ಮೊನ್ನೆ ಹೀಗಾಯ್ತು
ನೋಡಿ.. ಸಾಯಂಕಾಲ ನಾನು ಯೋಗ ತರಗತಿಯನ್ನು ಮುಗಿಸಿ ತರಕಾರಿ ಖರೀದಿಸಿ ಮನೆಯ ಕಡೆ ನಡಕೊಂಡು ಬರ್ತಾ
ಇದ್ದೆ. ಸ್ವಲ್ಪ ಪುರುಸೊತ್ತಿದ್ದರೆ ನಮ್ಮ ಬಡಾವಣೆಯ ರಸ್ತೆಗಳನ್ನು ಒಮ್ಮೆ ನೋಡಬೇಕು ನೀವು.. ಅಬ್ಬಾ
ಪ್ರಪಂಚದ ಎಲ್ಲಾ ಭೂಖಂಡಗಳನ್ನೂ ಇಲ್ಲೆ ಕೊರೆದಿದ್ದಾರೆ. ಎಲ್ಲಿ ಕಾಲಿಟ್ಟರೂ
ವಿವಿಧ ಆಕಾರದ ಹೊಂಡಗಳು. ಮಧ್ಯೆ ಅಲ್ಲಲ್ಲಿ ಸಪಾಟು ಜಾಗ.. ಇಂಥ ರಸ್ತೆ ಅನ್ನೋ ಮೈದಾನದಲ್ಲಿ ನಮ್ಮ
ಬೀದಿಯ ಮಕ್ಕಳು ಕ್ರಿಕೆಟ್ ಆಡುತ್ತಾ ಇದ್ದರು.
ಆಟದ ಹುಮ್ಮಸ್ಸಿನಲ್ಲಿ ಎಲ್ಲಾದರು ಬಿದ್ದು ಕೈ-ಕಾಲು ಮುರಿದುಕೊಂಡರೆ ಕಷ್ಟ ಅಂದುಕೊಂಡು ನಾನು ಆ
ಹುಡುಗರಿಗೆ “ಹುಷಾರು ಕಣ್ರೋ.. ರಸ್ತೆ
ಸರಿಯಿಲ್ಲ. ಬಿದ್ದರೆ ಏಟಾದೀತು.. ಅಲ್ಲೊಂದು ಖಾಲಿ ಸೈಟಿದೆ ನೋಡಿ. ಅಲ್ಲಿ ಆಡಿ” ಅಂದೆ. ಎಲ್ಲವೂ
ಒಂದು ಕ್ಷಣ ಆಟ ನಿಲ್ಲಿಸಿದರು. ಚೆಂಡು ಹಿಡಿದಿದ್ದ ಆ ಮೂಲೆಮನೆ ಪ್ರಿಯಾಳ ಮಗ ಸಂತೋಷ ನನ್ನಕಡೆ
ಕಣ್ಣು ಹಾಯಿಸಿದ. ತನ್ನೆಲ್ಲಾ ಗೆಳೆಯರ ಕಡೆಗೊಂದು ದೃಷ್ಟಿ ಬೀರಿ “ ಆಂಟಿ.. ಈ ರಸ್ತೆ ನಮಗೆ ಆಟ
ಆಡಕ್ಕೆ ಸರಿಯಿಲ್ಲ ಅಂತೀರಲ್ಲಾ.. ನೀವು ಮಾತ್ರ ವಾಕಿಂಗ್ ಹೋಗೋದಕ್ಕೆ ಚೆನ್ನಾಗಿದ್ಯಾ... ನೀವು
ಹುಷಾರಾಗಿ ನೋಡ್ಕೊಂಡು ನಡೀರಿ...” ಅಂತ ಮಾತಿನ ಚಾಟಿ ಬೀಸಿದ.ಆ ದುರಹಂಕಾರಿ ಸಾಫ಼ಟ್ ವೇರ್
ಅಮ್ಮನಿಗೆ ಸರಿಯಾದ ಮಗ ಅಂದುಕೊಂಡು ಏನೂ ಆಗದವಳಂತೆ ಮನೆ ಕಡೆ ಹೆಜ್ಜೆ ಹಾಕಿದೆ.
