Tuesday 31 July 2018

ಬನ್ರಿ.... ಜರ್ಮನಿಯ ಮನಿಗ ........


                                                          
ನಮ್ ಥರ ಸಂಸ್ಕೃತಿ, ಕುಟುಂಬವ್ಯವಸ್ಥೆ ಪ್ರಪಂಚದಲ್ಲೆಲ್ಲೂ ಇಲ್ಲ ಬಿಡಿ... ಫಾರಿನ್ ನಲ್ಲಿ ಮಾತೆತ್ತಿದರೆ ಡೈವೊರ್ಸು, ಮಕ್ಕಳಂತೂ ಕುಲಗೆಟ್ಟು ಹೋಗಿರ್ತಾರೆ....” ಇಂಥ ಮಾತುಗಳನ್ನು ನಾನು ಕೇಳಿದಾಗೆಲ್ಲ ಒಮ್ಮೆ ಒಂದು ಫಾರಿನ್ ಕುಟುಂಬದ ಜತೆ  ಸ್ವಲ್ಪ ದಿನ ಇದ್ದು ಬರಬೇಕು ...ಇದೆಲ್ಲ ನಿಜವಾ ಅಂತ ನೋಡ್ಬೇಕು.. ಅಂತ ಅನ್ಕೋತಿದ್ದೆ. ಅಂಥ ಅಪೂರ್ವ ಅವಕಾಶ ಕೊನೆಗೂ ನಂಗೆ ಸಿಕ್ತು. ಜರ್ಮನಿಯ ಮ್ಯುನಿಕ್ ನಗರದ ಸಮೀಪದ ಲಾಫ್ ಅನ್ನೋ ಸಣ್ಣ ಊರಿನ ಶಾಲೆಯೊಂದರ ಜೊತೆ ನಮ್ಮ ಶಾಲೆಯವರು ನಡೆಸುವ ಸ್ಟೂಡೆಂಟ್ ಎಕ್ಸ್ ಚೇಂಜ್ ಪ್ರವಾಸಕ್ಕೆ ಹೋಗುವ ೨೯[ ೮,೯,೧೦ನೇ ತರಗತಿಯ] ವಿದ್ಯಾರ್ಥಿಗಳ ಜೊತೆ ಈ ವರ್ಷ ನನ್ನನ್ನು ಕಳಿಸಿದ್ದರು. ಆ ಜರ್ಮನ್ ಶಾಲೆಯಿಂದ ಭಾರತ ಪ್ರವಾಸಕ್ಕೆ ಬರಲಿರುವ ೨೯ ವಿದ್ಯಾರ್ಥಿಗಳ ಮನೆಯಲ್ಲಿ ನಮ್ಮ ವಿದ್ಯಾರ್ಥಿಗಳು ಮತ್ತು ಅವರ ಜೊತೆ ಬರಲಿರುವ ಶಿಕ್ಷಕರ ಮನೆಯಲ್ಲಿ ನಾನು ೧೫ ದಿನ ಇರಬೇಕು. ಅವರ ಜೊತೆ ನಿತ್ಯಜೀವನದಲ್ಲಿ[ಊಟ-ಅಡುಗೆ-ಶಾಲೆ-ಪಾಠ-ಸುತ್ತಾಟ ಇತ್ಯಾದಿ] ಪಾಲ್ಗೊಳ್ಳಬೇಕು. ಮುಂದೆ ಅಕ್ಟೋಬರ್ ತಿಂಗಳಲ್ಲಿ ಆ ೨೯ ವಿದ್ಯಾರ್ಥಿಗಳು ಮತ್ತವರ ಶಿಕ್ಷಕರು ೧೫ ದಿನಗಳ ಪ್ರವಾಸಕ್ಕೆ ಬೆಂಗಳೂರಿಗೆ ಬಂದಾಗ ನಮ್ಮ ಮನೆಗಳಲ್ಲಿ ಆತಿಥ್ಯ ಕೊಡಬೇಕು. ನಮ್ಮ ಸಂಸ್ಕೃತಿ, ಶಾಲೆಯ ಪರಿಚಯ ಮಾಡಿಕೊಡಬೇಕು. ಪರಸ್ಪರ ಅಪರಿಚಿತ ದೇಶ-ಸಂಸ್ಕೃತಿಗಳನ್ನು ಬೆಸೆಯಲು ಶಾಲೆಗಳು ನಡೆಸುವ ಅತ್ಯುತ್ತಮ ಪ್ರಯತ್ನವಿದು.

