್ಣೆಲ್ಲಿದೆ? ನಾನು ನಿಮಗೆ ಕಾಣಿಸ್ತಾ ಇದೀನಾ?” ಅಂತ ಮಾತಿನ ಬಾಣ ಬಿಟ್ಟ. ಪಾಪ.. ಕವಿತಾಗೆ..ಒಂಥರಾ ಆಯಿತು. ನಿಜ ಕವಿತಾಳ ಮುಖದಲ್ಲಿ ಉಬ್ಬಿದ ಪೂರಿಯಂತಹ ಗಲ್ಲಗಳ ,ಏಲಕ್ಕಿ ಬಾಳೆಹಣ್ಣಿನಂತಹಾ ಮೂಗಿನ  ಹಿಂದೆ ಕಣ್ಣುಗಳು ಅಡಗಿವೆ. ಹಾಗಂತ ಈ ಕಿಲಾಡಿಗೆ ದೊಡ್ಡವರೆಂದರೆ ಗೌರವ ಬೇಡವೇ? ನನಗಂತೂ ಅವನನ್ನು ಮಚ್ಚಟೆಯಾಗಿ ಬೆಳೆಸಿದ ನನ್ನ ತಂಗಿಯ ಮೇಲೆ  ಬ್ರಹ್ಮಾಂಡದಂಥ ಸಿಟ್ಟು ಬಂದಿತ್ತು.

ನಮ್ಮಿಂದಲೇ ಈ ಜಗತ್ತಿಗೆ ಬರುವ , ನಾವೇ ಕೈಹಿಡಿದು ನಡೆಯಲು ಕಲಿಸಿದ ನಮ್ಮ ಕರುಳಕುಡಿಗಳು ನಮ್ಮಿಂದಲೇ ಭಾಷೆಯನ್ನು ಕಲಿತು, ನಮ್ಮ ಆರೈಕೆಯಿಂದಲೇ ರಕ್ತ-ಮಾಂಸಗಳನ್ನು ವರ್ಧಿಸಿಕೊಂಡು , ಸ್ವಲ್ಪ ತಿಳುವಳಿಕೆ ಬರುತ್ತಿದ್ದಂತೆಯೇ ನಮ್ಮನ್ನೇ ಕೂಪಮಂಡೂಕಗಳೆಂದು ಜರಿಯುವುದು ಸೋಜಿಗವೇ ಸರಿ. ಮೂರು -ನಾಲ್ಕು ವರ್ಷದವರೆಗೆ ಕಿವಿಗೆ ಹಿತವಾಗುವ ಮಕ್ಕಳ ವಾಗ್ಬಾಣಗಳು ಕಾಲಕಳೆದಂತೆ ಇರಿಯಲಾರಂಭಿಸುತ್ತವೆ. ಕೆಲವೊಮ್ಮೆ ಜೀವನದ ಸತ್ಯಗಳನ್ನು ತೋರಿಸುತ್ತವೆ. ನಾನೊಮ್ಮೆ ಸಹೋದ್ಯೋಗಿ ಲತಾಳ ಮನೆಗೆ ಹೋಗಿದ್ದೆ. ಆಕೆ ಅವಳ ಬಿಡುವಿಲ್ಲದ ದಿನಚರಿಯನ್ನೆಲ್ಲ ವರ್ಣಿಸಿ “ನೋಡೇ..ಹೊರಗೆ ದುಡಿಯುವುದಲ್ಲದೆ ಮನೆಯಲ್ಲಿ ಅತ್ತೆ-ಮಾವ, ಗಂಡ-ಮಕ್ಕಳಿಗೆ ಮೂರು ಹೊತ್ತಿಗೂ ಥರಾವರಿ ಅಡುಗೆ ಮಾಡಿ ಬಡಿಸ್ತೀನಿ.ಕೆಲಸದವಳನ್ನೂ ಇಟ್ಟುಕೊಳ್ಳದೇ ಎಲ್ಲ ಮನೆಕೆಲಸ ಮಾಡ್ತೀನಿ. ಅಲ್ಲದೇ ಈ ಮಕ್ಕಳ ಸ್ಕೂಲು, ಟ್ಯೂಶನ್, ಕ್ಲಾಸುಗಳು... ರಾತ್ರಿಯಾಗುವಷ್ಟರಲ್ಲಿ ಎಂಥ ಸುಸ್ತು ಗೊತ್ತಾ? ಆದ್ರೆ ಒಬ್ಬರಾದರೂ ನನ್ನ ಸಹಾಯಕ್ಕೆ ಬರಲ್ಲ ನೋಡು... ಅಂದಳು. ಮಧ್ಯೆ ಬಾಯಿ ಹಾಕಿದ ಹನ್ನೆರಡರ ಮಗಳು ನಿಧಿ “ ಏನಮ್ಮಾ... ಹೀಗೆಲ್ಲಾ ಒಬ್ಬಳೇ ಮಾಡು ಅಂತ ನಾವೆಲ್ಲಾ ನಿನಗೆ ಹೇಳಿದ್ದೀವಾ?ಯಾರನ್ನೂ ಹತ್ತಿರಕ್ಕೆ ಸೇರಿಸದೇ ನೀನೇ ಮಾಡ್ತೀಯಾ... ಆಮೇಲೆ ನೀನೇ ಅಳ್ತೀಯಲ್ಲಾ... ಸರೀನಾ ಇದು ? ಅನ್ನೋದೇ!!. ಅರೆ! ಹೌದಲ್ಲ ಎಂಥ ಸತ್ಯ ಇದೆಯಲ್ಲ ನಿಧಿಯ ಮಾತಿನಲ್ಲಿ ಅನಿಸಿತು ನನಗೆ. ನಮ್ಮ ಕೈಲಾದಷ್ಟೇ ಕೆಲಸ ಮಾಡಬೇಕು. ಜಗತ್ತನ್ನು ಮೆಚ್ಚಿಸಲು ಹೋಗಿ ಸುಸ್ತಾಗಿ ಅಳುವ ಅವಶ್ಯಕತೆ ಏನಿದೆ ಅಲ್ಲವೇ? ಈ ಮಾತಿಗೇನೂ ತಲೆದೂಗಬಹುದು. ಆದರೆ ಯೌವನದಲ್ಲೇ ಗಂಡನನ್ನು ಕಳಕೊಂಡ ಗಿರಿಜಳ ಮಗಳಾಡಿದ ಮಾತು ಇಷ್ಟು ವರ್ಷಗಳಾದರೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತದೆ. ಒಮ್ಮೆ ಆಕೆ ಗಂಡನ ಅನಾರೋಗ್ಯ, ನಡುವೆ ಹುಟ್ಟಿದ ಮಗಳು, ಆರ್ಥಿಕ ಸಂಕಷ್ಟಗಳು, ಸಾಂಸಾರಿಕ ತಾಪತ್ರಯಗಳು,  ಇತ್ಯಾದಿಗಳನ್ನೆಲ್ಲ ಹೇಳಿಕೊಂಡು ಕಣ್ಣೀರು ಹಾಕುತ್ತಿದ್ದಳು. ಅಲ್ಲೇ ಇದ್ದ ಅವಳ ಹದಿನಾರರ ಮಗಳು “ ಏನಮ್ಮಾ.. ನನ್ನ ಹುಟ್ಟಿಸು ಅಂತ ನಾನೇನು ನಿನ್ನ ಬೇಡಿಕೊಂಡೆನಾ?.. ಅಷ್ಟು ಕಷ್ಟಗಳಿದ್ದರೆ ಮಗು ಹುಟ್ಟಿಸಬಾರದಾಗಿತ್ತು.ಮಾಡೋದೆಲ್ಲ ಮಾಡಿ ಈಗ ಅಳೋದು ನೋಡು !” ಎಂಬ ಮಾತಿನೇಟು ಕೊಟ್ಟಳು. ಉತ್ತರವಿಲ್ಲದ ಈ ಪ್ರಶ್ನೆಯನ್ನು, ಒಂಟಿಯಾಗಿ ಬದುಕುತ್ತಿರುವ ಗಿರಿಜಳನ್ನೂ ನೆನೆದರೆ ನನ್ನ ಹೃದಯ ಸ್ತಬ್ಧವಾಗುತ್ತದೆ. ಕಣ್ಣು ಮಂಜಾಗುತ್ತದೆ.

