Friday, 1 December 2017

If I were the Bengaluru Mayor - ಬೆಡಗಿನೂರು - ಬೆಂಗಳೂರು


ನಿಮ್ಮೂರಿಗೆ ಈ ಹೆಸರು ಯಾಕೆ ಬಂತಂತೆ ಅಂತ ಪ್ರಪಂಚದ ಯಾರನ್ನೇ ಕೇಳಿ .. ಒಂದು ಸೊಗಸಾದ ಕತೆ ಹೇಳ್ತಾರೆ.. ರೋಚಕ ಘಟನೆ ಹೇಳ್ತಾರೆ.. ಆದ್ರೆ ನಮ್ಮೂರಿಗೆ ಮಾತ್ರ ಆ ಭಾಗ್ಯವಿಲ್ಲ. ಅದೆಂತದೋ  ಕಾಳು ಬೇಯ್ಸಿರೋ ಅಜ್ಜಿಯ ಕತೆನ ಬೆಂಗಳೂರನ್ನೋ ಬಿನ್ನಾಣಗಿತ್ತಿಗೆ ತಗಲ್ಹಾಕಿದಾರೆ.. ನಿಜ ಹೇಳ್ತೀನಿ.. ಬೆಡಗು ಅನ್ನೋ ಶಬ್ದದಿಂದಲೇ ನಮ್ಮೂರಿಗೆ ಬೆಂಗಳೂರು ಅನ್ನೋ ಹೆಸರು ಬಂದಿದೆ…. ಬೆಡಗಿನೂರು - ಬೆಂಗಳೂರು…  ಇಲ್ಲಿ ಹುಟ್ಟೋಕೆ ಜನ್ಮಾಂತರದ ಪುಣ್ಯಫಲವಿರಬೇಕು.ಅಲ್ಪ-ಸ್ವಲ್ಪ ಪುಣ್ಯ ಮಾಡಿದ್ರೆ ಕೊನೇಪಕ್ಷ ಇಲ್ಲಿನ ನಾಗರಿಕನಾಗಬಹುದು. ಇನ್ನು ಈ ಭಾಗ್ಯದೂರಿನ ನಗರಪಾಲಕ ಅಥವಾ ಮೇಯರ್ ಆಗಲಿಕ್ಕೆ ಪುಣ್ಯ ಮಾತ್ರ ಸಾಲದು.. ಯೋಗ್ಯತೆ,ಅರ್ಹತೆ, ದೂರದೃಷ್ಟಿ, ನಿಸ್ವಾರ್ಥತೆ, ನಾಗರಿಕಪ್ರಜ್ಞೆ ಎಲ್ಲವೂ ಇರಲೇಬೇಕು. ಈ ಎಲ್ಲ ಗುಣಗಳೂ ನನ್ನಲ್ಲೇ ಇವೆಯಲ್ಲ.. ನಾನ್ಯಾಕೆ ಒಂದು ಕೈ ನೋಡ್ಬಾರ್ದು ಅನ್ನೋದು ನನ್ನ ಲೆಕ್ಕಾಚಾರ.

ಬೆಂಗಳೂರು ಅಂದ್ರೆ ಅವಕಾಶಗಳ ನಗರ. ಜೀವನ ಕಟ್ಟಿಕೊಂಡು ನೆಮ್ಮದಿಯಾಗಿ ಬಾಳಬೇಕು ಅನ್ನುವ ಸ್ವಾಭಿಮಾನಿಗಳಿಗೆ ಹೇಳಿ ಮಾಡಿಸಿದ ಜಾಗವಿದು. ಆದ್ರೆ ಈ ಸ್ವಾಭಿಮಾನಿಗಳು ಸೃಷ್ಟಿಸುವ ಕಸ ನಮ್ಮ ನಗರದ ಕತ್ತು ಹಿಸುಕ್ತಾ ಇದೆ. ಈ ಕಸ ವಾರ್ಡ್ ಮಟ್ಟದಲ್ಲೇ ವಿಲೇವಾರಿ ಮಾಡುವುದು ನನ್ನ ಮೊಟ್ಟ ಮೊದಲ ಆದ್ಯತೆ. ನನ್ನ ಕಾರ್ಪೋರೇಟರ್ ಗಳ ಸಹಾಯ ಪಡ್ಕೊಂಡು ,ಕಸದ ಲಾರಿಗಳ ಲಾಬಿಯನ್ನೇ ಉಪಯೋಗಿಕೊಂಡು, ಗುತ್ತಿಗೆದಾರರನ್ನು ಈ ಕೆಲಸಕ್ಕೆ ಆಹ್ವಾನಿಸುತ್ತೇನೆ. ಮೊದಲು ಆಯ್ದ ಕೆಲವಾರ್ಡ್ ಗಳಲ್ಲೇ ಜಾಗ ಗುರುತಿಸಿ ಕಸದಿಂದ ಎಷ್ಟು ಸಾಧ್ಯವೋ ಅಷ್ಟು ಉಪಯೋಗ ಪಡೆಯುವ ಯೋಜನೆ ಆರಂಭಿಸುವುದು ನನ್ನ ಬಹುಕಾಲದ ಕನಸು. ಆದ್ರೆ ನಾನೂ ಒಬ್ಬ ರಾಜಕಾರಿಣಿ.. ಓಟು ಮತ್ತೆ ನೋಟು ಇಲ್ದೆ ಯಾವ ಆದರ್ಶಗಳೂ ಸಾಕಾರ ಆಗೋದಿಲ್ಲ ಅಂತ ಗೊತ್ತಿದೆ ನನಗೆ. ಕಸವನ್ನು ಸರಿಯಾಗಿ ವಿಲೇವಾರಿ ಮಾಡಿದ ಪಕ್ಷವನ್ನು ಜನ ಕೈ ಬಿಡಲ್ಲ ಅನ್ನೋದು ನನ್ನ ದೃಢವಾದ ನಂಬಿಕೆ.

 ಭೌಗೋಳಿಕವಾಗಿ ನೋಡಿದ್ರೆ ನಮ್ಮೂರಿನಷ್ಟು ಅದ್ಭುತವಾದ ಜಾಗ ಇನ್ನೊಂದಿಲ್ಲ. ಕಾಲಕಾಲಕ್ಕೆ ಮಳೆ, ಯಾವಾಗ್ಲೂ ಬೀಸೋ ತಂಗಾಳಿ, ಹಿತವಾದ ಬಿಸಿಲು. ಅದಕ್ಕೇ ಅಲ್ವೇ ಇಲ್ಲಿ ಅಷ್ಟೊಂದು ಉದ್ಯಾನಗಳು. ಖಾಲಿ ಸೈಟ್ ಗಳು, ಮೆಟ್ರೋ ಮಾರ್ಗದ ಕೆಳಗಿನ ಜಾಗ , ಡಿವೈಡರ್ ಗಳು ಇಲ್ಲೆಲ್ಲ ತುಂಬ ಆರೈಕೆ ಬೇಕಾಗೋ ಯಾವುದೋ ಫಾರಿನ್ ಹೂಗಿಡಗಳ ಬದಲು ಸುಲಭವಾಗಿ ಬೆಳೆಯೋ ದಾಸವಾಳ, ಸದಾಪುಷ್ಪ , ಕಣಗಿಲೆ ಇಂಥ ಗಿಡಗಳನ್ನು ಹಾಕಬೇಕು ಅನ್ನೋ ಭಾವನೆ ನಂದು. ಒಂದು ಸಾರಿ ನೆಟ್ಟು ಎರಡು ದಿನ ನೋಡ್ಕೊಂಡ್ರೆ ವರ್ಷಾನುಗಟ್ಟಲೆ ಅರಳ್ತಾವೆ ಈ ಗಿಡಗಳು. ಈ ಕೆಲಸಕ್ಕೆ ಆ ಏರಿಯಾದ ವ್ಯಾಪಾರಿಗಳನ್ನೇ ಹಿಡಿಯೋದು ಒಳ್ಳೇದು. ಅವರ ಜಾಹೀರಾತಿಗೆ ಒಂದು ಅಡಿ ಜಾಗ ಕೊಟ್ರಾಯ್ತು..

ನಗರದ ಪಿಯುಸಿ ವಿದ್ಯಾರ್ಥಿಗಳನ್ನೆಲ್ಲ ಒಮ್ಮೆ ಭೇಟಿಯಾಗ್ಬೇಕು ಅನ್ನೋದು ನನ್ನ ಇನ್ನೊಂದು ಕನಸು. ಈ ದರಿದ್ರ ನಾಯಕರನ್ನು ನೋಡ್ತಾ ಬೆಳೀತಿರೋ ನಮ್ಮ ಮಕ್ಕಳಿಗೆ ನಗರದ ಭವಿಷ್ಯದ ಬಗ್ಗೆ ನಿರಾಸೆಯಾಗ್ತಿದೆ. ಪ್ರತೀ ಶನಿವಾರ ಎರಡು ಕಾಲೇಜುಗಳಿಗೆ ಭೇಟಿ ಕೊಡ್ಬೇಕು [ಗವರ್ನ್ಮೆಂಟು-ಪ್ರೈವೇಟು] ಅಂದ್ಕೊಂಡಿದೀನಿ. ಅಲ್ಲಿಗೆ ಹೋಗಿ ನಮ್ಮ ಸರಕಾರೀ ವ್ಯವಸ್ಥೆ ಬಗ್ಗೆ ವಿವರಿಸಿ , ನಗರ ನಿರ್ವಹಣೆಯ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸ್ಬೇಕು. ನಮ್ಮ ಸಮಸ್ಯೆಗಳ ಸಮಾಧಾನ ನಮ್ಮ ಮನೆಗಳಿಂದ ಶುರು ಆಗ್ಬೇಕು, ಟ್ರಾಫಿಕ್ ರೂಲ್ಸು, ಸ್ವಚ್ಛತೆ, ಮಳೆನೀರು ಸಂಗ್ರಹ ಇವನ್ನೆಲ್ಲ ಪಾಲಿಸಿ ಅಂತ ಹೇಳ್ಬೇಕು. ಪ್ರತೀ ಕಾಲೇಜಿನಿಂದ ಇಬ್ಬರು ಮಕ್ಕ್ಳು ತಿಂಗಳಿಗೊಮ್ಮೆ ಪಾಲಿಕೆ ಸಭೆಯಲ್ಲಿ ಭಾಗವಹಿಸಬಹುದು ಅಂತ ಆಮಿಷನೂ ಒಡ್ತೀನಿ.ಇಲ್ಲಿ ನನ್ನ ಸ್ವಾರ್ಥನೂ ಇದೆ.. ಇವರೇ ಅಲ್ವೆ ನಮ್ಮ ಮುಂದಿನ ಮತದಾರರು...!!  

ಈ ರಸ್ತೆ ಗುಂಡಿಗಳಿಗೆ ಏನಾದ್ರೂ ಮಾಡ್ಲೇಬೇಕ್ರೀ..ಈ ಕೆಲಸ ನನ್ನ ೧ ವರ್ಷದ ಅವಧಿಯಲ್ಲಿ ಆಗೋದಲ್ಲ. ಅದಕ್ಕೆ ಎಲ್ಲ ರಸ್ತೆಗಳ ಕೇಸ್ ಹಿಸ್ಟರಿ ಅಂತ ಒಂದು ರಿಸರ್ಚ್ ಶುರು ಮಾಡಿಸ್ತೀನಿ. ಆಗ ಸರಕಾರದ ದುಡ್ಡು ನುಂಗೋ ಗುತ್ತಿಗೆದಾರರನ್ನು ಹಿಡೀಬಹುದು ಅಂತ ನನ್ನ ಲೆಕ್ಕಾಚಾರ. ಕಾರ್ಪೋರೇಟರ್ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ್ರೆ ದುಡ್ಡು ಸೋರಿಕೆ ನಿಲ್ಲಿಸಬಹುದು. ರಸ್ತೆ ಗುಣಮಟ್ಟನೂ ಹೆಚ್ಚಿಸಬಹುದು. ನಮ್ಮವರು ಕ್ಷಣಿಕ ಲಾಭ ನೋಡ್ತಾರೆ ಸಾರ್.. ಒಳ್ಳೆ ರಸ್ತೆ ಮಾಡಿಸಿದರೆ ಮತ್ತೆ ಮತ್ತೆ ನಮ್ ಪಾರ್ಟಿನೇ ಗೆಲ್ಲಬಹುದು ..ಅಧಿಕಾರ ಶಾಶ್ವತವಾಗಿರುತ್ತದೆ ಅನ್ನೋ ತಿಳುವಳಿಕೆ ಮೂಡಿಸಿದರೆ ಎಲ್ಲರಿಗೂ ಲಾಭ ಅಲ್ವೇ? ಜೊತೆಗೆ ರಸ್ತೆ ನಿರ್ವಹಣೆಯನ್ನು ಖಾಸಗಿಯವರಿಗೆ ಕೊಟ್ರೆ ತಲೆನೋವಿಲ್ಲ ಅಂತ ನನ್ನ ಅಭಿಪ್ರಾಯ. ಕೌನ್ಸಿಲ್ ನಲ್ಲಿ ಈ ಬಗ್ಗೆ ಚರ್ಚಿಸಿ ನೋಡುತ್ತೇನೆ. ಖಾಸಗಿಯವರಿದ್ದಲ್ಲಿ ಸ್ಪರ್ಧೆ ಏರ್ಪಡುತ್ತದೆ. ಜಡ್ಡುಗಟ್ಟಿರುವ ಸರಕಾರೀ ವ್ಯವಸ್ಥೆ ಎಚ್ಚೆತ್ತುಕೊಳ್ಳಬಹುದು.

