Friday, 8 November 2019
ದೇವರ ಕೆಲಸ
ಅಂದು ನನ್ನ ಪರಿಚಿತರೊಬ್ಬರ ಮನೆಯಲ್ಲಿ ಗೃಹಪ್ರವೇಶ, ಮಗನ ಮುಂಜಿ ಇತ್ಯಾದಿ ಅನೇಕ ಶುಭಕಾರ್ಯಗಳು. ನನಗೆ ಯಾವುದೋ ಅನನುಕೂಲದಿಂದಾಗಿ ಹೋಗಲಾಗಲಿಲ್ಲ. ಕೆಲದಿನಗಳ ನಂತರ ಫೋನ್ ಮಾಡಿದೆ. ಬರಲಾಗದ್ದಕ್ಕೆ ಕ್ಷಮೆ ಕೇಳಿ, ಕಾರ್ಯಕ್ರಮ ಚೆನ್ನಾಗಾಯ್ತೇ? ಅಂದೆ.
“ಎಲ್ಲವೂ ಚೆನ್ನಾಗಿ ನಡೀತು , ಆದ್ರೆ ಪುರೋಹಿತರಿಗೆ ಇಷ್ಟು ಕೊಡಬೇಕಾಗತ್ತೆ ಅಂತ ಗೊತ್ತಿರಲಿಲ್ಲ ನಂಗೆ. ಅಲ್ಲ.. .....ಐದು ಗಂಟೆ ಕಾರ್ಯಕ್ರಮ ...ಅಷ್ಟಕ್ಕೆ ಇಷ್ಟು ತಗೊಂಡ್ರು.”
“ ಅವ್ರೇ ಪೂಜೆ ಸಾಮಾನು ತಂದಿದ್ರಾ?”
“ ಹೌದು.. ತಯಾರಿ ಎಲ್ಲ ಅವ್ರದ್ದೆ.. ಆದ್ರೆ ಆ ಬತ್ತಿ-ಕರ್ಪೂರ-ಎಲೆ-ಸೊಪ್ಪು-ಕಡ್ಡಿ... ಗೆ ಇಷ್ಟೊಂದು ಚಾರ್ಜ್ ಮಾಡೋದಾ? ಇಷ್ಟಾಗಿ ಹಣ್ಣು, ತೆಂಗಿನಕಾಯಿ ನಮ್ದೇ ಗೊತ್ತಾ!!”
ನಮ್ಮ ಮನೆಯ ಕಾರ್ಯಕ್ರಮ, ನಾವಾಗೇ ಹೋಗಿ ಪುರೋಹಿತರನ್ನು ಕರೀತೀವಿ, ಅದರಿಂದ ಬರಬಹುದಾದ ಶುಭಫಲಗಳೂ ನಮಗೇನೇ. ಆದರೆ ಕೊನೆಗೆ ಪುರೋಹಿತರ ಬಗ್ಗೆ ಕೊಂಕು ಮಾತು!! ಇದ್ಯಾಕೋ ಸರಿ ಇಲ್ಲ ಅನಿಸಿ “ಹೋಗ್ಲಿ ಬಿಡಿ .. ದುಡ್ಡು ಕೊಟ್ಟಾಯ್ತಲ್ಲ” ಅಂತ ಹೇಳಿ ಫೋನ್ ಇಟ್ಟೆ.