ನಮ್ಮ ಕೂಸುಗಳು ನಮ್ಮದೇ ದೇಹದ ಭಾಗಗಳು. ನಮ್ಮ ವಿಚಾರಗಳ ಪ್ರತಿಬಿಂಬಗಳು. ಮಕ್ಕಳು ದೊಡ್ಡವರ ನಡವಳಿಕೆಗಳನ್ನು, ನಂಬಿಕೆಗಳನ್ನು ಅನುಸರಿಸುತ್ತವೆಯೇ ವಿನ: ಅವರ ಬುದ್ಧಿಮಾತುಗಳನ್ನಲ್ಲ.ನಮ್ಮ ಪ್ರಬುದ್ಧ ಕ್ರಿಯೆಗಳಿಂದ ಬಾಲ್ಯದಿಂದಲೇ ಅವರಲ್ಲಿ ಹಿರಿಯರ ಬಗ್ಗೆ ಗೌರವ, ಕುಟುಂಬದ ಬಗ್ಗೆ ಹೆಮ್ಮೆ, ಕಳಕಳಿಗಳು ಬೆಳೆಯುವಂತೆ ಮಾಡಿದರೆ ಈ ವಾಕ್ ಶರಪಂಜರದಿಂದ ತಕ್ಕಮಟ್ಟಿಗೆ ಪಾರಾಗಬಹುದು ,ಅನ್ಯರನ್ನು ರಕ್ಷಿಸಬಹುದು . ಹಾಗೊಂದು ವೇಳೆ ಪರಿಸರದ ಪ್ರಭಾವದಿಂದಲೋ ಅಥವಾ ಹುಟ್ಟುಸ್ವಭಾವದಿಂದಲೋ ಬಿರುನುಡಿಗಳನ್ನು ಆಡಲಾರಂಭಿಸಿದಾಗ, ಆಗಾಗ ಎಚ್ಚರಿಕೆ ಕೊಟ್ಟು, ತಿಳಿಹೇಳುತ್ತಿದ್ದರೆ, ಸಕಾಲದಲ್ಲಿ ಮೃದುವಾಗಿ ತಿದ್ದಿದರೆ ನಮ್ಮ ಕಂದ ಸಮಾಜಕ್ಕೊಂದು ಆಸ್ತಿಯಾಗಬಹುದು. 

Thursday, 10 December 2015

ವಿದ್ಯಾರ್ಹತೆ - ವೃತ್ತಿ- ಸಂಪಾದನೆ


“ಅಲ್ಪಕಾಲದಲ್ಲಿ ಅತ್ಯಧಿಕ ಧನಸಂಪಾದನೆ ಮಾಡಲು, ವಿದೇಶಕ್ಕೆ ಹೋಗಲು ಸಾಧ್ಯವಿರುವ ವೃತ್ತಿ ಯಾವುದು? ಅದಕ್ಕೆ ಬೇಕಾದ ವಿದ್ಯಾರ್ಹತೆ ಯಾವುದು?”
ಎಂದು ಯುದ್ಧರಂಗದಲ್ಲಿ ಅರ್ಜುನನು ಶ್ರೀಕೃಷ್ಣನನ್ನು  ಪ್ರಶ್ನಿಸಿದಂತೆ, ಮಹಾಭಾರತದಲ್ಲಿ ಯಕ್ಷನು ಧರ್ಮರಾಜನನ್ನು ಪ್ರಶ್ನಿಸಿದಂತೆ , ಹತ್ತನೇ ತರಗತಿಯ ಆದಿತ್ಯನು ನನ್ನನ್ನು ಪ್ರಶ್ನಿಸಿದನು.ಪರಮ ಜ್ಞಾನಿಗಳಾದ ಶ್ರೀಕೃಷ್ಣ -ಧರ್ಮರಾಜರೆಲ್ಲಿ? ಕಂಠಶೋಷಣೆಯಿಂದ ಹೊಟ್ಟೆಹೊರೆಯವ ಈ ಶಿಕ್ಷಕಿಯೆಲ್ಲಿ? ನನ್ನ ನಾಲಿಗೆ ಬಡಬಡಿಸಿತು- “ಭಾರತವೆಂಬ ಪುಣ್ಯಭೂಮಿಯಲ್ಲಿ ಈ ದಿನಗಳಲ್ಲಿ ಸಾಫ಼ಟ್ ವೇರ್ ಇಂಜನಿಯರ್ ಎಂಬ ವೃತ್ತಿಯಿದೆ.ಅದಕ್ಕಾಗಿ ಕಂಪ್ಯೂಟರ್ ಸೈನ್ಸ್ಇಂಜನಿಯರಿಂಗ್ ಎಂಬ ಡಿಗ್ರಿಯ ಅವಶ್ಯಕತೆಯಿದೆ. ಅದನ್ನು ಕಡಿಮೆ ಖರ್ಚಿನಲ್ಲಿ ಓದಲು ಶಾಲೆ ಮತ್ತು ಕೋಚಿಂಗ್ ಸೆಂಟರ್ ನಲ್ಲಿ ಕಠಿಣ ಪರಿಶ್ರಮದ ಅಗತ್ಯವೂ ಇದೆ .”
ಡಿಸೆಂಬರ್ ಬಂತೆಂದರೆ ಹತ್ತನೇ ತರಗತಿಯ ಮಕ್ಕಳನ್ನು , ಅವರ ಪಾಲಕರನ್ನು ಮುಂದೇನು? ಎಂಬ ಪ್ರಶ್ನೆ ಬಾಧಿಸಲಾರಂಭಿಸುತ್ತದೆ. ಕೆಲ ದಶಕಗಳ ಹಿಂದೆ ಇದೊಂದು ಸಮಸ್ಯೆಯೇ ಆಗಿರಲಿಲ್ಲ. ಮಕ್ಕಳ ಅಂಕಗಳ ಬಗ್ಗೆ ,ಭವಿಷ್ಯದ ಬಗ್ಗೆ ಪಾಲಕರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.ಓದುವ ಹಂಬಲವಿರುವವರು-ಆರ್ಥಿಕ ಶಕ್ತಿ ಇರುವವರು ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳಿಗೆ ಅನುಸಾರವಾಗಿ ಸೈನ್ಸ್/ಕಾಮರ್ಸ್/ಆರ್ಟ್ಸ್/ಡಿಪ್ಲೊಮಾ ಓದು, ಇತರರು- ಹುಡುಗರಾದರೆ ಪುರೋಹಿತಿಕೆ, ವ್ಯವಸಾಯ,ವ್ಯಾಪಾರ, ಡ್ರೈವಿಂಗ್ ಕಲಿತು ಪೇಟೆಗೆ ಜೀಪು- ದಿನಕ್ಕೆ ೧೦ ಟ್ರಿಪ್.....ಹುಡುಗಿಯರಾದರೆ ಹೊಲಿಗೆ,ಟೈಪಿಂಗ್, ...೨ ವರ್ಷದಲ್ಲಿ ಮದುವೆ... ಹೀಗೆ ಜೀವನ ಅತಿ ಸರಳವಾಗಿತ್ತು.  ಆದರೆ ಈಗ ಕಾಲ ಬದಲಾಗಿದೆ.ಮೌಲ್ಯಗಳು ಬದಲಾಗಿವೆ. ಎಲ್ಲರಿಗೂ ಮಕ್ಕಳು ಪಿ.ಯು.ಸಿಯಲ್ಲಿ ವಿಜ್ಞಾನವನ್ನೇ ಓದಲಿ. ಡಾಕ್ಟರ್/ಇಂಜನಿಯರ್ ಗಳಾಗಿ ಅತಿ ಹೆಚ್ಚು ಸಂಪಾದಿಸಲಿ,ವಿದೇಶಕ್ಕೆ ಹೋಗಲಿ ಎಂಬಾಸೆ. ಇದರಲ್ಲೇನೂ ತಪ್ಪಿಲ್ಲ. ಸುಖವಾಗಿ ಬದುಕಬೇಕೆನ್ನುವ ಆಸೆ ಸಹಜವೇ.  ಆದರೆ ಜನರ ಆಸೆಗಳಿಗನುಗುಣವಾಗಿ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ/ತಾಂತ್ರಿಕಶಿಕ್ಷಣವನ್ನು ಕೊಡುವ ಸಂಸ್ಥೆಗಳನ್ನು ನಮ್ಮ ಸರಕಾರಗಳು ಸ್ಥಾಪಿಸಿಲ್ಲ.  ಎಲ್ಲೆಂದರಲ್ಲಿ ಇರುವ ಖಾಸಗಿ ಕಾಲೇಜುಗಳಿಗೆ ಕೋಟಿಗಳನ್ನು ಹೊಂದಿಸುವ ಶಕ್ತಿ ನಮಗಿಲ್ಲ.ಅದಕ್ಕೇ ಮಕ್ಕಳು ೧೦ನೇ ತರಗತಿಗೆ ಬರುತ್ತಿದ್ದಂತೆ ಪಾಲಕರಗೆ ಆಕಾಶವೇ ತಲೆಯ ಮೇಲೆ ಬಿದ್ದಂತೆ ಅನಿಸುತ್ತದೆ.ಮಕ್ಕಳಿಗೆ ಉಸಿರು ಕಟ್ಟಿದಂತಾಗುತ್ತದೆ.