ನನ್ನೂರಲ್ಲಿ ಎಲ್ಲ ಕಡೆ ಗ್ರಂಥಾಲಯಗಳು ಇರಬೇಕು. ಎಲ್ಲ ಸುಪರ್ ಮಾರ್ಕೆಟ್, ಮಾಲ್ ಗಳಲ್ಲಿ  ಕನಿಷ್ಠಪಕ್ಷ ೫ ಚದರ ಜಾಗ ಗ್ರಂಥಾಲಯಕ್ಕೆ ಇರಲೇಬೇಕು. ಇದನ್ನು ಅವರೇ ನಿಭಾಯಿಸಬೇಕು. ಇಲ್ಲಿ ಅರ್ಧದಷ್ಟು ಕನ್ನಡ ಪುಸ್ತಕಗಳನ್ನಿಡಬೇಕು. ಅಲ್ಲಿ ಕೂತು ಹರಟೆ ಹೊಡೆಯುವ , ಕಾಲಹರಣ ಮಾಡುವ ಯುವಜನರು, ಹೆಂಡತಿ ಶಾಪಿಂಗ್ ಮಾಡುತ್ತಿದ್ದರೆ ಕಾಯುತ್ತ ಇರುವ ಗಂಡಂದಿರು , ಗರ್ಲ್-ಬಾಯ್ ಫ್ರೆಂಡ್ ಗೆ ಕಾಯ್ತಾ ಇರುವವರು, ಪುಸ್ತಕ ಓದುವ ಹವ್ಯಾಸ ಬೆಳೆಸ್ಕೊಳ್ಳಬಹುದು. ಬೆಂಗಳೂರಿನವರು ವಿದ್ಯಾವಂತರು. ಅವರಿಗೆ ಇದು ಬೇಕೇ ಬೇಕು.
 
ಬಸ್ ಸ್ಟಾಂಡ್ಗಳಲ್ಲಿ ಅಳವಡಿಸಿರೋ ಟಿ.ವಿ ಗಳಲ್ಲಿ ನಮ್ಮ ರಾಜ್ಯದ ಸಾಧಕರ ಬಗ್ಗೆ ಹಾಕಬೇಕು ಅನ್ನೋ ಕನಸು ನನ್ನದು. ಸಾಧಕರು ಅಂದ್ರೆ ಸಾಹಿತಿಗಳಲ್ಲರೀ... ಒಬ್ಬ ಒಳ್ಳೇ ರೈತ, ವಿಶಿಷ್ಟ ವಿದ್ಯಾರ್ಥಿ, ನಿಷ್ಟಾವಂತ ಪೌರಕಾರ್ಮಿಕ, ಸೊಗಸಾಗಿ ಕನ್ನಡ ಮಾತಾಡುವ ಭಾಷಣಕಾರ, ಸಹೃದಯ ಶಿಕ್ಷಕ, ಕಳಕಳಿಯಿರುವ ವೈದ್ಯ ಇವರೆಲ್ಲ ನಿಜವಾದ ಸಾಧಕರು. ಇವರ ಬಗ್ಗೆ ಜನ ತಿಳ್ಕೊಳ್ಳಬೇಕು. ಇವರ ಥರ ಆಗಲಿಕ್ಕೆ ಪ್ರಯತ್ನ ಮಾಡಬೇಕು.ಈ ಕೆಲಸವನ್ನು ನಮ್ಮ ವಿದ್ಯಾರ್ಥಿಗಳಿಗೆ ವಹಿಸ್ತೇನೆ. ಒಂದು ವೆಬ್ಸೈಟ್ ಮಾಡಿಸುತ್ತೇನೆ. ತಮ್ಮ ಸುತ್ತಲೂ ಕಾಣುವ ಇಂಥ ಸಾಧಕರ ವಿಡಿಯೋ ಮಾಡಿ ಅದರಲ್ಲಿ  ತಮ್ಮ ಕಾಲೇಜಿನ ಪ್ರಿನ್ಸಿಪಾಲರ ಜೊತೆ ಲಾಗಿನ್ ಆಗಿ ವಿಡಿಯೋ ಹಾಕಬೇಕು. ಟಿವಿ ನಲ್ಲಿ ಸಾಮಾನ್ಯರೂ ಬರಬೇಕ್ರೀ..

ಇನ್ನೊಂದ್ ವಿಷ್ಯ ಏನಪ್ಪಾ ಅಂದ್ರೆ ನಮ್ಮೂರಲ್ಲಿ ಚರಂಡಿ ವ್ಯವಸ್ಥೆ ತಕ್ಕಮಟ್ಟಿಗೆ ಇದೆ. ಆದ್ರೆ ಅದು ಕಟ್ಕೊಂಡಿರುತ್ತದೆ. ರಸ್ತೆಯಿಂದ ಚರಂಡಿಗೆ ಮಳೆನೀರು ಹೋಗುವ ತೂಬುಗಳಲ್ಲಿ ಪ್ಲಾಸ್ಟಿಕ್ ಸೇರ್ಕೊಂಡು ರಸ್ತೆನೇ ನದಿಯಾಗುತ್ತದೆ. ಇದರ ನಿವಾರಣೆಗೆ ನನ್ನ ಪ್ರಯತ್ನ ಮಾಡುತ್ತೇನೆ. ಎಪ್ರಿಲ್-ಮೇ ತಿಂಗಳಲ್ಲಿ ಚರಂಡಿ ಸ್ವಚ್ಛತಾ ಕಾರ್ಯ ಆರಂಭಿಸುತ್ತೇನೆ. ಇನ್ನು ಈ ರಾಜಕಾಲುವೆದು ಬೆಟ್ಟದಂಥಾ ಸಮಸ್ಯೆ. ಇದರ ತೆರವಿಗೆ ಹಂತಹಂತವಾಗಿ ಕ್ರಮ ಆರಂಭಿಸಿದರೆ ಸಂಪೂರ್ಣ ನಿವಾರಣೆ ಮಾಡಬಹುದು.

ಕೆರೆ ಪುನಶ್ಚೇತನ ನನಗಿರೋ ಇನ್ನೊಂದು ಹೆಬ್ಬಯಕೆ. ಕಾರ್ಪೋರೇಟರ್ ಗಳಿಗೆ ಹೀಗೊಂದು ಸ್ಪರ್ಧೆ ಏರ್ಪಡಿಸಬೇಕು. ಮುಂದಿನ ಚುನಾವಣೆಗೆ ಟಿಕೆಟ್ ಸಿಗೋಕೆ ಕನಿಷ್ಠ ಒಂದು ಉದ್ಯಾನ, ಒಂದು ಕೆರೆಯನ್ನಾದರೂ ಅಭಿವೃದ್ಧಿ ಮಾಡಿರಲೇಬೇಕು ಅನ್ನುವ ನಿಯಮ ತರಬೇಕು. ಲೇಕ್ ವ್ಯೂ ಅಂತ ಹೆಸರು ಹಾಕ್ಕೊಂಡು ಅಪಾರ್ಟ್ಮೆಂಟ್ ಕಟ್ಟಿಸ್ತಾರಲ್ಲ ಅಂಥ ಕಂಪನಿಗಳ ಹೆಗಲಿಗೆ ಕೆರೆ ರಕ್ಷಣೆಯ ಜವಾಬ್ದಾರಿಯನ್ನು ಕಡ್ಡಾಯವಾಗಿ ಹೊರಿಸುತ್ತೇನೆ. ಕೆರೆ ಶುಭ್ರವಾಗಿದ್ರೆ ಯಾವ ಪಕ್ಷ ಅಥವಾ ಯಾವ ಜನ ಇಷ್ಟಪಡಲ್ಲ ಹೇಳಿ. ಆರಂಭದಲ್ಲಿ ವಿರೋಧ ಎದುರಾಗಬಹುದು . ಆದರೆ ಕಟ್ಟುನಿಟ್ಟಾದ ನಿಯಮ ತಂದ್ರೆ ಖಂಡಿತ ಎಲ್ಲರೂ ಪಾಲಿಸ್ತಾರೆ. ನಮ್ಮ ಬೆಂಗಳೂರಿಗೆ ಕಪ್ಪು ಮಚ್ಚೆಯಂತಿರುವ ಬೆಳ್ಳಂದೂರುಕೆರೆಯ ಸಮಸ್ಯೆಯನ್ನು ಬಗೆಹರಿಸಲು ಅಲ್ಲಿನ ಪ್ರದೇಶದ ಕಾರ್ಖಾನೆಗಳ ಮಾಲೀಕರ ಸಭೆ ಕರೆಯುತ್ತೇನೆ. ಸರಕಾರದ-ಕಾರ್ಖಾನೆಗಳ ಸಹಭಾಗಿತ್ವದಲ್ಲಿ ಕೊಳಚೆ ಶುದ್ಧೀಕರಣ ಘಟಕ ಸ್ಥಾಪಿಸುವ ಪ್ರಸ್ತಾವಕ್ಕೆ ಅವರನ್ನು ಒಪ್ಪಿಸುತ್ತೇನೆ. ಕಾರ್ಪೋರೇಟರ್ ಮತ್ತು ಶಾಸಕರು ಮನಸ್ಸು ಮಾಡಿದರೆ ಯಾವ ಕೆಲಸ ಅಸಾಧ್ಯ ಹೇಳಿ?

ನಮ್ಮ ಸಿಟಿ ಬಸ್ ಸರ್ವಿಸ್ ನಲ್ಲಿ ಡೀಸೆಲ್ ಗಾಡಿಗಳ ಬದಲಿಗೆ ಸಿ ಎನ್ ಜಿ ವಾಹನಗಳನ್ನು ಉಪಯೋಗಿಸಿದರೆ ಮಾಲಿನ್ಯ ಕಡಿಮೆಯಾಗುತ್ತದೆ. ಈ ಪ್ರಸ್ತಾವವನ್ನು ಜಾರಿಗೊಳಿಸಲು ಶತಾಯ ಗತಾಯ ಪ್ರಯತ್ನಿಸುತ್ತೇನೆ.ಹಾಗೆಯೇ ಸಿಟಿ ಬಸ್ ವ್ಯವಸ್ಥೆಯಲ್ಲಿ  ಕೆಲವು ಮಾರ್ಗಗಳಲ್ಲಿ ಮಿನಿ ಬಸ್ಸುಗಳನ್ನು ಹಾಕಬೇಕೆಂದು ಸಲಹೆ ಕೊಡುತ್ತೇನೆ. ಚಿಕ್ಕ ರಸ್ತೆಗಳಲ್ಲಿ ಚಿಕ್ಕ ಬಸ್ಸುಗಳಿದ್ದರೆ ಒಳ್ಳೆಯದು. ಬರೀ ನಾಲ್ಕು ಜನರಿಗೋಸ್ಕರ ದೊಡ್ಡ ಬಸ್ಸು ವ್ಯರ್ಥವಲ್ಲವೇ? ಏರ್ ಪೊರ್ಟ್ ಬಸ್ ಗಳಲ್ಲಿ ಯಾವಾಗ್ಲೂ ಜನ ಇರುವುದಿಲ್ಲ. ಆದ್ರೆ ದೊಡ್ಡ ಬಸ್ಸು ಅಡ್ಡಾಡುತ್ತದೆ. ಇದರ ಬಗ್ಗೆ ಗಮನ ಕೊಡಿ ಅಂತ ನನ್ನ ಸಲಹೆ.

