Friday, 17 November 2017

STREAM OF JOY - A home away from home.

ಮೊನ್ನೆ ಹತ್ತನೇ ತರಗತಿಯಲ್ಲಿ ಮಕ್ಕಳನ್ನು ನಿಮ್ಮ ಮುಂದಿನ ಗುರಿ/ಕನಸುಗಳೇನು ಎಂದು ಕೇಳಿದೆ. ನೂರಾರು ಕಲ್ಪನೆಗಳು ಗರಿಕೆದರಿದವು. ಕಲಿಕೆಯಲ್ಲಿ ಸ್ವಲ್ಪ ಹಿಂದಿರುವ, ಆ ಎರಡನೇ ಬೆಂಚಿನಲ್ಲಿ ಸುಮ್ಮನೆ ಕುಳಿತಿದ್ದ ಅಂಜಲಿಯನ್ನೂ ಮಾತಿಗೆಳೆದೆ. ಅವಳು ಉತ್ತರಿಸಲು ತಡವರಿಸುತ್ತಿದ್ದಂತೆಯೇ ಈ ತುದಿಯಲ್ಲಿದ್ದ ರೋಹನ್ “Ma’am, she will be a housewife and will work in the kitchen” ಎಂದು ಕುಹಕವಾಡಿದ. ಅಷ್ಟು ಹೊತ್ತು ನೀರಿನಲ್ಲಿ ಬಿದ್ದ ಹೇನಿನಂತಿದ್ದ ಅಂಜಲಿ ಧಡಕ್ಕನೇ ಎದ್ದು, ರೋಹನನ ಕಾಲರ್ ಪಟ್ಟಿ ಹಿಡಿದು ಎರಡು ಏಟು ಕೊಡೋದೇ! ನನಗಂತೂ ಯಾಕಪ್ಪಾ ಈ ಕನಸುಗಳ ಉಸಾಬರಿ ನನಗೆ ಬೇಕಿತ್ತು? ಅನಿಸಿತು. ಇಲ್ಲಿ ಸರಿತಪ್ಪುಗಳ ವಿಶ್ಲೇಷಣೆಗಿಂತ, ಗೃಹಿಣಿಯಾಗುವುದು, ಅಡಿಗೆಮಾಡುವುದು ಅಷ್ಟೊಂದು ಕೀಳು ಉದ್ಯೋಗವೇ?ಎಂಬ ಪ್ರಶ್ನೆ ಕಾಡಿತು ನನಗೆ. ಆದರೆ  Stream of Joy ಅತಿಥಿಗೃಹದ ಒಡತಿ ಶ್ರೀಮತಿ ಕಾಂಚನಾ ದಾಮ್ಲೆಯವರ ಮಾತನಾಡಿದ ಮೇಲೆ ನನ್ನ ತಳಮಳ ಕಾಣೆಯಾಯಿತು.ಯಾಕೆಂದ್ರೆ ಅವರು ಹೆಮ್ಮೆಯಿಂದ ಹೇಳುತ್ತಾರೆ - ಅಡುಗೆ ನನ್ನ ಪ್ರವೃತ್ತಿ ಹಾಗೂ ವೃತ್ತಿ... I love it....