ಪಿ..ಯು.ಸಿ/೧೨ನೇ ತರಗತಿಯ ನಂತರದ ತಾಂತ್ರಿಕ ಶಿಕ್ಷಣಕ್ಕೆ ಇರುವ ಸರಕಾರೀ ವ್ಯವಸ್ಥೆ ದಯನೀಯವಾಗಿದೆ. ಕೇಂದ್ರಸರಕಾರದ ವಿಶೇಷ ಅನುದಾನವನ್ನು ಪಡೆಯುವ, ಉತ್ತಮ ದರ್ಜೆಯ ವ್ಯವಸ್ಥೆಗಳು,ಪರಿಣತ ಅಧ್ಯಾಪಕರಿರುವ ಇಪ್ಪತ್ತು ಎನ್.ಐ.ಟಿಗಳು ರಾಜ್ಯಕ್ಕೊಂದರಂತೆ ಇವೆ[ಕೆಲ ರಾಜ್ಯಗಳಲ್ಲಿ ಇಲ್ಲ].ಇಲ್ಲಿನ ಹತ್ತುಸಾವಿರ ಸೀಟುಗಳಿಗೆ ಹದಿಮೂರು ಲಕ್ಷ ಮಕ್ಕಳು ಪರೀಕ್ಷೆ[ಜೆ.ಇ.ಇ ಮೈನ್] ಬರೆಯುತ್ತಾರೆ.ಇವುಗಳಿಗಿಂತಲೂ ಶ್ರೇಷ್ಠವಾದ, ವಿಶ್ವದರ್ಜೆಯ ವ್ಯವಸ್ಥೆಗಳಿರುವ ಹದಿನೇಳು ಐ.ಐ.ಟಿಗಳು ದೇಶದಲ್ಲಿವೆ[ಹೆಚ್ಚಿನವು ಉತ್ತರಭಾರತದಲ್ಲಿ]. ಇಲ್ಲಿರುವ ಒಂಬತ್ತು ಸಾವಿರ ಸೀಟುಗಳಿಗೆ ಜೆ.ಇ.ಇ ಮೈನ್ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ[ ಜೆ.ಇ.ಇ ಅಡ್ವಾನ್ಸಡ್] ಬರೆಯುತ್ತಾರೆ. ಮೀಸಲಾತಿಯೆಂಬ ಗೊಂಡಾರಣ್ಯದಿಂದ ಪಾರಾಗಿ ಬಂದು ಇಲ್ಲಿ ಸೀಟು ದಕ್ಕಿಸಿಕೊಳ್ಳುವ ಪುಣ್ಯವಂತ, ಬುದ್ಧಿವಂತ ವಿದ್ಯಾರ್ಥಿಗಳು ಕಡಿಮೆ ಖರ್ಚಿನಲ್ಲಿ ಐ.ಐ.ಟಿ/ಎನ್.ಐ.ಟಿಯಲ್ಲಿ   ತಾಂತ್ರಿಕ ವಿದ್ಯಾಭ್ಯಾಸ ಮುಗಿಸಿ ಹೆಚ್ಚಿನ ಸಂಬಳದ ನೌಕರಿ ಪಡೆದು ಪಾಲಕರ ಕನಸುಗಳನ್ನು ನನಸಾಗಿಸುತ್ತಾರೆ. ಆದರೆ ಸ್ವಾಮೀ ... ಉಳಿದ ೧೨ ಲಕ್ಷದ ೮೦ ಸಾವಿರ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಅವರನ್ನು  ಬೀದಿಗೊಂದರಂತೆ ತಲೆ ಎತ್ತುತ್ತಿರುವ ಖಾಸಗಿ ಇಂಜನಿಯರಿಂಗ್ ಕಾಲೇಜುಗಳು ಕೈಬೀಸಿ ಕರೆಯುತ್ತವೆ. ಇವುಗಳಲ್ಲಿ ಕೆಲವು ಸರಕಾರೀ ಸಂಸ್ಥೆಗಳಿಗಿಂತಲೂ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡುತ್ತವೆಂದು ಖ್ಯಾತಿ ಪಡೆದಿವೆ[BITS , PES, RVCE , SRME ಇತ್ಯಾದಿ] ಆದರೆ ಅವುಗಳಿಗೆ ಸರಕಾರೀ ಅನುದಾನ ಇಲ್ಲದಿರುವುದರಿಂದ ಅದಕ್ಕೆ ತಕ್ಕನಾಗಿ ಹಣವನ್ನು ಪಾಲಕರಿಂದ ವಸೂಲಿ ಮಾಡುತ್ತವೆ.ಉಳಿದಂತೆ ಹೆಚ್ಚಿನ ಖಾಸಗೀ ಕಾಲೇಜುಗಳಲ್ಲಿ ವಿದ್ಯಾಭ್ಯಾಸದ ಮಟ್ಟ ಕಳಪೆಯಾಗಿರುತ್ತದೆ. ಇವುಗಳಲ್ಲಿ ಪ್ರವೇಶ ಪಡೆಯಲು ರಾಜ್ಯಸರಕಾರಗಳು ನಡೆಸುವ ಸಿ.ಇ.ಟಿ/ ಖಾಸಗಿಯವರ ಕಾಮೆಡ್ ಕೆ ಪರೀಕ್ಷೆಯನ್ನು ಬರೆಯಬೇಕು.ಈ ಖಾಸಗಿ ಸಂಸ್ಥೆಗಳಲ್ಲಿ ಕೆಲವು ಸೀಟುಗಳನ್ನು ಉತ್ತಮ ಅಂಕಗಳನ್ನು ಪಡೆದವರಿಗೆ ಮೀಸಲಿಟ್ಟಿದ್ದಾರಾದರೂ ಅವು ಆನೆಯ ಹೊಟ್ಟೆಗೆ  ಅರೆಕಾಸಿನ ಮಜ್ಜಿಗೆಯಂತಾಗಿವೆ. ನಮ್ಮದೊಡ್ಡಸಂಖ್ಯೆಯ ಆಕಾಂಕ್ಷಿಸಮೂಹಕ್ಕೆ ಇವು ಏನೇನೂ ಸಾಲದು. ಆದ್ದರಿಂದ ಉಳಿದೆಲ್ಲ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳು ನಿಗದಿಪಡಿಸಿದ ದೊಡ್ಡಮೊತ್ತವನ್ನು ಸಲ್ಲಿಸಿ ಇಂಜನಿಯರಿಂಗ್ ಶಿಕ್ಷಣ ಪಡೆಯುವುದು ಅನಿವಾರ್ಯ. ಇನ್ನು ವೈದ್ಯಕೀಯ ಶಿಕ್ಷಣವನ್ನು ನೋಡಿದರೆ ದೇಶದಲ್ಲಿ ಕೇವಲ  ೧೫೦ ಸರ್ಕಾರೀ ಕಾಲೇಜುಗಳಿವೆ. ಅವುಗಳ ಇಪ್ಪತ್ತೊಂದು ಸಾವಿರ ಸೀಟುಗಳಿಗೆ ಪ್ರವೇಶ ಪಡೆಯಲು  ಆರು ಲಕ್ಷ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿರುತ್ತಾರೆ. ಇನ್ನುಳಿದ ಎಲ್ಲರೂ ಖಾಸಗಿ ಕಾಲೇಜುಗಳಲ್ಲಿ ಲಕ್ಷಗಳನ್ನು ಸಲ್ಲಿಸಿ ವಿದ್ಯಾಭ್ಯಾಸ ಪಡೆಯಬೇಕು.
