Friday, 2 January 2015

ಬಾಲಗ್ರಹಪೀಡೆ !!

                    

                                                     ಬಾಲಗ್ರಹಪೀಡೆ !!

                              
೨೦೧೪ ಮುಗಿಯುವುದರೊಡನೆ ಕಾಲನ ಒಂದು ಪುಟ ಮಗುಚಿತು. ಕಳೆದ ಈ ವರ್ಷದ ವಿಶೇಷವೆಂದರೆ “ನಮ್ಮ ಕೆಲ ನಂಬಿಕೆಗಳು ತಿಪ್ಪರಲಾಗ ಹೊಡೆದದ್ದು” ಅಂದರೆ ನಾನು ಹೇಳಿದರೆ , ನೀವು ನಂಬುತ್ತೀರಿ ಅಂತ ನನ್ನ ನಂಬಿಕೆ. ‘ಮಾಮ್ನೌಕೆ ಮಂಗಳನ ಕಕ್ಷೆ ಸೇರುತ್ತಿದ್ದಂತೆ ಹುಡುಗಿಯರ ಮದುವೆಗೆ ಅಡ್ಡಗಾಲು ಹಾಕುತ್ತಿದ್ದ  ಅಂಗಾರಕ ದೋಷವೆಂಬ ಆ ನಮ್ಮ ಹಳೆ ನಂಬಿಕೆ ಅಲುಗಾಡಿತು. ದೇವಮಾನವರೆನಿಸಿಕೊಂಡ ಕೆಲವರ ಹೀನ ಕೃತ್ಯಗಳು ಬೆಳಕಿಗೆ ಬರುತ್ತಿದ್ದಂತೆಯೇ ಈ ದೇವರ ಪ್ರತಿನಿಧಿಗಳ ಮೇಲಿನ ನಂಬಿಕೆ ಬುಡಮೇಲಾಯಿತು. ಇನ್ನು ಆಕಾರವೇ ಇಲ್ಲದ ದೇವನೊಬ್ಬನ ಹೆಸರಿನಲ್ಲಿ ಕೆಲ ಪಾಪಿಗಳು ನಡೆಸಿದ ಮಕ್ಕಳ ಮಾರಣಹೋಮ ಮನುಷ್ಯತ್ವದ ಮೇಲಿನ ನಂಬಿಕೆಗೆ ಮಂಗಳ ಹಾಡಿತು.  ವರುಷದ ಕೊನೆಗೆ ಅವತರಿಸಿದ ‘ಪಿಕೆ’  ಎಂಬ ಮಹಾತ್ಮನಂತೂ ನಂಬಿಕೆಗಳೆಂಬ ತೊಟ್ಟಿಯನ್ನು ಗುಡಿಸುತ್ತಾ ನಮ್ಮ ಮೆದುಳಿಗೇ ಕೈ ಹಾಕಿದ್ದಾನೆ. ಇದನ್ನೆಲ್ಲ ನೋಡುತ್ತಿದ್ದಂತೆ ನಾನೂ ಕೂಡಾ ಒಮ್ಮೆ ಈ ನಂಬಿಕೆಯ ಪ್ರಪಾತದಲ್ಲಿ ಬಿದ್ದು ಮೈ-ಕೈ ತರಚಿಕೊಂಡದ್ದು ನೆನಪಾಯ್ತು.

