Wednesday, 20 May 2015

ಹಸುವಿನ ಕೊರಳ ಗೆಜ್ಜೆದನಿ

ಈ ಚಿತ್ರದಲ್ಲಿರುವುದು ಏನೆಂದು ನಿಮಗೆ ಗೊತ್ತೇ? ’ ಹಸುವಿನ ಕೊರಳಿನ ಗಂಟೆ’ ಎಂದು ಇದನ್ನು ನಮಗೆ ಮಾರಿದವರು ಹೇಳಿದ್ದರು. ಇವತ್ತು ದೇವರಪಾತ್ರೆಗಳನ್ನು ತೊಳೆದು, ಫೋಟೋಗಳನ್ನು, ಬಾಗಿಲನ್ನು ಒರೆಸುತ್ತಿದ್ದಾಗ , ಬಾಗಿಲತೋರಣದ ಹಿಂದೆ ಅವಿತಿದ್ದ ಇದು ಕಣ್ಣಿಗೆ ಬಿತ್ತು. ಕಪ್ಪಾಗಿದೆಯಲ್ಲ.. ಎಂದು ಹುಣಿಸೆನೀರಿನಲ್ಲಿ ತೊಳೆದರೆ ಫಳ ಫಳ ಹೊಳಪು. ಹೊಳಪಿನಲ್ಲಿ ಆ ಹುಡುಗನ ಮುಖ ಕಾಣಿಸಿತು! ಹೌದು ಇದರ ಹಿಂದೊಂದು ಸ್ವಾರಸ್ಯಕರ ಕತೆಯಿದೆ.
ಸುಮಾರು  13  ವರ್ಷಗಳ ಹಿಂದೆ ಇಂಥದೇ ಒಂದು ಮೇ ತಿಂಗಳ ದಿನ. ನಾವು ಆಗತಾನೇ ಮಾರುತಿ ಕಾರು ಕೊಂಡಿದ್ದೆವು.ಸರಿ.. ಕಾರಿನಲ್ಲಿ ಒಂದಿಷ್ಟು ದೂರ ಹೋದಂತೆಯೂ ಆಯಿತು,ಮಕ್ಕಳಿಗೂ ರಜೆ ಇದೆ, ಬೇಲೂರು- ಹಳೆಬೀಡುಗಳನ್ನು ನೋಡಿಕೊಂಡು ಬರೋಣ ಎಂದುಕೊಂಡು ನಾನು, ನನ್ನ ಪತಿ, ಏಳು ಹಾಗೂ ಐದು ವಯಸ್ಸಿನ ಮಗಳು-ಮಗ ಹೊರಟೆವು. ಪೆಟ್ರೋಲ್ ಖರ್ಚೇ ತುಂಬಾ ಆಗುತ್ತದೆ. ಇನ್ನು ಹೋಟೇಲಿಗೆ ದುಡ್ಡು ದಂಡ ಬೇಡ. ಅಲ್ಲದೇ ಆರೋಗ್ಯಕ್ಕೂ ಒಳ್ಳೆಯದು ಎಂದುಕೊಂಡು ಬೆಳಗಿನ ತಿಂಡಿ, ಮಧ್ಯಾಹ್ನದ ಊಟವನ್ನು ಮನೆಯಿಂದಲೇ ಕಟ್ಟಿಕೊಂಡು ಹೊರಟೆವು. ಬೆಳಗ್ಗೆ ಬೇಗ ಹೊರಟು, ಬೇಲೂರು ಚೆನ್ನಕೇಶವನ ದರ್ಶನ ಮುಗಿಸಿ, ಮಧ್ಯಾಹ್ನ ಮೂರರ ಹೊತ್ತಿಗೆ ಹಳೆಬೀಡಿಗೆ ಬಂದೆವು. ಹೊಯ್ಸಳೇಶ್ವರ ದೇಗುಲದ ಶಿಲ್ಪವೈಭವವನ್ನು ಕಂಡು ಬೆರಗಾಗಿ, ಅಲ್ಲೇ ಮುಂದಿದ್ದ ಉದ್ಯಾನದಲ್ಲಿ ಕುಳಿತೆವು.