ಒಂದು ಕಾಲದಲ್ಲಿ ವೈದಿಕ ಜ್ಞಾನ, ಜೀವನಕ್ರಮ ನಮ್ಮ ದಿನಚರಿಯೇ ಆಗಿತ್ತು. ಆದರೆ ಇಂದು ನಾವೆಲ್ಲ ಬೇರೆ ಬೇರೆ ಉದ್ಯೋಗಗಳಲ್ಲಿರುವುದರಿಂದ ಹೆಚ್ಚಿನವರ ಧಾರ್ಮಿಕತೆ ದೇವರ ಫೋಟೋಗೆ ಹೂ- ಸ್ತೋತ್ರ-ನಮಸ್ಕಾರಕ್ಕೆ ಸೀಮಿತವಾಗಿದೆ. ಇರಲಿ ಕಾಲದ ಜೊತೆ ಸಾಗುವುದರಲ್ಲಿ ತಪ್ಪಿಲ್ಲ. ಆದರೆ ನಮ್ಮ ವೃತ್ತಿಯ ಬಗ್ಗೆ ಹೇಗೆ ನಾವು ಹೆಮ್ಮೆ ಪಡುತ್ತೇವೋ ಹಾಗೇ ಪುರೋಹಿತಿಕೆ ವೃತ್ತಿಯ ಬಗ್ಗೆಯೂ ನಾವು ಸಮಾನ ಗೌರವ ತೋರಿಸಬೇಕು ಅಲ್ವೇ? ಸೂಪರ್ ಮಾರ್ಕೆಟ್, ಹೋಟೆಲ್, ಬಾರು, ಬಟ್ಟೆ ಅಂಗಡಿಯವರು ನಮ್ಮ ವ್ಯಾವಹಾರಿಕ-ಲೌಕಿಕ ಆಸೆ, ಅವಶ್ಯಕತೆಗಳನ್ನು ಪೂರೈಸಿದಾಗ ನಾವು ಯಥೇಚ್ಛವಾಗಿ ದುಡ್ಡು ಕೊಡುತ್ತೇವೆ. ಹಾಗೆಯೇ ಪುರೋಹಿತರು ನಮ್ಮ ಧಾರ್ಮಿಕ-ಮಾನಸಿಕ ಅವಶ್ಯಕತೆಯನ್ನು ಪೂರೈಸುತ್ತಾರೆ. ಅಂದ ಮೇಲೆ ಅವರ ಬಗ್ಗೆ ಯಾಕೀ ಅಸಹನೆ?
ನನಗನ್ನಿಸುವ ಮಟ್ಟಿಗೆ ಧಾರ್ಮಿಕ ವಿಚಾರಗಳಲ್ಲಿ ನಮ್ಮಲ್ಲಿ ಸ್ಪಷ್ಟತೆ ಇಲ್ಲ. ಆರ್ಥಿಕ ಸ್ಥಿತಿ ಚೆನ್ನಾಗಿರದ ಕೆಲ ಮನೆಗಳು ಹಿಂದಿನವರು ನಡೆಸಿಕೊಂಡು ಬಂದ ಚೌತಿ-ನವರಾತ್ರಿ-ಬೊಡ್ಡಣ ಇತ್ಯಾದಿಗಳನ್ನು ನಡೆಸಲು ಏದುಸಿರು ಬಿಡುತ್ತಾರೆ. ಆದರೆ “ಬೇರೆಯವರು ಏನಂತಾರೋ? ದೇವರು ಶಾಪ ಕೊಟ್ರೆ?” ಇತ್ಯಾದಿ ಮಾನಸಿಕ ತಲ್ಲಣಗಳಿಂದ ಸಾಲ ಮಾಡಿಯಾದ್ರೂ ಕಾರ್ಯಕ್ರಮ ನಡೆಸುತ್ತಾರೆ. ಅವರ ಸಿಟ್ಟಿಗೆ ನಿರಪರಾಧಿ ಪುರೋಹಿತ ಬಲಿಯಾಗ್ತಾನೆ. ಇನ್ನು ಮದುವೆ-ಮುಂಜಿ-ಗೃಹಪ್ರವೇಶಗಳು ನಮ್ಮ ಪ್ರತಿಷ್ಠೆಯ ಸಂಕೇತಗಳು. ಈ ಎಲ್ಲ ಕಾರ್ಯಕ್ರಮಗಳಲ್ಲಿ ಕೊನೆಯಲ್ಲಿ ಕೊಡುವ ಪುರೋಹಿತರ ದಕ್ಷಿಣೆ ನಮ್ಮ ಅಸಹನೆಗೆ ಕಾರಣವಾಗುತ್ತದೆ.