ಇಪ್ಪತ್ತು ವರ್ಷಗಳ ಹಿಂದಿನ ಘಟನೆ .ನನ್ನ ಮಗಳಿಗಿನ್ನೂ ಆರು ತಿಂಗಳು. ಆರೋಗ್ಯವಾಗಿದ್ದ ಮಗುವಿಗೆ ವಾಂತಿ-ಭೇದಿ ಶುರುವಾಯಿತು. ತಕ್ಷಣ ವೈದ್ಯರನ್ನು ಕಂಡು ಔಷಧೋಪಚಾರವನ್ನು ಮಾಡಿದೆವು. ಆದರೆ ಎರಡು ದಿನಗಳಾದರೂ ಭೇದಿ ನಿಲ್ಲಲಿಲ್ಲ. ಮೈ-ಕೈ ತುಂಬಿಕೊಂಡು ಮುದ್ದಾಗಿದ್ದ ಮಗು ನಿಸ್ತೇಜವಾಯಿತು.  ಹಗಲು-ರಾತ್ರಿ ನಿದ್ದೆಗೆಟ್ಟು ಮಗುವನ್ನು ಸಂಭಾಳಿಸಿ ಕಂಗೆಟ್ಟ  ನನಗೆ ಪಕ್ಕದ ಮನೆಯವರೊಬ್ಬರು  ಮೆಜೆಸ್ಟಿಕ್ನಲ್ಲಿರುವ ಎಣ್ಣೆ ಪಾಪಣ್ಣನ ಕ್ಲಿನಿಕ್ಕಿಗೆ[?] ಹೋಗುವಂತೆ ಸಲಹೆ ನೀಡಿದರು. ನಾವು ಮಂಕು ಬಡಿದಿರುವವರಂತೆ ಅಲ್ಲಿಗೆ ಹೋದೆವು. ದುರ್ಬಲಗಳಿಗೆಯಲ್ಲಿ ನನಗೆ ಕೊಳಕುಜಾಗ ಸ್ವರ್ಗವೆನಿಸಿತು.ಮೈಗೆಲ್ಲ ವಿಭೂತಿ ಬಳಿದುಕೊಂಡು ,ರಕ್ತಕೆಂಪು ಬಟ್ಟೆ ತೊಟ್ಟುಕೊಂಡ ಮಂತ್ರವಾದಿಯು ಧನ್ವಂತರಿಯಂತೆ ಕಾಣಿಸಿದ. ಮಗುವಿನ ಕಡೆಗೆ ಕಣ್ಣೋಟ ಬೀರಿ ಬಾಲಗ್ರಹಪೀಡೆಯಾಗಿದೆ ಎಂದು ಹೇಳಿ ತಾಯಿತ-ಕುಂಕುಮವನ್ನು ಕೊಟ್ಟು ಎರಡು ದಿನ ಬಿಟ್ಟು ಬರುವಂತೆ ಹೇಳಿದನು.

ರಾತ್ರಿಯಾಗುತ್ತಿದ್ದಂತೆಯೇ ಜ್ವರವೂ ಶುರುವಾಯಿತು. ಮಗುವನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಮಗುವನ್ನು ನೋಡಿದ ವೈದ್ಯರು ಹಣೆಯ ಮೇಲಿದ್ದ ಕುಂಕುಮವನ್ನು ನೋಡಿಮಗು ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕುವುದರಿಂದ ಸೋಂಕಿನಿಂದ ವಾಂತಿ ಭೇದಿಯಾಗುತ್ತದೆ .ಅದಕ್ಕೆ ತಾಳ್ಮೆ ವಹಿಸಿ ಚಿಕಿತ್ಸೆ ಕೊಡುವುದು ಬಿಟ್ಟು ಹೀಗೆಲ್ಲಾ ಮಾಡುತ್ತೀರಲ್ಲ?ಸಮಾಜಕ್ಕೆ ಮಾದರಿಯಾಗಬೇಕಾದ ನಿಮ್ಮಂಥ ವಿದ್ಯಾವಂತರೇ ಹೀಗೆ ಮಾಡಿದರೆ ಹೇಗೆ?’ ಎಂದು ಗದರಿಸಿದರು.ನಾನು ನಾಚಿಕೆ-ಅವಮಾನಗಳಿಂದ ತಲೆ ತಗ್ಗಿಸಿದೆ. ಎಲ್ಲವನ್ನೂ ವಿಜ್ಞಾನದ ತಕ್ಕಡಿಯಲ್ಲಿ ತೂಗಿಯೇ ಮುಂದುವರೆಯುವ ನನಗೆ ಅದನ್ನು ನೆನೆದರೆ ಈಗಲೂ ಮನಸ್ಸು ಸ್ತಬ್ಧವಾಗುತ್ತದೆ.