ಹೊಟ್ಟೆ ತುಂಬಿತ್ತು. ಗಾಳಿ ತಣ್ಣಗೆ ಹಿತವಾಗಿ ಬೀಸುತ್ತಿತ್ತು. ಮಕ್ಕಳು ಹೀಗೇ ಏನೋ ಆಟ ಶುರುಮಾಡಿದರು. ಕೆಲಹೊತ್ತಿನಲ್ಲೇ ಮಗ ಬಿದ್ದು ಮಂಡಿ ತರಚಿದ್ದೂ ಆಯ್ತು. ಇಬ್ಬರೂ ಒಬ್ಬರ ಮೇಲೊಬ್ಬರು ದೋಷಾರೋಪಣ ಪಟ್ಟಿ ಒಪ್ಪಿಸಲು ಶುರು ಮಾಡಿದ್ದೂ ಆಯ್ತು. ನಾನು ನ್ಯಾಯಪಂಚಾಯ್ತಿಯನ್ನು ಆರಂಭಿಸುತ್ತಿದ್ದಂತೆಯೇ ಆತ ಅಲ್ಲಿಗೆ ಬಂದ. ತೆಳ್ಳನೆ ಮೈಕಟ್ಟಿನ , ಹಳೆ ಪಾಂಟು ಗೀರಿನ ಅಂಗಿ ತೊಟ್ಟಿದ್ದ ಸುಮಾರು ಹದಿನಾರು ವಯಸ್ಸಿನ ಆ ಹುಡುಗ ಸಾರ್ ಇದನ್ನು ಕೊಂಡ್ಕೊಳ್ಳಿ 3೦೦ ರೂ. ಕೊಡಿ ಅಂದ. ನನ್ನ ಪತಿನಾವು ಬೆಂಗಳೂರಿನವರು, ನಮಗಿದು ಉಪಯೋಗವಿಲ್ಲ ,ಬೇಡ ಅಂದರು.ಅವನು ಮತ್ತೆ ಮತ್ತೆ ಅದರ ಗುಣಲಕ್ಷಣಗಳನ್ನು ವರ್ಣಿಸಿ , ಮನೆಗೆ ಅಲಂಕಾರಕ್ಕೆ ಹಾಕಿ ತಗೊಳ್ಳಿ ಸಾರ್ ಎಂದು ಒತ್ತಾಯ ಶುರುಮಾಡಿದ. ನಾವು ಒಪ್ಪಲೇ ಇಲ್ಲ. ಇದ್ದಕ್ಕಿದ್ದಂತೆ ಆತ “ ಸಾರ್ , ಇಲ್ಲ ಅನ್ಬೇಡಿ .ಫೀಸ್ ಕಟ್ಟಕ್ಕೆ ದುಡ್ಡಿಲ್ಲ. ಹಸುವಿನ ಕೊರಳಿನಿಂದ ಕದ್ದು ತಂದಿದೀನಿ. ನಿಮ್ಮ ಹೆಸರು ಹೇಳಿಕೊಂಡು ಓತ್ತೀನಿ... “ಅಂತೆಲ್ಲ ಆರಂಭಿಸಿದ. ಕದ್ದದ್ದು ಅಂದಕೂಡಲೇ ಜಾಗ್ರತರಾದ ನಾವು ಮೆಲ್ಲನೆ ಅಲ್ಲಿಂದ ಎದ್ದು ಕಾರಿನ ಕಡೆ ನಡೆಯಲಾರಂಭಿಸಿದೆವು. ನಮ್ಮ ಬೆನ್ನ ಹಿಂದೆಯೇ ಬಂದ ಆತ “ ಸಾರ್ ನಾನು ಕಳ್ಳನಲ್ಲ. ಪಿಯುಸಿ ಫೇಲ್ ಆಗಿದ್ದೀನಿ. ಅಪ್ಪ ಮನೆಯಿಂದ ಓಡಿಸಿದ್ದಾನೆ. ಆದ್ರೆ ಸಾರ್ ಈಗ ನನಗೆ ಬುದ್ಧಿ ಬಂದಿದೆ. ನಾನು ೧೦ನೇ ಕ್ಲಾಸ್ ಪಾಸ್ . ಅದರ ಮೇಲೆ ಇಲ್ಲೆ ಬೇಲೂರಲ್ಲಿ ಐ ಟಿ ಐ ಸೇರ್ಕೋತೀನಿ... ಫೀಸ್ ಪುಸ್ತಕಕ್ಕೆ ದುಡ್ಡು ಬೇಕು ಸಾರ್ ... ಆಮೇಲೆ ಹೇಗೋ ಮಾಡ್ಕೋತೀನಿ... ಬೆಂಗಳೂರಿನಲ್ಲಿ ಕೆಲಸ ಮಾಡ್ತೀನಿ..... ಎಂದೆಲ್ಲಾ ಪರಿಪರಿಯಾಗಿ ಅವನ ಬಡತನದ  ಕತೆ ಹೇಳುತ್ತಾ ಅಂಗಲಾಚತೊಡಗಿದ. ನನ್ನ ಪತಿ ಸ್ವಲ್ಪ ಖಾರವಾಗಿ “ ನೋಡು ನಿನ್ನ ಕತೆ ಎಲ್ಲಾ ನಾನು ನಂಬಲು ಸಾಧ್ಯವಿಲ್ಲ. ಈ ಗಂಟೆಗಳು ನನಗೆ ಬೇಡ “. ಎಂದು ಹೇಳಿ ವೇಗವಾಗಿ ನಡೆಯಲಾರಂಭಿಸಿದರು.  