ಅಲ್ಲದೆ ಕೆಲ ಪುರೋಹಿತರು ತಮ್ಮ ವೃತ್ತಿಯ ಘನತೆಗೆ ತಕ್ಕುದಾಗಿ ನಡೆದುಕೊಳ್ಳುವುದಿಲ್ಲ. ಮಂತ್ರಗಳ ಅರ್ಥ, ಕೈಂಕರ್ಯದ ಮಹತ್ತ್ವ ಗೊತ್ತಿಲ್ಲದ, ಪುರೋಹಿತನ ಆದರ್ಶಗಳಿಲ್ಲದ ಇಂಥವರು ಆ ವೃತ್ತಿಗೆ ಕಪ್ಪು ಚುಕ್ಕೆಗಳಾಗ್ತಾರೆ. ಶಾಲೆಗೆ ಸದಾ ರಜೆ ಹಾಕುವ, ಮಕ್ಕಳಿಗೆ ಹೊಡೆಯುವ, ದುರಭ್ಯಾಸಗಳಿರುವ ಟೀಚರ್ ಗಳನ್ನು ನಾವು ಹೇಗೆ ದ್ವೇಷಿಸುತ್ತೇವೋ ಹಾಗೆಯೇ * ದೈಹಿಕ ಸ್ವಚ್ಛತೆ ಇರದ, ಅಲ್ಲಲ್ಲಿ ಉಗುಳುವ, ಅನಗತ್ಯ ಸುದ್ದಿಗಳನ್ನು ಮಾತಾಡ್ತಾ ನಗುವ , ಮಂತ್ರ ಹೇಳ್ತಾ ಮೊಬೈಲ್ ನಲ್ಲಿ ಮಾತಾಡುವ ಪುರೋಹಿತರನ್ನೂ ಜನ ಇಷ್ಟಪಡುವುದಿಲ್ಲ.
ಪುರೋಹಿತಿಕೆ ಕೂಡಾ ಬೇರೆ ಉದ್ಯೋಗಗಳಂತೆ ಒಂದು ಸೀರಿಯಸ್ ಪ್ರೊಫೆಶನ್. *ಪುರೋಹಿತರು ಸ್ವಚ್ಛ-ಇಸ್ತ್ರಿ ಹಾಕಿದ ಪಂಚೆ,ಶಲ್ಯಗಳನ್ನು ಹಾಕಿಕೊಂಡು ಸ್ಮಾರ್ಟ್ ಆಗಿ ಬರಬೇಕು. ಪೂಜೆ ಮುಗಿಯುವವರೆಗೂ ಮೊಬೈಲನ್ನು ಸೈಲೆಂಟ ಇಡಬೇಕು. ಹಿತ ಮಿತವಾಗಿ ಊಟ ಮಾಡಿ ಜನರಿಗೆ ಮಾದರಿ ಆಗಬೇಕು. ಮಂತ್ರಗಳನ್ನು ಸ್ಪಷ್ಟವಾಗಿ ಹೇಳಿ ಪೂಜೆಯ ಮಹತ್ತ್ವವನ್ನೂ , ಹಿತವಚನಗಳನ್ನೂ ಆ ಕುಟುಂಬಕ್ಕೆ ಹೇಳಬೇಕು. ಅದಕ್ಕಾಗಿ ಅವರು ನಿರಂತರ ಅಧ್ಯಯನ ಮಾಡಬೇಕು.[ ನಮ್ಮ ವೈದಿಕ ಸಂಸ್ಕೃತ ಸಾಹಿತ್ಯವನ್ನು ಓದಲು ಒಂದು ಜೀವಮಾನ ಸಾಲದು ಗೊತ್ತೇ? ಅದೊಂದು ಮಹಾಸಮುದ್ರ . ನಾವೇನಿದ್ದರೂ ಒಂದು ಬೊಗಸೆ ನೀರು ಹಿಡಿದು ನಾನು ತುಂಬ ಕಲಿತಿದ್ದೇನೆ ಅನ್ನಬೇಕು ಅಷ್ಟೇ!! ] ಇಂಥ ಪುರೋಹಿತರನ್ನು ನೋಡಿದಾಗ ಜನರೂ ಗೌರವದಿಂದ ದಕ್ಷಿಣೆ ಕೊಡುತ್ತಾರೆ.
