“ಅಮ್ಮ.. ದೇವರ ದೀಪ ಆರಿದೆ..”. ಮಗನ ಮಾತು ಕೇಳಿ ಯಾಕೋ ಒಂಥರಾ ಖುಶಿಯಾಯಿತು. “ಎಲ್ಲಿದ್ದಾನೆ ದೇವ್ರು...ಒಮ್ಮೆ ತೋರಿಸು?” ಅಂತ ಎಗರಾಡುವ ಆಸಾಮಿ ಇವತ್ತು ದೇವರ ಮನೆಯಕಡೆ ದೃಷ್ಟಿ ಹಾಯಿಸಿದನಲ್ಲ! ಅಂದ್ಕೊಂಡು “ ದೀಪ ಹಚ್ಚುವುದಿಲ್ಲ... ಮೂರು ದಿನ ಸೂತಕ ಇದೆ. ಅದೇ ನಮ್ಮೂರಿನ ಆ ನದಿಯಾಚೆಯ ಮನೆಯಲ್ಲಿ ಗೋವಿಂದಣ್ಣ ಅಂತ ಇದ್ರಲ್ಲ, ಅವರು ತೀರಿಹೋದರು,ಅದಕ್ಕೇ ನೋಡು ಆ ಪ್ರವೀಣನ ಮದುವೆನೂ ಪೋಸ್ಟ್ ಪೋನ್ ಮಾಡಿದ್ದು ” ಎಂದೆ.
“ ಓ.. ಹೌದಲ್ವ..ಆದ್ರೆ ಸೂತಕ ಅಂದ್ರೆ ಹತ್ತು ದಿನ ಇರುವುದಲ್ವಾ?”
“ಹುಮ್.. ಕುಟುಂಬದ ಮೂಲಪುರುಷನಿಂದ ಹಿಡಿದು ಏಳನೇ ತಲೆಮಾರಿನ ಗಂಡಸರು,ಸೊಸೆಯಂದಿರು ಮತ್ತು ಅವಿವಾಹಿತ ಹೆಂಗಸರನ್ನು ಸಪಿಂಡರು,ಎಂಟನೇ ತಲೆಯಿಂದ ಹದಿನಾಲ್ಕನೇ ತಲೆಯವರೆಗಿನ ಮೇಲಿನ ಸದಸ್ಯರನ್ನು ಸಮಾನೋದಕರು ಮತ್ತು ಹದಿನೈದರಿಂದ ಇಪ್ಪತ್ತೊಂದನೇ ತಲೆಮಾರಿನವರೆಗಿನ ಸದಸ್ಯರು ಸಗೋತ್ರರು ಎನ್ನುತ್ತಾರೆ. ಸಪಿಂಡರ ಮೃತ್ಯುವಿಗೆ ಹತ್ತು ದಿನ, ಸಮಾನೋದಕರಿಗೆ ಮೂರು ದಿನ ಸೂತಕ[ಅಶೌಚ] ಆಚರಣೆ ಇದೆ.ಅಂದ್ರೆ ಈ ಸಮಯದಲ್ಲಿ ದೇವತಾಕಾರ್ಯಗಳಲ್ಲಿ-ಸಮಾರಂಭಗಳಲ್ಲಿ ಭಾಗವಹಿಸಬಾರದು. ಆ ಅವಧಿ ಮುಗಿದ ಮೇಲೆ ಕ್ಷೌರ-ತಿಲೋದಕ, ಜಪ-ತಪ-ದಾನವನ್ನು ಮಾಡಬೇಕು. ಸಗೋತ್ರರ ಮರಣದಲ್ಲಿ ಕೇವಲ ಸ್ನಾನಮಾಡಿ ಅಶೌಚ ಪರಿಹರಿಸಬೇಕು. ಒಟ್ಟಾರೆ ಕುಟುಂಬದ ಸದಸ್ಯರ ಸಾವು ಸಂಭವಿಸಿದಾಗ ನಿತ್ಯದ ಕೆಲಸಗಳನ್ನು ಕೈಬಿಟ್ಟು ಮೃತರ ಮನೆಯವರಿಗೆ ಧೈರ್ಯ ತುಂಬಬೇಕು..ತನು-ಮನ-ಧನ ಸಹಾಯ ಮಾಡಬೇಕು ಎಂಬ ಸದುದ್ದೇಶ ಇಲ್ಲಿದೆ. ಹಾಗೆಯೇ ಕುಟುಂಬದಲ್ಲಿ ಮಗು ಹುಟ್ಟಿದಾಗಲೂ ಜಾತಾಶೌಚ ಆಚರಿಸುವ ಕ್ರಮವಿದೆ.”
“ ಅಲ್ಲಮ್ಮ.. ಪ್ರಾಕ್ಟಿಕಲೀ ಇಷ್ಟೆಲ್ಲ ತಲೆಮಾರುಗಳ ಕಾಂಟಾಕ್ಟ್ ಇಟ್ಟುಕೊಳ್ಳೋಕೆ ಸಾಧ್ಯವಾ?”