ನೀವೇನೇ ಹೇಳಿ.. ಮಕ್ಕಳು
ದೇವರ ಪ್ರತಿರೂಪ.. ಅವರ ಮನಸ್ಸು ನಿಷ್ಕಲ್ಮಶ.. ಅನ್ನುವ ಮಾತಿನ ಮೇಲೆ ನನಗೆ ಇತ್ತೀಚೆಗೆ ನಂಬಿಕೆ
ಹೊರಟುಹೋಗಿದೆ.ನನ್ನ ಚಿಕ್ಕಮ್ಮನ ಮಗಳು ಸುಧಾಳ ಮೂರುವರ್ಷದ ಮಗಳನ್ನು ನೋಡಬೇಕು ನೀವು. ಕಳೆದ
ಶುಕ್ರವಾರ ರಜೆ ಇತ್ತಲ್ಲ ಯಾವುದೋ ಬಂದ್ ಅಂತ ಅವತ್ತು ಮನೆಯಲ್ಲಿ ಬೇಜಾರು ಅಂದುಕೊಂಡು ಅವಳ ಮನೆಗೆ
ಹೋದೆ.ಈ ಪುಟ್ಟಿನೇ ಬಾಗಿಲು ತೆಗೆದಳು.ಅವಳ ತುಟಿಯ ಮೇಲೆ ಸುಳಿದ ಕುಟಿಲನಗೆಯನ್ನು ನೋಡಿ ಯಾಕೋ ಬಂದ
ಗಳಿಗೆ ಸರಿಯಿಲ್ಲ ಅನಿಸಿತು. ಆದ್ರೂ ಅಂಥ ಮುದ್ದುಮಗುವನ್ನು ನೋಡಿ ಮಾತನಾಡಿಸದೇ ಇರಲು
ಸಾಧ್ಯವಾಗದೇ “ಏನೇ ಪುಟ್ಟಿ ಏನ್ಮಾಡ್ತಾ ಇದ್ದೀಯಾ?” ಅಂದೆ. ತಟಕ್ಕನೆ ಉತ್ತರ ಬಂತು “ ನಿಮ್ಮಜೊತೆ
ಮಾತಾಡ್ತಾ ಇದ್ದೀನಿ!” ಸುತ್ತಮುತ್ತ ನೋಡಿದೆ.ಸದ್ಯ ಯಾರೂ ಕೇಳಿಸ್ಕೊಂಡಿಲ್ಲ ಸಮಾಧಾನವಾಯ್ತು.
ಸುಧಾ ಒಳಗಡೆಯಿಂದ ಬಂದವಳು ಓ.. ಬಾರೇ... ಅಂತ ಆದರ ತೋರಿಸಿದಳು.ಎಲ್ಲ ಸಮಾಚಾರ
ಮಾತಾಡಿದ್ದಾಯ್ತು.ಸುಧಾ ಕಾಫಿ ತರಲು ಅಡಿಗೆಮನೆಗೆ ಹೋದಳು. ನಾನು ಚಿಂಟೂ ಟಿ.ವಿ ನೋಡುತ್ತಿದ್ದ ಆ
ಮಗುವಿಗೆ “ಏನೇ ಸುಬ್ಬಿಎಷ್ಟನೇ ಕ್ಲಾಸು” ಅಂದೆ.
ಎಲ್ ಕೆಜಿ.. ಅಂದವಳೇ ಮಾಕ್ಸ್ ಚಾನೆಲ್ ಹಾಕಿದಳು. ಅದೇನೋ “ಮೈಮೇಲೆ ಇರುವೆ ಬಿಟ್ಟುಕೊಂಡರಂತೆ”
ಅನ್ನೋ ಗಾದೆ ಥರ ನಾನು ಸುಮ್ಮನಿರಲಾರದೇ “ಸ್ಕೂಲಿಗೆ ಹೇಗೆ ಹೋಗ್ತೀಯಾ?” ಅಂದೆ.ನನ್ನನ್ನೊಮ್ಮೆ
ಗುರ್ರಂತ ನೋಡಿ ಸೋಫಾದಿಂದ ಛಂಗನೆ ನೆಗೆದು “ನೋಡಿ... ಹೀಗೆ ನಡಕೊಂಡು ಹೋಗ್ತೀನಿ.... ನಡಕೊಂಡು
ಬರ್ತೀನಿ ..” ಅಂದವಳೇ ಇಪ್ಪತ್ತು ಹೆಜ್ಜೆ ಗೇಟಿನವರೆಗೆ ಹೋಗಿ ಶಿಸ್ತಾಗಿ ವಾಪಸ್ ಬಂದು ಕುಳಿತಳು.