ನನಗೆ ಇಕ್ಕಟ್ಟಿನ ಪರಿಸ್ಥಿತಿ. ಪಾಪ ಬಡರೈತನ ಮಗ. ಏನೋ ಮನಸ್ಸಿಟ್ಟು ಓದದೇ ನಪಾಸಾಗಿ ತಪ್ಪು ಮಾಡಿದ್ದಾನೆ. ಆದರೆ ಈಗ ತಪ್ಪನ್ನು ತಿದ್ದಿಕೊಳ್ಳುತ್ತಿದ್ದಾನೆ. ಮನೆಯಲ್ಲಿ ಕಷ್ಟ ಇದೆ ಅನ್ನುತ್ತಿದ್ದಾನೆ. ಆದರೆ ನಮ್ಮ ಅಂದಿನ ಬ್ಯಾಂಕಿನ ಕಂತುಗಳ ಮೇಲೆ ನಿಂತಿದ್ದ ಆರ್ಥಿಕಸ್ಥಿತಿಗೆ 3೦೦ ರೂ. ಕೊಂಚ ದೊಡ್ಡ ಮೊತ್ತವೇ ಆಗಿತ್ತು. ಅದೂ ಈ ರೀತಿಯ ದಾನಕ್ಕೆ! ಅಲ್ಲದೇ ಆತ ಸುಳ್ಳು ಹೇಳುತ್ತಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ? ಆತನದ್ದು ಇದೇ ರೀತಿ ಸುಲಿಗೆಯೇ ಉದ್ಯೋಗವಾಗಿದ್ದರೆ ಏನು ಗತಿ? ಆದರೆ ಓದಬೇಕು ಅನ್ನುತ್ತಿದ್ದಾನೆ. ಮಾತಿನಲ್ಲಿ ಪ್ರಾಮಾಣೆಕತೆ ಇದೆ. ... ಸರಿ ಏನೇ ಇರಲಿ... ನನ್ನ ಸತ್ಯ ನನಗೆ.....  ಅಂದುಕೊಂದು ಪರ್ಸಿನಲ್ಲಿ ಜೋಪಾನವಾಗಿರಿಸಿದ್ದ ೨೦೦ ರೂಗಳನ್ನು ಅವನಿಗೆ ಕೊಟ್ಟು ಈ ಗಂಟೆಗಳನ್ನು ತೆಗೆದುಕೊಂಡು, ನನ್ನೆಡೆಗೆ ತೀಕ್ಷ್ಣ ನೋಟ ಬೀರುತ್ತಿದ್ದ ಪತಿಯನ್ನು ಹಿಂಬಾಲಿಸಿದೆ.

ಅಂದಿನಿಂದ ಈ ಎರಡು ಟಿಣಿ ಟಿಣಿಗಳು ನಮ್ಮ ಜೊತೆಗೇ ಬಾಡಿಗೆ ಮನೆಗಳನ್ನು ಸುತ್ತಿವೆ. ಈಗ ನಮ್ಮ ಈ ಮನೆಯಲ್ಲಿ ಬಾಗಿಲ ಸಂದಿಯಲ್ಲಿ ತಣ್ಣಗೆ ಕುಳಿತು ಎಂದಾದರೊಮ್ಮೆ ಅವನನ್ನು ನೆನಪಿಸುತ್ತವೆ. ಅವನು ವಿದ್ಯಾಭ್ಯಾಸ ಮುಗಿಸಿ, ಕೆಲಸ ಹಿಡಿದು, ಮುನಿದ ಅಪ್ಪನನ್ನು ಒಲಿಸಿಕೊಂಡಿರಬಹುದು. ಮದುವೆಯಾಗಿ ಈ ಮಹಾನಗರದಲ್ಲೇ ಸಂಸಾರ ಹೂಡಿರಬಹುದು ಎಂಬ ಭರವಸೆಯನ್ನು ನನ್ನಲ್ಲಿ ತುಂಬುತ್ತವೆ. ಹದಿವಯಸ್ಸಿನಲ್ಲಿ ಬಾಹ್ಯ ಆಕರ್ಷಣೆಗಳಿಂದ ಎಷ್ಟೋ ಮಕ್ಕಳು ಓದಿನ ಕಡೆ ಗಮನ ಕೊಡದೆ ನಪಾಸಾಗುತ್ತಾರೆ. ಅವರಿಗೆ ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ಕೊಡಿ. ಈ ಅತ್ಯಮೂಲ್ಯ ಸಂಪತ್ತುಗಳ ಭವಿಷ್ಯ ನೀವು ರೂಪಿಸಿದ ಯಶಸ್ಸಿನ ಮಾನದಂಡಗಳ ನಡುವೆ ನಾಶವಾಗದಿರಲಿ ಎಂದು ಆಗಾಗ ಕಿಣಿ ಕಿಣಿ ನಾದಗೈದು ಹೇಳುತ್ತವೆ.

Monday, 11 May 2015

ಕರುಣಾಳು ಬಾ ಬೆಳಕೆ.....

