“ಅಲ್ಲ....... ಗಂಟೆಗೆ ಮುನ್ನೂರು ಕಿಲೋಮೀಟರ್ ವೇಗದಲ್ಲಿ ಓಡೋ ರೈಲಲ್ಲಿ ಕೂತ್ಕೊಂಡ್ರೆ ಹೊರಗಡೆ ಏನೂ ಕಾಣ್ಲಿಕ್ಕಿಲ್ಲ ....” ಅಂತ ಗೊಣಗುತ್ತಾ ಶಾಂಘೈ ಬುಲೆಟ್ ರೈಲುನಿಲ್ದಾಣದ ಒಳಗೆ ಪತಿಯ ಜೊತೆ ಟಿಕೆಟ್ ಪಡೆದುಕೊಂಡು ಪ್ರವೇಶಿಸುವಾಗ ಸೋಮವಾರದ ಬೆಳಗಿನ ಏಳು ಘಂಟೆ. ಹಾಗೇ ಕಣ್ಣಾಡಿಸಿದೆ. ಇಲ್ಲಿಂದ ೧೨೦೦ ಕಿ.ಮೀ ದೂರದ ಬೀಜಿಂಗ್ ಗೆ ಹೋಗಲು ಪ್ರಯಾಣಿಕರ ದಂಡೇ ನೆರೆದಿತ್ತು. ಹೆಚ್ಚಿನವರು ವಾರಾಂತ್ಯದಲ್ಲಿ ಇಲ್ಲಿನ ತಮ್ಮ ಮನೆಗಳಿಗೆ ಬಂದವರು ಕಚೇರಿಗಳಿಗೆ ಮಧ್ಯಾಹ್ನ ಹೋಗುವವರು. ೭.೪೦ರ ರೈಲು ಬರಲು ಮೂರು ನಿಮಿಷಗಳಿಗೆ ಮುಂಚೆ ಪ್ಲಾಟ್ ಫಾರ್ಮ್ ಗೇಟುಗಳನ್ನು ತೆರೆದರು.ಜನ ಶಿಸ್ತಾಗಿ ತಮ್ಮ ಬೋಗಿ ಸಂಖ್ಯೆಯ ಎದುರು ನೇರ ಸಾಲುಗಳಲ್ಲಿ ನಿಲ್ಲುತ್ತಿದ್ದಂತೆಯೇ ಅಗೋ...... ಆ ಪವನಪುತ್ರ ಮಿಂಚಿನ ವೇಗದಲ್ಲಿ ಬಂದು ನನ್ನೆದುರು ನಿಂತೇಬಿಟ್ಟ. ಪ್ರತಿ ನಿಲ್ದಾಣದಲ್ಲೂ ಮೂರುನಿಮಿಷ ಮಾತ್ರ ನಿಲ್ಲುವ ಈ ವೇಗಿಯನ್ನು ಲಗುಬಗನೆ ಹತ್ತಿದೆವು. ರೈಲು ಹೊರಟಿತು. ಹೊರಗಿನ ಪ್ರಕೃತಿ ನಿಚ್ಚಳವಾಗೇ ಕಾಣಲಾರಂಭಿಸಿದಾಗ ನನ್ನ ಮೂರ್ಖತನಕ್ಕೆ ಒಳಗೊಳಗೇ ನಗು ಬಂತು. ಚೀನಾದ ಇತರ ಸೇವಾಕ್ಷೇತ್ರಗಳಲ್ಲಿರುವಂತೆಯೇ ಇಲ್ಲಿಯೂ ಮಹಿಳೆಯರದ್ದೇ ರಾಜ್ಯಭಾರ. ಎಲ್ಲಿ ನೋಡಿದರೂ ನೀಲಿ ಸಮವಸ್ತ್ರದ ಚುರುಕಾಗಿ ಓಡಾಡುವ ತರುಣಿಯರು. ಜನ ತಮ್ಮ ಕಂಪ್ಯೂಟರ್ ಗಳನ್ನು ತೆರೆದು ಕಚೇರಿ ಕೆಲಸ ಆರಂಭಿಸಿಯೇ ಬಿಟ್ಟರು. ಅನೇಕಾನೇಕ ಹಳ್ಳಿ, ಪಟ್ಟಣ, ನಗರಗಳನ್ನು ಕ್ಷಣಮಾತ್ರದಲ್ಲಿ ಹಿಂದಿಕ್ಕುತ್ತಾ , ಬೀಜಿಂಗ್ ಗೆ ಇನ್ನೂ ೧೦೦ ಕಿ. ಮೀ ಇರುವಂತೆಯೇ ವಿಶಾಲವಾದ ರಸ್ತೆಗಳು, ಗಗನಚುಂಬಿ ಕಟ್ಟಡಗಳು ರಾಜಧಾನಿ ಸಮೀಪಿಸುತ್ತಿರುವುದನ್ನು ಸಾರಿ ಹೇಳಲಾರಂಭಿಸಿದವು. ರೈಲು ಸರಿಯಾಗಿ ೧೨.೪೦ಕ್ಕೆ ಬೀಜಿಂಗ್ ನಿಲ್ದಾಣವನ್ನು ತಲುಪಿತು.. ಅತ್ಯಂತ ಉಲ್ಲಾಸದಿಂದ ರೈಲಿನಿಂದ ಇಳಿಯುತ್ತಿದ್ದಂತೆಯೇ, ಬೆಂಗಳೂರಿನಿಂದ ದೆಹಲಿಗೆ ರೈಲಿನಲ್ಲಿ ಒಮ್ಮೆ ನಾನು ನಲವತ್ತು ಘಂಟೆ ಪ್ರಯಾಣಿಸಿ , ಬಳಲಿ ಬೆಂಡಾಗಿ ಇಳಿದದ್ದು ನೆನಪಾಗಿ ಯಾಕೋ ನನಗೆ ಕೊಂಚ ದು:ಖವಾಯಿತು.