ಬೀದಿನಾಯಿಗಳ ನಿಯಂತ್ರಣ ಇನ್ನೊಂದು ವಿಷಯ.ನಾಯಿಗಳ ಸಂತಾನಹರಣಕ್ಕೆ ಹೆಚ್ಚು ಒತ್ತು ಕೊಡುವ ಕಾರ್ಯಕ್ರಮ ಹಾಕಿಕೊಳ್ಳುತ್ತೇನೆ. ಕಸದ ಸಮಸ್ಯೆ ಕಮ್ಮಿ ಆದ್ರೆ ನಾಯಿಗಳೂ ನಿಯಂತ್ರಣಕ್ಕೆ ಬರುತ್ತವೆ.

ನಾನೇನಾದ್ರೂ ಮೇಯರ್ ಆದ್ರೆ ನಾನು ಭಾಗವಹಿಸೋ ಸಮಾರಂಭದಲ್ಲಿ ಪ್ಲಾಸ್ಟಿಕ್ ಉಪಯೋಗ ಅತಿ ಕಡಿಮೆ ಇರಬೇಕು. ನಿರ್ದಾಕ್ಷಿಣ್ಯವಾಗಿ ಇದನ್ನು ಜಾರಿಗೆ ಮಾಡ್ತೇನೆ. 

ಎಲ್ಲಕ್ಕಿಂತ ಮುಖ್ಯ ಅಂದ್ರೆ ನಮ್ಮ ಕಾರ್ಪೋರೇಟರ್ ಗಳಿಗೆ ನೈತಿಕ -ಸಾಮಾಜಿಕ ಪ್ರಜ್ಞೆ ತರಿಸುವಂಥ ಕಾರ್ಯಕ್ರಮಗಳಿಗೆ ಒತ್ತು ಕೊಡುತ್ತೇನೆ. ನನ್ನ ವಾರ್ಡ್ ನಲ್ಲಿ ಮೊದಲು ನನ್ನ ಪ್ರಯೋಗಗಳನ್ನೆಲ್ಲ ಆರಂಭಿಸುತ್ತೇನೆ. ನಾನೇ ಮಾಡಿ ತೋರ್ಸಿದ್ರೆ ಕಾಲಕ್ರಮೇಣ ಕೆಲವರು ತಿದ್ದಿಕೋಬಹುದು ಅನ್ನೋದು ನನ್ನ ದೃಢನಂಬಿಕೆ. ಸರಕಾರೀ ಕಚೇರಿಗಳಲ್ಲಿ ನಮ್ಮ ಪ್ರಯೋಗಗಳನ್ನು ಮೊದಲು ಜಾರಿಗೆ ತರಬೇಕು. ನಮ್ಮ ಕಚೇರಿಗಳು ಸೋಮಾರಿಗಳ, ಭ್ರಷ್ಠರ ಕಾಯಂ ನಿವಾಸಗಳು ಅನ್ನೋ ಧೋರಣೆಯನ್ನು ಬದಲಿಸಬೇಕು. ನಾನು ಮೇಯರ್ ಆದರೆ ಈ ವ್ಯವಸ್ಥೆಯಲ್ಲಿ ನನ್ನ ಹೆಜ್ಜೆಗುರುತನ್ನು ಮೂಡಿಸಿ ನಿರ್ಗಮಿಸುವುದೇ ನನ್ನ ಹೆಬ್ಬಯಕೆ.

Friday, 17 November 2017

STREAM OF JOY - A home away from home.

ಮೊನ್ನೆ ಹತ್ತನೇ ತರಗತಿಯಲ್ಲಿ ಮಕ್ಕಳನ್ನು ನಿಮ್ಮ ಮುಂದಿನ ಗುರಿ/ಕನಸುಗಳೇನು ಎಂದು ಕೇಳಿದೆ. ನೂರಾರು ಕಲ್ಪನೆಗಳು ಗರಿಕೆದರಿದವು. ಕಲಿಕೆಯಲ್ಲಿ ಸ್ವಲ್ಪ ಹಿಂದಿರುವ, ಆ ಎರಡನೇ ಬೆಂಚಿನಲ್ಲಿ ಸುಮ್ಮನೆ ಕುಳಿತಿದ್ದ ಅಂಜಲಿಯನ್ನೂ ಮಾತಿಗೆಳೆದೆ. ಅವಳು ಉತ್ತರಿಸಲು ತಡವರಿಸುತ್ತಿದ್ದಂತೆಯೇ ಈ ತುದಿಯಲ್ಲಿದ್ದ ರೋಹನ್ “Ma’am, she will be a housewife and will work in the kitchen” ಎಂದು ಕುಹಕವಾಡಿದ. ಅಷ್ಟು ಹೊತ್ತು ನೀರಿನಲ್ಲಿ ಬಿದ್ದ ಹೇನಿನಂತಿದ್ದ ಅಂಜಲಿ ಧಡಕ್ಕನೇ ಎದ್ದು, ರೋಹನನ ಕಾಲರ್ ಪಟ್ಟಿ ಹಿಡಿದು ಎರಡು ಏಟು ಕೊಡೋದೇ! ನನಗಂತೂ ಯಾಕಪ್ಪಾ ಈ ಕನಸುಗಳ ಉಸಾಬರಿ ನನಗೆ ಬೇಕಿತ್ತು? ಅನಿಸಿತು. ಇಲ್ಲಿ ಸರಿತಪ್ಪುಗಳ ವಿಶ್ಲೇಷಣೆಗಿಂತ, ಗೃಹಿಣಿಯಾಗುವುದು, ಅಡಿಗೆಮಾಡುವುದು ಅಷ್ಟೊಂದು ಕೀಳು ಉದ್ಯೋಗವೇ?ಎಂಬ ಪ್ರಶ್ನೆ ಕಾಡಿತು ನನಗೆ. ಆದರೆ  Stream of Joy ಅತಿಥಿಗೃಹದ ಒಡತಿ ಶ್ರೀಮತಿ ಕಾಂಚನಾ ದಾಮ್ಲೆಯವರ ಮಾತನಾಡಿದ ಮೇಲೆ ನನ್ನ ತಳಮಳ ಕಾಣೆಯಾಯಿತು.ಯಾಕೆಂದ್ರೆ ಅವರು ಹೆಮ್ಮೆಯಿಂದ ಹೇಳುತ್ತಾರೆ - ಅಡುಗೆ ನನ್ನ ಪ್ರವೃತ್ತಿ ಹಾಗೂ ವೃತ್ತಿ... I love it....
ಕಾಂಚನಾ ಶಿರಸಿಯ ವೆಂಕಟರಾವ್ ಗೋಖಲೆ- ವೀಣಾ ಗೋಖಲೆಯವರ ಮಗಳು. ಅವಿಭಕ್ತ ಕುಟುಂಬದಲ್ಲಿ ಬೆಳೆದ ಅವರು ಅಡಿಗೆಮನೆ ಪ್ರವೇಶಿಸಿದ್ದು ಅಪರೂಪಕ್ಕೊಮ್ಮೆ. ಬಿ.ಎ ಡಿಗ್ರಿ ಮುಗಿಸಿ 1996 ರಲ್ಲಿ  ಶಿಶಿಲದ ಕಾಶೀನಾಥ ದಾಮ್ಲೆಯವರ ಕೈಹಿಡಿದು ಮಂಗಳೂರಿನಲ್ಲಿ ಸಂಸಾರ ಹೂಡಿದರು. ಕೆಲವೇ ತಿಂಗಳುಗಳಲ್ಲಿ ಶಿಶಿಲಕ್ಕೆ ಸಂಸಾರ ವರ್ಗಾವಣೆ ಆಗಬೇಕಾಯಿತು. ಅಯ್ಯೋ.. ನಗರದಲ್ಲಿ ಬೆಳೆದ ಕಾಂಚನಾಗೆ ಕಿರಿಕಿರಿ.. ಚಿತ್ಪಾವನೀ-ತುಳು ಭಾಷೆ ಬಾರದು..ಊಟ ಸೇರದು..ಆಚಾರ ವಿಚಾರ ಹೊಸದು.. ಆದರೂ ನಿಧಾನವಾಗಿ ಹಳ್ಳಿಗೆ ಹೊಂದಿಕೊಂಡರು. ಮುಂದೆ 2008 ರಲ್ಲಿ ಮೈದುನ ಹೃಷಿಕೇಶ ದಾಮ್ಲೆಯವರ ಸಲಹೆಯಂತೆ, ಪತಿ ಕಾಶೀನಾಥ ದಾಮ್ಲೆಯವರು ಎರಡು ಕೊಠಡಿಗಳ ಹೋಮ್ ಸ್ಟೇ ಉದ್ಯಮ ಆರಂಭಿಸಿದಾಗ  ಕಾಂಚನಾ ಸ್ವಲ್ಪ ಅಳುಕುತ್ತಲೇ ತಲೆಯಾಡಿಸಿದರು.
ಅತಿಥಿಗಳಿಗೆ ಅಡುಗೆ ಮಾಡಿ ಉಪಚರಿಸುವಾಗ ಓಹ್.. ಇಲ್ಲಿದೆ ನನ್ನ ಆಸಕ್ತಿ..ಎಂಬ ಅರಿವಾಯಿತು. ಬಾಯಿಮಾತಲ್ಲೇ ಪ್ರಚಾರ ಗಿಟ್ಟಿಸಿದ ಈ ಅತಿಥಿಗೃಹ ವರ್ಷದ 8 ತಿಂಗಳು ಬಿಝಿ ಯಾಗಿರುತ್ತದೆ!. ಕಾಶೀನಾಥರು ಅತಿಥಿಗಳ ಯೋಗಕ್ಷೇಮ/ಸೈಟ್ ಸೀಯಿಂಗ್  ನೋಡಿಕೊಂಡರೆ, ಅವರ ಹೊಟ್ಟೆ ತಂಪಾಗಿಡುವ ಕೆಲಸ ಕಾಂಚನಾರದ್ದು. ನಮ್ಮೂರಿನ ಅಡುಗೆ-ತಿಂಡಿಗಳಿಂದಲೇ ಅತಿಥಿಗಳ ಮನ ಗೆದ್ದ ಹೆಮ್ಮೆ ಅವರದು. ಇಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ/ದೋಸೆ/ಅವಲಕ್ಕಿ/ಉಪ್ಪಿಟ್ಟು/ ಆಪ್ಪೆ/ಮುಠ್ಯೆ/ಥಾಳಿಪೀಠ/ ಗಂಜಿ ಇತ್ಯಾದಿಗಳು. ಮಧ್ಯಾಹ್ನದ ಮತ್ತು ರಾತ್ರಿಯ ಊಟಕ್ಕೆ ಚಪಾತಿ - 2 ಪಲ್ಯಗಳು, ಸಾರು,ಹುಳಿ ಮೊಸರನ್ನ /ಮೆಣಸ್ಕಾಯಿ/ಮಜ್ಜಿಗೆಹುಳಿ /ಪಲಾವ್/ಟೊಮೆಟೋಬಾತ್ /ಚಿತ್ರಾನ್ನ ತಯಾರಿಸುತ್ತಾರೆ. ಸಾಯಂಕಾಲದ ತಿಂಡಿಗೆ ಬಜ್ಜಿ/ಬೋಂಡಾ/ಗೋಳಿಬಜೆ ಇತ್ಯಾದಿಗಳು. ಇದಲ್ಲದೇ ತರಹೇವಾರಿ ಹಲ್ವಾಗಳು, ಪಾಯಸಗಳು, ಸೀಸನ್ ನಲ್ಲಿ ಪತ್ರೊಡೆ, ಹಲಸು-ಮಾವಿನ ತಿಂಡಿಗಳು ಊಟದ ಜೊತೆ ಇರುತ್ತವೆ.ಅತಿಥಿಗಳು ಆಯ್ಕೆ ಮಾಡಿದ ಮೆನುವನ್ನು ತಯಾರಿಸುತ್ತಾರೆ. ಇಲ್ಲಿನ ಅನುಕೂಲತೆಗಳನ್ನು ನೋಡಿದರೆ ಅವರು ವಿಧಿಸುವ ದರ ಏನೇನೂ ಅಲ್ಲ!!. ಅಂತೂ ನಿತ್ಯದ ಜಂಜಾಟಗಳಿಂದ ಮುಕ್ತಿ ಬಯಸಿ ಸಂತಸದಿಂದ ರಜೆ ಕಳೆಯಲು ಇಲ್ಲಿಗೆ ಬರುವ ಅತಿಥಿಗಳು ಕಾಂಚನಾರನ್ನು ಬಾಯ್ತುಂಬಾ ಹೊಗಳದೇ ಹೋದದ್ದೇ ಇಲ್ಲ.
ಇದಲ್ಲದೇ ದಾಮ್ಲೆಯವರ ಇನ್ನೊಂದು ಉದ್ಯಮ ಅಡಿಕೆ ಹಾಳೆಯಿಂದ ತಟ್ಟೆ-ಲೋಟಗಳನ್ನು ತಯಾರಿಸುವ ಫಾಕ್ಟರಿಯ 12 ಕೆಲಸಗಾರರು, 6 ತೋಟದ ಕೆಲಸಗಾರರಿಗೂ ಮನೆಯಲ್ಲೇ ಊಟದ ವ್ಯವಸ್ಥೆ ಇದೆ. ವರ್ಷಪೂರ್ತಿ ಅಡುಗೆಮನೆಯಲ್ಲಿ ಕಾಂಚನಾರದು ಬಿಡುವಿಲ್ಲದ ದಿನಚರಿ..ಅವರು ತವರುಮನೆಗೆ, ಸಮಾರಂಭಗಳಿಗೆ ಹೋಗುವುದೇ ಅಪರೂಪ.