ಕಾಂಚನಾ ಶಿರಸಿಯ ವೆಂಕಟರಾವ್ ಗೋಖಲೆ- ವೀಣಾ ಗೋಖಲೆಯವರ ಮಗಳು. ಅವಿಭಕ್ತ ಕುಟುಂಬದಲ್ಲಿ ಬೆಳೆದ ಅವರು ಅಡಿಗೆಮನೆ ಪ್ರವೇಶಿಸಿದ್ದು ಅಪರೂಪಕ್ಕೊಮ್ಮೆ. ಬಿ.ಎ ಡಿಗ್ರಿ ಮುಗಿಸಿ 1996 ರಲ್ಲಿ  ಶಿಶಿಲದ ಕಾಶೀನಾಥ ದಾಮ್ಲೆಯವರ ಕೈಹಿಡಿದು ಮಂಗಳೂರಿನಲ್ಲಿ ಸಂಸಾರ ಹೂಡಿದರು. ಕೆಲವೇ ತಿಂಗಳುಗಳಲ್ಲಿ ಶಿಶಿಲಕ್ಕೆ ಸಂಸಾರ ವರ್ಗಾವಣೆ ಆಗಬೇಕಾಯಿತು. ಅಯ್ಯೋ.. ನಗರದಲ್ಲಿ ಬೆಳೆದ ಕಾಂಚನಾಗೆ ಕಿರಿಕಿರಿ.. ಚಿತ್ಪಾವನೀ-ತುಳು ಭಾಷೆ ಬಾರದು..ಊಟ ಸೇರದು..ಆಚಾರ ವಿಚಾರ ಹೊಸದು.. ಆದರೂ ನಿಧಾನವಾಗಿ ಹಳ್ಳಿಗೆ ಹೊಂದಿಕೊಂಡರು. ಮುಂದೆ 2008 ರಲ್ಲಿ ಮೈದುನ ಹೃಷಿಕೇಶ ದಾಮ್ಲೆಯವರ ಸಲಹೆಯಂತೆ, ಪತಿ ಕಾಶೀನಾಥ ದಾಮ್ಲೆಯವರು ಎರಡು ಕೊಠಡಿಗಳ ಹೋಮ್ ಸ್ಟೇ ಉದ್ಯಮ ಆರಂಭಿಸಿದಾಗ  ಕಾಂಚನಾ ಸ್ವಲ್ಪ ಅಳುಕುತ್ತಲೇ ತಲೆಯಾಡಿಸಿದರು.
ಅತಿಥಿಗಳಿಗೆ ಅಡುಗೆ ಮಾಡಿ ಉಪಚರಿಸುವಾಗ ಓಹ್.. ಇಲ್ಲಿದೆ ನನ್ನ ಆಸಕ್ತಿ..ಎಂಬ ಅರಿವಾಯಿತು. ಬಾಯಿಮಾತಲ್ಲೇ ಪ್ರಚಾರ ಗಿಟ್ಟಿಸಿದ ಈ ಅತಿಥಿಗೃಹ ವರ್ಷದ 8 ತಿಂಗಳು ಬಿಝಿ ಯಾಗಿರುತ್ತದೆ!. ಕಾಶೀನಾಥರು ಅತಿಥಿಗಳ ಯೋಗಕ್ಷೇಮ/ಸೈಟ್ ಸೀಯಿಂಗ್  ನೋಡಿಕೊಂಡರೆ, ಅವರ ಹೊಟ್ಟೆ ತಂಪಾಗಿಡುವ ಕೆಲಸ ಕಾಂಚನಾರದ್ದು. ನಮ್ಮೂರಿನ ಅಡುಗೆ-ತಿಂಡಿಗಳಿಂದಲೇ ಅತಿಥಿಗಳ ಮನ ಗೆದ್ದ ಹೆಮ್ಮೆ ಅವರದು. ಇಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ/ದೋಸೆ/ಅವಲಕ್ಕಿ/ಉಪ್ಪಿಟ್ಟು/ ಆಪ್ಪೆ/ಮುಠ್ಯೆ/ಥಾಳಿಪೀಠ/ ಗಂಜಿ ಇತ್ಯಾದಿಗಳು. ಮಧ್ಯಾಹ್ನದ ಮತ್ತು ರಾತ್ರಿಯ ಊಟಕ್ಕೆ ಚಪಾತಿ - 2 ಪಲ್ಯಗಳು, ಸಾರು,ಹುಳಿ ಮೊಸರನ್ನ /ಮೆಣಸ್ಕಾಯಿ/ಮಜ್ಜಿಗೆಹುಳಿ /ಪಲಾವ್/ಟೊಮೆಟೋಬಾತ್ /ಚಿತ್ರಾನ್ನ ತಯಾರಿಸುತ್ತಾರೆ. ಸಾಯಂಕಾಲದ ತಿಂಡಿಗೆ ಬಜ್ಜಿ/ಬೋಂಡಾ/ಗೋಳಿಬಜೆ ಇತ್ಯಾದಿಗಳು. ಇದಲ್ಲದೇ ತರಹೇವಾರಿ ಹಲ್ವಾಗಳು, ಪಾಯಸಗಳು, ಸೀಸನ್ ನಲ್ಲಿ ಪತ್ರೊಡೆ, ಹಲಸು-ಮಾವಿನ ತಿಂಡಿಗಳು ಊಟದ ಜೊತೆ ಇರುತ್ತವೆ.ಅತಿಥಿಗಳು ಆಯ್ಕೆ ಮಾಡಿದ ಮೆನುವನ್ನು ತಯಾರಿಸುತ್ತಾರೆ. ಇಲ್ಲಿನ ಅನುಕೂಲತೆಗಳನ್ನು ನೋಡಿದರೆ ಅವರು ವಿಧಿಸುವ ದರ ಏನೇನೂ ಅಲ್ಲ!!. ಅಂತೂ ನಿತ್ಯದ ಜಂಜಾಟಗಳಿಂದ ಮುಕ್ತಿ ಬಯಸಿ ಸಂತಸದಿಂದ ರಜೆ ಕಳೆಯಲು ಇಲ್ಲಿಗೆ ಬರುವ ಅತಿಥಿಗಳು ಕಾಂಚನಾರನ್ನು ಬಾಯ್ತುಂಬಾ ಹೊಗಳದೇ ಹೋದದ್ದೇ ಇಲ್ಲ.
ಇದಲ್ಲದೇ ದಾಮ್ಲೆಯವರ ಇನ್ನೊಂದು ಉದ್ಯಮ ಅಡಿಕೆ ಹಾಳೆಯಿಂದ ತಟ್ಟೆ-ಲೋಟಗಳನ್ನು ತಯಾರಿಸುವ ಫಾಕ್ಟರಿಯ 12 ಕೆಲಸಗಾರರು, 6 ತೋಟದ ಕೆಲಸಗಾರರಿಗೂ ಮನೆಯಲ್ಲೇ ಊಟದ ವ್ಯವಸ್ಥೆ ಇದೆ. ವರ್ಷಪೂರ್ತಿ ಅಡುಗೆಮನೆಯಲ್ಲಿ ಕಾಂಚನಾರದು ಬಿಡುವಿಲ್ಲದ ದಿನಚರಿ..ಅವರು ತವರುಮನೆಗೆ, ಸಮಾರಂಭಗಳಿಗೆ ಹೋಗುವುದೇ ಅಪರೂಪ.

ಕಾಂಚನಾ ತಮ್ಮ ಕೆಲಸಕ್ಕೆ ಮನ:ಪೂರ್ತಿ ಸಹಾಯ ಮಾಡುವ ಅತ್ತೆಯವರನ್ನು ಪ್ರೀತಿಯಿಂದ ಸ್ಮರಿಸುತ್ತಾರೆ. “ನಿಮಗೆ ಈ ಹಳ್ಳಿಯಲ್ಲಿದ್ದು ಅಡುಗೆಮಾಡಿ ಮಾಡಿ ಬೇಸರ ಅನಿಸಿಲ್ಲವೇ” ಎಂದು ಕೇಳಿದೆ. ಕಾಂಚನಾ ನಕ್ಕು “ಇಲ್ಲಪ್ಪಾ..  ಇನ್ನೂ ಅಡುಗೆ ಮಾಡೋಣ ಅನಿಸುತ್ತದೆ ನನಗೆ.. ನಾನು ಸಿಟಿ -ಹಳ್ಳಿ ಎರಡೂ ಜೀವನ ಅನುಭವಿಸಿದ್ದೇನೆ.. ತಕ್ಕಮಟ್ಟಿನ ಅನುಕೂಲತೆಗಳಿದ್ದರೆ ಹಳ್ಳಿಯಲ್ಲಿ ಸಿಗುವ ಶಾಂತಿ, ನೆಮ್ಮದಿ ಅಲ್ಲಿಲ್ಲ ಬಿಡಿ.. ಎಂದರು. ಕೈಯಲ್ಲಿ ಸೌಟು ಹಿಡಿದು ಉತ್ಸಾಹದಿಂದ ಮಾತನಾಡುವ ಕಾಂಚನಾದಾಮ್ಲೆಯವರ ಹೋಮ್ ಸ್ಟೇ ಗೆ ಹೋಗಬೇಕೆನಿಸುತ್ತಿದ್ದರೆ ಈ ಸಂಖ್ಯೆಗೆ ಕರೆಮಾಡಿ. 08251- 268225  /  9481850225 





Monday, 13 November 2017

Wishing a very happy Children's day to the PARENTS !!!!!!


ಗೇಟ್ ಶಬ್ದಕ್ಕೆ ಧಡಕ್ಕನೇ ಎಚ್ಚರವಾಯಿತು. ಆಗ ತಾನೇ ನಿದ್ರೆ ಹತ್ತಿತ್ತು. ಯಾರೋ ಮಾತನಾಡುವ ಶಬ್ದ.. ರಾತ್ರಿ ೧೧ ಗಂಟೆ... ಯಾರಪ್ಪಾ ಈ ಹೊತ್ತಿನಲ್ಲಿ ಎಂದು ಕಿಟಿಕಿಯಲ್ಲಿ ಇಣುಕಿದೆ. ಅರೆ… ನಮ್ಮ ಮನೆಯ ಮಹಡಿ ಮೇಲಿನ ಬಾಡಿಗೆಯವರು... ಗಂಡ-ಹೆಂಡತಿ ..ಜೊತೆಗೆ ಅಳುತ್ತಿರುವ ಅವರ ಏಳು ವರ್ಷದ ಮಗ... ಯಾಕೆ? ಏನಾಯ್ತು? ಎಂದು ಗಾಬರಿಯಿಂದ ಕೇಳಿದೆ. ಏನಿಲ್ಲ.. ನಮ್ಮ ಚಿನ್ನು ಐಸ್ ಕ್ರೀಮ್ ಬೇಕು.. ಅಂತ ಹಠ ಮಾಡ್ತಾ ಇದ್ದಾನೆ. ಅವನಿಗೆ ಏನಾದ್ರೂ ಬೇಕು ಅನ್ಸಿದ್ರೆ ಕೊಡಿಸ್ಲೇ ಬೇಕು..ಇಲ್ಲ ಸಿಟ್ಟು ಬರತ್ತೆ.. ಅದಕ್ಕೇ ಕೊಡಿಸೋಣ ಅಂತ ಹೊರಟಿದ್ದೀವಿ ಅಂತ ಹೆಮ್ಮೆಯಿಂದ ನಗುತ್ತ ಹೇಳುವಾಗ ನನಗೆ ಮೈಯೆಲ್ಲ ಉರಿದುಹೋಯಿತು. ಹಾಗೇ ದೇಶಾವರಿ ನಗು ಚೆಲ್ಲಿ ಸರಿ ಹೋಗ್ಬನ್ನಿ ಎಂದು ಮತ್ತೆ ಮಲಗಿದೆ.