ಬೀಜಿಂಗ್ ಎಂದರೆ ಉತ್ತರದ ರಾಜಧಾನಿ ಎಂದರ್ಥ. ಮಿಂಗ್ ಅರಸರಿಂದ ನಿರ್ಮಾಣವಾದ ಇಲ್ಲಿನ ಇಂದಿನ ಜನಸಂಖ್ಯೆ ಎರಡು ಕೋಟಿಗೂ ಅಧಿಕ. ೩ ವಿಮಾನನಿಲ್ದಾಣಗಳೂ, ೬ ವರ್ತುಲ ರಸ್ತೆಗಳೂ ಇರುವ ಬೀಜಿಂಗ್ ಪ್ರಪಂಚದ ಅತಿ ದಟ್ಟನೆಯ ನಗರಗಳಲ್ಲೊಂದು. ಶತಮಾನಗಳ ಚರಿತ್ರೆಯಿರುವ ಇಲ್ಲಿ ಏಳು ವಿಶ್ವಪರಂಪರೆಯ ತಾಣಗಳನ್ನು ಯುನೆಸ್ಕೋ ಗುರುತಿಸಿದೆ. ಅನೇಕ ವರ್ಷಗಳ ಕಾಲ ಜಪಾನೀಯರ ಆಳ್ವಿಕೆಯಲ್ಲಿ ನಲುಗಿದ್ದ ಬೀಜಿಂಗ್ ೧೯೪೯ ರಲ್ಲಿ ಮಾವೋ ರವರು ಕಮ್ಯುನಿಸ್ಟ್ ಸರಕಾರವನ್ನು ಸ್ಥಾಪಿಸಿದ ನಂತರ ರಾಷ್ಟ್ರದ ರಾಜಧಾನಿಯೆಂದು ಘೋಷಿತವಾಯಿತು.ಅತ್ಯಂತ ಸುಸಜ್ಜಿತವಾಗಿ ನಗರವನ್ನು ಕಟ್ಟಲಾಯಿತು. ಎಲ್ಲಿ ನೋಡಿದರೂ ಕಾಣುವ ವಿಶಾಲವಾದ , ನುಣುಪಾದ ರಸ್ತೆಗಳು, ರಸ್ತೆಬದಿಯ ಸುಂದರವಾದ ಹೂಗಳು, ಗಗನಚುಂಬೀ ಕಟ್ಟಡಗಳು ಅಭಿವೃದ್ಧಿಯನ್ನು ಸಾರಿ ಹೇಳುತ್ತವೆ. ಆದರೆ ನಗರೀಕರಣದ ಭರದಲ್ಲಿ ಪರಿಸರ ಸಂರಕ್ಷಣೆಯನ್ನು ಕಡೆಗಣಿಸಿದ್ದರ ಫಲವಾಗಿ ವಾಯುಮಾಲಿನ್ಯ ಬಳುವಳಿಯಾಗಿ ಬಂದಿದೆ. ಗಾಳಿಯಲ್ಲಿರುವ ಧೂಳಿನ ಕಣಗಳು ಬರಿಗಣ್ಣಿಗೆ ಕಾಣುತ್ತವೆ. ಆಗಾಗ್ಗೆ ಇಲ್ಲಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಿ ವಾತಾವರಣವನ್ನು ಶುದ್ಧಗೊಳಿಸಲಾಗುತ್ತದೆಯಂತೆ.