ಕಾಂಚನಾ ತಮ್ಮ ಕೆಲಸಕ್ಕೆ ಮನ:ಪೂರ್ತಿ ಸಹಾಯ ಮಾಡುವ ಅತ್ತೆಯವರನ್ನು ಪ್ರೀತಿಯಿಂದ ಸ್ಮರಿಸುತ್ತಾರೆ. “ನಿಮಗೆ ಈ ಹಳ್ಳಿಯಲ್ಲಿದ್ದು ಅಡುಗೆಮಾಡಿ ಮಾಡಿ ಬೇಸರ ಅನಿಸಿಲ್ಲವೇ” ಎಂದು ಕೇಳಿದೆ. ಕಾಂಚನಾ ನಕ್ಕು “ಇಲ್ಲಪ್ಪಾ..  ಇನ್ನೂ ಅಡುಗೆ ಮಾಡೋಣ ಅನಿಸುತ್ತದೆ ನನಗೆ.. ನಾನು ಸಿಟಿ -ಹಳ್ಳಿ ಎರಡೂ ಜೀವನ ಅನುಭವಿಸಿದ್ದೇನೆ.. ತಕ್ಕಮಟ್ಟಿನ ಅನುಕೂಲತೆಗಳಿದ್ದರೆ ಹಳ್ಳಿಯಲ್ಲಿ ಸಿಗುವ ಶಾಂತಿ, ನೆಮ್ಮದಿ ಅಲ್ಲಿಲ್ಲ ಬಿಡಿ.. ಎಂದರು. ಕೈಯಲ್ಲಿ ಸೌಟು ಹಿಡಿದು ಉತ್ಸಾಹದಿಂದ ಮಾತನಾಡುವ ಕಾಂಚನಾದಾಮ್ಲೆಯವರ ಹೋಮ್ ಸ್ಟೇ ಗೆ ಹೋಗಬೇಕೆನಿಸುತ್ತಿದ್ದರೆ ಈ ಸಂಖ್ಯೆಗೆ ಕರೆಮಾಡಿ. 08251- 268225  /  9481850225 





Monday, 13 November 2017

Wishing a very happy Children's day to the PARENTS !!!!!!


ಗೇಟ್ ಶಬ್ದಕ್ಕೆ ಧಡಕ್ಕನೇ ಎಚ್ಚರವಾಯಿತು. ಆಗ ತಾನೇ ನಿದ್ರೆ ಹತ್ತಿತ್ತು. ಯಾರೋ ಮಾತನಾಡುವ ಶಬ್ದ.. ರಾತ್ರಿ ೧೧ ಗಂಟೆ... ಯಾರಪ್ಪಾ ಈ ಹೊತ್ತಿನಲ್ಲಿ ಎಂದು ಕಿಟಿಕಿಯಲ್ಲಿ ಇಣುಕಿದೆ. ಅರೆ… ನಮ್ಮ ಮನೆಯ ಮಹಡಿ ಮೇಲಿನ ಬಾಡಿಗೆಯವರು... ಗಂಡ-ಹೆಂಡತಿ ..ಜೊತೆಗೆ ಅಳುತ್ತಿರುವ ಅವರ ಏಳು ವರ್ಷದ ಮಗ... ಯಾಕೆ? ಏನಾಯ್ತು? ಎಂದು ಗಾಬರಿಯಿಂದ ಕೇಳಿದೆ. ಏನಿಲ್ಲ.. ನಮ್ಮ ಚಿನ್ನು ಐಸ್ ಕ್ರೀಮ್ ಬೇಕು.. ಅಂತ ಹಠ ಮಾಡ್ತಾ ಇದ್ದಾನೆ. ಅವನಿಗೆ ಏನಾದ್ರೂ ಬೇಕು ಅನ್ಸಿದ್ರೆ ಕೊಡಿಸ್ಲೇ ಬೇಕು..ಇಲ್ಲ ಸಿಟ್ಟು ಬರತ್ತೆ.. ಅದಕ್ಕೇ ಕೊಡಿಸೋಣ ಅಂತ ಹೊರಟಿದ್ದೀವಿ ಅಂತ ಹೆಮ್ಮೆಯಿಂದ ನಗುತ್ತ ಹೇಳುವಾಗ ನನಗೆ ಮೈಯೆಲ್ಲ ಉರಿದುಹೋಯಿತು. ಹಾಗೇ ದೇಶಾವರಿ ನಗು ಚೆಲ್ಲಿ ಸರಿ ಹೋಗ್ಬನ್ನಿ ಎಂದು ಮತ್ತೆ ಮಲಗಿದೆ.
ಮಕ್ಕಳೆಂದರೆ ದೇವರ ಪ್ರತಿರೂಪ ಎಂದರು ನಮ್ಮ ಹಿರಿಯರು. ಇಂದು ಆ ಮಗುವೆಂಬ ದೇವರನ್ನು ತಲೆಯ ಮೇಲೆ ಹೊತ್ತು-ಮೆರೆಸುವುದನ್ನು ಕಂಡಾಗ ಆ ಮಾತು ಅಕ್ಷರಶ: ನಿಜ ಅನಿಸುವುದಿಲ್ಲವೇ ನಿಮಗೆ? ಮಕ್ಕಳ ಕಣ್ಸನ್ನೆ- ಕೈಸನ್ನೆಗಳಿಗೆ, ತಂದೆತಾಯಿಯನ್ನು ಮಂಡಿಯೂರಿಸಿ ಕೈ ಮುಗಿಸುವ ಶಕ್ತಿ ಇದೆ. ಹತ್ತು ವರ್ಷ ದಾಟಿದ ಮಕ್ಕಳಂತೂ ಮನೆಯ ಯಜಮಾನರೇ ಬಿಡಿ.. ಯಾವುದೇ ಕಾರಣಕ್ಕೂಅವರ ಮನ ನೋಯಿಸಲೇಬಾರದು.. [ಏನಾದ್ರೂ ಆತ್ಮಹತ್ಯೆ ಮಾಡ್ಕೊಂಡ್ರೆ ಏನ್ ಗತಿ...ಸ್ವಾಮೀ!!] ಅದರಲ್ಲೂ ಸಂಬಳ ತರುವ ಉದ್ಯೋಗದಲ್ಲಿರುವ ತಾಯಂದಿರು, ತಮ್ಮನ್ನು ಸದಾ ಕಾಡುವ ಅಪರಾಧೀ ಪ್ರಜ್ಞೆಯಿಂದ ಪಾರಾಗಲು ಮಕ್ಕಳ ಇಷ್ಟಾನಿಷ್ಟಗಳನ್ನು ಕುರುಡಾಗಿ ಪೂರೈಸುತ್ತ ಅವರ ಭವಿಷ್ಯವನ್ನು ಹಾಳುಮಾಡುವುದನ್ನು ಕಂಡರೆ ಖೇದವೆನಿಸುತ್ತದೆ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ನನಗೆ ಇಂಥ ಅಸಹಾಯಕ ತಂದೆತಾಯಂದಿರನ್ನು ಮತ್ತು ಆ ಒಂದೇ ಮಗುವನ್ನು ಬೆಳೆಸಲು ಅವರು ಪಡುವ ಹರಸಾಹಸವನ್ನು ಕಂಡಾಗ ಅಚ್ಚರಿಯಾಗುತ್ತದೆ. ಇದನ್ನೆಲ್ಲ ಕಂಡಾಗ ಇವರ್ಯಾಕೆ ಹೀಗೆ? ಎಂದು ನನಗನಿಸುವ ಕೆಲ ವಿಚಾರಗಳು ಇಲ್ಲಿವೆ. ಹೂಂ ಅನ್ನೋದು ಬಿಡೋದು ನಿಮ್ಮಿಷ್ಟ..
“ ನಮ್ಮ ಸಚಿನ್ ಗೆ ಕೋಪ ಜಾಸ್ತಿ... ಎಲ್ಲ ಅವರಜ್ಜನ ಥರನೇ ....” ಎಂಬ ಮೂರ್ಖ ಪ್ರಶಂಸೆಯನ್ನು ನೀವೂ ಎಲ್ಲಾದರೂ ಕೇಳಿರಬಹುದು. ಕೋಪಕ್ಕೆ ಪ್ರಸಿದ್ಧವಾದ ತಮ್ಮ ಕುಟುಂಬದ ಹಿರಿಮೆಯನ್ನುಆ ಕೋಪಿಷ್ಠ ಮಗುವಿನ ಮುಂದೆಯೇ ಆಡಿ ಸಂತೋಷಪಡುವುದನ್ನು ಗಮನಿಸಿರಬಹುದು. ಒಂದು ಕಾಲವಿತ್ತು. ಆಗ ಕೋಪ ಶೌರ್ಯದ ಸಂಕೇತ ಎನಿಸಿತ್ತು. ಆದರೆ ಇಂದು ಅದು ದುರ್ಬಲತೆಯ-ಅಸಹಾಯಕತೆಯ ಇನ್ನೊಂದು ರೂಪ ಎನಿಸಿದೆ. ಪರಿಸ್ಥಿತಿಯನ್ನು ಜಾಣತನದಿಂದ ನಿಭಾಯಿಸಲಾಗದ ವ್ಯಕ್ತಿ ಕೋಪವನ್ನು ಆಯುಧವಾಗಿಸಿಕೊಳ್ಳುತ್ತಾನೆ.ನೂರಾರು ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ಒದ್ದಾಡುತ್ತಾನೆ. ಮಕ್ಕಳ ಕೋಪವನ್ನು ಎಳವೆಯಲ್ಲಿಯೇ ಚಿವುಟಿ ಹಾಕಿ. ತಾಳ್ಮೆಯ ಮಹತ್ತ್ವದ ಬಗ್ಗೆ ತಿಳುವಳಿಕೆ ಮೂಡಿಸಿ. ಇಂದು ಚಾಕ್ಲೇಟ್ ಬೇಕೆಂದು ಹಠ ಮಾಡುವ ಮಗು ನಾಳೆ ಮೊಬೈಲ್-ಬೈಕ್-ಪಾಕೆಟ್ ಮನಿಗೆ ನಿಮ್ಮನ್ನು ಕಿರುಬೆರಳ ತುದಿಯಲ್ಲಿ ಆಡಿಸುತ್ತದೆ. 