ಮೂರನೇ ಪೀರಿಯಡ್ ಮುಗಿಸಿ ಉಸ್ಸಪ್ಪ್ಪಾ…..ಎಂದುಕೊಂಡು ಕುರ್ಚಿಯ ಮೇಲೆ ನಾನು ಕುಳಿತುಕೊಂಡಾಗ ೫ನೇ ತರಗತಿಯ ಉತ್ತರಪತ್ರಿಕೆಗಳ ಬೆಟ್ಟ ನನ್ನನ್ನು ಅಣಕಿಸಿತು.ಇನ್ನು ಎರಡು ಪೀರಿಯಡ್  ಬಿಡುವಾಗಿದೆ.ಈ ಪರ್ವತವನ್ನಾದರೂ ಕರಗಿಸೋಣ ಎಂದುಕೊಂಡು ಕೆಂಪು ಪೆನ್ ಕೈಗೆತ್ತಿಕೊಂಡೆ.ಅವೇ ಪ್ರಶ್ನೆಗಳು-ಉತ್ತರಗಳು. ನಿಮ್ಮ ದಿನಚರಿಯ ಬಗ್ಗೆ ಅಜ್ಜಿಗೆ ಪತ್ರ ಬರೆಯಿರಿ ಎಂಬುದಕ್ಕೆ ಮಾತ್ರ ಉತ್ತರಗಳು ಕುತೂಹಲಕಾರಿಯಾಗಿದ್ದವು.ಈ ಹತ್ತು ವರ್ಷದ ಮಕ್ಕಳ ಸರಳ- ಸುಂದರ  ಸಮಸ್ಯೆಗಳ,ನಿರೀಕ್ಷೆಗಳ ಪ್ರಪಂಚವನ್ನು ವರ್ಣಿಸುವ ಆ ಪತ್ರಗಳನ್ನು ಏನೆಂದು ಬಣ್ಣಿಸಲಿ.ಹಾಗೇ ಮುಂದಿನ ಪತ್ರಿಕೆ ಕೈಗೆತ್ತಿಕೊಂಡೆ. ಯಾಕೋ ಇದು ಎಲ್ಲದರಂತಲ್ಲ ಅನಿಸಿತು. ಆದಿತ್ಯ ಬರೆದ ಪತ್ರ ಹೀಗಿತ್ತು.“ಅಜ್ಜಿ,ನಾನು ಬಹಳ  ಬೇಸರದಲ್ಲಿದ್ದೇನೆ. ಏಕೆಂದರೆ ಮನೆಯಲ್ಲಿ ಅಮ್ಮ ಇಲ್ಲ.ಅವಳು ದೇವರ ಬಳಿ ಹೋದ ಮೇಲೆ ಮನೆಯಲ್ಲಿ ನನ್ನನ್ಯಾರೂ ಪ್ರೀತಿಸುತ್ತಿಲ್ಲ.ಅಪ್ಪ ಯಾವಾಗಲೂ ಚಿಕ್ಕಮ್ಮನ ಜೊತೆಗೇ ಮಾತಾಡ್ತಾರೆ. ಎಲ್ಲರಿಗೂ ನನ್ನ ತಮ್ಮನ ಮೇಲೆಯೇ ಪ್ರೀತಿ.ಅಮ್ಮ ನೀನ್ಯಾಕೆ ನನ್ನ ಬಿಟ್ಟು ಹೋದೆ? ….ಇತ್ಯಾದಿ ……..ಯಾಕೋ ಮನಸ್ಸು ಕದಡಿಹೋಯಿತು. ನಿಜ, ತಾಯಿಗೆ ಸರಿಸಾಟಿ ಯಾರು?೨ವರ್ಷಗಳ ಹಿಂದೆ ಆದಿತ್ಯನ ತಾಯಿ ಅಪಘಾತಕ್ಕೆ   ಬಲಿಯಾಗಿದ್ದು , ಮಾಧ್ಯಮಗಳಲ್ಲಿ ಸುದ್ದಿಯಾದದ್ದು  ನೆನಪಾಯಿತು.ಓಹ್ …ಅವನ ತಂದೆ ಆಗಲೇ ಇನ್ನೊಂದು ಮದುವೆಯಾಗಿ,ಒಂದು ಮಗು ಕೂಡಾ…ಪಾಪ ಆತ ತಾನೇ ಏನು ಮಾಡಲು ಸಾಧ್ಯ? ಆದಿತ್ಯನನ್ನು ನೋಡಿಕೊಳ್ಳಲು ಕಷ್ಟವಾಗಿರಬಹುದು. ಆದರೆ ಈ ಮಗು ಹೀಗೆ ದು:ಖಿಸುತ್ತಿದ್ದರೆ ಏನು ಚೆನ್ನ? ನಾನು ಆದಿತ್ಯನ ಕ್ಲಾಸ್ ಟೀಚರ್ ಆಗಿ ಸುಮ್ಮನೆ ಇದ್ದರೆ ಅಪರಾಧವಲ್ಲವೇ?ನಾನೇನಾದರೂ ಇದಕ್ಕೆ ಮಾಡಲೇಬೇಕೆಂದು ನಿರ್ಧರಿಸಿದೆ.