ಈ ಸಾರಿ ಮರ್ಯಾದೆ ಹೋಯ್ತು. ಸುಧಾ ಕಾಫಿ ತೆಗೆದುಕೊಂಡು ಬಂದವಳು ಕಿಸಕ್ ಅಂತ ನಕ್ಕು “ ತುಂಬಾ
ಚೂಟಿ ಕಣೇ... ಟೀಚರ್ಸ್ ಎಲ್ಲ ತುಂಬಾ ಹೋಪ್ಸ್ ಇಟ್ಟುಕೊಂಡಿದ್ದಾರೆ ಇವಳ ಬಗ್ಗೆ” ಅಂದಳು. ಹೂಂ...
ಹೋಪ್ಸ್ ಇಟ್ಟುಕೊಳ್ಳಬೇಕಾದ್ದೇ ಈ ಪಟಾಕಿಯ ಮೇಲೆ ಅಂದುಕೊಂಡು ದೇಶಾವರಿ ನಕ್ಕು ಸುಮ್ಮನಾದೆ.
ಇವಳಾದರೂ ವಾಸಿ, ಕಳೆದ ವಾರ ಪಕ್ಕದ ಬೀದಿಯಲ್ಲಿ ಕಟ್ಟಿರೋ ಹೊಸಮನೆಯ ಗೃಹಪ್ರವೇಶಕ್ಕೆ ನಾನು, ಮುಂದುಗಡೆ ಮನೆಯ ವಾಣಿ -ಅವಳ ಮಗ ನಿಪುಣ್
ಹೋಗಿದ್ದೆವು. ತುಂಬಾ ಜನ ಬಂದಿದ್ದರು. ಅಲ್ಲೊಬ್ಬರು ತಮ್ಮ ಒಂದು ವರ್ಷದ ಮಗುವನ್ನು ಎತ್ತಿಕೊಂಡು
ಕುಳಿತಿದ್ದರು. ಆ ಮಗುವಿಗೆ ಗಲ್ಲ, ಗದ್ದ, ಹಣೆ, ಕೈ,ಪಾದ
ಹೀಗೆ ದೇಹದ ಮೇಲೆಲ್ಲ ಕಪ್ಪುಕಾಡಿಗೆಯ
ಬೊಟ್ಟುಗಳನ್ನಿಟ್ಟಿದ್ದರು.ಮಗುವಿನ ಹಾಲುಬಿಳುಪು ಮೈಯಲ್ಲಿ ಈ ದೃಷ್ಟಿಬೊಟ್ಟುಗಳು ಕಣ್ಣಿಗೆ
ರಾಚುತ್ತಿದ್ದವು. ನಿಪುಣ್ ಆ ಮಗುವನ್ನು ಅರೆಕ್ಷಣ ನೋಡಿದವನೇ ಜೋರಾಗಿ “ಅಮ್ಮ ಮಗು ನಮ್ಮ
ಟಾಮಿನಾಯಿಯ ಥರಾನೇ ಇದೆ ಅಲ್ವಾ?ಬಿಳಿ ಮೈ ಕಪ್ಪು ಚುಕ್ಕೆ!” ಅನ್ನೋದೇ. ಅಯ್ಯೋ! ನಮಗಂತೂ
ತಗ್ಗಿಸಿದ ತಲೆ ಮೇಲೆತ್ತಲಾಗಲಿಲ್ಲ.