ಮಕ್ಕಳೆಂದರೆ ದೇವರ ಪ್ರತಿರೂಪ ಎಂದರು ನಮ್ಮ ಹಿರಿಯರು. ಇಂದು ಆ ಮಗುವೆಂಬ ದೇವರನ್ನು ತಲೆಯ ಮೇಲೆ ಹೊತ್ತು-ಮೆರೆಸುವುದನ್ನು ಕಂಡಾಗ ಆ ಮಾತು ಅಕ್ಷರಶ: ನಿಜ ಅನಿಸುವುದಿಲ್ಲವೇ ನಿಮಗೆ? ಮಕ್ಕಳ ಕಣ್ಸನ್ನೆ- ಕೈಸನ್ನೆಗಳಿಗೆ, ತಂದೆತಾಯಿಯನ್ನು ಮಂಡಿಯೂರಿಸಿ ಕೈ ಮುಗಿಸುವ ಶಕ್ತಿ ಇದೆ. ಹತ್ತು ವರ್ಷ ದಾಟಿದ ಮಕ್ಕಳಂತೂ ಮನೆಯ ಯಜಮಾನರೇ ಬಿಡಿ.. ಯಾವುದೇ ಕಾರಣಕ್ಕೂಅವರ ಮನ ನೋಯಿಸಲೇಬಾರದು.. [ಏನಾದ್ರೂ ಆತ್ಮಹತ್ಯೆ ಮಾಡ್ಕೊಂಡ್ರೆ ಏನ್ ಗತಿ...ಸ್ವಾಮೀ!!] ಅದರಲ್ಲೂ ಸಂಬಳ ತರುವ ಉದ್ಯೋಗದಲ್ಲಿರುವ ತಾಯಂದಿರು, ತಮ್ಮನ್ನು ಸದಾ ಕಾಡುವ ಅಪರಾಧೀ ಪ್ರಜ್ಞೆಯಿಂದ ಪಾರಾಗಲು ಮಕ್ಕಳ ಇಷ್ಟಾನಿಷ್ಟಗಳನ್ನು ಕುರುಡಾಗಿ ಪೂರೈಸುತ್ತ ಅವರ ಭವಿಷ್ಯವನ್ನು ಹಾಳುಮಾಡುವುದನ್ನು ಕಂಡರೆ ಖೇದವೆನಿಸುತ್ತದೆ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ನನಗೆ ಇಂಥ ಅಸಹಾಯಕ ತಂದೆತಾಯಂದಿರನ್ನು ಮತ್ತು ಆ ಒಂದೇ ಮಗುವನ್ನು ಬೆಳೆಸಲು ಅವರು ಪಡುವ ಹರಸಾಹಸವನ್ನು ಕಂಡಾಗ ಅಚ್ಚರಿಯಾಗುತ್ತದೆ. ಇದನ್ನೆಲ್ಲ ಕಂಡಾಗ ಇವರ್ಯಾಕೆ ಹೀಗೆ? ಎಂದು ನನಗನಿಸುವ ಕೆಲ ವಿಚಾರಗಳು ಇಲ್ಲಿವೆ. ಹೂಂ ಅನ್ನೋದು ಬಿಡೋದು ನಿಮ್ಮಿಷ್ಟ..