“ನಮ್ ಅತ್ತೆ-ಮಾವಂಗೆ ನಮ್ ಪುಟ್ಟಿನೇ ಸರಿ.. ಎಂಥ ಬಜಾರಿ ಗೊತ್ತಾ..ಸರಿಯಾಗಿ ಉತ್ತರ ಕೊಡ್ತಾಳೆ. ಮುದುಕರು ಬಾಯಿ ಮುಚ್ಕೊಂಡು ತೆಪ್ಪಗೆ ಕೂತ್ಕೊತಾರೆ..” ನನ್ನ ಗೆಳತಿಯ ಆತ್ಮವಿಶ್ವಾಸದ ನುಡಿಯಿದು. ಎಚ್ಚರ! ಇವತ್ತು ಅಜ್ಜಿತಾತನ ಬಾಯ್ಮುಚ್ಚಿಸುವ ಮಗು ನಾಳೆ ನಿಮ್ಮ ಬಾಯಿಗೂ ಬೀಗ ಹಾಕಲು ಹಿಂದೆ ಮುಂದೆ ನೋಡುವುದಿಲ್ಲ. ಮಕ್ಕಳ ಭಾಷೆಯ ಬಗ್ಗೆ ಮೈಯೆಲ್ಲ ಕಣ್ಣಾಗಿರಿ. ಮಕ್ಕಳು ತಮ್ಮ ಎಲ್ಲ ಕೆಲಸಗಳಿಗೆ ತಂದೆತಾಯಿಯ ಪ್ರತಿಕ್ರಿಯೆಯನ್ನು ಗಮನಿಸುತ್ತಾರೆ. ಅದರಂತೆಯೇ ತಮ್ಮ ನಡವಳಿಕೆಯನ್ನು ರೂಪಿಸಿಕೊಳ್ಳುತ್ತಾರೆ. ಮಗು ಅಕ್ಕ ಪಕ್ಕದವರನ್ನು, ಸಂಬಂಧಿಗಳನ್ನು, ತನ್ನ ಶಿಕ್ಷಕರನ್ನು ಟೀಕಿಸಿದಾಗ ತಕ್ಷಣ ಅದನ್ನು ತಿದ್ದಿ. ಹಾಗೆಯೇ ಕತ್ತೆ, ನಾಯಿ, ಹುಚ್ಚುಮುಂಡೆ,ಕಂತ್ರಿನಾಯಿ ಇಂಥ ಪದಗಳಿಗೆ ಮನೆಯಲ್ಲಿ ಸಂಪೂರ್ಣ ನಿಷೇಧ ಹೇರಿ. ಮಗು ನಿಮ್ಮದೇ ಪ್ರತಿಬಿಂಬ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ.

ಮಕ್ಕಳ ಅಪೇಕ್ಷೆಗಳನ್ನು ಆಗಾಗ ಉಪೇಕ್ಷಿಸುವುದನ್ನು ರೂಢಿಸಿಕೊಳ್ಳಿ. ನೀವು ಆರ್ಥಿಕವಾಗಿ ಸದೃಢರಾಗಿರಬಹುದು, ಆದರೆ ಮಗುವಿನ ಆಸೆಯನ್ನು ಪೂರೈಸುವ ಮೊದಲು ಸಮಯ,ಸಂದರ್ಭ, ಅವಶ್ಯಕತೆ ಗಳ ಬಗ್ಗೆ ಒಮ್ಮೆ ಪ್ರಶ್ನೆ ಮಾಡಿ. ಆಗ ಮಗು ತರ್ಕಬದ್ಧವಾಗಿ ಯೋಚಿಸಲು ಕಲಿಯುತ್ತದೆ. ಹಣದ ಮಹತ್ತ್ವದ ಬಗ್ಗೆಯೂ ಅರಿವು ಬೆಳೆಸಿಕೊಳ್ಳುತ್ತದೆ. ತಾವೇ ಮಗುವಿಗೆ ಫೇವರಿಟ್ ಮೋಮ್ /ಡಾಡ್ ಆಗಬೇಕೆಂದು ಗಂಡ-ಹೆಂಡತಿಯರು ಸ್ಪರ್ಧೆಗಿಳಿದರೆ , ಮುಂದೆ ಜೀವನದ ಸ್ಪರ್ಧೆಯಲ್ಲಿ ನಿಮ್ಮ ಮಗುವಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ನೆನಪಿರಲಿ.
’ ಹಂಚಿದಾಗ ಕಡಿಮೆಯಾಗುವ ವಸ್ತು ದು:ಖ ಮತ್ತು ಹೆಚ್ಚಾಗುವ ವಸ್ತು ಸಂತೋಷ’ ಎಂಬ ಪರಮಸತ್ಯ ನಿಮಗೆ ತಿಳಿದಿರಬಹುದು. ಇದನ್ನು ನಿಮ್ಮ ಮಕ್ಕಳಿಗೂ ಕಲಿಸಿ. ನಿಮ್ಮ ಸಮಯವನ್ನು ಮತ್ತು ಸಂಪತ್ತನ್ನು[ಕೈಲಾದ ಮಟ್ಟಿಗೆ] ಮನೆಯವರ, ನೆರೆಹೊರೆಯವರ, ಸಂಬಂಧಿಗಳ ಜೊತೆ ಹಂಚಿಕೊಳ್ಳುವುದನ್ನು ರೂಢಿಸಿಕೊಳ್ಳಿ. ನಿಮ್ಮನ್ನು ನೋಡಿ ಮಕ್ಕಳೂ ಕಲಿಯುತ್ತಾರೆ. ಸಮಾಜಮುಖಿ ವ್ಯಕ್ತಿತ್ವವನ್ನು ಬೆಳೆಸುವುದರಲ್ಲಿ ಇದೊಂದು ದೊಡ್ಡ ಹೆಜ್ಜೆ.
ಮಕ್ಕಳಿಗೆ ಸಮಾಜದ ಕಟ್ಟಕಡೆಯ ಮನುಷ್ಯ ಹೇಗೆ ಜೀವಿಸುತ್ತಾನೆ ಎಂಬ ಪರಿಚಯ ಮಾಡಿಕೊಡಿ. ನಿಮ್ಮಲ್ಲಿ ಕಾರು-ಡ್ರೈವರ್ ಇರಬಹುದು. ಆದರೆ ನಿಮ್ಮ ಮಗುವನ್ನು ಅದರಲ್ಲೇ ಕೂಡಿಹಾಕಿ ಕೂಪಮಂಡೂಕವಾಗಿಸಬೇಡಿ. ನಿಮ್ಮ ಸಂಪತ್ತಿನ ಪ್ರದರ್ಶನಕ್ಕೆ ಮಗುವನ್ನು ದಾಳವಾಗಿ ಬಳಸಬೇಡಿ. ಮಕ್ಕಳನ್ನು ಸರಕಾರೀ ಬಸ್ಸುಗಳನ್ನು ಉಪಯೋಗಿಸುವಂತೆ ಪ್ರೋತ್ಸಾಹಿಸಿ. ಇಲ್ಲಿ ಸಿಗುವ ಅನುಭವಗಳು ಅವರನ್ನು ಶ್ರೀಮಂತಗೊಳಿಸುತ್ತವೆ. ಈ ಪ್ರಪಂಚದಲ್ಲಿ ಕೊಳ್ಳಲು ಸಾಧ್ಯವಾಗದ್ದೆಂದರೆ ಅನುಭವ ಮಾತ್ರ. ಅದನ್ನು ಸ್ವತ: ಅನುಭವಿಸಿಯೇ ನಮ್ಮದಾಗಿಸಬೇಕು ಅಲ್ಲವೇ? ಈ ಜೀವನ ಪಾಠವೇ ಮಕ್ಕಳಿಗೆ ನೀವು ಕೊಡಬಹುದಾದ ಅತ್ಯಮೂಲ್ಯ ಆಸ್ತಿ.
ಪೇರೆಂಟಿಂಗ್ ಎಂದರೆ ಹುಟ್ಟುವಾಗ ಖಾಲಿ ಬಿಳಿ ಹಾಳೆಯಂತಿರುವ ಮಗುವಿನ ಮನಸ್ಸಿನಲ್ಲಿ ಅಚ್ಚಳಿಯದ ಪಾಠಗಳನ್ನು ಬರೆಯುವ ಗುರುತರ ಜವಾಬ್ದಾರಿ. ಮಕ್ಕಳನ್ನು ಸ್ವತಂತ್ರರನ್ನಾಗಿಸುವುದು ಮತ್ತು ಅವರಿಗೆ ಸಮಯಕ್ಕೆ ತಕ್ಕದಾಗಿ ಹಿತಮಿತವಾಗಿ ಮಾತನಾಡಲು ಕಲಿಸದವರು ತಂದೆತಾಯಿ ಎಂದು ಕರೆಸಿಕೊಳ್ಳಲು ಅರ್ಹರಲ್ಲ. ಮಕ್ಕಳ ಮೇಲೆ ಪ್ರೀತಿ ಇರಲಿ ಆದರೆ ಅವರು ತಪ್ಪು ಮಾಡಿದಾಗ ನಿದಾರ್ಕ್ಷಿಣ್ಯವಾಗಿ ನಡೆಸಿಕೊಳ್ಳಿ. ಗೆಳೆಯನಂತಿರಿ…. ಆದರೆ ಆಗಾಗ ಶತ್ರುವಿನಂತೆಯೂ ವರ್ತಿಸಿ.
ಎಲ್ಲ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಮಕ್ಕಳ ದಿನದ ಹಾರ್ದಿಕ ಶುಭಾಶಯಗಳು.