’ ತನು-ಮನ-ಆತ್ಮ.... ’ [ Body-Mind-Soul] ಎಂಬುದು ನಮ್ಮ ಈ ಕಲಿಕಾ ಪ್ರವಾಸದ ಮುಖ್ಯ ವಿಷಯವಾಗಿತ್ತು. ಉಪನಿಷತ್ತಿನಲ್ಲಿ ವರ್ಣಿತವಾಗಿರುವ ನಮ್ಮ ದೇಹದ ಪಂಚಕೋಶಗಳ ಪರಿಚಯ[ಅನ್ನ-ಮನೋ-ಜ್ಞಾನ-ವಿಜ್ಞಾನ-ಆನಂದಮಯ ಕೋಶಗಳು]  , ಭಾರತೀಯ ಶಾಸ್ತ್ರೀಯ ಸಂಗೀತ -ನೃತ್ಯಪ್ರಕಾರಗಳು ಮತ್ತು ಭಾರತೀಯ ಶಿಲ್ಪಕಲೆ ಈ ಮೂರು ಶೀರ್ಷಿಕೆಗಳಡಿಯಲ್ಲಿ ಎರಡು ಗಂಟೆಗಳ ಕಾರ್ಯಕ್ರಮವನ್ನು ಆ ಶಾಲೆಯಲ್ಲಿ ನಮ್ಮ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಕೊನೆಗೆ ನಾವು ಇಲ್ಲಿಂದ ಒಯ್ದಿದ್ದ ಉಂಡೆ-ಬರ್ಫಿ-ಮೈಸೂರುಪಾಕ್ -ಚಕ್ಕುಲಿ-ಕೋಡುಬಳೆ-ಓಂಪುಡಿಗಳನ್ನು ಪ್ರೇಕ್ಷಕರಿಗೆಲ್ಲ ಹಂಚಿದೆವು. ಅಚ್ಚರಿ-ಮೆಚ್ಚುಗೆಯ ಮಹಾಪೂರವೇ ನಮ್ಮ ಕಡೆಗೆ ಹರಿದು ಬಂತು.
ಆ ಶಾಲೆಯ ಗಣಿತದ ಟೀಚರ್ ಶ್ರೀಮತಿ ಹೈಕೆ ಖ್ರಾಮೆಸ್ ಅವರ ಮನೆಯಲ್ಲಿ ನನ್ನ ವಾಸ. ಗಂಡ-ಹೆಂಡತಿ, ವಯಸ್ಸಿಗೆ ಬಂದ ಮೂರು ಮಕ್ಕಳಿರುವ ಆ ಮನೆಯಲ್ಲಿ ಇದ್ದ ಮೇಲೆ ವಿದೇಶೀ ಸಮಾಜದ ಬಗ್ಗೆ ನಮ್ಮಲ್ಲಿ ಎಷ್ಟು ತಪ್ಪು ಕಲ್ಪನೆಗಳಿವೆ ಅನ್ನೋ ಸತ್ಯ ಗೊತ್ತಾಯ್ತು. ಮನೆಯಲ್ಲಿ ಸಮಾನತೆ - ಪರಸ್ಪರ ಗೌರವ  ಅನ್ನುವುದನ್ನು ಸೊಗಸಾಗಿ ರೂಢಿಸಿಕೊಂಡಿವೆ ಅಲ್ಲಿನ ಹೆಚ್ಚಿನ ಕುಟುಂಬಗಳು. ಹೆಂಡತಿ ಕೆಲಸಕ್ಕೆ ಹೋಗುತ್ತಿರಲಿ-ಬಿಡಲಿ, ಗಂಡ ತನ್ನನ್ನು ತಾನು ನೋಡಿಕೊಳ್ತಾನೆ. ಮಕ್ಕಳು ಬುದ್ಧಿ ಬರುತ್ತಿದ್ದಂತೆಯೇ ತಂದೆ- ತಾಯಿಯ ಜೊತೆ ಕೆಲಸಕ್ಕೆ ಕೈ ಜೋಡಿಸುತ್ತಾರೆ. ಮನೆಯ ಎಲ್ಲ ಕೆಲಸಗಳನ್ನು ಎಲ್ಲರೂ ಸಮಾನವಾಗಿ ಹಂಚಿಕೊಳ್ಳುತ್ತಾರೆ. ನಾನಿದ್ದ ಆ ಮನೆಯಲ್ಲಿ ಭಾನುವಾರವೂ ಎಲ್ಲರೂ ಬೇಗನೇ ಎದ್ದರು. ದೊಡ್ಡ ಮಗ ಬಾತ್ರೂಂ- ಟಾಯ್ಲೆಟ್ -ಗಾರ್ಡನ್ ಗಳನ್ನು ಸ್ವಚ್ಛಗೊಳಿಸಿದ, ಎರಡನೆಯವನು ಮನೆ ಮತ್ತು ಎಲ್ಲರ ಕಾರುಗಳನ್ನು ಶುಭ್ರಗೊಳಿಸಿದ. ಮಗಳು ಎಲ್ಲರ ಬಟ್ಟೆಗಳನ್ನು ವಾಶಿಂಗ್ ಮಿಶ್ ನ್ನಿಗೆ ಹಾಕಿ, ತಂದೆಯ ಜೊತೆ ಅಡುಗೆಗೆ ನಿಂತಳು. ಗಂಡ ಪಾತ್ರೆಗಳನ್ನು ಮಿಶನ್ನಿಗೆ ಹಾಕಿ ಬೆಳಗಿನ ತಿಂಡಿ-ಮಧ್ಯಾಹ್ನದ ಊಟವನ್ನು ಸಿದ್ಧಗೊಳಿಸುವ ಹೊತ್ತಿಗೆ ಪಾತ್ರೆಗಳು ತೊಳೆದು ಸಿದ್ಧವಾದವು. ಅವನ್ನೆಲ್ಲ ಒಪ್ಪವಾಗಿ ಆಯಾಯ ಜಾಗದಲ್ಲಿ ಇಟ್ಟ . ನನ್ನ ಶಿಕ್ಷಕಿ ಗೆಳತಿ ಹಿಂದಿನ ದಿನ ತಂದಿಟ್ಟಿದ್ದ ಮನೆ ಸಾಮಾನು ತರಕಾರಿ ಹಣ್ಣುಗಳನ್ನು ಜೋಡಿಸಿ ಇಟ್ಟು ಎಲ್ಲರ ಬಟ್ಟೆಗಳಿಗೆ ಇಸ್ತ್ರಿ ಹಾಕಿದರು. ನಂತರ ಎಲ್ಲರೂ ಸ್ನಾನ ಮಾಡಿ ಒಟ್ಟಿಗೆ ಕೂತು ತಿಂಡಿ ತಿನ್ನುವುದನ್ನು ನೋಡುತ್ತ ನಾನು ಮೂಕಳಾದೆ.