ಚೀನಾದಲ್ಲಿ ಮಾಂಡರಿನ್ ಬಿಟ್ಟು ಬೇರೆ ಭಾಷೆ ನಡೆಯುವುದೇ ಇಲ್ಲ. ಇಲ್ಲವೆಂದರೆ ಇಲ್ಲವೇ ಇಲ್ಲ!!. “ಇಂಗ್ಲೀಷ್ ಬಲ್ಲ ನನಗೆ ಯಾವ ದೇಶವಾದರೇನು” ಎಂಬ ನನ್ನ ಒಣಜಂಭ ಚೀನಾದಲ್ಲಿ ನುಚ್ಚುನೂರಾಯಿತು. ಇಲ್ಲಿ ಇಂಗ್ಲೀಷ್ ಬಲ್ಲ ಮಾರ್ಗದರ್ಶಿಯನ್ನು ಮೊದಲೇ ಗೊತ್ತುಪಡಿಸಿದ್ದೆವು. ಇನ್ನು ಜನರಜೊತೆ ನಾನು ಮಾತಾಡಬೇಕಾಗಿ ಬಂದಾಗ ನಾನು ಕನ್ನಡದಲ್ಲೇ ಮಾತನಾಡಲಾರಂಭಿಸಿದೆ. ಹೇಗೂ ನನ್ನ ಭಾಷೆ ನನ್ನ ಸಮಾಧಾನಕ್ಕೆ. ಅವರಿಗೆ ನನ್ನ ಕೈಸನ್ನೆ ಮಾತ್ರವೇ ತಿಳಿಯುವುದು. ಹಾಗಿದ್ದಾಗ ಭಾಷೆಯ ಹಂಗೇಕೆ ನನಗೆ? ನಮ್ಮ ಗೈಡ್ ವಾಂಗ್ ಎಂಬ ೨೫ರ ತರುಣಿ. ಆರುತಿಂಗಳು ದಕ್ಷಿಣಚೀನಾದ ತನ್ನೂರಲ್ಲಿ ಟೈಪಿಸ್ಟ್ ಆಗಿ ಕೆಲಸಮಾಡುವ ಇವಳು ಮಾರ್ಚ್ ನಿಂದ ಆಗಸ್ಟ್ ವರೆಗಿನ ಪ್ರವಾಸೀ ಋತುವಿನಲ್ಲಿ ಇಲ್ಲಿ ಗೈಡ್ ಆಗಿ ಒಳ್ಳೆಯ ಸಂಪಾದನೆ ಮಾಡುತ್ತಾಳೆ.
ವಾಂಗ್ ಮೊದಲು ನಮ್ಮನ್ನು ಕಾರಿನಲ್ಲಿ ಸ್ವರ್ಗದೇಗುಲಕ್ಕೆ [ಟೆಂಪಲ್ ಆಫ಼ ಹೆವನ್] ಕರಕೊಂಡು ಬಂದಳು. ೧೫ನೇ ಶತಮಾನದಲ್ಲಿ ಕಟ್ಟಿರುವ ಈ ದೇಗುಲ ೧೮ನೇ ಶತಮಾನದಲ್ಲಿ ಪರದೇಶೀಯರ ಆಕ್ರಮಣಕ್ಕೆ ತುತ್ತಾಗಿ ಹಾಳಾಗಿತ್ತು. ಮುಂದೆ ೧೯೧೮ರಲ್ಲಿ ಪುನರ್ನಿರ್ಮಾಣಗೊಂಡು ಪ್ರವಾಸೀ ತಾಣವಾಯಿತು. ಸುಮಾರು ೩ ಚ. ಕಿ ಮೀ ವಿಸ್ತೀರ್ಣವಿರುವ ಇದು ಮೂರು ಹಂತಗಳಲ್ಲಿದೆ. ಮೊದಲ ಹಂತದ ಪ್ರಾರ್ಥನಾಮಂದಿರ ವಿಶಾಲವಾಗಿದ್ದು ಮಧ್ಯದಲ್ಲೊಂದು ವೇದಿಕೆಯ ಸುತ್ತ ೯ ವೃತ್ತಾಕಾರದ ಓಣಿಗಳಿವೆ. ಪ್ರತಿಯೊಂದು ವೃತ್ತದ ನಡುವೆಯೂ ಕೆಲ ಮೆಟ್ಟಲುಗಳಿವೆ. ಕೊನೆಯ ವೃತ್ತದ ಮಧ್ಯದಲ್ಲಿ ಪ್ರಾರ್ಥನೆ ಸಲ್ಲಿಸುವ ವೇದಿಕೆಯಿದೆ. ಒಳ್ಳೆಯ ಬೆಳೆಗಾಗಿ ಇಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಮುಂದಿನ ಹಂತ ಸ್ವರ್ಗದ ಗೋಳ. ಈ ಕಟ್ಟಡವೇ ಗೋಳಾಕೃತಿಯಲ್ಲಿದ್ದೆ .