 ಊಟದ ಅವಧಿಯಲ್ಲಿ ತರಗತಿಗೆ ಹೋದವಳು ಆದಿತ್ಯನ ಡಬ್ಬಿ ನೋಡಿದೆ.ದೋಸೆ, ಚಟ್ನಿ ಜೊತೆಗೆ ಹಣ್ಣಿನ ತುಂಡುಗಳು…ಪರವಾಗಿಲ್ಲ ಅನಿಸಿತು.ಆದರೆ ಇವನು ಅರ್ಧ ಹಾಗೇ ಉಳಿಸಿದ್ದ.ಕೇಳಿದರೆ ಇಷ್ಟವಿಲ್ಲ ಅಂದ.ಶುಭ್ರವಾದ ಬಟ್ಟೆ ಧರಿಸುವ,ಓದುವುದರಲ್ಲೂ ಉತ್ತಮವಾಗೇ ಇರುವ,ಒಳ್ಳೆಯ ಊಟವೂ ತರುವ ಈ ಮಗುವಿನ ಮನದಲ್ಲಿ ಎಂಥ ನೋವಿದೆ ಅನಿಸಿ ಬೇಜಾರಾಯಿತು.ತಂದೆ ತಾಯಿ ಮಕ್ಕಳನ್ನು ಸಂತೋಷವಾಗಿಡಲು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಆದರೆ ಕೆಲವೊಮ್ಮೆ ಅದು ಮರೀಚಿಕೆಯೇ ಆಗುತ್ತದಲ್ಲ. ಯಾಕೆ ಹೀಗೆ? ಹೃದಯ ತಳಮಳಗೊಂಡಿತು.ಸೀದಾ ಮುಖ್ಯೋಪಾಧ್ಯಾಯರಿಗೆ ವಿಷಯ ತಿಳಿಸಿ,ಪೋಷಕರನ್ನು ಕರೆದು ಮಾತಾಡಲೇ ಎಂದೆ.ಅವರು ಅಗತ್ಯವಾಗಿ ಮಾಡಿ ಬೇಕಿದ್ದರೆ ನನ್ನ ಬಳಿಗೇ ಕರೆತನ್ನಿ ಎಂದರು.

ಸರಿ,ಮಾರನೇ ದಿನ ಸರಿಯಾದ ಸಮಯಕ್ಕೆ ತಂದೆ- ಚಿಕ್ಕಮ್ಮ ಹಾಜರ್.ಅವರನ್ನು ನೋಡುತ್ತಿದ್ದಂತೆಯೇ ನನ್ನ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾದವು.ಇಬ್ಬರೂ ಸುಸಂಸ್ಕೃತರೂ ಹಾಗೂ ಮೃದುಭಾಷಿಗಳು.ಕೈಯಲ್ಲಿ ಮುದ್ದಾದ ಒಂದು ವರ್ಷದ ಮಗು. ಆಕೆಯ ಪ್ರಕಾರ ಮನೆಯಲ್ಲಿ ಆದಿತ್ಯ ಎಲ್ಲದಕ್ಕೂ ಸಿಡಿಮಿಡಿಗೊಳ್ಳುತ್ತಾನೆ.ಆಕೆ ಎಷ್ಟೇ ಪ್ರಯತ್ನಿಸಿದರೂ ಆದಿತ್ಯನ ಮನ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದು ಆಕೆಯ ಅಳಲು. ಮರುಮದುವೆಯಾಗಿ ತಪ್ಪು ಮಾಡಿದೆನೋ ಎಂಬುದು ಆತನ ಅಳಲು.ಯಾಕೋ ಇದು ಕಗ್ಗಂಟಾಯಿತಲ್ಲ ಅನಿಸಿತು.ಆದರೂ ಆದಿತ್ಯನ ಹಿತಕ್ಕಾಗಿ ನೀವಿಬ್ಬರೂ ಇನ್ನೂ ಕೆಲಕಾಲ ತಾಳ್ಮೆ ವಹಿಸಬೇಕು ಎಂದು ಸಲಹೆ ನೀಡಿ ಅವರನ್ನು ಬೀಳ್ಕೊಟ್ಟೆ. ಆದಿತ್ಯನಿಗೂ ಈ ವಿಚಾರದಲ್ಲಿ ಅರಿವು ಮೂಡಿಸಲು ದಿನವೂ ಅವನ ಜೊತೆ ಸ್ವಲ್ಪಹೊತ್ತು ಕಳೆಯಲು ನಿರ್ಧರಿಸಿದೆ.

ಆ ಭಾನುವಾರ ನಮ್ಮ ಬಂಧುಗಳೊಬ್ಬರ ಮನೆಯ ಸಮಾರಂಭಕ್ಕೆ ಜಯನಗರಕ್ಕೆ ಹೋಗಿದ್ದೆವು.ಅಲ್ಲಿ ಒಳಗೆ ಹೋಗಿ ಮಾತನಾಡುತ್ತಿದ್ದರೆ ಅರೆ… ಅಲ್ಲಿದ್ದಾನೆ ಆದಿತ್ಯ.ಅವನ ತಂದೆ ನನ್ನ ಬಂಧುಗಳ ಸಹೋದ್ಯೋಗಿ. ಯಾಕೋ... ಏನೋ... ಮಕ್ಕಳಿಗೆ ಶಾಲೆಯ ಹೊರಗೆ ಟೀಚರ್  ಕಂಡರೆ ಬಹಳ  ಇರಿಸುಮುರುಸಾಗುತ್ತದೆ.  