ದಿನವೂ ರಾತ್ರಿಯ ಊಟಕ್ಕೆ ಆ ಊರಿನ ಯಾವುದಾರೊಂದು ಮನೆಯಿಂದ ನನಗೆ ಆಹ್ವಾನ ಇರುತ್ತಿತ್ತು. ರಾತ್ರಿ ಊಟ ಮುಗಿದ ಮೇಲೆ ಹೆಂಡತಿ ಒರೆಸು-ತೊಳೆ-ಬಳಿ...,  ಗಂಡ ಅಡುಗೆಯ ಬಗ್ಗೆ ನಾಲ್ಕು ಕಮೆಂಟ್ ಮಾಡಿ... ,ಕಾಲು ಚಾಚಿ ಟಿ.ವಿ ನೋಡುವ ನಮ್ಮ ಆದರ್ಶ ಸಂಸಾರಗಳು ಎಲ್ಲೂ ಕಾಣಲಿಲ್ಲ. ನಿಮಿಷ ಮಾತ್ರದಲ್ಲಿ ಎಲ್ಲರೂ ಸೇರಿ ಅಡುಗೆಮನೆಯನ್ನು ಓರಣವಾಗಿಸಿ, ಹರಟೆಗೆ ಸಜ್ಜಾಗುತ್ತಿದ್ದರು. ರಾತ್ರಿ ಹತ್ತು ಗಂಟೆಗೆ ಸೂರ್ಯಾಸ್ತವಾಗುತ್ತಿದ್ದುದರಿಂದ ಕೆಲ ಬೀದಿಗಳ ಎಲ್ಲ ಮನೆಗಳವರು ಕುರ್ಚಿಗಳನ್ನು ಹಾಕಿಕೊಂಡು ಒಟ್ಟಾಗಿ ಹರಟುವ ಅದ್ಭುತ ದೃಶ್ಯಗಳೂ ಕಂಡವು. ನಾನು ಹೋದ ಒಂದೆರಡು ಮನೆಗಳವರು ಡೈವೋರ್ಸ್ ಆದ ಏಕಾಂಗಿಗಳು. ಹಾಗಂತ ಗೋಳೋ ಅಂತ ಹಳೆಕತೆ ಹೇಳಿಕೊಳ್ಳದೇ ಮುಂದಿನ ಜೀವನದ ಬಗ್ಗೆ ನನ್ನೊಂದಿಗೆ ತಮ್ಮ ಭಾವನೆಗಳನ್ನು ಹಂಚಿಕೊಂಡರು. ವಯಸ್ಸಾದ ತಂದೆ-ತಾಯಿ ಮಕ್ಕಳ ಜೊತೆ ವಾಸಿಸುವ ಸಂಸ್ಕೃತಿ ಅಲ್ಲಿ ಇಲ್ಲ. ತಮ್ಮ ಕೈಲಾಗುವಷ್ಟು ದಿನ ಸ್ವತಂತ್ರವಾಗಿದ್ದು, ಹಾಸಿಗೆ ಹಿಡಿಯುತ್ತಿದ್ದಂತೆಯೇ ಸರಕಾರವೇ ನಡೆಸುವ ವೃದ್ಧಾಶ್ರಮಗಳಿಗೆ ಸೇರುತ್ತಾರೆ. ನನಗೆ ಇಬ್ಬರು ವೃದ್ಧರು ಸಿಕ್ಕಿದರು. ಅವರಿಗೆ ತಮ್ಮ ಸ್ವತಂತ್ರ ಜೀವನದ ಬಗ್ಗೆ ಸಂತೋಷ-ಹೆಮ್ಮೆ ಕಾಣಿಸಿತು. “ಯಾಕೆ  ಈ ಕಷ್ಟ..ಮಕ್ಕಳ ಮನೆಯಲ್ಲಿ ಇರಬಾರದೇ?” ಅಂತ ಒಬ್ಬರನ್ನು ಮಾತಿಗೆಳೆದೆ. ಹೇ ಲೇಡಿ..ಐ ಆಮ್ ಸ್ಟಿಲ್ ಸ್ಟಾಂಡಿಂಗ್ .. ನಾಟ್ ರೀಚಡ್ ದ ಗ್ರೇವ್ ಯೆಟ್[ ಗೋರಿ ಸೇರಿಲ್ಲ.. ನನ್ನ ಕಾಲ ಮೇಲೆ ನಿಂತಿದೀನಿ.. ಕಾಣ್ತಾ ಇಲ್ವೇನಮ್ಮ....] ಅನ್ನೋ ಉತ್ತರ ರಪ್ಪಂತ ಹೊಡೀತು.  