ಹಿಂದೆ ಮಹಾಭಾರತದ
ಅಭಿಮನ್ಯುವು ತಾಯಿ ಸುಭದ್ರೆಯ ಗರ್ಭದಲ್ಲಿರುವಾಗಲೇ ಶಸ್ತ್ರವಿದ್ಯೆಯ ಮಂತ್ರಗಳನ್ನು
ಅರಗಿಸಿಕೊಂಡಿದ್ದನು ಎಂದು ಓದಿದ ನೆನಪು. ಗರ್ಭಿಣಿ ಹೆಂಗಸರು ಮನಸ್ಸಿಗೆ ಹಿತಕರವಾದ
ವಾತಾವರಣದಲ್ಲಿದ್ದರೆ ಹುಟ್ಟುವ ಮಗುವಿನ ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂಬುದು
ವೈಜ್ಞಾನಿಕವಾಗಿಯೇ ನಿರೂಪಿತವಾಗಿದೆ. ಹಾಗೇ ಈಗಿನ ಮಕ್ಕಳು ತಾಯಿಯ ಗರ್ಭದಲ್ಲಿರುವಾಗಲೇ ಹೊರಪ್ರಪಂಚದ
ಮಾತುಕತೆಗಳನ್ನು ಕೇಳಿಸಿಕೊಂಡು ಜೀರ್ಣಿಸಿಕೊಂಡಿರುತ್ತಾರೆ. ಹುಟ್ಟಿ ಮಾತು ಬರುತ್ತಿದ್ದಂತೆಯೇ
ಚುರುಕು ಉತ್ತರಗಳನ್ನು ನಿರಾಯಾಸವಾಗಿ ನೀಡುತ್ತಾರೆ ಅನ್ನುವುದು ನನ್ನ ಭಾವನೆ. ನನ್ನ ಗೆಳತಿ
ರೂಪಾಳ ಮಗಳು ನಾಲ್ಕುವರ್ಷದ ಅದಿತಿ ಇದ್ದಾಳೆ ನೋಡಿ . ಅವಳನ್ನು ಕಂಡರೆ ಒಂಥರಾ ಭಯಮಿಶ್ರಿತ ಗೌರವ
ನನಗೆ.ಒಮ್ಮೆ ನಾನು-ರೂಪಾ ಗಾಂಧಿಬಜಾರಿನಲ್ಲಿ ಗಣೇಶಹಬ್ಬಕ್ಕೆಶಾಪಿಂಗ್ ಮುಗಿಸಿ ಮನೆ ಕಡೆ ಹೋಗ್ತಾ
ಇದ್ದೆವು. ನಮ್ಮ ಜೊತೆ ನಡೆದು ಬಳಲಿದ್ದ ಈ ಪುಟಾಣಿ ಅಮ್ಮಾ... ಎತ್ಕೋ ...ಕಾಲುನೋವು..
ಹೊಟ್ಟೆನೋವು... ಅಂತೆಲ್ಲಾ ಪಿರಿಪಿರಿ ಶುರುಮಾಡಿದಳು. ಅಂಗಡಿಗಳನ್ನು ಸುತ್ತಿ ಸುಸ್ತಾಗಿದ್ದ
ನಮಗೆ ಕೈಯಲ್ಲಿ ಸಾಮಾನಿನ ಚೀಲಗಳು ಬೇರೆ. ಎಷ್ಟು ಸಮಾಧಾನ ಹೇಳಿದರೂ ಇವಳು ಕೇಳುತ್ತಿಲ್ಲ. ರೂಪಾ
ರೇಗಿ “ ನೋಡು ನೀನು ಹೀಗೆ ಹಠ ಮಾಡ್ತಾ ಇದ್ದರೆ ಅಲ್ಲಿ ಮೂಲೆಯಲ್ಲಿ ನಿಂತಿದ್ದಾನಲ್ಲ ಅವನಿಗೆ
ನಿನ್ನ ಕೊಟ್ಬಿಡ್ತೀನಿ... ಸುಮ್ನೆ ನಡಿ” ಅಂದಳು. ಆ ಮೂಲೆಯಲ್ಲಿ ನಿಂತಿದ್ದ ವಯಸ್ಸಾದ,ಕೊಳಕುಬಟ್ಟೆಯ, ಆ ರೋಗಿಷ್ಟ ಮುದುಕನನ್ನು
ಎರಡು ಕ್ಷಣ ದುರುಗುಟ್ಟಿ ನೋಡಿದ ಅದಿತಿ “ ಏ... ಹ..ಹ... ಅವಂಗೇ ನಡೆಯಕಾಗಲ್ಲ.... ನೀನು
ಕೊಟ್ರೂ ನನ್ನ ಅವನು ತಗೊಳೋದೇ ಇಲ್ಲ...ಅಮ್ಮ
ನಿಂಗೆ ಅಷ್ಟೂ ಗೊತ್ತಾಗಲ್ಲ... ”ಅಂದಾಗ
ನಾವಿಬ್ಬರೂ ಮುಖ ಮುಖ ನೋಡಿಕೊಂಡು ಮುಂದೆ ನಡೆದೆವು.