“ ನಮ್ಮ ಸಚಿನ್ ಗೆ ಕೋಪ ಜಾಸ್ತಿ... ಎಲ್ಲ ಅವರಜ್ಜನ ಥರನೇ ....” ಎಂಬ ಮೂರ್ಖ ಪ್ರಶಂಸೆಯನ್ನು ನೀವೂ ಎಲ್ಲಾದರೂ ಕೇಳಿರಬಹುದು. ಕೋಪಕ್ಕೆ ಪ್ರಸಿದ್ಧವಾದ ತಮ್ಮ ಕುಟುಂಬದ ಹಿರಿಮೆಯನ್ನುಆ ಕೋಪಿಷ್ಠ ಮಗುವಿನ ಮುಂದೆಯೇ ಆಡಿ ಸಂತೋಷಪಡುವುದನ್ನು ಗಮನಿಸಿರಬಹುದು. ಒಂದು ಕಾಲವಿತ್ತು. ಆಗ ಕೋಪ ಶೌರ್ಯದ ಸಂಕೇತ ಎನಿಸಿತ್ತು. ಆದರೆ ಇಂದು ಅದು ದುರ್ಬಲತೆಯ-ಅಸಹಾಯಕತೆಯ ಇನ್ನೊಂದು ರೂಪ ಎನಿಸಿದೆ. ಪರಿಸ್ಥಿತಿಯನ್ನು ಜಾಣತನದಿಂದ ನಿಭಾಯಿಸಲಾಗದ ವ್ಯಕ್ತಿ ಕೋಪವನ್ನು ಆಯುಧವಾಗಿಸಿಕೊಳ್ಳುತ್ತಾನೆ.ನೂರಾರು ಸಮಸ್ಯೆಗಳನ್ನು ಸೃಷ್ಟಿಸಿಕೊಂಡು ಒದ್ದಾಡುತ್ತಾನೆ. ಮಕ್ಕಳ ಕೋಪವನ್ನು ಎಳವೆಯಲ್ಲಿಯೇ ಚಿವುಟಿ ಹಾಕಿ. ತಾಳ್ಮೆಯ ಮಹತ್ತ್ವದ ಬಗ್ಗೆ ತಿಳುವಳಿಕೆ ಮೂಡಿಸಿ. ಇಂದು ಚಾಕ್ಲೇಟ್ ಬೇಕೆಂದು ಹಠ ಮಾಡುವ ಮಗು ನಾಳೆ ಮೊಬೈಲ್-ಬೈಕ್-ಪಾಕೆಟ್ ಮನಿಗೆ ನಿಮ್ಮನ್ನು ಕಿರುಬೆರಳ ತುದಿಯಲ್ಲಿ ಆಡಿಸುತ್ತದೆ. 

“ನಮ್ ಅತ್ತೆ-ಮಾವಂಗೆ ನಮ್ ಪುಟ್ಟಿನೇ ಸರಿ.. ಎಂಥ ಬಜಾರಿ ಗೊತ್ತಾ..ಸರಿಯಾಗಿ ಉತ್ತರ ಕೊಡ್ತಾಳೆ. ಮುದುಕರು ಬಾಯಿ ಮುಚ್ಕೊಂಡು ತೆಪ್ಪಗೆ ಕೂತ್ಕೊತಾರೆ..” ನನ್ನ ಗೆಳತಿಯ ಆತ್ಮವಿಶ್ವಾಸದ ನುಡಿಯಿದು. ಎಚ್ಚರ! ಇವತ್ತು ಅಜ್ಜಿತಾತನ ಬಾಯ್ಮುಚ್ಚಿಸುವ ಮಗು ನಾಳೆ ನಿಮ್ಮ ಬಾಯಿಗೂ ಬೀಗ ಹಾಕಲು ಹಿಂದೆ ಮುಂದೆ ನೋಡುವುದಿಲ್ಲ. ಮಕ್ಕಳ ಭಾಷೆಯ ಬಗ್ಗೆ ಮೈಯೆಲ್ಲ ಕಣ್ಣಾಗಿರಿ. ಮಕ್ಕಳು ತಮ್ಮ ಎಲ್ಲ ಕೆಲಸಗಳಿಗೆ ತಂದೆತಾಯಿಯ ಪ್ರತಿಕ್ರಿಯೆಯನ್ನು ಗಮನಿಸುತ್ತಾರೆ. ಅದರಂತೆಯೇ ತಮ್ಮ ನಡವಳಿಕೆಯನ್ನು ರೂಪಿಸಿಕೊಳ್ಳುತ್ತಾರೆ. ಮಗು ಅಕ್ಕ ಪಕ್ಕದವರನ್ನು, ಸಂಬಂಧಿಗಳನ್ನು, ತನ್ನ ಶಿಕ್ಷಕರನ್ನು ಟೀಕಿಸಿದಾಗ ತಕ್ಷಣ ಅದನ್ನು ತಿದ್ದಿ. ಹಾಗೆಯೇ ಕತ್ತೆ, ನಾಯಿ, ಹುಚ್ಚುಮುಂಡೆ,ಕಂತ್ರಿನಾಯಿ ಇಂಥ ಪದಗಳಿಗೆ ಮನೆಯಲ್ಲಿ ಸಂಪೂರ್ಣ ನಿಷೇಧ ಹೇರಿ. ಮಗು ನಿಮ್ಮದೇ ಪ್ರತಿಬಿಂಬ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ.