ಇಂಥ ವ್ಯವಸ್ಥೆಯಲ್ಲಿ ಸಹಜವಾಗಿಯೇ ಹೆಚ್ಚು ಅಂಕ ಗಳಿಸಲು ಮಕ್ಕಳ ಮೇಲೆ ಒತ್ತಡ ಇರುತ್ತದೆ. ಈ ಸರಕಾರೀ ಸೀಟುಗಳಿಗಿರುವ ಸ್ಪರ್ಧೆಯಿಂದಾಗಿ  ಪ್ರವೇಶ ಪರೀಕ್ಷೆ ಅತ್ಯಂತ ಕಠಿಣವಾಗಿರುತ್ತದೆ. ಹನ್ನೆರಡನೇ ತರಗತಿಯ/ಪಿ.ಯು.ಸಿ ಯ ನಮ್ಮ ಸರ್ಕಾರೀ ಪಠ್ಯಕ್ರಮ ಈ ಪರೀಕ್ಷೆಯನ್ನು ಭೇದಿಸಲು ಅಸಮರ್ಥವಾಗಿದೆ. ಅದಕ್ಕೆ ಮತ್ತೆ ಖಾಸಗಿ ಟ್ಯೂಶನ್ ಸೆಂಟರ್ ಗಳು ನೆರವಿಗೆ ಬರುತ್ತವೆ.  ಇಲ್ಲಿನ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿಗಳು ಬೇಕು. [ ದೀಕ್ಷಾ ಕಾಲೇಜ್, ಎಕ್ಸಲೆಂಟ್,ಆಕಾಶ್,ಫಿಟ್ ಜೀ, ರಾಜಸ್ತಾನದ ಕೋಟಾ ಇತ್ಯಾದಿ]. ಹತ್ತನೇ ತರಗತಿ ಮುಗಿಯುತ್ತಿದ್ದಂತೆಯೇ ಇಲ್ಲಿನ ತರಬೇತಿ ಆರಂಭವಾಗುತ್ತದೆ .  ದಿನಕ್ಕೆ ೨೦೦-೪೦೦ [ಫಿಸಿಕ್ಸ್, ಕೆಮಿಸ್ಟ್ರಿ, ಮಾತ್ಸ್] ಲೆಕ್ಕಗಳನ್ನು ಅತಿ ಕಡಿಮೆ ನಿಮಿಷಗಳಲ್ಲಿ ಬಿಡಿಸುವ ಕಲೆಯನ್ನು ಇಲ್ಲಿ ಕಲಿಸುತ್ತಾರೆ..  ಆದರೆ ನೆನಪಿಡಿ ...ಇಷ್ಟೊಂದು ಶ್ರಮವಹಿಸಲು ವಿದ್ಯಾರ್ಥಿಗೆ ವಿಜ್ಞಾನದಲ್ಲಿ ಆಸಕ್ತಿ ಇರಬೇಕು. ತರ್ಕಬದ್ಧವಾಗಿ ಯೋಚಿಸುವ ಬುದ್ಧಿವಂತಿಕೆ ಬೇಕು. ಇದಲ್ಲದೇ ಮನೆಗೆ ಬಂದು ಮತ್ತೆ ೫-೬ ಗಂಟೆಗಳ .ಕಾಲ ಅಧ್ಯಯನವನ್ನೂ ಮಾಡಬೇಕು .ಒಟ್ಟಾರೆ ಎರಡು ವರ್ಷ ಅಸಾಮಾನ್ಯ ತಪಸ್ಸನ್ನೇ ಆಚರಿಸಬೇಕು..ಆದರೆ ಮಕ್ಕಳೇ ಯೋಚಿಸಿ ನಿಮಗೆ ಇದನ್ನು ಭರಿಸುವ ಶಕ್ತಿ ಇದೆಯೇ ?ಸಾಮಾನ್ಯ ಬುದ್ಧಿಮತ್ತೆಯ ನಿಮಗೆ - ಕಷ್ಟಪಟ್ಟು ಹಣ ಹೊಂದಿಸಿ ಮಗು ಒಳ್ಳೆಯ ಅಂಕಗಳನ್ನು ಪಡೆಯಲಿ ಎಂದು ನಿರೀಕ್ಷಿಸುವ ಪಾಲಕರಿಂದ, ಒಳ್ಳೆಯ ಅಂಕಗಳನ್ನು ಪಡೆಯುವ ಸಹಪಾಠಿಗಳಿಂದ, ಯಶಸ್ಸನ್ನು ಮಾತ್ರ ಗೌರವಿಸುವ ನಮ್ಮ ಸಮಾಜದಿಂದ ನಿಮ್ಮ ಮೇಲೆ ಹೇರಲ್ಪಡುವ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಬಹುದೇ? ಪಾಲಕರೇ... ನಿಮ್ಮ ಮಗುವನ್ನು ಗಮನಿಸಿ .ಹತ್ತನೇ ತರಗತಿಯವರೆಗೆ ಸರಿಯಾಗಿ ಎರಡು ಗಂಟೆಗಳ ಏಕಾಗ್ರತೆಯಿಲ್ಲದ ಮಗು ಮುಂದಿನ ೨ ವರ್ಷ ೧೨ ಗಂಟೆಗಳ ಕಾಲ ಓದಲು ಸಾಧ್ಯವೇ? ಗಣಿತ- ವಿಜ್ಞಾನವೆಂದರೆ ಚಳಿಜ್ವರ ಬರುವ ನಿಮ್ಮ ಮಗು ಈ ಕಡಲಿನಲ್ಲಿ ಈಜಬಲ್ಲನೇ? ಕಷ್ಟಪಟ್ಟು ಓದಿದರೆ ಎಲ್ಲವೂ ಸಾಧ್ಯ ಎಂಬ ಮಾತಿದೆ .ಆದರೆ ಓದಲು ಆ ವಿಷಯದ ಮೇಲೆ ಆಸಕ್ತಿ ಇರಬೇಕಲ್ಲವೇ?   
  ಬಡಬಡಿಸುತ್ತಿದ್ದ ನಾಲಿಗೆಯನ್ನೂ, ಓಡುತ್ತಿದ್ದ ಮನಸ್ಸನ್ನೂ ನಿಯಂತ್ರಿಸಿ ನಾನು ಆದಿತ್ಯನಿಗೆ ಹೇಳಿದೆ “ ಮಗೂ ಈ ಪ್ರಪಂಚದಲ್ಲಿ ಭವಿಷ್ಯದಲ್ಲಿ ಯಶಸ್ಸೇ ಸಿಗಬಹುದು ಎಂದು ಖಚಿತವಾಗಿ ಹೇಳುವಂಥ ವೃತ್ತಿ ಯಾವುದೂ ಇಲ್ಲ. ಆದರೆ ಸ್ವಲ್ಪ ಸಹನೆ, ಶ್ರದ್ಧೆ ಗಳಿದ್ದರೆ ಸಾಕಷ್ಟು ಹಣ ಸಂಪಾದಿಸಬಹುದಾದ ಅನೇಕ ವೃತ್ತಿಗಳಿವೆ. ಪ್ರಾಮಾಣಿಕವಾಗಿ ದುಡಿದು ಸಂಪಾದಿಸಲು ಸಾಧ್ಯವಿರುವ ಎಲ್ಲ ವೃತ್ತಿಗಳೂ ಶ್ರೇಷ್ಠವೇ. ಆತುರಪಡಬೇಡ. ಮೋದಿಯೆಂಬ ಮೋಡಿಗಾರನಿಂದಾಗಿ ಮುಂದಿನ ವರ್ಷಗಳಲ್ಲಿ ನಮ್ಮ ದೇಶದಲ್ಲೇ ಉದ್ಯೋಗರಂಗದಲ್ಲಿ ಅಗಾಧ ಬದಲಾವಣೆಗಳಾಗುವ ನಿರೀಕ್ಷೆ ಇದೆ. ನಮ್ಮ ಬದುಕು ನಮಗೆ ಮಾತ್ರ ಸೇರಿದ್ದು. ಅನ್ಯರನ್ನು ಮೆಚ್ಚಿಸಲು ಬದುಕಬೇಡ.ನಿನ್ನ ಬುದ್ಧಿಮತ್ತೆಗೆ ಅನುಗುಣವಾಗಿ ನಿನ್ನಿಷ್ಟದ ವಿಷಯವನ್ನು ಆರಿಸಿ ಓದು.ಅಲ್ಲದೇ ಹಣವನ್ನೂ ಮೀರಿದ ಎಷ್ಟೋ ವಿಷಯಗಳು ಬದುಕಿನಲ್ಲಿವೆ... .ಧನಸಂಪತ್ತು ಖಂಡಿತವಾಗಿಯೂ ಹಿರಿದು ಆದರೆ ನೆಮ್ಮದಿಯೆಂಬ ಸಂಪತ್ತು ಎಲ್ಲಕ್ಕಿಂತ ಮಿಗಿಲು ”        


Friday, 20 November 2015

RESPECTFUL childhood

A scene from ‘Sa Re Ga Ma lil champs Kannada’ two Sundays ago --
Anchor- Oh you are so skinny. How many Idllis do you eat for breakfast?
Participant (a little girl) - One or two… [ Looks painfully at her]
Judge- Oh, one Idlly! That’s too much. Now onwards don’t eat idlies at all. Just take in the smell of Idlies. Ha! Ha!Ha! [Sarcastically]
And a big round of applause from the audience for his VALUABLE comments……
As far as we know judges for such reality shows have an authority to comment on the voice quality of the singers. But I would like to know who gave them the authority to pass degrading comments on the physical shape of the singers especially to a little girl?
Mostly a child’s physical features are decided by hereditary. Is it right to humiliate a child in public for none of his/her mistake? Is it correct to prick the tender heart which may already be crying from inside for its ugly looks? Please remember for a child the joy of success is temporary and pain of humiliation can be permanent.