ಪುರೋಹಿತಿಕೆಯನ್ನು ವೃತ್ತಿಯಾಗಿ ಸ್ವೀಕರಿಸಿದ ಮೇಲೆ ಇಂಥ ಕಾರ್ಯಕ್ರಮಕ್ಕೆ ಇಷ್ಟು ದಕ್ಷಿಣೆ ಎಂದು ಸ್ಪಷ್ಟವಾಗಿ ಮೊದಲೇ ಹೇಳಬೇಕು. “ನೋಡಿ.. ನೀವು ಯೋಚಿಸಿ ಕೊಡಿ/ ಆಮೇಲೆ ಹೇಳ್ತೇನೆ/ ನಾನು ದುಡ್ಡಿಗೋಸ್ಕರ ಪುರೋಹಿತಿಕೆ ಮಾಡಲ್ಲ ...” ಇತ್ಯಾದಿಯಾಗಿ ನುಣುಚಿಕೊಳ್ಳುವುದರಿಂದ ತೊಂದರೆಯೇ ಹೆಚ್ಚು . ಆಯಾ ಊರಿನ ಎಲ್ಲ ಪುರೋಹಿತರು ಸೇರಿ ಒಮ್ಮತದ ತೀರ್ಮಾನ ಕೈಗೊಳ್ಳಬಹುದು. ಆಗ ಮನೆ ಯಜಮಾನರು ದುಡ್ಡನ್ನು ಹೊಂದಿಸಲು ಅನುಕೂಲವಾಗುತ್ತದೆ. ಪೂಜೆಗಳನ್ನು ಮಾಡಿಸುವವರು ಕೂಡಾ ಮನ:ಪೂರ್ವಕವಾಗಿ ದಕ್ಷಿಣೆ ಕೊಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪೂಜೆಗಳು ನಮ್ಮ ಜೀವನದ ಭಾಗಗಳು. ಇಷ್ಟವಿಲ್ಲದಿದ್ದರೆ ಮಾಡಬೇಡಿ. ಇದರಲ್ಲೇನೂ ಒತ್ತಾಯವಿಲ್ಲ. ಸ್ವಲ್ಪ ಗಟ್ಟಿ ಮನಸ್ಸು ಬೇಕಷ್ಟೇ. ಅಥವಾ ಆಡಂಬರ ಕಡಿಮೆ ಮಾಡುವ ಬಗ್ಗೆ ಯೋಚಿಸಿ.
ನಮ್ಮ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವಿಶಿಷ್ಟ ಹಾಗೂ ಅರ್ಥಪೂರ್ಣ. ಅವುಗಳನ್ನು ಚೆನ್ನಾಗಿ ನೆರವೇರಿಸಲು ಪುರೋಹಿತರು ಮತ್ತು ಯಜಮಾನರ ಮಧ್ಯೆ ಸಹಯೋಗ ಬೇಕೇ ಬೇಕು. ಪೂಜೆಗಳನ್ನು , ಅನ್ನದಾನವನ್ನು ಮಾಡುತ್ತ ಸನಾತನ ಚಿಂತನೆಗಳನ್ನು ಉಳಿಸೋಣ...
*ಪುರೋಹಿತರನ್ನು ಅಥವಾ ಭಕ್ತರನ್ನು ನಿಂದಿಸುವುದು ನನ್ನ ಉದ್ದೇಶ ಅಲ್ಲ. ಇಬ್ಬರ ಬಗ್ಗೆಯೂ ನನಗೆ ಅಪಾರ ಗೌರವವಿದೆ. ನನ್ನ ಶಬ್ದಗಳ ಬಗ್ಗೆ ಕ್ಷಮೆ ಇರಲಿ..