ಹೆಚ್ಚಿನ ಮನೆಗಳಲ್ಲಿ ಯೋಗಾಭ್ಯಾಸವನ್ನು ಕಂಡು ಅಚ್ಚರಿಯಾಯಿತು. ಸಂಸ್ಕೃತ ಕಲಿಯಲು ಮಾರ್ಗದರ್ಶನ  ಮತ್ತು  ಬಿಕೆ ಎಸ್ ಅಯ್ಯಂಗಾರರ ಜರ್ಮನ್ ಭಾಷೆಯ ಪುಸ್ತಕವನ್ನು ನನಗೆ ತೋರಿಸಿ, ಸಂಸ್ಕೃತ ಪದಗಳ ಉಚ್ಚಾರಣೆಯನ್ನು ಸರಿಪಡಿಸುವಂತೆ ಕೇಳಿಕೊಂಡಾಗ ಹೆಮ್ಮೆಯಿಂದ ಹೃದಯ ತುಂಬಿ ಬಂತು. ಭಾರತೀಯ ನೃತ್ಯ-ಸಂಗೀತ-ಅಡುಗೆಯ ಬಗ್ಗೆ ಕೊನೆಯಿಲ್ಲದ ಪ್ರಶ್ನೆಗಳು. ನಮ್ಮ ಬಹುಭಾಷಾ ಪಾಂಡಿತ್ಯ, ಇಂಗ್ಲೀಷ್ ಜ್ಞಾನವನ್ನು ಎಷ್ಟು ಹೊಗಳಿದರೂ ಸಾಲದು ಅವರಿಗೆ... ಶಬ್ದ ಯೋಗ, ವಿನ್ಯಾಸ ಯೋಗ, ಫ್ಲೋ ಯೋಗ ಹೀಗೆ ಯೋಗದ [ವ್ಯಾಪಾರೀ] ಮುಖಗಳ ದರ್ಶನವೂ ಆಯಿತು. ಈ ಯೋಗ ಶಿಕ್ಷಕರು ಮೆಕ್ಸಿಕೋ, ಹಾಲೆಂಡ್ ಮುಂತಾದೆಡೆ ಕಲಿತವರಂತೆ!!
ಅವರ ನಿತ್ಯಾಹಾರವಾದ ಮೊಟ್ಟೆ,ಮಾಂಸ ತಿನ್ನದ, ಬೀರು,ವೈನು ಕುಡಿಯದ ನಾನೊಬ್ಬಳು ಅವರಿಗೆ  ವಿಚಿತ್ರ ಜೀವಿ! ಹಣ್ಣು-ತರಕಾರಿ, ಮೊಸರು,ಜ್ಯೂಸು, ಸಿರಿಧಾನ್ಯ ಅಡುಗೆಗಳಿಂದ ನನ್ನ ತಟ್ಟೆಯನ್ನು ತುಂಬಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದರು. ಸೂರ್ಯಾಸ್ತವಾಗುತ್ತಿದ್ದಂತೆ ದೀಪ ಹಚ್ಚುವ ಕ್ರಮವನ್ನು ಅನೇಕ ಮನೆಗಳಲ್ಲಿ ನೋಡಿದೆ. ಮನೆಗೆ ಐಶ್ವರ್ಯ-ಸಂತೋಷ ದೇವತೆ ಬರಲಿ ಅಂತ ಅವರ ಉದ್ದೇಶವಂತೆ. ಒಬ್ಬಾಕೆ ಎರಡು ದೀಪ ಹಚ್ಚಿದ್ದಳು . ಯಾಕೆ? ಅಂದೆ. ಒಂದು ಅವರ ಮನೆಗೆ. ಇನ್ನೊಂದು ಅಲ್ಲೆಲ್ಲೋ ದೂರ ಇರುವ ಅವಳ ವಯಸ್ಸಾದ ಅಪ್ಪ ಅಮ್ಮನ ಮನೆಗಂತೆ... ಅವರಿಗೆ ಮೈಯಲ್ಲಿ ಶಕ್ತಿ ಇಲ್ಲ, ಮರೆವು ಬೇರೆ.... ಅದಕ್ಕೆ ಅವರಿಗೋಸ್ಕರ ನಾನೇ ಹಚ್ತೀನಿ ಅಂದ್ಲು. ಏನೇ ಹೇಳಿ... ಎಲ್ಲಿ ಹೋದ್ರೂ ಹೆಣ್ಮಕ್ಕಳ ತವರಿನ ಮೋಹ ಮಾತ್ರ ಒಂದೇ ಥರ ಅನಿಸಿತು.....