ಇದರ ಸುತ್ತಲ ವೃತ್ತದಲ್ಲಿ ’ಪ್ರತಿಧ್ವನಿಯ ಗೋಡ” ಯಿದೆ. ಹಿಂದೆ ಇಲ್ಲಿನ ಪ್ರತಿಧ್ವನಿ ನೂರು ಕಿ. ಮೀ ವರೆಗೂ ಕೇಳುತ್ತಿತ್ತು. ಆದರೆ ಈಗ ಗೋಡೆ ತನ್ನ ವೈಭವವನ್ನು ಕಳಕೊಂಡಿದೆ. ಮೂರನೆಯ ಹಂತವೇ ಸ್ವರ್ಗದ ಹೃದಯ. ಚೀನೀಯರ ಪ್ರಕಾರ ರಾಜನೆಂದರೆ ಸ್ವರ್ಗದೇವತೆಯ ಮಗ. ಅವನು ವರ್ಷಕ್ಕೆರಡು ಇಲ್ಲಿ ಒಳ್ಳೆಯ ಮಳೆ- ಬೆಳೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದನು. ಇಲ್ಲಿರುವ ಬೃಹತ್ ಕಂಬಗಳ ಪ್ರಾರ್ಥನಾ ಮಂದಿರ ಭವ್ಯವಾಗಿದೆ. ಒಳವೃತ್ತದಲ್ಲಿರುವ ೪ ಕಂಬಗಳು ೪ ಚೀನೀ ಋತುಗಳನ್ನು, ಮಧ್ಯದ ೧೨ ಕಂಬಗಳು ೧೨ ತಿಂಗಳುಗಳನ್ನೂ, ಹೊರಗಣ ೧೨ ಕಂಬಗಳು ದಿನದ ೧೨ ಗಂಟೆಗಳನ್ನೂ ಪ್ರತಿನಿಧಿಸುತ್ತವೆ. ಇದರ ನಡುವೆ ಆಯತಾಕಾರದ ನೀಲಿಬಣ್ಣದ ಬೃಹತ್ ಫಲಕವೇ ಸ್ವರ್ಗ ದೇವತೆ! ಸ್ವರ್ಗದ ಬಣ್ಣವಾದ ನೀಲಿ ಹಾಗೂ ಭೂಮಿಯ ಬಣ್ಣವಾದ ಹಸಿರು ಇಡೀ ದೇಗುಲದಲ್ಲಿ ವ್ಯಾಪಿಸಿದೆ. ಇಂಥ ಭವ್ಯವಾದ ದೇಗುಲ, ದೇವರ ಅಸ್ತಿತ್ವವನ್ನು ನಂಬದ ಕಮ್ಯನಿಸ್ಟ್ ಚೀನಾದಲ್ಲಿ ಕೇವಲ ಒಂದು ಪ್ರವಾಸೀ ಸ್ಥಳ.
ಮರುದಿನ ಬೀಜಿಂಗ್ ಅರಮನೆಯನ್ನು ನೋಡಿದೆವು. ಇದಕ್ಕೆ ’ ಫಾರ್ಬಿಡನ್ ಸಿಟಿ’ ಅಥವಾ ನಿಷೇಧಿತ ನಗರ ಎಂಬ ಪ್ರಸಿದ್ಧ ಅನ್ವರ್ಥನಾಮವಿದೆ. ಇಲ್ಲಿಗೆ ರಾಜರ ಕಾಲದಲ್ಲಿ ಜನಸಾಮಾನ್ಯರಿಗೆ ಪ್ರವೇಶ ನಿಷೇಧಿಸಲಾಗಿತ್ತು. ೧೮೦ ಎಕರೆಯಲ್ಲಿ ಹರಡಿರುವ ೯೮೦ ಕಟ್ಟಡಗಳಿರುವ ಇದೊಂದು ನಗರವೇ ಸರಿ. ೧೪೦೬ರಲ್ಲಿ ನಾನ್ ಜಿಂಗ್ ನಿಂದ ಬೀಜಿಂಗ್ ಗೆ ರಾಜಧಾನಿಯು ಸ್ಥಳಾಂತರಗೊಂಡಾಗ ಇದನ್ನು ಕಟ್ಟಲಾಯಿತು. ಸಂಪೂರ್ಣವಾಗಿ ಮರದಿಂದ ನಿರ್ಮಿತವಾಗಿರುವ ಈ ವಿಶಾಲ ಅರಮನೆಗೆ ೪ ಪ್ರವೇಶದ್ವಾರಗಳಿವೆ. ತಿಯಾನ್ ಆಂಗ್ ಮೆನ್ ವೃತ್ತದಲ್ಲಿ ಚೀನಾದ ಸಂಸತ್ ಭವನ ಇದಕ್ಕೆ ಮುಖಾಮುಖಿಯಾಗಿ ನಿಂತಿದೆ .