Friday, 12 April 2019
ಈ ಸುಂದರ ತರುಣಿ ಮಣಿಪಾಲದ ಕಸ್ತೂರ್ ಬಾ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ. ಹೆಸರು Trinetra Haldar Gummaraju ತ್ರಿನೇತ್ರಾ ಗುಮ್ಮರಾಜು.... So..What ... ಅನ್ಬೇಡಿ. ೪ ವರ್ಶಗಳ ಹಿಂದೆ ಅಂಗದ್ ಗುಮ್ಮರಾಜು ಆಗಿ ಕಾಲೇಜು ಸೇರಿದ್ದ ಹುಡುಗ, ಮುಂದಿನವರ್ಷ ಡಾ. ತ್ರಿನೇತ್ರಾ ಗುಮ್ಮರಾಜು ಅನ್ನೋ ಹೆಸರಲ್ಲಿ ವಿದ್ಯಾಭ್ಯಾಸ ಮುಗಿಸಿ , ಕರ್ನಾಟಕದ ಮೊದಲ ಲಿಂಗಪರಿವರ್ತಿತ ವೈದ್ಯೆ ಎಂಬ ಇತಿಹಾಸ ನಿರ್ಮಿಸಲಿದ್ದಾಳೆ.
ಹೌದು.. ಅಂಗದ್ ಗುಮ್ಮರಾಜು ನಮ್ಮ ಶಾಲೆಯ ವಿದ್ಯಾರ್ಥಿ. "ನಾನು ಹುಡುಗ ಅಲ್ಲ... ಹುಡುಗಿ ಕಣ್ರೋ..." ಅಂತ ದಿಟ್ಟತನದಿಂದ ಹೇಳುತ್ತ ಶಾಲೆಯಲ್ಲಿ ಅಡ್ಡಾಡುತ್ತಿದ್ದ ಇವನನ್ನು ಕಂಡಾಗ ನನಗೆ "ಬಾಯಿಗೆ ಬಂದಿದ್ದೆಲ್ಲ ಮಾತಾಡ್ತಾನಲ್ಲ...ಏನಪ್ಪ ಇವ್ನು....". ಅಂತ ಕಸಿವಿಸಿಯಾಗುತ್ತಿತ್ತು. ಮುಂದೆ ಸಿಇಟಿಯಲ್ಲಿ ೧೬೩ನೇ ರಾಂಕ್ ಪಡೆದು ವೈದ್ಯಕೀಯ ಕಾಲೇಜಿಗೆ ಸೇರಿದ ಅಂಗದ್ ಬಾಯಲ್ಲಿ ಹೇಳಿದ್ದನ್ನು ಕಾರ್ಯರೂಪಕ್ಕೆ ತಂದ. ಬ್ಯಾಂಕಾಕ್ ನ ಆಸ್ಪತ್ರೆಯಲ್ಲಿ ಹೆಣ್ಣಿನ ಅಂಗಾಂಗಗಳಿಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ತ್ರಿನೇತ್ರಾ ಆಗಿಬಿಟ್ಟ. ಆಪರೇಶನ್ ಗೆ ಮೊದಲೇ ವೀರ್ಯ
ಬಾಂಕ್ ನಲ್ಲಿ ಸುರಕ್ಷಿತವಾಗಿ ಇಟ್ಟ ತನ್ನದೇ ವೀರ್ಯದಿಂದ ಬಾಡಿಗೆ ತಾಯಿಯ ಮೂಲಕ ತನ್ನ ಮಗುವನ್ನು ಪಡೆಯುವ ಮುಂದಾಲೋಚನೆಯನ್ನು ಮಾಡಿದ್ದಾಗಿದೆ. ನೆಗಡಿಗೆ ಔಷಧಿ ತರಲು ಆಸ್ಪತ್ರೆಗೆ ಹೋಗಿದ್ದೆ ... ಅನ್ನುವಷ್ಟು ಸರಳವಾಗಿ ತನ್ನ ಲಿಂಗಪರಿವರ್ತನೆಯ ಕತೆಯನ್ನು ಅವನು ಹೇಳುವಾಗ ನನಗೆ ಹೆಮ್ಮೆ, ಸಂಕಟ, ದು:ಖ, ಅಚ್ಚರಿ ಎಲ್ಲಾ ಒಟ್ಟೊಟ್ಟಿಗೇ ಆಯಿತು.