“ ಹಾಗಲ್ಲ ಅದು.. ಸಾಧ್ಯವಾದಷ್ಟು ಇಟ್ಟುಕೊಳ್ಳಬೇಕು ಅಂತ ಅದರ ಉದ್ದೇಶ.”
“ ಅಮ್ಮ.. ನಂಗೆ Project submission DEAD line ಇದೆ. ಸೋ ಈ DEADly ಟಾಪಿಕ್ ನಿಂದ ಲಾಗೌಟ್ ಆಗ್ತಾ ಇದ್ದೇನೆ” ಅಂದವನೇ ಕಂಪ್ಯೂಟರ್ ನಲ್ಲಿ ಮುಳುಗಿದ.ಅರೆ.. ಎಷ್ಟು ಸುಲಭವಾಗಿ ಕೈ ತೊಳಕೊಂಡ್ನಲ್ಲ.. ಅನಿಸಿತು ನಂಗೆ.
ಸನಾತನಧರ್ಮ ನಾಲ್ಕು ವರ್ಣಗಳಿಗೂ ವಿಧಿಸಿರುವ ಹುಟ್ಟು-ಸಾವಿನ ಸಂದರ್ಭದಲ್ಲಿ ಆಚರಿಸಬೇಕಾದ ಸೂತಕ[ ಅಶೌಚ]ದ ನಿಯಮಗಳನ್ನು ನಿರ್ಣಯಸಿಂಧು, ಧರ್ಮಸಿಂಧು ಇತ್ಯಾದಿ ಧರ್ಮಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಹುಟ್ಟು-ಸಾವಿನ ಸ್ಥಳ,ಸಮಯ,ಕಾರಣಗಳನ್ನನುಸರಿಸಿ ಈ ನಿಯಮಗಳಲ್ಲಿ ಸಾಕಷ್ಟು ಫ್ಲೆಕ್ಸಿಬಿಲಿಟಿ ಕೂಡಾ ಇರುವುದು ಗಮನಾರ್ಹ. ಆದರೆ ವರ್ಣಗಳೇ ಅಪ್ರಸ್ತುತವಾಗಿರುವ ಇಂದಿನ ಆಧುನಿಕ ಜೀವನದಲ್ಲಿ ಈ ನಿಯಮಗಳ ಸ್ಥಾನ ಏನು? ಜೀವನದ ಸಂಸ್ಕಾರಗಳಿಗೆ ಮಠ-ದೇವಾಲಯಗಳ ಹಂಗಿಗೆ ಒಳಪಡಬೇಕಾಗಿಲ್ಲದ ಸನಾತನಿಗಳು[ ಹಿಂದೂಗಳು] ಬದಲಾವಣೆ ಬಯಸಿದರೆ ಏನು ಮಾಡಬೇಕು? ಧರ್ಮಶಾಸ್ತ್ರದ ನಿಯಮಗಳಿಂದ ನಿತ್ಯಜೀವನದ ನೆಮ್ಮದಿ ಹಾಳಾಗದಂತಿರಲು ಏನು ಮಾಡಬೇಕು?
ಹಾಗಂತ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಮಾತ್ರ ಯೋಚಿಸಿ ಧಾರ್ಮಿಕ ವಿಧಿಗಳನ್ನು ಕೈಬಿಡುತ್ತಾ ಹೋಗುವುದು ಕೂಡಾ ತಪ್ಪು. ಆಗ ಮುಂದಿನ ಪೀಳಿಗೆಗೆ ದಾಟಿಸಲು ನಮ್ಮಲ್ಲೇನೂ ಉಳಿಯದೆ ಸಂಸ್ಕಾರಹೀನ ಮಕ್ಕಳನ್ನು ನಾವು ಸಮಾಜಕ್ಕೆ ಕೊಟ್ಟಂತೆ ಆಗುವುದಿಲ್ಲವೇ?