Sunday, 10 September 2017

10 Vs 3


“ಅಮ್ಮ.. ದೇವರ ದೀಪ ಆರಿದೆ..”. ಮಗನ ಮಾತು ಕೇಳಿ ಯಾಕೋ ಒಂಥರಾ ಖುಶಿಯಾಯಿತು. “ಎಲ್ಲಿದ್ದಾನೆ ದೇವ್ರು...ಒಮ್ಮೆ ತೋರಿಸು?” ಅಂತ ಎಗರಾಡುವ ಆಸಾಮಿ ಇವತ್ತು ದೇವರ ಮನೆಯಕಡೆ ದೃಷ್ಟಿ ಹಾಯಿಸಿದನಲ್ಲ! ಅಂದ್ಕೊಂಡು “ ದೀಪ ಹಚ್ಚುವುದಿಲ್ಲ... ಮೂರು ದಿನ ಸೂತಕ ಇದೆ. ಅದೇ ನಮ್ಮೂರಿನ ಆ ನದಿಯಾಚೆಯ ಮನೆಯಲ್ಲಿ ಗೋವಿಂದಣ್ಣ ಅಂತ ಇದ್ರಲ್ಲ, ಅವರು ತೀರಿಹೋದರು,ಅದಕ್ಕೇ ನೋಡು ಆ ಪ್ರವೀಣನ ಮದುವೆನೂ ಪೋಸ್ಟ್ ಪೋನ್ ಮಾಡಿದ್ದು ” ಎಂದೆ.
“ ಓ.. ಹೌದಲ್ವ..ಆದ್ರೆ ಸೂತಕ ಅಂದ್ರೆ ಹತ್ತು ದಿನ ಇರುವುದಲ್ವಾ?”
“ಹುಮ್.. ಕುಟುಂಬದ ಮೂಲಪುರುಷನಿಂದ ಹಿಡಿದು ಏಳನೇ ತಲೆಮಾರಿನ ಗಂಡಸರು,ಸೊಸೆಯಂದಿರು ಮತ್ತು ಅವಿವಾಹಿತ ಹೆಂಗಸರನ್ನು ಸಪಿಂಡರು,ಎಂಟನೇ ತಲೆಯಿಂದ ಹದಿನಾಲ್ಕನೇ ತಲೆಯವರೆಗಿನ ಮೇಲಿನ ಸದಸ್ಯರನ್ನು ಸಮಾನೋದಕರು ಮತ್ತು ಹದಿನೈದರಿಂದ ಇಪ್ಪತ್ತೊಂದನೇ ತಲೆಮಾರಿನವರೆಗಿನ ಸದಸ್ಯರು ಸಗೋತ್ರರು ಎನ್ನುತ್ತಾರೆ. ಸಪಿಂಡರ ಮೃತ್ಯುವಿಗೆ ಹತ್ತು ದಿನ, ಸಮಾನೋದಕರಿಗೆ ಮೂರು ದಿನ ಸೂತಕ[ಅಶೌಚ] ಆಚರಣೆ ಇದೆ.ಅಂದ್ರೆ ಈ ಸಮಯದಲ್ಲಿ ದೇವತಾಕಾರ್ಯಗಳಲ್ಲಿ-ಸಮಾರಂಭಗಳಲ್ಲಿ ಭಾಗವಹಿಸಬಾರದು. ಆ ಅವಧಿ ಮುಗಿದ ಮೇಲೆ ಕ್ಷೌರ-ತಿಲೋದಕ, ಜಪ-ತಪ-ದಾನವನ್ನು ಮಾಡಬೇಕು. ಸಗೋತ್ರರ ಮರಣದಲ್ಲಿ ಕೇವಲ ಸ್ನಾನಮಾಡಿ ಅಶೌಚ ಪರಿಹರಿಸಬೇಕು. ಒಟ್ಟಾರೆ ಕುಟುಂಬದ ಸದಸ್ಯರ ಸಾವು ಸಂಭವಿಸಿದಾಗ ನಿತ್ಯದ ಕೆಲಸಗಳನ್ನು ಕೈಬಿಟ್ಟು ಮೃತರ ಮನೆಯವರಿಗೆ ಧೈರ್ಯ ತುಂಬಬೇಕು..ತನು-ಮನ-ಧನ ಸಹಾಯ ಮಾಡಬೇಕು ಎಂಬ ಸದುದ್ದೇಶ ಇಲ್ಲಿದೆ. ಹಾಗೆಯೇ ಕುಟುಂಬದಲ್ಲಿ ಮಗು ಹುಟ್ಟಿದಾಗಲೂ ಜಾತಾಶೌಚ ಆಚರಿಸುವ ಕ್ರಮವಿದೆ.”
“ ಅಲ್ಲಮ್ಮ.. ಪ್ರಾಕ್ಟಿಕಲೀ ಇಷ್ಟೆಲ್ಲ ತಲೆಮಾರುಗಳ ಕಾಂಟಾಕ್ಟ್ ಇಟ್ಟುಕೊಳ್ಳೋಕೆ ಸಾಧ್ಯವಾ?”
“ ಹಾಗಲ್ಲ ಅದು.. ಸಾಧ್ಯವಾದಷ್ಟು ಇಟ್ಟುಕೊಳ್ಳಬೇಕು ಅಂತ ಅದರ ಉದ್ದೇಶ.”
“ ಅಮ್ಮ.. ನಂಗೆ Project submission DEAD line ಇದೆ. ಸೋ ಈ DEADly ಟಾಪಿಕ್ ನಿಂದ ಲಾಗೌಟ್ ಆಗ್ತಾ ಇದ್ದೇನೆ” ಅಂದವನೇ ಕಂಪ್ಯೂಟರ್ ನಲ್ಲಿ ಮುಳುಗಿದ.ಅರೆ.. ಎಷ್ಟು ಸುಲಭವಾಗಿ ಕೈ ತೊಳಕೊಂಡ್ನಲ್ಲ.. ಅನಿಸಿತು ನಂಗೆ.
ಸನಾತನಧರ್ಮ ನಾಲ್ಕು ವರ್ಣಗಳಿಗೂ ವಿಧಿಸಿರುವ ಹುಟ್ಟು-ಸಾವಿನ ಸಂದರ್ಭದಲ್ಲಿ ಆಚರಿಸಬೇಕಾದ ಸೂತಕ[ ಅಶೌಚ]ದ ನಿಯಮಗಳನ್ನು ನಿರ್ಣಯಸಿಂಧು, ಧರ್ಮಸಿಂಧು ಇತ್ಯಾದಿ ಧರ್ಮಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಹುಟ್ಟು-ಸಾವಿನ ಸ್ಥಳ,ಸಮಯ,ಕಾರಣಗಳನ್ನನುಸರಿಸಿ ಈ ನಿಯಮಗಳಲ್ಲಿ ಸಾಕಷ್ಟು ಫ್ಲೆಕ್ಸಿಬಿಲಿಟಿ ಕೂಡಾ ಇರುವುದು ಗಮನಾರ್ಹ. ಆದರೆ ವರ್ಣಗಳೇ ಅಪ್ರಸ್ತುತವಾಗಿರುವ ಇಂದಿನ ಆಧುನಿಕ ಜೀವನದಲ್ಲಿ ಈ ನಿಯಮಗಳ ಸ್ಥಾನ ಏನು? ಜೀವನದ ಸಂಸ್ಕಾರಗಳಿಗೆ ಮಠ-ದೇವಾಲಯಗಳ ಹಂಗಿಗೆ ಒಳಪಡಬೇಕಾಗಿಲ್ಲದ ಸನಾತನಿಗಳು[ ಹಿಂದೂಗಳು] ಬದಲಾವಣೆ ಬಯಸಿದರೆ ಏನು ಮಾಡಬೇಕು? ಧರ್ಮಶಾಸ್ತ್ರದ ನಿಯಮಗಳಿಂದ ನಿತ್ಯಜೀವನದ ನೆಮ್ಮದಿ ಹಾಳಾಗದಂತಿರಲು ಏನು ಮಾಡಬೇಕು?
ಹಾಗಂತ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಮಾತ್ರ ಯೋಚಿಸಿ ಧಾರ್ಮಿಕ ವಿಧಿಗಳನ್ನು ಕೈಬಿಡುತ್ತಾ ಹೋಗುವುದು ಕೂಡಾ ತಪ್ಪು. ಆಗ ಮುಂದಿನ ಪೀಳಿಗೆಗೆ ದಾಟಿಸಲು ನಮ್ಮಲ್ಲೇನೂ ಉಳಿಯದೆ ಸಂಸ್ಕಾರಹೀನ ಮಕ್ಕಳನ್ನು ನಾವು ಸಮಾಜಕ್ಕೆ ಕೊಟ್ಟಂತೆ ಆಗುವುದಿಲ್ಲವೇ?
ಇನ್ನೊಂದು ವಿಚಾರವೆಂದರೆ ಧರ್ಮಶಾಸ್ತ್ರದ ಆಚರಣೆ, ಸಂಪ್ರದಾಯಗಳ ವಿಚಾರದಲ್ಲಿ ನಗರವಾಸಿಗಳಿಗೆ ಸ್ವಾತಂತ್ರ್ಯವಿದೆ.ಇಂದಿನ ನ್ಯೂಕ್ಲಿಯರ್ ಕುಟುಂಬಗಳು ನಗರಗಳಲ್ಲಿ ಅನಾಮಧೇಯರಾಗಿ ಜೀವನ ನಡೆಸುತ್ತಾ, ತಮ್ಮಿಷ್ಟದ ಆಚರಣೆಗಳನ್ನು ತಮಗೆ ಬೇಕಾದಂತೆ ಪಾಲಿಸಿಕೊಂಡು ಹಾಯಾಗಿರಬಹುದು. ಆದರೆ ಹಳ್ಳಿಯ ಕೃಷಿಕನಿಗೆ ಈ ಅನುಕೂಲವಿಲ್ಲ. ಬದಲಾವಣೆ ಬಯಸುವ ಹಳ್ಳಿಗನೊಬ್ಬ ಮೃತರ ಕುಟುಂಬಕ್ಕೆ ಸಹಾಯ ಮಾಡುತ್ತೇನೆ,ಆದರೆ ಈ ಹತ್ತು-ಮೂರು ಎಲ್ಲ ನನ್ನಿಂದಾಗದು ಎಂದು ಹೇಳಹೊರಟರೆ ಊರಿನ ಇತರರ ಪ್ರತಿಕ್ರಿಯೆ ಹೇಗಿರಬಹುದು ಯೋಚಿಸಿ.. ಅವನ ಮನೆಯ ಸಮಾರಂಭಗಳಿಗೆ ಪುರೋಹಿತರು-ಅಡಿಗೆಯವರು-ಊರಿನವರು ಬರಲು ಹಿಂದೇಟು ಹಾಕಬಹುದು, ದೇವಾಲಯದಲ್ಲಿ ಆತನನ್ನು ಕಂಡರೆ ತಿರಸ್ಕರಿಸಬಹುದು. ಇದೇ ಜನ ನಗರವಾಸಿಯ ಬಿಂದಾಸ್ ಜೀವನಶೈಲಿಯನ್ನು ನೋಡಿಯೂ ನೋಡದವರಂತೆ ಇರುತ್ತಾರೆ, ಅವನಿಗೆ ಎಲ್ಲ ಗೌರವಾದರಗಳನ್ನು ಸಲ್ಲಿಸುತ್ತಾರೆ ಅಲ್ವೇ? ಹಾಗಿದ್ರೆ ಸಂಸ್ಕೃತಿಯ ರಕ್ಷಣೆಯ ಭಾರ ಹೊರಬೇಕಾದವರು ಕೇವಲ ಕೃಷಿಕರು-ಪುರೋಹಿತರೇ? ಹಿಂದೂಧರ್ಮ ನಿರ್ಭೀತಿಯಿಂದ ಹರಿಯುವ ನದಿ ಇದ್ದಂತೆ. ಕಾಲನ ಪ್ರವಾಹಕ್ಕೆ ತಕ್ಕಂತೆ ನಿರಾಯಾಸವಾಗಿ ತನ್ನ ನಡೆಯನ್ನು ಬದಲಿಸುತ್ತ ಸಾಗುವ ಈ ಗಂಗೆಯಲ್ಲಿ ಬದುಕುತ್ತಿರುವ ನಮ್ಮ ಸಮಾಜ ಕೆಲವರ ಮೂಲಭೂತಹಕ್ಕನ್ನು ಕಸಿಯುತ್ತಿರುವುದು ಎಷ್ಟು ಸರಿ? ತಮ್ಮ ಮನೆಗಳಲ್ಲಿ ತಮ್ಮ ಧಾರ್ಮಿಕನಂಬಿಕೆಯನ್ನು ಆಚರಿಸುವುದನ್ನು ಇತರರು ಪ್ರಶ್ನೆ ಮಾಡುವುದು ಕಾನೂನಾತ್ಮಕ ಅಪರಾಧ ಎಂದು ಸಂವಿಧಾನವೇ ಸ್ಪಷ್ಟವಾಗಿ ಹೇಳಿಲ್ಲವೇನು?
ಇದ್ದಕ್ಕಿದ್ದಂತೆಯೇ ಕರೆಂಟ್ ಹೋಗಿ ಮನೆತುಂಬ ಕತ್ತಲಾಯಿತು.ಆದರೆ ಕಂಪ್ಯೂಟರಿನ ಬೆಳಕಿನಲ್ಲಿ ಮಗನ ಮುಖ ಬೆಳಗುತ್ತಿತ್ತು . ಅರೆ..ಎಷ್ಟು ಜಾಲಿ ನೋಡಿವನು..ನನಗೆ ಮಾತ್ರ ಯಾಕೆ ಇವೆಲ್ಲ ಮಂಡೆಬಿಸಿಗಳು...ಯಾಕೆಂದ್ರೆ ನಾನು ಹಳೆಯದನ್ನು ಬಿಡಲಾರೆ.. ಹೊಸದನ್ನು ಪೂರ್ಣವಾಗಿ ಸ್ವೀಕರಿಸಲಾರೆ.. ನಂದೇ ತಪ್ಪು.. ಅಂದ್ಕೊಂಡೆ. ದೀಪವಿಲ್ಲದ ದೇವರಕೋಣೆಯನ್ನು ನೋಡಿ ಕಸಿವಿಸಿಯಾಯಿತು.ಗೋವಿಂದಣ್ಣನ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತ ತಡಕಾಡಿ ದೀಪ ಹಚ್ಚಿದೆ. ದೀಪ ಶಾಂತವಾಗಿ ಉರಿಯುತ್ತ ಮನೆತುಂಬ ಬೆಳಕು ಚೆಲ್ಲಿತು.

Thursday, 27 April 2017

Earning while learning





Is ‘Earning while learning’ a humiliating affair for family? Also, are our celebrities’ words and lives taken so seriously by young minds? 
Today morning I had to witness an angry father and innocent son’s brawl. Upon opening the door I saw Deepak, our car washing guy, a B.Com student, who earns his pocket money by washing cars in the evening. 
Anxious Deepak said “Aunty, I will not come from tomorrow. My father wants to talk to you.” 
"Come on man… you borrowed Rs. 2000 just yesterday and now you want to leave...", I wanted to grumble. Suddenly I saw a well-dressed , middle aged man emerging from a car outside. He furiously opened the gate, handed over the pink note to me, and in the next moment gave two tight slaps on Deepak's face.
I was totally confused… The man declared, “I own a travel agency, and also some agricultural land in Kanakapura. I pay 1 lac per month as salaries, and look at this fool... I could have given him enough money. But secretly he is washing cars for money. Does he care about my prestige...?
I interrupted, "Sir... It is fine.. He is a good boy…He was into earning. Not a big deal… Please don’t hurt him. If you don’t like it, you can ask him to stop. "
I asked Deepak, "Why did you work against your father’s wish?"
“Aunty, in ‘WEEK END WITH RAMESH’ T. V. show, I often see people who were struggling in life yet supported themselves and grew up to become celebrities.. So even I wanted to be independent and prove myself…” Innocent Deepak’s eyes filled with tears…
I was speechless.