ಪಾಪ.. ಆದಿತ್ಯ ನನ್ನ ಕಣ್ತಪ್ಪಿಸಿ ಓಡಾಡಲಾರಂಭಿಸಿದ . ಅವನ ಪಕ್ಕದ ಮನೆಯಲ್ಲೇ ವಾಸವಾಗಿರುವ ನನ್ನ ಮಾವನ ಮಗಳು ಕೂಡಾ ಬಂದಿದ್ದಳು. ಅವಳಲ್ಲಿ ಲೋಕಾಭಿರಾಮವಾಗಿ ಆದಿತ್ಯನ ವಿಷಯ ಪ್ರಸ್ತಾಪಿಸಿದೆ.ಆಕೆಯ ಪ್ರಕಾರ ಅವನ ತಂದೆ- ಚಿಕ್ಕಮ್ಮ ತುಂಬಾ ಚೆನ್ನಾಗಿ ಅವನ ಆರೈಕೆ ಮಾಡುತ್ತಾರೆ.ಆದರೆ ಆದಿತ್ಯನ ಅಜ್ಜಿ [ಅವನ ತಾಯಿಯ ತಾಯಿ] ಆಗಾಗ ಅವನಿಗೆ ದೂರವಾಣಿಕರೆ ಮಾಡುತ್ತಾರೆ.ವಾರಾಂತ್ಯದಲ್ಲಿ ತಮ್ಮ ಮನೆಗೂ ಕರಕೊಂಡು ಹೋಗುತ್ತಾರೆ.ಆದಿತ್ಯನನ್ನು ಅವನ ಚಿಕ್ಕಮ್ಮನಿಂದ ಮಾನಸಿಕವಾಗಿ ದೂರವಿರಿಸುತ್ತಾರೆ.ಅವನ ಸಮಸ್ಯೆಗೆ ಅವರ ದುರ್ಬೋಧನೆಯೇ ಕಾರಣ. ಅಬ್ಬಾ ….. ಮನಸ್ಸು ನಿರಾಳವಾಯಿತು. ನಮ್ಮ ಪ್ರಾಮಾಣಿಕ ಪ್ರಯತ್ನಗಳಿಗೆ ದೇವರು[ ಹಾಗೊಬ್ಬ ಇದ್ದರೆ] ಯಾವ ಯಾವ ರೂಪಗಳಲ್ಲಿ ಬಂದು ಸಹಾಯ ಮಾಡುತ್ತಾನಲ್ಲ ….
ಮುಂದಿನವಾರ ಆದಿತ್ಯನ ಅಜ್ಜಿಗೆ ದೂರವಾಣಿಕರೆ ಮಾಡಿ ನಯವಾಗಿ ಮಾತನಾಡಿ, ಶಾಲೆಗೆ ಕರೆಯಿಸಿದೆ.ಮಗಳ ಸಾವಿನಿಂದ ಕಂಗೆಟ್ಟಿದ್ದ ಅವರು,ಅವಳ ಸ್ಥಾನದಲ್ಲಿರುವ ಇನ್ನೊಬ್ಬ ಹೆಣ್ಣಿನ ಮೇಲಿನ ಮಾತ್ಸರ್ಯದಿಂದ  ಬೆಂದುಹೋಗಿದ್ದರು.ಹಾಗೇ ಸ್ನೇಹದಿಂದ ಅವರ ಜೊತೆ ಮಾತನಾಡಿ,ಆದಿತ್ಯನ ಭವಿಷ್ಯದ ದೃಷ್ಟಿಯಿಂದ ಅವನು ಚಿಕ್ಕಮ್ಮನ ಜೊತೆ ಹೊಂದಿಕೊಳ್ಳುವುದು ಎಷ್ಟು ಮುಖ್ಯ …ಇತ್ಯಾದಿಯಾಗಿ ಚರ್ಚೆ ನಡೆಸಿದವು.ಮುಂದೆ ಅನೇಕ ಬಾರಿ ಅವರಾಗೇ ನನ್ನನ್ನು ಕಾಣಲೂ ಬಂದರು.ಹಾಗೇ ಶೈಕ್ಷಣಿಕ ವರುಷ ಉರುಳಿತು.
                                                  ****
ಯಾಕ್ರೀ …. ಇಲ್ಲಿ ನಿಂತುಕೊಂಡು ಏನು ಯೋಚಿಸ್ತಿದ್ದೀರಾ…ಮನೆಗೆ ಹೋಗಲ್ವಾ..ದೈಹಿಕ ಶಿಕ್ಷಕರ ಧ್ವನಿ ನನ್ನನ್ನು ವಾಸ್ತವಕ್ಕೆ ತಂದಿತು.ಅರೆ… ನಾನಿಲ್ಲೆ ಗೇಟಿನ ಬಳಿ ಯಾಕಿದ್ದೇನೆ? ಹೌದು ಈಗ ತಾನೇ ಆದಿತ್ಯ ಬಂದಿದ್ದನಲ್ಲ…ಪಿ ಇ ಎಸ್ ಕಾಲೇಜಿನಲ್ಲಿ ಇಂಜನಿಯರಿಂಗ್ ಓದುತ್ತಿದ್ದೇನೆ ಎಂದನಲ್ಲ….ಅಮ್ಮ ಊರಿಗೆ ಹೋಗಿದ್ದಾರೆ…..ರಾತ್ರಿ ಬರುತ್ತಾರೆ. … ಹಾಗಾಗಿ ಮೂರನೇ ತರಗತಿಯಲ್ಲಿ ಓದುತ್ತಿರುವ ಅವನ ತಮ್ಮನನ್ನು ಮನೆಗೆ ಒಯ್ಯಲು ನಾನೇ ಬಂದೆ..….ಎಂದನಲ್ಲ.ಅವರಿಬ್ಬರೂ ಬೈಕಿನಲ್ಲಿ ಮರೆಯಾಗುತ್ತಿದ್ದಂತೆ ನಾನು ನೆನಪಿನ ಲೋಕಕ್ಕೆ ಜಾರಿದ್ದೆ.ಇಲ್ಲ… ಹೀಗೆ… ಹಳೆ ವಿದ್ಯಾರ್ಥಿಯೊಬ್ಬನ ಜೊತೆ ಮಾತನಾಡುತ್ತಿದ್ದೆ….ಎಂದು ನಗುತ್ತಾ ಹೇಳಿ ನೆಮ್ಮದಿಯಿಂದ ಮನೆಯ ದಾರಿ ಹಿಡಿದೆ.