ಮಕ್ಕಳ ಈ
ಅತಿಬುದ್ಧಿವಂತಿಕೆ ಇತ್ತೀಚಿನ ಕೆಲವರ್ಷಗಳ ಬೆಳವಣಿಗೆ. ಹಿಂದೆ ಮಕ್ಕಳು ಮುಗ್ಧತೆಯ ಪ್ರತಿರೂಪವೇ
ಆಗಿದ್ದರು. ಇಲ್ಲದಿದ್ದರೆ ಅತ್ತರೆ ಅಳಲವ್ವ ಈ ಕೂಸು ನನಗಿರಲಿ ..ಕೆಟ್ಟರೆ ಕೆಡಲಿ ಮನೆಗೆಲಸ
...., ಕೂಸು ಕಂದವ್ವ ಒಳಹೊರಗೆ ಆಡಿದರ ಬೀಸಣಿಗೆ
ಗಾಳೀ ಸುಳಿದಾವ..... ಎಂಬ ಜನಪದಗೀತೆಗಳು ಸೃಷ್ಟಿಯಾಗುತ್ತಿರಲಿಲ್ಲ. ಈಗಿನ ಮಕ್ಕಳು ಬೀಸಣಿಗೆಯಲ್ಲ
, ನಾಲಿಗೆಯೆಂಬ ಚಾವಟಿಗೆಯನ್ನು ಎಲ್ಲೆಂದರಲ್ಲಿ ಬೀಸುತ್ತಿದ್ದರೆ ಅದರ ಏಟು ತಿಂದವರಿಗೇ ಗೊತ್ತು
ಅದರ ರುಚಿ. ಆಡುವಂತಿಲ್ಲ... ಅನುಭವಿಸುವಂತಿಲ್ಲ... ಪಾಪ ಚಿಕ್ಕಮಕ್ಕಳು ಅವುಗಳಿಗೇನು
ಗೊತ್ತಾಗತ್ತೆ ಅಲ್ವೇ!. ತಮ್ಮ ಮನೆಯಲ್ಲಿ
ಪಾಯಸವನ್ನು ಕಣ್ಣೆತ್ತಿ ನೋಡದವು ಪರರ ಮನೆಗೆ ಹೋದಾಗ ಬಟ್ಟಲು ತುಂಬಾ ಕುಡಿದು “ಅವನು ಪಾಯಸ
ತಿನ್ನಲ್ಲ” ಎನ್ನುವ ನಮಗೆ ಮಂಗಳಾರತಿ ಮಾಡುತ್ತವೆ. ಆ ಮನೆಯವರ ಬಗ್ಗೆ ಎಂದೋ ಆಡಿದ ಕುಹಕದ
ಮಾತನ್ನು ಅಚ್ಚುಕಟ್ಟಾಗಿ ಅವರ ಮುಂದೆ ಒಪ್ಪಿಸಿ ನಾವು ಆಜನ್ಮ ವೈರಿಗಳಾಗುವಂತೆ ಮಾಡುತ್ತವೆ. ನನ್ನ
ತಂಗಿಯ ಮಗನೊಮ್ಮೆ ತೋಳಿಲ್ಲದ ರವಿಕೆ ತೊಟ್ಟು ಬಂದ ನನ್ನ ಗೆಳತಿ ಮನೆಗೆ ಕಾಲಿಟ್ಟೊಡನೆ “ಏ.. ಆಂಟಿ
ನೋಡಮ್ಮಾ... ನೀ ಮೊನ್ನೆ ಹೇಳ್ತಾ ಇದ್ಯಲ್ಲ... ಮೈ ತೋರಿಸಿಕೊಂಡು ಓಡಾಡ್ತಾರೆ ಅಂತ ... ಇವತ್ತು ಬ್ಲೌಸೇ