ಟ್ರಾನ್ಸ್ ಜೆಂಡರ್ಸ್ , ಗೇ , ಲೆಸ್ಬಿಯನ್ ಅನ್ನೋ ಶಬ್ದಗಳನ್ನೆಲ್ಲ ಕೇಳುವಾಗ ನಾವೆಲ್ಲ ಮುಖ ಕಿವಿಚ್ತೀವಿ ಅಲ್ವೇ? ಯಾಕೆಂದ್ರೆ ವಿಕಾರವಾಗಿ ಅಲಂಕಾರ ಮಾಡಿಕೊಂಡು, ಬೀದಿಯಲ್ಲಿ ಚಪ್ಪಾಳೆ ತಟ್ಟುತ್ತ ಜನರನ್ನು ಪೀಡಿಸುವ ಭಿಕ್ಷುಕರು ನಮ್ಮ ಕಣ್ಮಂದೆ ಬರ್ತಾರೆ... ನಮ್ಮ ಸಮಾಜದ ಚೌಕಟ್ಟಿನಲ್ಲಿ ಎಲ್ಲಿಯೂ ಸಲ್ಲದವರು ಇವರು. ಇವರೆಲ್ಲರೂ ನಮ್ಮೆಲ್ಲರ ಥರನೇ ಸಾಮಾನ್ಯ ವ್ಯಕ್ತಿಗಳು. ಆದರೆ ಕೆಲ ಹಾರ್ಮೋನ್ ಗಳ ವ್ಯತ್ಯಾಸದಿಂದಾಗಿ ಅವರ ದೇಹದಲ್ಲಿನ Sex [ ಲಿಂಗ] ಮತ್ತು ಮನಸ್ಸಿನ Gender [ ಲೈಂಗಿಕ ಭಾವನೆ]ಗಳ ಮಧ್ಯೆ ಹೊಂದಾಣಿಕೆ ಇರುವುದಿಲ್ಲ. ದೇಹ ಹುಡುಗ ಅನ್ನುತ್ತೆ, ಮನಸ್ಸು ಹುಡುಗಿ ಅನ್ನುತ್ತೆ..... ಒಂದು ಕ್ಷಣ ನಿಮ್ಮ ಮನಸ್ಸಿನಲ್ಲಿ ಈ ಸ್ಥಿತಿ ಕಲ್ಪಿಸಿಕೊಳ್ಳಿ.. ಎಂಥ ನರಕ ಅಲ್ವೇ? ಹಾಗಂತ ಅದು ಅವರ ತಪ್ಪಲ್ಲವಲ್ಲ. ನನಗೆ ಸಿಹಿತಿಂಡಿ ಇಷ್ಟ... ನಿಮಗೆ ಖಾರತಿಂಡಿ ಇಷ್ಟ..ನನಗೆ ಹಸಿರುಬಣ್ಣ ಇಷ್ಟ.. ನಿಮಗೆ ಹಳದಿ ... ಅನ್ನುವಷ್ಟೇ ಸರಳವಾದ ಮನಸ್ಸಿನ ವೈವಿಧ್ಯತೆ ಇದು.