 ನಂಬಿಕೆಗಳಿಲ್ಲದೇ ಮನುಷ್ಯನ ಜೀವನ ನೀರಸವೇ ಸರಿ.ಬೆಳಗ್ಗೆ ತನ್ನಿಷ್ಟದ ದೇವಾಲಯದ ಕುಂಕುಮ ಹಣೆಗೆ ಹಚ್ಚಿ ಕೆಲಸ ಆರಂಭಿಸುವುದು ,ತುಲಸೀ ಪೂಜೆ ಮಾಡುವುದು, ಯಾವುದೋ ಉದ್ದೇಶಕ್ಕಾಗಿ  ಉಪವಾಸ ಆಚರಿಸುವುದು ಇತ್ಯಾದಿಗಳು ನಿರಪಾಯಕಾರಿ ನಂಬಿಕೆಗಳು . ಸತ್ಕರ್ಮಗಳಿಂದ ಸತ್ಫಲ ಸಿಗುತ್ತದೆ ಎಂಬ ನಂಬಿಕೆ, ತನ್ನ ಕೈಲಾದ ಮಟ್ಟಿಗೆ ದಾನ ಮಾಡುವುದು, ಹಬ್ಬ- ಪೂಜೆಯ ನೆಪದಲ್ಲಿ ಬಂಧು ಬಳಗವನ್ನು ಮನೆಗೆ ಆಹ್ವಾನಿಸುವುದು ಮುಂತಾದ ಸಮಾಜಮುಖಿ ನಂಬಿಕೆಗಳು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ಎನಿಸಿವೆ. ಆದರೆ ದೇಹಾರೋಗ್ಯಕ್ಕಾಗಿ ಪ್ರಾಣಿಬಲಿ, ಉರುಳುಸೇವೆ, ಪೂಜೆ - ಅರ್ಚನೆಗಳು, ಮೂರು ದಿನಗಳ  ಮುಟ್ಟಿನ ಬಗೆಗಿನ ಅರ್ಥಹೀನ ಕಲ್ಪನೆಗಳು, ಜ್ಯೋತಿಷ್ಯ , ವಾಸ್ತುವಿನ ಮೇಲೆ ಕುರುಡು ವಿಶ್ವಾಸ ಇತ್ಯಾದಿಗಳು  ಮೂಢನಂಬಿಕೆಗಳಾಗಿ ಪರಿವರ್ತನೆಗೊಂಡು ಸಾಮಾಜಿಕ ಸಮಸ್ಯೆಗಳಾಗಿವೆ .ಅಂಧಶ್ರದ್ಧೆಯ ಹರಿಕಾರರಾದ ಕೆಲ ಜ್ಯೋತಿಷಿ -ಸ್ವಾಮೀಜಿಗಳು ಸಮಾಜಕಂಟಕರಾಗಿದ್ದರೆ ಅದಕ್ಕೆ ನಗರದ ವಿದ್ಯಾವಂತ ಜನರ ಕೊಡುಗೆಯೂ ಸಾಕಷ್ಟಿದೆ. ಪರಿಸ್ಥಿತಿ ಕೈ ಮೀರುವ ಮೊದಲು ಗೊಡ್ಡು ಆಚರಣೆಗಳನ್ನು ಕೈಬಿಡೋಣ. ಸರಕಾರವೂ ಕೂಡಾ ದಿಸೆಯಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡರೆ ಆರೋಗ್ಯಕರ ಸಮಾಜದ ಸೃಷ್ಟಿ ಸಾಧ್ಯ