In this day and age, a child is a precious commodity and there is an industry that thrives under the claim of providing a bright future, great exposure and so on. But can we allow the market to kill our child’s self-esteem, self -confidence, innocence and his/his invaluable childhood? Should we allow the apple of our eye to become an easy tool for someone’s money making scheme?
Knowingly or otherwise, most of us tend to pass comments at little ones like “you are fat /skinny/ dwarf /a coconut tree/a soda buddy / kaddi pailwan / charcoal and what not…. But just think once: what do we achieve by hurting that little soul? Can our comment change his/her body shape?
I feel children are the angels on this earth and they deserve a RESPECTFUL childhood. What do you say?

ಚೀನಾದ ನೆನಪುಗಳು

ಕೆಲ ತಿಂಗಳ ಹಿಂದೆ ಒಂದು ಭಾನುವಾರ ಕಂಪ್ಯೂಟರಿನಲ್ಲಿ ತದೇಕದೃಷ್ಟಿ ನೆಟ್ಟಿದ್ದ ನನ್ನ ಪತಿ ಇದ್ದಕ್ಕಿದ್ದಂತೆಯೇ “ನಾವು ಈ ಬೇಸಗೆ ರಜೆಯಲ್ಲಿ ಚೀನಾಗೆ ಪ್ರವಾಸ ಹೋಗೋಣವೇ” ಎಂದಾಗ ಉತ್ತರಿಸಲು ಅರೆಕ್ಷಣ ತಡವರಿಸಿದೆ. ವಿದೇಶಪ್ರವಾಸ ಎಂದರೆ ಸಿಂಗಪುರ, ದುಬೈ ಇತ್ಯಾದಿಗಳು, ಆದರೆ ಚೀನಾ ಕೂಡಾ ಪ್ರವಾಸಿತಾಣವೇ…. ? ಎನಿಸಿತು. ಸುದ್ದಿ ಕೇಳಿದ ನಮ್ಮ ಸಂಬಂಧಿಗಳೂ, ಸ್ನೇಹಿತರೂ ಕೂಡಾ ಚೀನಾಕ್ಕೆ ಯಾಕೆ ಹೋಗುತ್ತೀರಿ? ಎಂದು ಪ್ರಶ್ನಾರ್ಥಕ ನೋಟ ಬೀರಿದರು. ಏನೇ ಇರಲಿ, ನನ್ನ ಕೌಟುಂಬಿಕ ಮಿತ್ರ, ಸುಜ್ಹೋ ನಗರದಲ್ಲಿ ಡೆಲ್ಫೈ ಎಲೆಕ್ಟ್ರಾನಿಕ್ ಕಂಪನಿಯ ಉತ್ಪಾದನಾ ವಿಭಾಗದ ನಿರ್ದೇಶಕರಾಗಿರುವ ಶ್ರೀ ರವಿ ಫಡ್ಕೆಯವರ ಆಹ್ವಾನದ ಮೇರೆಗೆ ಎಪ್ರಿಲ್ ಕೊನೆಯ ವಾರದ ಚೀನಾ ಮತ್ತು ಹಾಂಕಾಂಗ್ ಪ್ರವಾಸಕ್ಕೆ ನಮ್ಮಲ್ಲಿದ್ದ ಅಲ್ಪ- ಸ್ವಲ್ಪ ಉಳಿತಾಯದ ಹಣವನ್ನು ತೊಡಗಿಸಿ ತಯಾರಿ ಆರಂಭಿಸಿಯೇ ಬಿಟ್ಟೆವು.
ಚೀನಾದ ಬಗ್ಗೆ ನನಗೆ ಮೊದಲಿನಿಂದಲೂ ಅತೀವ ಕುತೂಹಲ. ನಮ್ಮ ಭಾರತದಂತೆಯೇ ಅಗಾಧ ಜನಸಂಖ್ಯೆಯ, ಶ್ರೀಮಂತ ಪರಂಪರೆಯ ನಾಡಿನ ಇಂದಿನ ಯಶೋಗಾಥೆಯ ಬಗ್ಗೆ ತಿಳಿಯುವ ಹಂಬಲ. ಹಿಂದೆ ನಾನು ಓದಿದ ‘ಸ್ಮೋಕ್ಸ್ ಅಂಡ್ ಮಿರರ್ಸ್ – ಪಲ್ಲವಿ ಅಯ್ಯರ್’ ಹಾಗೂ ‘ಮಾವೋನ ಕೊನೆಯ ನರ್ತಕ – ಲೀ ಕುನ್ ಕ್ಸಿಂಗ್ [ಕನ್ನಡಕ್ಕೆ ಜಯಶ್ರೀ ಭಟ್]’ ಎಂಬ ಎರಡು ಅತ್ಯುತ್ತಮ ಕೃತಿಗಳಿಂದ ಅಲ್ಲಿನ ಜನಜೀವನದ ಸ್ಥೂಲ ಪರಿಚಯವಾಗಿತ್ತಾದರೂ ಈ ರೀತಿಯ ಅಭಿವೃದ್ಧಿ ಹೇಗೆ ಸಾಧ್ಯ? ಸರ್ಕಾರವೆಂಬ ವ್ಯವಸ್ಥೆ ಈ ಮಟ್ಟದಲ್ಲಿ ಜನರನ್ನು ನಿಯಂತ್ರಿಸಲು ಸಾಧ್ಯವೇ? ಇದರಲ್ಲಿ ಉತ್ಪೇಕ್ಷೆ ಎಷ್ಟು? ನೈಜತೆ ಏನು? ಇತ್ಯಾದಿ ಪ್ರಶ್ನೆಗಳು ನನ್ನನ್ನು ಕಾಡುತ್ತಿದ್ದವು. ಬೆಂಗಳೂರಿನಿಂದ ಹಾಂಕಾಂಗ್ ಮೂಲಕ ಶಾಂಘೈ ವಿಮಾನ ನಿಲ್ದಾಣದಲ್ಲಿ ಇಳಿದಾಗ ಚಿಕ್ಕ ಕಣ್ಣಿನ ಬಿಗಿ ಮುಖದ ಇಮಿಗ್ರೇಷನ್ ಅಧಿಕಾರಿಯಿಂದ ಅನುಮತಿ ಪಡೆದು ಹೊರಬಂದಾಗ ,ಆತ್ಮೀಯವಾಗಿ ನಮ್ಮನ್ನು ಸ್ವಾಗತಿಸಿದ ರವಿ ಫಡ್ಕೆಯವರಿಂದ ಪ್ರಶ್ನೆಗಳು ಸೂಕ್ತ ಉತ್ತರ ಪಡೆಯಲಾರಂಭಿಸಿದವು.
ಅಬಿವೃದ್ಧಿ , ಮೂಲಸೌಕರ್ಯಗಳ ವಿಚಾರದಲ್ಲಿ ನಮ್ಮ ದೇಶಕ್ಕೂ , ಚೀನಾಗೂ ಹೋಲಿಸಲು ಸಾಧ್ಯವೇ ಇಲ್ಲ. ಅಥವಾ ಯಾವ ದೇಶವನ್ನೂ ಇನ್ನೊಂದು ದೇಶದ ಜೊತೆ ಹೋಲಿಸಬಾರದು. ಪ್ರತಿಯೊಂದು ದೇಶವೂ ಭಿನ್ನ, ಅದರ ಜನಜೀವನ , ಸಂಸ್ಕೃತಿ, ಚರಿತ್ರೆ, ಸಮಸ್ಯೆಗಳೂ ಭಿನ್ನವಾಗಿರುತ್ತವೆ. ಆದರೆ ನಾನು ಅಲ್ಲಿ ಕಂಡ ಕೆಲ ವಿಶೇಷಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದೇ ನನ್ನ ಉದ್ದೇಶ.
ಇಲ್ಲಿ ಗಿಡವಲ್ಲ, ಮರ ನೆಡುವುದು!
ಇಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ , ಎಲ್ಲ ಕಟ್ಟಡಗಳ ಮುಂಭಾಗದಲ್ಲಿ ಎತ್ತರವಾದ ಮರಗಳು ಗಮನ ಸೆಳೆಯುತ್ತವೆ. ಹೆಚ್ಚು ಕಡಿಮೆ ಎಲ್ಲವೂ ಒಂದೇ ಎತ್ತರ, ದಪ್ಪ. ಅರೆ… ಮರಗಳೂ ಇಲ್ಲಿ ಶಿಸ್ತು ಪಾಲಿಸುತ್ತವೆಯೇ ಎಂದು ಉದ್ಗರಿಸಿದ ನನಗೆ ಸಿಕ್ಕ ಉತ್ತರ ‘ಇಲ್ಲಿ ಗಿಡವಲ್ಲ.. ಮರ ನೆಡುತ್ತಾರೆ!’ ಸಾಮಾನ್ಯವಾಗಿ ಚೀನಾದಲ್ಲಿ ಹೊಸ ರಸ್ತೆ , ಕಟ್ಟಡಗಳ ಉದ್ಘಾಟನೆಗೂ ಮುನ್ನವೇ ಪೂರ್ಣಪ್ರಮಾಣದ ಉದ್ಯಾನಗಳ ನಿರ್ಮಾಣವಾಗುತ್ತದೆ. ಸಮೀಪದ ಹಳ್ಳಿಗಳಲ್ಲಿ ಈ ಉದ್ದೇಶಕ್ಕೆಂದೇ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತದೆ. ಅವುಗಳಲ್ಲಿ ಪೂರ್ಣಪ್ರಮಾಣದಲ್ಲಿ ಬೆಳೆದ ಮರಗಳನ್ನು ಬೇರುಸಮೇತ , ಲಾರಿಗಳಲ್ಲಿ ತಂದು ಹೊಸ ಸ್ಥಳಗಳಲ್ಲಿ ಮೊದಲೇ ತೋಡಿಟ್ಟ ಆಳವಾದ ಗುಂಡಿಗಳಲ್ಲಿ ನೆಡುತ್ತಾರೆ. ಮರಕ್ಕೆ ನಾಲ್ಕೂ ಕಡೆಗಳಿಂದ ಲೋಹದ /ಬಿದಿರಿನ ಕಂಬಗಳ ಆಧಾರವನ್ನು ನಿರ್ಮಿಸುತ್ತಾರೆ. ಒಂದು ವರ್ಷದ ನಂತರ ಮರ ಬೇರು ಬಿಟ್ಟಿರುವುದನ್ನು ಖಚಿತಪಡಿಸಿಕೊಂಡು ಆಧಾರಸ್ತಂಭಗಳನ್ನು ತೆಗೆಯುತ್ತಾರೆ. ಇಂಥ ಸಾವಿರಾರು ಮರಗಳನ್ನು ರಸ್ತೆ ಗಳ ಇಕ್ಕೆಲಗಳಲ್ಲಿ, ಪ್ರೇಕ್ಷಣೀಯ ಸ್ಥಳಗಳಲ್ಲಿ ನೋಡಿ ಅಚ್ಚರಿಯಾಯಿತು.
ಮರವನ್ನು ಲಾರಿಯಲ್ಲಿ ಒಯ್ಯುವುದು
ಮರವನ್ನು ಲಾರಿಯಲ್ಲಿ ಒಯ್ಯುವುದು
ಮರ ನೆಟ್ಟ ರಸ್ತೆ
ಮರ ನೆಟ್ಟ ರಸ್ತೆ
ಸ್ವಚ್ಛತೆಯೆಂಬ ಉದ್ಯಮ
ವಿದೇಶಗಳಲ್ಲಿನ ಸ್ವಚ್ಛತೆಯ ಬಗ್ಗೆ ನಾವೆಲ್ಲಾ ಕಿವಿ ತೂತಾಗುವಷ್ಟು ಕೇಳಿರುತ್ತೇವೆ. ಈ ವಿದೇಶೀಯರೂ ನಮ್ಮಂತೆಯೇ ಹುಲುಮಾನವರಲ್ಲವೇ? ಅವರು ಅಪ್ಪಿತಪ್ಪಿಯೂ ದಾರಿಯಲ್ಲಿ ಕಸ ಹಾಕುವುದೇ ಇಲ್ಲವೇ? ಸಾರ್ವಜನಿಕ ಸ್ಥಳಗಳಲ್ಲಿ ಕಸದ ಬುಟ್ಟಿ ಸಿಗುವವರೆಗೂ ಕಸ ಕೈಯಲ್ಲಿ ಹಿಡಿದುಕೊಂಡೇ ಇರಲು ಹೇಗೆ ಸಾಧ್ಯ? ಎಂದೆಲ್ಲ ನನಗೆ ಅನೇಕ ಬಾರಿ ಅನಿಸುತ್ತಿತ್ತು. ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಸಿಕ್ಕಿತು. ಅವರೂ ನಮ್ಮಂತೆಯೇ ಕಠಿಣ ಕಾನೂನಿಗೆ ಮಾತ್ರ ಹೆದರುವ ಜನ. ಚೀನಾದಲ್ಲೂ ನಾನು ಹಣ್ಣಿನ ಸಿಪ್ಪೆ, ಖಾಲಿ ನೀರಿನ ಬಾಟಲ್, ಚಿಪ್ಸ್ ನ ಲಕೋಟೆಗಳನ್ನು,ಉರಿದ ಸಿಗರೇಟ್ ತುಂಡುಗಳನ್ನು ದಾರಿಯಲ್ಲಿ ಎಸೆಯುವವರನ್ನು, ಮಕ್ಕಳಿಗೆ ತೀರಾ ಅವಸರವಾದಾಗ ಬೀದಿ ಬದಿಯಲ್ಲಿ ಉಚ್ಚೆ ಹೊಯ್ಯಿಸುವವರನ್ನು, ಬೀದಿಯಲ್ಲಿ ಉಗುಳುವವರನ್ನು ಕಂಡೆ. [ಇವರ ಸಂಖ್ಯೆ ನಮ್ಮಲ್ಲಿಗಿಂತ ಕಡಿಮೆ ] ಆದರೆ ಇದರ ಸ್ವಚ್ಛತೆಗೆ ಉತ್ತಮ ವ್ಯವಸ್ಥೆ ಇದೆ. ದೊಡ್ಡ ಸಂಖ್ಯೆಯಲ್ಲಿ ಸ್ವಚ್ಛತಾ ಸಿಬ್ಬಂದಿಗಳು ಎಲ್ಲೆಲ್ಲಿಯೂ ಕಂಡರು. ಶುಭ್ರವಾದ ಸಮವಸ್ತ್ರ ತೊಟ್ಟ ಇವರ ಒಂದು ಕೈಯಲ್ಲಿ ತುದಿಯಲ್ಲಿ ಇಕ್ಕಳವಿರುವ ಕೋಲು ಇದೆ. ಇನ್ನೊದು ಕೈಯಲ್ಲಿ ಬಕೇಟು. [ ಚಿತ್ರ ನೋಡಿ] ಬಿಡುವಿಲ್ಲದೇ ತಮಗೆ ಗೊತ್ತುಪಡಿಸಿದ ಜಾಗದಲ್ಲಿ ಇವರು ಸುತ್ತಾಡುತ್ತ ಕಸ ಎತ್ತುತ್ತಲೇ ಇರುತ್ತಾರೆ. ಹಸಿ ಹಾಗೂ ಒಣ ಕಸವನ್ನು ತಕ್ಷಣ ವಿಂಗಡಿಸುತ್ತಾರೆ. ನಗರದ ತ್ಯಾಜ್ಯ ವಿಂಗಡನಾ ಘಟಕಗಳು ಕಸವನ್ನು 100% ಸಂಸ್ಕರಿಸುತ್ತವೆ.ಹಸಿ ಕಸದ ಗೊಬ್ಬರ ರಸ್ತೆಬದಿಯ ಹೂಗಿಡಗಳಿಗೆ ಉಪಯೋಗವಾಗುತ್ತದೆ. ಯಾಂಜ್ ಜಿ ನದಿಯನ್ನು ಜೋಪಾನವಾಗಿ ರಕ್ಷಿಸಿರುವುದರಿಂದ ನೀರಿಗೆ ಬರವಿಲ್ಲ. ಆದ್ದರಿಂದ ವಾರಕ್ಕೊಮ್ಮೆ ನಗರದ ಬೀದಿಗಳನ್ನು ತೊಳೆಯಲಾಗುತ್ತದೆ.[ಚಿತ್ರ ನೋಡಿ] . ನಗರದಲ್ಲಿ ಅಲ್ಲಲ್ಲಿ ಶೌಚಾಲಯಗಳು ಕಂಡವು. ಪ್ರೇಕ್ಷಣೀಯ ಸ್ಥಳಗಳಲ್ಲಿ 30-60 ಶೌಚಾಲಯಗಳಿವೆ. ವಿಶೇಷವೆಂದರೆ ಸಾರ್ವಜನಿಕ ಶೌಚಾಲಯಗಳಲ್ಲಿ ಹೆಚ್ಚಿನವು ನಮ್ಮ ಭಾರತೀಯ ಮಾದರಿಯ ಪಾಯಿಖಾನೆಗಳು! ನಮ್ಮ ನಗರಗಳಲ್ಲಿ ಬೀದಿ ತೊಳೆಯುವುದು ಸಾಧ್ಯವಾಗದಿರಬಹುದು.