ಮಕ್ಕಳ ಅಪೇಕ್ಷೆಗಳನ್ನು ಆಗಾಗ ಉಪೇಕ್ಷಿಸುವುದನ್ನು ರೂಢಿಸಿಕೊಳ್ಳಿ. ನೀವು ಆರ್ಥಿಕವಾಗಿ ಸದೃಢರಾಗಿರಬಹುದು, ಆದರೆ ಮಗುವಿನ ಆಸೆಯನ್ನು ಪೂರೈಸುವ ಮೊದಲು ಸಮಯ,ಸಂದರ್ಭ, ಅವಶ್ಯಕತೆ ಗಳ ಬಗ್ಗೆ ಒಮ್ಮೆ ಪ್ರಶ್ನೆ ಮಾಡಿ. ಆಗ ಮಗು ತರ್ಕಬದ್ಧವಾಗಿ ಯೋಚಿಸಲು ಕಲಿಯುತ್ತದೆ. ಹಣದ ಮಹತ್ತ್ವದ ಬಗ್ಗೆಯೂ ಅರಿವು ಬೆಳೆಸಿಕೊಳ್ಳುತ್ತದೆ. ತಾವೇ ಮಗುವಿಗೆ ಫೇವರಿಟ್ ಮೋಮ್ /ಡಾಡ್ ಆಗಬೇಕೆಂದು ಗಂಡ-ಹೆಂಡತಿಯರು ಸ್ಪರ್ಧೆಗಿಳಿದರೆ , ಮುಂದೆ ಜೀವನದ ಸ್ಪರ್ಧೆಯಲ್ಲಿ ನಿಮ್ಮ ಮಗುವಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬುದು ನೆನಪಿರಲಿ.
’ ಹಂಚಿದಾಗ ಕಡಿಮೆಯಾಗುವ ವಸ್ತು ದು:ಖ ಮತ್ತು ಹೆಚ್ಚಾಗುವ ವಸ್ತು ಸಂತೋಷ’ ಎಂಬ ಪರಮಸತ್ಯ ನಿಮಗೆ ತಿಳಿದಿರಬಹುದು. ಇದನ್ನು ನಿಮ್ಮ ಮಕ್ಕಳಿಗೂ ಕಲಿಸಿ. ನಿಮ್ಮ ಸಮಯವನ್ನು ಮತ್ತು ಸಂಪತ್ತನ್ನು[ಕೈಲಾದ ಮಟ್ಟಿಗೆ] ಮನೆಯವರ, ನೆರೆಹೊರೆಯವರ, ಸಂಬಂಧಿಗಳ ಜೊತೆ ಹಂಚಿಕೊಳ್ಳುವುದನ್ನು ರೂಢಿಸಿಕೊಳ್ಳಿ. ನಿಮ್ಮನ್ನು ನೋಡಿ ಮಕ್ಕಳೂ ಕಲಿಯುತ್ತಾರೆ. ಸಮಾಜಮುಖಿ ವ್ಯಕ್ತಿತ್ವವನ್ನು ಬೆಳೆಸುವುದರಲ್ಲಿ ಇದೊಂದು ದೊಡ್ಡ ಹೆಜ್ಜೆ.
