ಬಾಲಗ್ರಹಪೀಡೆ !!
೨೦೧೪ ಮುಗಿಯುವುದರೊಡನೆ ಕಾಲನ
ಒಂದು ಪುಟ ಮಗುಚಿತು. ಕಳೆದ ಈ ವರ್ಷದ
ವಿಶೇಷವೆಂದರೆ “ನಮ್ಮ ಕೆಲ ನಂಬಿಕೆಗಳು ತಿಪ್ಪರಲಾಗ ಹೊಡೆದದ್ದು” ಅಂದರೆ ನಾನು ಹೇಳಿದರೆ , ನೀವು ನಂಬುತ್ತೀರಿ
ಅಂತ ನನ್ನ ನಂಬಿಕೆ. ‘ಮಾಮ್’ ನೌಕೆ ಮಂಗಳನ ಕಕ್ಷೆ
ಸೇರುತ್ತಿದ್ದಂತೆ ಹುಡುಗಿಯರ ಮದುವೆಗೆ ಅಡ್ಡಗಾಲು ಹಾಕುತ್ತಿದ್ದ ‘ಅಂಗಾರಕ ದೋಷ’ ವೆಂಬ ಆ ನಮ್ಮ ಹಳೆ ನಂಬಿಕೆ ಅಲುಗಾಡಿತು. ದೇವಮಾನವರೆನಿಸಿಕೊಂಡ
ಕೆಲವರ ಹೀನ ಕೃತ್ಯಗಳು ಬೆಳಕಿಗೆ ಬರುತ್ತಿದ್ದಂತೆಯೇ ಈ ದೇವರ ಪ್ರತಿನಿಧಿಗಳ ಮೇಲಿನ ನಂಬಿಕೆ
ಬುಡಮೇಲಾಯಿತು. ಇನ್ನು ಆಕಾರವೇ ಇಲ್ಲದ ದೇವನೊಬ್ಬನ ಹೆಸರಿನಲ್ಲಿ ಕೆಲ ಪಾಪಿಗಳು ನಡೆಸಿದ ಮಕ್ಕಳ
ಮಾರಣಹೋಮ ಮನುಷ್ಯತ್ವದ ಮೇಲಿನ ನಂಬಿಕೆಗೆ ಮಂಗಳ ಹಾಡಿತು.
ವರುಷದ ಕೊನೆಗೆ ಅವತರಿಸಿದ ‘ಪಿಕೆ’ ಎಂಬ ಮಹಾತ್ಮನಂತೂ ನಂಬಿಕೆಗಳೆಂಬ ತೊಟ್ಟಿಯನ್ನು
ಗುಡಿಸುತ್ತಾ ನಮ್ಮ ಮೆದುಳಿಗೇ ಕೈ ಹಾಕಿದ್ದಾನೆ. ಇದನ್ನೆಲ್ಲ ನೋಡುತ್ತಿದ್ದಂತೆ ನಾನೂ ಕೂಡಾ
ಒಮ್ಮೆ ಈ ನಂಬಿಕೆಯ ಪ್ರಪಾತದಲ್ಲಿ ಬಿದ್ದು ಮೈ-ಕೈ ತರಚಿಕೊಂಡದ್ದು ನೆನಪಾಯ್ತು.