ಆದರೆ ಈ ರೀತಿಯ ಸಶಸ್ತ್ರ ಸ್ವಚ್ಛತಾ ಸಿಬ್ಬಂದಿಗಳನ್ನು ನೇಮಿಸಿ ನಮ್ಮ ಬೀದಿಗಳನ್ನು, ಪ್ರೇಕ್ಷಣೀಯಸ್ಥಳಗಳನ್ನು ಸ್ವಚ್ಛವಾಗಿ ಇರಿಸಬಹುದಲ್ಲ ಅನಿಸಿತು. ಇದಕ್ಕೆ ದೊಡ್ಡ ಖರ್ಚೂ ಇಲ್ಲ . ಉದ್ಯೋಗ ಸೃಷ್ಟಿಯೂ ಆಯಿತು.
ರಸ್ತೆ ತೊಳೆಯುವುದು ಸಶಸ್ತ್ರ ಪೌರಕರ್ಮಚಾರಿ
ರಸ್ತೆ ತೊಳೆಯುವುದು
ರಸ್ತೆ ತೊಳೆಯುವುದು
ಸಶಸ್ತ್ರ ಪೌರಕರ್ಮಚಾರಿ
ಸಶಸ್ತ್ರ ಪೌರಕರ್ಮಚಾರಿ
ನಾರೀಶಕ್ತಿ
ಚೀನಾದಲ್ಲಿ ನನಗೆ ನಾರೀಶಕ್ತಿಯ ವಿರಾಟ್ ರೂಪದ ದರ್ಶನವಾಯಿತು. ಹೆಚ್ಚಿನ ಎಲ್ಲ ಸೇವಾ ಕ್ಷೇತ್ರದಲ್ಲಿ ಮಹಿಳೆಯರದೇ ಸಿಂಹಪಾಲು. ವಾಹನ ಚಾಲಕರು, ರಸ್ತೆ ಸುಂಕದ ವಸೂಲಿಗರು, ಪ್ರವಾಸೀ ಗೈಡ್ ಗಳು, ಪೌರಕಾರ್ಮಿಕರು, ರೈಲು, ಬಸ್ಸುಗಳ ಸಿಬ್ಬಂದಿ, ಹೋಟೇಲಿನ ಎಲ್ಲ ವಿಭಾಗಗಳ ಸಿಬ್ಬಂದಿ .. ಎಲ್ಲವೂ ಮಹಿಳೆಯರೇ! ಈ ನಗುಮೊಗದ ,ಚುರುಕು ನಡಿಗೆಯ ವನಿತೆಯರು ಹಗಲು ರಾತ್ರಿಯೆನ್ನದೇ ದುಡಿಯುತ್ತಾರೆ. ಒಮ್ಮೆ ಶಾಂಘೈ ನಿಂದ ನಾವು ಸುಜೋನಲ್ಲಿರುವ ಮನೆಗೆ ಮರಳುವಾಗ ರಾತ್ರಿ 1 ಗಂಟೆ ದಾಟಿತ್ತು. ಆ ರಾತ್ರಿಯಲ್ಲೂ ಆ ನಿರ್ಜನ ಹೆದ್ದಾರಿಯಲ್ಲಿ ಇಬ್ಬರು ಸುಂದರವಾದ ಯುವತಿಯರು ರಸ್ತೆ ಸುಂಕ ವಸೂಲಿಯಲ್ಲಿ ನಿರತರಾಗಿದ್ದ ದೃಶ್ಯ ಕಂಡು ಹೃದಯ ತುಂಬಿ ಬಂತು.ನಮ್ಮ ವಾಹನ ಚಾಲಕಿ 50ವಯಸ್ಸಿನ ತರುಣಿ! ಯೂ ಪಿಂಗ್ ಕೂಡಾ ನಮ್ಮನ್ನು 2 ಗಂಟೆಗೆ ಮನೆ ತಲುಪಿಸಿ ನಿರ್ಭಯವಾಗಿ ತನ್ನ ಮನೆಗೆ ಹೋದಳು. ಬಹುಶ: ನಮ್ಮಲ್ಲೂ ಎಲ್ಲ ಮಹಿಳೆಯರೂ ಧೈರ್ಯ ವಹಿಸಿ ರಾತ್ರಿಯಲ್ಲೂ ಓಡಾಡಲೂ ಪ್ರಾರಂಭಿಸಿದರೆ ಮಹಿಳೆಯೆಂಬ ಸಂಪನ್ಮೂಲದ ಸದ್ಬಳಕೆ ಆಗಬಹುದು.ಮೌಲ್ಯಯುತ,ನಿರ್ಭೀತ ಸಮಾಜದ ಸೃಷ್ಟಿಯಾಗಬಹುದು.
ದೇವ್ರಾ……. ಹಾಗಂದ್ರೇನು?
ದೇವರ ಅಸ್ತಿತ್ತ್ವದ ಬಗ್ಗೆ ಮನುಕುಲ ಶತಮಾನಗಳಿಂದ ಜಿಜ್ಞಾಸೆ ನಡೆಸಿದೆ, ನಡೆಸುತ್ತಲೇ ಇದೆ. ನಾವು ಭಾರತೀಯರಂತೂ ದೇವನನ್ನು ಕೋಟ್ಯಾಂತರ ರೂಪಗಳಲ್ಲಿ ಕಂಡವರು. ಒಂದರ್ಥದಲ್ಲಿ ನಮ್ಮ ಜೀವನದ ಕೇಂದ್ರಬಿಂದುವೇ ದೇವರು. ನಮ್ಮ ಪ್ರವಾಸದಲ್ಲಿ ಜನಜೀವನದಲ್ಲಿ ದೇವನೆಂಬ ಕಲ್ಪನೆಯ ಅನುಪಸ್ಥಿತಿ ನನಗೆ ಕಂಡಿತು.ಸರಕಾರದ ಕಮ್ಯುನಿಸ್ಟ್ ಚಿಂತನೆಗಳಿಂದ ಇಂದಿನ ತಲೆಮಾರು ದೇವರ ಬಗ್ಗೆ ವಿಶಿಷ್ಟ ತೀರ್ಮಾನಕ್ಕೆ ಬಂದಿದೆ. ಹಾಗೇ ಕುತೂಹಲದಿಂದ ನಮ್ಮ ಗೈಡ್ ವಾಂಗ್ ಳನ್ನು ಕೇಳಿದೆ, ನೀನು ಯಾವ ದೇವರನ್ನು ಆರಾಧಿಸುತ್ತೀಯೆ? . ತಟಕ್ಕನೆ ಉತ್ತರ ಬಂತು- ದೇವ್ರಾ……. ಆರಾಧಿಸುವುದಾ….. ಹಾಗಂದ್ರೇನು?. ನಾನು – “ಅದೇ ಬುದ್ಧ ಅಥವಾ ಬೇರೆ ಯಾವುದಾದರೂ ದೇವರನ್ನು ದಿನವೂ ಪ್ರಾರ್ಥಿಸುತ್ತೀಯಾ?” ಎಂದೆ. ಅವಳು ಅರೆಕ್ಷಣ ಯೋಚಿಸಿ, “ನೋಡಿ , ನನಗೆ ಯಾವ ದೇವ್ರೂ ಇಲ್ಲ. ಆದರೆ ಇಲ್ಲಿನ ಕೆಲವು ಮತಗಳ ತತ್ತ್ವಗಳನ್ನು ನಂಬುತ್ತೇನೆ. ನಾನು ಚಿಕ್ಕವಳಿರುವಾಗ ಕನ್ ಫ಼ಯೂಜಿಸ್ ಮತವನ್ನು ಪಾಲಿಸುತ್ತಿದ್ದೆ . ಅದು ಕುಟುಂಬವನ್ನು ಪ್ರೀತಿಸು, ಆದರ್ಶಗಳಿಗೆ ,ಜೀವನ ಮೌಲ್ಯಗಳಿಗೆ ಬೆಲೆ ಕೊಡು ಅನ್ನುತ್ತದೆ. ಈಗ ಯುವತಿಯಾಗಿದ್ದೇನೆ ಆದ್ದರಿಂದ ಟಾವಿಸಂ ಮತವನ್ನು ಪಾಲಿಸುತ್ತೇನೆ ಯಾಕೆಂದ್ರೆ ಅದು ನಿನಗೆ ಅನುಕೂಲವಾದ ಆದರ್ಶಗಳನ್ನು ಮಾತ್ರ ಪಾಲಿಸು , ಜೀವನದಲ್ಲಿ ಅದೃಷ್ಟ ಬರುತ್ತದೆ ಕಾಯುತ್ತಿರು, ಅನ್ನುತ್ತದೆ. ಇನ್ನು ವಯಸ್ಸಾದ ಮೇಲೆ ಬುದ್ಧಿಸಂ ಮತವನ್ನು ಪಾಲಿಸುತ್ತೇನೆ ಯಾಕೆಂದ್ರೆ ಅದು ಕಷ್ಟಗಳನ್ನೆಲ್ಲಾ ಸಹಿಸಿಕೋ, ಪರರಿಗೆ ಉಪಕಾರ ಮಾಡು, ಶಾಂತಿಯಿಂದಿರು ಅನ್ನುತ್ತದೆ. ನೀವೇ ಹೇಳಿ ಬುದ್ಧಿಸಂ ನ್ನು ಯೌವನದಲ್ಲಿ ಅನುಸರಿಸಲು ಸಾಧ್ಯವೇ? ಅನುಸರಿಸಿ ದುಡ್ಡು ಸಂಪಾದನೆ ಮಾಡಲು ಸಾಧ್ಯವೇ? ಅಥವಾ ಟಾವಿಸಂ ನ್ನು ಮುದುಕರಾದ ಮೇಲೆ ಹೇಗೆ ಅನುಸರಿಸಲಿ? ಅದಕ್ಕೇನೇ ಯಾವ ದಿನ ಹೇಗೆ ಬರುತ್ತದೋ ಹಾಗೆ ನನ್ನ ನಂಬಿಕೆಗಳನ್ನು ಬದಲಾಯಿಸುತ್ತೇನೆ” ಎಂದಳು. ಬಾಯಿತೆರೆದುಕೊಂಡು ಕೇಳುತ್ತಲೇ ಇದ್ದ ನಾನು ’ವಾಂಗ್ ಜಗದ್ಗುರು’ವಿಗೆ ಮನಸಾರೆ ವಂದಿಸಿದೆ!!