ಇಡೀ ಅರಮನೆಯನ್ನು ನೋಡಲು ೩-೪ ದಿನಗಳು ಬೇಕು. ಅರಮನೆಯ ತುಂಬ ಅಲ್ಲಲ್ಲಿ ಸ್ಥಾಪಿಸಿರುವ ಹಿತ್ತಾಳೆಯ ದೊಡ್ಡ ಹಂಡೆಗಳು ಇಲ್ಲಿನ ಅಗ್ನಿಶಾಮಕಗಳಂತೆ. ಮರದ ಅರಮನೆಯಾದ ಕಾರಣ ಇದರ ತುಂಬ ನೀರು ತುಂಬಿಸಿ ಇಡುತ್ತಿದ್ದರಂತೆ. ಎಂಥ ದೂರದೃಷ್ಟಿ!. ರಾಜನ ದರ್ಬಾರ್ ನಡೆಯುವ ಸ್ಥಳ, ಮಂತ್ರಿವರ್ಗದ ವಾಸದ ಮನೆಗಳು, ರಾಣೀವಾಸ, ಸೈನ್ಯದ ವಿಭಾಗ ಮುಂತಾದವು ಅಚ್ಚರಿ ಮೂಡಿಸುತ್ತವೆ. ನಮ್ಮಲ್ಲಿರುವಂತೆ ಅಭೂತಪೂರ್ವ ಶಿಲ್ಪಕಲೆ ಕಾಣದಿದ್ದರೂ ವಿಶಾಲತೆ ಹಾಗೂ ಅಚ್ಚುಕಟ್ಟುತನವನ್ನು ನೋಡಿ ಭಲೇ ಎನ್ನಬೇಕೆನಿಸುತ್ತದೆ. ಅರಮನೆಯ ವನ್ತುಸಂಗ್ರಹಾಲಯದಲ್ಲಿ ೧೦ ಲಕ್ಷಕ್ಕಿಂತಲೂ ಅಧಿಕ ವಸ್ತುಗಳನ್ನು ಒಪ್ಪವಾಗಿ ಜೋಡಿಸಿದ್ದಾರೆ. ಆಗಿನ ಚಿತ್ರಗಳು, ಪಿಂಗಾಣಿವಸ್ತುಗಳು, ಚಿನ್ನ –ಬೆಳ್ಳಿಯ ಆಭರಣಗಳು , ಹವಳದ ಪಾತ್ರೆಗಳು ಇತ್ಯಾದಿಗಳಿವೆ. ಚೀನೀಯರಿಗೆ ಜೇಡ್ ಎಂಬೋ ಹಸುರು ಕಲ್ಲು ಅಮೂಲ್ಯವಾದದ್ದು. ಅದರಿಂದ ಮಾಡಿದ ತರಹೇವಾರಿ ವಸ್ತುಗಳಿವೆ.
ಹಾಗೇ ಬೀಜಿಂಗ್ ಬೀದಿಗಳಲ್ಲಿ ಸುತ್ತಾಡಿದೆವು. ವಾಯುಮಾಲಿನ್ಯದಿಂದ ಅಕ್ಷರಶ: ನರಳುವ ಈ ನಗರದಲ್ಲಿ ಸೈಕಲ್ ಗಳಿಗೆ ಇನ್ನಿಲ್ಲದ ಮಹತ್ತ್ವ. ರಸ್ತೆಗಳಲ್ಲಿ ಸೈಕಲ್ ಸವಾರರಿಗಾಗೇ ವಿಶೇಷಪಥಗಳಿವೆ. ರಸ್ತೆ ಬದಿಗಳಲ್ಲೂ ಸಾಲಾಗಿ ಸೈಕಲ್ ಗಳನ್ನು ನಿಲ್ಲಿಸಿದ್ದಾರೆ. ಸಂಪೂರ್ಣ ಉಚಿತವಾಗಿ ಯಾರು ಬೇಕಾದರೂ ಬಳಸಬಹುದು. ತಮ್ಮ ಕೆಲಸ ಮುಗಿದ ನಂತರ ಸಮೀಪದ ರಸ್ತೆಯಲ್ಲಿ ಬಿಟ್ಟರಾಯಿತು. ಚೀನೀಯರು ಮನುಷ್ಯನೊಬ್ಬನನ್ನು ಬಿಟ್ಟು ಪ್ರಕೃತಿಯ ಎಲ್ಲ ಜೀವಿಗಳನ್ನು ತಿನ್ನುತ್ತಾರೆ. ಬೆಕ್ಕಿನ ಬೋಂಡಾಗೆ ಜಿರಲೆಯ ಚಟ್ನಿ. ಕರಿದ ಕಪ್ಪೆಗಳನ್ನು- ಹುರಿದ ಏಡಿಗಳನ್ನು ಉದ್ದದ ಕಡ್ಡಿಗೆ ಸಿಕ್ಕಿಸಿ ಇಡುತ್ತಾರೆ. ಹಾವಿನ ದೇಹವೇ ರುಚಿಯಾದ ಸಾಂಡ್ ವಿಚ್! ಸಮುದ್ರದ ಎಲ್ಲಾ ಜಲಚರಗಳು ಅವರ ಪ್ರಿಯವಾದ ತಿಂಡಿಗಳು. ಹಕ್ಕಿಗಳನ್ನು ಮಾತ್ರವಲ್ಲ ಅವುಗಳ ಗೂಡುಗಳನ್ನೂ ಪಲ್ಯ ಮಾಡಿ ಮುಕ್ಕುವ ಭಂಡರಿವರು! ದಿನವಿಡೀ ಸುತ್ತಾಡಿ ಹಸಿದ ನಮಗೆ ಎಲ್ಲೆಲ್ಲೂ ಆಹಾರ ಕಾಣುತ್ತಿತ್ತು ಆದರೆ ಶುದ್ಧ ಸಸ್ಯಾಹಾರಿಗಳಾದ ನಮಗೆ ಏನೂ ಸೇರದು! ನಮ್ಮ ಪುಣ್ಯಕ್ಕೆ ಹಣ್ಣುಗಳ ಅದ್ಭುತ ಲೋಕವೇ ಇಲ್ಲಿತ್ತು. ನಾವು ಕಂಡರಿಯದ ಅನೇಕ ಸಿಹಿಯಾದ ಹಣ್ಣುಗಳಿಂದಲೇ ಹೊಟ್ಟೆ ತುಂಬಿಸಿಕೊಂಡೆವು. ಅಲ್ಲದೇ ಎಲ್ಲೆಲ್ಲೂ ಮೊಸರು ಸಿಗುತ್ತದೆ. ಬಿಳಿಪಿಂಗಾಣಿಯ ಪುಟ್ಟ ಮಡಿಕೆಯಲ್ಲಿ ಸಿಹಿ ಮೊಸರು. ಜೊತೆಗೆ ನಾವು ಒಯ್ದಿದ್ದ ಅಂಟಿನುಂಡೆ, ಗೊಜ್ಜವಲಕ್ಕಿ, ಕಾಕ್ರಾ, ಚಕ್ಕುಲಿ, ರವೆಉಂಡೆಗಳೇ ನಮ್ಮ ಆಪದ್ಬಾಂಧವರು.
ನಂತರ ನಾವು ನೋಡಿದ್ದು ಪ್ರಪಂಚದ ಅದ್ಭುತಗಳಲ್ಲೊಂದಾದ ಮಹಾ ಗೋಡೆ. ಚೀನಾದ ಉತ್ತರದ ಗಡಿಯುದ್ದಕ್ಕೂ ಹರಡಿರುವ ಇದು ೨೧, ೧೯೬ ಕಿ.ಮೀ ಉದ್ದವಿದೆ.ಶತ್ರುಗಳಿಂದ ರಕ್ಷಣೆಗಾಗಿ ೨ನೇ ಶತಮಾನದಿಂದಲೇ ಗೋಡೆಯ ನಿರ್ಮಾಣ ಆರಂಭವಾಯಿತು. ಕೈದಿಗಳು ಹಾಗೂ ಸೈನಿಕರ ಕಠಿಣ ದುಡಿಮೆಯ ಫಲವಿದು. ಪ್ರತಿರಾಜನೂ ತನ್ನ ಪಾಲನ್ನು ಇದಕ್ಕೆ ಸೇರಿಸುತ್ತ ಹೋಗಿದ್ದಾನೆ. ಇಂದು ಅನೇಕ ಕಡೆ ನಾಶವಾಗಿದ್ದರೂ ಹೆಚ್ಚಿನ ಭಾಗವನ್ನು ಸರಕಾರ ಸುಸ್ಥಿತಿಯಲ್ಲಿರಿಸಿದೆ. ಪರ್ವತಗಳ ಮೇಲೆ ಸುಮಾರು೯ಮೀ ಅಗಲ, ೮ ಮೀ ಎತ್ತರದ ಗೋಡೆಯ ಮೇಲೆ ನಡೆಯುತ್ತಿದ್ದರೆ ನಿಜವಾಗಿಯೂ ಅಚ್ಚರಿಯ ಜೊತೆಗೆ ಸಂತೋಷವಾಗುತ್ತದೆ.