ಇಪ್ಪತ್ತು ವರ್ಷಗಳ ಹಿಂದಿನ ಘಟನೆ .ನನ್ನ ಮಗಳಿಗಿನ್ನೂ ಆರು ತಿಂಗಳು. ಆರೋಗ್ಯವಾಗಿದ್ದ ಮಗುವಿಗೆ ವಾಂತಿ-ಭೇದಿ ಶುರುವಾಯಿತು. ತಕ್ಷಣ ವೈದ್ಯರನ್ನು ಕಂಡು ಔಷಧೋಪಚಾರವನ್ನು ಮಾಡಿದೆವು. ಆದರೆ ಎರಡು ದಿನಗಳಾದರೂ ಭೇದಿ ನಿಲ್ಲಲಿಲ್ಲ. ಮೈ-ಕೈ ತುಂಬಿಕೊಂಡು ಮುದ್ದಾಗಿದ್ದ ಮಗು ನಿಸ್ತೇಜವಾಯಿತು. ಹಗಲು-ರಾತ್ರಿ ನಿದ್ದೆಗೆಟ್ಟು ಮಗುವನ್ನು ಸಂಭಾಳಿಸಿ ಕಂಗೆಟ್ಟ ನನಗೆ ಪಕ್ಕದ ಮನೆಯವರೊಬ್ಬರು ಮೆಜೆಸ್ಟಿಕ್ನಲ್ಲಿರುವ ಎಣ್ಣೆ ಪಾಪಣ್ಣನ ಕ್ಲಿನಿಕ್ಕಿಗೆ[?] ಹೋಗುವಂತೆ ಸಲಹೆ ನೀಡಿದರು. ನಾವು ಮಂಕು ಬಡಿದಿರುವವರಂತೆ ಅಲ್ಲಿಗೆ ಹೋದೆವು. ಆ ದುರ್ಬಲಗಳಿಗೆಯಲ್ಲಿ ನನಗೆ ಆ ಕೊಳಕುಜಾಗ ಸ್ವರ್ಗವೆನಿಸಿತು.ಮೈಗೆಲ್ಲ ವಿಭೂತಿ ಬಳಿದುಕೊಂಡು ,ರಕ್ತಕೆಂಪು ಬಟ್ಟೆ ತೊಟ್ಟುಕೊಂಡ ಆ ಮಂತ್ರವಾದಿಯು ಧನ್ವಂತರಿಯಂತೆ ಕಾಣಿಸಿದ. ಮಗುವಿನ ಕಡೆಗೆ ಕಣ್ಣೋಟ ಬೀರಿ ‘ಬಾಲಗ್ರಹಪೀಡೆ’ಯಾಗಿದೆ ಎಂದು ಹೇಳಿ ತಾಯಿತ-ಕುಂಕುಮವನ್ನು ಕೊಟ್ಟು ಎರಡು ದಿನ ಬಿಟ್ಟು ಬರುವಂತೆ ಹೇಳಿದನು.
ರಾತ್ರಿಯಾಗುತ್ತಿದ್ದಂತೆಯೇ ಜ್ವರವೂ ಶುರುವಾಯಿತು. ಮಗುವನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಮಗುವನ್ನು ನೋಡಿದ ವೈದ್ಯರು ಹಣೆಯ ಮೇಲಿದ್ದ ಕುಂಕುಮವನ್ನು ನೋಡಿ ‘ಮಗು ಕೈಗೆ ಸಿಕ್ಕಿದ್ದನ್ನೆಲ್ಲಾ ಬಾಯಿಗೆ ಹಾಕುವುದರಿಂದ ಸೋಂಕಿನಿಂದ ವಾಂತಿ ಭೇದಿಯಾಗುತ್ತದೆ .ಅದಕ್ಕೆ ತಾಳ್ಮೆ ವಹಿಸಿ ಚಿಕಿತ್ಸೆ ಕೊಡುವುದು ಬಿಟ್ಟು ಹೀಗೆಲ್ಲಾ ಮಾಡುತ್ತೀರಲ್ಲ?ಸಮಾಜಕ್ಕೆ ಮಾದರಿಯಾಗಬೇಕಾದ ನಿಮ್ಮಂಥ ವಿದ್ಯಾವಂತರೇ ಹೀಗೆ ಮಾಡಿದರೆ ಹೇಗೆ?’ ಎಂದು ಗದರಿಸಿದರು.ನಾನು ನಾಚಿಕೆ-ಅವಮಾನಗಳಿಂದ ತಲೆ ತಗ್ಗಿಸಿದೆ. ಎಲ್ಲವನ್ನೂ ವಿಜ್ಞಾನದ ತಕ್ಕಡಿಯಲ್ಲಿ ತೂಗಿಯೇ ಮುಂದುವರೆಯುವ ನನಗೆ ಅದನ್ನು ನೆನೆದರೆ ಈಗಲೂ ಮನಸ್ಸು ಸ್ತಬ್ಧವಾಗುತ್ತದೆ.