ನಾನು ಹೀಗೇನೇ ಇರೋದು….. …ನಂಗೆ ಇದೇ ಇಷ್ಟ…..


 ಕೆಲದಿನಗಳ ಹಿಂದೆ ನಟಿಯೊಬ್ಬಳು ಹೀಗೆ ಉದ್ಘೋಷಿಸಿದ ಸುದ್ದಿ ನೋಡುತ್ತಿದ್ದಂತೆ ಎಲ್ಲರೂ ಎಚ್ಚೆತ್ತರು. ಅವಳೇನೋ ಪಾಪತನ್ನ  ಉದ್ಯೋಗಕ್ಕೆ ಅನುಕೂಲವಾಗಲಿ ಎಂದುಕೊಂಡು ಏನೋ ಹೇಳಿಕೊಂಡಳು. ಆದರೆ ನಮ್ಮ ಸಂಪ್ರದಾಯವಾದಿಗಳ ಕಣ್ಣು ಕೆಂಪಾದವು.ನಮ್ಮ ಸಮಾಜವೇ ಅಧೋಗತಿಗಿಳಿಯಿತು ಎಂದು ಅವರು ಬರೆದದ್ದೇ ಬರೆದದ್ದು. ಆದರೆ  ನಮ್ಮಂಥ ಹೆಂಗಸರುನಾವು ಹೇಳಕ್ಕೆ ಆಗದ್ದನ್ನ ಇವಳು ಹೇಳ್ಬಿಟ್ಲಲ್ಲಾ…..” ಎಂದುಕೊಂಡು ಒಳಗೊಳಗೇ ಖುಶಿಪಟ್ಟೆವು  ಆದರೆ ಮರುಕ್ಷಣವೇ ಯಾರು ಏನೇ ಅಂದ್ರೂ ನಮಗೆ ಚಾಯಿಸ್ ಇಲ್ಲವಲ್ಲ. ನಾವು ಹೀಗೇ ಬದುಕ್ಬೇಕು ….. ಹೀಗೇ ಬಟ್ಟೆ ಹಾಕ್ಕೋಬೇಕು….” ಅಂತ ನಿಟ್ಟುಸಿರುಬಿಟ್ಟೆವು
ಯಾಕೋ ನನಗೆ ಮಾತ್ರ ನಾನು ಕಂಡ ಮಹಾನ್ ಮಹಿಳೆಯರ ನೆನಪು ಒತ್ತರಿಸಿ ಬಂತು . ಮದರ್ ತೆರೆಸಾ, ಸುಧಾ ಮೂರ್ತಿ ಇರಬಹುದಾ ಅಂತೆಲ್ಲಾ ನೀವು ಕಲ್ಪನೆ ಮಾಡಿಕೋಬೇಡಿ. ನನಗೆ ಮೊದಲು ನೆನಪಾಗುತ್ತಿರುವುದು ನನ್ನ ಅತ್ತಿಗೆ. ನನ್ನ ತಂದೆ ತಾಯಿಯ ದೊಡ್ಡ ಸಂಸಾರದ ಭಾರವನ್ನು ಸಮರ್ಥವಾಗಿ ನಿಭಾಯಿಸಿದ ನನ್ನಣ್ಣನ ಪತ್ನಿ. ಕುಟುಂಬ ಯೋಜನೆಯಿನ್ನೂ ನಮ್ಮ ಹಳ್ಳಿಗೆ ತಲುಪದಿದ್ದುದರಿಂದ  ಅವರು ಮದುವೆಯಾಗಿ ಬಂದಾಗ ಮನೆ ತುಂಬ ಮಕ್ಕಳು. ಆಕೆ ತನ್ನ ಮಕ್ಕಳಷ್ಟೇ ಅಕ್ಕರೆಯಿಂದ  ತನ್ನ ನಾದಿನಿ- ಮೈದುನಂದಿರನ್ನು ಆಸ್ಥೆಯಿಂದ ನೋಡಿಕೊಂಡವರು. ನಾದಿನಿಗೆ ಮದುವೆಯಲ್ಲಿ ಚಿನ್ನದ ಸರ ಹಾಕಬೇಕಾದಾಗ ತನ್ನಲ್ಲಿದ್ದ ಆ ಒಂದೇ ಸರವನ್ನು ನಗುನಗುತ್ತ ಕೊಟ್ಟವರು. ನಾದಿನಿಯಂದಿರ ಎರಡೆರಡು ಬಾಣಂತನಗಳನ್ನು ಜತನದಿಂದ ಮಾಡಿದವರು. ನಾವೆಲ್ಲ ಬೇಸಗೆ ರಜೆಯಲ್ಲಿ ಮಕ್ಕಳೊಡಗೂಡಿ ಊರಿಗೆ ಹೋದಾಗ ಪ್ರೀತಿಯಿಂದ ಸತ್ಕರಿಸಿದವರು.  ಮುಂದೆ ಆಸ್ತಿ ಪಾಲಾದಾಗ ಫಲವತ್ತಾದ ತೋಟ ತನಗೇ ಬೇಕೆಂದು ಮೈದುನ ಹಠ ಹಿಡಿದಾಗ ಇರಲಿಅವನು ಸುಖವಾಗಿರಲಿ…. ಕೊಟ್ಟುಬಿಡಿಎಂದು ಗಂಡನಿಗೆ ಹೇಳಿದ ಆ ಕರುಣಾಮಯಿಯನ್ನು ಏನೆಂದು ಹೊಗಳಲಿ?