ಅಲ್ಲಿನ ಶಿಕ್ಷಣ ವ್ಯವಸ್ಥೆ ಕೂಡಾ ಕುತೂಹಲಕಾರಿ. ೪ನೇ ತರಗತಿಯವರೆಗೆ ಎಲ್ಲ ಮಕ್ಕಳೂ ಒಂದೇ ಶಾಲೆಯಲ್ಲಿ ಓದುತ್ತಾರೆ..ಕೊನೆಯಲ್ಲಿ ಪರೀಕ್ಷೆ ನಡೆಸಿ ಮಕ್ಕಳ ಕೌಶಲಗಳನ್ನು ನಿರ್ಧರಿಸುತ್ತಾರೆ. ಐದರಿಂದ ಹನ್ನೆರಡನೇ ತರಗತಿಯವರೆಗಿನ ಶಿಕ್ಷಣಕ್ಕೆ ಮೂರು ಥರದ ಶಾಲೆಗಳಿವೆ-೧. ಲಾಜಿಕಲ್ ಥಿಂಕಿಂಗ್ ಇರುವವರಿಗೆ ,೨. ಕಲೆ-ಆಟಗಳಲ್ಲಿ ಜಾಣರಿಗೆ ೩. ಕಲಿಕೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದವರಿಗೆ. ಮಕ್ಕಳು ಈ ಮೂರು ಶಾಲೆಗಳಲ್ಲಿ ತಮ್ಮ ತಮ್ಮ ಕೌಶಲಕ್ಕೆ ಅನುಗುಣವಾಗಿ ಐದನೇ ತರಗತಿಗೆ ಸೇರುತ್ತಾರೆ. ಅಲ್ಲಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ವಿದ್ಯಾಭ್ಯಾಸ ಪಡೆಯುತ್ತಾರೆ. ಮಧ್ಯೆ ಮಕ್ಕಳ ಆಸಕ್ತಿಗಳು ಬದಲಾದರೆ ಶಾಲೆ ಬದಲಿಸುವ ಅವಕಾಶ ಇದೆ. ಕೆಲ ಪಾಲಕರು ತಮ್ಮ ಆಸೆಗಳನ್ನು ಮಕ್ಕಳ ಮೇಲೆ ಹೇರುವುದು, ಆ ನಾಲ್ಕನೇ ಕ್ಲಾಸಿನ ಶಿಕ್ಷಕರ ಜೊತೆ ಮುನಿಸಿಕೊಳ್ಳುವುದು ಮಾಡ್ತಾರಂತೆ. ಆದರೆ ೧೨ನೇ ತರಗತಿವರೆಗಿನ ಸಂಪೂರ್ಣ ಉಚಿತ ಶಿಕ್ಷಣ  ಸರಕಾರದ ಬಿಗಿಮುಷ್ಟಿಯಲ್ಲಿರುವುದರಿಂದ , ಭ್ರಷ್ಟಾಚಾರ ಕಮ್ಮಿ ಇರುವುದರಿಂದ ಹೆಚ್ಚು ಗಲಾಟೆ ಆಗುವುದಿಲ್ಲ ಎಂದರು ಅಲ್ಲಿನವರು. ನಾನು ಹೋದ ಶಾಲೆ ಪುಸ್ತಕ ಬ್ರಹ್ಮರ ಮೊದಲನೇ ವರ್ಗದ್ದು. ಅಲ್ಲಿ ವಿಜ್ಞಾನ-ಗಣಿತಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ಗಮನಿಸಿದೆ.