ಪರ್ವತದ ಆಕಾರಕ್ಕನುಗುಣವಾಗಿ ಗೋಡೆ ಕೆಲವೆಡೆ ಕಡಿದಾಗಿದೆ, ಕೆಲವೆಡೆ ಇಳಿಜಾರು, ಕೆಲವೊಮ್ಮೆ ಸಪಾಟು. ಇಲ್ಲಿನ ಪರಿಸರವನ್ನು ಅತ್ಯಂತ ಸ್ಚಚ್ಛವಾಗಿರಿಸಿದ್ದಾರೆ. ಅಲ್ಲಲ್ಲಿ ಕಸದ ತೊಟ್ಟಿಗಳು, ಶೌಚಾಲಯಗಳನ್ನು ಕಟ್ಟಿಸಿ ಪ್ರವಾಸಿಗಳಿಗೆ ಅನುಕೂಲತೆ ಒದಗಿಸಿದ್ದಾರೆ. ಹಾಂ... ನೆನಪಿಡಿ ಗೋಡೆಯನ್ನು ಒಂದು ಕಡೆಯಿಂದ ಹತ್ತಿ ನಡೆದು ಸುಸ್ತಾದಾಗ ಇನ್ನೊಂದು ಕಡೆ ವಾಪಸ್ ಬರುವ ಅವಕಾಶ ಇಲ್ಲ. ಎಷ್ಟು ದೂರ ಮುಂದೆ ನಡೆಯುತ್ತೇವೋ ಅಷ್ಟೇ ತಿರುಗಿ ನಡೆದು ಹೊರಟಲ್ಲಿಗೇ ವಾಪಸ್ ಬರಬೇಕು. ಆದ್ದರಿಂದ ನಮ್ಮ ಶಕ್ತ್ಯಾನುಸಾರ ಮೊದಲೇ ಇಷ್ಟು ಕಿ. ಮಿ ನಡೆಯುವುದೆಂದು ನಿರ್ಧರಿಸಬೇಕು. ಇದು ಚೀನೀಯರಿಗೊಂದು ಹೆಮ್ಮೆಯ ಪ್ರವಾಸೀ ತಾಣ.ಸಂಸಾರಿಗರು, ಕಾಲೇಜು ತರುಣ-ತರುಣಿಯರ ಜೊತೆ ಅನೇಕರು ತಮ್ಮ ವೃದ್ಧ ತಂದೆತಾಯಿಯರ ಕೈಹಿಡಿದು ನಡೆಯಲು ಸಹಾಯ ಮಾಡುತ್ತಿದ್ದರೆ ಕೆಲವರು ಹೆಗಲ ಮೇಲೆ ಹೊತ್ತು ತಂದಿದ್ದರು!
ನಂತರ ’ಹುಟಾಂಗ್ ’ ಗಳೆಂಬ ವಠಾರಗಳಿಗೆ ಭೇಟಿಯಿತ್ತೆವು. ನಮ್ಮ ವಠಾರದ ಮನೆಗಳಂತೆಯೇ ಒಂದಕ್ಕೊಂದು ಅಂಟಿಕೊಂಡ ಮನೆಗಳಿವು. ಸಾವಿರಾರು ಬಡವರು ಇಲ್ಲಿ ವಾಸಿಸುತ್ತಾರೆ. ಒಂದು ಕಾಲದಲ್ಲಿ ಜನರೆಲ್ಲಾ ಈ ವಠಾರಗಳಲ್ಲೇ ವಾಸಿಸುತ್ತಿದ್ದರಂತೆ. ಆದರೆ ಈಗಿನ ಚೀನೀ ಆಡಳಿತದಲ್ಲಿ ಭೂಮಿ ಸರಕಾರದ ಸೊತ್ತು . ಆದ್ದರಿಂದ ಹುಟಾಂಗ್ ಗಳನ್ನು ನೆಲಸಮ ಮಾಡಿ ಸರಕಾರವೇ ಜನರಿಗೆ ಮನೆಗಳನ್ನು ಒದಗಿಸಿದ್ದರೂ ಪರಂಪರೆಯ ನೆನಪಾಗಿ ಕೆಲವನ್ನು ಉಳಿಸಿಕೊಂಡಿದ್ದಾರೆ. ಇಲ್ಲೂ ಸ್ವಚ್ಛತೆ ಎದ್ದು ಕಾಣುತ್ತಿತ್ತು.