ಮಕ್ಕಳಿಗೆ ಸಮಾಜದ ಕಟ್ಟಕಡೆಯ ಮನುಷ್ಯ ಹೇಗೆ ಜೀವಿಸುತ್ತಾನೆ ಎಂಬ ಪರಿಚಯ ಮಾಡಿಕೊಡಿ. ನಿಮ್ಮಲ್ಲಿ ಕಾರು-ಡ್ರೈವರ್ ಇರಬಹುದು. ಆದರೆ ನಿಮ್ಮ ಮಗುವನ್ನು ಅದರಲ್ಲೇ ಕೂಡಿಹಾಕಿ ಕೂಪಮಂಡೂಕವಾಗಿಸಬೇಡಿ. ನಿಮ್ಮ ಸಂಪತ್ತಿನ ಪ್ರದರ್ಶನಕ್ಕೆ ಮಗುವನ್ನು ದಾಳವಾಗಿ ಬಳಸಬೇಡಿ. ಮಕ್ಕಳನ್ನು ಸರಕಾರೀ ಬಸ್ಸುಗಳನ್ನು ಉಪಯೋಗಿಸುವಂತೆ ಪ್ರೋತ್ಸಾಹಿಸಿ. ಇಲ್ಲಿ ಸಿಗುವ ಅನುಭವಗಳು ಅವರನ್ನು ಶ್ರೀಮಂತಗೊಳಿಸುತ್ತವೆ. ಈ ಪ್ರಪಂಚದಲ್ಲಿ ಕೊಳ್ಳಲು ಸಾಧ್ಯವಾಗದ್ದೆಂದರೆ ಅನುಭವ ಮಾತ್ರ. ಅದನ್ನು ಸ್ವತ: ಅನುಭವಿಸಿಯೇ ನಮ್ಮದಾಗಿಸಬೇಕು ಅಲ್ಲವೇ? ಈ ಜೀವನ ಪಾಠವೇ ಮಕ್ಕಳಿಗೆ ನೀವು ಕೊಡಬಹುದಾದ ಅತ್ಯಮೂಲ್ಯ ಆಸ್ತಿ.
ಪೇರೆಂಟಿಂಗ್ ಎಂದರೆ ಹುಟ್ಟುವಾಗ ಖಾಲಿ ಬಿಳಿ ಹಾಳೆಯಂತಿರುವ ಮಗುವಿನ ಮನಸ್ಸಿನಲ್ಲಿ ಅಚ್ಚಳಿಯದ ಪಾಠಗಳನ್ನು ಬರೆಯುವ ಗುರುತರ ಜವಾಬ್ದಾರಿ. ಮಕ್ಕಳನ್ನು ಸ್ವತಂತ್ರರನ್ನಾಗಿಸುವುದು ಮತ್ತು ಅವರಿಗೆ ಸಮಯಕ್ಕೆ ತಕ್ಕದಾಗಿ ಹಿತಮಿತವಾಗಿ ಮಾತನಾಡಲು ಕಲಿಸದವರು ತಂದೆತಾಯಿ ಎಂದು ಕರೆಸಿಕೊಳ್ಳಲು ಅರ್ಹರಲ್ಲ. ಮಕ್ಕಳ ಮೇಲೆ ಪ್ರೀತಿ ಇರಲಿ ಆದರೆ ಅವರು ತಪ್ಪು ಮಾಡಿದಾಗ ನಿದಾರ್ಕ್ಷಿಣ್ಯವಾಗಿ ನಡೆಸಿಕೊಳ್ಳಿ. ಗೆಳೆಯನಂತಿರಿ…. ಆದರೆ ಆಗಾಗ ಶತ್ರುವಿನಂತೆಯೂ ವರ್ತಿಸಿ.
ಎಲ್ಲ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಮಕ್ಕಳ ದಿನದ ಹಾರ್ದಿಕ ಶುಭಾಶಯಗಳು.