Friday, 7 April 2017

Don’t say my child is mild’ - The issue is development of self


Don’t say my child is mild’ - The issue is development of self
[Experiential outcome of a councillor  ]
 Pages  -86 , Price - Rs. 75
Written by - Dr. Chandrashekhara Damle
This book is available at  Sapna Book House Bangalore. 

and  also at  Sadhana Prakashana, Bangalore.  Phone: 8197731986

“ The main cause of the worries of the parents could be reduced to the MISMATCH  between the   ACTUAL ABILITIES   of the child and the ABILITIES EXPECTED  by the parents..”
I came across these valuable words expressed by Dr. Chandrashekhara  Damle in his newly published book ‘ DON’T SAY MY CHILD IS MILD’. The tagline ‘The issue is development of self ’, aptly conveys the summery of the book.
This book is an incredible work of  Dr. Damle,-  an ideal teacher and the founder of  an extraordinary  institution  ‘Sneha School, Sullia, DK Dist, Karnataka’. Having 35 years of profound experience in the field of teaching, he is honoured with ‘ASAMANYA  KANNADIGA - 2015 ’award  by Suvarna media channel. He is a resource person for Yakshagana  a folk performing art of Karnataka.
 In the advent of globalisation, our households are opting to have only one child. There is a huge gap between the childhood experiences of the parents and the environment they provide to their children. They shower them with all kinds of luxuries, extra care and expect children to be the most intelligent ones in their social circle.
Many a times they want to pursue their unfulfilled dreams of life through their dearest child. When the effort gets flopped parents transfer the blame to the school, teachers and inefficient education system. In due course of time the child also tends to carry similar views, finally hampering the growth of the child as an innovative and self-reliant human being.
In this process, qualities of competitive spirit, endurance, sense of hard work, being empathetic to classmates takes back seat. Child grows being manipulative, reacts aggressively and sheepishly towards the real life situations.
  Dr. Damle has analysed the real life case histories of  10 unusual students [along with their parents], who became normal  after the counselling  sessions by him. He explains the need of healthy communication between parents , children and teachers.  He also strongly recommends success of the educational  process of the child is  purely dependent  on the commitment and expertise of teachers and  parents.
This is a ‘must read’ book for young parents, teachers and counselling practitioners around the globe. We expect many more books from Dr. Damle in future to brighten up the thought process of young parents, teachers and councillors.

Monday, 6 March 2017

All is well


Are teachers are the most powerful creatures under the sun? Answer would be YES... because they can change anything... Look at this…

On parent- teacher meeting day, as soon as the class teacher says “we are concerned about your child’s academic performance. He/ she must work hard …. Especially in maths….” , that perfect family - confident dad, stylish super mom and enthusiastic teenager turns into desperate father, sobbing mother and grumbling child within no time.

 Parent- Oh… He/she is the sole purpose of my life. I sacrifice everything for children… I work from early morning till late-night… I did this… I did that…. I… I… I…

Teenage Child - They irritate me for every single thing … I agree I haven’t done well in this test but my last exam scores were awesome… Yes I am attached to gadgets… But I too need a social life…. And there are these teenage hormones which make me daydream… So it is not my fault after all…

Is it the wakeup call before our so called solid families collapse? Can we as parents stop using the word ‘sacrifice’ for the adjustments we make for self? Can we accept the fact that children are part of our life but not the sole purpose? Have you ever given a thought before providing the luxurious facilities to the child?  Oh dear emotional mothers… he has come out of your womb long ago, can you consider your child as a separate individual.

O my dearest children, do you know that there is cut throat competition awaiting you out there? Do you know that no one cares your excuses for bad academic performance? Do you know that till you get into a right college you are recognised by your marks card not by your passion and all that imported stuff…?


Wishing you all the best for the forthcoming exams!

Wednesday, 11 January 2017

ತಲೆಮಾರುಗಳ ತಲೆಬಿಸಿ - Generation gap


ಈ ಜಗತ್ತಿನಲ್ಲಿ ಅಥವಾ ನಮ್ಮ ಜೀವನದಲ್ಲಿ ನಮ್ಮ ನಿಯಂತ್ರಣಕ್ಕೆ ಮೀರಿದ ಸಂಗತಿ ಯಾವುದು? ನನ್ನ ಈ ಯಕ್ಷಪ್ರಶ್ನೆಗೆ ನಿಮ್ಮ ತಲೆ ಉಪಯೋಗಿಸಿ ಉತ್ತರಿಸಿ . ನಿಮ್ಮ ಉತ್ತರ ಬೆಲೆಯೇರಿಕೆ, ಹವಾಮಾನ, ಹುಟ್ಟು- ಸಾವು, ಸುಖ-ದು:ಖ.... . ಹೌದು ಒಪ್ಪಿದೆ.. ಹಾಗಿದ್ದರೂ ನನ್ನ ಪ್ರಕಾರ ಇವುಗಳಲ್ಲಿ ಕೆಲವನ್ನು ದುಡ್ಡಿದ್ದರೆ, ಇಚ್ಛಾಶಕ್ತಿ ಇದ್ದರೆ ನಿಯಂತ್ರಿಸಬಹುದು.  ಆದರೆ ನಮ್ಮ ನಿತ್ಯಜೀವನದಲ್ಲಿ ನಮ್ಮ ಸಂಬಂಧಗಳಿಗೆ ಹುಳಿ ಹಿಂಡುವ, ನಮಗೆ ತಲೆಚಿಟ್ಟು ಹಿಡಿಸುವ ’ಜನರೇಶನ್ ಗ್ಯಾಪ್ ’ ಅನ್ನೋದು ನಿರಂತರವಾದದ್ದು, ನಿಯಂತ್ರಣಕ್ಕೆ ಮೀರಿದ್ದು ಅಂತ ಹೇಳಿದರೆ ನೀವು ಒಪ್ಪುತ್ತೀರಿ ಅನ್ನುವ ದೃಢವಿಶ್ವಾಸ ನನ್ನದು. ಜನರೇಶನ್ ಗ್ಯಾಪ್ ಅಥವಾ ತಲೆಮಾರುಗಳ ಅಂತರ ಎಂದರೆ ಯಾವುದೇ ವಿಚಾರದ ಬಗ್ಗೆ ವಿವಿಧ ವಯೋಮಾನದ ವ್ಯಕ್ತಿಗಳಲ್ಲಿ ಕಾಣುವ ಅಭಿಪ್ರಾಯಭೇದ. ಸುಲಭವಾಗಿ ಹೇಳುವುದಾದರೆ ಅಪ್ಪ-ಅಮ್ಮನ ಅಭಿಪ್ರಾಯ ಮಕ್ಕಳಿಗೆ ಸರಿಬರಲ್ಲ. ಟೀಚರ್ ಹೇಳಿದ್ದು ವಿದ್ಯಾರ್ಥಿಗಳಿಗೆ ಆಗಲ್ಲ. ವಯಸ್ಸಾದ ಬಾಸ್ ನ ಮಾತು ಯುವ ಉದ್ಯೋಗಿಗಳಿಗೆ ನಗು ತರಿಸುತ್ತದೆ. 