ಇನ್ನೊಂದು ವಿಚಾರವೆಂದರೆ ಧರ್ಮಶಾಸ್ತ್ರದ ಆಚರಣೆ, ಸಂಪ್ರದಾಯಗಳ ವಿಚಾರದಲ್ಲಿ ನಗರವಾಸಿಗಳಿಗೆ ಸ್ವಾತಂತ್ರ್ಯವಿದೆ.ಇಂದಿನ ನ್ಯೂಕ್ಲಿಯರ್ ಕುಟುಂಬಗಳು ನಗರಗಳಲ್ಲಿ ಅನಾಮಧೇಯರಾಗಿ ಜೀವನ ನಡೆಸುತ್ತಾ, ತಮ್ಮಿಷ್ಟದ ಆಚರಣೆಗಳನ್ನು ತಮಗೆ ಬೇಕಾದಂತೆ ಪಾಲಿಸಿಕೊಂಡು ಹಾಯಾಗಿರಬಹುದು. ಆದರೆ ಹಳ್ಳಿಯ ಕೃಷಿಕನಿಗೆ ಈ ಅನುಕೂಲವಿಲ್ಲ. ಬದಲಾವಣೆ ಬಯಸುವ ಹಳ್ಳಿಗನೊಬ್ಬ ಮೃತರ ಕುಟುಂಬಕ್ಕೆ ಸಹಾಯ ಮಾಡುತ್ತೇನೆ,ಆದರೆ ಈ ಹತ್ತು-ಮೂರು ಎಲ್ಲ ನನ್ನಿಂದಾಗದು ಎಂದು ಹೇಳಹೊರಟರೆ ಊರಿನ ಇತರರ ಪ್ರತಿಕ್ರಿಯೆ ಹೇಗಿರಬಹುದು ಯೋಚಿಸಿ.. ಅವನ ಮನೆಯ ಸಮಾರಂಭಗಳಿಗೆ ಪುರೋಹಿತರು-ಅಡಿಗೆಯವರು-ಊರಿನವರು ಬರಲು ಹಿಂದೇಟು ಹಾಕಬಹುದು, ದೇವಾಲಯದಲ್ಲಿ ಆತನನ್ನು ಕಂಡರೆ ತಿರಸ್ಕರಿಸಬಹುದು. ಇದೇ ಜನ ನಗರವಾಸಿಯ ಬಿಂದಾಸ್ ಜೀವನಶೈಲಿಯನ್ನು ನೋಡಿಯೂ ನೋಡದವರಂತೆ ಇರುತ್ತಾರೆ, ಅವನಿಗೆ ಎಲ್ಲ ಗೌರವಾದರಗಳನ್ನು ಸಲ್ಲಿಸುತ್ತಾರೆ ಅಲ್ವೇ? ಹಾಗಿದ್ರೆ ಸಂಸ್ಕೃತಿಯ ರಕ್ಷಣೆಯ ಭಾರ ಹೊರಬೇಕಾದವರು ಕೇವಲ ಕೃಷಿಕರು-ಪುರೋಹಿತರೇ? ಹಿಂದೂಧರ್ಮ ನಿರ್ಭೀತಿಯಿಂದ ಹರಿಯುವ ನದಿ ಇದ್ದಂತೆ. ಕಾಲನ ಪ್ರವಾಹಕ್ಕೆ ತಕ್ಕಂತೆ ನಿರಾಯಾಸವಾಗಿ ತನ್ನ ನಡೆಯನ್ನು ಬದಲಿಸುತ್ತ ಸಾಗುವ ಈ ಗಂಗೆಯಲ್ಲಿ ಬದುಕುತ್ತಿರುವ ನಮ್ಮ ಸಮಾಜ ಕೆಲವರ ಮೂಲಭೂತಹಕ್ಕನ್ನು ಕಸಿಯುತ್ತಿರುವುದು ಎಷ್ಟು ಸರಿ? ತಮ್ಮ ಮನೆಗಳಲ್ಲಿ ತಮ್ಮ ಧಾರ್ಮಿಕನಂಬಿಕೆಯನ್ನು ಆಚರಿಸುವುದನ್ನು ಇತರರು ಪ್ರಶ್ನೆ ಮಾಡುವುದು ಕಾನೂನಾತ್ಮಕ ಅಪರಾಧ ಎಂದು ಸಂವಿಧಾನವೇ ಸ್ಪಷ್ಟವಾಗಿ ಹೇಳಿಲ್ಲವೇನು?

ಇದ್ದಕ್ಕಿದ್ದಂತೆಯೇ ಕರೆಂಟ್ ಹೋಗಿ ಮನೆತುಂಬ ಕತ್ತಲಾಯಿತು.ಆದರೆ ಕಂಪ್ಯೂಟರಿನ ಬೆಳಕಿನಲ್ಲಿ ಮಗನ ಮುಖ ಬೆಳಗುತ್ತಿತ್ತು . ಅರೆ..ಎಷ್ಟು ಜಾಲಿ ನೋಡಿವನು..ನನಗೆ ಮಾತ್ರ ಯಾಕೆ ಇವೆಲ್ಲ ಮಂಡೆಬಿಸಿಗಳು...ಯಾಕೆಂದ್ರೆ ನಾನು ಹಳೆಯದನ್ನು ಬಿಡಲಾರೆ.. ಹೊಸದನ್ನು ಪೂರ್ಣವಾಗಿ ಸ್ವೀಕರಿಸಲಾರೆ.. ನಂದೇ ತಪ್ಪು.. ಅಂದ್ಕೊಂಡೆ. ದೀಪವಿಲ್ಲದ ದೇವರಕೋಣೆಯನ್ನು ನೋಡಿ ಕಸಿವಿಸಿಯಾಯಿತು.ಗೋವಿಂದಣ್ಣನ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತ ತಡಕಾಡಿ ದೀಪ ಹಚ್ಚಿದೆ. ದೀಪ ಶಾಂತವಾಗಿ ಉರಿಯುತ್ತ ಮನೆತುಂಬ ಬೆಳಕು ಚೆಲ್ಲಿತು.