ಆದರೆ ನಮ್ಮ ವ್ಯವಸ್ಥೆಯಲ್ಲಿ ಅವರ ಇಷ್ಟಗಳಿಗೆ ಬೆಲೆ ಇಲ್ಲ. ತ್ರಿನೇತ್ರಾಳ ತಂದೆ-ತಾಯಿ, ಕುಟುಂಬದವರು ಇದನ್ನು ಒಪ್ಪಿಕೊಂಡು ಅವಳಿಗೆ ಜೀವನ ಕೊಟ್ಟರು. ಆದರೆ ಎಷ್ಟು ಜನರಿಗೆ ಈ ಭಾಗ್ಯವಿದೆ? ಮನೆಯಲ್ಲಿ ಅವರುಗಳು ಶಾಪಗ್ರಸ್ತರು.. ಶಾಲೆಯಲ್ಲಿ ಹಾಸ್ಯದ ವಸ್ತುಗಳು, ಮುಂದೆ ಅವರ ಜೊತೆ ಅವರ ಹೆಂಡತಿ/ಗಂಡನನ್ನೂ ಮದುವೆ ಎಂಬ ಭೀಕರ ನರಕಕ್ಕೆ ತಳ್ಳುವ ಜನ ನಾವು!! ಇದು ಯಾವುದೇ ರೀತಿಯ ಕಾಯಿಲೆ ಅಲ್ಲ.. ಸದ್ಯಕ್ಕೆ ಇದಕ್ಕೆ ಕಾರಣಗಳು ತಿಳಿದಿಲ್ಲ...ಮಗು ಹುಟ್ಟುವ ಮುಂಚೆ ಸ್ಕಾನಿಂಗ್ ನಲ್ಲಿ ಇದು ತಿಳಿಯುವುದಿಲ್ಲ. ನಮ್ಮ ನಿಮ್ಮಂತೆ ಓದಿ, ಕೆಲಸಕ್ಕೆ ಸೇರಿ, ಅವರ ಮನಸ್ಸಿಗೆ ಸೂಕ್ತವಾದ ಸಂಗಾತಿಯ ಜೊತೆ ಬದುಕುವುದನ್ನು ಮಾತ್ರ ಕೇಳುವ ಅವರಿಗೆ ನಮ್ಮ ದೇಶದ ಕಾನೂನಿನಲ್ಲೂ ರಕ್ಷಣೆ ಇಲ್ಲ!!
ಇರಲಿ... ಇವತ್ತಲ್ಲ ನಾಳೆ ನಾವು ಖಂಡಿತ ಬದಲಾಗುತ್ತೇವೆ.. ಯಾಕೆಂದರೆ ಪರಿವರ್ತನೆ ಜಗದ ನಿಯಮ ಅನ್ನೋ ನಿತ್ಯಸತ್ಯದಲ್ಲಿ ನನಗೆ ಇನ್ನಿಲ್ಲದ ನಂಬಿಕೆ. ಈ ಬಗ್ಗೆ ನಿಮಗೆ ಪ್ರಶ್ನೆಗಳಿದ್ದರೆ ತ್ರಿನೇತ್ರಾಳಲ್ಲಿ ನಿಸ್ಸಂಕೋಚವಾಗಿ ಕೇಳಬಹುದು. ಭಾರತದಲ್ಲಿ ಸದ್ಯಕ್ಕೆ ಡೆಲ್ಲಿ-ಮುಂಬೈನಲ್ಲಿ ಲಿಂಗ ಪರಿವರ್ತನೆಯ ಕೆಲ ಆಸ್ಪತ್ರೆಗಳಿವೆ. ಆದರೆ ಹೊರದೇಶಗಳಲ್ಲಿ ಅತ್ಯುತ್ತಮ ಆಸ್ಪತ್ರೆಗಳಿವೆ. ಲಿಂಗ ಪರಿವರ್ತನೆಗೆ ವಯಸ್ಸಿನ ನಿರ್ಬಂಧ ಇಲ್ಲ. 18 ತುಂಬಿದ್ದರೆ ಆ ವ್ಯಕ್ತಿಯ ಒಪ್ಪಿಗೆ ಸಾಕು. ಕಿರಿಯರಿಗೆ ತಂದೆ-ತಾಯಿಯ ಸಹಿ ಬೇಕು .
You can listen to Ted talk of Trinetraa in this link.
https://www.youtube.com/watch?v=VRKiCpcJ-ag&fbclid=IwAR0il0B-kQ7YnzFU2b2KFQnRnT352AMqqkL1Nn2VOx68oQkE__FhpXOUxEU
https://timesofindia.indiatimes.com/city/bengaluru/trinetra-set-to-be-ktakas-first-transwoman-medico/articleshow/68768637.cms?fbclid=IwAR0CiJMyDoTI98n6AI7GW28BU7XhLwOQIFA9eGPKDMgi1bOJKsmzfkJoqsE
Subscribe to:
Posts (Atom)