Tuesday, 11 November 2014

                                 ‘ಮಕ್ಕಳ ದಿನಾಚರಣೆ


ಮತ್ತೆ ಪ್ರತಿವರ್ಷದಂತೆಮಕ್ಕಳ ದಿನಾಚರಣೆಬರುತ್ತಿದೆ. ಅಂದುಮಕ್ಕಳೇಕನಸು ಕಾಣಿ……’ ಎಂಬ ಸವಕಲು ವಾಕ್ಯದ ಘೋಷಣೆ ಆಗುತ್ತದೆ. ಹೆಚ್ಚಿನ ಮಕ್ಕಳಿಗೆ ಸಿಹಿತಿಂಡಿ ಸಿಗುತ್ತದೆ. ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗು, ಸೈಕಲ್ಲು, ಪುಸ್ತಕ ಹಾಗೂ ಸ್ವಲ್ಪ ಅನುಕಂಪ ಸಿಗುತ್ತದೆ. ಆದರೆ ಮರುದಿನದಿಂದ ಮತ್ತೆ ಹಳೇರಾಗವೇ ಯಾಕೆಂದರೆ  ಉನ್ನತ ಶಿಕ್ಷಣ ಪಡೆದ , ಕೈತುಂಬಾ ಸಂಬಳ ಪಡೆಯುವ, ದೊ…….ಡ್ಡ ಕಾರಿನಲ್ಲಿ ಓಡಾಡುವ ಅವರ ತಂದೆ- ತಾಯಿಯರು-

. ಲಂಚ್ ಬಾಕ್ಸಿಗೆ  ಒಂದು ಪಾಕೆಟ್ ಬಿಸ್ಕೆಟ್ಟು / ಒಣಗಿದ ಬ್ರೆಡ್ಡು / ಪ್ರಸಿದ್ಧ ಬೇಕರಿಯ ಹಳಸಿದ ಕೇಕು/ ೧೦೦೦ ರೂಪಾಯಿಯ ನೋಟು ಇವುಗಳಲ್ಲೊಂದನ್ನು ಕಳುಹಿಸುತ್ತಾರೆ.
. ಮಕ್ಕಳಿಗೆ ಬೆಲೆಬಾಳುವ ಮೊಬೈಲ್ ಕೊಡಿಸುತ್ತಾರೆ ಹಾಗೂ ಅದರಲ್ಲಿ ಅಶ್ಲೀಲ ಚಿತ್ರ ನೋಡಿದ್ದಕ್ಕೆಂದು ಕ್ರಿಕೆಟ್ ಬ್ಯಾಟಿನಿಂದ ಹೊಡೆಯುತ್ತಾರೆ.
. ಮಕ್ಕಳನ್ನು ಕೆಲಸದವರ ಕೈಗೊಪ್ಪಿಸಿ ತಿಂಗಳಾನುಗಟ್ಟಲೆ ವಿದೇಶಕ್ಕೆ ಹೋಗುತ್ತಾರೆ.
. ಮಕ್ಕಳನ್ನು ವಯಸ್ಸಾದ ತಮ್ಮ ತಂದೆ- ತಾಯಂದಿರ ಬಳಿ ಬಿಟ್ಟು ಶಾಲೆಗೆ ಪೇರೆಂಟ್ ಮೀಟಿಂಗಿಗೆ ಮಾತ್ರ ತಪ್ಪದೇ ಹಾಜರಾಗಿ ಕಡಿಮೆ ಅಂಕ ಕೊಟ್ಟಿದ್ದಕ್ಕೆ ಶಿಕ್ಷಕರನ್ನು ಗದರಿಸುತ್ತಾರೆ.
. ಸದಾಕಾಲ ಜಗಳವಾಡುತ್ತಾರೆ. ಮಕ್ಕಳಿಗೆ ರಾತ್ರಿ ಊಟವೂ ಕೊಡದೇ ಸತಾಯಿಸುತ್ತಾರೆ. ಕೊನೆಗೆ ಡೈವೋರ್ಸ್ ತೆಗೆದುಕೊಂಡು ಮಕ್ಕಳನ್ನು ಮಾನಸಿಕವಾಗಿ ಹಿಂಸಿಸುತ್ತಾರೆ ಸಾಮಾಜಿಕವಾಗಿ ಅಪಮಾನ ಮಾಡುತ್ತಾರೆ.
. ಸದಾ ಭವಿಷ್ಯದ ಬಗ್ಗೆಯೇ ಚಿಂತಿಸುತ್ತಾ ನೂರಾರು ಕೋಚಿಂಗ್ ಕ್ಲಾಸುಗಳಿಗೆ ಮಕ್ಕಳನ್ನು ತಳ್ಳಿ ತಾವು ಹೆಮ್ಮೆಪಡುತ್ತಾರೆ.
. ಮಗುವನ್ನು ಒಂದು ಕ್ಷಣವೂ ಬಿಟ್ಟಿರದೇ ಅದರ ಮಾತು, ನಗುಉಚ್ಚೆ- ಹೇಲು, ಆಟ, ಪಾಠ ಕೊನೆಗೆ ಯೋಚನೆ, ಭಾವನೆ ಅಷ್ಟೇ ಏಕೆ ಉಸಿರನ್ನೂ ನಿಯಂತ್ರಿಸುತ್ತಾರೆ. ತಾವು ಆದರ್ಶ ಪಾಲಕರೆಂದು ಬೀಗುತ್ತಾರೆ.