ನಂಬಿಕೆಗಳಿಲ್ಲದೇ ಮನುಷ್ಯನ ಜೀವನ ನೀರಸವೇ ಸರಿ.ಬೆಳಗ್ಗೆ ತನ್ನಿಷ್ಟದ ದೇವಾಲಯದ ಕುಂಕುಮ ಹಣೆಗೆ ಹಚ್ಚಿ ಕೆಲಸ ಆರಂಭಿಸುವುದು ,ತುಲಸೀ ಪೂಜೆ ಮಾಡುವುದು, ಯಾವುದೋ ಉದ್ದೇಶಕ್ಕಾಗಿ ಉಪವಾಸ ಆಚರಿಸುವುದು ಇತ್ಯಾದಿಗಳು ನಿರಪಾಯಕಾರಿ ನಂಬಿಕೆಗಳು . ಸತ್ಕರ್ಮಗಳಿಂದ
ಸತ್ಫಲ ಸಿಗುತ್ತದೆ ಎಂಬ ನಂಬಿಕೆ, ತನ್ನ ಕೈಲಾದ ಮಟ್ಟಿಗೆ ದಾನ ಮಾಡುವುದು, ಹಬ್ಬ- ಪೂಜೆಯ ನೆಪದಲ್ಲಿ ಬಂಧು ಬಳಗವನ್ನು ಮನೆಗೆ ಆಹ್ವಾನಿಸುವುದು ಮುಂತಾದ ಸಮಾಜಮುಖಿ ನಂಬಿಕೆಗಳು ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ಎನಿಸಿವೆ. ಆದರೆ ದೇಹಾರೋಗ್ಯಕ್ಕಾಗಿ ಪ್ರಾಣಿಬಲಿ, ಉರುಳುಸೇವೆ, ಪೂಜೆ - ಅರ್ಚನೆಗಳು, ಮೂರು ದಿನಗಳ ಮುಟ್ಟಿನ ಬಗೆಗಿನ ಅರ್ಥಹೀನ ಕಲ್ಪನೆಗಳು, ಜ್ಯೋತಿಷ್ಯ , ವಾಸ್ತುವಿನ ಮೇಲೆ ಕುರುಡು ವಿಶ್ವಾಸ ಇತ್ಯಾದಿಗಳು ಮೂಢನಂಬಿಕೆಗಳಾಗಿ ಪರಿವರ್ತನೆಗೊಂಡು ಸಾಮಾಜಿಕ ಸಮಸ್ಯೆಗಳಾಗಿವೆ .ಅಂಧಶ್ರದ್ಧೆಯ ಹರಿಕಾರರಾದ ಕೆಲ ಜ್ಯೋತಿಷಿ -ಸ್ವಾಮೀಜಿಗಳು ಸಮಾಜಕಂಟಕರಾಗಿದ್ದರೆ ಅದಕ್ಕೆ ನಗರದ ವಿದ್ಯಾವಂತ ಜನರ ಕೊಡುಗೆಯೂ ಸಾಕಷ್ಟಿದೆ. ಪರಿಸ್ಥಿತಿ ಕೈ ಮೀರುವ ಮೊದಲು ಈ ಗೊಡ್ಡು ಆಚರಣೆಗಳನ್ನು ಕೈಬಿಡೋಣ. ಸರಕಾರವೂ ಕೂಡಾ ಈ ದಿಸೆಯಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡರೆ ಆರೋಗ್ಯಕರ ಸಮಾಜದ ಸೃಷ್ಟಿ ಸಾಧ್ಯ.