ಹಾಕಿಲ್ಲಾ... ” ಎಂಬ ಅಣಿಮುತ್ತು ಉದುರಿಸಿ ನಮ್ಮ ಗೆಳೆತನಕ್ಕೆ ಮಂಗಳ ಹಾಡಿದ್ದ . ಇನ್ನೊಮ್ಮೆ
ನನ್ನ ಜೀವದ ಗೆಳತಿ ಕವಿತಾ ಮನೆಗೆ ಬಂದಿದ್ದಳು. ಧಡೂತಿದೇಹದ ಆಕೆ ಮನೆಗೆ ಬಂದಾಗಿನಿಂದ ಈ ಮಹಾಶಯ
ಅವಳನ್ನೇ ಗಮನಿಸುತ್ತಿದ್ದ. ನಾವು ಅದೂ ಇದೂ ಮಾತನಾಡುತ್ತಿರಬೇಕಾದರೆ ಇವನು “ಆಂಟಿ ನಿಮ್ಮ
ಕಣ್ಣೆಲ್ಲಿದೆ? ನಾನು ನಿಮಗೆ ಕಾಣಿಸ್ತಾ ಇದೀನಾ?” ಅಂತ ಮಾತಿನ ಬಾಣ ಬಿಟ್ಟ. ಪಾಪ..
ಕವಿತಾಗೆ..ಒಂಥರಾ ಆಯಿತು. ನಿಜ ಕವಿತಾಳ ಮುಖದಲ್ಲಿ ಉಬ್ಬಿದ ಪೂರಿಯಂತಹ ಗಲ್ಲಗಳ ,ಏಲಕ್ಕಿ
ಬಾಳೆಹಣ್ಣಿನಂತಹಾ ಮೂಗಿನ ಹಿಂದೆ ಕಣ್ಣುಗಳು
ಅಡಗಿವೆ. ಹಾಗಂತ ಈ ಕಿಲಾಡಿಗೆ ದೊಡ್ಡವರೆಂದರೆ ಗೌರವ ಬೇಡವೇ? ನನಗಂತೂ ಅವನನ್ನು ಮಚ್ಚಟೆಯಾಗಿ
ಬೆಳೆಸಿದ ನನ್ನ ತಂಗಿಯ ಮೇಲೆ ಬ್ರಹ್ಮಾಂಡದಂಥ
ಸಿಟ್ಟು ಬಂದಿತ್ತು.
ನಮ್ಮಿಂದಲೇ ಈ ಜಗತ್ತಿಗೆ
ಬರುವ , ನಾವೇ ಕೈಹಿಡಿದು ನಡೆಯಲು ಕಲಿಸಿದ ನಮ್ಮ ಕರುಳಕುಡಿಗಳು ನಮ್ಮಿಂದಲೇ ಭಾಷೆಯನ್ನು ಕಲಿತು,
ನಮ್ಮ ಆರೈಕೆಯಿಂದಲೇ ರಕ್ತ-ಮಾಂಸಗಳನ್ನು ವರ್ಧಿಸಿಕೊಂಡು , ಸ್ವಲ್ಪ ತಿಳುವಳಿಕೆ
ಬರುತ್ತಿದ್ದಂತೆಯೇ ನಮ್ಮನ್ನೇ ಕೂಪಮಂಡೂಕಗಳೆಂದು ಜರಿಯುವುದು ಸೋಜಿಗವೇ ಸರಿ. ಮೂರು -ನಾಲ್ಕು
ವರ್ಷದವರೆಗೆ ಕಿವಿಗೆ ಹಿತವಾಗುವ ಮಕ್ಕಳ ವಾಗ್ಬಾಣಗಳು ಕಾಲಕಳೆದಂತೆ ಇರಿಯಲಾರಂಭಿಸುತ್ತವೆ.
ಕೆಲವೊಮ್ಮೆ ಜೀವನದ ಸತ್ಯಗಳನ್ನು ತೋರಿಸುತ್ತವೆ. ನಾನೊಮ್ಮೆ ಸಹೋದ್ಯೋಗಿ ಲತಾಳ ಮನೆಗೆ ಹೋಗಿದ್ದೆ.
ಆಕೆ ಅವಳ ಬಿಡುವಿಲ್ಲದ ದಿನಚರಿಯನ್ನೆಲ್ಲ ವರ್ಣಿಸಿ “ನೋಡೇ..ಹೊರಗೆ ದುಡಿಯುವುದಲ್ಲದೆ ಮನೆಯಲ್ಲಿ
ಅತ್ತೆ-ಮಾವ, ಗಂಡ-ಮಕ್ಕಳಿಗೆ ಮೂರು ಹೊತ್ತಿಗೂ ಥರಾವರಿ ಅಡುಗೆ ಮಾಡಿ ಬಡಿಸ್ತೀನಿ.ಕೆಲಸದವಳನ್ನೂ
ಇಟ್ಟುಕೊಳ್ಳದೇ ಎಲ್ಲ ಮನೆಕೆಲಸ ಮಾಡ್ತೀನಿ. ಅಲ್ಲದೇ ಈ ಮಕ್ಕಳ ಸ್ಕೂಲು, ಟ್ಯೂಶನ್,
ಕ್ಲಾಸುಗಳು... ರಾತ್ರಿಯಾಗುವಷ್ಟರಲ್ಲಿ ಎಂಥ ಸುಸ್ತು ಗೊತ್ತಾ? ಆದ್ರೆ ಒಬ್ಬರಾದರೂ ನನ್ನ
ಸಹಾಯಕ್ಕೆ ಬರಲ್ಲ ನೋಡು... ಅಂದಳು. ಮಧ್ಯೆ ಬಾಯಿ ಹಾಕಿದ ಹನ್ನೆರಡರ ಮಗಳು ನಿಧಿ “ ಏನಮ್ಮಾ...
ಹೀಗೆಲ್ಲಾ ಒಬ್ಬಳೇ ಮಾಡು ಅಂತ ನಾವೆಲ್ಲಾ ನಿನಗೆ ಹೇಳಿದ್ದೀವಾ?ಯಾರನ್ನೂ ಹತ್ತಿರಕ್ಕೆ ಸೇರಿಸದೇ
ನೀನೇ ಮಾಡ್ತೀಯಾ... ಆಮೇಲೆ ನೀನೇ ಅಳ್ತೀಯಲ್ಲಾ... ಸರೀನಾ ಇದು ? ಅನ್ನೋದೇ!!. ಅರೆ! ಹೌದಲ್ಲ
ಎಂಥ ಸತ್ಯ ಇದೆಯಲ್ಲ ನಿಧಿಯ ಮಾತಿನಲ್ಲಿ ಅನಿಸಿತು ನನಗೆ. ನಮ್ಮ ಕೈಲಾದಷ್ಟೇ ಕೆಲಸ ಮಾಡಬೇಕು.