ಯಶಸ್ಸಿನ ಆರಾಧನೆ
ಒಂದು ಸಾಯಂಕಾಲ ನಮ್ಮ ಮಿತ್ರರೊಡನೆ ಸಮೀಪದ ಮಾರ್ಕೆಟ್ ಗೆ ಹೋದೆವು. ಅಲ್ಲಿ ರಸ್ತೆ ಬದಿಯಲ್ಲಿ ಒಂದು ಬೃಹತ್ ಗಾತ್ರದ ಟಿ.ವಿ. ಅದರಲ್ಲಿ ಜನರ ಭಾವಚಿತ್ರದೊಡನೆ ಚೀನೀ ಭಾಷೆಯಲ್ಲಿ ಅನೇಕ ವಿವರಗಳು ಪ್ರದರ್ಶಿತವಾಗುತ್ತಿದ್ದವು. ಬಹುಶ: ಎಲ್ಲೋ ಅಪರಾಧಿಗಳ ಪತ್ತೆಗೆ ಈ ಕ್ರಮ ಇರಬಹುದು ಎಂದುಕೊಂಡು ರವಿ ಫಡ್ಕೆಯವರನ್ನು ಕೇಳಿದೆ. ಅವರು ನಕ್ಕು –“ಅವರು ಅಪರಾಧಿಗಳಲ್ಲ. ಸಮಾಜದ ಯಶಸ್ವೀ ವ್ಯಕ್ತಿಗಳು. ವೈದ್ಯರು, ಶಿಕ್ಷಕರು, ಇಂಜನಿಯರ್ ಗಳು, ರೈತರು, ಸೈನಿಕರು ಹೀಗೆ ವಿಶೇಷ ಸಾಧನೆ ಮಾಡಿದ ಯಾರೇ ಇದ್ದರೂ ಅವರ ವಿವರಗಳನ್ನು ಫೋಟೋದ ಜೊತೆ ಹೀಗೆ ಪ್ರದರ್ಶಿಸುತ್ತಾರೆ. ಮಕ್ಕಳಿಗೆ ಅವರು ಸ್ಫೂರ್ತಿಯಾಗಲಿ ಎಂದು ಸರಕಾರದ ಉದ್ದೇಶ” ಎಂದರು. ಸಾಮಾನ್ಯವಾಗಿ ಇಂಥ ಯಶಸ್ವೀ ವ್ಯಕ್ತಿಗಳೇ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರು. ಚೀನಾದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುವುದಿಲ್ಲ. ಆಯಾ ರಾಜ್ಯದ ಕಮ್ಯುನಿಸ್ಟ್ ಪಾರ್ಟಿಯ ಸದಸ್ಯರೇ ತಮ್ಮ ನಾಯಕರನ್ನು ಆರಿಸುತ್ತಾರೆ. ಬುದ್ಧಿವಂತರೇ ಮತದಾನ ಮಾಡುವುದರಿಂದ ಒಳ್ಳೆಯ ವ್ಯಕ್ತಿಗಳೇ ಆಯ್ಕೆಯಾಗಿ ಬರುತ್ತಾರೆ. ಹಾಗಾದರೆ ಇಲ್ಲಿ ಭ್ರಷ್ಟಾಚಾರವೇ ಇಲ್ಲ ಅಂದುಕೊಳ್ಳಬೇಡಿ. ಚೀನಾ ಭ್ರಷ್ಟಾಚಾರದಲ್ಲೂ ನಂಬರ್ ೧. ವ್ಯಕ್ತಿ ತಾನು ಮಾಡಿಸುವ ರಸ್ತೆ, ನೀರು, ಪಾರ್ಕ್ ಇತ್ಯಾದಿ ಕೆಲಸಗಳನ್ನು ಉತ್ತಮವಾಗೇ ಮಾಡುತ್ತಾನೆ. ಇಲ್ಲದಿದ್ದರೆ ಅವನನ್ನು ಆ ಸ್ಥಾನದಿಂದ ಕಿತ್ತುಹಾಕುತ್ತಾರೆ ಎಂಬ ಭಯವಿರುತ್ತದೆ.ಆದರೆ ತನಗೆ ಬೇಕಾದವರಿಗೆ ಗುತ್ತಿಗೆ ಕೊಡುತ್ತಾನೆ. ಒಂದಷ್ಟು ಹಣ ಹೊಡೆಯುತ್ತಾನೆ ಅಷ್ಟೇ!. ಯಾಕೋ ನನಗೆ ನಮ್ಮ ಮಹಾನಗರದ ರಸ್ತೆಗಳಲ್ಲಿ ಕಾಣುವ ರಾಜಕಾರಿಣಿಗಳ, ಅವರ ಹಿಂಬಾಲಕರ ಪೋಸ್ಟರ್ ಗಳು ನೆನಪಾದವು. ಇವರೇನಾ ನಮ್ಮ ಮಕ್ಕಳಿಗೆ ನಾವು ತೋರಿಸುತ್ತಿರುವ ಆದರ್ಶವ್ಯಕ್ತಿಗಳು ? ಎನಿಸಿತು.
ನಮ್ಮ ಭಾರತೀಯತೆಯ ಒಂದು ಪ್ರಮುಖ [ಅವ]ಲಕ್ಷಣವೆಂದರೆ ಎಲ್ಲಿ ಏನೇ ನೋಡಿದರೂ, ಇದೇನ್ ಮಹಾ…? ನಮ್ಮಲ್ಲಿಲ್ಲದ್ದು ಇಲ್ಲೇನಿದೆ? ನಮ್ಮ ಪರಂಪರೆಗೆ ಸರಿಸಾಟಿ ಯಾರು? ಎಂಬ ಅನಿಸಿಕೆ. ನಿಜ.. ನಮ್ಮ ಬೇಲೂರು, ಹಳೇಬೀಡು, ತಮಿಳುನಾಡಿನ ದೇವಾಲಯಗಳ ಶಿಲ್ಪವೈಭವಕ್ಕೆ, ಮಹಾಬಲಿಪುರಂ, ಕೋನಾರ್ಕ, ಅಜಂತಾ- ಎಲ್ಲೋರಾ, ಮೌಂಟ್ ಅಬುಗಳ ಬೆರಗಿಗೆ ಸರಿಸಾಟಿ ಇನ್ನೊಂದಿಲ್ಲ.ಆದರೆ ನಮ್ಮ ಸಂಪತ್ತನ್ನು ಜೋಪಾನವಾಗಿ ಕಾಪಿಡುವಲ್ಲಿ ,ಸೂಕ್ತವಾಗಿ ಪ್ರಸ್ತುತಪಡಿಸುವಲ್ಲಿ ನಾವು ಸೋತಿದ್ದೇವೆ ಎಂಬ ಕಹಿಭಾವನೆ ಮನಸ್ಸಿನಲ್ಲಿ ಸುಳಿಯಿತು. ಇರಲಿ.. ಪ್ರಾಚೀನತೆ , ತಾಂತ್ರಿಕತೆ ಹಾಗೂ ಆಧುನಿಕತೆಯ ಅಪೂರ್ವ ಸಂಗಮವಾದ ಈ ದೇಶ ನಮ್ಮ ನಗರ ನಿರ್ಮಾತೃಗಳಿಗೂ ಮಾದರಿಯಾಗಬಲ್ಲುದು.
Birds Nest Olympic Stadium