ನನ್ನ ಸಹೋದ್ಯೋಗಿಯೊಬ್ಬರಿದ್ದಾರೆಅವರ ದಿನಚರಿಯನ್ನು ನೀವೊಮ್ಮೆ ನೋಡಬೇಕು. ಅವರು ಬೆಳಗ್ಗೆ ಬೇಗ ಎದ್ದು ಮನೆಕೆಲಸಗಳನ್ನು ಮುಗಿಸಿ, ಗಂಡ , ಮಕ್ಕಳ ಬೇಕುಗಳನ್ನು ಪೂರೈಸಿ, ಲಕ್ವ ಹೊಡೆದು ಹಾಸಿಗೆ ಹಿಡಿದಿರುವ [ ೧೨ ವರ್ಷಗಳಿಂದ] ಅತ್ತೆಗೆ ಸ್ನಾನ ಮಾಡಿಸಿ, ಶುಭ್ರವಾದ ಬಟ್ಟೆ ತೊಡಿಸಿ ೯ ಕ್ಕೆ ಆಫೀಸಿಗೆ ಬರುತ್ತಾರೆ. ಸಂಜೆ ಐದಕ್ಕೆ ಮನೆ ತಲುಪಿದ ತಕ್ಷಣ ಅತ್ತೆಯ ಮಲ- ಮೂತ್ರಗಳನ್ನು ಸ್ವಚ್ಛಗೊಳಿಸಿ, ಒಗೆದ ಬಟ್ಟೆ ತೊಡಿಸಿ ಮತ್ತೆ ಮನೆಕೆಲಸಕ್ಕೆ ತೊಡಗುತ್ತಾರೆ. ಕೆಲಸ ಬಿಟ್ಟು ಮನೆಯಲ್ಲಿರುವ ಅಥವಾ ಅತ್ತೆಯ ಸೇವೆಗೆ ಆಳನ್ನು ನಿಯೋಜಿಸುವ ಆರ್ಥಿಕ ಚೈತನ್ಯ ಅವರಿಗಿಲ್ಲ. ಆದರೆ ಅವರ ಮುಖದ ಮೇಲೆ ನಗು ಮಾಸಿದ್ದನ್ನು ನಾನೆಂದೂ ನೋಡಿಲ್ಲ.
ಇಂದಿನ ಸ್ವಸ್ಥ , ಆರೋಗ್ಯವಂತ ನಾಗರಿಕರ ಹಿಂದೆ ಇಂಥ ಅನೇಕ ದೈವೀಸ್ವರೂಪರಾದ ಅಕ್ಕಂದಿರು, ತಾಯಂದಿರು, ಅತ್ತೆಯರು, ಚಿಕ್ಕಮ್ಮ, ದೊಡ್ದಮ್ಮಂದಿರು ಮಾತ್ರವಲ್ಲ ಅಣ್ಣಂದಿರು, ಭಾವಂದಿರು, ಮಾವ, ಚಿಕ್ಕಪ್ಪ, ದೊಡ್ಡಪ್ಪಂದಿರು ಇದ್ದಾರೆ. ಬಹುಶ: ತ್ಯಾಗವೆಂಬ  ಶಬ್ದಕ್ಕೆ ಇವರು ಜೀವಂತ ಉದಾಹರಣೆಗಳು. ಹೇಳಿಕೊಳ್ಳುವಂಥಾ ಆದಾಯ ಇಲ್ಲದಿದ್ದಾಗಲೂ ಕುಟುಂಬದ ಸುಖವೇ ತನ್ನ ಸುಖ ಎಂದುಕೊಂಡ ಮಹಾನುಭಾವರಿವರು.  

ನನಗನಿಸುತ್ತದೆ ಇವರೆಲ್ಲಾ ತಮ್ಮನ್ನು ನಂಬಿದ ಜೀವಗಳಿಗೆ ಯಾವಾಗಲೂ ಹೇಳುತ್ತಿದ್ದುದು ಒಂದೇ ಮಾತುನಂದು ಹೇಗೋ ಆಗುತ್ತದೆ ಬಿಡು…… ನೀನು ಚೆನ್ನಾಗಿರಬೇಕು….. ನಿನ್ನಿಷ್ಟನೇ ನನ್ನಿಷ್ಟ……”