ಈ ವಿಷಯದ ಬಗ್ಗೆ ಅತ್ಯಂತ ನಿಖರವಾಗಿ ಹೇಳುವ ಯೋಗ್ಯತೆ ಇರುವ ಕೆಲವು ವ್ಯಕ್ತಿಗಳಲ್ಲಿ ನಾನೂ ಒಬ್ಬಳು ಅಂತ ಆತ್ಮವಿಶ್ವಾಸದಿಂದ ಹೇಳಬಲ್ಲೆ. ಏನಪ್ಪಾ... ಇವಳಿಗೆ ಇಷ್ಟೊಂದು ದುರಹಂಕಾರ/ ಕೊಬ್ಬು... ಅಂತೆಲ್ಲಾ ತಪ್ಪು ತಿಳೀಬೇಡಿ. ನನ್ನ ತಂದೆ-ತಾಯಿ ’ಮಕ್ಕಳಿರಲವ್ವ ಮನೆತುಂಬ ’ ಅಂತ ನಂಬಿದವರು. ಅದಕ್ಕೆ ಕಾರಣ  ಸಾಂಪ್ರದಾಯಿಕ ಮನೋಭಾವವೋ, ಅಜ್ಞಾನವೋ, ಉಪೇಕ್ಷೆಯೋ ನನಗೆ ಗೊತ್ತಿಲ್ಲ. ನನ್ನ ತಂದೆ ನಾನು ಹುಟ್ಟಿದ ವರ್ಷದೊಳಗೆ ಕಾಲವಾದರು. ಆದ್ದರಿಂದ ನನ್ನ ಸಂಘರ್ಷ ತಾಯಿಯೊಡನೆ ಮಾತ್ರ. ಮನೆಯಲ್ಲಿ ಊಟ-ತಿಂಡಿ, ಪ್ರೀತಿ-ವಾತ್ಸಲ್ಯಗಳಿಗೆ ಕೊರತೆಯಿಲ್ಲದಿದ್ದರೂ ನನಗೆ ಬುದ್ಧಿ ಬರುತ್ತಿದ್ದಂತೆಯೇ, ನನ್ನ ಗೆಳತಿಯರು ಅವರ ತಂದೆ-ತಾಯಂದರ ಬಗ್ಗೆ , ಚಿಕ್ಕ-ಸುಖೀ ಕುಟುಂಬದ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದರೆ ’ನಂದ್ಯಾಕೋ ಸ್ವಲ್ಪ ಸರಿಯಿಲ್ಲ’ ಅಂತ ಅನಿಸುತ್ತಿತ್ತು.ನಾವಿಬ್ಬರೂ ಜೊತೆಗೆ ಹೋಗುತ್ತಿದ್ದರೆ “ ಓ ನಿಮ್ಮ ಮೊಮ್ಮಗಳಾ?”  ಎಂಬ ಪ್ರಶ್ನೆ ತಾಯಿಗೆ ಎದುರಾಗುತ್ತಿತ್ತು. ಅದೇನೂ ಅಂಥ ದೊಡ್ಡ ವಿಚಾರವಲ್ಲ, ನಾವು ಬದುಕುವುದು ನಮಗೋಸ್ಕರ-ಜನರನ್ನು ಮೆಚ್ಚಿಸಲು ಅಲ್ಲವಲ್ಲ. ಆದರೆ ನನ್ನ ಹಾಗೂ ನನ್ನ ತಾಯಿಯ ವಿಚಾರಗಳಲ್ಲಿ,ನಂಬಿಕೆಗಳಲ್ಲಿ ಅಗಾಧ ವ್ಯತ್ಯಾಸ ಸಮಸ್ಯೆಯಾಗಿ ಕಾಡುತ್ತಿತ್ತು. ನನ್ನ ಉಡುಗ-ತೊಡುಗೆ, ಓದು, ಮನೆಕೆಲಸ, ಹವ್ಯಾಸಗಳು, ಭವಿಷ್ಯದ ಗುರಿಗಳು, ಕನಸುಗಳು ಯಾವುದೂ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಅವರು ಮಾತುಗಳನ್ನು ಕೇಳಿದರೆ ನನಗೆ ಕೋಪ ಬರುತ್ತಿತ್ತು.
ಮುಂದೆ ನಾನು ತಾಯಿಯಾದಾಗ ನಿರ್ಧಾರ ಮಾಡಿಬಿಟ್ಟೆ. ನನಗೂ ನನ್ನ ಮಕ್ಕಳಿಗೂ ಈ ಸಮಸ್ಯೆ ಬರಬಾರದು... ಬರಲು ಸಾಧ್ಯವೇ ಇಲ್ಲ... ಏಕೆಂದರೆ ನಾನೊಬ್ಬ ಬುದ್ಧಿವಂತ ತಾಯಿ ಎಂಬ ಅಹಂಕಾರವೂ ಇತ್ತೆನ್ನಿ . ಅದಕ್ಕಾಗಿ ಆದಷ್ಟು ಮಟ್ಟಿಗೆ ನನ್ನನ್ನು ಅಪ್ ಡೇಟ್ ಮಾಡಿಕೊಂಡೆ. ಆದರೆ ವರ್ಷಗಳು ಉರುಳುತ್ತಿದ್ದಂತೆಯೇ ಯಾಕೋ ಆಗಾಗ -
 “ಅಮ್ಮಾ  ....., ಅಷ್ಟೂ ಗೊತ್ತಾಗಲ್ವ?
ನಿನ್ನದು ಬ್ರಿಟಿಷ್ ಇಂಗ್ಲೀಷ್ ಆಕ್ಸೆಂಟ್ ನಮ್ಮದು ಅಮೇರಿಕನ್ ಆಕ್ಸೆಂಟ್...
 ನನ್ನನ್ನು ಯಾಕೆ ಕೇಳೋದು ಗೂಗಲ್ ನಲ್ಲಿ ನೋಡು ನಿನಗೇ ತಿಳಿಯುತ್ತದೆ....
 ಕಮ್ ಆನ್ ...ಅಮ್ಮ... .. ಲೆಟ್ಸ್ ಹಾವ್ ಫನ್...
 ಸೋ..ವಾಟ್... ಚೇಂಜ್ ಯುವರ್  ಔಟ್ ಲುಕ್ ”
 ಇತ್ಯಾದಿ ವಾಕ್ಯಗಳು ನನ್ನ ಕಿವಿಯನ್ನು ಅಪ್ಪಳಿಸಲಾರಂಭಿಸಿದವು. ನಾನೂ ಒಂದು ಕಾಲದಲ್ಲಿ ಇಂಥದೇ ಅರ್ಥಬರುವ ವಾಕ್ಯಗಳನ್ನು ಉಪಯೋಗಿಸಿದ ನೆನಪು ಕಾಡಲಾರಂಭಿಸಿದಾಗ ನನ್ನ ತಾಯಿ ನೆನಪಾದಳು. ಅದರೆ ನನಗೂ ನನ್ನ ಮಕ್ಕಳಿಗೂ ವಯಸ್ಸಿನ ಅಂತರ ಜಾಸ್ತಿಯೇನಿಲ್ಲವಲ್ಲ...ಈ ಜಾಣೆತಾಯಿಗೆ ಯಾಕೆ ಸೋಲು ಎದುರಾಯಿತು? ಎಂದೆಲ್ಲ ಯೋಚಿಸಿದಾಗ  ನನಗೆ ಜೀವನ ಅರ್ಥವಾಯಿತು. ನನ್ನ ತಾಯಿಯ ಬಗ್ಗೆ ಇನ್ನಿಲ್ಲದ ಗೌರವ ಹುಟ್ಟಿತು.
ಹೌದು ಜನರೇಶನ್ ಗ್ಯಾಪ್ ಆನ್ನುವುದು ಶಾಶ್ವತ .ಅದನ್ನು ಇಲ್ಲವಾಗಿಸಲು ಅಸಾಧ್ಯ ಡಯಾಬಿಟೀಸ್ ನಂತೆ, ಆದರೆ ಹದ್ದುಬಸ್ತಿನಲ್ಲಿ ಇಡಬಹುದು. ಹದಿಹರೆಯದ, ಅತ್ಯಾಧುನಿಕ ಮಕ್ಕಳ ಜೊತೆ ದಿನವೂ ಏಗುತ್ತಾ , ಪ್ರಾಚೀನತೆಯ ಪ್ರತೀಕವಾದ ಸಂಸ್ಕೃತದ ಶಿಕ್ಷಕಿಯ ಕೆಲಸ ಮಾಡುವ ನನಗೆ ಜನರೇಶನ್ ಗ್ಯಾಪ್ ನ ಉರಿ ಆಗಾಗ ತಟ್ಟುತ್ತಿರುತ್ತದೆ. ಹಾಗಾಗಿ ಈ ತಲೆಮಾರುಗಳ ತಲೆಬಿಸಿಯನ್ನು ಕಡಿಮೆ ಮಾಡುವ ಕೆಲ ವಿಧಾನಗಳನ್ನು ಕಂಡುಕೊಂಡು ನೆಮ್ಮದಿಯಾಗಿರಲು ಪ್ರಯತ್ನಿಸುತ್ತಿರುತ್ತೇನೆ. ಓದಿ, ನಿಮಗೂ ಸರಿಯೆನಿಸಿದರೆ ಪಾಲಿಸಬಹುದು.
·         ದಿನವೂ ತಪ್ಪದೇ ದಿನಪತ್ರಿಕೆಯನ್ನು ಓದಿ. ಆಗಾಗ ಸಿನಿಮಾ ನೋಡಿ. ಪ್ರಪಂಚದ ಆಗುಹೋಗುಗಳು ನಿಮಗೆ ತಿಳಿದಾಗ ಯುವಜನರ ನಡವಳಿಕೆಗಳು ವಿಚಿತ್ರ ಅನಿಸುವುದಿಲ್ಲ.
·         ಮಕ್ಕಳು ಏನಾದರೂ ಸಲಹೆ ನೀಡಿದಾಗ ತಕ್ಷಣ ನಿರಾಕರಿಸಬೇಡಿ. ನೋಡೋಣ.. ಯೋಚನೆ ಮಾಡುತ್ತೇನೆ.. ಅನ್ನಿ. ಸಂದರ್ಭ, ಅವಕಾಶಗಳನ್ನು ನೋಡಿಕೊಂಡು ಚುಟುಕಾಗಿ ಆದರೆ ದೃಢವಾಗಿ ನಿಮ್ಮ ಅಭಿಪ್ರಾಯವನ್ನು ಸೂಚಿಸಿ.
·         ನಮ್ಮ ಕಾಲದಲ್ಲಿ ಐದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಸಿಗುತ್ತಿತ್ತು. ಈಗ ಏನ್ ಕಾಲ ಬಂತಪ್ಪಾ.... ಎನ್ನುತ್ತಾ ಹಳೆಯ ಕಾಲದ ಬೆಲೆಗಳನ್ನು ಇಂದಿನ ಬೆಲೆಗಳಿಗೆ ಹೋಲಿಸುವ ಅಸಂಬದ್ಧ ಪ್ರಲಾಪವನ್ನು ನಿಲ್ಲಿಸಿ.ಅದರಿಂದ ಏನೂ ಉಪಯೋಗವಿಲ್ಲ.
·         ಸಂಪ್ರದಾಯ, ಜಾತಿ, ಮದುವೆಯ ಬಗ್ಗೆ ಮಕ್ಕಳ ಅಭಿಪ್ರಾಯಗಳು ಶಾಲಾಶಿಕ್ಷಣದ ಪ್ರಭಾವದಿಂದ ರೂಪುಗೊಂಡಿವೆ. ಮನೆಯಿಂದ ಹೊರಗೆ ಕಾಲಿಡುತ್ತಿದ್ದಂತೆಯೇ ’ಎಲ್ಲರೂ ಸಮಾನರು ’ ಎಂಬ ತತ್ವ ಅನುಸರಿಸುವ ಮಕ್ಕಳು ಮನೆಯೊಳಗೆ  ’ನಾವು ಮಾತ್ರ ಶ್ರೇಷ್ಠರು ’ ಎಂಬುದನ್ನು ಒಪ್ಪಲಾರರು. ಅಲ್ಲದೆ ಕೆಲವು ಸಾಂಪ್ರದಾಯಿಕ ಆಚರಣೆಗಳನ್ನು ಇಂದಿನ ಜೀವನಶೈಲಿಯಲ್ಲಿ ಅನುಸರಿಸುವುದು ಕಷ್ಟಸಾಧ್ಯ. ಆದ್ದರಿಂದ ನಿಮ್ಮ ನಿಲುವುಗಳನ್ನು ಮಕ್ಕಳು ಗೌರವಿಸದಿದ್ದರೆ ಕೂಗಾಡುವುದರಿಂದ ಪ್ರಯೋಜನವಿಲ್ಲ. ಶಾಂತಚಿತ್ತದಿಂದ ತಿಳಿಹೇಳಲು ಪ್ರಯತ್ನಿಸಿ.ಅವರು ಕೇಳದಿದ್ದರೆ ಸಾಧ್ಯವಾದಷ್ಟು ಮಟ್ಟಿಗೆ ಅಡ್ಜಸ್ಟ್ ಮಾಡಿಕೊಳ್ಳಿ. ಮನ:ಶಾಂತಿಯ, ಪ್ರೀತಿ-ವಿಶ್ವಾಸದ ಸಂಬಂಧಗಳ ಮುಂದೆ ಸಂಪ್ರದಾಯ, ಜಾತಿಗಳು ಅಮುಖ್ಯ.
·         “ಈಗಿನ ಮಕ್ಕಳು ತಂದೆತಾಯಿಯರನ್ನು ಎಲ್ಲಿ ನೋಡ್ಕೋತಾರೆ? ”ಎಂದು ಮೂಗು ಮುರಿಯುತ್ತಾ ವೃದ್ಧಾಶ್ರಮದ ಬಗ್ಗೆ ಮಕ್ಕಳ ಮುಂದೆ ಮಾತನಾಡಬೇಡಿ. ನಮ್ಮ ಆಧುನಿಕ ಜೀವನ ನಮಗೆ ಅನೇಕ ಸುಖಗಳನ್ನು ಕೊಟ್ಟಿದೆ.ಹಾಗೆಯೇ ಕೆಲ ಸವಾಲುಗಳನ್ನು ಕೂಡಾ. ಏಕಾಂಗಿಯಾಗಿ ವೃದ್ಧಾಪ್ಯವನ್ನು ಎದುರಿಸುವ ಅನಿವಾರ್ಯತೆ ಬರಬಹುದು. ಅದಕ್ಕಾಗಿ ಒಳ್ಳೆಯ ಆರೋಗ್ಯ,ಸಾಕಷ್ಟು ಹಣದ ಜೊತೆ ತಯಾರಾಗೋಣ. ಗೊಣಗಾಟ ಬೇಡ.
·         ಯುವಕರ ಜೊತೆ ಮಾತನಾಡುವಾಗ ನಿಮ್ಮ ಹಳೆಯ ಕಠಿಣ ಜೀವನಶೈಲಿಯನ್ನು, ನಿಮ್ಮ ಆದರ್ಶ ಜೀವನಧ್ಯೇಯಗಳನ್ನು ಅತಿಯಾಗಿ ಹೇಳಬೇಡಿ.ಅವರಿಗೆ ಅದು “ ಬೋರಿಂಗ್” ಅನಿಸುತ್ತದೆ. ಯಾಕೆಂದರೆ ಅಂಥ ಜೀವನದ ಕಲ್ಪನೆ ಕೂಡಾ ಅವರಿಗೆ ಇರುವುದಿಲ್ಲ. ಅವರಿಗದು ಬೇಕಾಗೂ ಇಲ್ಲ. ಅವರು ಬೇರೊಂದು ಕಾಲಘಟ್ಟದಲ್ಲಿ ಬದುಕುತ್ತಿದ್ದಾರೆ.
·          “ನನಗದು ಬರುವುದಿಲ್ಲ... ಕಲಿಯಲು ಇಷ್ಟವಿಲ್ಲ... ನನ್ನ ಜೀವನ ಮುಗಿಯುತ್ತಾ ಬಂತು ನಾನ್ಯಾಕೆ ಕಲೀಬೇಕು.... ಅನ್ನುವ ಪಲಾಯನವಾದವನ್ನು ಬಿಡಿ. ಇದು ತಂತ್ರಜ್ಞಾನದ ಯುಗ. ಸಾಯುವ ಗಳಿಗೆಯವರೆಗೂ ಕಲಿಯದೇ ವಿಧಿಯಿಲ್ಲ.

ಯುವಜನರ ಜೊತೆ ಮನಸ್ತಾಪವಿಲ್ಲದೆ ಬದುಕಲು ನಾವು ಎರಡು ಹೆಜ್ಜೆ ಮುಂದಿಡುವುದು ಅತ್ಯಗತ್ಯ. ಆಗ ಅವರು ಕೂಡಾ ನಮ್ಮೊಡನೆ ನಡೆಯಲು ಮನಸ್ಸು ಮಾಡುತ್ತಾರೆ. ಜೊತೆ ಜೊತೆಗೆ ಎರಡು ಜನರೇಶನ್ ಗಳು ನಡೆಯುವಾಗ ಗ್ಯಾಪ್ ಇರಲು ಹೇಗೆ ಸಾಧ್ಯ ಅಲ್ಲವೇ?