ಹೆಚ್ಚಿನ ಎಲ್ಲ ಪಾಶ್ಚಾತ್ಯ ದೇಶಗಳಂತೆ ಇಲ್ಲೂ ಪಾಲಕರು ಮಕ್ಕಳನ್ನು ಸ್ವತಂತ್ರರನ್ನಾಗಿ ಬೆಳೆಸುತ್ತಾರೆ. ಅರೇಂಜ್ಡ್ ಮದುವೆಯ ಕಲ್ಪನೆಯೇ ಇಲ್ಲದಿರುವುದರಿಂದ ತಮ್ಮ ಸಂಗಾತಿಯನ್ನು ಹುಡುಕಿಕೊಳ್ಳುವ ಜವಾಬ್ದರಿಯೂ ಮಕ್ಕಳದ್ದೇ. ಆದ್ದರಿಂದ ಜಾತಕ -ಎತ್ತರ -ಮೈಬಣ್ಣ -ವಯಸ್ಸು ಈ ವಿಚಾರಗಳಿಗಿಂತ ಪರಸ್ಪರರ ವಿದ್ಯಾಭ್ಯಾಸ-ಸಂಪಾದನೆ-ಆಸಕ್ತಿಗಳಿಗೆ ಯುವಜನರು ಪ್ರಾಮುಖ್ಯತೆ ಕೊಡುತ್ತಾರೆ. ಆದರೆ ಕೆಲವೊಮ್ಮೆ ತಪ್ಪು ಆಯ್ಕೆಗಳು ನಡೆಯುವುದು, ಮೋಸ ಹೋಗುವುದು, ದುಶ್ಚಟಗಳು, ಅಹಂಕಾರ ಇತ್ಯಾದಿ ಸಮಸ್ಯೆಗಳು  ಯುವಕುಟುಂಬಗಳನ್ನು ಬಾಧಿಸುತ್ತವೆ. ಆದ್ದರಿಂದ ಡೈವೋರ್ಸ್ ಗೆ ಸಾಮಾಜಿಕವಾಗಿ ಒಪ್ಪಿಗೆ ಇದೆ. ಹೆಚ್ಚು ತಲೆ ಕೆಡಿಸಿಕೊಳ್ಳದೇ ಇನ್ನೊಬ್ಬ ಸಂಗಾತಿಯನ್ನು ಹುಡುಕುತ್ತಾರೆ ಈ ಜನ. ನಿಜ... ಹೀಗಾದಾಗ  ಮಕ್ಕಳು ಜೀವನ ಅತಂತ್ರವಾಗುವುದೂ ಇದೆ. ಈ ಸಮಸ್ಯೆ ಅವರ ಸಮಾಜವನ್ನು ಕಾಡುತ್ತಿರುವುದು ನಿತ್ಯಸತ್ಯ.  


    
ಅಂತೂ ಮನೆ ವಾಸ, ಮ್ಯುನಿಕ್, ಆಲ್ಫ್ಸ್ ಪರ್ವತಗಳ ಪ್ರವಾಸ ಮುಗಿಸುವ ಹೊತ್ತಿಗೆ ಅನೇಕ ಹೊಸ ವಿಚಾರಗಳನ್ನು ಕಲಿತೆ. ನಮ್ಮ ವಿದ್ಯಾರ್ಥಿಗಳಂತೂ ಲೆಕ್ಕವಿಲ್ಲದಷ್ಟು ಅಮೂಲ್ಯ ಜೀವನ ಪಾಠಗಳನ್ನು ಕಲಿತರು. ನಿಜ ಹೇಳ್ಬೇಕು ಅಂದ್ರೆ .....ಫಾರಿನ್ ಟ್ರಿಪ್ ಎನ್ನುತ್ತಾ ಅತ್ಯಂತ ಉತ್ಸಾಹದಿಂದ ಜರ್ಮನಿಗೆ ಹೋದ ನಾವು, “ಧೂಳು-ಅವ್ಯವಸ್ಥೆಯ ನಡುವೆಯೂ ನಮ್ಮ ಭಾರತ ಎಷ್ಟು ಸುಂದರವಾಗಿದೆ !! ನಮ್ಮ ದೇಶ- ಸಂಸ್ಕೃತಿಯಲ್ಲಿ ಇನ್ನೂ ಕಲಿಯೋದು ಎಷ್ಟಿದೆ ಅಲ್ವಾ!!” ಎನ್ನುತ್ತ ಮರಳಿದೆವು.


No comments:

Post a Comment