ಹಾಗೆಯೇ ೨೦೦೮ರ ಒಲಂಪಿಕ್ ’ಹಕ್ಕಿ ಗೂಡು’ ಎಂಬ ಕ್ರೀಡಾಗ್ರಾಮಕ್ಕೂ ಒಂದು ಸುತ್ತು ಹಾಕಿ ಬಂದೆವು.ಹಕ್ಕಿಗಳು ತಮ್ಮ ಲಾಲಾರಸ ಹಾಗೂ ಕಡ್ಡಿಗಳಿಂದ ನಿರ್ಮಿಸುವ ಹಕ್ಕಿ ಗೂಡು ಚೀನೀ ವೈದ್ಯಪದ್ಧತಿಯಲ್ಲಿ ಅನೇಕ ರೋಗಗಳಿಗೆ ಔಷಧಿ. ಅದರ ಆಕಾರದಲ್ಲೇ ನಿರ್ಮಿತವಾದ ಈ ಕ್ರೀಡಾಂಗಣ ಒಂದು ವಿಸ್ಮಯವೇ ಸರಿ. ನಮ್ಮ ಬಳ್ಳಾರಿಯ ಅದಿರಿನಲ್ಲೇ ಇದನ್ನು ನಿರ್ಮಿಸಿದ್ದಾರೆಂದು ಎಲ್ಲೋ ಕೇಳಿದ್ದ ನನಗೆ ಅದನ್ನು ನೋಡುವಾಗ ಹೆಮ್ಮೆ ಹಾಗೂ ಸಂಕಟವಾಯಿತು.
ಮುಂದೆ ರಾಣಿಯ ಬೇಸಗೆ ಅರಮನೆಯೆಂಬ ಇನ್ನೊಂದು ವಿಸ್ಮಯವನ್ನುನೋಡಿದೆವು. ೧೭೪೯ರಲ್ಲಿ ಕಿನ್ ಲಾಂಗ್ ರಾಜನು ತನ್ನ ತಾಯಿಯ ೬೦ನೇ ಹುಟ್ಟುಹಬ್ಬದ ನೆನಪಿಗಾಗಿ ಕಟ್ಟಿಸಿದ ಅರಮನೆಯಿದು. ಇಲ್ಲಿರುವ ಮಣ್ಣನ್ನು ಅಗೆದು ೨ ಚದರಕಿ. ಮೀ ವಿಸ್ತೀರ್ಣದ ಸರೋವರವನ್ನು ನಿರ್ಮಿಸಿ, ಆ ಮಣ್ಣನ್ನು ಪಕ್ಕದಲ್ಲೇ ಗುಡ್ಡೆ ಹಾಕಿ ಪರ್ವತವೊಂದನ್ನು ಸೃಷ್ಟಿಸಿದನು. ಈ ಸರೋವರದ ಸುತ್ತ ೭೦೦ ಮೀ ಉದ್ದದ ಪಥವಿದೆ. ಇದು ಅತಿಉದ್ದದ ಮಾನವ ನಿರ್ಮಿತಕಾಲುದಾರಿಯೆಂದು ಗಿನ್ನೆಸ್ ದಾಖಲೆಯನ್ನೇ ನಿರ್ಮಿಸಿದೆ. ಈ ಸರೋವರದಲ್ಲಿರುವ ಅಮೃತಶಿಲೆಯ ಬೃಹತ್ ದೋಣಿ ಮನೋಹರವಾಗಿದೆ. ಅರಮನೆಯ ಉದ್ಯಾನವಂತೂ ಕಣ್ಣಿಗೆ ಹಬ್ಬವೇ ಸರಿ.
ಬಹುಶ: ಅಸಾಧ್ಯವೆನಿಸುವ ಕಾರ್ಯಗಳನ್ನು ಸಾಧ್ಯವಾಗಿಸುವಲ್ಲಿ ಚೀನಾವನ್ನು ಮೀರಿಸುವುದು ಕಷ್ಟಸಾಧ್ಯ. ಮಾನವಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲ ರಂಗದಲ್ಲೂ ಮೊದಲಿಗರಾಗಿ ನಿಂತಿರುವ ಚೀನೀಯರಿಂದ ನಮ್ಮ ಸರಕಾರಗಳು ಕಲಿಯಬೇಕಾದ್ದು ಬಹಳಷ್ಟಿದೆ. ಅಲ್ಲಿನ ಜನರ ಸೌಜನ್ಯಶೀಲತೆ, ಪ್ರವಾಸಿಸ್ನೇಹೀ ಮನೋಭಾವ ಕೂಡಾ ಮೆಚ್ಚತಕ್ಕದ್ದೇ. ನಮ್ಮ ದೇಶದ ಭಿನ್ನತೆಗಳನ್ನು, ನಂಬಿಕೆಗಳನ್ನು ಉಳಿಸಿಕೊಂಡು ಪ್ರಜಾಪ್ರಭುತ್ವ ಮಾದರಿಯಲ್ಲಿ ನಾವೆಂದಾದರೂ ಅವರನ್ನು ಸರಿಗಟ್ಟುವುದು ಸಾಧ್ಯವೇ ಎಂಬ ಸಂಶಯ ಮಾತ್ರ ಪ್ರವಾಸದ ಕೊನೆಯಲ್ಲಿ ನನ್ನಲ್ಲುಳಿಯಿತು.