ಜಗತ್ತನ್ನು ಮೆಚ್ಚಿಸಲು ಹೋಗಿ ಸುಸ್ತಾಗಿ ಅಳುವ ಅವಶ್ಯಕತೆ ಏನಿದೆ ಅಲ್ಲವೇ? ಈ ಮಾತಿಗೇನೂ
ತಲೆದೂಗಬಹುದು. ಆದರೆ ಯೌವನದಲ್ಲೇ ಗಂಡನನ್ನು ಕಳಕೊಂಡ ಗಿರಿಜಳ ಮಗಳಾಡಿದ ಮಾತು ಇಷ್ಟು
ವರ್ಷಗಳಾದರೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತದೆ. ಒಮ್ಮೆ ಆಕೆ ಗಂಡನ ಅನಾರೋಗ್ಯ, ನಡುವೆ
ಹುಟ್ಟಿದ ಮಗಳು, ಆರ್ಥಿಕ ಸಂಕಷ್ಟಗಳು, ಸಾಂಸಾರಿಕ ತಾಪತ್ರಯಗಳು, ಇತ್ಯಾದಿಗಳನ್ನೆಲ್ಲ ಹೇಳಿಕೊಂಡು ಕಣ್ಣೀರು
ಹಾಕುತ್ತಿದ್ದಳು. ಅಲ್ಲೇ ಇದ್ದ ಅವಳ ಹದಿನಾರರ ಮಗಳು “ ಏನಮ್ಮಾ.. ನನ್ನ ಹುಟ್ಟಿಸು ಅಂತ ನಾನೇನು
ನಿನ್ನ ಬೇಡಿಕೊಂಡೆನಾ?.. ಅಷ್ಟು ಕಷ್ಟಗಳಿದ್ದರೆ ಮಗು ಹುಟ್ಟಿಸಬಾರದಾಗಿತ್ತು.ಮಾಡೋದೆಲ್ಲ ಮಾಡಿ
ಈಗ ಅಳೋದು ನೋಡು !” ಎಂಬ ಮಾತಿನೇಟು ಕೊಟ್ಟಳು. ಉತ್ತರವಿಲ್ಲದ ಈ ಪ್ರಶ್ನೆಯನ್ನು, ಒಂಟಿಯಾಗಿ
ಬದುಕುತ್ತಿರುವ ಗಿರಿಜಳನ್ನೂ ನೆನೆದರೆ ನನ್ನ ಹೃದಯ ಸ್ತಬ್ಧವಾಗುತ್ತದೆ. ಕಣ್ಣು ಮಂಜಾಗುತ್ತದೆ.
ನಮ್ಮ ಕೂಸುಗಳು ನಮ್ಮದೇ
ದೇಹದ ಭಾಗಗಳು. ನಮ್ಮ ವಿಚಾರಗಳ ಪ್ರತಿಬಿಂಬಗಳು. ಮಕ್ಕಳು ದೊಡ್ಡವರ ನಡವಳಿಕೆಗಳನ್ನು,
ನಂಬಿಕೆಗಳನ್ನು ಅನುಸರಿಸುತ್ತವೆಯೇ ವಿನ: ಅವರ ಬುದ್ಧಿಮಾತುಗಳನ್ನಲ್ಲ.ನಮ್ಮ ಪ್ರಬುದ್ಧ ಕ್ರಿಯೆಗಳಿಂದ
ಬಾಲ್ಯದಿಂದಲೇ ಅವರಲ್ಲಿ ಹಿರಿಯರ ಬಗ್ಗೆ ಗೌರವ, ಕುಟುಂಬದ ಬಗ್ಗೆ ಹೆಮ್ಮೆ, ಕಳಕಳಿಗಳು
ಬೆಳೆಯುವಂತೆ ಮಾಡಿದರೆ ಈ ವಾಕ್ ಶರಪಂಜರದಿಂದ ತಕ್ಕಮಟ್ಟಿಗೆ ಪಾರಾಗಬಹುದು ,ಅನ್ಯರನ್ನು
ರಕ್ಷಿಸಬಹುದು . ಹಾಗೊಂದು ವೇಳೆ ಪರಿಸರದ ಪ್ರಭಾವದಿಂದಲೋ ಅಥವಾ ಹುಟ್ಟುಸ್ವಭಾವದಿಂದಲೋ
ಬಿರುನುಡಿಗಳನ್ನು ಆಡಲಾರಂಭಿಸಿದಾಗ, ಆಗಾಗ ಎಚ್ಚರಿಕೆ ಕೊಟ್ಟು, ತಿಳಿಹೇಳುತ್ತಿದ್ದರೆ,
ಸಕಾಲದಲ್ಲಿ ಮೃದುವಾಗಿ ತಿದ್ದಿದರೆ ನಮ್ಮ ಕಂದ ಸಮಾಜಕ್ಕೊಂದು ಆಸ್ತಿಯಾಗಬಹುದು.
No comments:
Post a Comment