ಹೌದು…… ಇದ್ಯಾವುದೂ ಕಲ್ಪನೆಯಲ್ಲ.  ಎಲ್ಲವೂ ಅಕ್ಷರಶ: ನಿಜ.

ನಮ್ಮ [ ಮುಖ್ಯವಾಗಿ ನಗರದ] ಮಕ್ಕಳು
. ಶಾಲೆಯಿಂದ ಮನೆಗೆ ಬಂದಾಗ ಬೀಗ ಅಥವಾ ಕೆಲಸದಾಕೆಯ ಸ್ವಾಗತ ಸಿಗುತ್ತದೆ.
. ಸಾವಿರಾರು ಆಕರ್ಷಣೆಗಳ ನಡುವೆ ಸಿಲುಕಿ ಸರಿ ತಪ್ಪುಗಳು ತಿಳಿಯದೇ ಒದ್ದಾಡುತ್ತಿದ್ದಾರೆ.
. ಅವರ ಉತ್ತಮ ಭವಿಷ್ಯಕ್ಕಾಗಿ ವರ್ತಮಾನದ ಖುಷಿಯ ಕ್ಷಣಗಳನ್ನು ಕೋಚಿಂಗ್ ಕ್ಲಾಸ್ ಗಳಲ್ಲಿ ಕಳೆಯುತ್ತಿದ್ದಾರೆ.
. ಸದಾಕಾಲ ಗುಡ್ ಟಚ್- ಬಾಡ್ ಟಚ್ ನ್ನು ನೆನೆಪಿಟ್ಟುಕೊಳ್ಳಬೇಕು, ಯಾರನ್ನೂ ನಂಬಬಾರದು.
. ಮನೆಯಲ್ಲಿ ನಿದ್ದೆ ಮಾಡಲು ಪಾಲಕರು ಬಿಡುವುದಿಲ್ಲ. ಕ್ಲಾಸಿನಲ್ಲಿ ನಿದ್ದೆ ಮಾಡಲು ಟೀಚರ್ ಬಿಡುವುದಿಲ್ಲ.

ಮಿತ್ರರೇ! ಇನ್ನು ಮುಂದೆಈಗಿನ ಮಕ್ಕಳೇ ಸರಿ ಇಲ್ಲಪ್ಪಾ…… ನಾವೆಲ್ಲಾ ಚಿಕ್ಕವರಿರುವಾಗ ಹೀಗಿರಲಿಲ್ಲ……….’ ಎಂಬ ಉದ್ಗಾರ ತೆಗೆಯುವ ಮೊದಲು ಒಂದು ಕ್ಷಣ ಯೋಚಿಸಿ.


ನಾಡಿನ ಎಲ್ಲ ಚಿಣ್ಣರಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.